ಗುರುವಾರ, ನವೆಂಬರ್ 26, 2015

ಹೆಣ್ಣು ಜಗದ ಕಣ್ಣು...
ಹೆಣ್ಣು ಅಬಲೆಯೇ...? ಮಂದಗಾಮಿಯೇ...? ಖಂಡಿತ ಅಲ್ಲ. ಅವಳು ಸಹನಾ ಮೂರ್ತಿ ... ಕ್ಷಮಯಾ ಧರಿತ್ರಿ... ಕಾದಾಟಕ್ಕೆ ನಿಂತರೆ ಎದುರಾಳಿಯನ್ನೇ ಸದೆ ಬಡೆಯುವಷ್ಟು ಪ್ರಚಂಡ ಶಕ್ತಿಯನ್ನು ಹುದುಗಿಟ್ಟುಕೊಂಡ ಅಪ್ರತಿಮ ಶೂರಳು... ಹಾಗೆ ಧೀರಳು ಹೌದು.
'ಹಾಗಾದರೆ ಸಮಾಜ ಯಾಕಾಗಿ ಅವಳನ್ನು ಹೀನಾಯವಾಗಿ ಕಾಣುತ್ತದೆ?' ಎನ್ನುವ ಸಾಮಾನ್ಯ ಪ್ರಶ್ನೆಗೆ ಉತ್ತರ, ಎಲ್ಲರಿಗೂ ತಿಳಿದಿರುವ ಹಾಗೆ 'ಪುರುಷ ಸಮಾಜ' ಮನಸ್ಥಿತಿ. ಹೆಣ್ಣಿಗೆ ಗೌರವ ಕೊಡದಿದ್ದಷ್ಟು `ಹೀನ ಮನಸ್ಥಿತಿ' ಪುರುಷ ಸಮಾಜದ್ದೇ...? ಈ ಪ್ರಶ್ನೆಗೆ ಹೆಣ್ಣಿಗೆ ಗೌರವ ನೀಡದ ಸಮಾಜ ಹಾಗೂ ಪುರುಷನೇ ಉತ್ತರ ನೀಡಬೇಕು.
ಸರಿ, ಇದು ಒತ್ತಟ್ಟಿಗಿರಲಿ.. ಮನುಷ್ಯ ಜೀವನದಲ್ಲಿ ಮಹಿಳೆಯ ಪಾತ್ರವೇನು? ಅವಳ ಸಮಸ್ಯೆಗಳೇನು? ಅವಳ ಆಕಾಂಕ್ಷೆಗಳೇನು? ಎನ್ನುವ ಕುರಿತಾದರೂ 'ಪುರುಷ ಸಮಾಜ' ಚಿಂತಿಸಿದೆಯೇ...? ಚಿಂತಿಸಿದ್ದೇ ಆಗಿದ್ದರೆ, ನಮ್ಮ ಸಮಾಜದಲ್ಲಿರುವ ಸಹೋದರಿಯರು, ಸ್ನೇಹಿತೆಯರು, ತಾಯಂದಿರು ಅತ್ಯಾಚಾರ, ದೌರ್ಜನ್ಯ, ಮಾನಸಿಕ ಕಿರುಕುಳದಂತ ಪ್ರಕರಣಕ್ಕೆ ಒಳಗಾಗುತ್ತಿರಲಿಲ್ಲ. ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕಾಗಿ ಪುರುಷನಿಂದ ಚಿತ್ರಹಿಂಸೆ ಪಡೆಯಬೇಕಾಗಿರಲಿಲ್ಲ.(ಕೆಲವು ಮಹಿಳೆಯರು ಹಾಗೂ ಪುರುಷರು ಇದಕ್ಕೆ ಅಪವಾದದಂತಿದ್ದಾರೆ...!)
ಹೆಣ್ಣು ದೈವೀ ಸ್ವರೂಪಳು. ಅಖಿಲಾಂಡಕೋಟಿ ಬ್ರಹ್ಮಾಂಡ ಶಕ್ತಿಯನ್ನೆಲ್ಲ ತನ್ನಲ್ಲಿ ಹುದುಗಿಸಿಕೊಂಡ ಪ್ರಚಂಡ ಶಕ್ತಿದಾತೆ. ಅವಳಿಂದಲೇ ಇಹವು.. ಅವಳಿಂದಲೇ ಪರವು. ಮಾತೃ ಹೃದಯ ಹೊಂದಿರುವ ಅವಳು ಪೂಜನೀಯ ವ್ಯಕ್ತಿ. ಪ್ರೇಮಿಯ ಆರಾಧನೆಗೆ ಒಳಪಡುವ ಆರಾಧನೀಯ ಮೂರ್ತಿ. ಬದುಕನ್ನು ತಿದ್ದಿ-ತೀಡಿ ಅದಕ್ಕೊಂದು ರೂಪ ನೀಡುವ ಅಪ್ರತಿಮ ಕಲಾವಿದೆ. ಸರ್ವರ ಪ್ರೀತಿಗೂ ಪಾತ್ರಳಾಗುವ ಸರ್ವೋತ್ತಮೆ. ಮಿಗಿಲಾಗಿ ತಾಳ್ಮೆ, ಸಹನೆಯನ್ನು ಮೈಗೂಡಿಸಿಕೊಂಡ ಸಹನಾಶೀಲೆ..!
ಸುಮ್ಮನೆ ಕಲ್ಪಿಸಿಕೊಳ್ಳಿ. ಪ್ರಪಂಚದಲ್ಲಿ ಹೆಣ್ಣೇ ಇಲ್ಲದಿದ್ದರೆ ಏನಾಗುತ್ತಿತ್ತು..? ಎಂದು. ಇಲ್ಲ.... ಕಲ್ಪನೆಗೂ ನಿಲುಕದ ಕಲ್ಪನೆಯದು...! ಹೆಣ್ಣಿಲ್ಲದೆ ಈ ಪ್ರಪಂಚವೇ ಇಲ್ಲ. ಪ್ರತಿಯೊಂದು ಜೀವ ಜಂತುಗಳ ಹುಟ್ಟಿಗೂ ಹೆಣ್ಣೆ ಕಾರಣಳು. ಹಾಗಂತ 'ಇದರಲ್ಲಿ ಗಂಡಿನ ಪಾತ್ರವೇನೂ ಇಲ್ಲವೇ?' ಎಂದು ಕೇಳಬಹುದು. ಆದರೆ, ಸೃಷ್ಟಿ ಕ್ರಿಯೆಯಲ್ಲಿ ಗಂಡಿನದು ಕೇವಲ `ನಿಮಿತ್ತ' ಮಾತ್ರ. ಹಾಗಂತ ಬದುಕಿನ ವಿವಿಧ ಮಜಲಿನಲ್ಲಿ ಗಂಡಿನ ಪಾತ್ರವೂ ಹೆಣ್ಣಿನಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ ಎನ್ನುವುದು ಬೇರೆ ಮಾತು.
ಬದುಕಿನ ಸರ್ವತೋಮುಖ ಏಳ್ಗೆಗೆ ಹೆಣ್ಣಿನ ಪಾತ್ರ ಅತೀ ಅವಶ್ಯ. ಅವಳು ಸಹನಾಶೀಲಳಾಗಿದ್ದು, ಬದುಕಲ್ಲಿ ಎದುರಾಗುವ ಎಲ್ಲ ಕಷ್ಟಗಳನ್ನು, ನೋವುಗಳನ್ನು ಹೊರ ಪ್ರಪಂಚಕ್ಕೆ ತೋರ್ಪಡಿಸದೆ ತಾನೊಬ್ಬಳೇ ಅನುಭವಿಸುತ್ತಿರುತ್ತಾಳೆ. ನೋವನ್ನು ನಲಿವಾಗಿ ಪರಿವತರ್ತಿಸಿಕೊಳ್ಳಲು ಹೆಣಗಾಡುತ್ತಾಳೆ. ತನ್ನ ಕುಟುಂಬ ವರ್ಗದವರ ಹಿತ ಕಾಯಲು ಬದುಕನ್ನೇ ಪಣಕ್ಕಿಟ್ಟು ಹಗಲು ರಾತ್ರಿ ಹೋರಾಡುತ್ತಿರುತ್ತಾಳೆ. ನಂಬಿದವರ ನಂಬಿಕೆಯನ್ನು ಕಾಯ್ದು, ವಿಶ್ವಾಸಕ್ಕೆ ಚ್ಯುತಿ ಬರದ ಹಾಗೆ ಅರ್ಥಪೂರ್ಣವಾಗಿ ಬಾಳ್ವೆ ನಡೆಸುತ್ತಾಳೆ. ಆ ಕಾರಣಕ್ಕೆ ಹಿರಿಯರು ಹೇಳಿದ್ದು, ಒಂದು ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇದ್ದೇ ಇರುತ್ತಾಳೆ ಎಂದು.
ಹೀಗೊಂದು ವಾಸ್ತವ....!
ನವಮಾಸ ಕಾಲ ಮಗುವನ್ನು ತನ್ನ ಉದರದಲ್ಲಿಟ್ಟುಕೊಂಡು ಕಾಣದ ನೋವನ್ನು ಅನುಭವಿಸುವ ಆ ತಾಯಿಯ ಯಾತನೆ ನಿಜಕ್ಕೂ ಕಲ್ಪನಾತೀತ. ಮಗುವಿನ ಅಳುವಿನ ಕೂಗು ಕಿವಿಗೆ ಬೀಳುತ್ತಿದ್ದಂತೆ ತನ್ನೆಲ್ಲ ನೋವನ್ನು ಆಕೆ ಮರೆತು ಬಿಡುತ್ತಾಳೆ. ನೋವಿನ ಕಣ್ಣೀರು ಕ್ಷಣಮಾತ್ರದಲ್ಲಿ ಆನಂದ ಭಾಷ್ಪವಾಗಿ ಬದಲಾಗಿಬಿಡುತ್ತದೆ. ಯಮ ಯಾತನೆಯಲ್ಲೂ ಬದುಕಿ ಸಾರ್ಥಕ್ಯತೆ ಅನುಭವಿಸುವ ಅಪರೂಪದ ಘಳಿಗೆಯದು.
ನೋವಲ್ಲೂ ನಗು ಕಂಡವಳು...
ಈ ಕುರಿತು ತಾಯಿಯೊಬ್ಬಳು ಹೇಳಿದ ಮಾತು ನೆನಪಿಗೆ ಬರುತ್ತದೆ.... 'ಗರ್ಭಧರಿಸಿದ ಪ್ರಾರಂಭದಿಂದ ಒಂದಿಲ್ಲೊಂದು ಸಮಸ್ಯೆಯನ್ನು ಅನುಭವಿಸುತ್ತಲೇ ಒಂಭತ್ತು ತಿಂಗಳು ಕಳೆಯುತ್ತೇವೆ. ತಿನ್ನುವ ಬಯಕೆ ದಿನದಿಂದ ದಿನಕ್ಕೆ ಮಿತಿ ಮೀರುತ್ತವೆ. ಹಾಗಂತ ಸಿಕ್ಕಿದ್ದನ್ನೆಲ್ಲ ತಿನ್ನಲು ಆಗದು. ಹೊಟ್ಟೆಯಲ್ಲಿರುವ ಪುಟ್ಟ ಪಾಪುವಿಗೆ ಏನಾಗುತ್ತದೋ ಎನ್ನುವ ಭಯ. ಕಾಲ ಕಾಲಕ್ಕೆ ವೈದ್ಯರಲ್ಲಿಗೆ ಭೇಟಿ ನೀಡಬೇಕು. ಅವರು ಹೇಳಿದ ಹಾಗೆ ಅನುಸರಿಸಬೇಕು. ಕಡೆಗೊಂದು ದಿನ ಪಾಪು ಬರುವ ಮುನ್ಸೂಚನೆ ತೀರಾ ನೋವಿನ ಮೂಲಕ ತಿಳಿದು ಬರುತ್ತದೆ. ಪ್ರಾಣವನ್ನೇ ಕಿತ್ತು ತಿನ್ನುವ ನೋವದು. ಏಕಕಾಲದಲ್ಲಿ ನೂರಾರು ಎಲುಬುಗಳು ಮುರಿದಾಗ ಉಂಟಾಗುವಂತ ನೋವು, ಪಾಪು ಜನಿಸುವ ಸಂದರ್ಭದಲ್ಲಿ ಉದ್ಭವಿಸುತ್ತದೆ. ಆ ನೋವಿನಲ್ಲೂ ಸಂತೃಪ್ತ ಭಾವ ಮೇಳೈಸುತ್ತದೆ. ಬದುಕು ಸಾರ್ಥಕತೆ ಪಡೆಯುತ್ತದೆ'
ಪ್ರಕೃತಿ ಸಮಾನಳಾದ ಹೆಣ್ಣನ್ನು ಪೂಜಿಸೋಣ.... ಆರಾಧಿಸೋಣ.... ಗೌರಸವಿಸೋಣ... ಹಾಗೆ ಅವಳಿಂದ ಬದುಕನ್ನು ಉನ್ನತೀಕರಿಸಿಕೊಳ್ಳೊಣ.
-ನಾಗರಾಜ್ ಬಿ.ಎನ್ 
'ಇಷ್ಟ'ದ ಹುಡುಕಾಟದಲ್ಲಿ...!!
'ಇಷ್ಟ ಪಟ್ಟ ವಸ್ತು' ಬೇಕು ಎಂದಾಗ ಸಿಗದು. ಆದರೆ, ಬೇಡ ಎಂದೆನಿಸಿದಾಗ ಓಡೋಡಿ ಬಂದು ಅಪ್ಪಿಕೊಳ್ಳಲು ಹವಣಿಸುತ್ತದೆ. ಅದಾಗಲೇ ಬದುಕಿನ ಪಯಣ ಬಹು ದೂರ ಸಾಗಿ, ಹೊಸತನಕ್ಕೆ ಹೊಂದಿಕೊಂಡಿರುತ್ತದೆ.
ಇದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಸಾಮಾನ್ಯವಾಗಿ ಸರಿದು ಹೋಗುವ ಘಟನೆಗಳು. ಸುಮ್ಮನೆ ಒಂದು ಬಾರಿ, ನಿಂತ ಜಾಗದಲ್ಲಿಯೇ ಕಣ್ಮುಚ್ಚಿಕೊಂಡು `ಈವರೆಗೆ ಸಾಗಿ ಬಂದ ದಾರಿ'ಯನ್ನು ನೆನಪಿಸಿಕೊಳ್ಳಿ. ಅಲ್ಲಿ ಏನುಂಟು... ಏನಿಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಗ್ರಹಿಸಿ. ಸುಖ, ದುಃಖ, ನೋವು, ನಲಿವು, ನಿರಾಶೆ, ತುಂಟಾಟ, ಹುಡುಗಾಟಿಕೆ ಹೀಗೆ... ಒಂದೊಂದು ಸನ್ನಿವೇಶಗಳು ಸಾಲು ಸಾಲಾಗಿ ಕಣ್ಮುಂದೆ ಮೆರವಣಿಗೆ ಹೊರಡುತ್ತವೆ.
ಸಂತೋಷದ ಆ ದಿನಗಳು ಮತ್ತೆ ಬಾರದೆ ಎಂದೆನಿಸುತ್ತಿರುವಾಗಲೇ, ಧುತ್ತೆಂದು... ಬದುಕನ್ನೇ ಕಿತ್ತು ತಿನ್ನಲು ಹೊರಟ ಘೋರ ಘಟನೆಗಳು ನೆನಪಿನಂಗಳದಲ್ಲಿ ಪುಟಿದೇಳುತ್ತವೆ. ನಲಿವಿನ ಜೊತೆ ನೋವು ಸಹ ಆ 'ನೆನಪಿನ ಲೋಕ'ದಲ್ಲಿ ಸರಿಸಮಾನವಾಗಿ ಪಾಲುದಾರಿಕೆ ಪಡೆಯುತ್ತದೆ.
ಇಷ್ಟಪಟ್ಟಿದ್ದು ಬೇಕು ಎನ್ನುವ ಕಾರಣಕ್ಕೆ ಹಾಕಿದ ಮುಖವಾಡಗಳು ನೆನಪಿನ ಬುತ್ತಿಯಲ್ಲಿ ಅಚ್ಚಳಿಯದೇ ಹಾಗೆಯೇ ಉಳಿದು ಬಿಟ್ಟಿರುತ್ತವೆ. ಆ 'ಇಷ್ಟ' ಬದುಕಿಗೊಂದು ಅರ್ಥ ಕಲ್ಪಿಸಿಕೊಡುವಲ್ಲಿಯೂ ಸಹಕಾರಿಯಾಗುತ್ತದೆ ಹಾಗೆಯೇ, ಬದುಕನ್ನು ದುರಂತಕ್ಕೆ ನೂಕುವಲ್ಲಿಯೂ ಕಾಣಿಕೆ ನೀಡುತ್ತದೆ.
ಏನೇ ಇರಲಿ, ಗತಿಸಿದ ದಿನಗಳಲ್ಲಿ ಹಾತೊರೆದ ವಸ್ತು, ಪ್ರಸ್ತುತ ದಿನಗಳಲ್ಲಿ ಕೆಲವು ಬಾರಿ ಬೇಡವೆಂದರೂ ಹತ್ತಿರಕ್ಕೆ ಬಂದು ಬಿಗಿದಪ್ಪಿಕೊಳ್ಳುತ್ತವೆ. ಅಷ್ಟರಲ್ಲಾಗಲೇ ಆ 'ಇಷ್ಟ' ಇನ್ನೊಂದು ರೂಪದಲ್ಲಿ ಬಂದು ಬದುಕನ್ನು ಹಸನಾಗಿಸಿರುತ್ತದೆ. ಕಾಲಚಕ್ರದ ಉರುಳಾದಲ್ಲಿ ಕೆಲವು 'ಬೇಕು'ಗಳ ಪ್ರಾಮುಖ್ಯತೆ ಗೌಣವಾಗುತ್ತ ಸಾಗುತ್ತದೆ. ಹಾಗಾದರೆ, 'ಇಷ್ಟ' ಎನ್ನುವುದು ಗೌಣವೇ....?
(ಇಷ್ಟ-ಅವರವರ ಭಾವಕ್ಕೆ ಬಿಟ್ಟಿದ್ದು )
-ನಾಗರಾಜ್ ಬಿ.ಎನ್. 

ಬುಧವಾರ, ನವೆಂಬರ್ 25, 2015

ಪಾಪ ಪ್ರಜ್ಞೆ ಕಾಡಿದಾಗ....!
ಬದುಕು ಒಂದು ಸುಂದರ ಕಾವ್ಯ. ಅಕ್ಷರ ಲೋಕದಲ್ಲಿ ಪದಗಳು ಮೆರೆದಾಡಿದರೆ ಬದುಕಿನ ಲೋಕದಲ್ಲಿ ಗುಣಗಳು ಮೆರೆದಾಡುತ್ತವೆ. ಸುಂದರ ಕಾವ್ಯದಲ್ಲಿರುವ ಒಂದೊಂದು ಪದಗಳು ಒಂದೊಂದು ಅರ್ಥ ಹೇಳುತ್ತ ಭಾವ ಭಿತ್ತಿಯಲ್ಲಿ ಅಚ್ಚೊತ್ತಿ ಬಿಡುತ್ತವೆ. ಕಣ್ಮುಚ್ಚಿದರೂ ನಿದ್ರೆಯಲ್ಲಿ ಬಂದು ಪರಿ ಪರಿಯಾಗಿ ಕಾಡುತ್ತವೆ. ಹಾಗೆಯೇ ಬದುಕೆಂಬ ಮಹಾಕಾವ್ಯದಲ್ಲೂ ಒಂದೊಂದು ಸಾತ್ವಿಕ ಗುಣ ಪ್ರಬುದ್ಧತೆಗೆ ಕೊಂಡೊಯ್ಯತ್ತದೆ. ಅರ್ಥಪೂರ್ಣ ಜೀವನಕ್ಕೆ ಸಾಕ್ಷೀಕರಿಸಿ, ಅಳಿದ ಮೇಲೂ ಉಳಿದವರ ನಾಲಿಗೆಯ ಮೇಲೆ ಹರಿದಾಡುವಂತೆ ಮಾಡುತ್ತದೆ.
ಹುಟ್ಟು-ಸಾವಿನ ನಡುವಿರುವ ಬದುಕು ಸಾಮಾನ್ಯವಾಗಿರದೆ, ಹೊಸತನದ ಹಾದಿಯಲ್ಲಿ ಸಾಗುತ್ತಿರಬೇಕು. ಇಲ್ಲಿ ಎಲ್ಲರೂ ಜೀವಿಸುತ್ತಾರೆ; ಬಾಳಿ ಬದುಕುತ್ತಾರೆ. ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಾರೆ. ಆದರೆ ಜೀವಿತದ ಒಂದೇ ಒಂದು ಕುರುಹು ಸಹ ಅವರಿಂದ ಬಿಟ್ಟು ಹೋಗಲು ಸಾಧ್ಯವಾಗುವುದಿಲ್ಲ. ಹಾಗಂತ ನಾಲ್ಕೈದು ಅಂತಸ್ತಿನ ಮನೆಯನ್ನು ಕಟ್ಟಿಸಿರುತ್ತಾರೆ. ಮೂರ್ನಾಲ್ಕು ತಲೆಮಾರುಗಳು ಕೂತು ಉಂಡರೂ ಕರಗದ ಆಸ್ತಿ ಮಾಡಿರುತ್ತಾರೆ. ಶ್ರೀಮಂತಿಕೆ ವೈಭವವೇ ಅವರಲ್ಲಿ ಠೇಂಕರಿಸಿ ವಿಜೃಂಭಿಸಿರುತ್ತದೆ. ಆದರೆ, ಅದು ಅವರ ಸ್ವಂತಿಕೆಗಷ್ಟೇ ಸೀಮಿತವಾಗಿರುತ್ತವೆಯೇ ಹೊರತು, ಮಾನವೀಯತೆಗೆ ಬಳಕೆಯಾಗುವುದು ತೀರಾ ಕಡಿಮೆಯೇ. ಪರಿಣಾಮ ಅಳಿದ ಮೇಲೆ, ಅಂತಸ್ತಿನ ಮನೆಯ ಪಡಶಾಲೆಯಲ್ಲಿ ಭಾವಚಿತ್ರಕ್ಕೊಂದು ಜಾಗವಷ್ಟೇ....!
ಬದುಕಿನ ಸುಂದರ ಮಹಾಕಾವ್ಯದಲ್ಲಿ ಭಾವಚಿತ್ರವಾಗಷ್ಟೇ ಇರಬಾರದು. ಸರ್ವರ ಹೃದಯಲ್ಲೂ ಜೀವಂತಿಕೆಯ ಮೂತರ್ಿಯಾಗಿ ಸದಾ ನೆನಪಿನಲ್ಲಿರುವಂತಾಗಬೇಕು. ತಾಮಸ ಗುಣಗಳನ್ನು ಸಂಹರಿಸಿ, ಸಾತ್ವಿಕ ಗುಣಗಳ ಅನುಯಾಯಿಗಳಾಗಬೇಕು. ಎಲ್ಲರೂ ನನ್ನವರು ಎನ್ನುವ ಭಾವ ಅಂಕುರಿಸಿ, ಪ್ರೀತಿಯ ಸಾಮ್ರಾಜ್ಯ ಸ್ಥಾಪಿಸಬೇಕು. ಆ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆದಾಡಬೇಕು. ಸುತ್ತಮುತ್ತಲಿನವರನ್ನು ವಿಶ್ವಾಸದ ತೆಕ್ಕೆಯಲ್ಲಿ ಬಂಧಿಸಬೇಕು. ಸಾಮರಸ್ಯದ ಹಾದಿ ತುಳಿದು, ಸಹಬಾಳ್ವೆಯ ಮಂತ್ರ ಜಪಿಸಬೇಕು. ಆಗ ಅಲ್ಲಿನ ವಾತಾವರಣ ನಿಜಕ್ಕೂ ನಂದನವನ. ಸ್ವರ್ಗ ಸಮಾನ...!
ಶ್ರೀಮಂತಿಕೆಯ ದರ್ಪವಿಲ್ಲದ ಆ ಪ್ರೀತಿ ಸಾಮ್ರಾಜ್ಯದಲ್ಲಿ ಎಲ್ಲರೂ ಸುಖಿಗಳೇ; ಎಲ್ಲರೂ ಒಬ್ಬರಿಗೊಬ್ಬರು ಪ್ರೀತಿ ಪಾತ್ರರೆ. ರಾಗ-ದ್ವೇಷಗಳು ಅಲ್ಲಿ ಮಖಾಡೆ ಮಲಗಿ, ಪ್ರೀತಿ-ವಿಶ್ವಾಸಗಳು ಸದಾ ಎಚ್ಚರದಿಂದಿರುತ್ತವೆ. ತಪ್ಪು ಮಾಡಲು ಅಲ್ಲಿ ಅವಕಾಶವೇ ಇಲ್ಲ. ಇದ್ದರೂ ತಿದ್ದಿ-ತೀಡುವ ಮನಸ್ಸುಗಳು ಸುತ್ತಲೇ ಇದ್ದು, ನಮ್ಮ ಕಿವಿ ಹಿಂಡುತ್ತಲೇ ಇರುತ್ತವೆ. ಸೋಲು-ಗೆಲುವಿಲ್ಲದ ಈ ಪ್ರೀತಿ ಜಗತ್ತಲ್ಲಿ ಪ್ರೀತಿಯೇ ಉಸಿರಾಗಿ, ಪ್ರೀತಿಯೇ ಬದುಕಾಗಿ, ಪ್ರೀತಿಯೇ ಧ್ಯೇಯವಾಗಿ ಬದಲಾಗಿ ಬಿಡುತ್ತದೆ.
-ನಾಗರಾಜ್ ಬಿ.ಎನ್. 
ತೋಳ ತೆಕ್ಕೆಯಲಿ ಬಂಧಿಯಾಗಲಿ....!
                                                                                                 (ಮಳೆ ಹುಡುಗಿ ನೆನಪಿಂದ)
ರೋಬ್ಬರಿ ಅರವತ್ಮೂರು ದಿನಗಳ ನಂತರ ನನ್ನೂರಿಗೆ(ಕುಮಟಾ) ತೆರಳುತ್ತಿದ್ದೇನೆ. ಏನೋ ಅವ್ಯಕ್ತ ಆನಂದ ಮೈ-ಮನವೆಲ್ಲ ಆವರಿಸಿ ಬಿಟ್ಟಿದೆ. ಕುಟುಂಬದವರನ್ನು ಸೇರಿಕೊಳ್ಳುತ್ತೇನೆಂಬ ಸಂತೋಷ ಒಂದೆಡೆ ಇದ್ದರೆ, ನನ್ನವಳು ಮುನಿಸಿಕೊಂಡು ಕಣ್ಣ ಮುಚ್ಚಾಲೆಯಾಟ ಆಡುತ್ತಿದ್ದಾಳೆ ಅನ್ನುವ ಬೇಸರ ಕೂಡಾ ಇನ್ನೊಂದೆಡೆ. ಹಾಗೆಯೇ, ನನ್ನಾತ್ಮ ಬಂಧು ಜೊತೆಯಿಲ್ಲ ಅನ್ನೋ ಕೊರಗು ಮತ್ತೊಂದೆಡೆ.
ನೋವು-ನಲಿವಿನ ದ್ವಂದ್ವದ ನಡುವೆಯೇ ಮನೆ ಕಡೆಗೆ ಹೆಜ್ಜೆ ಇಡುತ್ತಿದ್ದೇನೆ. ಅತ್ತ ಮಲೆನಾಡೂ ಅಲ್ಲದ, ಇತ್ತ ಬಯಲು ಸೀಮೆಯೂ ಅಲ್ಲದ ನನ್ನೂರಿನ ಹಾದಿಯಲ್ಲಿ ಪಯಣಿಸುವುದೇ ಒಂದು ವಿಶಿಷ್ಟ ಅನುಭೂತಿ. ಹುಬ್ಬಳ್ಳಿ-ಕುಮಟಾ ಮಾರ್ಗದ ಹೆದ್ದಾರಿಯ ಅಕ್ಕಪಕ್ಕದ ಸಾಲು ಸಾಲು ಮರಗಳು ಕಣ್ಮನಗಳನ್ನು ತಣಿಸುತ್ತವೆ. ಒಂದೊಂದು ಮರಗಳು ಮುಗಿಲನ್ನೆ ಮುತ್ತಿಕ್ಕಿದಂತೆ ಭಾಸವಾಗುತ್ತವೆ. ಹಚ್ಚ-ಹಸಿರಿನ ಕಾನನದ ನಡುವೆ, ಏರು-ತಗ್ಗುಗಳನ್ನು ದಾಟುತ್ತ ಏದುಸಿರು ಬಿಟ್ಟು ಸಾಗುವ ಬಸ್ನ ಮೇಲಿನ ಪಯಣ ವರ್ಣನಾತೀತ. ಅದು ಕೇವಲ ಅನುಭವಕ್ಕೆ ಮಾತ್ರ ಸೀಮಿತಿವೇನೋ...!
ನನ್ನೂರು ಕುಮಟಾ ಸಮೀಪಿಸುತ್ತಿದ್ದಂತೆ ಆ ನೆಲದ ಮಣ್ಣಿನ ಘಮ ತಂಗಾಳಿಯಲ್ಲಿ ಬೆರೆತು ಮೈ-ಮನವೆಲ್ಲ ಆವರಿಸಿಬಿಡುತ್ತದೆ. ಅರೆ ಕ್ಷಣದಲ್ಲಿ ನನ್ನ ಜೀವನದಿ ಅಘನಾಶಿನಿ ತನ್ನೆರಡು ತೋಳುಗಳನ್ನು ಚಾಚಿ ತಬ್ಬಿಕೊಳ್ಳುವಂತೆ ದೂರದಿಂದಲೇ ಸ್ವಾಗತಿಸುತ್ತಾಳೆ. ಇವೆಲ್ಲವನ್ನು ಸುಮ್ಮನೇ ನೋಡುತ್ತ, ಅನುಭವಿಸುತ್ತ ಕಣ್ಮುಚ್ಚಿಕೊಂಡು ಬಿಡುತ್ತೇನೆ. ಅಮ್ಮನ ಮಡಿಲಲ್ಲಿ ಹಾಲುಗಲ್ಲದ ಹಸುಗೂಸು ಪವಡಿಸಿದಂತೆ...! ತಾದಾತ್ಮತೆಯಿಂದ ಗಟ್ಟಿಯಾಗಿ ಉಸಿರೆಳೆದುಕೊಂಡು ಭಾವ ಪರಾಕಾಷ್ಠೆಗೆ ಜಾರಿ ಬಿಡುತ್ತೇನೆ.
ಇದು ಪ್ರತಿ ಬಾರಿ ಊರಿಗೆ ಹೋಗುವಾಗ ಆಗುವ ಸಾಮಾನ್ಯ ಭಾವಾನುಭವ. ಆದರೆ, ಈ ಬಾರಿ ಆ ಭಾವಕ್ಕೆ ನನ್ನವಳು ಜೊತೆಯಾಗಿ ಇನ್ನಷ್ಟು ಕಿಚ್ಚು ಹಚ್ಚಿಸುತ್ತಾಳೆ ಎಂದು ಕೊಂಡಿದ್ದೆ. ಆದರೆ, ಅವಳು ಕಳೆದ ಹದಿನೈದು ದಿನಗಳಿಂದ ಯಾಕೋ ಮುನಿಸಿಕೊಂಡಿದ್ದು, ಬರಲೊಲ್ಲೆ ಎನ್ನುತ್ತಿದ್ದಾಳಂತೆ. ಆದರೂ.... ಆಗೊಮ್ಮೆ, ಈಗೊಮ್ಮೆ ಎಂದು ಬಂದು ಹೋಗುತ್ತಿದ್ದಾಳೆನ್ನುವ ಅಮ್ಮನ ನುಡಿ ತುಸು ಸಾಂತ್ವನ ತಂದಿದೆ.
ಪ್ರತಿ ಬಾರಿ ಜೂನ್ ಅಂತ್ಯದ ಸಮಯಕ್ಕೆ ನಾ ನನ್ನೂರಿಗೆ ಕಾಲಿಡುತ್ತಿದ್ದೆ. ಈ ಬಾರಿ ಹೋಗಲಿಲ್ಲ ಎನ್ನುವ ಕಾರಣಕ್ಕೆ `ನನ್ನವಳು' ಮುನಿಸಿಕೊಂಡಿರಬಹುದು ಎಂದು ಭಾವಿಸಿದ್ದೇನೆ. ಇನಿಯನ ವಿರಹದ ತಾಪದಲ್ಲಿ ನೊಂದು ಬೆಂದ ಅವಳು, ಇನ್ನಿಲ್ಲದಂತೆ ಬಗೆ ಬಗೆಯಾಗಿ ಪರಿತಪಿಸುತ್ತಿರಬಹುದು. ವಿರಹದ ತಾಪದಿಂದಾಗಿಯೇ ಅವಳಲ್ಲಿರುವ 'ಜೀವ ಜಲ'ವೆಲ್ಲ ಬತ್ತಿ ಹೋಗಿದೆ ಎಂದೆನಿಸುತ್ತಿದೆ. ಹುಚ್ಚು ಹುಡುಗನ ತೋಳ ತೆಕ್ಕೆಯಲ್ಲಿ ಬಂಧಿಯಾದಾಗಲಾದರೂ ಅವಳು ತನ್ನ 'ನಿಜ ಸ್ವರೂಪ' ಪ್ರದಶರ್ಿಸಲಿ. ಭೋರ್ಗರೆದು ಅತ್ತು ಕರೆಯಲಿ. ಅವಳ ಕ(ಪ)ಣ್ಣೀರ ಧಾರೆಯಲಿ ನಾನು ತೋಯ್ದು ತೊಪ್ಪೆಯಾಗಲಿ.
ಹಾಗೆಯೇ, ಸಣ್ಣಗೆ ನೆಗಡಿಯಾಗಲಿ... ಅರೆ ಬರೆಯಾಗಿ ಮೈ ಬೆಚ್ಚಗಾಗಲಿ.... ಹಂಡೆಯಲ್ಲಿ ಅಮ್ಮ ಕಾಯಿಸಿಟ್ಟ ಬಿಸಿ ನೀರು ನನ್ನ ಮೈ ಮೇಲೆ ಬೀಳಲಿ... ಅರವತ್ಮೂರು ದಿನಗಳ ನಂತರ ನನ್ನೂರಿಗೆ ಇಟ್ಟ ಪುಟ್ಟ ಹೆಜ್ಜೆ ಬದುಕಿನ ಸಾರ್ಥಕ್ಯತೆಗೆ ಒಂದು ಮುನ್ನುಡಿ ಬರೆಯಲಿ....
ಆತ್ಮ ಬಂಧುವಿನ ವಿರಹದಲಿ, ಮಳೆ ಹುಡುಗಿಯಲಿ ನೆನಪಲ್ಲಿ... ನನ್ನೂರ ಕಡೆ ಪಯಣ....!
-ನಾಗರಾಜ್ .ಬಿ.ಎನ್ 

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆಪವ.....

ಅಲ್ಲಿ ನೀರವ ಮೌನ ತಾಂಡವವಾಡುತ್ತಿತ್ತು. ಎದುರಿನ ಗೋಡೆಗೆ ನೇತು ಹಾಕಿದ್ದ ಗಡಿಯಾರವನ್ನೊಮ್ಮೆ ತಲೆ ಎತ್ತಿ ನೋಡಿದೆ. ಗಂಟೆ ಆಗಲೇ ರಾತ್ರಿ 12.35! ಎದುರಿಗೆ ಕುಳಿತಿದ್ದ ಸ್ನೇಹಿತನ ಕಣ್ಣಿಂದ ನೀರು ಒಂದೇ ಸಮನೆ ಧರಾಕಾರವಾಗಿ ಸುರಿಯುತ್ತಿತ್ತು. ನನ್ನನ್ನು ದೃಷ್ಟಿಯಿಟ್ಟು ನೋಡಲಾರದೆ ಆತ ತಲೆ ತಗ್ಗಿಸಿ ಅಳುತ್ತಿದ್ದ. ಅವನಲ್ಲಿ ಏನೋ ಚಡಪಡಿಕೆ... ಏನೋ ಹೇಳಬೇಕೆಂದು ಬಯಸಿ, ಹೇಳಲಾಗದೆ ನಿಟ್ಟುಸಿರುಡುತ್ತಿದ್ದ. ಅಸಹಾಯಕನಾಗಿ ತನ್ನಲ್ಲಿರುವ ನೋವನ್ನು ಹೊರಹಾಕಲಾಗದೆ ತಾನೇ ಬೇಯುತ್ತಿದ್ದನು. ಅವನ ನರಳಾಟದ ವೇದನೆ ಸಹಿಸದೆ ಮೌನವನ್ನು ಸೀಳುತ್ತ, ಯಾಕೀತರ...? ಏನಾಯ್ತು ಹೇಳು... ಸ್ನೇಹಿತ!' ತಣ್ಣನೆ ಕೇಳಿದೆ. ಒತ್ತರಿಸಿ ಬರುವ ದುಃಖವನ್ನು ತಡೆಯುತ್ತ... ಬಾಚಿ ತಬ್ಬಿಕೊಂಡನು!

ಕೋಣೆಯಲ್ಲಿ ಸಣ್ಣಗೆ ಉರಿಯುತ್ತಿರುವ ದೀಪವನ್ನು ನೋಡಿ ಆತ, 'ಕಣ್ಣು ಚುಚ್ಚಿದಂತಾಗುತ್ತಿದೆ, ಪ್ಲೀಸ್, ದಯವಿಟ್ಟು ದೀಪ ಆರಿಸುತ್ತೀಯಾ' ಎಂದು ವಿನಂತಿಸಿದ. ಮರುಮಾತನಾಡದೆ ಅವನ ಮನಸ್ಥಿತಿಯನ್ನು ಅರಿತು ದೀಪ ಆರಿಸಿ, ಅವನ ಪಕ್ಕದಲ್ಲಿಯೇ ಬಂದು ಕುಳಿತೆ. ಕೋಣೆಯ ತುಂಬ ಕತ್ತಲು, ಅದರದೆ ಸಾಮ್ರಾಜ್ಯ. ಅದಕ್ಕೆ ಜೊತೆಯೆಂಬಂತೆ ನಿಶ್ಯಬ್ದ.... ನೀರವ ಮೌನ!!
ಆದರೆ, ಕಾರ್ಗತ್ತಲಲ್ಲಿ ನನ್ನ ಸ್ನೇಹಿತನ ಉಚ್ಛ್ವಾಸ ಮತ್ತು ನಿಶ್ವಾಸದ ಸದ್ದು ಮಾತ್ರ ಕೇಳಿ ಬರುತ್ತಿತ್ತು. ಆತನ ಈ ಏರಿಳಿತದ ಉಸಿರಿನ ಹೊರತು, ಮತ್ತಿನ್ಯಾವ ಸದ್ದು ಇರಲಿಲ್ಲ. ಕ್ಷಣ ಕಾಲ ಆತನ ಬಿಸಿಯುಸಿರು ತಣ್ಣಗಿನ ಕೋಣೆಯನ್ನೆಲ್ಲ ವ್ಯಾಪಿಸಿಬಿಟ್ಟಿತು.
ಇದೇ ಕತ್ತಲೆಗಾಗಿ ತವಕಿಸುತ್ತಿದ್ದವನಂತೆ.... ಮಡುಗಟ್ಟಿದ ಹೃದಯದಿಂದ `ರಾಜ' ಎಂದು ಮೆಲ್ಲನೆ ಉಸುರಿದ. ಮಾತು ಕೇಳಿತು ಎಂಬಂತೆ, 'ಹೇಳೋ' ಎಂದೆ. ಹುಣ್ಣಿಮೆಗೆ ಸಾಗರ ಭೋರ್ಗರೆವಂತೆ, ಒಮ್ಮೆಲೆ ದುಃಖ ಉಮ್ಮಳಿಸಿ, ಅದನ್ನು ಬಿಗಿಹಿಡಿಯುವ ಪ್ರಯತ್ನ ಮಾಡುತ್ತಲೇ, `ಅವಳು ನನ್ನನ್ನು ಬಿಟ್ಟು ಹೋದಳೋ, ಅವಳಿಗೆ ನಾನು ಬೇಡವಂತೆ. ಮನೆಯಲ್ಲಿ ಒಪ್ಪುತ್ತಿಲ್ಲವಂತೆ. ಅವಳನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲವೋ.. ಎಂದನು. ಹಲವು ವರ್ಷಗಳಿಂದ ಆರಾಧಿಸುತ್ತ ಬಂದಿದ್ದ ಶ್ರದ್ಧೆಯ ಪ್ರೀತಿ ಅಂದು ಅವನಿಂದ ದೂರವಾಗಿತ್ತು. ಪ್ರೀತಿಯ ಗೋಪುರ ಏಕಾಏಕಿ ಕುಸಿದು ಬಿದಿದ್ದು, ಅವನನ್ನು ಹುಚ್ಚನನ್ನಾಗಿಸಿತ್ತು. ಆಗಲೇ ಎದೆಯಲ್ಲಿ ಮಡುಗಟ್ಟಿದ ದುಃಖ ಕಟ್ಟೆ ಒಡೆದಿತ್ತು. ಬಿಕ್ಕಿಬಿಕ್ಕಿ ಒಂದೇ ಸಮನೇ ಅಳುತ್ತಿದ್ದನು. ಅವನನ್ನು ಸಮಾಧಿನಿಸುವ ಪ್ರಯತ್ನ ಮಾಡದೆ, ಅವನನ್ನೆ ನೋಡುತ್ತ ಕುಳಿತೆ. ಸಮಾಧಾನದ ಮಾತು ಕೂಡಾ ತೀರಾ ಕಠೋರ ಎಂದೆನಿಸಿ ಬಿಡಬಹುದಾದ ಸೂಕ್ಷ್ಮ ಕ್ಷಣವದು. ಪೂಜನೀಯ ಪ್ರೀತಿ ಕಳೆದುಕೊಂಡ ಸ್ನೇಹಿತನ ದುಃಖದ ತೀವೃತೆ ಮಲೆನಾಡಿನ ರಭಸವನ್ನು ಮೀರಿಸುವಂತಿತ್ತು.
ಪ್ರೀತಿಯ ಆರಂಭಕ್ಕೆ ಒಂದು ನಿಧರ್ಿಷ್ಟ ದಿನವದ್ದಂತೆ, ಅದರ ಸಾವಿಗೆ ಇಂತಹದ್ದೆ ದಿನ ಎಂದು ಹೇಳಲಾಗದು. ಏಕೆಂದರೆ, ಅದೊಂದು ದೀರ್ಘ ಪ್ರಕ್ರಿಯೆ. ಹಾಗೂ ವ್ಯವಸ್ಥಿತ ಹೊಂಚು. ಪ್ರೀತಿ ಹುಟ್ಟಿದ ದಿನವನ್ನು ಮನದ ಮೂಲೆಯೊಂದರಲ್ಲಿ ಎಲ್ಲೋ ಬರಿದಿಟ್ಟು, ವರ್ಷದ ನಂತರ ಅದನ್ನು ಕೆದಕಿದರೂ ಅದು ಒಮ್ಮೆಲೆ ದೊರೆತು ಬಿಡುತ್ತದೆ. ಆದರೆ ಪ್ರೀತಿ ಕಳೆದು ಹೋದ ಬಗ್ಗೆ ಇದೇ ದಿನ ಹೀಗಾಯಿತು ಎಂದು ಯಾರಿಂದಲೂ ಹೇಳಲು ಬಹುಶಃ ಅಸಾಧ್ಯ. ಅಪ್ಪ, ಅಮ್ಮ, ಜಾತಿ ಎಂಬುದು ಪ್ರೀತಿಯನ್ನು ಧಿಕ್ಕರಿಸಿ ಹೊರಡುವ ಹೃದಯಗಳಾಡುವ ಮಾತು. ಆ ಹೃದಯಕ್ಕೆ ನಿಜ ಪ್ರೀತಿಯ ಅರ್ಥ ಗೊತ್ತಿಲ್ಲ ಎಂದರೂ ತಪ್ಪಾಗಲಾರದು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಇದ್ಯಾವುದು ಕೂಡಾ ಅವರು ತಮ್ಮ ತಪ್ಪಿಗೆ ಕೊಡುತ್ತಿರುವ ಕಾರಣಗಳಲ್ಲ. ತಾವು ಮಾಡಿದ್ದೇ ಸರಿ ಎಂದು ತಮ್ಮನ್ನು ಸಮಥರ್ಿಸಿಕೊಳ್ಳುವುದಕ್ಕೆ ನೀಡುವ ಸಮಜಾಯಿಷಿಗಳು. ಇತ್ತ ಹುಡುಗ/ಹುಡುಗಿ ಪ್ರೀತಿಸುತ್ತೇನೆ ಎಂದು ಹೇಳುವ ಸಂದರ್ಭದಲ್ಲಿ ಅತ್ತ, ಅಪ್ಪ, ಅಮ್ಮ ತನ್ನ ಮಗ/ಮಗಳ ಬರುವಿಕೆಗಾಗಿ ಕಾದು ಕುಳಿತಿರುತ್ತಾರೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂಬ ವಿಷಯ ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಹೆತ್ತವರ ನೆನಪು ಬಂದರೆ ನಿಜಕ್ಕೂ ಅದು ಗೌರವಯುತ. ಅಂತಹ ಯುವ ಹೃದಯಗಳನ್ನು ಗೌರವಿಸಿ, ಬೆಂಬಲಿಸೋಣ. ಆದರೆ, ಒಮ್ಮಿಂದೊಮ್ಮೆಲೆ ಇದ್ದಕ್ಕಿದ್ದಂತೆ `ಈ ಸಂಬಂಧ ಇನ್ನು ಮುಂದುವರಿಸಲು ಅಸಾಧ್ಯ, ದಯವಿಟ್ಟು ನನ್ನನ್ನು ಮರೆತು ಬಿಡು' ಎಂದು ಹೇಳುವುದು ನಿಜಕ್ಕೂ ಒಂದು ಹೀನ ಕೃತ್ಯ. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆದವರು ಬೇಡವಾಗುತ್ತಾರೆ... ಎಲ್ಲ ನೋವಿಗೆ ದನಿಯಾಗಿ ಸ್ಪಂದಿಸಿದವರು ಕ್ಷುಲ್ಲಕ ಕಾರಣಕ್ಕೆ ಹೊರೆಯಾಗಿ ಬಿಡುತ್ತಾರೆ... ಆ ವಿಕೃತ ಹೃದಯದವರಿಗೆ ಅಪ್ಪ-ಅಮ್ಮನನ್ನು ಒಪ್ಪಿಸುವುದು ಕಷ್ಟವೆನಿಸುವುದಕ್ಕಿಂತ, ಅದರ ಅಗತ್ಯವಿಲ್ಲ ಎಂದೆನಿಸಿ ಬಿಡುತ್ತವೆ.
ನಿಜ ಪ್ರೀತಿಯ ಸಂಬಂಧ ಶ್ರದ್ಧೆ ಬೇಡುತ್ತ, ಪರಸ್ಪರರ ಬಗ್ಗೆ ನಂಬಿಕೆ ವಿಶ್ವಾಸವನ್ನು ಬಯಸುತ್ತವೆ. ಈ ಶ್ರದ್ಧೆ, ನಂಬಿಕೆ ಮತ್ತು ವಿಶ್ವಾಸ ದಿಢೀರ ಎಂದು ಒಮ್ಮೆಲೆ ಬೆಳೆದು ನಿಲ್ಲುವಂತಹದ್ದಲ್ಲ. ಸಾಕಷ್ಟು ಸಮಯ ಕೇಳುತ್ತ, ದಿನ ಕಳೆದಂತೆ ಪಕ್ವಗೊಳ್ಳುತ್ತ ಸಾಗುತ್ತವೆ. ಆದರೆ ಇಂದಿನ ಧಾವಂತದ ಯುವಗದಲ್ಲಿ ಪ್ರೀತಿ ತನ್ನ ಸೊಬಗನ್ನು ಕಳೆದುಕೊಂಡು ಅರ್ಥಹೀನವಾಗುತ್ತ ಯಾಂತ್ರಿಕವಾಗಿ ಸಾಗುತ್ತಿವೆ. ಶ್ರದ್ಧೆಯಿಲ್ಲದ ಪ್ರೀತಿ, ಸಂಬಂಧದಲ್ಲಿ ಇದ್ದಕ್ಕಿದ್ದಂತೆ ಬಿರುಕು ಮೂಡಿ ಬಿಡುತ್ತವೆ. ಅವನೇ ನನ್ನ ಪ್ರಪಂಚ ಎಂದು ನವ-ನವೀನ ಕನಸು ಕಾಣುತ್ತ ಬದುಕು ನಡೆಸುತ್ತಿದ್ದ ಹುಡುಗಿಗೆ, ಇನ್ನೊಂದು ಪ್ರಪಂಚ ರಂಗು ರಂಗಾಗಿ ಕಾಣುತ್ತವೆ. ಇಷ್ಟು ದಿನ ಜೊತೆಯಿದ್ದು, ಉಸಿರಲ್ಲಿ ಉಸಿರಾದ ಹುಡುಗ ಬಣ್ಣ ಕಳೆದುಕೊಂಡು ಬಿಳಿಚಿ ಕೊಂಡಂತೆ ಭಾಸವಾಗುತ್ತಾನೆ. ಧುತ್ತೆಂದು ಅಪ್ಪ, ಅಮ್ಮ, ಜಾತಿಯ ಸಬೂಬು ಅಲ್ಲಿ ಬೇರು ಬಿಟ್ಟಿರುತ್ತದೆ. ಹೀಗೆ ಸುಳ್ಳೇ ಹುಟ್ಟಿಕೊಳ್ಳುವ ತಳುಕು ಪ್ರೀತಿ ಸುಮ್ಮನೆ ಬಿಡಿಸಿಕೊಂಡು ಓಡುವ ಹುನ್ನಾರ ನಡೆಸುತ್ತಿರುತ್ತವೆ. ಆದರೆ, ನಿಜವಾದ ಪ್ರೀತಿ ಹೇಗಾದರೂ ಸೈ, ಎಲ್ಲರನ್ನು ಎದುರಿಸಿ ಒಪ್ಪಿಸೋಣ ಎನ್ನುತ್ತಿರುತ್ತದೆ. ಪ್ರೀತಿಯಿಂದ ವಿಮುಖವಾದ ಜೀವ ನರಳುತ್ತ, ತನ್ನ ಬದುಕನ್ನು ಹಾಳುಗೆಡುವಿ ತಾನು ಉಳಿದು ಹೋದದಕ್ಕೆ ಕಾರಣ ಹುಡುಕಿ, ಕೆದಕಿ ಸೋಲುತ್ತ, ತನ್ನ ಬಗ್ಗೆ ಒಂದು ವಿಧವಾದ ಕೀಳರಮೆ ಬೆಳಸಿಕೊಂಡು, ಕಾಣದ ಕತ್ತಲೆಗಾಗಿ ಹಂಬಲಿಸುತ್ತಿರುತ್ತವೆ. ವರ್ಷಗಟ್ಟಲೇ ಶ್ರದ್ಧಾ ಭಕ್ತಿಯಿಂದ ಪ್ರೀತಿಯಿಂದ ನಿಮರ್ಿಸಿದ ಪ್ರೀತಿಯ ಕನಸಿನ ಗೋಪುರ ಕೆಲವೇ ದಿನಗಳಲ್ಲಿ ನೆಲಸಮವಾಗಿರುತ್ತವೆ.
ನನ್ನಷ್ಟಕ್ಕೆ ನಾನು ಹೀಗೆಲ್ಲ ಏನೇನೋ ಯೋಚನೆ ಮಾಡುತ್ತ ಕುಳಿತಿದ್ದೆ, ಅತ್ತ ಸ್ನೇಹಿತನ ಬಿಕ್ಕಳಿಕೆ ಒಂದೇ ಸಮನೆ ಕೇಳುತಲಿತ್ತು. ಆತ ಅತ್ತು ಅತ್ತು ಕಣ್ಣಿರಾಗಿದ್ದ. ನಾನಿನ್ನು ಮೇಲೇಳಲಾರೆ ಎಂದು ಬದುಕು ಕಳೆದುಕೊಂಡವರಂತೆ ರೋಧಿಸುತ್ತಿದ್ದ. ಅವನ ಮುಂಗೈಯನ್ನು ಅಂಗೈಯಲ್ಲಿಟ್ಟು ಹೇಳಿದೆ, `ಗೆಳೆಯಾ, ಆದದ್ದೆಲ್ಲ ಒಳ್ಳೆಯದಕ್ಕೆ ಅಂದುಕೋ. ಒಂದು ಸುಂದರವಾದ ಬಾಳ್ವೆ ನಡೆಸು. ಅವಳ ನೆನಪು ಬಾರದಂತೆ ಬದುಕಿ ಬಿಡು. ಇಷ್ಟು ವರ್ಷಗಳ ಕಾಲ ನಿಮ್ಮಿಬ್ಬರಲ್ಲಿದ್ದದ್ದು ಪ್ರೀತಿಯಲ್ಲ. ಅದೊಂದು ಆಕರ್ಷಣೆಯಷ್ಟೆ. ಕೇವಲ ಸೆಳೆತ. ಪ್ರೀತಿ ಹೀಗೆ ಇರೋದಿಲ್ಲ. ಅದು ಯಾವತ್ತೂ ಪರಸ್ಪರ ಒಬ್ಬರಿಗೊಬ್ಬರಿಗೆ ಸ್ಪೂತರ್ಿಯಾಗಿರುತ್ತವೆ. ಅಲ್ಲಿ ಸೋಲು ಎಂಬುದೇ ಇರುವುದಿಲ್ಲ. ಅದು ಸೋಲಲು ಬಿಡದ ಅದಮ್ಯ ಶಕ್ತಿ. ನಿನ್ನ ಬದುಕಿನ ಬಗ್ಗೆ ನಿನಗೆ ಅತೀವ ಶ್ರದ್ಧೆಯಿರಲಿ, ನಿನ್ನ ಸ್ನೇಹಿತನಾಗಿ ಸದಾ ನಿನ್ನ ಜೊತೆಯಿರುತ್ತೇನೆ, ನಿನ್ನ ನೋವಿಗೆ ದನಿಯಾಗಿ. ಕಿವಿಯಾಗಿ'.
ಮಾತು ಬರದವನಾಗಿ ತನ್ನೆಲ್ಲ ಚೈತನ್ಯ ಕಳೆದುಕೊಂಡಿದ್ದ ಆತ. ನನ್ನ ಮಡಿಲಿಗೆ ಕುಸಿದಿದ್ದ. ನೂರ್ಮಡಿಸಿದ್ದ ದುಃಖವನ್ನು ನುಂಗಿಕೊಳ್ಳುತ್ತ, ನನ್ನನ್ನು ನೋಡದೆ ಕೇಳಿದ, `ಅವಳು ನನ್ನನ್ನು ಯಾರಿಗೋಸ್ಕರ, ಯಾಕಾಗಿ ತ್ಯಾಗ ಮಾಡಿದಳು..?'. ಮನಸಲ್ಲೆ ನಕ್ಕು ಉತ್ತರಿಸಿದೆ, `ಅಸಲಿಗೆ ತ್ಯಾಗ ಅನ್ನುವ ವಿಚಾರ ಪ್ರೀತಿಯಲ್ಲಿಲ್ಲ. ಪ್ರೀತಿಯನ್ನು ಧಿಕ್ಕರಿಸಿ ಹೊರ ನಡೆಯುವವರು, ತಮಗೆ ಇನ್ನೂ ಉತ್ತಮ ಎನ್ನುವ ಆಯ್ಕೆಯ ಕಡೆ ಪಯಣ ಬೆಳೆಸಿರುತ್ತಾರೆ. ದೂರಾಗುವ ಮುನ್ನ ತಮ್ಮನ್ನು ತಾವು ಸಮಥರ್ಿಸಿಕೊಳ್ಳಲು, ಅವರು ಉಪಯೋಗಿಸುವ ಸಮರ್ಥ ಅಸ್ತ್ರವೇ ತ್ಯಾಗ. ಕಾಣದ ಬದುಕಿಗೆ ಯಾರು ಕೂಡಾ ಕೈಯಲ್ಲಿರುವ ಸುಂದರ ಬದುಕನ್ನು ತ್ಯಾಗ ಮಾಡುವುದಿಲ್ಲ. ಅದು ಯಾರೊಬ್ಬರ ಬದುಕಿನ ವಿಚಾರದಲ್ಲಿ ಸಾಧ್ಯವೂ ಇಲ್ಲ'.
ಅತ್ತು ಅತ್ತು ಸೋತಿದ್ದ ಗೆಳೆಯ ಅರೆ ಕ್ಷಣದಲ್ಲಿ ನಿದ್ರೆಗೆ ಜಾರಿದ್ದ. ಯಾಕೋ ಅರಿವಿಲ್ಲದೆ ನಾನು ಕೂಡಾ ತುಸು ದುಃಖಿತನಾದೆ. ಮನಸ್ಸು ಪ್ರಕ್ಷುಬ್ಧವಾಗಿತ್ತು. ಕಣ್ಣಲ್ಲಿ ನೀರು ತೊಟ್ಟಿಕ್ಕುತ್ತಿತ್ತು. ಕಿಟಕಿಯಾಚೆ ಒಮ್ಮೆ ದಿಟ್ಟಿಸಿದೆ.. ಯಾವುದೋ ಹಿಂದಿನ ನೆನಪು ಮರುಕಳಿಸಿದಂತಾಗಿ ಕಾಡಿದವು...
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆಪವ.....
-ನಾಗರಾಜ್ ಬಿ.ಎನ್.

ಯಾಕೆ ಹೀಗೆ.....?

ಬದುಕೇ ಒಂದು ಭ್ರಮೆ. ವಿಚಿತ್ರ. ನಾನಾ ತಿರುವುಗಳು. ಇಲ್ಲಿ ನಿರೀಕ್ಷಿತ ಫಲಕ್ಕಿಂತ ಅನಿರೀಕ್ಷಿತ ಅವಘಡಗಳದ್ದೇ ಹೆಚ್ಚು ಪಾರುಪತ್ಯ. ಸಮಚಿತ್ತದ ತಾದಾತ್ಮತೆಯಿಂದ ಬದುಕು ಮುನ್ನಡೆಸಿದರೆ ಎಲ್ಲವೂ ಸರಾಗ... ಹಾಗೆ ನಿರಾಳ...!!
ಎಲ್ಲ ಮನಸ್ಸುಗಳು ಒಂದೇ ತೆರನಾದ ಭಾವನೆಯನ್ನು ಸ್ಫುರಿಸುವುದಿಲ್ಲ. ಒಬ್ಬನದು ಭಾವುಕ ಮನಸ್ಸಿದ್ದರೆ, ಇನ್ನೊಬ್ಬನದು ಕಟುಕ ಮನಸ್ಸಾಗಿರುತ್ತದೆ. ಅದು ಅವರವರ ಸಂಸ್ಕಾರ ಹಾಗೂ ಬೆಳೆದು ಬಂದ ವಾತಾವರಣದ ಮೇಲೆ ನಿರ್ಧರಿತವಾಗುತ್ತದೆ. ಆದರೆ, ಕೆಲವು ಬಾರಿ ಉದ್ದೇಶಪೂರ್ವಕವಾಗಿ ಮನಸ್ಸಿನ ದಾರಿಯನ್ನೂ ತಪ್ಪಿಸುವವರೂ ಇರುತ್ತಾರೆ... ಅದು ಬೇರೆ ಮಾತು..!!
ಪಾಪ... ಆ ಮನಸ್ಸಿನದ್ದು ಏನೂ ತಪ್ಪಿರುವುದಿಲ್ಲ. ಅದು ಎಲ್ಲರ ಜೊತೆಯೂ ನಗು ನಗುತ್ತಲೇ ಇರುತ್ತದೆ. ಅದಕ್ಕೆ ಗಂಡು-ಹೆಣ್ಣು, ಬಡವ-ಶ್ರೀಮಂತ, ಜಾತಿ-ಧರ್ಮ ಎನ್ನುವ ಯಾವೊಂದು ಭೇದವೂ ಇರುವುದಿಲ್ಲ. ಆದರೂ ಕೆಲವರು ಅದನ್ನು ತಪ್ಪಿತಸ್ಥ ಎನ್ನುವ ಸ್ಥಾನಕ್ಕೆ ನೂಕಿ ಬಿಡುತ್ತಾರೆ. ವಿವೇಚನಾ ರಹಿತ ವ್ಯಾಖ್ಯಾನ ನೀಡುತ್ತ, ಅಂತೆ-ಕಂತೆಗಳ ಗಂಟು-ಮೂಟೆಯನ್ನೇ ನಿಜ ಮಾಡಲು ಹೋಗುತ್ತಾರೆ. ಕಪೋಲಕಲ್ಪಿತ ನುಡಿಗಳು ಆ ಸಂದರ್ಭದಲ್ಲಿ ವಿಜ್ರಂಭಿಸಿ... ಝೇಂಕರಿಸುತ್ತದೆ...!
ಹಾಗಾದರೆ, ಆ ಮನಸ್ಸಿಗೆ 'ತಪ್ಪಿತಸ್ಥ' ಎಂದು ಹೆಸರು ಬರಲು ಕಾರಣವೇನು. ಬಹುಶಃ ಎಲ್ಲರೂ ಒಂದೇ ಎಂದು ಪ್ರೀತಿಯಿಂದ ಮಾತನಾಡುತ್ತಿದ್ದುದ್ದು ಕಾರಣವಾಗಿರಬಹುದು...! ಅಥವಾ, ಪ್ರೀತಿಯ ಸಹಬಾಳ್ವೆ ಸಹಿಸದ ಅಸೂಯೆಯೇ ಕಾರಣವಾಗಿರಬಹುದು...! ಅಥವಾ, ಎಲ್ಲರೊಳಗೊಂದಾದ ಮನಸ್ಸಿನ ಭಾವ ಅರ್ಥ ಮಾಡಿಕೊಳ್ಳದ ಸಂಕುಚಿತ ಮನಸ್ಸಿನ ಮೇಲಾಟ ಕಾರಣವಾಗಬಹುದು...! ಅಥವಾ, ತಪ್ಪಾಗಿ ಅರ್ಥೈಸಿಕೊಂಡು ಗಾಳಿ ಮಾತು ಎಬ್ಬಿಸಿದ ಇನ್ನೊಂದು ಮನಸ್ಸಿನ ತೊಳಲಾಟವೂ ಕಾರಣವಾಗಿರಬಹುದು....!
ಮನುಜ ಜಾತಿ ತಾನೊಂದೆ ವಲಂ... ಎಂದು ಅರ್ಥವಾಗುವುದು ಯಾವಾಗ...? ಮನಸ್ಸು-ಮನಸ್ಸುಗಳ ನಡುವೆ ನಿರ್ಮಲ ಪ್ರೀತಿ ಅರಳುವುದು ಯಾವಾಗ...
-ನಾಗರಾಜ್  ಬಿ.ಎನ್. 

ಭಾನುವಾರ, ನವೆಂಬರ್ 15, 2015

ಮೂಕ ಹಕ್ಕಿಯು ಹಾಡುತ್ತಿದೆ...!

ಅದೊಂದು ಕಲ್ಪನಾತೀತ ಭಾವ. ನೋವಿದೆ, ನಲಿವಿದೆ... ನಿರೀಕ್ಷೆಗೂ ಮೀರಿದ ಯಾತನೆಯಿದೆ. ಅತ್ತರೆ ಎಂದೂ ಬತ್ತದ ಕಣ್ಣೀರಿನ ಪ್ರವಾಹವೇ ಇದೆ...!
ಪುಟ್ಟ ಹಕ್ಕಿಯ ಕಣ್ಣು ಕಟ್ಟಿ, ದಟ್ಟ ಕಾನನದಲ್ಲಿ ಬಿಟ್ಟು ಹಾರು ಎಂದರೆ....! ಹಾರಲು ವಿಶಾಲವಾದ ನೀಲಾಕಾಶವಿದ್ದರೂ, ಅದರ ಹರವು ಎಲ್ಲ ಮುರುಟಿ ಹೋದ ಕನಸುಗಳಾಗಿವೆ. ಆ ಕನಸಿನ ಲೋಕದೊಳಗೊಂದು ಕನವರಿಕೆಯ ಪುಟ್ಟ ಜಗತ್ತಿದೆ. ಆ ಜಗತ್ತು ಕೂಡಾ ಗಾವುದ ದೂರ. ನನ್ನ ಧ್ವನಿ ಕೇಳದಷ್ಟು ದೂರದಲ್ಲಿ ನನ್ನ ಮನಸ್ಸಿದೆ; ಮನಸ್ಸಿನ ಒಂದು ಪಿಸುಮಾತಿದೆ. ರೋಧಿಸುವ ಮನಸ್ಸಿಗೆ ಸಾಂತ್ವನ ಹೇಳುವ ಮೇಘಗಳು ಕೂಡಾ ಮುನಿಸಿಕೊಂಡಂತಿವೆ. ಜೀವಚ್ಛವವಾಗಬಾರದೆಂದು ತಿನ್ನುವ ಕಾಳು-ಕಡಿಯೂ ಕೂಡಾ, ವಿಷಯವಾಗುತ್ತಿದೆ. ಒಡಲಲ್ಲಿ ಧಗಧಗನೆ ಉರಿವ ಬೆಂಕಿ ಕಿಚ್ಚು, ಮೈ-ಮನವೆಲ್ಲ ಸುಡುತ್ತಿದೆ.
ಅನಿವಾರ್ಯತೆಗೆ ತಲೆಬಾಗಿ ಮಂಡಿಯೂರಿ ಕುಳಿತಂತಾಗಿದೆ. ದೈನ್ಯವು ಗಂಟಲಲ್ಲಿ ನೋವಾಗಿ ಕುಳಿತು, ಅಳುವೇ ತುಟಿಗೆ ಬಂದಂತಾಗಿದೆ. ಭಾವ ಪ್ರವಾಹದಲ್ಲಿ ತೋಯ್ದು, ತೊಪ್ಪೆಯಾದ ಅನುಭವ. ಕಣ್ಣೀರ ಝರಿಯು ಬಿರುಸಾಗಿ ಹರಿಯುತ್ತಿದ್ದು, ರುದ್ರ ಭಯಂಕರವೆಂದೆನಿಸುತ್ತಿದೆ.
ದಟ್ಟ ಕಾನನದಲ್ಲಿ ಒಂಟಿ ನಡಿಗೆ. ನೀರವ ಮೌನದಲ್ಲಿ, ಮೂಕ ಹಕ್ಕಿಯ ಹಾಡು. ಕಾಪಿಟ್ಟ ಮೋಡ ಕೂಡಾ ಮಾತಾಡುತ್ತಿಲ್ಲ. ಗಿಡ ಗಂಟೆಗಳ ಕೊರಳ ಗಾನವೂ ಸ್ಥಬ್ದವಾಗಿದೆ. ಭಾರವಾದ ಹೆಜ್ಜೆ ಗುರುತುಗಳು, ತರಗೆಲೆಯ ಮೇಲೂ ಅಚ್ಚೊತ್ತುತಿವೆ. ಮರದ ಮೇಲೆಲ್ಲೂ ಕೂತ ಮರಿ ಹಕ್ಕಿ, ಮುಂಜಾನೆದ್ದು ಹೋದ ತಾಯಿ ಹಕ್ಕಿಗಾಗಿ ಪರಿತಪಿಸುತ್ತಿದೆ. ಒಂಟಿತನದ ಬೇಗುದಿ ಇನ್ನೆಷ್ಟು ದಿನ...? ಬರುವ ಸುದನವನ್ನು ನೆನೆದುಕೊಂಡೇ ಕಾಲ ಕಳೆಯಬೇಕಿದೆ. ನನಸಿನಲ್ಲಿ ಆಗದ್ದನ್ನು ಕನಸಿನಲ್ಲಿ ಕಾಣಬೇಕಿದೆ. ಸಂತಸ ಪಡೆಯಬೇಕಿದೆ. ಬದುಕು ಇಷ್ಟೇನಾ....?
ನಾ ನಿನಗೆ ಬೇಡವಾಗಿರಬಹುದು, ಆದರೆ ನಿನ್ನ ಹೃದಯಕ್ಕಲ್ಲ....!