ಆ ದಿನ ಇನ್ನೂ ನೆನಪಿದೆ!
ಮೊದಲ ಬಾರಿಗೆ ನೀ ಅಧರ ಚುಂಬಿಸಿದ ಘಳಿಗೆ, ಮೊದಲ ಬಾರಿಗೆ ನೀ ತಬ್ಬಿದ ಘಳಿಗೆ, ಮೊದಲ ಬಾರಿಗೆ ನಿನ್ನ ಮೈ ಘಮಲು ಆಸ್ವಾದಿಸಿದ ಘಳಿಗೆ, ಮೊದಲ ಬಾರಿಗೆ ನಾವಿಬ್ಬರೂ ಒಂದಾದ ಘಳಿಗೆ...!!
ಇವ್ನು ಎಷ್ಟೊಂದು ಪೋಲಿ ಇದ್ದಾನಪ್ಪ ಎನಿಸಬಹುದು, ಆದರೂ ಇದೊಂದು ನವಿರಾದ ಭಾವವೆ ಅಲ್ವಾ?
ನೆನಪಿದೆಯಾ ಗೆಳತಿ,
ಅಂದು ನೀ, ಭಯದ ಕಂಗಳಿಂದ ನಮ್ಮನೆಯ ಹೊಸಿಲು ದಾಟಿದ್ದು? ಅರಿವಿಲ್ಲದೆ ನಿನ್ನ ಕೈಗಳು ನಡುಗಿದ್ದು? ದಾಹ ನೀಗಿಸಲು ಕೊಟ್ಟ ಬಿಂದಿಗೆ ಕೈ ತಪ್ಪಿ ಬಿದ್ದಿದ್ದು? ಮೊದಲ ಭೇಟಿಯ ಅಮೃತ ಘಳಿಗೆ ಮರೆಯಲು ಹೇಗೆ ಸಾಧ್ಯ ಹೇಳು.
ಅದಿರಲಿ, ಅಂದು ನೀ ನಾಚುತ್ತ ನನ್ನ ಬಳಿ ಬಂದಾಗ, ಬಲವಂತವಾಗಿ ನೀ ಮುಖ ಕೆಳಗೆ ಹಾಕಿದ್ದೀಯ. ನಾಚಿ ನೀರಾದ ಆ ಕೆಂಪನೆಯ ಮೊಗವನ್ನು ನಾನು ಸಹ ಅಷ್ಟೇ ಬಲವಂತಾಗಿ ಹಿಡಿದೆತ್ತಿದ್ದೆ. ಒಮ್ಮಿಂದೊಮ್ಮೆಲೆ ಹುಣ್ಣಿಮೆ ಕಡಲಿನಿಂತೆ ನೀ ರಭಸವಾಗಿ ಬಗಿದಪ್ಪಿದೆ. ಅಬ್ಬಾ...! ನನ್ನ ಮನದಲ್ಲಿ ಏನೇನಾಗುತ್ತಿದೆ ಎಂದು ಅರಿಯಲು ಐದ್ಹತ್ತು ನಿಮಿಷಗಳೇ ಬೇಕಾಯ್ತು ನೋಡು!!
ಎದೆ ಮೇಲೆ ರಾಶಿಯಾಗಿ ಹರಡಿ ಬಿದ್ದಿದ್ದ ಒಂದೊಂದೇ ಕೂದಲನ್ನು ನೀ ಲೆಕ್ಕ ಮಾಡುವಾಗ, ನಾ ನಿನ್ನ ಮುಂಗುರುಳ ಜೊತೆ ಪಿಸು ಮಾತಿನ ಸಂಭಾಷಣೆ ಶುರುವಿಟ್ಟುಕೊಂಡಿದ್ದೆ. ನೀಳ ಜಡೆಯಲ್ಲಿ ಹುದುಗಿರುವ ಕೋಮಲತೆಯನ್ನು ನನ್ನ ಕೈ ಬೆರಳುಗಳು ಸ್ಪರ್ಶಿಸಿ ಆಹ್ಲಾದಿಸುತ್ತಿದ್ದವು. ಆಗ, ನೀ ಮತ್ತೆ ಅಧರದ ಜೊತೆ ಜೂಟಾಟಕ್ಕೆ ಅಣಿಯಾದೆ. ನಿನ್ನ ಮೈ ಘಮಲು ಮೊದಲ ಮಳೆಯ ಸುವಾಸನೆಯಂತೆ ಹುಚ್ಚೆಬ್ಬಿಸುತ್ತಿತ್ತು. ಮೃದುವಾದ ಸುಕೋಮಲ ಸ್ಪರ್ಶ ಇಹವನ್ನೇ ಮರೆ ಮಾಚಿಸಿತ್ತು.
ಅದು... ಬಿಸಿಯುಸಿರ ಅಪ್ಪುುಗೆಯಲ್ಲಿ ಮೈ-ಮನವೆಲ್ಲ ಬೆವರುವ ಘಳಿಗೆ!
ಅಲ್ಲಿವರೆಗೆ ನಿನ್ನ ಗುದ್ದಾಟವನ್ನಷ್ಟೇ ನೋಡಿದ್ದ ನಾನು, ಆ ಕ್ಷಣ ಮುದ್ದಾಟವನ್ನು ಸಹ ಅನುಭವಿಸಿದ್ದೆ.....
ಉಳಿದದ್ದೆಲ್ಲ ಸಮಯ ಸಿಕ್ಕಾಗ....
(ಪೊಲೀಯಲ್ಲದ ಭಾವ)