ಗುರುವಾರ, ನವೆಂಬರ್ 26, 2015

ಪುಳಕಿತನಾದೆ ನಿಮ್ಮೀ ಪ್ರೀತಿಗೆ.....
ಎಂದೂ ನಿರೀಕ್ಷಿಸದ ಕಲ್ಪನೆಗೂ ಮೀರಿದ ಕ್ಷಣ. ಶಬ್ದಗಳ ಪದಪುಂಜಗಳಲಿ ಕಟ್ಟಿ ಹಾಕಲಾಗದ ಸನ್ನವೇಶ. ಮನಸ್ಸು ಆದೃಗೊಳಿಸಿದ ಗಳಿಗೆ. ಹಾಗೆಯೇ... ನನ್ನನ್ನು ನಾನೇ ಪ್ರಶ್ನಿಸಿಕೊಂಡ ಸಮಯವೂ ಅದಾಗಿತ್ತು.
ಸಂದರ್ಭ: ಈ ಹುಚ್ಚು ಹುಡುಗನ ಜನ್ಮದಿನ....!
ಜನ್ಮದಿನ ಎಂದರೆ ಅಷ್ಟಕ್ಕಷ್ಟೇ...! ಯಾವತ್ತೂ ಅದಕ್ಕೆ ಬೆಲೆ ನೀಡಿದವನೇ ಅಲ್ಲ. ಬದಲಾಗಿ, ಈ ಜನ್ಮದಿನದ ನೆನಪಿಗೋಸ್ಕರ ಕಳೆದ ಐದು ವರ್ಷಗಳಿಂದ ಒಂದು ಅನಾಥ ಮಗುವಿನ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದೆ. ಇದಕ್ಕೆ ಸ್ಫೂರ್ತಿಯ ಸೆಲೆಯಾಗಿ, ಬೆನ್ನೆಲುಬಾಗಿ ನಿಂತವಳು ನನ್ನಾತ್ಮ ಸಹೋದರಿ...! ಪ್ರತಿ ಬಾರಿ ಜನ್ಮ ದಿನದಂದು ಆ ಪುಟ್ಟ ಮಗುವಿದ್ದಲ್ಲಿಗೆ ಹೋಗಿ, ಕುಶಲ ಕ್ಷೇಮ ವಿಚಾರಿಸಿ, ಕಣ್ತುಂಬಿಸಿಕೊಂಡು, ಅರಿವಿಲ್ಲದೆ ಕಣ್ಣಂಚನ್ನು ಒದ್ದೆ ಮಾಡಿಕೊಂಡು ಬರುತ್ತಿದ್ದೆ. ಆದರೆ, ಈ ವರ್ಷ ಆ ಭಾಗ್ಯದಿಂದ ವಂಚಿತ. ಕಾಲಚಕ್ರದ ಉರುಳಾಟದಲ್ಲಿ ಕೆಲವು ನೈಜ್ಯತೆ ನೆನಪಾಗಷ್ಟೇ ಇರುತ್ತವೆ.
ಹೊಸ ಮನೆಯ ಮೂಲೆಯೊಂದರಲ್ಲಿ ಮೊಬೈಲ್ನ್ನು ಸೈಲೆಂಟ್ ಇಟ್ಟು, ಆ ಪುಟ್ಟ ಮಗುವಿನ ನೆನಪಲ್ಲಿಯೇ ನಿದ್ದೆ ಹೋಗಿದ್ದೆ. ನಾ ಮಲಗಿದ್ದರೂ ನನ್ನ ಮೊಬೈಲ್ ಮಲಗಿಲ್ಲ. ರಾತ್ರಿಯಿಡೀ ಸ್ನೇಹಿತರ, ಹಿತೈಷಿಗಳ ಸಂದೇಶ ಸ್ವೀಕರಿಸುವುದರಲ್ಲಿಯೇ ಅದು ನಿರತವಾಗಿತ್ತು. ಮುಂಜಾನೆದ್ದು ನೋಡಿದಾಗ ಇನ್-ಬಾಕ್ಸ್ನಲ್ಲಿ 47 ಸಂದೇಶಗಳು...! 21 ಮಿಸ್ ಕಾಲ್ಗಳು...! 
ಸುಮ್ಮನೆ ನಸುನಕ್ಕಿ ನನ್ನಷ್ಟಕ್ಕೆ ನಾನಿದ್ದೆ. ಪ್ರಾಣ ಸ್ನೇಹಿತ ಡಿವಿ ನನಗೆ ಒಂದಿನಿತೂ ಸಂದೇಹ ಬರದ ರೀತಿಯಲ್ಲಿ, ಹತ್ತಿರವಿದ್ದುಕೊಂಡೇ ಜನ್ಮದಿನಾಚರಣೆಯ ಎಲ್ಲ ತಯಾರಿಯನ್ನು ನಡೆಸಿದ್ದರು. ಲಗು ಬಗೆಯಲ್ಲಿ ಸ್ನಾನ ಮಾಡಲು ಹೇಳಿ, ಸಹದ್ಯೋಗಿ ಬಸವರಾಜ ಬಂಕಾಪುರ ಅವರೊಂದಿಗೆ ಎಲ್ಲಿಗೋ ಹೋದವರು, ಬರುವಾಗ ಕೇಕ್(ಪ್ಯೂವರ್ ವೆಜ್) ಮತ್ತು ಸ್ನ್ಯಾಕ್ಸ್ ಖರೀದಿಸಿ ತಂದಿದ್ದರು. ಅಷ್ಟರಲ್ಲಾಗಲೇ, ನನ್ನೆಲ್ಲ ವೃತ್ತಿ ಬಂಧುಗಳು ಒಬ್ಬರ ಹಿಂದೊಬ್ಬರಂತೆ ಸಾಲು ಸಾಲಾಗಿ ನಮ್ಮ ಹೊಸ ಮನೆಗೆ ಆಗಮಿಸುತ್ತಿದ್ದರು. ನೋಡು ನೋಡುತ್ತಿದ್ದಂತೆ ಇಬ್ಬರಿದ್ದದ್ದು ನಾಲ್ಕಾಗಿ, ನಾಲ್ಕಿದ್ದದ್ದು ಎಂಟಾಗಿ ಕೊನೆಗೆ ಹದಿನಾರರ ಸಂಖ್ಯೆಗೆ ಬಂದು ತಲುಪಿತ್ತು.
ಎದುರಗಡೆ ಕೇಕ್... ಅದರ ಮೇಲೊಂದು ಮಿಂಚಿನ ಸುರಬತ್ತಿ...! ಕೈಯ್ಯಲ್ಲಿ ಬೆಂಕಿ ಪೊಟ್ಟಣ ಕೊಟ್ಟ ಡಿವಿ, ಸುರಬತ್ತಿ ಹಚ್ಚಲು ಹೇಳಿದರು. ಇವೆಲ್ಲವೂ ನನಗೆ ಹೊಸ ಅನುಭವ. ಒಂದು ಬಾರಿ ಗೀರಿದ ಬೆಂಕಿ ಕಡ್ಡಿ, ಹೇಗೆ ಬೆಂಕಿಯಾಯಿತೋ ಹಾಗೆಯೇ ನಂದಿ ಹೋಯಿತು.. ಇನ್ನೊಂದು ಗೀರಿ... ತುಸು ನಿಧಾನವಾಗಿ ಸುರಬತ್ತಿಗೆ ಬೆಂಕಿ ಹೊತ್ತಿಸಿದೆ. ಸುರ್... ಎಂದು ತನ್ನ ಚಿತ್ತಾರ ಬಿಡಿಸಿ, ಅಲ್ಲೆ ಮಾಯವಾಯಿತು. ಅಷ್ಟರಲ್ಲಾಗಲೇ ನನ್ನ ಬಳಗದವರೆಲ್ಲ ಜೋರಾಗಿ ಹ್ಯಾಪಿ ಬರ್ಥಡೇ ಎಂದು ಶುಭ ಕೋರುತ್ತ, ಕೇಕ್ ಕಟ್ ಮಾಡಲು ಹೇಳಿದರು. ಕೇಕ್ ಸಂಸ್ಕೃತಿಯ ವಿರೋಧಿಯಾದ ನಾನು, ಪ್ರೀತಿಗೆ ಮಂಡಿಯೂರಿ ಶಿರಬಾಗಿ ಬಿಟ್ಟಿದ್ದೆ. ಅಂತೂ ಕೇಕ್ ಕಟ್ ಮಾಡಿ, ಸ್ನೇಹಿತ ಬಸವರಾಜ ಹೂಗಾರ(ಉದಯವಾಣಿ) ಅವರ ಅಕ್ಕನ ಪುಟ್ಟ ಮಗಳಿಗೆ ಕೇಕ್ ತಿನ್ನಿಸಿ, ಜನ್ಮದಿನ ಆಚರಿಸಿಕೊಂಡೆ. ನಂತರ ಗುರು ಸರ್, ನವೀ, ಜೋಶಿ ಸರ್, ಸಿದ್ದೇಶ, ಗುರು ಸರ್(ಫೋಟೋಗ್ರಾಫರ್), ಮಂಜಣ್ಣ, ವಿವೇಕ, ಬಾಬು, ಕಿಶನ್ ಸರ್, ವಿಕ್ರಮ, ಶಿವು, ಬಸು ಹೀಗೆ ಎಲ್ಲರೂ ಕೇಕ್ ಬಾಯಿಗೆ ತುಂಬಿ ಉಸಿರಾಡಲಾಗದಂತೆ ಮಾಡಿ ಬಿಟ್ಟರು...!
ಸಂದರ್ಭದಲ್ಲಿ ನನ್ನ ಒಳ ಮನಸ್ಸು ಸ್ಥಬ್ಧವಾಗಿ, ಅವರ ಪ್ರೀತಿಯ ಕಡಲಲ್ಲಿ ತೇಲಾಡುತ್ತಿತ್ತು. ಭಾವುಕನಾಗಿ ನನ್ನಷ್ಟಕ್ಕೇ ನಾನೇ ಮಾತನಾಡಿಕೊಳ್ಳುತ್ತಿದ್ದೆ. ಇಷ್ಟೊಂದು ಆಪ್ತವಾಗಿ ಒಂದು ಮಗುವಿನಂತೆ ಎಲ್ಲರೂ ಒಂದೆಡೆ ಸೇರಿಜನ್ಮದಿನ ಆಚರಿಸಿದರಲ್ಲಾ... ಇದಕ್ಕೆ ನಾನು ಅರ್ಹನೇ ಎಂದು..? ಖಂಡಿತ ಗೊತ್ತಿಲ್ಲ.... ಆದರೆ, ನನ್ನವರಾದ ಅವರೆಲ್ಲರ ಪ್ರೀತಿಗೆ ನಾ ಸದಾ ಋಣಿ ಎಂದಷ್ಟೇ ಹೇಳಬಲ್ಲೆ...!
ನೂರಾರು ಸ್ನೇಹಿತರು ಫೇಸ್-ಬುಕ್ ಮತ್ತು ವಾಟ್ಸ್-ಅಪ್ ನಲ್ಲಿ ಶುಭಾಶಯದ ಸುರಿಮಳೆಯನ್ನೇ ಸುರಿಸಿದ್ದಾರೆ. ಪರಿಚಿತರು, ಪರಿಚಿತರಲ್ಲದವರೂ, ಹೈಸ್ಕೂಲ್ ಸ್ನೇಹಿತರು, ಕಾಲೇಜ್ ಸ್ನೇಹಿತರು, ಬಂಧುಗಳು, ಸಹದ್ಯೋಗಿಗಳು, ಗುರುಗಳು, ಹಿತೈಷಿಗಳು, ಮಾರ್ಗದರ್ಶಕರು ಹೀಗೆ ಬಹುತೇಕರು ಜನ್ಮದಿನಕ್ಕೆ ಶುಭಕೋರಿದ್ದಾರೆ. ಅವರೆಲ್ಲರಿಗೂ ನನ್ನ ತುಂಬು ಹೃದಯದ ವಂದನೆಗಳು
-ನಾಗರಾಜ್ ಬಿ.ಎನ್. 
'ಅಬ್ಬಲ್ಲಿ ದಂಡೆ' ಮುಡಿಗೇರಿಸುವಾಸೆ, ಪ್ಲೀಸ್............ 

ಮೊಗ್ಗು ಮಲ್ಲಿಗೆ, 
ಒಪ್ಪಿಕೊಳ್ಳುತ್ತೇನೆ ನೀ ನನ್ನ ಬೆಸ್ಟ್ ಫ್ರೆಂಡ್ ಎಂದು. ಆದರೆ, ಅವತ್ತು 'ನಿನಗಾಗಿ' ಸಿನೆಮಾ ನೋಡಿದಾಗಿನಿಂದ ಮನಸ್ಸಲ್ಲಿ ಏನೋ ಗುಜುಗುಜು ಸದ್ದು ಕೇಳಿಸಲಾರಂಭಿಸಿತು. ನೋಡು ಸಿನೇಮಾದುದ್ದಕ್ಕೂ ನಾ ವಿಜಯ ರಾಘವೇಂದ್ರ, ನೀ ರಾಧಿಕಾ ಅನ್ನಿಸಿದ್ದಂತೂ ನೂರಕ್ಕೆ ನೂರು ಸತ್ಯ. ಅವತ್ತೇ ನನಗೆ ನಾ ಅರ್ಥವಾಗಿದ್ದು. ಅಲ್ಲಾ ಕಣೇ, ನೀ ನನ್ನ ಮನಸಿನ ರತಿಯಾಗಬಾರದು ಎಂದು ಕಾನೂನು ಏನಾದರೂ ಇದೆಯಾ? ನಮ್ಮಜ್ಜಿ ಆಣೆಯಾಗಲೂ ಇಲ್ಲ ನನ್ನರಗಿಣಿ.
ಆದರೆ, ಆ 'ಚಿನ್ನಾರಿ ಮುತ್ತ'ನ ತರಹ ನನಗೂ ಕಾಡಿದ್ದೂ ಅದೇ...! 'ನಿನ್ನ ಬಳಿ ನನ್ನ ಪ್ರೀತಿ ನಿವೇದಿಸಿಕೊಂಡು, ಸ್ನೇಹಕ್ಕೂ ಬ್ರೇಕ್ ಬಿದ್ದು ಬಿಟ್ಟರೆ.....?' ಅಯ್ಯಯ್ಯೋ ದಮ್ಮಯ್ಯ ಅಂತೀನಿ ಕಣೇ... ಒಂದು ಕ್ಷಣಾನೂ ನಿನ್ನ ಬಿಟ್ಟಿರೋಕೆ ಆಗದೆ ಒದ್ದಾಡ್ತಾ ಇರ್ತೀನಿ, ಅನುಕ್ಷಾ-ಕೋಯ್ಲಿ ತರಹ. ಅಂದ ಮೇಲೆ? ಇಲ್ಲ ಕಣೇ.. ಕಾಯ್ತೀನಿ. ನಿನ್ನ ಒಂದು ಕಣ್ಣಸನ್ನೆಗಾಗಿ!
ನಾನು ಸಲ್ಲುಮಿಯಾ ಅಂತೂ ಅಲ್ಲಾ. ನಾನು ನಾನೇ. ನಿನ್ನ ಅದೇ ಹಳೆಯ ಮಾಧವ. ನನ್ನ ಹೃದಯ ನುಡಿಸುವ ಮುರಳೀ ಗಾನದಲ್ಲಿ ಇರುವುದು ಒಂದೇ ಒಂದು ರಾಗ. ಅದು ಕೇವಲ ನೀನು. ನನ್ನ ಅಂತರಂಗದ ಆಗಸದಲ್ಲಿ ಸಾವಿರಾರು ನಕ್ಷತ್ರಗಳಿಲ್ಲ. ಅಲ್ಲಿರುವುದು ಚಂದ್ರನ ಪ್ರತಿಬಿಂಬದಂತಿರುವ ನೀನು ಮಾತ್ರ. ಬೆಳದಿಂಗಳ ತಂಪಲ್ಲಿ ನಾನು ತೋಯುತ್ತಿರಬೇಕು ಎಂಬ ಆಸೆ. ಪ್ಲೀಸ್... ನನ್ನ ಕಿರು ಬೆರಳು ಹಿಡಿಯುತ್ತೀಯಾ?
ಮುಂಜಾವಿನಲ್ಲಿ ಅಮ್ಮ, 'ಸಾಕು ಮಲಗಿದ್ದು. ಏಳೋ ಸೋಂಬೇರಿ' ಎಂದಾಗ ಎದ್ದು `ಕರಾಗ್ರೆ ವಸತೇ ಲಕ್ಷ್ಮೀ' ಎನ್ನುವಾಗ ಕೈ ನೋಡಿದಾಗ ಅಲ್ಲಿ 'ಹಾಯ್..' ಅನ್ನುತ್ತಾ ನಸು ನಗೆ ಬೀರುವ ತುಂಟಿ ನೀನೇ... ಎದ್ದು ಕನ್ನಡಿ ನೋಡುತ್ತಾ ಹಲ್ಲುಜ್ಜುವಾಗ ಆ ಕನ್ನಡಿಯೊಳಗಿಂದ ಕದ್ದು ಇಣುಕುವವಳೂ ನೀನೇ... ತಿಂಡಿ ಕೊಡಲೆಂದು ಅಮ್ಮ ತಟ್ಟೆ ತಂದಿಟ್ಟಾಗ, ಹೊಳೆವ ಆ ಸ್ಟೀಲ್ ತಟ್ಟೆಯಲ್ಲೂ ನೀನೇ... ಹುಡುಗಿ, ಇಡೀ ದಿನ ನಿನ್ನದೇ ಗುಂಗಿನಲ್ಲಿ ಇರೋ ನನಗೆ ಮತ್ತೇನು ಕಾಣಲು ಸಾಧ್ಯ ಹೇಳು?
ನನ್ನ ಸೈಕಲ್ ಹಿಂದೆ ನೀ ಹಾರಿ ಕುಳಿತು 'ನೋಡೋ ನಂಗೂ ಬರತ್ತೇ ಹಾರಿ ಕೂರೋಕೆ' ಎಂದು ನೀನಂದಾಗ, ನಾ ಅಂದುಕೊಳ್ಳುತ್ತೇನೆ. 'ಜೀವನದ ಸೈಕಲ್ ತುಳಿಯುವಾಗ ಹಿಂದುಗಡೆ ನೀನಿದ್ದರೆ ಎಷ್ಟು ಚೆನ್ನ' ಅಂತಾ... ಅದೇ ಸ್ನೇಹದ ಸಲಿಗೆ, ತರಲೆ ಜೊತೆಗೆ ಮೊಗೆದಷ್ಟು ಉಕ್ಕುವ ಪ್ರೀತಿ. ಸಾಕಲ್ವಾ ನಮ್ಮ ಪಾಲಿಗೆ, ಮತ್ತೀನ್ನೇನು ಬೇಕು ಹೇಳು?
ಮುಸ್ಸಂಜೆ ಹೊತ್ತಲ್ಲಿ ಮನೆ ಅಂಗಳದಲ್ಲಿ ಅರಳುವ ಮಧ್ಯಾಹ್ನ ಮಲ್ಲಿಗೆ ನೋಡುತ್ತಿದ್ದಾಗ, ಒಮ್ಮೊಮ್ಮೆ ನಿನ್ನ ಮುದ್ದು ಮುಖ ನೆನಪಾಗಿ ಬಿಡುತ್ತೇ ಕಣೇ. ಆಗ ನೀನಿದ್ದ ಹಾಸ್ಟೇಲ್ ಕಡೆ ಸುಮ್ಮನೇ ಸೈಕಲ್ ತುಳಿದು ಬಿಡುತ್ತೇನೆ. ಅರ್ಧ ದಾರಿ ಕ್ರಮಿಸುತ್ತಿದ್ದಂತೆ 'ಹೇ.. ಲೋಸು, ಬೇಡ ಕಣೋ. ಹಾಸ್ಟೇಲ್ ಮುಂದೆ ಬರಬೇಡ' ಎಂದು ಅಳುಮುಖ ಮಾಡಿಕೊಂಡು ನೀ ಹೇಳಿದ್ದು ನೆನಪಾಗಿ ಬಿಡುತ್ತದೆ. ಅದಕ್ಕೆ ಸೈಕಲ್ ದೂಡಿಕೊಂಡು ವಾಪಸ್ ಮರುಳುತ್ತೇನೆ. ಕ್ಷಣ ಕ್ಷಣವೂ ಹಿಂತಿರುಗಿ ನೋಡುತ್ತ, ಎಲ್ಲಿಯಾದರೂ ನೀ ಹೊಳಕುತ್ತೀಯಾ ಎಂದು!
ನೀ ಎಲ್ಲ ಹುಡುಗಿಯರ ತರಹ ಅಲ್ಲ ಕಣೇ. ನೀನೊಂದು ವಿಶೇಷ. ಮುಗಿಯದ ಕವನ. ನನ್ನ ಪ್ರೀತಿ ಪದಕ್ಕೆ ನೀನೇ ಪಲ್ಲವಿ, ನೀನೇ ಶೀರ್ಷಿಕೆ. ಯಾಕೇ ಹುಡುಗಿ, ಸಮಯ ಸಿಕ್ಕಾಗಲೆಲ್ಲ ನೀ ನನ್ನ ಗೋಳು ಹೊಯ್ದುಕೊಳ್ಳುತ್ತ ಇರುತ್ತೀಯಾ? ಸ್ವಲ್ಪ ಕಡಿಮೆ ಮಾಡು. ಪ್ಲೀಸ್...
ನೀನು ಹೇಳುತ್ತೀಯಲ್ಲ, 'ನಿನ್ನ ಸಂತೋಷವೊಂದು ಸಾಕು. ಮತ್ತೇನೂ ಬಯಸಲಾರೆ ಬದುಕಲ್ಲಿ' ಎಂದು. ಆದರೆ, ನನ್ನ ಸಂತೋಷ ನೀನು! ನನ್ನ ಯಶಕ್ಕಾಗಿ ಹಂಬಲಿಸುತ್ತೀಯಾ ಅಲ್ವಾ? ಅದು ನೀ ನನ್ನ ಜೊತೆಗಿದ್ದರೆ ಮಾತ್ರ....
ನಮ್ಮಮ್ಮ ಕಟ್ಟಿಟ್ಟ ಅಬ್ಬಲಿ ಹೂವಿನ ದಂಡೆಯನ್ನು ಕದ್ದುಕೊಂಡು ನಾಳೆ ನೀನಿದ್ದಲ್ಲಿಗೆ ಬರುತ್ತೇನೆ. ರೇಶಿಮೆಯಂತ ನಿನ್ನ ಕೂದಲಿಗೆ ನನ್ನ ಕೈಯ್ಯಾರೆ ಅದನ್ನು ಮುಡಿಗೇರಿಸಬೇಕೆಂಬ ಪುಟ್ಟ ಆಸೆ ಕಣೇ! ಅನುಮತಿ ನೀಡುತ್ತೀಯಾ...?
-ನಿನ್ನ ಮಾಧವ
 nrajbn@gmail.com
ಕ್ಷಮಿಸಿ....
'ಇನ್ಲ್ಯಾಂಡ್ ಲೆಟರ್ ಸಮಾಧಿಯಾಗಿದೆ.....!!'
ಮೊಬೈಲ್ ಸಂಭಾಷಣೆಯಲ್ಲಿ ಹೇಳಲಾಗದ ಎಷ್ಟೋ ಭಾವನೆಗಳು ನಮ್ಮಲ್ಲಿ ಹುದುಗಿರುತ್ತವೆ. ಹೀಗೆ ಮಾತು ಮೌನವಾದಾಗ ನೆರವಿಗೆ ಬರುವುದು ಸುಂದರ ಅಕ್ಷರ ಸರಸ್ವತಿಯೇ...! ಮುಖಕ್ಕೆ ಮುಖ ಕೊಟ್ಟು ಹೇಳಲಾಗದ ವಿಷಯಗಳನ್ನು ತಿಳಿಸುವ ತಾಕತ್ತು ಇರುವುದು ಈ ಅಕ್ಷರಕ್ಕೆ ಮಾತ್ರ. ಅಣ್ಣ ತಂಗಿಗೆ ಕಿವಿಹಿಂಡಿ ಬರೆಯುವ ಪತ್ರ, ಅಪ್ಪ-ಅಮ್ಮರಿಗೆ ಬರೆಯುವ ಭಯಮಿಶ್ರಿತ ಪತ್ರ, ಸ್ನೇಹಿತರಿಗೆ ಬರೆಯುವ ತುಂಟ ಪತ್ರ, ಹಿರಿಯರಿಗೆ ಬರೆಯುವ ಗೌರವ ಪತ್ರ, ಅಜ್ಜ-ಅಜ್ಜಿಯರಿಗೆ ಬರೆಯುವ ಮುಗ್ದ ಪತ್ರ, ಪ್ರೇಮಿಸುವ ಹುಡುಗ/ಹುಡುಗಿ ಬರೆಯುವ ಪ್ರೇಮ ಪತ್ರ... ಹೀಗೆ ಎಲ್ಲ ಪತ್ರಗಳು ಒಂದಕ್ಕೊಂದು ಭಿನ್ನ-ವಿಭಿನ್ನವಾಗಿರುತ್ತವೆ. ಇಂತಹ ಅದ್ಭುತ ಪತ್ರ ಬರೆಯುವ ಕಲೆ, ಹವ್ಯಾಸ ಕಾಲಚಕ್ರದ ಉರುಳಾದಲ್ಲಿ ನಮ್ಮಿಂದ ಕಣ್ಮರೆಯಾಗುತ್ತಿರುವುದು ವಿಪರ್ಯಾಸ.....!!
ಪ್ರತಿಯೊಂದು ಬದಲಾವಣೆಗೆ 'ಕಾಲ'ನ ಕಡೆಗೆ ಬೆರಳು ತೋರಿಸುವ ನಾವು ಎಷ್ಟೋ ಮಾನವ ಸಂಬಂಧಗಳನ್ನು ಅದರಿಂದ ದೂರ ಮಾಡಿಕೊಳ್ಳುತ್ತಿದ್ದೇವೆ. ಆಧುನಿಕತೆಯ ತೆಕ್ಕೆಗೆ ಸಿಲುಕಿ `ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತಾ' ಇದ್ದೇವೆ. ಸುಂದರ, ಸವಿ ಮಧುರ ಆತ್ಮಗಳ ನಡುವಿನ ಸಂಪರ್ಕ ಸೇತುವೆಯನ್ನೆ ತುಂಡರಿಸಿಕೊಂಡು ಬಿಟ್ಟಿದ್ದೇವೆ....!!
ಹೌದು, 'ಅಭಿವೃದ್ಧಿಯೆಂಬ ಅವನತಿ'ಯೆಡೆಗೆ ಮುಖ ಮಾಡಿ, ಸಂಪೂರ್ಣ ಬದುಕನ್ನೇ ಯಾಂತ್ರಿಕರಣ ಮಾಡಿಕೊಂಡಿದ್ದೇವೆ. ಪ್ರತಿ ದಿನದ ಬೆಳಗನ್ನು ನಮ್ಮ ಎರಡೂ ಅಂಗೈನ್ನು ನೋಡಿಕೊಂಡು 'ಕರಾಗ್ರೆ ವಸತೆ ಲಕ್ಷ್ಮೀ ಕರಮಧ್ಯೆ ಸರಸ್ವತಿ.......' ಎಂಬ ಶ್ಲೋಕ ಹೇಳಿ ದೈನಂದಿನ ಕಾರ್ಯ ಪ್ರಾರಂಭಿಸುತ್ತಿದ್ದೇವು. ಆದರೆ ಈಗ, ರಾತ್ರಿ ಮಲಗುವಾಗ ತಲೆ ಪಕ್ಕದಲ್ಲಿಟ್ಟ ಮೊಬೈಲ್ನಲ್ಲಿ `ಯಾವ ಹೊಸ ಸಂದೇಶ ಬಂದಿದೆ...?', 'ಯಾರು ಶುಭೋದಯದ ಸಂದೇಶ ಕಳುಹಿಸಿದ್ದಾರೆ....?', 'ಯಾರಿಗೆ ಫೋನ್ ಮಾಡಬೇಕು?' ಎಂದು ಯೋಚಿಸುತ್ತ ಮೊಬೈಲ್ ನೋಡುತ್ತಲೇ ಕಣ್ಣರಳಿಸುತ್ತೇವೆ. ಎಲ್ಲಿ ಹೋದವು ನಮ್ಮ ಸಂಸ್ಕಾರ... ಸಂಸ್ಕೃತಿ....?
ಇಂದು ಅಂಗೈಯಲ್ಲಿಯೇ ಪ್ರಪಂಚವಿದೆ. ಪ್ರಪಂಚದ ಯಾವುದೇ ಭಾಗದ ಮಾಹಿತಿ ಅಥವಾ ಸುದ್ದಿಗಳು ಕ್ಷಣ ಮಾತ್ರದಲ್ಲಿ ನಮ್ಮ ಕಣ್ಣೆದುರು ಗೋಚರಿಸುತ್ತವೆ. ದಿನದಿಂದ ದಿನಕ್ಕೆ ಪ್ರಪಂಚ ಕಿರುದಾಗುತ್ತ ಸಾಗುತ್ತಿವೆ. ಸಾವಿರಾರು ಕಿ.ಮೀ. ದೂರದಲ್ಲಿರುವ, ಸಪ್ತಸಾಗರದ ಆಚೆ ಎಲ್ಲೋ ಇರುವ ಸ್ನೇಹಿತರನ್ನು, ಬಂಧುಗಳನ್ನು ಇಂದು ಕ್ಷಣ ಮಾತ್ರದಲ್ಲಿ ಸಂಪರ್ಕಿಸಬಹುದಾಗಿದೆ. ಆದರೆ ಈ ಸಂಪರ್ಕ ಸೀಮಿತ ಅವಧಿಯಲ್ಲಿ ಕೆಲವು ಯೋಗ ಕ್ಷೇಮಕ್ಕಷ್ಟೇ ಮೀಸಲಾಗಿರುತ್ತವೆಯೇ ಹೊರತು, ಭಾವನಾತ್ಮಕ ಸಣ್ಣಪುಟ್ಟ ಸೂಕ್ಷ್ಮ ಸಂವೇದನೆಗೆ ಅವಕಾಶ ನೀಡದು. ಅಲ್ಲೇನಿದ್ದರೂ, ಕರೆನ್ಸಿ ಅವಲಂಬಿತ ವ್ಯಾವಹಾರಿಕ ಮಾತುಕತೆ, ಇಲ್ಲವೇ ಕೆಲವು ವೇಳೆ ಯೋಗ ಕ್ಷೇಮ ವಿನಮಯವಷ್ಟೇ...!!
ಈ ಹಿಂದೆ ಸಂಬಂಧಗಳನ್ನು ಬೆಸೆಯಲು ಮುಖ್ಯ ವೇದಿಕೆಯಾಗಿ ಪತ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ದೂರದಲ್ಲೆಲ್ಲೋ ವಿದ್ಯಾಭ್ಯಾಸ, ಉದ್ಯೋಗ ಮಾಡುತ್ತಿದ್ದವರು ಈ ಪತ್ರದ ಮೂಲಕವೇ ಕುಟುಂಬದವರೊಂದಿಗೆ ಸಂಪರ್ಕ ಸಾಧಿಸುತ್ತಿದ್ದರು. ಮಗನ ಪತ್ರದ ದಾರಿ ಕಾಯುವ ಅಪ್ಪ-ಅಮ್ಮ... ಅಪ್ಪ-ಅಮ್ಮರ ಪತ್ರದ ದಾರಿ ಕಾಯುವ ಮಗ... ಪ್ರೇಯಸಿಯ ಪತ್ರದ ಸಾಲುಗಳನ್ನು ಓದುವ ಕಾತುದರಲ್ಲಿರುವ ಪ್ರಿಯಕರ.... ಹೀಗೆ ತವಕ, ತಲ್ಲಣಗಳು ಆ ಪತ್ರದ ಕಾಯುವಿಕೆಯಲ್ಲಿ ಸಿಗುತ್ತಿತ್ತು. ಪತ್ರದ ಒಂದೊಂದು ಸಾಲುಗಳು ಕೂಡಾ ನೆನಪು, ಕನಸು, ಕನವರಿಕೆ, ಆಶಯ, ಅಭಿಪ್ರಾಯ, ಕೀಟಲೆ, ತುಂಟತನ, ಪ್ರೀತಿ, ಮಮತೆ, ವಿಶ್ವಾಸ, ಕಕ್ಕುಲಾತಿ, ಕಾಳಜಿಗಳನ್ನು ಸಾಕ್ಷಾತ್ಕರಿಸುತ್ತಿತ್ತು. ಈ ಮೂಲಕ ಪರಸ್ಪರ ಸಂಬಂಧ ಹಾಗೂ ಭಾವನೆಗಳು ಇನ್ನಷ್ಟು ಆಳವಾಗುತ್ತ ಹೋಗುತ್ತಿತ್ತು. ಆದರೆ, ಮೊಬೈಲ್ ಮಾಯೆಯಿಂದಾಗಿ ಪತ್ರ ಬರೆಯುವ ಹವ್ಯಾಸ ಮಾಯವಾಗಿ, ಸಂಬಂಧ-ಭಾವನೆಗಳೆಲ್ಲ ಕೇವಲ ವ್ಯಾಪಾರ ವಹಿವಾಟು ಆಗಿಬಿಟ್ಟಿವೆ.
ಮೊಬೈಲ್ನಲ್ಲಿ ಸಂಭಾಷಣೆ ಮಾಡುವಾಗ ನಮ್ಮ ಗಮನವೆಲ್ಲ ಕೇವಲ ಕರೆನ್ಸಿ ಕಡೆಗೇ ಕೇಂದ್ರಿಕೃತವಾಗಿರುತ್ತವೆ. ವ್ಯವಹಾರದ ದ್ಯೋತಕ ಮನಃಸ್ಥಿತಿಯಾದ ಇದು ಸಂಬಂಧ ಹಾಗೂ ಭಾವನೆಗಳಿಗೆ ಅವಕಾಶವಿಲ್ಲದಂತೆ ಮಾಡುತ್ತದೆ. ಮೊಬೈಲ್ ಮಾತುಕತೆಗಳು ಪತ್ರದಷ್ಟು ಆಪ್ತ ಹಾಗೂ ಮಧುರ ಎಂದೆನಿಸದು. ಪತ್ರದಲ್ಲಿ ಬರೆದಿರುವ ಅಷ್ಟೂ ಸಾಲುಗಳ ಒಂದೊಂದು ಶಬ್ದಗಳು ಭಾವನೆಯ ಕೊಳದಲ್ಲಿ ಮಿಂದೆದ್ದು ಬಂದಿರುತ್ತವೆ. ಆ ಒಂದೊಂದು ಪದಗಳು ಹೃದಯದ ಗೂಡಲ್ಲಿ ನುಗ್ಗಿ, ಬೆಚ್ಚಗೆ ಅವಿತು ಬಿಡುತ್ತವೆ.
ಮನೆಯಲ್ಲಿರುವ ನಾಯಿ-ಬೆಕ್ಕಿನ ಸ್ನೇಹ ಹೇಗಿದೆ...? ಕೊಟ್ಟಿಗೆಯಲ್ಲಿ ಹೊಸ ಅತಿಥಿಯಾರಾದರೂ ಬಂದಿದ್ದಾರೋ ಇಲ್ಲವೋ...? ಪಕ್ಕದ್ಮನೆ ಸೋಮಣ್ಣ ಮದುವೆ ಆದನಾ...? ಹಾಲು ಮಾರುವ ಹುಡುಗ ಗೋಪಿ ಈಗಲೂ ಬರುತ್ತಿದ್ದಾನಾ...? ಅಜ್ಜಿಯ ಆರೋಗ್ಯ ಈಗ ಹೇಗಿದೆ...? ನಾನು ಪ್ರೀತಿಸುವ ಮರ, ಗಿಡಗಳೆಲ್ಲ ಹೇಗಿವೆ...? ಇಂತಹ ಸಣ್ಣ ಪುಟ್ಟ ಭಾವ ಸಂವೇದನಾತ್ಮಕ ವಿಷಯಗಳನ್ನು ಪತ್ರದಲ್ಲಿ ಮಾತ್ರ ಬರೆಯಲು ಸಾಧ್ಯವೇ ಹೊರತು ಮೊಬೈಲ್ನಲ್ಲಿ ಸಾಧ್ಯವಿಲ್ಲ.
ಒಮ್ಮೆ ಬರೆದ ಅಥವಾ ಬಂದ ಪತ್ರಗಳನ್ನು ಹಾಗೆಯೇ ಜೋಪಾನ ಮಾಡಿಟ್ಟುಕೊಂಡು, ವರ್ಷಗಳ ನಂತರವೂ ಓದಬಹುದು. ಅಂದಿನ ಭಾವನೆ ಹಾಗೂ ಬದುಕನ್ನು ನೆನಪಿಸಿಕೊಂಡು ನಮ್ಮನ್ನು ನಾವು ಅರ್ಥೈಸಿಕೊಳ್ಳಬಹುದು. ಅದು ಬದುಕಿಗೆ ಹೊಸ ತಿರುವು ನೀಡಿ, ನಾವೆಲ್ಲ ಮರೆಯುತ್ತಿರುವ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಯನ್ನು ಜಾಗೃತಗೊಳಿಸಲು ಸಹಕಾರಿಯಾಗಬಹುದು. ಅದು ಒಂದು ನುಡಿಚಿತ್ರವಿದ್ದಂತೆ. ಸದಾ ಹಸಿರಿನಿಂದ ಕಂಗೊಳಿಸುತ್ತ, ನಳನಳಿಸುತ್ತಲೇ ಇರುತ್ತದೆ. ಓದಿದಷ್ಟು ಸಾಲದು. ಒಂದೊಂದು ಬಾರಿ ಓದಿದಾಗಲೂ ಒಂದೊಂದು ಭಾವ. ಮೈ-ಮನ ಪುಳಕಗೊಳ್ಳುವ ಸಂತೋಷವನ್ನು ಮೊಗೆ ಮೊಗೆದು ನೀಡುತ್ತವೆ.
ಎಂದೋ... ಯಾರೋ... ಮಾಡಿದ ನಾಲ್ಕೈದು ಶಬ್ದಗಳ ಸಂದೇಶವನ್ನು ಮೊಬೈಲ್ ಇನ್ ಬಾಕ್ಸ್ನಲ್ಲಿ ಬಚ್ಚಿಟ್ಟುಕೊಂಡು, ದಿನಕ್ಕೆ ಎರಡು-ಮೂರು ಬಾರಿ ನೋಡಿ ಸಂತೋಷ ಪಡುವ ನಾವು, ಸ್ನೇಹಿತರದ್ದೋ... ಅಪ್ಪ-ಅಮ್ಮರದ್ದೋ ಪತ್ರ ಬಂದರೆ ಇನ್ನೆಷ್ಟು ಆನಂದ ಪಡಬಹುದು ಅಲ್ಲವೇ?
ಹಾಗೆಯೇ, ನಮ್ಮ ಆಪ್ತೇಷ್ಟರಲ್ಲಿ ಯಾರಿಗಾದರೂ ಒಂದು ಪತ್ರ ಬರೆಯೋಣ. ಪರಸ್ಪರ ಭಾವನೆಗಳನ್ನು ಅಕ್ಷರ ಸರಸ್ವತಿಯ ಮೂಲಕ ವಿನಿಮಯ ಮಾಡಿಕೊಳ್ಳೋಣ. ಆಗ ನೋಡಿ, ಮನಸ್ಸು ಹಕ್ಕಿಯಂತೆ ಹೇಗೆ ಗರಿ ಬಿಚ್ಚಿ ಬಾನಂಗಳದಲ್ಲಿ ತೇಲಾಡುತ್ತದೆಯೆಂದು. ಈ ಪತ್ರ ಆತ್ಮಾನುಬಂಧದ ಅನೂಹ್ಯ ಸೆಳೆತಕ್ಕೆ ಒಳಗಾಗಿಸಿ ಪ್ರೀತಿ, ಸ್ನೇಹ, ವಿಶ್ವಾಸದ ನೆಲಗಟ್ಟನ್ನು ಇನ್ನಷ್ಟು ಭದ್ರವಾಗುತ್ತದೆ.
ಸೂಕ್ಷ್ಮ ಸಂವೇದನಾಶೀಲ ಗುಣಗಳನ್ನು ನಮ್ಮಲ್ಲಿ ಜಾಗೃತವಾಗಿಸಿ, ಇಡೀ ಜಗತ್ತನ್ನೇ ಪ್ರೀತಿಸು ಮಹೋನ್ನತ ಗುಣವನ್ನು ನೀಡಿ, ಬದುಕನ್ನು ಸಂತೃಪ್ತಿಗೊಳಿಸುವ ಒಂದು ಪುಟ್ಟ ಪತ್ರ, ಪ್ರಪಂಚವನ್ನೇ ಕಿರಿದು ಮಾಡಿದ ಆಧುನಿಕ ಜಗತ್ತಿನ ಮೊಬೈಲ್ ನೀಡಲು ಸಾಧ್ಯವೇ.......!
-ನಾಗರಾಜ್ ಬಿ.ಎನ್.
ಇದು ಕಥೆಯಲ್ಲ.....!
ಇಬ್ಬರು ಆತ್ಮೀಯ ಸ್ನೇಹಿತರು. ಬಾಲ್ಯದಿಂದ ಪದವಿಯವರೆಗೂ ಒಂದೇ ಶಾಲೆ, ಕಾಲೇಜ್ ನಲ್ಲಿ ಜೊತೆಯಾಗಿಯೇ ಅಭ್ಯಸಿದವರು. ನಂತರ ಇಬ್ಬರೂ ಬೇರೆ ಬೇರೆ ವಿವಿಯಲ್ಲಿ ಸ್ನಾತಕ ಅಭ್ಯಾಸ, ಅವರಿಗೆ ಇಷ್ಟದ ವಿಷಯದ ಮೇಲೆ. ಇಬ್ಬರೂ ಉನ್ನತ ಉದ್ಯೋಗದಲ್ಲಿದ್ದಾರೆ. ವಾರಕ್ಕೆರಡು ಬಾರಿಯಾದರೂ ಮೂರ್ನಾಲ್ಕು ಬಾರಿ ದೂರವಾಣಿಯಲ್ಲಿ ಸಂಕರ್ಪವಾದರೆ, ತಿಂಗಳಿಗೊಮ್ಮೆಯಾದರೂ ಭೆಟ್ಟಿಯಾಗಲೇ ಬೇಕು... ಹೀಗಿದೆ ಅವರಿಬ್ಬರ ಸ್ನೇಹ.
ಆದರೆ,
ದೀಪಾವಳಿ ಕಳೆದ ಎರಡು ದಿನಕ್ಕೆ ರಾಕೇಶನ ಜನ್ಮದಿನ. ಹಬ್ಬಕ್ಕೆಂದು ಊರಿಗೆ ಬಂದಿದ್ದ ರಾಕೇಶನಿಗೆ, ಸ್ನೇಹಿತ ಮಿಥುನ ಬಂದಿಲ್ಲ ಎನ್ನುವ ಕೊರಗು. ಒಂದು ವಿಷಯ ಅವನಲ್ಲಿ ಎದುರಾಗೇ ಹೇಳಬೆಕು ಎಂದು ಆತ ಹಾತೊರೆಯುತ್ತಿದ್ದ. ಹುಟ್ಟಿದ ದಿನಕ್ಕಾದರೂ ಬಂದೇ ಬರುತ್ತಾನೆ ಎನ್ನುವ ನಂಬಿಕೆ ಇತ್ತು. ಅದು ಕೂಡಾ ಹುಸಿಯಾಗಿತ್ತು.
ಮುಂಜಾನೆಯಿಂದ ರಾತ್ರಿವರೆಗೂ ರಾಕೇಶನಿಗೆ ಜನ್ಮದಿನದ ಸಂದೇಶ, ಕರೆಗಳ ಸುರಿಮಳೆ. ಊಹೂಂ... ಅದರಲ್ಲಿ ಮಿಥುನನ ಕರೆ ಇರಲೇ ಇಲ್ಲ. ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಮೊಬೈಲ್ ರಿಂಗಣಿಸುತ್ತದೆ. ಮಿಥುನ ಆಗ ಕರೆ ಮಾಡಿದ್ದ.... ವಿಶ್ ಮಾಡಿ, ಯೋಗಕ್ಷೇಮ ವಿಚಾರಿಸುತ್ತಾನೆ. ನೂರಾರು ಹಾರೈಕೆಯ ಮಾತುಗಳನ್ನು ಒಂದೇ ಉಸಿರಿನಲ್ಲಿ ಹೇಳುತ್ತಾನೆ. ಆ ಸಂತಸದಲ್ಲಿಯೇ ಇತ್ತ ರಾಕೇಶ, ಮಿಥುನನಿಗೆ ತನ್ನಿಂದ ಒಂದು ಸಂತಸದ ವಿಷಯ ಹೇಳಲು ಮುಂದಾಗುತ್ತಾನೆ....
'ಸ್ವಲ್ಪ ತಡಿಯೋ ಮಾರಾಯ... ಏನೋ ಹೇಳ್ಬೇಕು ಅಂತ ಎರಡು ದಿನದಿಂದ ನಿನ್ನ ಕಾಲ್ ಮಾಡ್ತಾ ಇದ್ದೀನಿ...'
'ಸಾರಿ ಕಣೋ.. ಕೆಲಸದ ಒತ್ತಡ. ತುಂಬಾ ಬ್ಯುಸಿಯಾಗಿದ್ದೆ. ಕಿವಿ ಹಿಡ್ಕೊಂಡೆ. ಸರಿನಾ, ಈಗ ಹೇಳು'
'ಇದ್ಕೇನು ಕಡಿಮೆಯಿಲ್ಲ, ನಮ್ಮ ಮನೆಯಲ್ಲಿ ನನ್ನ ಮದುವೆಗೆ ಹುಡುಗಿ ನೋಡಿದ್ದಾರೆ ಕಣೋ'
'ರಿಯಲಿ... ಅಬ್ಬಾ...! ನಿನ್ನ ಜನ್ಮದಿನಕ್ಕೆ ಇದಕ್ಕಿಂತ ದೊಡ್ಡ ಸಂತೋಷ  ಬೇರೇನೂ ಇಲ್ವೋ... ಅಂತೂ, ನನ್ನ ಚಡ್ಡಿ ದೋಸ್ತ ದೊಡ್ಡವನಾದ ಅಂತಾಯ್ತು'
'ಹಾಗೇನಿಲ್ಲ ಕಣೋ.. ಜನವರಿ ಸಂಕ್ರಮಣದ ದಿನ ನಿಶ್ಚಿತಾರ್ಥ ಮಾಡಿ, ಬೇಸಿಗೆಯಲ್ಲಿ ಮದುವೆ ಮಾಡಲು ನಿರ್ಧರಿಸಿದ್ದಾರೆ. ನಿನಗೇ ಪ್ರಾಥಮವಾಗಿ ಈ ವಿಷಯ ಹೇಳ್ತಾ ಇದ್ದೀನಿ'
'ಥ್ಯಾಂಕ್ಸ್ ಕಣೋ... ಅಂದ ಹಾಗೆ, ನಮ್ಮ ಅತ್ಗ್ಯಮ್ಮ ಏನ್ಮಾಡ್ತಾ ಇದ್ದಾಳೆ?  ಎಲ್ಲಿರೋದು?  ಯಾವ ಊರು?'  ಎಂದು ಮಿಥುನ ಮರು ಪ್ರಶ್ನಿಸುತ್ತಾನೆ.
ಎಲ್ಲವನ್ನು ಎಳೆ ಎಳೆಯಾಗಿ ರಾಕೇಶ ಮೊಬೈಲ್ ನಲ್ಲಿಯೇ ಮಿಥುನನಿಗೆ ಹೇಳುತ್ತಾನೆ. ಅವೆಲ್ಲವನ್ನು ಮಿಥುನ ಸುಮ್ನೆ ಕೇಳ್ತಾ ಕೇಳ್ತಾ, ಮೌನಕ್ಕೆ ಜಾರಿ ಬಿಡುತ್ತಾನೆ.
ಅತ್ತ ರಾಕೇಶ, ಹಲೋ... ಹಲೋ... ಎಂದು ಏಳೆಂಟು ಬಾರಿ ಕೂಗಿ, ನೆಟ್-ವರ್ಕ್ ಪ್ರಾಬ್ಲಮ್ ಎಂದು ಕರೆ ಕಟ್ ಮಾಡುತ್ತಾನೆ.
ಪ್ರಾಣ ಸ್ನೇಹಿತ ರಾಕೇಶನ ಕೈ ಹಿಡಿಯಲಿರುವ ಹುಡುಗಿ, ಮಿಥುನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹುಡುಗಿಯಾಗಿದ್ದಳು. ಅವಳಿಗಾಗಿ ನೂರಾರು ಕನಸನ್ನು ಹೆಣೆದು, ಪ್ರೀತಿಯ ಮಹಲನ್ನು ಕಟ್ಟಿ, ಅಲ್ಲಿ ಎಲ್ಲವೂ ಪ್ರೀತಿನೇ ಆಗಿರಬೇಕು ಎಂದುಕೊಂಡಿದ್ದ. ತಾನು ಪ್ರೀತಿಸುತ್ತಿರುವ ವಿಷಯ ಅವಳಲ್ಲಿ ಹೇಳಿಕೊಂಡಿದ್ದ. ಅವಳು ಕೂಡಾ ಅವನನ್ನು ಮನಸಾರೆ ಇಷ್ಟಪಟ್ಟಿದ್ದಳು. ಆದರೆ, ಆಕೆ ಎಂದಿಗೂ ತಾನು ಪ್ರೀತಿಸುತ್ತಿರುವ ವಿಷಯ ಮಿಥುನನಲ್ಲಿ ಹೇಳಿರಲಿಲ್ಲ. ಒಂದಿಲ್ಲೊಂದು ಸಮಸ್ಯೆಗೆ ಒಳಪಡಿಸಿ, ಪರೀಕ್ಷೆಗೆ ಒಳಪಡಿಸುತ್ತಲೇ ಇದ್ದಳು. ಜೀವಕ್ಕಿಂತ ಹೆಚ್ಚಾಗಿ ಮಿಥುನ ತನ್ನನ್ನು ಪ್ರೀತಿಸ್ತಾ ಇದ್ದಾನೆ ಎನ್ನುವುದು ಅವಳಿಗೆ ಗೊತ್ತಿತ್ತು. ಆತ ಇಷ್ಟವಾಗಿದ್ದರೂ, ಆತನ ಪ್ರೀತಿಯ ಯಾವ ಕೋರಿಕೆಯನ್ನು ಅವಳು ಸ್ವೀಕರಿಸಿರಲಿಲ್ಲ. ಆ ಸಂದರ್ಭದಲ್ಲೆಲ್ಲ ಅವನ ಮೇಲೆ ಸುಮ್ಮನೆ ರೇಗಾಡುತ್ತಿದ್ದಳು. 'ನಾನು ಈಗಾಗಲೆ ಒಬ್ಬನನ್ನು ಪ್ರೀತಿಸ್ತಾ ಇದ್ದೇನೆ. ನನಗೆ ಈಗಾಗಲೇ ಮದುವೆ ನಿಶ್ಚಯವಾಗಿದೆ' ಎಂದು ಸುಳ್ಳು ಹೇಳುತ್ತಿದ್ದಳು. ಇನ್ನು ಮುಂದೆ ಕರೆ, ಸಂದೇಶ ಏನು ಮಾಡಬೇಡ ಎಂದು ಮಿಥುನನ ದೂರವಿಡಲು ಪ್ರಯತ್ನಿಸುತ್ತಿದ್ದಳು. ಮಿಥುನನ ಪ್ರೇಮ ಒಂದೆರಡು ದಿನದಲ್ಲ... ಎರಡ್ಮೂರು ತಿಂಗಳಿನದ್ದೂ ಅಲ್ಲ... ಬರೋಬ್ಬರಿ ನಾಲ್ಕು ವರ್ಷದ ಪ್ರೇಮ....! ಆತ ತನ್ನೆಲ್ಲ ಭಾವವನ್ನು ಆಕೆಯಲ್ಲಿ ಹೇಳಿಕೊಂಡು, ಪ್ರೇಮ ಭಿಕ್ಷೆಗಾಗಿ ಎದುರು ನೋಡುತ್ತಿದ್ದ, ನಾಲ್ಕು ವರ್ಷಗಳ ಪರ್ಯಂತ.... ಪ್ರತಿ ದಿನ... ಪ್ರತೀ ಕ್ಷಣ......!
ಹೀಗಿದ್ದಾಗ ಆತನ ಪ್ರಾಣ ಸ್ನೇಹಿತ ರಾಕೇಶನೇ ಆಕೆಯನ್ನು ವರಿಸಲು ಸಿದ್ಧನಾಗದ್ದಾನೆ ಎನ್ನುವ ಸಂಗತಿ, ಮಿಥುನನಿಗೆ ಎಷ್ಟು ಘಾಸಿ ಮಾಡಿರಬೇಡ....!?
ನಾಲ್ಕು ವರ್ಷ ಪ್ರತಿ ಕ್ಷಣವೂ ಅವಳಿಗಾಗಿ ಮಿಡಿದ ಆತನ ಹೃದಯ ಸ್ತಬ್ಧವಾಗುತ್ತಿದೆ. ಏರಳಿತದ ಪ್ರತಿಯೊಂದು ಉಸಿರಿನಲ್ಲೂ ಪ್ರೇಯಸಿ ಎನ್ನುತ್ತಿದ್ದವ, ಅರಿವಲ್ಲದೆ 'ಅತ್ಗ್ಯಮ್ಮ' ಎಂದು 'ಅಮ್ಮ'ನ ಸ್ಥಾನ ನೀಡಿ ಬಿಟ್ಟಿದ್ದ. 'ಕಾಲಚಕ್ರದ ಉರುಳಾಟ.... ಇಲ್ಲಿ ನಾವೆಲ್ಲ ನಿಮಿತ್ತ ಮಾತ್ರ' ಎನ್ನುತ್ತ ಏನೇನೋ ಯೋಚನೆ ಮಾಡುತ್ತ ಮಿಥುನ ಆಕಾಶದೆಡೆ ದೃಷ್ಟಿ ಹಾಯಿಸಿದ್ದಾನೆ. ದಟ್ಟ ಕಾರ್ಗತ್ತಲ ನೀರವ ಮೌನದಲ್ಲಿ ಕೆನ್ನೆಯಿಂದ ಕಣ್ಣೀರ ಹನಿಗಳು ಒಂದೊಂದಾಗಿ ಜಾರುತ್ತಿವೆ. ಎರಡು ಕಣ್ಣಾಲಿಗಳು ತೋಯ್ದು ತೊಪ್ಪೆಯಾಗಿವೆ. ಆತನಿಗೆ ಸಮಾಧಾನಿಸಲು ಅಲ್ಲಿ ಇದ್ದದ್ದು ಮೌನದ ಜೊತೆ ಕವಿದ ಕತ್ತಲು ಮಾತ್ರ....!
-ನಾಗರಾಜ್ ಬಿ.ಎನ್.
ನಾನು ಮತ್ತು ಅವಳು
                                               (ಹೀಗೊಂದು ಪ್ರೀತಿ)
ಕಳೆದ ಮೂರು ವರ್ಷಗಳಿಂದ ಅವಳು ನನಗೆ ಪರಿಚಯ. ಪ್ರತಿದಿನ ಆಫೀಸ್ನಿಂದ ರೂಂಗೆ ಬರುವಾಗ ಅವಳು ಎದುರಾಗುತ್ತಾಳೆ. ನನ್ನನ್ನು ನೋಡಿದ ಕೂಡಲೇ ಓಡೋಡಿ ಬರುತ್ತಾಳೆ. ಅವಳ ತಲೆಯನ್ನು ನೇವರಿಸಿ, ಮುದ್ದು ಮಾಡುತ್ತೇನೆ. ಸಂದರ್ಭದಲ್ಲಿ ಆಕೆಯ ಕಣ್ಣಲ್ಲಿ ಸ್ಫುರಿಸುವ ಮುಗ್ಧ ಪ್ರೀತಿ, ನನ್ನನ್ನು ಸಂತೃಪ್ತನನ್ನಾಗಿಸುತ್ತದೆ. ಅಷ್ಟೊಂದು ಗಾಢ ಸ್ನೇಹ ನಮ್ಮಿಬ್ಬರದ್ದು.
ಆಕೆ ಅನಾಮಧೇಯೆ, ನಾಯಿ ಸಂಕುಲಕ್ಕೆ ಸೇರಿದವಳು. ಸದ್ಯ ನಾಲ್ಕು ಮಕ್ಕಳ ಮಹಾತಾಯಿ. ನಿರ್ದಿಷ್ಟ ಸ್ಥಳವಿಲ್ಲದ ಆಕೆಗೆ, ಹಾದಿ-ಬೀದಿಯೇ ವಾಸಸ್ಥಾನ. ವಾರದಲ್ಲಿ ಮೂರ್ನಾಲ್ಕು ಬಾರಿಯಾದರೂ ರಾತ್ರಿ ಮನೆಗೆ ಹೋಗುವ ಸಂದರ್ಭದಲ್ಲಿ ಅವಳು ವೀರಾಪುರ ರಸ್ತೆಯ(ರಾಧಾಕೃಷ್ಣ ಗಲ್ಲಿಯಿಂದ-ಅಗಸರ ಓಣಿ)ಲ್ಲಿ ಎದುರಾಗೇ ಆಗುತ್ತಾಳೆ. ಪ್ರಾರಂಭದಲ್ಲಿ ನನ್ನ ಹತ್ತಿರ ಬರಲು ತುಸು ನಾಚುತ್ತಿದ್ದ ಆಕೆ, ಈಗಂತ ನನ್ನ ಕಂಡೊಡನೇ ಓಡೋಡಿ ಬರುತ್ತಾಳೆ. ಅವಳ ತಲೆ ನೇವರಿಸಿ ಮುದ್ದು ಮಾಡಿ, ಏನಾದರೂ ತಿಂಡಿ ತಿನ್ನಿಸಿ ಕಳುಹಿಸುತ್ತೇನೆ. ಸಂದರ್ಭದಲ್ಲಿ ಅವಳ ಕಣ್ಣಲ್ಲಿ ಸ್ಫುರಿಸುವ ಪ್ರೀತಿ, ಮುಗ್ಧ ಭಾವ ನನ್ನನ್ನು ಸಂತೃಪ್ತನಾಗಿಸುತ್ತದೆ.
ಧಾವಂತದ ಬದುಕು. ಇದಕ್ಕೆ ಪೂರಕವಾದ ಬ್ಯಾಚುರಲ್ ಜೀವನ. ಏನು ತಿಂದೆ? ಯಾವಾಗ ಊಟ ಮಾಡಿದೆ? ಎಂದು ಹೇಳೊರು, ಕೇಳೋರು ಇಲ್ಲಿ ಯಾರು ಇಲ್ಲ. ವಾರದಲ್ಲಿ ನಾಲ್ಕೈದು ದಿನ ರೂಮಲ್ಲಿಯೇ ಊಟ-ತಿಂಡಿ ಮಾಡಿ, ಉಳಿದ ದಿನಗಳಿಗೆ ಹೊಟೆಲ್ ಆಶ್ರಯಿಸುತ್ತೇನೆ. ರಾತ್ರಿ ರೂಮಿಗೆ ಬರುವಾಗ ಯಾವುದಾದರೂ ಹೊಟೆಲ್ನಿಂದ ಅನ್ನ-ಸಾಂಬಾರು, ಇಡ್ಲಿ-ವಡಾ, ಪಲಾವ್, ಚಿತ್ರಾನ್ನ ಹೀಗೆ ಏನಾದರೂ ಪಾರ್ಸಲ್ ತೆಗೆದುಕೊಂಡು ಬರುವ ಪರಿಪಾಠ.
ನನ್ನ ಅವಳ ಸ್ನೇಹದ ಪ್ರಾರಂಭದ ದಿನಗಳಲ್ಲಿ, ನಾನು ಊಟ ಪಾರ್ಸಲ್ ತೆಗೆದುಕೊಂಡು ಬರುವ ಸಂದರ್ಭದಲ್ಲೆಲ್ಲ ಧುತ್ತೆಂದು ಅವಳು ಎದುರಾಗುತ್ತಿದ್ದಳು. ಇನ್ನೇನು ಬಾಲ ಕಿತ್ತೇ ಹೋಗುತ್ತದೆ ಎನ್ನಬೇಕು...! ಅಷ್ಟೊಂದು ಜೋರಾಗಿ ಬಾಲ ಅಲ್ಲಾಡಿಸುತ್ತ ಮುಂದೆ ನಿಲ್ಲುತ್ತಿದ್ದಳು. ಹಸಿದ ಹೊಟ್ಟೆಯ ತೊಳಲಾಟ ಅವಳ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಪಾರ್ಸಲ್ ತಂದ ಊಟವನ್ನೇ ಅವಳಿಗೆ ನೀಡಿ, ತಲೆ ನೇವರಿಸಿ ರೂಂ ಕಡೆ ಹೆಜ್ಜೆ ಹಾಕುತ್ತಿದ್ದೆ. ಹೊಟ್ಟೆ ತುಂಬಿದ ತೃಪ್ತ ಭಾವ ಅವಳದ್ದಾದರೆ, ಹೊಟ್ಟೆ ತುಂಬಿಸಿದ ಸಂತೃಪ್ತಿ ನನ್ನದಾಗುತ್ತಿತ್ತು.
ಒಮ್ಮೊಮ್ಮೆ ರೂಮಿನಲ್ಲಿ ಏನೂ ತಿಂಡಿಗಳಿರುತ್ತಿರಲಿಲ್ಲ. ಅಡುಗೆ ಮಾಡಿಕೊಳ್ಳೋಣ ಎಂದರೆ ರಾತ್ರಿ 10 ಆಗಿರುತ್ತಿತ್ತು. ಮೊದಲೇ ದಣಿದು ಬಂದಿದ್ದಕ್ಕೆ, ಹಾಸಿಗೆ ಸಿಕ್ಕರೆ ಸಾಕು ಎನ್ನುವ ಫೀಲ್. ಆಗೆಲ್ಲ, ತಣ್ಣನೆಯ ನೀರನ್ನು ಹಸಿದ ಹೊಟ್ಟೆಗೆ ಇಳಿಸಿ ತಂಪಾಗಿಸಿಕೊಳ್ಳುತ್ತಿದ್ದೆ. ನಂತರದ ದಿನಗಳಲ್ಲಿ ಅವಳು ಎಲ್ಲಿಯಾದರೂ ಸಿಗಬಹುದು ಎಂದು, ಎರಡೆರಡು ಪಾರ್ಸಲ್ ತೆಗೆದುಕೊಂಡು ಬರುತ್ತಿದ್ದೆ. ಬಹುತೇಕ ಬಾರಿ ಸಿಗುತ್ತಿದ್ದಳು. ಸಿಗದಿದ್ದಾಗ ಅಲ್ಲಿಯೇ ಇರುವ ದನ-ಕರುಗಳಿಗೆ ಒಂದು ಪಾರ್ಸಲ್ ನೀಡಿ ಬರುತ್ತಿದ್ದೆ.
ಆದರೆ, ಆ ಪ್ರೀತಿ, ಮುಗ್ಧತೆ, ಸಂತೃಪ್ತ ಭಾವ... ಇನ್ನು ಕೇಲವೇ ಕೆಲವು ದಿನಗಳು ಮಾತ್ರ. ಬದುಕಿನ ಕಾಲಘಟ್ಟದಲ್ಲಿ ಅನಿವಾರ್ಯವಾಗಿ ಅವಳ ಸ್ನೇಹದಿಂದ ದೂರಾಗುವ ಸಮಯ ಎದುರಾಗುತ್ತಿದೆ. ಇನ್ನು ಮುಂದೆ, ಆಕೆಯ ಪ್ರೀತಿ....? ಆಕೆಯ ಹಸಿವು...? ಆ ಸಂತೃಪ್ತ ಭಾವ...? ಹಸಿವು ನೀಗಿಸಿದ ತಣ್ಣನೆಯ ತಣ್ಣೀರು...? ಎಲ್ಲಿ, ಹೇಗೆ, ಎಂತು....?
-ನಾಗಾರಾಜ್. ಬಿ.ಎನ್ 
ಹೀಗೂ ಇರ್ತಾರೆ... ಎಚ್ಚರ... ಎಚ್ಚರ..!!!
ಆಕೆ ನನ್ನ ಸ್ನೇಹಿತನ ಸ್ನೇಹಿತೆ. ಈಗಷ್ಟೇ ಪಿಯುಸಿ ಮುಗಿಸಿ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾಳೆ. ಸಾಮಾನ್ಯ ಕುಟುಂಬದಿಂದ ಬಂದ ಆಕೆ, ಓದಿನಲ್ಲಿ ಬುದ್ಧಿವಂತಳು. ಶಾಂತ ಸ್ವಭಾವದ ಹುಡುಗಿಯಾದ ಅವಳು, ಸ್ನೇಹಿತರ ಅಚ್ಚುಮೆಚ್ಚಿನ ಗೆಳತಿಯಾಗಿದ್ದಳು. ಚಿಕ್ಕ ಕುಟುಂಬದಲ್ಲಿ ಅಪ್ಪ ಅಮ್ಮರೇ ದೈವ ಸ್ವರೂಪಿ, ಬೆನ್ನಿಗೆ ಅಂಟಿಕೊಂಡು ಬಂದ ತಮ್ಮನೇ ಬಾಲ್ಯದ ಜೊತೆಗಾರ.
ಆಕೆಯ ಹೆಸರು ಶ್ವೇತಾ(ಹೆಸರು ಬದಲಾಯಿಸಲಾಗಿದೆ). ಬದುಕಲ್ಲಿ ತಾನು ಏನಾದರೂ ಸಾಧಿಸಬೇಕೆನ್ನುವ ಅಚಲ ಮನೋಭಾವದ ಹುಡುಗಿ. ಪದವಿ ಶಿಕ್ಷಣಕ್ಕಾಗಿ ಊರು ಬಿಟ್ಟು ನಗರಕ್ಕೆ ಬರುತ್ತಾಳೆ. ಹಾಸ್ಟೆಲ್ ಜೀವನದಲ್ಲಿ ಅವಳಿಗೆ ಎಲ್ಲವೂ ಹೊಸತಾಗಿ ಕಾಣುತ್ತದೆ.
ಹಳ್ಳಿಯಲ್ಲಿ ಬೆಳೆದ ಶ್ವೇತಾ ಆಧುನಿಕ ಜಗತ್ತಿಗೆ ನಿಧಾನವಾಗಿ ತೆರದುಕೊಳ್ಳುತ್ತಿದ್ದಾಳೆ. ಕೈಯ್ಯಲ್ಲೊಂದು ಸ್ಮಾರ್ಟ್ ಫೋನ್ ಬಂದಿದೆ. ಮೊದಮೊದಲು ಮನೆಯ ಕರೆಗಷ್ಟೇ ಸೀಮಿತವಾಗುತ್ತಿದ್ದ ಫೋನ್, ನಂತರ ನೆಟ್ ಸರ್ಫಿಂಗೆ ಬಳಕೆಯಾಗುತ್ತಿತ್ತು. ನಿಧಾನವಾಗಿ ಜಿ-ಮೇಲ್ ಅಕೌಂಟ್, ಗೂಗಲ್ ಅಕೌಂಟ್, ಪೇಸ್ಬುಕ್ ಅಕೌಂಟ್ಗಳೆಲ್ಲ ಪ್ರಾರಂಭವಾದವು. ವಿದ್ಯಾಭ್ಯಾಸದ ಜೊತೆಗೆ ಇಂಟರ್-ನೆಟ್ ಸರ್ಫಿಂಗ್ ಕೂಡಾ ಅವಳಿಗೆ ಅಭ್ಯಾಸವಾಗುತ್ತ ಹೋಯಿತು.
ಸಮಯ ದೊರೆತಾಗಲೆಲ್ಲ ಶ್ವೇತಾ ಫೇಸ್-ಬುಕ್ ಜಾಲತಾಣದಲ್ಲಿ ಮುಳುಗೇಳುತ್ತಿದ್ದಳು. ಪ್ರಾಣಿ, ಪಕ್ಷಿ, ಪ್ರಕೃತಿಯ ಚಿತ್ರ ಹಾಗೂ ಸ್ನೇಹಿತೆಯರ ಮತ್ತು ತನ್ನ ಫೊಟೋಗಳನ್ನು ಪೋಸ್ಟ್ ಮಾಡುತ್ತ, ಸ್ನೇಹಿತರಿಂದ ಸಾಕಷ್ಟು ಲೈಕ್, ಕಮೆಂಟ್ಸ್ ಪಡೆಯುತ್ತಿದ್ದಳು. ಇದೊಂದು ಅವಳಿಗೆ ಪರಿಪಾಠವೇ ಆಗಿ ಹೋಯಿತು. ಒಮ್ಮೊಮ್ಮೆ ತನ್ನ ಕ್ಲೋಸ್-ಅಪ್ ಫೊಟೋ ಹಾಕಿ ತನ್ನಷ್ಟಕ್ಕೆ ತಾನೇ ಸಂತೋಷ ಪಡೆಯುತ್ತಿದ್ದಳು. ಆ ಸಂತೋಷಕ್ಕೆ ಅನೇಕ ಸ್ನೇಹಿತರು ಮುಕ್ತವಾಗಿ ಕಮೆಂಟ್ಸ್ ಮಾಡುತ್ತಿದ್ದರು. ಆ ಕಮೆಂಟ್ಸ್ಗಳು ಅವಳಿಗೆ ಅವ್ಯಕ್ತ ಆನಂದ ಉಂಟು ಮಾಡುತ್ತಿತ್ತು.
ಹೀಗಿರಲು ಒಂದು ದಿನ ಶ್ವೇತಾಳಿಗೆ ಫೇಸ್-ಬುಕ್ನಲ್ಲಿ ಆಘಾತಕಾರಿ ಚಿತ್ರವೊಂದು ಕಣ್ಣಿಗೆ ಬೀಳುತ್ತದೆ. ಆಕೆಗೆ ಅದು ನಂಬಲೇ ಆಗುತ್ತಿಲ್ಲ. ತನ್ನ ಬದುಕೇ ನಾಶವಾಯಿತು ಎಂದೆಲ್ಲ ಯೋಚಿಸುತ್ತಾಳೆ. ಅವಳ ಕಣ್ಣೆದುರು... ಪ್ರೀತಿಯ ಅಪ್ಪ, ಮಮತೆಯ ಅಮ್ಮ, ಆತ್ಮೀಯ ತಮ್ಮ ಎಲ್ಲರೂ ಒಮ್ಮೆ ಹಾದು ಹೋಗುತ್ತಾರೆ. ಚಿಕ್ಕ ಅಚಾತುರ್ಯ ಜೀವವನ್ನೇ ಬಲಿ ತೆಗೆದುಕೊಳ್ಳುವ ಸನ್ನಿವೇಶಕ್ಕೆ ನೂಕುತ್ತದೆ ಎಂದು ಅವಳು ಕನಸು-ಮನಸಿನಲ್ಲೂ ಊಹಿಸಿರಲಿಲ್ಲ. ಅರೆಕ್ಷಣದಲ್ಲಿ ಕತ್ತಲಾವರಿಸಿದಂತಾಗಿ, ಅಲ್ಲಿಯೇ ಕುಸಿದು ಬೀಳುತ್ತಾಳೆ...!!
ಹಾಗಾದರೆ ಆಗಿದ್ದೇನು...?
ಸ್ಮಾರ್ಟ್ ಫೋನ್ ಖರೀದಿಸದ ಪ್ರಾರಂಭದಲ್ಲಿ ಕೇವಲ ಸಂಭಾಷಣೆಗಷ್ಟೇ ಬಳಕೆಯಾಗುತ್ತಿತ್ತು. ನಂತರ ಸಾಮಾಜಿಕ ಜಾಲತಾಣ ಎನ್ನುವ ಮಾಯಾಲೋಕ ಶ್ವೇತಾಳನ್ನು ಬಿಗಿದಪ್ಪಿಕೊಳ್ಳುತ್ತದೆ. ತೀರಾ ವೈಯಕ್ತಿಕ ಎಂದೆನಿಸುವ ಸಾಕಷ್ಟು ಕ್ಲೋಸ್-ಅಪ್ ಫೊಟೋಗಳನ್ನು ಅವಳು ಫೇಸ್-ಬುಕ್ ಖಾತೆಗೆ ಪೋಸ್ಟ್ ಮಾಡಿರುತ್ತಾಳೆ. ನೋಡಲು ಸುಂದರವಾಗಿರುವ ಆಕೆಯ ಫೊಟೋಗಳನ್ನು ವಿಕೃತ ಮನಸ್ಸಿನವನೊಬ್ಬ ಡೌನ್-ಲೋಡ್ ಮಾಡಿಕೊಂಡು, ಅಸಹ್ಯ ರೀತಿಯಲ್ಲಿ ಚಿತ್ರಿಸಿ ಪೋಸ್ಟ್ ಮಾಡಿದ್ದಾನೆ. ಆ ಫೊಟೋ ನೋಡಿದ ಕೂಡಲೇ ಶ್ವೇತಾಳಿಗೆ ನಿಜವಾಗಿಯೂ ಅದು ತಾನೇ ಎಂದು ಭಾಸವಾಗಿದೆ. ಸಾರ್ವಜನಿಕವಾಗಿ ಹಾಗೂ ಸ್ನೇಹಿತರೆದುರು ತನ್ನ ಮಾನ-ಮಯರ್ಾದೆ ಹರಾಜಾಯಿತಲ್ಲ ಎಂದು ಅವಳು ಆಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾಳೆ.
ಸ್ನೇಹಿತರೇ..................
ದಯವಿಟ್ಟು ಈ ಪ್ರಕರಣದ ತೀವ್ರತೆ ಹಾಗೂ ಆಳವನ್ನು ಸೂಕ್ಷ್ಮವಾಗಿ ಅರಿಯಿರಿ. ನಿಮ್ಮ ಫೇಸ್-ಬುಕ್ ಅಕೌಂಟ್ ಜೊತೆ ನಿಮ್ಮ ಅಕ್ಕ, ತಂಗಿ, ಸ್ನೇಹಿತೆಯರದ್ದು ಇರಬಹುದು. ಎಲ್ಲರಿಗೂ ಅವರವರದ್ದೇ ಆದ ಫೇಸ್-ಬುಕ್ ಸ್ನೇಹಿತರಿರುತ್ತಾರೆ. ಅವರಲ್ಲಿ ಕೆಲವಷ್ಟು ಜನ ಪರಿಚಿತರಿದ್ದರೆ, ಬಹಳಷ್ಟು ಜನ ಅಪರಿಚಿತರೇ ಇರುತ್ತಾರೆ. ಅಲ್ಲದೆ, ಸ್ನೇಹಿತರಲ್ಲದವರೂ ಕೂಡಾ ನಮ್ಮ ಅಕೌಂಟ್ಗೆ ಪ್ರವೇಶ ಪಡೆಯಬಹುದು, ಫೋಟೋಗಳನ್ನು ಜಾಲಾಡಬಹುದು ಅಲ್ಲವೇ? ಸುಳ್ಳು ಹೆಸರಿನಲ್ಲಿಯೂ ಖಾತೆ ಹೊಂದಿ, ಸ್ನೇಹಿತರಾಗಿರಬಹುದು. ಅವರ್ಯಾರು, ಎಲ್ಲಿಯವರು ಎನ್ನುವ ಚಿಕ್ಕ ಮಾಹಿತಿಯೂ ನಮಗಿರುವುದಿಲ್ಲ.
ಕೆಲವರು ಮಹಿಳೆಯರ ಫೊಟೋಗಳನ್ನು ಸಾಮಾಜಿಕ ಜಾಲತಾಣದಿಂದ ಡೌನ್-ಲೋಡ್ ಮಾಡಿಕೊಂಡು ಅಶ್ಲೀಲ ಜಾಲತಾಣಕ್ಕೆ ಅದನ್ನು ಅಪ್-ಲೋಡ್ ಮಾಡುತ್ತಿದ್ದಾರೆ. ಅದರಲ್ಲೂ-ಕಾಲೇಜ್ ಹುಡುಗಿಯರ ಫೋಟೋಗಳನ್ನೇ ಅವರು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಫೋಟೊಗಳನ್ನು ಎಲ್ಲಿಯೂ ಅನುಮಾನ ಬರದ ರೀತಿಯಲ್ಲಿ ಕ್ರಾಪ್ ಮಾಡಿ ಅಶ್ಲೀಲ ಚಿತ್ರಕ್ಕೆ ಜೋಡಿಸುತ್ತಾರೆ. ಈ ಕಾರ್ಯ ನಿರ್ವಹಿಸಲು ಪರಿಣಿತ ಸಿಬ್ಬಂದಿ ನೇಮಿಸಿಕೊಂಡು, ಒಂದೊಂದು ಫೊಟೋ ಕ್ರಾಪ್ ಮಾಡಲು 500, 1,000 ರೂ.ಗಳನ್ನು ನೀಡುತ್ತಾರೆ. ವಿದೇಶಗಳಲ್ಲಿ ಈ ವಿಕೃತ ಮನಸ್ಸಿನ ಜಾಲವೇ ಇದ್ದು, ಅದು ಈಗ ಭಾರತಕ್ಕೂ ವ್ಯಾಪಿಸಿದೆ. ಇದೊಂದು ದೊಡ್ಡ ವ್ಯವಹಾರವಾಗಿ ಮಾರ್ಪಟ್ಟಿದೆ.
ವಿಕೃತ ಕಾಮಿಗಳು ಸಾಮಾಜಿಕ ಜಾಲಾತಾಣದಲ್ಲಿ ಕ್ರಾಪ್ ಮಾಡಿರುವ ಫೊಟೋಗಳನ್ನು ಅಪ್ಲೋಡ್ ಮಾಡಿದರೆಂದರೆ, ಜಾಲತಾಣದಲ್ಲಿರುವ ನಮ್ಮೆಲ್ಲ ಸ್ನೇಹಿತರಿಗೆ ಆ ಚಿತ್ರ ರವಾನೆಯಾಗುತ್ತದೆ. ಇದರಿಂದಾಗಿ ಎಷ್ಟೋ ಸುಂದರ ಸಂಸಾರ ಹಾದಿಗೆ ಬಂದಿವೆ. ಎಷ್ಟೋ ಮುಗ್ದ ಹೆಣ್ಣು ಮಕ್ಕಳು ಜೀವ ತೆತ್ತುತ್ತಿದ್ದಾರೆ. ವಿವಾಹ ವಿಚ್ಛೆದನದಂತ ಪ್ರಕರಣಗಳು ಸರತಿ ಸಾಲಿನಲ್ಲಿ ನಡೆಯುತ್ತಿವೆ. ಅಲ್ಲದೆ, ನಿಶ್ಚಯವಾದ ವಿವಾಹವು ಮುರಿದು ದಿಕ್ಕಾಪಾಲಾಗಿ ಹೋಗಿವೆ...!!
ನಂತರ ನಾವು ಪೊಲೀಸ್ ದೂರು ನೀಡಿ ನ್ಯಾಯಕ್ಕಾಗಿ ಮೊರೆ ಹೋಗಬಹುದು. ಆದರೆ, ಕಳೆದುಕೊಂಡ ಮಾನ... ಬದುಕು... ಮರಳಿ ಬರಲು ಸಾಧ್ಯವೇ..? ಶ್ವೇತಾಳಿಗೆ ಆದ ಅವಮಾನ ನಮ್ಮ ಯಾವ ಸ್ನೇಹಿತೆಯರಿಗೂ, ಸಹೋದರಿಯರಿಗೂ ಆಗದಿರಲಿ ಎನ್ನುವ ಪುಟ್ಟ ಕಳಕಳಿ. ಈ ಕುರಿತು ಚಿಂತಿಸಿ, ಚರ್ಚಿಸಿ.... ಸರಿ ಎಂದೆನಿಸದರೆ ಈಗಾಗಲೇ ಸಾಮಾಜಿಕ ಜಾಲಾತಾಣಕ್ಕೆ ಹಾಕಿರುವ ಕ್ಲೋಸ್-ಅಪ್ ಫೊಟೋಗಳನ್ನು ರೀಮೂವ್ ಮಾಡಿ. ಇಲ್ಲ... ಸಾಮಾಜಿಕ ಜಾಲತಾಣವೆಂದರೆ ಇವೆಲ್ಲ ಸಾಮಾನ್ಯ ಎಂದೆನಿಸಿದರೆ ನಿಮ್ಮಿಷ್ಟ. ಯಾವುದಕ್ಕೂ ವಿವೇಚನಾ ಯುಕ್ತ ತೀರ್ಮಾನ ನಿಮ್ಮದಾಗಿರಲಿ...
--ನಾಗರಾಜ್ ಬಿಎನ್.
ಇದು ನನ್ನ 'ಪ್ರೀತಿ' ಜಗತ್ತು...!
ಬದುಕು ಒಂದು ಸುಂದರ ಕಾವ್ಯ. ಅಕ್ಷರ ಲೋಕದಲ್ಲಿ ಪದಗಳು ಮೆರೆದಾಡಿದರೆ ಬದುಕಿನ ಲೋಕದಲ್ಲಿ ಗುಣಗಳು ಮೆರೆದಾಡುತ್ತವೆ. ಸುಂದರ ಕಾವ್ಯದಲ್ಲಿರುವ ಒಂದೊಂದು ಪದಗಳು ಒಂದೊಂದು ಅರ್ಥ ಹೇಳುತ್ತ ಭಾವ ಭಿತ್ತಿಯಲ್ಲಿ ಅಚ್ಚೊತ್ತಿ ಬಿಡುತ್ತವೆ. ಕಣ್ಮುಚ್ಚಿದರೂ ನಿದ್ರೆಯಲ್ಲಿ ಬಂದು ಪರಿ ಪರಿಯಾಗಿ ಕಾಡುತ್ತವೆ. ಹಾಗೆಯೇ ಬದುಕೆಂಬ ಮಹಾಕಾವ್ಯದಲ್ಲೂ ಒಂದೊಂದು ಸಾತ್ವಿಕ ಗುಣ ಪ್ರಬುದ್ಧತೆಗೆ ಕೊಂಡೊಯ್ಯತ್ತದೆ. ಅರ್ಥಪೂರ್ಣ ಜೀವನಕ್ಕೆ ಸಾಕ್ಷೀಕರಿಸಿ, ಅಳಿದ ಮೇಲೂ ಉಳಿದವರ ನಾಲಿಗೆಯ ಮೇಲೆ ಹರಿದಾಡುವಂತೆ ಮಾಡುತ್ತದೆ.
ಹುಟ್ಟು-ಸಾವಿನ ನಡುವಿರುವ ಬದುಕು ಸಾಮಾನ್ಯವಾಗಿರದೆ, ಹೊಸತನದ ಹಾದಿಯಲ್ಲಿ ಸಾಗುತ್ತಿರಬೇಕು. ಇಲ್ಲಿ ಎಲ್ಲರೂ ಜೀವಿಸುತ್ತಾರೆ; ಬಾಳಿ ಬದುಕುತ್ತಾರೆ. ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಾರೆ. ಆದರೆ ಜೀವಿತದ ಒಂದೇ ಒಂದು ಕುರುಹು ಸಹ ಅವರಿಂದ ಬಿಟ್ಟು ಹೋಗಲು ಸಾಧ್ಯವಾಗುವುದಿಲ್ಲ. ಹಾಗಂತ ನಾಲ್ಕೈದು ಅಂತಸ್ತಿನ ಮನೆಯನ್ನು ಕಟ್ಟಿಸಿರುತ್ತಾರೆ. ಮೂರ್ನಾಲ್ಕು ತಲೆಮಾರುಗಳು ಕೂತು ಉಂಡರೂ ಕರಗದ ಆಸ್ತಿ ಮಾಡಿರುತ್ತಾರೆ. ಶ್ರೀಮಂತಿಕೆ ವೈಭವವೇ ಅವರಲ್ಲಿ ಠೇಂಕರಿಸಿ ವಿಜೃಂಭಿಸಿರುತ್ತದೆ. ಆದರೆ, ಅದು ಅವರ ಸ್ವಂತಿಕೆಗಷ್ಟೇ ಸೀಮಿತವಾಗಿರುತ್ತವೆಯೇ ಹೊರತು, ಮಾನವೀಯತೆಗೆ ಬಳಕೆಯಾಗುವುದು ತೀರಾ ಕಡಿಮೆಯೇ. ಪರಿಣಾಮ ಅಳಿದ ಮೇಲೆ, ಅಂತಸ್ತಿನ ಮನೆಯ ಪಡಶಾಲೆಯಲ್ಲಿ ಭಾವಚಿತ್ರಕ್ಕೊಂದು ಜಾಗವಷ್ಟೇ....!
ಬದುಕಿನ ಸುಂದರ ಮಹಾಕಾವ್ಯದಲ್ಲಿ ಭಾವಚಿತ್ರವಾಗಷ್ಟೇ ಇರಬಾರದು. ಸರ್ವರ ಹೃದಯಲ್ಲೂ ಜೀವಂತಿಕೆಯ ಮೂರ್ತಿಯಾಗಿ ಸದಾ ನೆನಪಿನಲ್ಲಿರುವಂತಾಗಬೇಕು. ತಾಮಸ ಗುಣಗಳನ್ನು ಸಂಹರಿಸಿ, ಸಾತ್ವಿಕ ಗುಣಗಳ ಅನುಯಾಯಿಗಳಾಗಬೇಕು. ಎಲ್ಲರೂ ನನ್ನವರು ಎನ್ನುವ ಭಾವ ಅಂಕುರಿಸಿ, ಪ್ರೀತಿಯ ಸಾಮ್ರಾಜ್ಯ ಸ್ಥಾಪಿಸಬೇಕು. ಆ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆದಾಡಬೇಕು. ಸುತ್ತಮುತ್ತಲಿನವರನ್ನು ವಿಶ್ವಾಸದ ತೆಕ್ಕೆಯಲ್ಲಿ ಬಂಧಿಸಬೇಕು. ಸಾಮರಸ್ಯದ ಹಾದಿ ತುಳಿದು, ಸಹಬಾಳ್ವೆಯ ಮಂತ್ರ ಜಪಿಸಬೇಕು. ಆಗ ಅಲ್ಲಿನ ವಾತಾವರಣ ನಿಜಕ್ಕೂ ನಂದನವನ. ಸ್ವರ್ಗ ಸಮಾನ...!
ಶ್ರೀಮಂತಿಕೆಯ ದರ್ಪವಿಲ್ಲದ ಆ ಪ್ರೀತಿ ಸಾಮ್ರಾಜ್ಯದಲ್ಲಿ ಎಲ್ಲರೂ ಸುಖಿಗಳೇ; ಎಲ್ಲರೂ ಒಬ್ಬರಿಗೊಬ್ಬರು ಪ್ರೀತಿ ಪಾತ್ರರೆ. ರಾಗ-ದ್ವೇಷಗಳು ಅಲ್ಲಿ ಮಖಾಡೆ ಮಲಗಿ, ಪ್ರೀತಿ-ವಿಶ್ವಾಸಗಳು ಸದಾ ಎಚ್ಚರದಿಂದಿರುತ್ತವೆ. ತಪ್ಪು ಮಾಡಲು ಅಲ್ಲಿ ಅವಕಾಶವೇ ಇಲ್ಲ. ಇದ್ದರೂ ತಿದ್ದಿ-ತೀಡುವ ಮನಸ್ಸುಗಳು ಸುತ್ತಲೇ ಇದ್ದು, ನಮ್ಮ ಕಿವಿ ಹಿಂಡುತ್ತಲೇ ಇರುತ್ತವೆ. ಸೋಲು-ಗೆಲುವಿಲ್ಲದ ಈ ಪ್ರೀತಿ ಜಗತ್ತಲ್ಲಿ ಪ್ರೀತಿಯೇ ಉಸಿರಾಗಿ, ಪ್ರೀತಿಯೇ ಬದುಕಾಗಿ, ಪ್ರೀತಿಯೇ ಧ್ಯೇಯವಾಗಿ ಬದಲಾಗಿ ಬಿಡುತ್ತದೆ
-ನಾಗರಾಜ್ ಬಿ.ಎನ್.