ಮಂಗಳವಾರ, ನವೆಂಬರ್ 8, 2016

ಮತ್ತದೆ ಮಾತು..... ಸತ್ತರೂ ಬದುಕಿರಲಿ ಆತ್ಮವಿಶ್ವಾಸ!

'ಸೋಲೇ ಗೆಲುವಿನ ಸೋಪಾನ' ಎಂದು ಬಾಲ್ಯದಿಂದಲೂ ಕೇಳುತ್ತಾ ಬಂದಿರುವ ಗಾದೆ ಮಾತು. ಆದರೆ ಆ ಸೋಲು ನೆರಳಿನಂತೆ ಜೀವನ ಪರ್ಯಂತ ಸದಾ ಹಿಂಬಾಲಿಸುತ್ತಲೇ ಇದ್ದರೆ ಸೋಪಾನ ಯಾವಾಗ ಬರಬೇಕು?

'ಒಳ್ಳೆಯದಾಗುತ್ತದೆ... ಭವಿಷ್ಯ ಚೆನ್ನಾಗಿದೆ... ಆತ್ಮವಿಶ್ವಾಸ ಕಳೆದುಕೊಳ್ಳಬೇಡ...' ಎನ್ನುವ ಮಾತಿನ ನಡುವೆಯೇ `ಸತ್ತರೂ ಬದುಕಿರಲಿ, ಆತ್ಮವಿಶ್ವಾಸ' ಎನ್ನುವ ಕವಿ ದಿನಕರ ದೇಸಾಯಿ ಅವರ ಕವನದ ಸಾಲುಗಳು ಧುತ್ತೆಂದು ಸುಳಿದಾಡುತ್ತದೆ. ಸೂಲು, ಸೋಪಾನ, ಜೀವನ, ಭವಿಷ್ಯ, ಆತ್ಮವಿಶ್ವಾಸ ಇವುಗಳ ಆಳಕ್ಕಿಳಿದು ಯೋಚಿಸುತ್ತಾ ಹೋದರೆ, 'ಸತ್ತ ಮೇಲೆ ಯಾಕೆ ಬೇಕು ಆತ್ಮವಿಶ್ವಾಸ' ಎನ್ನುವ ವಾಸ್ತವ ಅರಿವಾಗುತ್ತದೆ. ಯಾಕೆಂದರೆ, ಇದ್ದಾಗ ಮಾತ್ರ ಬದುಕಿಗೊಂದು ಅರ್ಥ. ಅದೊಂದು ಶೂನ್ಯದ ಹೊರಗಿನ ಬದುಕು. ಆದರೆ, ಹೋದಾಗ ಅದು ಶೂನ್ಯದೊಳಗೆ ಬಂಧಿ!


ಕೆಲವು ವೇಳೆ 'ಪರೋಪಕಾರ, ಒಳ್ಳೆಯತನ, ಪ್ರಾಮಾಣಿಕತೆಯ ಬದುಕೇ ಮಗ್ಗಲು ಮುಳ್ಳಾಗಿ ಬಿಡುತ್ತವೆ. ಎಂದೂ ಯಾರಿಗೂ ಕೆಡುಕನ್ನು ಬಯಸದೆ, ಎಲ್ಲರಲ್ಲಿಯೂ ಒಳಿತನ್ನೇ ಕಾಣುತ್ತ, ನನ್ನ ಜೊತೆ ನೀನೂ ಸುಖವಾಗಿರುವ` ಎನ್ನುವ ಬದುಕಿನ ಧ್ಯೇಯ ಇಂದಿನ ದಿನಮಾನಕ್ಕೆ ಸೂಕ್ತವಲ್ಲವೇನೋ? 'ನಾ ಮಾಡಿದ ಒಳ್ಳೆಯ ಕೆಲಸಕ್ಕೆ ಮುಂದೊಂದು ದಿನ ಪ್ರತಿಫಲ ದೊರೆಯುತ್ತದೆ' ಎನ್ನುವ ಆಶಾಭಾವನೆ, ಆಸೆಯನ್ನೇ ಹತ್ತಿಕ್ಕಿ ಬಿಡುತ್ತವೆ. ದಿನ, ತಿಂಗಳು, ವರ್ಷ ಕಳೆದರೂ ಆ `ಮುಂದೊಂದು ದಿನ' ಎದುರಾಗುವುದೇ ಇಲ್ಲ...! `ನನ್ನ ಜೊತೆ ನಿನಗೂ ಒಳ್ಳೆಯದಾಗಲಿ' ಎನ್ನುವ  ಪರೋಪಕಾರದ ಗುಣ ಬದುಕನ್ನೇ ಮಖಾಡೆ ಮಲಗಿಸಿಬಿಡುತ್ತದೆ. ಒಳ್ಳೆಯದಾಗಲಿ ಎಂದು ಪ್ರಾಮಾಣಿಕವಾಗಿ ಹರಸಿ, ಕೈ ಹಿಡಿದು ಕರೆದುಕೊಂಡು ಹೋದವನಿಗೆ `ಹಣೆ ಬರಹ'ದ ಗೋಡೆ ಎದುರಾದರೆ, ಕೈ ಹಿಡಿದು ನಡೆಯುವವನಿಗೆ 'ಅದೃಷ್ಟ' ದೇವತೆ ಹಿಂಬಾಲಿಸುತ್ತದೆ. ಇಲ್ಲಿ ದಾರಿ ತೋರಿದವನೇ ದಾರಿ ಕಾಣದಂತಾಗಿ ತಡವರಿಸುತ್ತ ಮುಗ್ಗರಿಸಿ ಬೀಳುತ್ತಾನೆ. ನನ್ನ ಬದುಕೇ ಇಷ್ಟು ಎಂದು ತನಗೆ ತಾನೇ ಶಾಪ ಹಾಕಿಕೊಳ್ಳುತ್ತ ಮೇಲೆದ್ದು, ಇನ್ನೊಂದು ಭರವಸೆಯ ಕಿರಣದ ಜಾಡು ಹಿಡಿಯಲು ಪ್ರಯತ್ನಿಸುತ್ತಾನೆ.
ಇನ್ನಿಲ್ಲ ಬದುಕು ಎಂದು ಕುಸಿದು ಬಿದ್ದಾಗ, ಭವಿಷ್ಯದ ಹಾದಿಯೇ ಮುಸುಕಾದಾಗ ಈ ಗಾದೆ ಮಾತು, ಕವನದ ಸಾಲು ಹಾಸ್ಯಾಸ್ಪದ ಎಂದೆನಿಸಿ ಬಿಡುತ್ತದೆ.(ಕೆಲವು ವೇಳೆ). ಯಾಕೆಂದರೆ ದಿನ, ಸಮಯ, ಕ್ಷಣ ಎಂದೂ ನಮಗಾಗಿ ಕಾಯುವುದಿಲ್ಲ. ಅದು ಸದಾ ಓಡುತ್ತಲೇ ಇರುತ್ತದೆ. ಆ ಓಟದ ಮಧ್ಯದಲ್ಲಿಯೇ ಯಾವುದೋ ಒಂದು ಸಮಯ ನಮ್ಮ ಬದುಕು ಕೂಡಾ ನಿಂತು ಬಿಡುತ್ತವೆ. ಆಗ ಪರೋಪಕಾರ, ಪ್ರಾಮಾಣಿಕತೆ, ಒಳ್ಳೆಯ ಗುಣಗಳು ನಮ್ಮ ಜೊತೆಯೇ ಲೀನವಾಗಿಬಿಡುತ್ತವೆ. ಕೈ ಹಿಡಿದು ನಡೆದಾತ 'ಅದೃಷ್ಟ' ಎಂದು ನೆಮ್ಮದಿಯ ಬದುಕು ಕಟ್ಟಿಕೊಂಡಿರುತ್ತಾನೆ. ಕೈ ಹಿಡಿದು ನಡೆಸಿದಾತ `ಹಣೆ ಬರಹ' ಎಂದು ಬದುಕಿಗೆ ಪೂರ್ಣ ವಿರಾಮ ಹಾಕಿರುತ್ತಾನೆ.
ಮತ್ತದೆ ಮಾತು..... ಸತ್ತರೂ ಬದುಕಿರಲಿ ಆತ್ಮವಿಶ್ವಾಸ!
('ಅರ್ಥ'ಕ್ಕೆ ನಿಲುಕದ್ದು......)