ಕೈ ಕಟ್ಟಿ, ಹೇಳಿದ್ದಕ್ಕೆಲ್ಲ ಗೋಣು ಅಲ್ಲಾಡಿಸದಿರಿ....
ಇದೊಂದೆರಡು ತಿಂಗಳು ಪತ್ರಿಕೆಯ ಬಹುಪಾಲು ಜಾಗ ಪರಿಸರ ದಿನಾಚರಣೆ ಸುದ್ದಿಗೇ ಮೀಸಲು. ನಮ್ಮ ಪರಿಸರಕ್ಕೆ ನಾವು ಅಷ್ಟೂ ಮಾಡದಿದ್ದರೇ ಏನರ್ಥ? ಆದರೆ, ಪತ್ರಿಕೆಯಲ್ಲಿ ಫೋಟೋ ಬರುತ್ತದೆ ಎನ್ನುವ ಉದ್ದೇಶಕ್ಕೇ ಕೆಲವರು ವನಮಹೋತ್ಸವ ಆಚರಿಸುತ್ತಾರೆ. ಇನ್ನು ಕೆಲವರು ಪ್ರಚಾರ ಗಿಟ್ಟಿಸಿಕೊಳ್ಳಲು ಸಂಘ-ಸಂಸ್ಥೆಯ ಜತೆಗೂಡಿ ಕಾರ್ಯಕ್ರಮ ನಡೆಸುತ್ತಾರೆ. ಬಹುತೇಕ ಜನಪ್ರತಿನಿಧಿಗಳಿಗಂತೂ ಈ ಆಚರಣೆ ಪುಕ್ಕಟೆ ಪ್ರಚಾರ ನೀಡಿ ಬಿಡುತ್ತದೆ.
ಪರಿಸರ ನಮ್ಮಮ್ಮ. ಅವಳು ಎಲ್ಲರನ್ನೂ ಸಲುಹಿ, ಪೊರೆಯುವವಳು. ಅವಳು ನಳನಳಿಸಿದರೆ ಮಾತ್ರ, ನಾವು ನೆಮ್ಮದಿಯ ಉಸಿರೆಳೆಯಬಹುದು. ಅವಳು ಬದುಕಬೇಕೆಂದರೆ ಹಸಿರು ಚಿಗುರಬೇಕು. ಚಿಗುರೊಡೆದ ಹಸಿರನ್ನು ಬೆಳೆಸಿ ಪೋಷಿಸಬೇಕು. ಅಭಿವೃದ್ಧಿ ಎನ್ನುತ್ತ ಬೆಳೆದು ನಿಂತ ಮರ-ಗಿಡಗಳನ್ನು ಕಡಿದು, ನಮ್ಮ ಅವನತಿಗೆ ನಾವೇ ಕಾರಣರಾಗುತ್ತಿದ್ದೇವೆ. ಈಗಾಗಲೇ ಪರಿಸರಕ್ಕೆ ಸಂಬಂಧಿಸಿದ ಸಾಕಷ್ಟು ವರದಿಗಳು, ‘ಪರಿಸರದ ಮೇಲೆ ಹೀಗೆ ದೌರ್ಜನ್ಯ ನಡೆಯುತ್ತ ಹೋದರೆ ಕೆಲವೇ ವರ್ಷಗಳಲ್ಲಿ ಮನುಕುಲ ಊಹಿಸಲಾಗದಷ್ಟು ಗಂಭೀರ ಸ್ಥಿತಿಗೆ ತಲುಪುತ್ತದೆ’ ಎಂದು ಹೇಳುತ್ತಿವೆ. ಸಾಕಷ್ಟು ವಿಜ್ಞಾನಿಗಳು ಸಹ ಈ ಕುರಿತು ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಆದರೂ ಸರಕಾರಕ್ಕೆ ಅಭಿವೃದ್ಧಿ ಎದುರು ಇದ್ಯಾವುದೂ ಗಮನಕ್ಕೆ ಬರುತ್ತಿಲ್ಲ. ಅವೈಜ್ಞಾನಿಕ ಯೋಜನೆ ಸಿದ್ಧಪಡಿಸುತ್ತದೆ, ಕಣ್ಣುಮುಚ್ಚಿ ತೆರೆಯುವುದರೊಳಗೆ ಅದನ್ನು ಅನುಷ್ಠಾನಕ್ಕೂ ತಂದು ಬಿಡುತ್ತದೆ. ಪರಿಣಾಮ ಲಕ್ಷೋಪ ಲಕ್ಷ ಮರಗಳ ಮಾರಣಹೋಮ ವಾರ ಕಳೆಯುವುದರೊಳಗೆ ನಡೆದು ಬಿಡುತ್ತದೆ. ಇವೆಲ್ಲದರ ಒಟ್ಟು ಪರಿಣಾಮ ಬರ!
ವರ್ಷದಿಂದ ವರ್ಷಕ್ಕೆ ಬರ ತನ್ನ ಕಬಂಧ ಬಾಹುವನ್ನು ಇಕ್ಕೆಲುಗಳಲ್ಲಿ ಚಾಚುತ್ತಲೇ ಇದೆ. ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಮೂರ್ನಾಲ್ಕು ವರ್ಷಗಳ ಹಿಂದೆ ಹತ್ತು-ಹದಿನೈದು ಅಡಿಗೆ ನೀರು ದೊರೆಯುತ್ತಿತ್ತು. ಈಗ ಮೂವತ್ತು-ನಲವತ್ತು ಅಡಿ ಆಳ ಅಗೆದರೂ ನೀರು ಸಿಗುವುದು ಅಪರೂಪ. ಕೆರೆ, ಕಟ್ಟೆ, ಬಾವಿಗಳೇ ಅಲ್ಲಿಯ ಜನರಿಗೆ ನೀರಿನ ಮೂಲವಾಗಿತ್ತು. ಶಾಲೆ ಹಾಗೂ ಕೆಲವು ಸರಕಾರಿ ಆವರಣದಲ್ಲಿ ಬೆರಳೆಣಿಕೆಯಷ್ಟು ಕೊಳವೆ ಬಾವಿ ಹಾಗೂ ಬೋರ್‌ವೆಲ್‌ಗಳು ಇರುತ್ತಿದ್ದವು. ಆದರೆ, ಇತ್ತೀಚಿನ ಎರಡು ವರ್ಷಗಳಲ್ಲಿ ಅಲ್ಲೂ ಕೊಳವೆ ಬಾವಿ ಸಂಸ್ಕೃತಿ ಉತ್ತುಂಗಕ್ಕೇರಿದೆ. ವಿಶೇಷವೆಂದರೆ, ಕಡಲಂಚಿನ ಪ್ರದೇಶದ ಮನೆ-ಮನೆಗಳಲ್ಲೂ ಕೊಳವೆ ಬಾವಿಯದ್ದೇ ಕಾರುಬಾರು! ಅಂದರೆ, ವಿಷಯವಿಷ್ಟೇ, ಸದಾ ನೀರಿರುವ ಕರಾವಳಿ ಪ್ರದೇಶದಲ್ಲಿಯೂ ಅಂತರ್ಜಲ ಮಟ್ಟ ಕುಸಿದಿದೆ. ಮುಂದೊಂದು ದಿನ ಆ ಭಾಗದ ಜನರು ಸಹ ಉತ್ತರ ಕರ್ನಾಟಕ ಭಾಗದ ಜನರಂತೆ ಹನಿ ನೀರಿಗಾಗಿ ಬಿಂದಿಗೆ ಹಿಡಿದು ಏಳೆಂಟು ಕಿ.ಮೀ. ಪಯಣಿಸುವ ಸ್ಥಿತಿ ಎದುರಾದರೂ ಅಚ್ಚರಿಯಿಲ್ಲ. ಯಾಕೆಂದರೆ, ಈಗಾಗಲೇ ನೀರಿಲ್ಲದ ಅಲ್ಲಿಯ ಕೆಲವು ಪ್ರದೇಶಗಳಿಗೆ ತಾಲೂಕಾಡಳಿತ ಟ್ಯಾ೦ಕರ್ ಮೂಲಕ ನೀರು ಪೂರೈಸುವ ಯೋಜನೆಗೆ ಮುನ್ನುಡಿ ಬರೆದಾಗಿದೆ.
ಈ ಮೊದಲು ಮಲೆನಾಡಿನ ಆಗುಂಬೆ, ಶಿಕಾರಿಪುರ, ಸಾಗರ, ಚಿಕ್ಕಮಗಳೂರು, ಕೊಡಗು, ಶಿರಸಿ ಹಾಗೂ ಕರಾವಳಿಯ ಕೆಲವು ಸ್ಥಳಗಳ ಹೆಸರು ಕೇಳಿದರೆ ಸಾಕಿತ್ತು, ಬಿಟ್ಟು ಬಿಡದೆ ಸುರಿವ ಮಳೆ ಹಾಗೂ ಹಸಿರ ಹಾಸು ಕಣ್ಮುಂದೆ ಬಂದು ನಿಲ್ಲುತ್ತಿತ್ತು. ಮಳೆ ಅಬ್ಬರಿಸುವಾಗ ದಟ್ಟವಾದ ಮಂಜು ಪರ್ವತಗಳ ಸಾಲಿನ ನಡುವೆ ಭುಗಿಲೇಳುತ್ತಿತ್ತು. ಯಾವುದಾದರೂ ಗುಡ್ಡದ ನೆತ್ತಿ ಮೇಲೆ ನಿಂತರೆ ಮೋಡಗಳು ಎಲ್ಲಿ ತಲೆಗೆ ತಾಕುತ್ತವೋ ಎಂದು ಭಾಸವಾಗುತ್ತಿತ್ತು. ಇದ್ದಬಿದ್ದ ಚಿಕ್ಕ ಜಲಪಾತಗಳೆಲ್ಲ ಮೈದುಂಬಿ ಹರಿಯುತ್ತಿದ್ದವು. ಆದರೆ ಈಗೀಗ ಮಳೆ ಕಾಡು ಖ್ಯಾತಿಯ ಈ ಪಶ್ಚಿಮಘಟ್ಟ ಪ್ರದೇಶಗಳು ಸದ್ದಿಲ್ಲದೆ ಒಣಗಲಾರಂಭಿಸಿವೆ. ವರ್ಷದಿಂದ ವರ್ಷಕ್ಕೆ ಈ ಪ್ರದೇಶದಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗುತ್ತಿದೆ. ಕರಾವಳಿ ಸೇರಿ ಈ ಪ್ರದೇಶದಲ್ಲಿ ಮುಂಗಾರು ವೇಳೆ ಪ್ರತಿದಿನ 40-50 ಮಿ.ಮೀ. ಪ್ರಮಾಣದಷ್ಟು ಮಳೆಯಾಗಿ, ತಿಂಗಳಿಗೆ 2900 ಮಿ.ಮೀ ದಾಖಲಾಗುತ್ತಿತ್ತು. ಅದು ಕಳೆದ ವರ್ಷ 30-40 ಮಿ.ಮೀ.ಗೆ ಇಳಿಕೆಯಾಗಿದೆ. ಆಗುಂಬೆ ಒಂದೇ ಪ್ರದೇಶದಲ್ಲಿ ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಲ್ಲಿ 1750 ಮಿ.ಮೀ.ರಷ್ಟು ಮಳೆಯಾಗುತ್ತಿತ್ತು. ಐದಾರು ವರ್ಷದ ಮಳೆ ವರದಿಯಿಟ್ಟುಕೊಂಡು ಲೆಕ್ಕ ಹಾಕಿದರೆ ಕಳೆದ ವರ್ಷ ಶೇ.10ರಷ್ಟು ಮಳೆ ಕಡಿಮೆಯಾಗಿದೆ. ಎಡೆಬಿಡದೆ ಭೋರ್ಗರೆದು ಮಳೆ ಸುರಿಯುವ ಪ್ರದೇಶದಲ್ಲಿಯೇ ಮಳೆ ಪ್ರಮಾಣ ಕಡಿಮೆಯಾಗಿದೆ ಎಂದರೆ ಇನ್ನು ಉಳಿದ ಪ್ರದೇಶಗಳ ಕಥೆ ಏನಾಗಿರಬೇಡ?
ಮಳೆಗಾಗಿ ಪ್ರಾಾರ್ಥಿಸುವ ಕೈಗಳು ಸಾಕಷ್ಟು ಇವೆ. ಕೆಲವು ಗ್ರಾಮೀಣ ಭಾಗಗಳಲ್ಲಿ ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವ ಮೂಲಕ ವರುಣ ದೇವನ ಮೊರೆ ಹೋಗುತ್ತಾರೆ. ಅದು ಆಯಾಯ ಭಾಗದ ಸಮುದಾಯದ, ಪರಂಪರೆಯ ಒಂದು ಆಚರಣೆ, ನಂಬಿಕೆ. ಆದರೆ, ವೈಜ್ಞಾನಿಕ ನೆಲೆಗಟ್ಟಿನಡಿ ಆಡಳಿತ ನಡೆಸುವ ಸರಕಾರವೇ ಮೌಢ್ಯತೆಗೆ ಬಿದ್ದು, ನದಿಗೆ ಬಾಗಿನ ಅರ್ಪಿಸುವ ಮೂಲಕ ಮಳೆಗೆ ಪ್ರಾರ್ಥಿಸುತ್ತದೆ ಎಂದರೆ ಇದಕ್ಕಿ೦ತ ಕುಚೋದ್ಯ ಇನ್ನೇನಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ ಎಂದರೆ ‘ಮೋಡ ಬಿತ್ತನೆ’ಗೆ ಮುಂದಾಗುತ್ತದೆ, ಭೀಕರ ಬರ ತಲೆದೋರುತ್ತಿದೆ ಎಂದು ‘ಪಾತಾಳ ಗಂಗೆ’ಯ ಮೇಲೆ ಕಣ್ಣಿಡುತ್ತದೆ. ಈ ಕುರಿತು ಬೇಕಾಬಿಟ್ಟಿ ಪ್ರಚಾರಗಿಟ್ಟಿಸಿ ಸಾರ್ವಜನಿಕ ಅಭಿಪ್ರಾಯಕ್ಕೆ ಮುಂದಾಗುತ್ತದೆ. ಹಾಗಂತ ‘ಮರ-ಗಿಡಗಳನ್ನು ಕಡಿದ ಪರಿಣಾಮ ಈ ಸಮಸ್ಯೆ ತಲೆದೋರುತ್ತಿದೆ. ಇನ್ನು ಮುಂದೆ ಅಭಿವೃದ್ಧಿ ಹೆಸರಲ್ಲಿ ಪ್ರಕೃತಿಯ ಮೇಲೆ ದೌರ್ಜನ್ಯ ಎಸಗುವುದಿಲ್ಲ. ಪ್ರಾಾಮಾಣಿಕವಾಗಿ ಪರಿಸರ ರಕ್ಷಣೆಯಲ್ಲಿ ತೊಡಗಿಕೊಳ್ಳುತ್ತೇವೆ’ ಎಂದು ಎಲ್ಲಿಯೂ ಹೇಳುವುದಿಲ್ಲ. ಯಾಕೆಂದರೆ, ಜಡ್ಡುಗಟ್ಟಿದ ಆಡಳಿತಕ್ಕೆ ಪರಿಸರ ನಾಶ ಮಾಡಿ ರಸ್ತೆ, ಸ್ಥಾವರ, ಬಂದರು, ಕಟ್ಟಡ ನಿರ್ಮಿಸುವುದೇ ಒಂದು ಅಭಿವೃದ್ಧಿಯೆನ್ನುವಂತಾಗಿದೆ.
ಅನಕ್ಷರಸ್ಥ ಜನಪ್ರತಿನಿಧಿಗಳಿಗಿಂತ ಅಕ್ಷರಸ್ಥ ಜನಪ್ರತಿನಿಧಿಗಳು ಬಲು ಅಪಾಯಕಾರಿ. ಯಾಕೆಂದರೆ, ಅಕ್ಷರಸ್ಥ ರಾಜಕಾರಣಿಗೆ ಕಾನೂನಿನ ಹಾಗೂ ಸರಕಾರದ ಕೆಲವು ನಿಯಮಾವಳಿಗಳು ಅರಿವಿರುತ್ತದೆ. ಅದರಿಂದಾಗಿ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿದಾರನಾದರೂ ಸುಲಭವಾಗಿ ಮೈಕೊಡವಿ ಎದ್ದು ಬರುತ್ತಾನೆ. ಸಾಲದೆಂಬಂತೆ ಉನ್ನತ ಅಧಿಕಾರಿಗಳ ಜತೆಗೆ ‘ಸಹಭಾಗಿತ್ವ’ದ ಹೆಜ್ಜೆ ಇಟ್ಟಿರುತ್ತಾನೆ. ಅಂದರೆ ನಮ್ಮ ಬಹುತೇಕ ಐಎಎಸ್, ಕೆಎಎಸ್ ಅಧಿಕಾರಿಗಳ ಜತೆಗೆ ಸಣ್ಣ-ಪುಟ್ಟ ಅಧಿಕಾರಿಗಳು ಸಹ ಭ್ರಷ್ಟ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಜನಪ್ರತಿಗಳು ದಾರಿ ತಪ್ಪಿದಾಗ, ಅವೈಜ್ಞಾನಿಕ ಯೋಜನೆಗೆ ಮುಂದಾಗ ಉನ್ನತ ಅಧಿಕಾರಿಗಳು ಅದರಿಂದಾಗುವ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಕಾರಣ ನೀಡಬೇಕು. ಮುಂದೆ ತಲೆದೋರುವ ಸಮಸ್ಯೆಗಳನ್ನು ಅವರಿಗೆ ಸೂಕ್ಷ್ಮವಾಗಿ ಮನವರಿಕೆ ಮಾಡಿಕೊಡಬೇಕು. ಅದು ಬಿಟ್ಟು ಅವರ ಎದುರು ಕೈ ಕಟ್ಟಿ, ಹೇಳಿದ್ದಕ್ಕೆಲ್ಲ ಗೋಣು ಅಲ್ಲಾಡಿಸಿದರೆ, ಹುಬ್ಬಳ್ಳಿ ಧಾರವಾಡ ಅವಳಿನಗರದ ಮಧ್ಯೆ ನಡೆಯುತ್ತಿರುವ ಬಿಆರ್‌ಟಿಎಸ್ ಕಾಮಗಾರಿಯ ಕಥೆಯಂತೆಯೇ ಆಗುತ್ತದೆ.
ಏನೇ ಇರಲಿ. ಕೋಟಿ ವೃಕ್ಷಾ೦ದೋಲನಕ್ಕೆ ಸರಕಾರ ಮುಂದಾಗಿದೆ. ಪ್ರತಿಯೊಂದು ಮನೆ-ಮನೆಗಳಲ್ಲಿ ಒಂದೊಂದು ಗಿಡ ಚಿಗುರೊಡೆಯಲಿ. ರಸ್ತೆ, ಶಾಲೆ, ಊರು, ಕೇರಿ ಎನ್ನದೆ ಖಾಲಿಯಿದ್ದ ಜಾಗದಲ್ಲೆಲ್ಲ ಗಿಡಗಳು ತಲೆ ಎತ್ತಲಿ. ಗಿಡ ನೆಟ್ಟು ನೀರುಣಿಸಿದರಾಗಲಿಲ್ಲ; ಅದನ್ನು ಜತನದಿಂದ ಕನಿಷ್ಠ ಮೂರು ವರ್ಷಗಳ ಕಾಲವಾದರೂ ಆರೈಕೆ ಮಾಡುವಂತಾಗಲಿ. ವನಮಹೋತ್ಸವ ಎನ್ನುತ್ತ ಫೋಟೋಗೆ ಪೋಸ್ ಕೊಡುವ ಬದಲು, ಪ್ರಾಮಾಣಿಕವಾಗಿ ‘ನನ್ನ ಪರಿಸರದ ಉಳಿವಿಗೆ ನಾನೊಂದು ಗಿಡ ನೆಡುತ್ತೇನೆ’ ಎನ್ನುವ ಮನೋಭಾವ ಒಡಮೂಡಲಿ.