ಬೀಡಿ ವೆಂಕ ಮತ್ತು ಸತ್ತ ಗಿಳಿ
ತುಂಬಾ ದಿನಗಳ ನಂತರ ಆಕೆಗೆ ಫೋನ್ ಮಾಡಿದ್ದೆ. ಅವಳು ಬದಲಾಗಿದ್ದು ಗೊತ್ತಿತ್ತು... ಆದರೆ, ಆ ಬದಲಾವಣೆಯಲ್ಲಿ ನನ್ನ ಪ್ರೀತಿಯನ್ನೂ ಸಹ ಸಂಪೂರ್ಣವಾಗಿ ಮರೆತು ಬಿಟ್ಟಿದ್ದಾಳೆ ಎಂದು ಕೊಂಡಿದ್ದೆ! ಆದರೆ ಅವೆಲ್ಲ ಹುಸಿಯೆಂದು, ಅವಳ ಮಾತಿನಿಂದಲೇ ಅರಿವಾಯಿತು. ಅರಿವಿಲ್ಲದೆ ಹೃದಯ ಭಾರವಾಗುತ್ತ, ಕಣ್ಣಂಚುಗಳು ತೇವಗೊಂಡವು.ಜೊತೆ ಜೊತೆಯಾಗಿಯೇ ಅರ್ಥೈಸಿಕೊಂಡು ಬದುಕಿದವಳು... ಅರಿಯದ ವಯಸ್ಸಲ್ಲಿ ಪ್ರಬುದ್ಧತೆ ಮೆರೆದವಳು.... ನನ್ನೆಲ್ಲ ಸರ್ವಸ್ವ ನೀನೆ ಎಂದು ನನ್ನಲ್ಲೇ ಒಂದಾದವಳು... ಅಗಲಿಕೆಯ ಸಹಿಸದೆ ಅತ್ತು ಕರಗಿ ಬಳಲಿ ಬೆಂಡಾದವಳು... ಪರಿಸ್ಥಿಯ ಕೈಗೊಂಬೆಯಾಗಿ ಪ್ರೀತಿಸುತ್ತಲೇ ದೂರ ದೂರಕೆ ಪಯಣಿಸಿದಳು! ಅವಳ ಪಯಣದ ಹಾದಿಯಲಿ, ಪ್ರೀತಿ ಮಸುಕಾಗಿ ಹೋಗಿತ್ತು? ಪ್ರತೀ ನೋವಿಗೂ ಕಾಲವೇ ದಿವ್ಯೌಷದ ಎಂಬಂತೆ, ಅವಳಿಗೆ ನನ್ನ ಅಗಲಿಕೆಯ ನೋವಿಗೂ ಸಹ `ಕಾಲ'ನೇ ಸಾಂತ್ವನ ಹೇಳಿ ಸಂತೈಸಿತ್ತು.
ಅನಿರೀಕ್ಷಿತವಾಗಿ ಅಂದು ನನಗೆ ಅವಳ ದೂರವಾಣಿ ನಂ. ದೊರೆಯಿತು. ಪರಸ್ಪರ ದೂರವಾಗಿ ಹಲವು ವರ್ಷಗಳು ಸಂದಿದ್ದವು. `ಹೇಗೂ ನಂ. ದೊರೆತಿದೆಯಲ್ಲಾ..... ಸಂಪರ್ಕಿಸಿ ನೋಡೋಣ, ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ? ವಿಚಾರಿಸೋಣ' ಎಂದು ಅವಳ ನಂ.ಗೆ ಕರೆ ಮಾಡಿದೆ. ಒಮ್ಮೆಲೆ ನನ್ನ ಧ್ವನಿ ಗ್ರಹಿಸಿದ ಆಕೆ, `ನೀನಾ...?' ಎಂದು ಒಂದೇ ಸಮನೆ ಹುಸಿಕೋಪದಿಂದ `ಹೋಗೆಲೋ...' ಎಂದು ಎರ್ರಾಬಿರ್ರಿ ಬಯ್ಯತೊಡಗಿದಳು.
ನಂತರ ನಿಧಾನವಾಗಿ `ಕಷ್ಟಪಟ್ಟು ಹಾಗೋ ಹೀಗೋ ಎಂದು ವಿದ್ಯಾಭ್ಯಾಸ ಮಾಡಿ ಒಂದು ಉದ್ಯೋಗಕ್ಕೆ ಸೇರಿದೆ. ಬದುಕಲ್ಲಿ ಅನುಭವಿಸಿದ ನೋವು ಹತಾಶೆಗಳೇ ನನ್ನ ಸಾಧನೆಯ ಮೆಟ್ಟಿಲುಗಳಾದವು. ಕಷ್ಟದಲ್ಲೇ ಬದುಕಿದ ನಾನು ಎಲ್ಲಿಯೂ ಸಂತೋಷದ ಬದುಕು ಕಂಡಿಲ್ಲ. ಓದು ಅಭ್ಯಾಸ ಎನ್ನುತ್ತಲೇ ಭವಿಷ್ಯದ ಗೂಡು ಹಣೆದೆ. ಅದರಲ್ಲಿ ಕೆಲವಷ್ಟು ಕನಸು ನನಸಾದರೂ... ಬಹಳಷ್ಟು ಕನಸು ಕನಸಾಗೇ ಉಳಿದು ಬಿಟ್ಟಿತು' ಎಂದು ನಿರಾಸೆಯಿಂದಲೇ ಏನೇನೋ ಹೇಳತೊಡಗಿದಳು.
ಸುಮ್ಮನೆ `ಹುಂ' `ಹಾ' ಎನ್ನುತ್ತ ಕೇಳುತ್ತ ಹೋದೆ.
`ಕೆಲವೊಮ್ಮೆ ಮನಸ್ಸು ತುಂಬಾ ವಿನಾ ಕಾರಣಕ್ಕೆ ಸುಮ್ಮನಾಗಿ ಬಿಡುತ್ತವೋ.. ಆಗ ಅರಿವಿಲ್ಲದೆ ನನ್ನ ಕಣ್ಣಾಲಿಗಳಿಂದ ನೀರು ಜಿನುಗುತ್ತವೆ. ಸಂದರ್ಭದಲ್ಲೆಲ್ಲ ನಿನ್ನ ನೆನಪು ಕಾಡುತ್ತವೆ. ಆಗ ಸುಮ್ಮನೆ ಆಕಾಶ ನೋಡುತ್ತ ಕುಳಿತು ಬಿಡುತ್ತೇನೆ' ಎಂದು ಮೌನಕ್ಕೆ ಜಾರಿಬಿಟ್ಟಳು.
ಆದರೆ ಅವಳಾಡಿದ ಬಹಳಷ್ಟು ಮಾತುಗಳಲ್ಲಿ ಈ ಮಾತು ಮಾತ್ರ ನನ್ನ ಹೃದಯವನ್ನೇ ತಾಕುವಂತೆ ಮಾಡಿತು. ಬೇಡ ಬೇಡ ಎಂದರೂ ಮನಸ್ಸು ಹಿಂದಿನ ದಿನಗಳತ್ತ ಜಾರುತ್ತಿತ್ತು. ಬಲವಂತವಾಗಿ ಅದನ್ನು ಹಿಡಿದಿಡಲು ಪ್ರಯತ್ನಿಸಿದೆ. ಇಲ್ಲ, ಅದು ಯಾವ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಹಿಡಿದ ಹಠ ಸಾಧಿಸುವಂತೆ, ನನ್ನನ್ನು ಧಿಕ್ಕರಿಸಿ ಹಳೆಯ ನೆನಪಿನ ಗೂಡಿಗೆ ಹೋಗಿ ಕುಳಿತು ಬಿಟ್ಟಿತು...!
ಅವಳ ಜೊತೆ ಕಳೆದ, ಆಡಿತ, ಹರಟಿದ ಎಲ್ಲ ಕ್ಷಣಗಳಗಳನ್ನು ನನ್ನ ಮನಸ್ಸು ಒಂದಾದಾಗಿ ಮೆಲುಕು ಹಾಕತೊಡಗಿತು.
ನೆನಪು 1........
ಅವತ್ತು ಯಾರಿಗೂ ಹೇಳದೆ, ನಾವಿಬ್ಬರೂ ಸಮುದ್ರಕ್ಕೆ ತೆರಳಿದ್ದೆವು. ಆಗ ತಾನೆ ಸೂರ್ಯ ತನ್ನ ಕಾರ್ಯ ಮುಗಿಸಿ ವಿಶ್ರಾಂತಿಗೆ ತೆರಳುತ್ತಿದ್ದ. ಭೋರ್ಗರೆವ ಕಡಲ ಮೊರೆತದ ನಡುವೆ, ತುಂತುರು ಮಳೆ ಹನಿಗಳು ಜಿನುಗುತ್ತ ಮುಸ್ಸಂಜೆಯ ಸೊಬಗನ್ನು ಹೆಚ್ಚಿಸಿದ್ದವು. ಏರಿಳಿತದ ಅಲೆಗಳ ಮೇಲೆ ನಮ್ಮಿಬ್ಬರದು ಭಾವ ಲಹರಿಗಳ ಪಯಣ. ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ, ಕತ್ತಲಾವರಿಸಿಬಿಟ್ಟಿತ್ತು. ತುಸು ತಡವರಿಸಿದ ಆಕೆ, `ಏನೋ... ಕತ್ತಲಾಯ್ತಲ್ಲೊ... ಭಯವಾಗ್ತಿದೆ, ಹೋಗೋಣ ಬಾ' ಎಂದಳು. `ಇಲ್ಲ ಕಣೆ, ಹತ್ತು ನಿಮಿಷ ಬಿಟ್ಟು ಹೊರಡೋಣ' ಎಂದೆ!
ಅದೇ ಸಮಯದಲ್ಲಿ ಆಕೆಗೆ ದೂರದಲ್ಲಿ ಯಾವುದರದೋ ಒಂದು ಆಕೃತಿ ಕಣ್ಣಿಗೆ ಬಿತ್ತು! ಭಯಭೀತಳಾದ ಅವಳು ಏದುಸಿರು ಬಿಡುತ್ತ ಬಾಚಿ ನನ್ನನ್ನು ತಬ್ಬಿಕೊಂಡು, `ಅಲ್ಲಿ ನೋಡು.... ಎಂದು ಬೆರಳು ತೋರಿಸಿದಳು. ಅವಳು ತೋರಿಸಿದ ಬೆರಳ ದಿಕ್ಕಿಗೆ ದಿಟ್ಟಿಸಿ ನೋಡಿದೆ! ನಮ್ಮೂರ ವೆಂಕ ಬೀಡಿ ಸೇದುತ್ತ ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದ!
ಮನಸ್ಸಲ್ಲೆ `ವೆಂಕ'ನಿಗೊಂದು ಧನ್ಯವಾದ ಅರ್ಪಿಸಿ, ಇಂತಹ ಕ್ಷಣಗಳು ಸದಾ ಎದುರಾಗುತ್ತಿರಲಿ ಎಂದು ಭಗವಂತನಲ್ಲಿಯೂ ಪ್ರಾರ್ಥಿಸಿದೆ.
ನೆನಪು 2.............
ಆಗ ತಾನೆ ಶಾಲೆ ಮುಗಿಸಿ ಮನೆ ಕಡೆ ಹೆಜ್ಜೆ ಹಾಕುತ್ತಿದ್ದೆ. ಹಿಂದಿನಿಂದ ಬಂದ ಆಕೆ, `ನಾನು ಇಂದು ತುರ್ತಾಗಿ ಮನೆಗೆ ಹೋಗ್ತಾ ಇದ್ದೇನೆ. ಬರಲು ಇನ್ನೆರಡು ದಿನ ತಡವಾಗಬಹುದು' ಎಂದಳು. ಯಾಕೆ ಏನು ಎಂದು ಕೇಳುವಷ್ಟರಲ್ಲಿ, ಭರಭರನೆ ಮನೆ ಕಡೆ ಹೆಜ್ಜೆ ಹಾಕಿದಳು. ಹುಚ್ಚು ಹಿಡಿದಂತಾಗ ಅವಳಿದ್ದ ಮನೆಯೆಡೆ ನಾನು ಕೂಡಾ ಹೆಜ್ಜೆ ಹಾಕಿದೆ. ಮನೆಯ ಮೂಲೆಯೊಂದರಲ್ಲಿ ಕುಳಿತು ಬಿಕ್ಕಿಬಿಕ್ಕಿ ಅಳುತ್ತಿದ್ದಳು. ಒಮ್ಮೆ ಸುತ್ತಲೂ ಕಣ್ಣಾಡಿಸಿದೆ.... ಯಾರೂ ಇಲ್ಲದಿರುವದನ್ನು ಗಮನಿಸಿ, ಅವಳ ಪಕ್ಕ ಹೋಗಿ ಕುಳಿತು, ತಲೆ ನೇವರಿಸುತ್ತ `ಏನಾಯ್ತೋ ಪಾಪು..? ಯಾಕೆ ಹೀಗೆ ಅಳ್ತಾ ಇದ್ದೀಯಾ..?' ಎಂದು ಕೇಳಿದೆ. ಒತ್ತರಿಸುವ ಬರುವ ದುಃಖವನ್ನು ಹಿಡಿದುಕೊಳ್ಳುತ್ತ `ನನ್ನ ಮುದ್ದಿನ ಗಿಳಿ ಸತ್ತೊಯ್ತಂತೆ! ಎಲ್ಲಿಯದೋ ಬೆಕ್ಕು ಬಂದು ಅದನ್ನು ಮುರಿದು ತಿಂದು ಬಿಟ್ಟಿದೆಯಂತೆ' ಎಂದಳು. ನನ್ನವಳ ಮುಗ್ದತೆಗೆ ಮರುಗಿದೆ. ಅವಳಲ್ಲಿರುವ ಸ್ನಿಗ್ದ ಪ್ರೀತಿಗೆ ಸೋತು ಹೋದೆ.
ಸಾಂತ್ವನಕ್ಕೆಂದು `ನನಗೂ ಕೂಡಾ ತುಂಬಾ ನೋವಾಗ್ತಿದೆ ಪಾಪು. ಏನು ಮಾಡುವುದು? ಅದರ ಆಯುಷ್ಯಾನೇ ಅಷ್ಟು ಅಂತ, ಸುಮ್ಮನಾಗಬೇಕು. ಇವತ್ತು ನಿನ್ನ ಗಿಣಿ... ನಾಳೆ ಇನ್ನೇನೋ.... ನಾಡಿದ್ದು ನಾನು....' ಎನ್ನುವಷ್ಟರಲ್ಲಿ, ತನ್ನ ಕೈಯಿಂದ ನನ್ನ ಬಾಯಿಯನ್ನು ಮುಚ್ಚಿಸಿದಳು.
ಬೇಡ ಕಣೋ.... ಇನ್ಯಾವತ್ತೂ ಅಂಥಹ ಮಾತನ್ನು ಆಡಬೇಡ. ಎಲ್ಲರೂ ಸಾಯಲೂ ಬಂದವರೇ! ಆದರೆ, ನೀನು ಮಾತ್ರ ಎಂದಿಗೂ ನಗು ನಗುತ್ತ ಇರಬೇಕು. ಇನ್ಮುಂದೆ `ತಮಾಷೆ'ಗೂ ಕೂಡಾ ಅಂತಹ ನಿದರ್ಶನ ಕೊಡಬೇಡ' ಎಂದು ಅಳುತ್ತಲೇ ತಾಕೀತು ಮಾಡಿದಳು.
ಹುಚ್ಚಿ.... ಅದಕ್ಕೆಲ್ಲ ಯಾಕೆ ಹೀಗಾಡ್ತಿಯಾ?' ಎಂದು ಪ್ರೀತಿಯಿಂದ ಅವಳ ಕೆನ್ನೆ ಸವರಿದೆ. ಕೆನ್ನೆ ಸವರಿದ ಕೈಯನ್ನೆ ಹಿಡಿದುಕೊಳ್ಳುತ್ತ, `ಈ ಕೈ ಯಾವಾಗಲೂ ನನ್ನದೇ ಅಲ್ವಾ? ಈ ಕೈ ನನ್ನ ಕೈಯನ್ನು ಹಿಡಿಯುತ್ತದೆ ಅಲ್ವಾ? ಈ ಕೈಯಲ್ಲೇ ಅಲ್ವಾ ನಾನು ನೆಮ್ಮದಿಯಾಗಿ ಬದುಕೋದು? ಎಂದು ತನ್ನೆದೆಗೆ ಒತ್ತಿಕೊಂಡು ಅರೆ ಕ್ಷಣ ಕಣ್ಮುಚ್ಚಿದಳು.ಮಾತು ಬರದವನಾಗಿ ಅವಳನ್ನೇ ನೋಡುತ್ತ ಕುಳಿತು ಬಿಟ್ಟೆ. `ನಿನಗೆ ಏನೋ ಕೊಡಬೇಕು ಎಂದುಕೊಂಡಿದ್ದೆ, ನೆನಪೇ ಇಲ್ಲ.... ಕಣ್ಣು ಮುಚ್ಕೊ' ಎಂದು ತನ್ನ ಶಾಲಾ ಬ್ಯಾಗ್ ತೆರೆದಳು. ಅವಳ ಆಣತಿಯಂತೆ ನಾನು ಕಣ್ಣು ಮುಚ್ಚಿಕೊಂಡಿದ್ದೆ. ಏನು ಕೊಡುತ್ತಾಳೆ ಎಂದು ಊಹಿಸುವಷ್ಟರಲ್ಲಿ ಹಣೆಯ ಮೇಲೊಂದು ಅವಳ `ಮುತ್ತು' ಇತ್ತು..!
ಬೆಕ್ಕು ತಿಂದ ನನ್ನವಳ ಗಿಳಿಯ ಆತ್ಮಕ್ಕೆ ಮನಸ್ಸಲ್ಲೆ ಪ್ರಾರ್ಥನೆ ಸಲ್ಲಿಸಿದೆ...!
-ನಾಗರಾಜ ಬಿ.ಎನ್.