ಗುರುವಾರ, ಫೆಬ್ರವರಿ 2, 2017

ತವರಿಗೆ ಬಂದ ಯಶೋಧೆ.....
ಅರಿಯದ ವಯಸ್ಸಲ್ಲಿ ದಿಕ್ಕು ತೋಚದೆ ದಿಕ್ಕೆಟ್ಟು ಹೋದಾಗ, ಮೈದವಡಿ ರಟ್ಟೆ ಹಿಡಿದು ಎಬ್ಬಿಸಿದ್ದು ಸೇವಾ ಭಾರತಿ. ಮೂರೊತ್ತು ಮೃಷ್ಟಾನ್ನ ತಿನ್ನಿಸಿ, ಸಂಸ್ಕಾರದ ಜತೆಗೆ ಶಿಕ್ಷಣ ನೀಡಿದ್ದು ಬಾಲಕಲ್ಯಾಣ. ಪ್ರಾಪ್ತೆಯಾದಾಗ ಹಸೆಮಣೆ ಏರಿಸಿ, ಸಪ್ತಪದಿ ತುಳಿಸಿದ್ದು ಸೇವಾಸದನ. ತವರಿಲ್ಲದಾ ಕೂಸಿಗೆ ತವರಿನಾ ವಾತ್ಸಲ್ಯ ತೋರಿಸಿದ್ದು ಮಾತೃಛಾಯಾ...

ಸರಿಸುಮಾರು ದಶಕಗಳ ಕಾಲ ಹುಬ್ಬಳ್ಳಿ ಕೇಶ್ವಾಪುರದ ಮಾತೃಛಾಯ ಆಶ್ರಯದಲ್ಲಿ ಬೆಳೆದು, ಕೊಪ್ಪಳದ ಸುಧೀಂದ್ರ ಎಂಬಾತನೊಂದಿಗೆ ವಿವಾಹ ಬಂಧನಕ್ಕೊಳಗಾದ ಯಶೋಧಾಗೆ ಬುಧವಾರ(ಫೆ. 1, 2017; ಸಂ. 6) ಸಂತಸದ ಕ್ಷಣ. ಅಲ್ಲಿದ್ದ ಮೂವತೈದು ಮಕ್ಕಳ ಸಾಮೂಹಿಕ ಜನ್ಮದಿನದ ಸಂಭ್ರಮದಲ್ಲಿ ಹಿರಿಯಕ್ಕನ ಪಾತ್ರ. ಪುಟ್ಟ ಪಾಪು ಸುರಭಿಯನ್ನು ಕಂಕುಳಲ್ಲಿ ಎತ್ತಿಕೊಂಡು ಅತ್ತಿಂದಿತ್ತ ಓಡಾಡುತ್ತ, ವಹಿಸಿದ್ದ ಜವಾಬ್ದಾರಿಯನ್ನು ನಿಭಾಯಿಸುತ್ತ ನೆರೆದ ಸಹೃದಯಿಗಳ ಕೇಂದ್ರಬಿಂದುವಾಗಿದ್ದಳು.
ಒಂದಿಷ್ಟು ವರ್ಷ ಯಶೋಧಾ ಸೇವಾಸನದ ವೇದಿಕೆಯಲ್ಲಿಯೇ ತನ್ನ ಸಂಗಡಿಗರೊಂದಿಗೆ ಜನ್ಮದಿನ ಆಚರಿಸಿಕೊಂಡಿದ್ದಳು. ನೂರಾರು ಮಾತೆಯರು ಸೆರಗು ತುಂಬು  ಹಾರೈಕೆಯ ಅಕ್ಷತೆ ತಂದು, ನೂರ್ಕಾಲ ಬಾಳಿ ಬದುಕವ್ವ ಎಂದು ನೆತ್ತಿ ಮೇಲೆ ಸುರಿದಿದ್ದರು. ದೇದೀಪ್ಯಮಾನವಾಗಿ ಬೆಳಗುವ ಪರಂಜ್ಯೋತಿಯ ಆರತಿ ಎತ್ತಿ ಮನದುಂಬಿ ಆಶೀರ್ವದಿಸಿದ್ದರು. ಅದೇ ದಿನಗಳ, ಅದೇ ಕ್ಷಣಗಳು ಯಶೋಧಾಳ ಕಣ್ಮುಂದೆ ಒಂದೊಂದಾಗಿ ಮೆರವಣಿಗೆ ಹೊರಟಿದ್ದವು. ಆ ಭಾವುಕ ಕ್ಷಣಗಳು ಅವಳನ್ನು ಆನಂದದ ಮಡುವಿಗೆ ನೂಕಿದಂತಿತ್ತು. ಅಲ್ಲಿಯೇ ಇರುವ ಆರತಿ ಬಟ್ಟಲಿಗೆ ಎಣ್ಣೆ ಸುರಿಯುತ್ತ, ಹಾಕಿದ ಬತ್ತಿ ಹಿಂಡುತ್ತ ತನ್ನನ್ನೇ ತಾನು ಮರೆತಿದ್ದಳು. ಅಷ್ಟೊಂದು ಭಾವಪರವಶಳಾಗಿ ಸಾಗಿ ಬಂದ ಹಾದಿಯ ಕಡೆ ಮನಸ್ಸು ನೆಟ್ಟಿದ್ದಳು!
ಯಶೋಧಾಗೆ, ಮಾತೃಛಾಯ ತವರು ಮನೆ. ಅಲ್ಲಿಯೇ ಆಡಿ, ಬೆಳೆದಾಕೆಗೆ ಅಲ್ಲಿದ್ದ ಮಾತೆಯರೇ ಅಮ್ಮಂದಿರು. ಮಡಿಲು ತುಂಬಿಸಿಕೊಂಡು ತವರಿಗೆ ಬಂದ ಸಂಭ್ರಮ ಆಕೆಯ ಮೊಗದಲ್ಲಿ ಕಳೆಕಟ್ಟಿತ್ತು. ಕರುಳ ಕುಡಿ ತನ್ನ ಅಜ್ಜಿ ಮನೆಯಲ್ಲಿ ಮನದಣಿಯೇ ಕುಣಿದು ಕುಪ್ಪಳಿಸಿತ್ತು. ಕೈಯ್ಯಲ್ಲಿ ಬಾಳೆಹಣ್ಣು ಹಿಡಿದು ವೇದಿಕೆಯ ಮೇಲೆಲ್ಲ ಓಡಾಡಿ, ತನ್ನ ಪುಟ್ಟ ಹೆಜ್ಜೆಯನ್ನು ಅಚ್ಚೊತ್ತಿತ್ತು. ಪುಟ್ಟ ಕಂದನ ಕೇಕೆ, ತುಂಟಾಟಗಳನ್ನೆಲ್ಲ ವೇದಿಕೆ ಮುಂಭಾಗದಲ್ಲಿ ಕುಳಿತ ಸಹೃದಯಿಗಳು ಶಾಂತಚಿತ್ತದಿಂದ ಆಸ್ವಾದಿಸುತ್ತಿದ್ದರು. ಮಹಾಮನೆಯಲ್ಲಿ ತನ್ನಂತೆಯೇ ಇರುವ ಸಹೋದರ, ಸಹೋದರಿಯರ ಸಾಮೂಹಿಕ ಜನ್ಮದಿನಕ್ಕೆ ಮನೆಯ ಹಿರಿ ಮಗಳಾಗಿ ಯಶೋಧಾ ಓಡಾಡಿದಳು.

'ಕೈಹಿಡಿದಾತ(ಸುಧೀಂದ್ರ) ಅನ್ಯಕಾರ್ಯದ ನಿಮಿತ ಬೇರೆಡೆ ಹೋಗಿದ್ದರಿಂದ, ಕರೆದುಕೊಂಡು ಬರಲಾಗಲಿಲ್ಲ. ಈ ಸುಮಧುರ ಕ್ಷಣದಲ್ಲಿ ಅವರಿಲ್ಲ ಎನ್ನುವ ಕೊರಗು ಕಾಡುತ್ತಿದೆಯಾದರೂ, ಪುಟ್ಟ ಮಕ್ಕಳ ಸಂಭ್ರಮದಲ್ಲಿ ನಾ ತೇಲಿ ಹೋಗಿದ್ದೇನೆ. ನನ್ನ ತವರಿನ ಮಕ್ಕಳ  ಜನ್ಮದಿನದಲ್ಲಿ ಪಾಲ್ಗೊಳ್ಳುವ ಖುಷಿಗಿಂತ, ಬೇರೊಂದು ಖುಷಿ ನನಗ್ಯಾವುದೂ ಇಲ್ಲ. ಯಾಕೆಂದರೆ, ಇದೇ ವೇದಿಕೆ ಮೇಲೆ ನಾನು ಕೂಡಾ ನಾಲ್ಕೈದು ಬಾರಿ ನೂರಾರು ಮಾತೆಯರಿಂದ ಆರತಿ ಬೆಳಗಿಸಿಕೊಂಡಿದ್ದೆ' ಎಂದು ತವರಿಗೆ ಬಂದ ಯಶೋಧಾ ಆನಂದಭಾಷ್ಪ ಹರಿಸಿದಳು.

-ಶುಭವಾಗಲಿ ಸಹೋದರಿ....... ಬದುಕು ಬಂಗಾರವಾಗಲಿ, ನಿನ್ನ ತವರು ಜಗದೆತ್ತರಕ್ಕೆ ಬೆಳಗಲಿ.