ಮಂಗಳವಾರ, ಡಿಸೆಂಬರ್ 30, 2014

ನಾನು ನಿರ್ಗತಿಕನಾದರೆ.....!?

ನಾಗರಾಜ್ ಬಿ.ಎನ್.
ಈ ಬದುಕೇ ಒಂದು ವಿಚಿತ್ರ... ಹುಟ್ಟು ಸಾವಿನ ನಡುವಲ್ಲಿ ಅನಿರೀಕ್ಷಿತ ಘಟನೆಗಳೇ ಹೆಚ್ಚು. ಬಾಯಗಲಿಸಿ ನಗಬೇಕೆನ್ನುವಷ್ಟರಲ್ಲಿ ಕಣ್ಣಂಚಿನಿಂದ ನೀರು ಜಿನುಗುತ್ತದೆ. ದುಃಖದ ಬೇಗುದಿಯಲ್ಲಿ ನರಳಾಡುತ್ತಿರುವಾಗ ಎಲ್ಲಿಂದಲೋ ಬೀಸಿ ಬಂದ ತಂಗಾಳಿ ಮೈ-ಮನವನ್ನು ತಂಪಾಗಿಸುತ್ತವೆ...
ಬಹುತೇಕರ ಬದುಕು ಕೂಡಾ ಹೀಗೇನೆ. ಸಾಕಷ್ಟು ಅನಿರೀಕ್ಷಿತ ಘಟನೆಗಳಿಗ ಒಳಗಾಗುತ್ತಲೇ ಇರುತ್ತದೆ. ಎಲ್ಲ ಇದ್ದು ಏನೂ ಇಲ್ಲದ ಹಾಗೆ ಬದುಕುವ ಪರಿಸ್ಥಿತಿ.ಹುಟ್ಟು ಶ್ರೀಮಂತನಾದರೂ ಹೊಟ್ಟೆಗೆ ಹಿಟ್ಟಿಲ್ಲದೆ ಬೀದಿ ಬೀದಿ ಅಲೆಯಾಬೇಕಾಗುತ್ತದೆ. ಹೊಲಸು ವಾಸನೆ ಸೂಸುವ ಹರಕು ಬಟ್ಟೆ ಧರಿಸಿ, ಅರೆಬರೆಯಾಗಿ ಮಾನ ಮುಚ್ಚಿಕೊಂಡು ಬದುಕಬೇಕಾಗುತ್ತದೆ.
ತಿಂಗಾಳುನುಗಟ್ಟಲೇ ನೀರು ನೋಡದ ದೇಹ.... ಕೆದರಿದ ತಲೆಗೂದಲು.... ಕೈಯ್ಯಲ್ಲೊಂದು ನಗ್ಗಿದ ಪಾತ್ರೆ..... ಬಿಟ್ಟು ಬಿಡದೆ ಒಂದೇ ಸಮನೆ ಬರುವ ಕೆಮ್ಮು.... ಬದುಕನ್ನು ಜರ್ಜರಿತಗೊಳಿಸಿದ ದೈಹಿಕ ಅನಾರೋಗ್ಯ.... ಸ್ಥೀಮಿತ ಕಳೆದುಕೊಂಡ ಮಸ್ಸಿನ ಸ್ಥತಿ... ಹೀಗೆ ಹತ್ತು ಹಲವು ಬಗೆಯ ಅನುಭವಗಳು ಬದುಕಲ್ಲಿ ಧುತ್ತೆಂದು ಎದುರಾಗುತ್ತದೆ.
ಒಪ್ಪತ್ತಿನ ತುತ್ತಿಗಾಗಿ ಮನೆಯ ಮುಂದೆ ಕಣ್ಣಗಲಿಸಿ ಪಾತ್ರೆ ಹಿಡಿದು, ನಿರೀಕ್ಷೆಯ ನೊಗ ಹೊರುತ್ತ ಮನೆಯ ಬಾಗಿಲನ್ನೇ ನೋಡುತ್ತಿರಬೇಕು. ತಿಂದುಂಡು ಹೆಚ್ಚಾದ ಆಹಾರ ಪದಾರ್ಥಗಳನ್ನು ಎಲ್ಲಿ ಎಸಿಯುತ್ತಾರೆ ಎಂದು ಗಂಟೆ ಗಟ್ಟಲೇ ಕಾಯುತ್ತಿರಬೇಕು. ಬೀಸಾಕಿದ ಪದಾರ್ಥ ಹೆಕ್ಕಲು ಹೋದಾಗ ನಾಯಿ, ಹಂದಿಗಳ ಜತೆ ಸೆಣಸಾಡಿ ಜಯಿಸಬೇಕು. ಒಮ್ಮೊಮ್ಮೆ ಹಳಸಿದ ಪದಾರ್ಥಗಳೇ ಪರಮಾನ್ನ...!! ಕೆಲವು ವೇಳೆ ಉಪವಾಸವೇ ಹಣೆ ಬರಹ...!! ಎಲ್ಲಿಯಾದರೂ ಗುಟುಕು ನೀರು ಕುಡಿದು, ಆಕಾಶದ ನಕ್ಷತ್ರ ಎಣಿಸುತ್ತ ಎಲ್ಲಿಯೋ ಒಂದು ಕಡೆ ಮೈ ಚಾಚಬೇಕು. ಇಂತಹ ದಿನ ನಮಗೂ ಎದರಾದರೆ.....!! ಆಶ್ಚರ್ಯವಿಲ್ಲ. ಯಾಕೆಂದರೆ ಯಾರ ಬದುಕು ಹೇಗೆ... ಏನು... ಎಂದು... ಯಾರು ಬಲ್ಲರು? ಅಲ್ಲವೇ....?

ನಕ್ಷತ್ರ ವನಕ್ಕೆ ಬನ್ನಿ.... ಬದಲಾವಣೆ ಕಾಣಿರಿ....!!

ನಿಮ್ಮ ಮನದಿಷ್ಟಾರ್ಥಗಳನ್ನು ಪೂರೈಸಿಕೊಳ್ಳಬೇಕೇ...? ನಿಮ್ಮ ಅದೃಷ್ಟ ಬದಲಾಯಿಸಿಕೊಳ್ಳಬೇಕೆ...? ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಬೇಕೆ...? ಆರೋಗ್ಯ ಸಂಪತ್ತನ್ನು ಗಳಿಸಬೇಕೆ...? ಹಾಗಾದರೆ ತಡವೇಕೆ..... ಹುಬ್ಬಳ್ಳಿಯ ಕೇಶ್ವಾಪುರದ ಪಾರಸ್ವಾಡಿ-ವಿನಯಕಾಲೋನಿ ಬಳಿಯಿರುವ ನಕ್ಷತ್ರ ವನಕ್ಕೆ ಭೆಟ್ಟಿ ನೀಡಿ. ಅಲ್ಲಿರುವ ಪವಿತ್ರ ವೃಕ್ಷಗಳಿಗೆ ನೀರುಣಿಸಿ. ನಿಮ್ಮಲ್ಲಾದ ಬದಲಾವಣೆ ತಿಂಗಳೊಳಗೆ ಕಾಣಿರಿ...!!
ನಾಗರಾಜ್ ಬಿ.ಎನ್.
ಇದು ಉತ್ಪ್ರೇಕ್ಷೆಯಲ್ಲ. ಜನಸಾಮಾನ್ಯರ ಹಾದಿ ತಪ್ಪಿಸುವ ಕಾರ್ಯವೂ ಅಲ್ಲ. ನಂಬಿಕೆ ಮತ್ತು ವೈಜ್ಞಾನಿಕತೆಯ ನೆಲಗಟ್ಟಿನಡಿ ಹಲವರು ಕಂಡುಕೊಂಡ ಸತ್ಯ. 
ಪ್ರತಿನಿತ್ಯ ಶ್ರದ್ಧಾ-ಭಕ್ತಿಯಿಂದ  ಕೆಲವರು ಅಲ್ಲಿರುವ ವೃಕ್ಷಗಳಿಗೆ ಪ್ರದಕ್ಷಿಣೆ ಹಾಕಿ, ಹನಿ-ಹನಿ ನೀರುಣಿಸಿ ಕಮರಿಹೋದ ಬದುಕನ್ನು ಮತ್ತೆ ಚಿಗುರೊಡಿಸಿಕೊಂಡಿದ್ದಾರೆ. ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಮೊಗದಲ್ಲಿ ನಗು ಅರಳಿಸಿಕೊಂಡಿದ್ದಾರೆ. ನೆನಗುದಿಗೆ ಬಿದ್ದ ಎಷ್ಟೋ ಜನರ ಕೆಲಸ-ಕಾರ್ಯಗಳು, ವಾರದೊಳಗೆ ಮತ್ತೆ ಕೈಹಿಡಿದಿದೆ. ಇಳಿ ವಯಸ್ಸಿನ ಜೀವಗಳು ಸಹ ಉತ್ತಮ ಆರೋಗ್ಯವನ್ನು ಪಡೆದು, ಪಾದರಸದಂತೆ ಪುಟಿದೇಳುತ್ತಿದ್ದಾರೆ. ಗುಟ್ಕಾ, ಪಾನ್, ಸಾರಾಯಿಗಳಂತ ದುಶ್ಚಟಗಳಿಂದ ದೂರಾದ ಯುವ ಸಮುದಾಯವೇ ಇದೆ. ಚಿಕ್ಕ ಮಕ್ಕಳಲ್ಲಂತೂ ಪರಿಸರ ಜಾಗೃತಿ ಹುಟ್ಟಿಸುತ್ತ, ಅವರಲ್ಲಿ ಗಿಡ-ಮರ ಬೆಳೆಸಿ ಪೋಷಿಸುವ ಶಿಕ್ಷಣ ನೀಡುತ್ತಿದೆ. ಒಟ್ಟಾರೆ ನಗರದಲ್ಲಿರುವ ಈ ಅಪರೂಪದ 'ನಕ್ಷತ್ರ ವನ' ಪವಿತ್ರ ಸ್ಥಳವಾಗಿ ರೂಪುಗೊಳ್ಳುತ್ತ, ಜಾಗೃತ ಸ್ಥಳವಾಗಿ ಮಾರ್ಪಡುತ್ತಿದೆ. ವಿಶೇಷವೆಂದರೆ, ಈ ವನಕ್ಕೆ ಆಗಮಿಸುವವರಿಗೆ ಯಾವ ಪ್ರವೇಶ ಧನವೂ ಇಲ್ಲ. ಆದರೆ, ಸ್ವ ಇಚ್ಛೆಯಿಂದ ಅಲ್ಲಿಯ ಕಸ, ಕಲ್ಲುಗಳನ್ನು ಎತ್ತಿ, ಹುಲ್ಲುಗಳನ್ನು ಕಿತ್ತೆಸೆದು ಕರ ಸೇವೆ ಮಾಡಬಹುದಾಗಿದೆ.

ಜನ್ಮರಾಶಿಗೆ ತಕ್ಕಂತೆ ವೃಕ್ಷ.....!
ಈ ನಕ್ಷತ್ರ ವನದಲ್ಲಿ ಒಟ್ಟು ಇಪ್ಪತ್ತೇಳು ಪವಿತ್ರ ವೃಕ್ಷಗಳಿವೆ. ಜ್ಯೋತಿಶಾಸ್ತ್ರದಲ್ಲಿರುವ ಇಪ್ಪತ್ತೇಳು ನಕ್ಷತ್ರಗಳಿಗೆ ಹೊಂದಿಕೆಯಾಗುವ, ಇಪ್ಪತ್ತೇಳು ಬಗೆಯ ವೃಕ್ಷಗಳನ್ನು ಇಲ್ಲಿ ನೆಡಲಾಗಿದೆ. ಮೃಗಶಿರ ನಕ್ಷತ್ರಕ್ಕೆ ಕಗ್ಗಲಿ ವೃಕ್ಷ, ಶತತಾರ ನಕ್ಷತ್ರಕ್ಕೆ ಕದಂಬ ವೃಕ್ಷ, ಮಘ ನಕ್ಷತ್ರಕ್ಕೆ ಆಲ ವೃಕ್ಷ, ಪುಷ್ಯ ನಕ್ಷತ್ರಕ್ಕೆ ಅರಳಿ ವೃಕ್ಷ, ಧನಿಷ್ಟಾ ನಕ್ಷತ್ರಕ್ಕೆ ಬನ್ನಿ ವೃಕ್ಷ, ಶ್ರವಣ ನಕ್ಷತ್ರಕ್ಕೆ ಎಕ್ಕಿ ವೃಕ್ಷ, ಪುನರ್ವಸು ನಕ್ಷತ್ರಕ್ಕೆ ಬಿದಿರು ವೃಕ್ಷ(ಬೊಂಬು), ಭರಣಿ ನಕ್ಷತ್ರಕ್ಕೆ ನೆಲ್ಲಿ ವೃಕ್ಷ, ಆರಿದ್ರ ನಕ್ಷತ್ರಕ್ಕೆ ಶಿರಣಿ ವೃಕ್ಷ ಹೀಗೆ ಇಪ್ಪತ್ತೇಳು ನಕ್ಷತ್ರಕ್ಕೆ ಹೊಂದಿಕೆಯಾಗುವ, ಇಪ್ಪತ್ತೇಳು ವೃಕ್ಷಗಳಿವೆ. ಈ ಒಂದೊಂದು ವೃಕ್ಷಗಳು ಒಂದೊಂದು ನಕ್ಷತ್ರಗಳ ಜನ್ಮರಾಶಿಯ ಮೇಲೆ ಜನಿಸಿದ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತವೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.
ಅವಳಿನಗರದ ಕೆಲವು ಭಾಗದ ಸಾರ್ವಜನಿಕರು ಹಾಗೂ ಆ ವನದ ಸುತ್ತಲಿನ ನಿವಾಸಿಗಳು ಪ್ರತಿನಿತ್ಯ ಕುಟುಂಬ ಸಮೇತರಾಗಿ 'ಪವಿತ್ರ ವನ'ಕ್ಕೆ ಆಗಮಿಸಿ, ವೃಕ್ಷಗಳಿಗೆ ನೀರೆರೆಯುತ್ತಾರೆ. ಶ್ರದ್ಧಾ-ಭಕ್ತಿಯಿಂದ ಇಪ್ಪತ್ತೇಳು ವೃಕ್ಷಗಳಿಗೂ ಪ್ರದಕ್ಷಿಣೆ ಹಾಕಿ, ಮನದಿಷ್ಟಾರ್ಥಗಳ ಈಡೇರಿಕೆಗಾಗಿ ಪ್ರಾರ್ಥಿಸುತ್ತಾರೆ. ಗಿಡಕ್ಕೆ ನೀರೆರೆಯುತ್ತಲೇ ಕೆಲವರು ವಾಯುವಿಹಾರ ಮಾಡಿ, ಪ್ರಸನ್ನತೆ ಪಡೆಯುತ್ತ ನಿರಾಳರಾಗುತ್ತಾರೆ. ಶಾಲಾ ವಿದ್ಯಾರ್ಥಿಗಳು ಹಾಗೂ ಚಿಕ್ಕ ಮಕ್ಕಳಂತೂ ನಿಷ್ಕಳಂಕ ಮನಸ್ಸಿನಿಂದ, ಗಿಡಗಳಿಗೆ ನೀರುಣಿಸಿ ಸಂತೋಷಿಸುತ್ತಾರೆ. ಇದು ಅವರಲ್ಲಿ ಪರಿಸರ ಪ್ರಜ್ಞೆ ಬೆಳೆಯಲು ಸಹಾಯಕವಾಗುವುದರ ಜೊತೆಗೆ, ಗಿಡ-ಮರಗಳ ರಕ್ಷಣೆಗೆ ಬಾಲ್ಯದಲ್ಲಿಯೇ ಪಾಠ ನೀಡಿದಂತಾಗುತ್ತದೆ. ಅಲ್ಲದೆ, ಇಲ್ಲಿರುವ ವಿವಿಧ ವೃಕ್ಷಗಳು ಸುತ್ತ-ಮುತ್ತಲಿನ ಇಂಗಾಲದ ಡೈಆಕ್ಸೈಡ್ ನ್ನು ಸೇವಿಸಿ, ಮಾನವನಿಗೆ ಅವಶ್ಯಕವಿರುವ ಆಮ್ಲಜನಕನವನ್ನು ಹೇರಳ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತವೆ. ಇದು ಸಹಜವಾಗಿಯೇ ವ್ಯಕ್ತಿಯ ಆರೋಗ್ಯದ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರಲು ಸಹಕಾರಿಯಾಗಿದೆ. ಈ ನೀರೆರೆಯುವ ಪ್ರಕ್ರಿಯೆಯಿಂದ ಪ್ರತಿನಿತ್ಯ ಒಂದೊಂದು ವೃಕ್ಷಕ್ಕೆ ಕನಿಷ್ಠ ಏಳೆಂಟು ಕೊಡ ನೀರು ಹಾಕಿದಂತಾಗುತ್ತದೆ.
`ಜನರಲ್ಲಿಯ ನಂಬಿಕೆ ಮತ್ತು ವೈಜ್ಞಾನಿಕ ಸತ್ಯ ಒಂದಕ್ಕೊಂದು ಮೇಳೈಸಿಕೊಂಡು ಎಷ್ಟೋ ಜನರ ಬದುಕನ್ನು ಈ ಪವಿತ್ರ ನಕ್ಷತ್ರ ವನ ಹಸನಾಗಿಸಿದೆ. ಸ್ನೇಹಿತರ ಸಲಹೆ ಮೇರೆಗೆ ಕಳೆದ ಒಂದು ವಾರದಿಂದ ಪ್ರತಿನಿತ್ಯ ಸಾಯಂಕಾಲ ನಕ್ಷತ್ರ ವನಕ್ಕೆ ಬಂದು, ಅಲ್ಲಿರುವ ಗಿಡಗಳಿಗೆ ಭಕ್ತಿಯಿಂದ ನೀರುಣಿಸುತ್ತಿದ್ದೇನೆ. ಎರಡು ವರ್ಷದಿಂದ ಆಗದ ಕೆಲಸವೊಂದು ಇಲ್ಲಿಗೆ ಬಂದ ಮೇಲೆ ಯಾವೊಂದು ಸಮಸ್ಯೆಯಿಲ್ಲದೆ ಬಗೆಹರಿದಿದೆ. ಇಲ್ಲಿರುವ ವೃಕ್ಷಗಳು ಪುರಾಣೇತಿಹಾಸ ಹೊಂದಿದ್ದು, ಭಕ್ತಿಯಿಂದ ನೀರೆರೆದು ಪ್ರಾಥರ್ಿಸಿಕೊಂಡರೆ ಎಲ್ಲ ಕಷ್ಟಗಳು ಬಗೆಹರಿಯುತ್ತವೆ' ಎಂದು ಗಿಡಗಳಿಗೆ ನೀರುಣಿಸಿ ಸಮಸ್ಯೆಯಿಂದ ಎದ್ದು ಬಂದ ಶಾಂತಿಕಾಲೋನಿ ನಿವಾಸಿ ನಾಗರಾಜ ಗಾಂವಕಾರ ಅವರ ಅನುಭವದ ನುಡಿಗಳಿವು.

ಪವಿತ್ರ ವನದ ರೂವಾರಿ...
ಕೇಶ್ವಾಪುರದ ಪಾರಸ್ವಾಡಿ-ವಿನಯಕಾಲೋನಿಯ ಆರ್.ಆರ್. ಬಿಜಾಪುರ ಅವರ ದೃಢ ಸಂಕಲ್ಪಿತ ಕೂಸೆ ಈ ಪವಿತ್ರ ನಕ್ಷತ್ರ ವನ. ಸರಿ ಸುಮಾರು ಮೂವತ್ತೈದು ವರ್ಷಗಳ ಹಿಂದೆ ಇವರು ನಕ್ಷತ್ರಗಳಿಗೆ ಒಂದೊಂದು ವೃಕ್ಷವಿರುತ್ತದೆ ಎಂಬ ವಿಷಯದ ಪುಸ್ತಕವೊಂದನ್ನು ಓದಿದ್ದರಂತೆ. ಅಂದಿನಿಂದ ಅವರು, ಆ ಇಪ್ಪತ್ತೇಳು ವೃಕ್ಷಗಳನ್ನು ಒಂದೆಡೆ ನೆಟ್ಟು, 'ನಕ್ಷತ್ರ ವನ' ನಿಮರ್ಿಸಬೇಕು ಎಂದು ಮನಸ್ಸಿನಲ್ಲಿಯೇ ಯೋಜನೆಯೊಂದನ್ನು ಸಿದ್ಧಪಡಿಸಿದ್ದರು. ಮನೆಯ ಮುಂದೆಯೇ ಇದ್ದ ಪಾಲಿಕೆಯ ಜಾಗವನ್ನು `ನಕ್ಷತ್ರ ವನ' ನಿಮರ್ಾಣಕ್ಕೆ ಯಾಕಾಗಿ ಬಳಸಿಕೊಳ್ಳಬಾರದೆಂದು ಚಿಂತಿಸಿ, ಸುತ್ತ-ಮುತ್ತಲಿನ ಕಾಲೋನಿ ನಿವಾಸಿಗಳಲ್ಲಿ ಚಚರ್ಿಸಿದರು. ಪುರಂದರ ಹೆಗಡೆ, ಬಿ.ಎಸ್. ವಿರಕ್ತಿಮಠ, ವಿ.ಕೆ. ಕಲಬುಗರ್ಿ, ಪ್ರಕಾಶ ಕುಲಕಣರ್ಿ, ಆರ್.ಎ. ಪೈ, ಮೈಕಲ್ ಸೇರಿದಂತೆ ಅನೇಕರು ಅವರ ಬೆಂಬಲಕ್ಕೆ ನಿಂತರು. ಪಾಲಿಕೆಗೆ ಮನವಿ ಪತ್ರ ಸಲ್ಲಿಸಿ, ನಕ್ಷತ್ರ ವನ ನಿಮರ್ಾಣಕ್ಕೆ ಒಪ್ಪಿಗೆ ಪಡೆದರು. ಆ ಸಂದರ್ಭದಲ್ಲಿ ಆ ಖುಲ್ಲಾ ಜಾಗ ಗಿಡಗಂಟಿಗಳಿಂದ ತುಂಬಿದ್ದು, ಏನೂ ಬೆಳೆಯದ ಬರಡು ನೆಲದಂತಿತ್ತು. ಕಾಲೋನಿ ನಿವಾಸಿಗಳ ಸಹಾಯದಿಂದ ಆ ಜಾಗವನ್ನು ತಕ್ಕಮಟ್ಟಿಗೆ ಶುಚಿಗೊಳಿಸಿದರು. ಬೆಂಗಳೂರು, ಹಾಸನ, ಕಾರವಾರ, ತುಮಕೂರು, ಶೃಂಗೇರಿ ಹಾಗೂ ಇನ್ನಿತರ ನರ್ಸರಿಗಳಿಂದ ಇಪ್ಪತ್ತೇಳು ಬಗೆಯ ವೃಕ್ಷಗಳನ್ನು ತಂದು ನೆಟ್ಟು, ಜೋಪಾನವಾಗಿ ಬೆಳೆಸಿದರು. ಪರಿಣಾಮವಾಗಿ ಇಂದು ಅದು ಪವಿತ್ರ ಸ್ಥಳವಾಗಿ ಮಾರ್ಪಟ್ಟಿದೆ.
ಧರ್ಮಗಳ ಎಲ್ಲೆ ಮೀರಿದ್ದು....!
ಸುಮಾರು 16 ಗುಂಟೆಯಷ್ಟಿರುವ ಪಾಲಿಕೆಯ ಈ ಜಾಗಕ್ಕೆ ವರ್ಷದ ಹಿಂದಷ್ಟೇ ತಡೆಗೋಡೆಯನ್ನು ನಿಮರ್ಿಸಲಾಗಿದೆ. ಈ ವನದಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು ಎಂದು ಕಾಲೋನಿ ನಿವಾಸಿಗಳು ಪಾಲಿಕೆಗೆ ಸಾಕಷ್ಟು ಬಾರಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಅದು ನಿರ್ಮಾಣವಾಗುವ ನಿರೀಕ್ಷೆಯಿದ್ದು, ಅವಳಿನಗರದ ಏಕೈಕ ಅಪರೂಪದ ನಕ್ಷತ್ರ ವನ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಜಾತಿ, ಮತ, ಧರ್ಮದ ಬೇಧ ಮರೆತು ಎಲ್ಲರೂ ಈ ವನಕ್ಕೆ ಬಂದು ಗಿಡಗಳಿಗೆ ನೀರುಣಿಸುತ್ತಾರೆ. ಗಿಡಗಳಿಗೆ ಗಂಧ ಹಚ್ಚುವುದು, ಹೂವು ಮುಡಿಸುವುದು ಹಾಗೂ ಪೂಜೆ ಕಾರ್ಯಗಳಿಗೆ ಇಲ್ಲಿ ಅವಕಾಶವಿಲ್ಲ. ಇಲ್ಲಿಗೆ ಬರುವವರು ಮನೆಯಿಂದ ಒಂದು ಬಾಟಲಿ ನೀರನ್ನಷ್ಟೇ ತಂದರೆ ಸಾಕು. ಈ ವನ ಪ್ರವೇಶಿಸುತ್ತಿದ್ದಂತೆ ಅರಿವಿಲ್ಲದೆ ಮನಸ್ಸಿನಲ್ಲಿ ಪ್ರಶಾಂತ ಭಾವ ಮೂಡುತ್ತದೆ. ಶುದ್ಧ ಗಾಳಿಯನ್ನು ಸೇವಿಸುತ್ತ ಗಿಡಗಳಿಗೆ ನೀರುಣಿಸುವ ಪರಿ ಮನಸ್ಸಿಗೆ ಅಮಿತಾನಂದ ಉಂಟುಮಾಡುತ್ತದೆ.
-ಆರ್.ಆರ್. ಬಿಜಾಪುರ(ನಕ್ಷತ್ರ ವನದ ರೂವಾರಿ)

ಸೋಮವಾರ, ಡಿಸೆಂಬರ್ 29, 2014

'ಛೇ.., ಗಂಟೆ ಐದಾಗ್ತಾ ಬಂತು, ಮನೆಗ್ಹೋಗ್ಬೇಕು'

ಇದು ಧಾರಾವಾಹಿ ಮಾಡಿದ ಮೋಡಿ...!!

ಹೆಣ್ಣುಮಕ್ಕಳ  ಮೃದು ಮನಸ್ಸನ್ನೆ ಲಾಭಕ್ಕಾಗಿ ಉಪಯೋಗಿಸಿ,ಕಟ್ಟು ಕತೆಗಳ ಮೂಲಕ ಅವರ ಕಣ್ಣಲ್ಲಿ ನೀರು ತರಿಸಿ ಧಾರಾವಾಹಿ ನಿಮಾತೃರು ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳುವುದು ಎಷ್ಟು ಸರಿ....? ಒಟ್ಟಾರೆ ಎಲ್ಲ ಟಿವಿ ಧಾರಾವಾಹಿಗಳನ್ನು ಸಾರಾಸಗಟಾಗಿ ತೆಗಳಲು ಆಗುವುದಿಲ್ಲ. ಆದರೆ, ಬಹುಪಾಲು ಸಿರಿಯಲ್ಗಳು ಆರೋಗ್ಯಪೂರ್ಣ ಕೌಟುಂಬಿಕ ವ್ಯವಸ್ಥೆಗೆ ಕೊಂಚ ಧಕ್ಕೆ ತರುತ್ತವೆ ಎಂಬ ಮಾತನ್ನು ಸಹ ಅಲ್ಲಗಳೆಯಲಾಗುವುದಿಲ್ಲ. ಇಲ್ಲೊಂದಿಷ್ಟು ಚಿಂತನೆ...
ನಾಗರಾಜ್ ಬಿ.ಎನ್
ಮಾರುಕಟ್ಟೆಗೋ.. ನೆಂಟರ ಮನೆಗೋ... ಅಥವಾ ಇನ್ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋದ ಕೆಲವು ಮಹಿಳೆಯರಿಗೆ ಸಂಜೆ ಐದಾದರೆ ಸಾಕು, ಏನೋ ಗಡಿಬಿಡಿ, ಧಾವಂತ, ತವಕ, ಕುತೂಹಲ....!! 'ಛೇ.. ಮೊದಲೇ ಬರಬಾರದಿತ್ತಾ ಮಾರುಕಟ್ಟೆಗೆ.. ಲೇಟಾಗಿ ಹೋಯ್ತು' ಎನ್ನುತ್ತ ಸರಸರನೇ ಎದ್ದನೋ ಬಿದ್ದನೋ ಎಂದು ಮನೆಯ ಹಾದಿ ಹಿಡಿಯುತ್ತಾರೆ.
ಏದುಸಿರುವ ಬಿಡುತ್ತ, ಕಾಲಿಗೆ ಹಾಕಿದ ಚಪ್ಪಲಿಯನ್ನು ತೆಗೆಯದೆ, ಟಿವಿ ಸ್ವಿಚ್ ಆನ್ ಮಾಡುತ್ತಾರೆ.
ಅದು ಧಾರಾವಾಹಿಯ ವ್ಯಾಮೋಹ, ಮೋಡಿ... ಅದರ ಕಬಂಧ ಬಾಹುವಿನ ತೆಕ್ಕೆಯಲ್ಲಿ ಸಿಲುಕಿ ನಲಗುವ ಸನ್ನಿವೇಶ...
ಸಂಜೆ 5ರಿಂದ ರಾತ್ರಿ 11ರ ವರೆಗೂ ನಿರಂತರವಾಗಿ ಒಂದಿಲ್ಲೊಂದು ಧಾರಾವಾಹಿ ಒಂದೊಂದು ವಾಹಿನಿಯಲ್ಲಿ ಪ್ರಸಾರವಾಗುತ್ತಲೇ ಇರುತ್ತವೆ. ಈ ಅವಧಿಯಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ಪ್ರಸಾರವಾಗುವ ಕನಿಷ್ಠ 10 ಧಾರಾವಾಹಿಗಳಲ್ಲಿ, ಎಲ್ಲವೂ ಸಮಾಜವನ್ನು ಹಾಳು ಹಾಳುಗೆಡುವಂತ ಧಾರಾವಾಹಿಗಳೇ..! ಕೌಟುಂಬಿಕ ಸಂಬಂಧಗಳ ನಡುವೆ ಬಿರುಕು ಹುಟ್ಟುವುದೇ ಆ ಧಾರಾವಾಹಿಗಳ ಕಥಾ ವಸ್ತುಗಳು. ಮೊದ ಮೊದಲು ಜೊತೆ ಜೊತೆಗೆ ಕೂಡಿ ಬಾಳುತ್ತಿದ್ದ ಸಂಸಾರ, ಕೊನೆ ಕೊನೆಗೆ ಒಡೆದು ಚೂರಾಗಿ ಮನೆಯೊಂದು ಮೂರು ಬಾಗಿಲಾಗುತ್ತದೆ.

ಇಳಿ ವಯಸ್ಸಲ್ಲಿ ನೆಮ್ಮದಿಯ ಬದುಕು ಕಾಣುವ ಹಂಬಲದಲ್ಲಿರುವ ಅಪ್ಪ-ಅಮ್ಮರು ತನ್ನದೇ ಮಕ್ಕಳ ಒಡೆದ ಸಂಸಾರ ನೋಡಿ ಕಣ್ಣೀರಾಗುತ್ತಾರೆ. ಅಣ್ಣ-ತಮ್ಮರ ಹೆಂಡತಿ ಆಸ್ತಿಗಾಗಿ ಕಚ್ಚಾಡುತ್ತಾರೆ. ಮನೆಗೆಲಸದಲ್ಲಿ ಒಬ್ಬರನ್ನೊಬ್ಬರು ಕಿತ್ತಾಡುತ್ತಾರೆ. ಪರಸ್ಪರ ಕಿವಿ ಊದುತ್ತ(ಚಾಡಿ ಮಾತು) ಸಂಸಾರದಲ್ಲಿ ಹುಳಿ ಹಿಂಡುತ್ತಾರೆ. ಎರಡು-ಮೂರು ಮದುವೆಯಾಗುತ್ತಾರೆ. ಗಂಡ-ಹೆಂಡತಿ ಕಚ್ಚಾಡುತ್ತಾರೆ. ಮಕ್ಕಳು ಅಪ್ಪ-ಅಮ್ಮರಿಗೆ ಹೊಡೆಯುತ್ತಾರೆ. ಅಲ್ಲದೆ, ಸ್ವಾರ್ಥಕ್ಕಾಗಿ ಅಪ್ಪ-ಅಮ್ಮರನ್ನು ವೃದ್ಧಾಶ್ರಮದಲ್ಲಿಡುತ್ತಾರೆ. ಹೀಗೆ ಈ ಧಾರಾವಾಹಿಯ ಪ್ರತಿಯೊಂದು ಸನ್ನಿವೇಶವು ಕೂಡಾ ಕೌಟುಂಬಿಕ ಸಂಬಂಧ ಹಾಳು ಮಾಡುವಂತಹುದ್ದೇ ಆಗಿದೆ.
ಪ್ರೀತಿ-ವಿಶ್ವಾಸದ ನೆಲಗಟ್ಟಿನಡಿ ಯಾವುದೋ ಕಾರಣದಿಂದ ಒಡೆದು ಹೋದ ಕುಟುಂಬವನ್ನು ಒಂದು ಮಾಡುವ ಸಂದೇಶ ಸಾರುವಂತ ಧಾರಾವಾಹಿಗಳು ಬೇಕೆನಿಸಿದರೂ ಭಿತ್ತರವಾಗುವುದಿಲ್ಲ. ಹಾಳು ಹರಟೆ, ಕಲಹ, ಸಂಬಂಧ ಹದಗೆಡೆಸುವ ಸಂಭಾಷಣೆಗಳ ತುಣುಕುಗಳ ಧಾರಾವಾಹಿಗಳೇ ಭರ್ಜರಿಯಾಗಿ ಭಿತ್ತರವಾಗುತ್ತವೆ. ಹೃದಯಕ್ಕೆ ನಾಟುವ ಮೃದು ಸಂಭಾಷಣೆಗೆ, ಹಿನ್ನೆಲೆ ಸಂಗೀತ ನೀಡಿ ಹೆಂಗಳೆಯರ ಮನಸ್ಸನ್ನು ನಾಟುವಂತೆ ಮಾಡುತ್ತಾರೆ. ಅದರಿಂದಾಗಿ ಅವರಲ್ಲಿರುವ ಮೃದು ಮನಸ್ಸು ಒಮ್ಮಿಂದೊಮ್ಮೆಲೆ ಜಾಗೃತವಾಗಿ, ಭಾವನೆಯ ಕೂಪದಲ್ಲಿ ಬಿದ್ದು ಬಿಡುತ್ತವೆ.
ಧಾರಾವಾಹಿಯಲ್ಲಿ ಪ್ರಸಾರವಾಗುವ ಒಂದೊಂದು ದೃಶ್ಯದ ಸನ್ನಿವೇಶಗಳು ಸಹ ಮಹಿಳೆಯರನ್ನು ಗಟ್ಟಿಯಾಗಿ ಬಿಗಿ ಹಿಡಿದಿಡುತ್ತದೆ. ಸಂದರ್ಭದಲ್ಲಿ ಆ ಧಾರಾವಾಹಿಯ ಕೆಲವು ಪಾತ್ರಗಳು ಅವರೇ ಆಗಿ ಪ್ರತಿಬಿಂಬವಾಗುತ್ತಾರೆ. ಪರಿಣಾಮ, ಅರಿವಿಲ್ಲದೆ ಅವರ ಮನಸ್ಸು ಆದೃಗೊಂಡಿರುತ್ತದೆ... ಕಣ್ಣಾಲಿಗಳಿಂದ ನೀರು ಜಿನುಗುತ್ತಿರುತ್ತದೆ... ಮುಂದೇನಾಗುತ್ತದೆ ಎನ್ನುವಷ್ಟರಲ್ಲಿ, ನಾಳೆಯ ಕುತೂಹಲ ಸನ್ನಿವೇಶದ ದೃಶ್ಯದೊಂದಿಗೆ `ಮುಂದುವರಿಯುವುದು.....' ಎಂಬ ಸ್ಲೋಗನ್ ಅಲ್ಲಿ ಪ್ರತ್ಯಕ್ಷವಾಗುತ್ತದೆ....!! ಮತ್ತೆ ನಾಳೆ ದಿನಕ್ಕೆ ಕಾತುರ..!
ಆ ಭಾವುಕ ಲೋಕದಲ್ಲಿಯೇ ತೇಲಾಡುತ್ತಿರುವ ಅವರಿಗೆ, ನಾಳೆ ಎಷ್ಟೊತ್ತಿಗೆ ಆಗುವುದು ಎನ್ನುವ ತವಕ. ನಾಳೆಯಾದರೆ, ಸಾಯಂಕಾಲಕ್ಕಾಗಿ ತಡಬಡಿಕೆ. ಮತ್ತೆ ಆ ಧಾರಾವಾಹಿ ಎಷ್ಟೊತ್ತಿಗೆ ಆರಂಭವಾಗುತ್ತದೆ ಎನ್ನುವ ನಿರೀಕ್ಷೆ. ಒಂದೊಂದು ಕ್ಷಣ, ನಿಮಿಷಗಳು ಆ ಸಂದರ್ಭದಲ್ಲಿ ಅವರಿಗೆ ಒಂದೊಂದು ಯುಗ ಕಳೆದಂತೆ. ಮನೆಗೆಲಸ, ಮಕ್ಕಳ ಪಾಠ, ತುರ್ತು ಕೆಲಸಗಳೆಲ್ಲವೂ ನೇಪಥ್ಯಕ್ಕೆ ಸರಿದಿರುತ್ತವೆ. ಅಷ್ಟು ಹೊತ್ತಿನಿಂದ ಕಾಯುತ್ತಿದ್ದ ಸಮಯ ಎದುರಾಗುತ್ತದೆ. ಧಾರಾವಾಹಿ `ಟೈಟಲ್ ಸಾಂಗ್'ನೊಂದಿಗೆ ಆರಂಭವಾಗುತ್ತಿದ್ದಂತೆ, ಸುತ್ತೆಲ್ಲ ನಿಶ್ಯಬ್ದ ಆವರಿಸುತ್ತದೆ. ಧಾರವಾಹಿ ನೋಡುವ ಕಣ್ಣುಗಳ ಜೊತೆಗೆ ಮನಸ್ಸುಗಳು ಸಹ ಕೇಂದ್ರಿಕೃತವಾಗಿ, ಟಿವಿಯಲ್ಲಿಯೇ ತಲ್ಲೀನವಾಗುತ್ತವೆ. ಆ ಸಂದರ್ಭದಲ್ಲೇನಾದರೂ ಅಪರೂಪದ ಸ್ನೇಹಿತರು, ನೆಂಟರು, ಬಂಧುಗಳು, ಆಪ್ತೇಷ್ಟರೇನಾದರೂ ಮನೆಗೆ ಬಂದರೆ... ಅವರು ಧಾರಾವಾಹಿ ಮುಗಿಯುವವರೆಗೂ ಮೂಕರಾಗಿಯೇ ಕುಳಿತುಕೊಳ್ಳಬೇಕು. ಯಾಕೆಂದರೆ ಧಾರಾವಾಹಿ ಮುಗಿಯಿತು ಎಂದರೆ... ಅದು ಮತ್ತೆ ಸಿಗದು, ನೆಂಟರು ಹೇಗಿದ್ದರೂ ಇಲ್ಲೆ ಇರುತ್ತಾರಲ್ಲ...!!
ಹೀಗೆ, ಸ್ನೇಹ-ಸಂಬಂಧದ ಸಾಮರಸ್ಯಕ್ಕೆ ದೈನಂದಿನ ಧಾರಾವಾಹಿ ಮಾರಕವಾಗಿ ಪರಿಣಮಿಸಿದೆ. ಅಂದು ಕುಟುಂಬ ಸದಸ್ಯರೆಲ್ಲ ಜೊತೆ ಜೊತೆಯಾಗಿ ಕೂತು ಊಟ, ತಿಂಡಿ ಮಾಡುತ್ತ ಸಂಭ್ರಮಿಸುತ್ತಿದ್ದರು. ಈಗ ಧಾರಾವಾಹಿ ನೋಡುತ್ತ ಊಟ ಮಾಡುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಶಾಲೆ ಬಿಟ್ಟು ಮನೆಗೆ ಬಂದ ಮಕ್ಕಳಿಗೆ, 'ಶಾಲೆಯಲ್ಲಿ ಏನು ಕಲಿಸಿದ್ದಾರೆ' ಎಂದು ಕೇಳುವ ತಂದೆ-ತಾಯಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಯಾಕೆಂದರೆ ಮಕ್ಕಳು ಶಾಲೆ ಬಿಟ್ಟು ಮನೆಗೆ ಪ್ರವೇಶಿಸುತ್ತಿದ್ದಂತೆ, ಪಾಲಕರು ಧಾರಾವಾಹಿಯಲ್ಲಿ ಮುಳುಗಿರುತ್ತಾರೆ. ಮನೆಯ ಈ ವಾತಾವರಣ ಮಕ್ಕಳ ಕಲಿಕೆಯ ಮೇಲೆ ಗಣನೀಯ ಪರಿಣಾಮ ಬೀರುತ್ತ, ಅವರನ್ನು ಸಹ ಧಾರಾವಾಹಿಗಳು ಆಕರ್ಷಿಸಲು ಪ್ರಾರಂಭಿಸುತ್ತಿವೆ. ಕೂಡಿ ಬಾಳುವ ಕುಟುಂಬವು ಧಾರಾವಾಹಿಯ ಪ್ರಭಾವಕ್ಕೆ ಒಳಗಾಗಿ ದ್ವೇಷ-ಅಸೂಯೆಯನ್ನು ಸೃಷ್ಟಿಸುತ್ತಿದೆ. ಪರಸ್ಪರ ಕಂದಕವನ್ನು ನಿರ್ಮಿಸಿಕೊಂಡು ಒಂದೇ ಮನೆಯಲ್ಲಿ ದಾಯಾದಿಗಳಂತೆ ಬದುಕುವಂತೆ ಮಾಡುತ್ತದೆ. ನೆಮ್ಮದಿಯನ್ನು ಹಾಳುಗೈದು ಮನೆ-ಮನಗಳಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸುತ್ತವೆ.
ಸುಂದರ, ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡಬೇಕಾದ ದೃಶ್ಯ ಮಾಧ್ಯಮಗಳು... ಸಮಾಜದ ಸ್ವಾಸ್ಥ್ಯ ಹಾಳುಗೆಡುವದೆ ಪ್ರೀತಿ, ವಿಶ್ವಾಸದ ನೆಲಗಟ್ಟಿನಡಿ ಉತ್ತಮ ಸಂದೇಶ ರವಾನಿಸಬೇಕಾದ ಧಾರಾವಾಹಿಗಳು... ಹೆಂಗಳೆಯರ ಮೃದು ಮನಸ್ಸನ್ನೆ ತಮ್ಮ ಲಾಭಕ್ಕಾಗಿ ಉಪಯೋಗಿಸಿ, ಕಟ್ಟು ಕತೆಗಳ ಮೂಲಕ ಅವರ ಕಣ್ಣಲ್ಲಿ ನೀರು ತರಸಿ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವುದು ಎಷ್ಟು ಸರಿ....? ಇದು ಹೀಗೆ ಮುಂದುವರಿದರೆ ನಮ್ಮ ಮುಂದಿನ ಸಮಾಜ ಏನು...? ಎಂತು....?

ನಾನು ಮಾಡಿದ್ದೇ ಸರಿ, ನನಗ್ಹೇಳಲು ನೀನ್ಯಾರು..?


ನಾಗರಾಜ್ ಬಿ.ಎನ್.
ಹೆತ್ತವರಿಗೆ ಮುದ್ದು ಮಕ್ಕಳಾಗಿ... ಸ್ನೇಹಿತರಿಗೆ ಆತ್ಮೀಯನಾಗಿ... ಸಮಾಜಕ್ಕೆ ಮಾದರಿಯಾಗಿ... ಮಾನವೀಯ ಮೌಲ್ಯಗಳ ಖಣಿಯಾಗಿ... ಬೇಕು-ಬೇಡಗಳನ್ನು ಅರ್ಥೈಸಿಕೊಳ್ಳುವ ಸತಿ-ಪತಿಗಳಾಗಿ... ನೈತಿಕತೆ ಮೀರದ ಪ್ರೇಮಿಗಳಾಗಿ... ಭವ್ಯ-ಭಾರತ ರೂಪಿಸುವ ಹೆಮ್ಮೆಯ ಶಿಕ್ಷಕರಾಗಿ... 

ನಾನು ಮಾಡಿದ್ದೆ ಸರಿ... ನಾನು ಹೇಳಿದ್ದೆ ಆಗಬೇಕು... ಎನ್ನುವ ಮನಸ್ಥಿತಿ ಸರ್ವಥಾ ತರವಲ್ಲ. ಅದರಿಂದ ನಾವು ನಮ್ಮ ಸ್ನೇಹಿತರನ್ನು ಹಾಗೂ ಪ್ರೀತಿ-ಪಾತ್ರರನ್ನು ದೂರ ಮಾಡಿಕೊಳ್ಳುತ್ತೇವೆಯೇ ಹೊರತು, ಬದುಕಿನ ಬೆಳವಣಿಗೆಗೆ ಒಂದಿನಿತೂ ಪ್ರಯೋಜನವಿಲ್ಲ.
ಋಷಿ-ಮುನಿಗಳ, ಸಾಧು-ಸಂತರ ಸಂಸ್ಕಾರಗಳು ನಮಗಿಲ್ಲ. ಗಡ್ಡೆ-ಗೆಣೆಸುಗಳಷ್ಟೇ ತಿನ್ನುವ ಸಾತ್ವಿಕ ಆಹಾರಿಗಳೂ ನಾವಲ್ಲ. ನಾವು ಆಧುನಿಕ ಜಗತ್ತಿಗೆ ತೆರದುಕೊಂಡು, ವೈಜ್ಞಾನಿಕ ಉಪಕರಣಗಳ ನಡುವೆ ಬದುಕು ಸಾಗಿಸುವವರು. ಮಾಂಸಾಹಾರವೇ ಪರಮ ಭಕ್ಷ್ಯ ಎಂದು ಸೇವಿಸುವವರು. ಹೀಗಿದ್ದಾಗ ಸಹಜವಾಗಿಯೇ ನಮ್ಮ ಆಲೋಚನೆಗಳು, ಆಚಾರ-ವಿಚಾರಗಳು ಸಂಸ್ಕಾರವನ್ನು ಮರೆಮಾಚುವಂತೆ ಮಾಡುತ್ತವೆ. ಹಾಗಂತ ಮಾನವೀಯ ಮೌಲ್ಯಗಳನ್ನು ಮರೆಯಬಾರದು ಅಲ್ಲವೇ...? ನಮ್ಮ ಜೊತೆ ಬದುಕಿ-ಬಾಳುವವರಿಗೂ ಕೂಡಾ, ನಮ್ಮ ಹಾಗೆಯೇ ಒಂದು ಬದುಕು ಇದೆ ಎನ್ನುವುದು ಸತ್ಯ ಅಲ್ಲವೇ...?
ಈ ಆಧುನಿಕ ಬದುಕಿನ ನಾಗಾಲೋಟದಲ್ಲಿ ಯಾವುದು ಸರಿ...? ಯಾವುದು ತಪ್ಪು...? ಎಂದು ನಮಗೆ ಅರಿವಿಗೆ ಬಾರದು. ವಿವೇಚನಾ ರಹಿತ ವ್ಯಾಖ್ಯಾನವೇ ನಮ್ಮ ಜೀವಾಳವಾಗಿ ಬಿಟ್ಟಿದೆ. ಪರಿಣಾಮ, ನಾನು ಮಾಡಿದ್ದೆ ಸರಿ... ನಾನು ಹೇಳಿದ್ದೇ ಸರಿ... ನನಗೆಲ್ಲವೂ ಗೊತ್ತು... ನನ್ನದು ಇದೇ ಇದೇ ಸ್ವಭಾವ... ಬೇಕಾದರೆ ಒಪ್ಪಿಕೋ, ಬೇಡವಾದರೆ ಬಿಡು... ನನ್ನಿಷ್ಟದ ಹಾಗೆ ನಾನು ಬದುಕುತ್ತೇನೆ... ನನ್ನ ಬದುಕು ನನ್ನದು... ನನಗೆ ಹೇಳಲು ನೀನ್ಯಾರು...? ನೀನು ನನ್ನ ಸಂಬಂಧಿನಾ...? ಹೀಗೆ ಮನಸ್ಸಿಗೆ ಬಂದ ಹಾಗೆ, ಏನೇನೋ ಬಡಬಡಿಸಿ ನಮ್ಮ ಮನಸ್ಸು ಎಂತಹದ್ದು ಎಂದು ಪ್ರದರ್ಶಿಸಿ ಬಿಡುತ್ತೇವೆ. ಇದು ನಮ್ಮ ಸಂಸ್ಕಾರದ ಫಲನೇ ಅಲ್ಲವೇ...? ಗಡ್ಡೆ-ಗೆಣಸು ತಿನ್ನುತ್ತಿದ್ದ ಸಾಧು-ಸಂತರು ಹೀಗೆ ವರ್ತಿಸುತ್ತಿದ್ದರೆ..? ಹಾಗಂತ ಮಾಂಸಾಹಾರ ತಿನ್ನುವವರೆಲ್ಲರೂ ಹೀಗೆ ವರ್ತಿಸುತ್ತಾರೆ ಅಂತಲ್ಲ. ಈಗಿನ ಬಹುತೇಕರ ಮನಸ್ಥಿತಿ ಹೀಗೆಯೇ ಇದೆ. ಆದರೆ, ಅದು ತಪ್ಪು ಎಂದು ನಮಗೆ ಅರ್ಥವಾಗುವುದಿಲ್ಲ. ಯಾರಾದರೂ, `ಹಾಗೆ ಮಾತನಾಡುವುದು ತಪ್ಪು, ಹಾಗೆಲ್ಲ ಹೇಳ ಬೇಡ' ಎಂದರೆ... ಅದನ್ನು ಕೇಳುವ ವ್ಯವಧಾನವೂ ನಮಗಿರುವುದಿಲ್ಲ. ಸಂದರ್ಭದಲ್ಲಿ `ನಾನು ಮಾಡಿದ್ದೆ ಸರಿ ಎನ್ನುವ ಅಹಂ' ನಮ್ಮಲ್ಲಿ ಪುಟಿದೇಳುತ್ತಿದೆ. ಅದರ ಮೇಲಾಟದಲ್ಲಿ `ಸರಿ-ತಪ್ಪು'ಗಳ ವಿವೇಚನೆಯೇ ಮಖಾಡೆ ಮಲಗಿರುತ್ತವೆ. ಆದರೆ ಇವೆಲ್ಲ ನಮ್ಮ ಸಂಸ್ಕಾರದ ಫಲನೇ ಅಲ್ಲವೇ...?

ಇರಲಿ, ಕ್ಯಾಲೆಂಡರ್ನಲ್ಲಿ ವರ್ಷ ಬದಲಾಗುವ ದಿನಕ್ಕೆ ಎದುರು ನೋಡುತ್ತಿದ್ದೇವೆ. `ಹಿಂದು ವರ್ಷಾಚರಣೆಯಲ್ಲ, ಅದನ್ನು ಆಚರಿಸುವುದು ಬೇಡ' ಎನ್ನುವ ಕೂಗು ಸಹ ಅಲ್ಲಲ್ಲಿ ಕೇಳಿ ಬರುತ್ತಿವೆ. ನೂತನ ವರ್ಷವನ್ನು ಆಚರಣೆ ಮಾಡುವುದು ಬೇಡ. ಆದರೆ, ವರ್ಷ ಬದಲಾವಣೆಯಾಗುವ ಸಂದರ್ಭದಲ್ಲಿ ದೃಢ ಸಂಕಲ್ಪ ಮಾಡೋಣ. ವಿಚಾರ, ಆಚಾರ, ನಡೆ, ನುಡಿಗಳನ್ನು ಬದಲಿಸಿಕೊಳ್ಳೋಣ. ನಾನು ಮಾಡಿದ್ದೇ ಸರಿ, ನಾನು ಹೇಳಿದ್ದೇ ಆಗಬೇಕು ಎನ್ನುವ ತುಚ್ಛ ಮನಸ್ಥಿತಿಯನ್ನು ಈ ವರ್ಷದಲ್ಲಿಯೇ ಬಿಟ್ಟು ಹೋಗೋಣ. ಇನ್ನೊಬ್ಬರು ಆಡುವ ಮಾತನ್ನು ತಾಳ್ಮೆಯಿಂದ ಕೇಳೋಣ... `ಅವರು ಯಾಕಾಗಿ ನನಗೆ ಹೇಳುತ್ತಿದ್ದಾರೆ?' ಎಂದು ನಮ್ಮಲ್ಲಿಯೇ ಮಂಥನ ಮಾಡಿಕೊಳ್ಳೊಣ. ಸಂಬಂಧವನ್ನು ಹಾಳು ಮಾಡಿಕೊಳ್ಳುವ, `ನೀನು ನನಗೆ ಸಂಬಂಧಿನಾ, ನನ್ನ ಸ್ವಭಾವವೇ ಹಾಗೆ, ನನ್ನ ಬದುಕು ನನ್ನಿಷ್ಟ, ನನಗೆ ಹೇಳಲು ನಿನ್ಯಾರು... ಎನ್ನುವ ಮಾತುಗಳನ್ನು ಬಿಟ್ಟು ಬಿಡೋಣ. ಕುಟುಂಬದವರ, ಸ್ನೇಹಿತರ, ಜೊತೆಯಿರುವ, ಪ್ರೀತಿಸುವವರ ಜೊತೆ ಕೂಡಿ-ಬಾಳೋಣ. ಅಹಂನ ಕಪಿಮುಷ್ಟಿಯಲ್ಲಿ ಸಿಲುಕಿ, ಅದರ ಪ್ರತಿಷ್ಠಗಾಗಿ ಜೊತೆಗಾರರನ್ನು ಕಳೆದುಕೊಳ್ಳದಿರೋಣ. ಅವರ ಮಾತುಗಳನ್ನು ಕೇಳಿ ಅವರ ಬದುಕಿಗೂ ಗೌರವ ನೀಡೋಣ. ಹೆತ್ತವರಿಗೆ ಮುದ್ದು ಮಕ್ಕಳಾಗಿ... ಸ್ನೇಹಿತರಿಗೆ ಆತ್ಮೀಯನಾಗಿ... ಸಮಾಜಕ್ಕೆ ಮಾದರಿಯಾಗಿ... ಮಾನವೀಯ ಮೌಲ್ಯಗಳ ಖಣಿಯಾಗಿ... ಬೇಕು-ಬೇಡಗಳನ್ನು ಅರ್ಥೈಸಿಕೊಳ್ಳುವ ಸತಿ-ಪತಿಗಳಾಗಿ... ನೈತಿಕತೆ ಮೀರದ ಪ್ರೇಮಿಗಳಾಗಿ... ಭವ್ಯ-ಭಾರತ ರೂಪಿಸುವ ಹೆಮ್ಮೆಯ ಶಿಕ್ಷಕರಾಗಿ... ಒಟ್ಟಾರೆ ಸಮಾಜದ ಆದರ್ಶ ವ್ಯಕ್ತಿಯಾಗಲು ಪಣ ತೊಡೋಣ.ನಮ್ಮ ಬದುಕಿನಾಚೆಗೂ ಒಂದು ಸುಂದರ ಬದುಕಿದೆ ಎನ್ನುವುದು ಮರೆಯದಿರೋಣ..

ಮಂಗಳವಾರ, ಜುಲೈ 22, 2014

ಕಾಡಬೇಡ ಓ ನೆನಪೇ ....!

ಉಮ್ಮಳಿಸುತಿದೆ ಎದೆಯಾಳದಿಂದ
ಬದುಕು ಕೊಟ್ಟ ನೆನಪೊಂದು
ತಡೆಯೊಡ್ಡುತ್ತಿದ್ದೇನೆ ಬಲವಂತವಾಗಿ
ಹೊರ ಬಂದು ನೀ ಸೃಷ್ಟಿಸಬೇಡ
ಅಲ್ಲೋಲ ಕಲ್ಲೋಲವೆಂದು...!!
ಕಣ್ಣಾಲಿಗಳು ಕೆಂಪಾಗಿಹುದು
ಬಿರು ಬಿಸಿಲ ಬೇಗೆಗೆ
ಕೆನ್ನೆಗಳು ತೋಯ್ದಿಹುದು
ಬಿಟ್ಟು ಬಿಡದೆ ಹರಿದ ಕಂಬನಿಗೆ...!!


ಅಂತರಂಗದ ಹೊಯ್ದಾಟ
ಬಹಿರಂಗದ ತಾಕಲಾಟ
ಉಚ್ವಾಶ-ನಿಚ್ವಾಶದ ಮೇಲಾಟ
ಎದ್ದೇಳಿಸದಾಗಿದೆ ಗರಿ ಬಿಚ್ಚಿದ ಮನವ...!!
ವಿಶ್ವಾಸದ ಎಳೆ ತುಂಡರಿಸಿ
ಸುಳಿ ಸುಳಿಯಾಗಿ ಬೀಸೋ
ಸುಳಿಗರ್ಾಳಿ ತೆಕ್ಕೆಗೆ ಸಿಲುಕಿ
ಸಾಗುತಿದೆ ದೂರ ದೂರಕೆ
ಕಣ್ಣಂಚಿನ ಒಲವ ಬಿಟ್ಟು
ಕಾಣದಾ ಊರಿಗೆ..........!!
ಉಮ್ಮಳಿಸಬೇಡ ಓ ನೆನಪೇ
ತಿದ್ದಿ.. ತೀಡಿ, ಕೈ ಹಿಡಿದು ಮುನ್ನಡೆಸು
ನಗುವಿರ ಮೊಗದಲ್ಲಿ, ಹೂ ನಗೆಯ ಅರಳಿಸು
ಬದುಕಿಕೊಳ್ಳಲಿ ಜೀವ
ನಿನ್ನದೇ ನೆನಪಿನಲಿ...!! 
                                                          -ನಾಗರಾಜ್ ಬಿ. ಎನ್(೯೮೧೦೫೨೩೭೮)

ಭಾನುವಾರ, ಮೇ 25, 2014

ಎಲ್ಲಿ ಹೋದವು ಅಮ್ಮಾ ನನ್ನ ಗುಬ್ಬಚ್ಚಿಗಳು.....?

ನಾಗರಾಜ್ ಬಿ.ಎನ್. ಬಾಡ-ಕುಮಟ
ಮುಂಜಾನೆಯ ಹಾಯಾದ ಸುಖ ನಿದ್ದೆ. ಆಗಲೇ ಮೂರುಸಾವಿರ ಮಠದ ಗಂಟೆ ಆರು ಬಾರಿ ಹೊಡೆದುಕೊಂಡಿತ್ತು. ಕಣ್ಣನ್ನು ಉಜ್ಜುತ್ತ ಯಾಕಾದರೂ ಬೆಳಕು ಹರಿಯುತ್ತೋ ಎಂದು ಗೊಣಗುತ್ತಲೇ ಹಾಸಿಗೆಯಿಂದ ಮೇಲೆದ್ದೆ. ಬಾಗಿಲು ತೆರೆದು ಹೊರಗಡೆ ಒಮ್ಮೆ ಕಣ್ಣಾಡಿಸಿದೆ.
ದೂರದ ಬನ್ನಿ ಮರದ ಮೇಲೆ ಎರಡು ಗುಬ್ಬಚ್ಚಿಗಳು ಸ್ವಚ್ಛಂದವಾಗಿ ಹಾರಾಡುತ್ತಿದ್ದವು.
ಪುಟ್ಟ ಗುಬ್ಬಚ್ಚಿಗಳ ಹಾರಾಟ ನೋಡುತ್ತ, ಚಿಂವ ಚಿಂವ ಸದ್ದು ಕೇಳುತ್ತ ಅಲ್ಲಿಯೇ ನಿಂತು ಬಿಟ್ಟೆ. ಅರಿವಿಲ್ಲದೆ ಕಣ್ಣಾಲಿಗಳು ತೇವಗೊಂಡವು.
ಅರೆ ಕ್ಷಣದಲ್ಲಿಯೇ ಮನೆಗೆ ಫೋನಾಯಿಸಿದೆ. ಅಮ್ಮ ಫೋನ್ ರಿಸೀವ್ ಮಾಡಿದ್ದಳು.
`ಅಮ್ಮಾ, ಗುಬ್ಬಚ್ಚಿಗಳು ಮನೆಗೆ ಬರ್ತಾ ಇವೆಯಾ? ಬರ್ಡ್ ಫೀಡರ್(ಸ್ನೇಹಿತ ದಿನು, ತನ್ನ ಜನ್ಮದಿನಕ್ಕೆ ನನಗೆ ನೀಡಿದ ಗಿಫ್ಟ್)ನಲ್ಲಿ ಹಾಕಿಟ್ಟ ಆಹಾರ ತಿನ್ನೋಕೆ ಎಷ್ಟು ಗುಬ್ಬಚ್ಚಿಗಳು ಬರ್ತಾ ಇವೆ?'
ಬೆಳ್ಳಂಬೆಳಿಗ್ಗೆ ಮಗನ ಫೋನ್ ಗೆ ಮತ್ತು ಪ್ರಶ್ನೆಗಳಿಗೆ ಅಮ್ಮ ತುಸು ಆಶ್ಚರ್ಯಕ್ಕೀಡಾದಳು ಅನ್ಸತ್ತೆ.
`ಏನಾಯ್ತೋ ಮಗ.. ಹಾಸಿಗೆಯಿಂದ ಏಳ್ತಾನೆ ಗುಬ್ಬಿ, ಗುಬ್ಬಿ ಅಂತ ಇದ್ದೀಯಾ?'
`ಯಾಕಿಲ್ಲಮ್ಮಾ, ಇಲ್ಲಿ ಎರಡು ಗುಬ್ಬಚ್ಚಿಗಳು ಚಿಂವ ಚಿಂವ ಎನ್ನುತ್ತ ಓಡಾಡ್ತಾ ಇವೆ. ಅಲ್ಲಿಯೂ ಹೀಗೆ ಆಟ ಆಡ್ತಾ ಇವೆಯಾ ಅಂತ ಫೋನ್ ಮಾಡಿದೆ'
'ಈಗ ಎಲ್ಲೋ ಆ ಪುಟ್ಟ ಗುಬ್ಬಚ್ಚಿಗಳು? ಏಳೆಂಟು ವರ್ಷಗಳೇ ಕಳೆದು ಹೋದವು. ಹುಡುಕುತ್ತಾ ಹೋದರೂ ಒಂದು ಗುಬ್ಬಿ ಸಹ ಕಾಣಲ್ಲ'
`ಅಮ್ಮಾ, ನಾನು ಕನ್ನಡ ಶಾಲೆಗೆ ಹೋಗುವಾಗ ಎಷ್ಟೊಂದು ಗುಬ್ಬಚ್ಚಿಗಳು ಮನೆಗೆ ಬರ್ತಾ ಇದ್ದವು ಅಲ್ವಾ? ಮನೆ ಒಳಗಡೆಯ ಫೋಟೋದ ಹಿಂದೆ, ಹಂಚಿನ ಕೆಳಗೆ ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡಿ ಸಂಸಾರ ನಡೆಸ್ತಾ ಇದ್ದವು. ಈಗ ಅವೆಲ್ಲ ಎಲ್ಲಿ ಅಮ್ಮಾ...?'
ಅಮ್ಮ ಮೌನಕ್ಕೆ ಶರಣಗಾಗಿದ್ದಳು.... ನನ್ನ ಮಾತು ಮುಂದುವರಿದಿತ್ತು.
`ಕೈ-ಕಾಲಿಗೆ ಎಡತಾಕುತ್ತ, ಚಿಂವ ಚಿಂವ ಎಂದು ಹಾರಾಡುತ್ತ ಮನೆಯ ವಾರಸುದಾರರ ಹಾಗೆ ಕಾರುಬಾರು ನಡೆಸ್ತಾ ಇರ್ತಿದ್ದರು ಅಲ್ವಾ ಅಮ್ಮ? ನೀನು ಅಕ್ಕಿ ಆರಿಸುವಾಗ ನಿನ್ನ ಪಕ್ಕದಲ್ಲಿಯೇ ಅವರು ಕುಣಿದು ಕುಪ್ಪಳಿಸಿ, ಒಂದೊಂದೆ ಕಾಳನ್ನು ಹೆಕ್ಕಿ ತಿನ್ತಾ ಇದ್ದರು. ಅಪರಿಚಿತರೇನಾದರೂ ಬಂದಾಗ ಪುರ್ರ ಎಂದು ಹಾರಿ ಹೋಗ್ತಾ ಇದ್ದರು. ನಾನು ಶಾಲೆಗೆ ಹೋದ ಸಮಯ ಆ ಗುಬ್ಬಚ್ಚಿಗಳೇ ಅಲ್ವಾ ಅಮ್ಮಾ, ನಿನ್ನ ಜೊತೆಯಾಗಿರ್ತಿದ್ದವರು? ಎಲ್ಲಿ ಹೋದವು ಅಮ್ಮಾ ಆ ನನ್ನ ಮುದ್ದು ಗುಬ್ಬಚ್ಚಿಗಳು.....?'
ಅಮ್ಮನಿಗೆ ಮಾತೇ ಹೊರಡುತ್ತಿರಲಿಲ್ಲ. ಏನು ಹೇಳಬೇಕೆಂದು ತೋಚದೆ ಹಾಂ... ಹಾಂ... ಎನ್ನುತ್ತಿದ್ದಳು. ಕೊನೆಗೂ ಅಮ್ಮ ತುಟಿ ಬಿಚ್ಚಿದಳು...
'ಮಗ, ಅದೇ ಮೊಬೈಲ್ ಟವರ್ ಗಳಿಂದ ಗುಬ್ಬಿ ಸಂತತಿ ನಾಶವಾಗಿದೆಯಂತೆ. ಕೆಲವು ಗುಬ್ಬಚ್ಚಿಗಳು ಬೇರಡೆ ವಲಸೆ ಹೋಗಿವೆಯಂತೆ. ರಾಸಾಯನಿಕ ಮಿಶ್ರಿತ ಆಹಾರದಿಂದಾಗಿ ಅದಕ್ಕೆ ಬೇಕಾದ ಸಾವಯವ ಆಹಾರ ಕೂಡಾ ಸರಿಯಾಗಿ ಸಿಗ್ತಾ ಇಲ್ವಂತೆ. ಏನ್ಮಾಡೋದು.. ಆಧುನಿಕ ತಂತ್ರಜ್ಞಾನ ಬೆಳೆದಂತೆ ಪ್ರಕೃತಿಯ ಸಮತೋಲನ ಕೂಡಾ ಏರುಪೇರಾಗುತ್ತಿದೆ. ಅದು ನೇರವಾಗಿ ನಮ್ಮ ಗುಬ್ಬಚ್ಚಿಯ ಸಂತತಿಗೆ ಮಾರಕವಾಗ್ತಿರೋದು ವಿಪರ್ಯಾಸ. ಪಾಪ, ವಲಸೆ ಹೋಗಿರುವ ಗುಬ್ಬಚ್ಚಿಗಳಾದರೂ ಬೆಚ್ಚಗಿರಲಿ'
ಈಗ ಮಾತನಾಡುವ ಸರದಿ ಅಮ್ಮನದಾಗಿತ್ತು. ನಾನು ಅವಳ ಮಾತಿಗೆ ಕಿವಿಯಷ್ಟೇ ಆಗಿದ್ದೆ.
'ಅಂದ ಹಾಗೆ, ಬರ್ಡ್ ಫೀಡರ್ ಅಂದ್ಯಲ್ಲ. ನೀ ತೂಗು ಹಾಕಿದ ಜಾಗದಲ್ಲಿ ಇಷ್ಟು ದಿನ ಆದ್ರೂ ಒಂದು ಗುಬ್ಬಚ್ಚಿನೂ ಬಂದಿಲ್ಲ. ಹಕ್ಕಿಯೂ ಬಂದಿಲ್ಲ. ಅದಕ್ಕಾಗಿ ಆ ಜಾಗವನ್ನು ಬದಲಿಸಿ ಬೇರೆಡೆ ಇಟ್ಟಿದ್ದೇನೆ. ನೋಡೋಣ, ಅಲ್ಲಿಯಾದರೂ ಬರ್ತವೋ ಇಲ್ವೋ ಎಂದು. ನೀ ಬೇಜಾರು ಮಾಡ್ಕೋ ಬೇಡ. ಹೂಂ ನಾ?'
ಅಮ್ಮ ಮಾತನಾಡುತ್ತ ಮಾತನಾಡುತ್ತ ಗದ್ಗದಿತಳಾದಳು. ಉಮ್ಮಳಿಸಿ ಬರುವ ದುಃಖವನ್ನು ತಡೆದು ನನ್ನನ್ನು ಸಂತೈಸುವ ಸಾಹಸಕ್ಕಿಳಿದಿದ್ದಳು. ಇತ್ತ ನನ್ನ ಕೆನ್ನೆಯ ಮೇಲಿಂದ ಕಂಬನಿಗಳು ನಿಧಾನವಾಗಿ ಉರುಳುತ್ತಿದ್ದವು. ಎಷ್ಟಾದರೂ ಕರಳು-ಬಳ್ಳಿಯ ಸಂಬಂಧ ಅಲ್ವಾ...?
ನಂತರ ದೂರದಲ್ಲಿರುವ ನನ್ನ ಆತ್ಮ ಬಂಧುವಿಗೆ ಫೋನಾಯಿಸಿ, ನಡೆದ ಎಲ್ಲ ವಿಷಯವನ್ನು ಹೇಳಿದೆ. ನನಗೆ ಗುಬ್ಬಚ್ಚಿ ಬೇಕು ಎಂದು ಗೋಗರೆದೆ. ಮಾತಿನ ಮಧ್ಯೆ ಅವಳು 'ಗುಬ್ಬಚ್ಚಿ ಪಾರ್ಕ್' ಮಾಡುವ ಯೋಜನೆ ಹರಿಯ ಬಿಟ್ಟಳು.
ಗುಬ್ಬಚ್ಚಿ ಪಾರ್ಕ್ ಯೋಜನೆ ನನಸಾಗಿದ್ದು, ಗುಬ್ಬಚ್ಚಿಗಳ ಜೊತೆ ಒಡನಾಡುತ್ತಿದ್ದದ್ದು, ಅವುಗಳ ಚಿಂವ ಚಿಂವ ಕಲರವ..... ಎಲ್ಲವನ್ನು ಕಲ್ಪಿಸಿಕೊಳ್ಳುತ್ತ ಕ್ಷಣಕಾಲ ಕಣ್ಮುಚ್ಚಿದೆ.
ಕಲ್ಪನಾ ಲೋಕದಲ್ಲಿ ಗುಬ್ಬಚ್ಚಿಗಾಗಿ ಬದುಕಿದ ಸಾರ್ಥಕತೆಯ ಭಾವ ನನ್ನಲ್ಲಿ ಮೇಳೈಸಿತು. ಆದರೇ.... ಅದು ನಿಜ ಬದುಕಲ್ಲಿ ಎಂದೋ...? 

ಶುಕ್ರವಾರ, ಮೇ 23, 2014

'ಸ್ನೇಹ'ದಲ್ಲೊಂದು ಪ್ರೇಮ ರಾಗ....

ನಾಗರಾಜ ಬಿ.ಎನ್.
ಆತನ ಹೆಸರು ಕುಮಾರ. ಸದಾ ಕ್ರಿಯಾಶೀಲ ವ್ಯಕ್ತಿತ್ವದ ಹುಡುಗ. ಗುಣವಂತ... ಪ್ರಾಮಾಣಿಕ... ಸ್ನೇಹ ಜೀವಿ.
ದೈವಿಚ್ಛೆಯೋ.. ಆಕಸ್ಮಿಕವೋ... ವೃತ್ತಿ ಬದುಕೋ... ಅಥವಾ ಅನಿವಾರ್ಯವೋ.... ಗೊತ್ತಿಲ್ಲ. ರಾಜ ಎಂಬ ಹುಡುಗನಿಗೆ ಆತನ ಪರಿಚಯವಾಗುತ್ತದೆ. ಒಂದು ಕಿರು ನಗೆಯ ಪರಿಚಯ ಸ್ನೇಹವಾಗಿ ಆತ್ಮ ಸಂಬಂಧಕ್ಕೆ ತಿರುಗುತ್ತದೆ. ತೀರಾ ವೈಯಕ್ತಿಕ ಎನ್ನುವಂತ ಎಷ್ಟೋ ವಿಷಯಗಳನ್ನು ಒಬ್ಬರನ್ನೊಬ್ಬರು ಹಂಚಿಕೊಂಡು, ಕಷ್ಟ-ಸುಖದಲ್ಲಿ ಪಾಲುದಾರರಾಗಿ ಬದುಕನ್ನು ಮುನ್ನಡೆಸುತ್ತಾರೆ. ಅಗಲಿರಲಾರದ ಅವರಿಬ್ಬರ ಸ್ನೇಹ ಕಂಡು ಎಷ್ಟೋ ಜನರು ಮೂಗು ಮುರಿದದ್ದು ಇದೆ. ಅವರ ಸ್ನೇಹಕ್ಕೆ ತಡೆಯೊಡ್ಡಲು ಕಾಣದ ಕೈಗಳು ಕುತಂತ್ರ ನಡೆಸಿದ್ದೂ ಇದೆ. ಅವುಗಳ ನಡುವೆಯೇ ಅವರ ಪವಿತ್ರ ಹಾಗೂ ಗಟ್ಟಿ ಸ್ನೇಹ ಇನ್ನಷ್ಟು ಎತ್ತರೆತ್ತರಕ್ಕೆ ಬೆಳೆಯುತ್ತ ಸಾಗಿದೆ.
ಹೀಗಿರಲು ಒಂದು ದಿನ ಕುಮಾರ ಖಿನ್ನನಾಗಿ ಏನೋ ಚಿಂತಿಸುತ್ತ ಮನೆಯ ಮೂಲೆಯೊಂದರಲ್ಲಿ ಕುಳಿತಿರುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಸ್ನೇಹಿತ ರಾಜ ಭೆಟ್ಟಿ ನೀಡುತ್ತಾನೆ. ಸ್ನೇಹಿತನ ದುಃಖತಪ್ತ ಮನಸ್ಥಿತಿಯನ್ನು ಕಂಡು ರಾಜ ಅರೆಕ್ಷಣ ಗಾಬರಿಯಾಗುತ್ತಾನೆ. ನಿಧಾನವಾಗಿ ಸಾವರಿಸಿಕೊಂಡು ಮಾತಿಗಿಳಿಯುತ್ತಾನೆ.
`ಏನೋ ಗೆಳೆಯಾ.... ಏನಾಯ್ತೋ? ಯಾಕಿಷ್ಟು ಕೊರಗುತ್ತಿದ್ದೀಯಾ? ಪ್ಲೀಸ್....'
'......................'
ನೀರವ ಮೌನ. ಮನೆಯ ಹೊರಗಡೆ ಕಾಗೆ `ಕ್ರಾ.... ಕ್ರಾ....' ಎಂದು ಒಂದೇ ಸಮನೆ ಕೂಗುತ್ತಿದೆ. ಏನೋ ಅಪಶಕುನ ಕಾದಿದೆ ಎಂದು ರಾಜನಿಗೆ ಭಾಸವಾಗುತ್ತಿದೆ.
'ಕುಮಾರ, ನಾನು ನಿನ್ನ ಪ್ರಾಣ ಸ್ನೇಹಿತ ಕಣೋ.... ಯಾಕಿಷ್ಟು ಅಳುತ್ತಿದ್ದೀಯಾ? ಹೇಳೋ.....' ಎಂದು ಮತ್ತೆ ಮಾತಿಗಿಳಿಯುತ್ತಾನೆ.
'ಹಾಂ.... ಏನಂತ ಹೇಳ್ಲೋ..? ದಯವಿಟ್ಟು ನನ್ನ ಬಿಟ್ಬಿಡೋ..'
'ಹುಚ್ಚರ ಹಾಗೆ ಮಾತಾಡ್ಬೇಡ. ಏನಾಯ್ತಂತ ಹೇಳು'
'ನೀನು ನನ್ಮೇಲೆ ತಪ್ಪು ತಿಳ್ಕೋಳ್ಳಲ್ಲ ಅಂತ ಪ್ರಾಮಿಸ್ ಮಾಡು'
'ಹೂಂ... ಮಾಡ್ದೆ, ಹೇಳು ಮಾರಾಯ'
ಮತ್ತೆ ಹೊರಗಡೆ ಕಾಗೆಯ ಕರ್ಕಶ ಕೂಗು.
ರಾಜನ ಮನಸ್ಸು ಅವ್ಯಕ್ತ ದುಗುಡದಲ್ಲಿ ಮುಳುಗಿದೆ. ಮನದೊಳಗಿನ ಕಾತುರ, ತವಕ ಒಂದೇ ಸಮನೆ ಹೆಚ್ಚುತ್ತಿದೆ. ಆದರೂ ಅದ್ಯಾವುದರ ಕುರುಹನ್ನು ಆತ ಮುಖದ ಮೇಲೆ ತೋರ್ಪಡಿಸಿಕೊಳ್ಳುತ್ತಿಲ್ಲ. ನಿರಾಳ ವದನದವನಾಗಿ ಸ್ನೇಹಿತ ಕುಮಾರನ ಉತ್ತರದ ನಿರೀಕ್ಷೆಯಲ್ಲಿದ್ದಾನೆ.
ಕುಮಾರ ಹೇಳಲೋ ಬೇಡವೋ ಎಂದು ಮನಸ್ಸಲ್ಲಿಯೇ ಲೆಕ್ಕ ಹಾಕುತ್ತ, 'ಸ್ನೇಹಿತನಿಗೆ ಹೇಳದೆ ಇಷ್ಟು ದಿನ ನಾನು ವಿಷಯ ಮುಚ್ಚಿಟ್ಟದ್ದು ಸರಿನಾ? ಇದು ನನ್ನ ಸ್ನೇಹಕ್ಕೆ ಮಾಡಿದ ಅಪಚಾರನಾ? ವಿಷಯ ಗೊತ್ತಾದರೆ ರಾಜ ಏನಂದುಕೊಳ್ಳುತ್ತಾನೆ?' ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳುತ್ತಿದ್ದಾನೆ.
ಆದರೂ ಪ್ರಾಣ ಸ್ನೇಹಿತನ ಒತ್ತಾಯಕ್ಕೆ ಮಣಿದು ಮನದಾಳದ ಬೇಗುದಿಯನ್ನು ಹೊರ ಹಾಕುತ್ತಾನೆ.
'ಕಳೆದ ಒಂದು ವರ್ಷದಿಂದ ನಾನೊಬ್ಬಳನ್ನು ಪ್ರೀತಿಸುತ್ತಿದ್ದೇನೆ. ಪ್ರೀತಿ-ಪ್ರೇಮದ ಜಂಜಾಟವೇ ಬೇಡ ಎಂದು ಇಷ್ಟು ವರ್ಷಗಳ ಕಾಲ ದೂರವಿದ್ದ ನನಗೆ ಅವಳು ಅದ್ಹೆಗೆ ಮೋಡಿ ಮಾಡಿದಳೋ ಗೊತ್ತಿಲ್ಲ. ಬಹುಶಃ ಅವಳ ನಗು, ಮಾತು, ನೋಟವೇ ನನಗೆ ಹುಚ್ಚು ಹಿಡಿಸಿದ್ದು ಅನ್ಸತ್ತೆ. ಒಂದು ದಿನ ಅವಳನ್ನು ನೋಡದೆ ಇದ್ದರೆ ಏನೋ ಕಳೆದುಕೊಂಡಂತೆ. ಅವಳ ಜೊತೆ ಮಾತನಾಡದಿದ್ದರೆ, ಅಂದಿನ ಉತ್ಸಾಹವೇ ಕಳೆದುಕೊಂಡು ಬಿಡುತ್ತೇನೆ. ಮನ ಮನವೆಲ್ಲ ಅವಳು ಆವರಿಸಿ ಬಿಟ್ಟಿದ್ದಾಳೆ. ಮದುವೇ ಆಗುವುದಿದ್ದರೆ ಅವಳನ್ನೇ ಆಗಬೇಕು ಎಂದು ನಿರ್ಧರಿಸಿದ್ದೆ. ಆದರೆ ನಾನು ಪ್ರೀತಿಸುತ್ತಿದ್ದ ವಿಷಯ ಯಾರಿಗೂ ಹೇಳಿಲ್ಲ. ಪ್ರೀತಿಸುತ್ತಿರುವ ಹುಡುಗಿಗೂ ಹೇಳಿರಲಿಲ್ಲ.........'
ಕುಮಾರ ಒಂದೇ ಸಮನೆ ಬಚ್ಚಿಟ್ಟ ತನ್ನೆಲ್ಲ ಭಾವನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾನೆ. ರಾಜ ನೀಲಾಕಾಶ ನೋಡುತ್ತ ಆತನ ಮಾತನ್ನು ಕೇಳುತ್ತಿದ್ದಾನೆ.
'ಆದರೆ, ಇಂದು ಮುಂಜಾನೆ ಅವಳು ಆಕಸ್ಮಿಕವಾಗಿ ಭೆಟ್ಟಿಯಾದಳು. ಮಾತಿಗೆ ಮಾತು ಸಾಗುತ್ತ ವೈಯಕ್ತಿಕ ಬದುಕಿನತ್ತ ಹೊರಳಿತು. ನಾನು ಕೂಡಾ ಸೂಕ್ತ ಸಮಯಾವಕಾಶಕ್ಕೆ ಕಾಯುತ್ತಿದ್ದೆ. ನನ್ನ ಬದುಕನ್ನು ನಿರ್ಧರಿಸುವ ಬಹು ನಿರೀಕ್ಷಿತ ಕ್ಷಣ ಆಗಮಿಸಿದೆ ಎಂದು, ಅವಳನ್ನು ಪ್ರೀತಿಸುತ್ತಿರುವ ವಿಷಯ ಪ್ರಸ್ತಾಪಿಸಿದೆ. ಈಗಾಗಲೇ ಅವಳು ಇನ್ನೊಬ್ಬನ ಪ್ರೀತಿಯ ತೆಕ್ಕೆಗೆ ಬಿದ್ದಿದ್ದಾಳಂತೆ. ಒಂದೂವರೆ ವರ್ಷದಿಂದ ಅವರಿಬ್ಬರೂ ಪ್ರೀತಿಸುತ್ತಿದ್ದಾರಂತೆ.  ಇಬ್ಬರ ಮನೆಗೂ ವಿಷಯ ತಿಳಿದಿದ್ದು, ಎರಡು ವರ್ಷದ ನಂತರ ಮದುವೆಗೆ ಒಪ್ಪಿಗೆ ನೀಡಿದ್ದಾರಂತೆ ಎಂದಳು. ಅವಳ ಆ ಮಾತುಗಳನ್ನು ಕೇಳಿ ಹೃದಯವೇ ಕಿತ್ತು ಬಂದ ಹಾಗೆ ಆಯ್ತು. ನನ್ನದು ಏಕಮುಖ ಪ್ರೇಮವಾದರೂ, ಅವಳನ್ನು ಜೀವ ಹೋಗುವಷ್ಟು ಪ್ರೀತಿಸುತ್ತಿದ್ದೆ. ಆರಾಧಿಸುತ್ತಿದ್ದೆ. ಪೂಜಿಸುತ್ತಿದ್ದೆ.... ಅವಳ ಬದುಕಲ್ಲಿ ಕಣ್ಣಾಗಿರಬೇಕೆಂದು ಬಯಸಿದ್ದೆ....'
ಕುಮಾರ ಬಿಕ್ಕಳಿಸುತ್ತ ಹೇಳುತ್ತಿದ್ದ.
ಅವನ ಪ್ರೇಮ ವೈಫಲ್ಯದ ಕಥೆಯನ್ನು ಕೇಳಿ ಗೆಳೆಯ ರಾಜ ಮರುಗುತ್ತಾನೆ. ತಲೆ ನೇವರಿಸುತ್ತ, ಸಾಂತ್ವನ ಹೇಳುತ್ತ, `ಹುಡುಗಿ ಎಲ್ಲಿಯವಳು, ಏನು ಮಾಡುತ್ತಿದ್ದಾಳೆ, ಅವಳ ಹೇಸರೇನು?' ಎಂದು ಸಹಜವಾಗಿ ಕೇಳುತ್ತಾನೆ.
'ಅವಳೇ ಕಣೋ, `...........'
ಕುಮಾರ ಹೆಸರು ಹೇಳುತ್ತಾನೆ.
ಸ್ನೇಹಿತ ರಾಜಗೆ ಗರ ಬಡಿದಂತಾಗುತ್ತದೆ. ಒಮ್ಮೆಲೆ ಬರಸಿಡಿಲು ಬಡಿದಪ್ಪಳಿಸಿದಂತಾಗುತ್ತದೆ. ತ್ಸುನಾಮಿಯ ಅಲೆಯಲ್ಲಿ ಸಿಲುಕಿ ಉಸಿರುಕಟ್ಟಿ ಒದ್ದಾಡಿದ ಅನುಭವವಾಗುತ್ತಿದೆ. ಕಾಗೆಯ ಕರ್ಕಶ ಸದ್ದು ಮತ್ತೆ ಜೋರಾಗುತ್ತಿದೆ. ಏನು ಹೇಳಬೇಕೆಂದು ತೋಚದೆ... ಕೈ ಕೈ ಹಿಚುಕಿಕೊಳ್ಳುತ್ತಾನೆ. ಅಳಬೇಕೋ...... ನಗಬೇಕೋ... ಏನೊಂದು ತಿಳಿಯದೆ ಅತ್ತಿಂದಿತ್ತ ಶತಪಥ ಹಾಕುತ್ತಿದ್ದಾನೆ.
'ಕುಮಾರ, ನನ್ನ ಕ್ಷಮಿಸೋ.... ನಾನು ದ್ರೋಹಿ. ಸ್ನೇಹಕ್ಕೆ ಮೋಸ ಮಾಡಿದ ಪಾಪಿ ಕಣೋ. ಪ್ಲೀಸ್..... ನನ್ನ ಕ್ಷಮಿಸೋ.... ಕ್ಷಮಿಸೋ....'
ಏನು ಎತ್ತ ಏನೂ ತೋಚದ ಕುಮಾರ ಕಕ್ಕಾಬಿಕ್ಕಿಯಾಗಿ ರಾಜನನ್ನೆ ನೋಡುತ್ತಿದ್ದಾನೆ..!
'ನೀನು ಪ್ರೀತಿಸುತ್ತಿರುವ ಹುಡುಗಿ ಹೇಳಿರುವ ಹುಡುಗ ಬೇರೆ ಯಾರೂ ಅಲ್ಲ ಕುಮಾರ, ಅವನು ನಾನೇ ಕಣೋ! ಒಂದೂವರೆ ವರ್ಷದ ನಮ್ಮ ಪ್ರೇಮ ಎಲ್ಲ ಮಜಲುಗಳನ್ನು ದಾಟಿ ಈಗ ಮದುವೆ ಎನ್ನುವ ಹಂತಕ್ಕೆ ಬಂದು ಮುಟ್ಟಿದೆ. ಆದರೆ ನಮ್ಮಗಳ ವೈಯಕ್ತಿಕ ಸಾಧನೆಗೋಸ್ಕರ ನಾವೇ ಎರಡು ವರ್ಷ ಮದುವೆಯನ್ನು ಮುಂದೂಡೆದ್ದೇವೆ. ಪ್ಲೀಸ್ ಗೆಳೆಯಾ, ಈ ವಿಷಯವನ್ನು ನಾನು ನಿನಗೆ ಹೇಳಿಲ್ಲ. ಹೇಳಿಕೊಳ್ಳುವ ಸಂದರ್ಭವೂ ಒದಗಿ ಬಂದಿಲ್ಲ. ನಿಜವಾಗಿ ನಾನು ಪಾಪಿ ಕಣೋ....'
ರಾಜ ಮಾತನಾಡುತ್ತಿದ್ದಾನೆ. ಕುಮಾರ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ..!
ಪ್ರೇಮದ ಮೊಗ್ಗು ಅರಳಿ ಸುಗಂಧ ಸೂಸಬಹುದು. ಆದರೆ, ಅರಳಿದ ಸ್ನೇಹ.....? ಇದಕ್ಕೆ ಕಾಲವೇ ಉತ್ತರ ನೀಡಬೇಕು.