ಮಂಗಳವಾರ, ಮಾರ್ಚ್ 22, 2016

ಸ್ವಾರ್ಥ.... ಅವರವರ ದೃಷ್ಟಿಕೋನ

ಅಂಕೋಲಾದ ಸಾಹಿತಿ ವಿಷ್ಣು ನಾಯ್ಕ ಸಂಪಾದನೆ ಮಾಡಿರುವ 'ಗೌರೀಶ ಕಾಯ್ಕಿಣಿ ಅವರ ಆಯ್ದ ಲೇಖನಗಳು' ಅತ್ಯಂತ ಇಷ್ಟ ಪಡುವ ಹಲವು ಹೊತ್ತಿಗೆಗಳಲ್ಲಿ ಒಂದು. ಅದರಲ್ಲಿಯ ತೆನೆ- 1ರ ಭಾಗದಲ್ಲಿನ ವಿಚಾರವಾದದಲ್ಲಿ ಗೌರೀಶ ಕಾಯ್ಕಿಣಿಯವರು ಭಯ, ಪೂರ್ವಗ್ರಹಿಕೆ, ಅಜ್ಞಾನ, ಅರೆಬರೆಜ್ಞಾನ, ಸ್ವಾರ್ಥ, ಅಭಿನಿವೇಷ, ಬಗೆಗುದುರೆಯ ಪಟ್ಟಿ, ಮನೋದೌರ್ಬಲ್ಯ, ಭಾವೋದ್ರೇಕ ಮತ್ತು ಅನುಮಾನದ ಕುರಿತು ಅರ್ಥವತ್ತಾಗಿ ವಿಶ್ಲೇಷಿಸಿದ್ದಾರೆ. ಅದರಲ್ಲಿಯ ' ಸ್ವಾರ್ಥ' ಭಾಗದ ಅವರ ಬರವಣಿಗೆ ಮನುಷ್ಯನ ದೃಷ್ಟಿಕೋನದ ಕುರಿತು ಮಾರ್ಮಿಕವಾಗಿ ತಿಳಿಸುತ್ತದೆ. ಕಾಯ್ಕಿಣಿಯವರ ಆ ಬರಹ ಯಥಾರೂಪದಲ್ಲಿ......
ಪ್ರತಿಯೊಬ್ಬನೂ ಒಂದಲ್ಲ ಒಂದು ಅರ್ಥಕ್ಕೆ ಕಟ್ಟುಬಿದ್ದಿರುತ್ತಾನೆ. ಅದು ಆತನ ಕೇವಲ ಸಂಕುಚಿತ ಸ್ವಾರ್ಥವೇ ಆಗಬೇಕೆಂದಿಲ್ಲ. ಪ್ರತಿಷ್ಠೆ, ಅಭಿಮಾನ, ಭಾವಾವೇಶಗಳಿಂದ, ಅಭಿರುಚಿ, ಆಸಕ್ತಿ, ವ್ಯಾಮೋಹ ಇವೆಲ್ಲವೂ ಆತನ ಮನೋದಾಸ್ಯಕ್ಕೆ ಕಾರಣವಾಗುವ 'ಅರ್ಥಟಗಳು' ಆಗಬಲ್ಲವು. ಈ ಕೆಳಗಿನ ಒಂದು ಸಂವಾದ ಇದರದೊಂದು ಪರಿಚಯ ಕೊಡಬಹುದು.
ಮಗ ತನ್ನ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕೆಂಬ ಹಟದಿಂದ ತಂದೆಯನ್ನು ಕೇಳಿದ.
'ಅಪ್ಪಾ, ಧರ್ಮಾಂತರ ಅಂದರೇನು?'
ತಂದೆ ಹೇಳಿದ. 'ಮಗು, ಯಾವನೊಬ್ಬನು ಬೇರೊಂದು ಧರ್ಮ ಬಿಟ್ಟು ನಮ್ಮ ಧರ್ಮಕ್ಕೆ ಬಂದರೆ ಅದಕ್ಕೆ ಧರ್ಮಾಂತರ ಎನ್ನುವರು. ತಿಳಿಯಿತೇ?'
ಮಗನ ಜ್ಞಾನ ಪಿಪಾಸೆ ಅಷ್ಟಕ್ಕೇ ತಣಿಯಲಿಲ್ಲ. ' ಹಾಗಾದರೆ ಅಪ್ಪಾ, ಯಾವನೊಬ್ಬ ನಮ್ಮ ಧರ್ಮ ಬಿಟ್ಟು ಬೇರೆ ಧರ್ಮಕ್ಕೆ ಸೇರಿದರೆ....?'
ತಂದೆ ತಾಳ್ಮೆಗೆಟ್ಟು ಹೆದರಿಸಿದ, 'ಛೀ ಮಂಕೇ, ಆ ಮಾತೇ ಬಿಡು. ಅದು ಶುದ್ಧ ಧರ್ಮದ್ರೋಹ! ಅಂಥವರನ್ನು ನಂಬಬಾರದು. ದ್ರೋಹಿ ಮುಂಡೆ ಮಕ್ಕಳು!'
ಒಟ್ಟಾರೆ ಎಲ್ಲವೂ ದೃಷ್ಟಿಕೋನದಲ್ಲಿದೆ. ಅದು ಧರ್ಮಾಂತರ. ಇದು ಧರ್ಮದ್ರೋಹ. ಕ್ರಿಯೆ ಎರಡೂ ಕಡೆಗೆ ಒಂದೇ. ಧರ್ಮವನ್ನು ಬದಲಿಸುವವರು ಯಾವ ನಿಟ್ಟಿನಿಂದ ನೋಡುತ್ತಾರೆ ಎಂಬುದನ್ನು ಹೊಂದಿಕೊಂಡಿದೆ. ಹೀಗೆ ನಮ್ಮ ವಿಚಾರಸರಣಿಯ ಸ್ವರೂಪವನ್ನೇ ಬೇರೆ ಮಾಡುವ ಶಕ್ತಿ ನಮ್ಮ ಸ್ವಾರ್ಥದ, ಸ್ವಾಭಿಮಾನದ- ಸ್ವಜನಾಭಿಮಾನದ ಸೆಳೆತದಲ್ಲಿದೆ.

ಮಂಗಳವಾರ, ಮಾರ್ಚ್ 1, 2016

ಸುಮ್ಮನೆ ಅಳುತ್ತಿದ್ದಳು... ನಕ್ಕು ನಲಿಯುತ್ತಿದ್ದಳು... 
ಏನೂ ಅರಿಯದ ಎರಡು ವರ್ಷದ ಆ ಮಗು ಒಮ್ಮೊಮ್ಮೆ ಅಳುತ್ತಿತ್ತು. ಮತ್ತೆ ಕೆಲವೊಮ್ಮೆ ಸುಮ್ಮನೆ ಕೇಕೇ ಹಾಕಿ ನಗುತ್ತಿತ್ತು. ಅತ್ತಾಗ ಬಿಸ್ಕಿಟ್ ನೀಡಿ ಸುಮ್ಮನಿರಿಸಿದರೆ, ನಕ್ಕಾಗಿ ಗಲ್ಲ ಹಿಡಿದು ಇನ್ನಷ್ಟು ನಗಿಸುತ್ತಿದ್ದರು. ಬಂದ ಕೆಲ ಗಣ್ಯರು ಆಕೆಯನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರು. ಗುರುಗಳು ತಲೆ ಮೇಲೆ ಕೈ ಇಟ್ಟು ನೂರ್ಕಾಲ ಬಾಳವ್ವ ಎಂದು ಆಶೀರ್ವದಿಸುತ್ತಿದ್ದರು.
ಇದು ಶುಕ್ರವಾರ ನಗರದ ನೆಹರು ಮೈದಾನದಲ್ಲಿ ಹನುಮಂತಪ್ಪನ ಪ್ರಾರ್ಥಿವ ಶರೀರದ ಸಾರ್ವಜನಿಕ ದರ್ಶನದ ವೇಳೆ ಕಂಡು ಬಂದ ಮಾನವೀಯ ದೃಶ್ಯಗಳು. ಆಕೆ ಮೃತ ಯೋಧ ಹನುಮಂತಪ್ಪನ ಮಗಳು ನೇತ್ರಾ. ಕುಟುಂಬ ವರ್ಗದವರಿಗಾಗಿ ಅಲ್ಲಿ ವಿಶೇಷ ಆಸನಗಳ ವ್ಯವಸ್ಥೆ ಮಾಡಿ ಗ್ಯಾಲರಿ ನಿರ್ಮಿಸಲಾಗಿತ್ತು.  ಹನುಮಂತಪ್ಪನ ತಾಯಿ ಬಸಮ್ಮ, ಪತ್ನಿ ಮಾದೇವಿ ಸೇರಿದಂತೆ ಆತನ ಅಣ್ಣ, ಅತ್ತಿಗೆ, ಮಕ್ಕಳು ಹಾಗೂ ಇತರ ಸಂಬಂಧಿಗಳೆಲ್ಲ ಅಲ್ಲಿ ಆಗಮಿಸಿದ್ದರು. ಅವರಲ್ಲಿ ಈ ಪುಟ್ಟ ಮಗು ನೇತ್ರಾ ಎಲ್ಲರ ಕೇಂದ್ರ ಬಿಂದು.
ಕೆಲವು ಗಣ್ಯರು ಕೊಪ್ಪದ ಅವರ ಪ್ರಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಗ್ಯಾಲರಿಯೊಳಗೆ ಬಂದು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳುತ್ತಿದ್ದರು. ಹನುಮಂತಪ್ಪರ ಮಗಳು ಎಂದು ತಿಳಿಯುತ್ತಿದ್ದಂತೆ, ಆಕೆಯನ್ನು ಎತ್ತಿ ಮುದ್ದು ಮಾಡುತ್ತಿದ್ದರು. ಅವರು ಎತ್ತಿಕೊಳ್ಳುತ್ತಿದ್ದಂತೆ ಆಕೆ ಜೋರಾಗಿ ಅಳುತ್ತಿದ್ದಳು. ಸಂದರ್ಭದಲ್ಲಿ ಬಿಸ್ಕಿಟ್ ನೀಡಿ ಅವಳನ್ನು ಸುಮ್ಮನಿರಿಸಲಾಗುತ್ತಿತ್ತು.
ಮೂರುಸಾವಿರ ಮಠದ ಶ್ರೀಗಳು, ರಂಭಾಪುರಿ ಶ್ರೀಗಳು, ವಚನಾನಂದ ಸ್ವಾಮೀಜಿ, ಆನಂದ ಗುರೂಜಿ ಅವಳ ತಲೆಯ ಮೇಲೆ ಕೈಯಿಟ್ಟು 'ಸುಖ ಸಂತೋಷದಿಂದ ನೂಕರ್ಾಲ ಬಾಳಿ ಬದುಕವ್ವ. ಹೆಮ್ಮೆಯ ದೇಶಭಕ್ತನ ಮಗಳಾಗಿ ಜನಿಸಿದ ನೀನು ಪುಣ್ಯವಂತೆ' ಎಂದು ಹರಸಿ ಹಾರೈಸಿದ್ದರು.
ಕೆಲ ಜನಪ್ರತಿನಿಧಿಗಳು ಆಕೆಯನ್ನು ಎತ್ತಿಕೊಳ್ಳಲು ಮುಂದಾದಾಗ ಒಲ್ಲೆ ಎಂದು ವರಾತ ತೆಗೆದವಳು, ಆರ್ಮಿ ಅಧಿಕಾರಿಗಳು ಎತ್ತಿಕೊಂಡಾಗ ಸುಮ್ಮನೆ ಇರುತ್ತಿದ್ದಳು. ಸಂದರ್ಭದಲ್ಲಿ 'ನನ್ನಪ್ಪನೂ ಆರ್ಮಿಯಲ್ಲಿದ್ದ' ಎನ್ನುವ ಭಾವ ಆಕೆಯ ಒಳಮನಸ್ಸಿಗೆ ಅರ್ಥವಾಗುತ್ತಿತ್ತೇ ಎನ್ನುವ ಪ್ರಶ್ನೆ ಅಲ್ಲಿದ್ದವರನ್ನು ಕಾಡುತ್ತಿತ್ತು.
ಆಕೆ ಒಂದೇ ಸಮನೆ ಅಳುತ್ತಿದ್ದದ್ದನ್ನು ಗಮನಿಸಿದ ಹಿರಿಯ ಆರ್ಮಿ ಅಧಿಕಾರಿಯೊಬ್ಬರು ಸುಮ್ಮನಿರಿಸಲು ಅವಳನ್ನು ಎತ್ತಿಕೊಂಡರು. ಅವರ ತೋಳಲ್ಲಿ ಬಂಧಿಯಾಗುತ್ತಿದ್ದಂತೆ ಅವಳು ಅಳು ನಿಲ್ಲಿಸಿದಳು. ಸುಮ್ಮನೇ ಕತ್ತೆತ್ತಿ ಅವರ ಮುಖ ನೋಡಿದ ಆಕೆ, ನಸುನಕ್ಕು ಎದೆ ಭಾಗದ ಮೇಲೆ ಕಣ್ಣಾಡಿಸಿದಳು. ಅಲ್ಲಿ ಮಿಲಿಟರಿ ಸಂಕೇತದ ಪದಕ ಜೋತಾಡುತ್ತಿತ್ತು. ಕೈಯ್ಯಲ್ಲಿ ಬಿಗಿಯಾಗಿ ಹಿಡಿದು, ಅವರ ಮುಖವನ್ನು ಪದೆ ಪದೇ ನೋಡುತ್ತಿದ್ದಳು. 'ನನ್ನಪ್ಪನ ಆಫೀಸರ್ಸ್ ನೀವು' ಎಂದು ಆಂಗಿಕ ಭಾವದಿಂದ, ಮೂಕ ಸಂವೇದನೆ ಮೂಲಕ ಆಕೆ ಹೇಳಿದಂತೆ ಭಾಸವಾಗಿತ್ತು.
ತನ್ನ ತುಂಟಾದಿಂದ, ಅರ್ಥ ಗರ್ಭಿತ ಭಾವದಿಂದ, ಸೂಕ್ಷ್ಮ ಸಂವೇದನೆಯಿಂದ ಭಾವನೆ ತೋರ್ಪಡಿಸುತ್ತಿದ್ದ ಪುಟ್ಟ ನೇತ್ರಾಳಿಗೆ, 'ಅಪ್ಪ ಇನ್ನಿಲ್ಲ' ಎನ್ನುವ ನೋವು ಕಾಡುತ್ತಿತ್ತೇನೋ ಎಂದೆನಿಸುತ್ತಿತ್ತು.
ಆದರೂ, ಪ್ರಪಂಚ ಅರಿಯದ ಮುಗ್ಧ ಮಗುವದು. ಅಳು, ನಗು, ತುಂಟಾಟ ಬಿಟ್ಟು ಇನ್ನೇನು ಅರ್ಥವಾದೀತು? ಒಟ್ಟಾರೆ, ಆ ನೇತ್ರಾ ನೆಹರು ಮೈದಾನದಲ್ಲಿ ನೆರೆದ ಪ್ರತಿಯೊಬ್ಬರ ಕೇಂದ್ರ ಬಿಂದುವಾಗಿದ್ದಂತು ಸತ್ಯ.
ನಿಮ್ಮ ರಾಜಕೀಯಕ್ಕೆ ಕಸಾಪನೇ ಬೇಕಾ...?

ಕನ್ನಡ ಸಾಹಿತ್ಯ ಪರಿಷತ್ ಎನ್ನುವುದು ಅಕ್ಷರಶಃ ರಾಜಕೀಯ ಮನೆಯಾಗಿಬಿಟ್ಟಿದೆ. ಅದರಲ್ಲೂ ಧಾರವಾಡದ ಕಸಾಪ ಸಾಹಿತಿಗಳ ಬಣವಂತೂ ಯಾವ ರಾಜಕೀಯ ಪಕ್ಷಕ್ಕೂ ಕಡಿಮೆಯಿಲ್ಲ ಎನ್ನುವಂತಾಗಿದೆ. ಒಳಗೊಳಗೆ ಪರಸ್ಪರ ಕತ್ತಿ ಮಸೆಯುತ್ತಿದ್ದವರು ಈಗ, ಬೀದಿಗೆ ಬಂದು ಅದನ್ನು ಪ್ರಯೋಗ ಮಾಡುತ್ತಿದ್ದಾರೆ. ಇವರ ಸ್ವಾರ್ಥಲೋಲುಪತೆ, ಅಧಿಕಾರ ದಾಹ, ನಿಸ್ವಾರ್ಥದಿಂದ ಹುಟ್ಟಿಕೊಂಡ ಕಸಾಪ ಎನ್ನುವ ಸಾಹಿತ್ಯ ಸಂಸ್ಥೆಗೆ ಅವಮಾನ!
-----------------
ಕನ್ನಡ ಕಟ್ಟುವ ಕೆಲಸ ಮಾಡಬೇಕಿದ್ದ ಕಸಾಪ ಅಧ್ಯಕ್ಷರು, ಯಾರಯಾರ ಅವಧಿಯಲ್ಲಿ ಎಷ್ಟೆಷ್ಟು ಹಣ ಖಚರ್ು ಮಾಡಿದ್ದಾರೆ, ಎಲ್ಲೆಲ್ಲಿ ಉಪಯೋಗಿಸಿದ್ದಾರೆ, ಹೇಗೆ ಅವ್ಯವಹಾರ ಮಾಡಿದ್ದಾರೆ ಎನ್ನುವುದನ್ನು ದುಬರ್ೀನು ಹಾಕಿಕೊಂಡು ಲೆಕ್ಕಾಚಾರದ ಕೂಡುಕಳೆಯುವಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಅವ್ಯವಹಾರ ನಡೆದಿದ್ದರೆ ಒಂದರ್ಥದಲ್ಲಿ ಇದು ಉತ್ತಮ ಬೆಳವಣಿಗೆ. ಹಾಗೆ ನಿಷ್ಪಕ್ಷಪಾತ ತನಿಖೆಯೂ ನಡೆಯಬೇಕು. ಆದರೆ, ನಿಜವಾಗಿಯೂ ಇದು ಕಸಾಪ ಅಧ್ಯಕ್ಷ ಗಾದಿಗೆ ನಡೆಯುತ್ತಿರುವ ರಾಜಕೀಯ ತಂತ್ರವಾಗಿದ್ದರೆ ಅಕ್ಷರ ಸರಸ್ವತಿಗೆ ಮಾಡುವ ದೊಡ್ಡ ಅವಮಾನ. ಇದನ್ನು ಸಾಹಿತ್ಯಾರಾಧಕರು ಅವಶ್ಯವಾಗಿ ಗಮನಿಸಬೇಕಿದೆ.
ಏನೇ ಇರಲಿ. ಸರಸ್ವತಿಯ ಆರಾಧನೆಗೆ ಪ್ರೋತ್ಸಾಹ ನೀಡುತ್ತ ಬೆನ್ನು ತಟ್ಟಿ ಗುರುತರ ಜವಾಬ್ದಾರಿ ಸ್ಥಾನದಲ್ಲಿ ನಿಲ್ಲಬೇಕಾದ ಅಧ್ಯಕ್ಷರೇ ಆರೋಪಿ ಸ್ಥಾನದಲ್ಲಿ ನಿಲ್ಲುತ್ತಿರುವುದು ನೋವಿನ ಸಂಗತಿ.
ಕಳೆದ ಅವಧಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಮಾಜಿ ಅಧ್ಯಕ್ಷ ಡಿ.ಎಂ. ಹಿರೇಮಠ ಹೇಳಿದರೆ, ನನ್ನ ಅವಧಿಯಲ್ಲಿ ಅವ್ಯವಹಾರ ನಡೆದಿಲ್ಲ, ತನಿಖೆ ನಡೆಸುವುದಾದರೆ ಈ ಹಿಂದಿನ ಅವಧಿಯ ವ್ಯವಹಾರವೂ ತನಿಖೆಯಾಗಲಿ ಎಂದು ಹಾಲಿ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳುತ್ತಾರೆ. ಅಂದರೆ, ಇಲ್ಲಿ ಯಾರನ್ನು ನಂಬಬೇಕು? ಯಾರನ್ನು ಬಿಡಬೇಕು? ಇವರಿಬ್ಬರ ಅವಧಿಯಲ್ಲೂ ಅವ್ಯವಹಾರ ಆಗಿದೆಯಾ? ಇಲ್ಲ ಅಂದರೆ ಯಾರನ್ನು ಮಂಗ ಮಾಡಲು ಹೊರಟಿದ್ದಾರೆ?
ಬೆಂಕಿ ಇಲ್ಲದೆ ಹೊಗೆಯಾಡದು! ಅಕ್ಷರ ದೇವಿಗೆ ಅವಮಾನ ಮಾಡುವ, ಅಧಿಕಾರಕ್ಕಾಗಿ ಕೆಸರೆರಚಾಡುವ, ಹಣಕ್ಕಾಗಿ ಲಾಬಿ ಮಾಡುವ ಸಾಹಿತಿ ಮುಖವಾಡ ಧರಿಸಿದವರಿಗೆ ಧಿಕ್ಕಾರ! ಯಾರೇ ಆಗಿರಲಿ, ಕನ್ನಡ ಭಾಷೆಯ ಹೆಸರಲ್ಲಿ ರಾಜಕಾರಣ ಮಾಡುವವರನ್ನು ಹೆಡೆಮುರಿಕಟ್ಟಿ ಮೇಲೇಳದಂತೆ ಮಾಡಬೇಕು.
ರಾಜಕೀಯ ಮಾಡುವುದೇ ಆದರೆ, ಹಣಗಳಿಕೆ ಮಾಡುವುದೇ ಉದ್ದೇಶವಾಗಿದ್ದರೆ, ಕೆಸರೆರಚಾಡುವುದೇ ಮಜಾ ಎನ್ನುವುದಾದರೆ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇಕರ್ೊಳ್ಳಿ ಸ್ವಾಮಿ. ಕನ್ನಡ ಭಾಷೆ ಕಟ್ಟಿ, ಬೆಳೆಸುವಂಥ ಕನ್ನಡ ಸಾಹಿತ್ಯ ಪರಿಷತ್ ಗೆ ಯಾಕೆ ಬತರ್ೀರಾ. ಪವಿತ್ರ ದೇವಸ್ಥಾನದಂತಿರುವ ಕಸಾಪ ಮನೆಯನ್ನು ಯಾಕೆ ಅಪವಿತ್ರ ಮಾಡ್ತೀರಾ. ನಿಮ್ಮಥವರ ಅವಶ್ಯಕತೆ ಇಲ್ಲಿ ಇಲ್ಲಾರೀ....
ಪ್ರಾಮಾಣಿಕ, ಪರಿಶುದ್ಧ ಸಾಹಿತಿಗಳು ಲೆಕ್ಕವಿಲ್ಲದಷ್ಟು ಜನ ಇಲ್ಲಿದ್ದಾರೆ. ಸಾಹಿತಿ ಎಂದು ಗುರುತಿಸಿಕೊಂಡವರಿಗಿಂತಲೂ ಉತ್ತಮವಾಗಿ, ಸಾಹಿತ್ಯ ರಚನೆ ಮಾಡುವವರು ಇಲ್ಲಿ ಸಾಕಷ್ಟು ಜನರಿದ್ದಾರೆ. ಕಸಾಪ ಸದಸ್ಯರಾಗದೆ ಇರುವ ಸಾವಿರಾರು ಜನರು ನಮ್ಮ-ನಿಮ್ಮ ನಡುವೆ ಇದ್ದಾರೆ. ಎಲೆಮರೆ ಕಾಯಿಯಾಗಿರುವ ಅಂಥಹ ಸರಸ್ವತಿ ಆರಾಧಕರಿಗೆ ನಿಮ್ಮ ಕಸಾಪ ಅಧ್ಯಕ್ಷ ಸ್ಥಾನ ಬಿಟ್ಟುಕೊಡಿ. ನಿಮಗೆ ಶೆಡ್ಡು ಹೊಡೆಯುವಂತೆ ಅವರು ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುತ್ತಾರೆ. ಅದು ಬಿಟ್ಟು ರಾಜಕೀಯ ಮಾಡುತ್ತ ಯಾಕ್ರೀ ಇನ್ನೊಬ್ಬರಿಗೆ ಊಟದ ಉಪ್ಪಿನಕಾಯಿ ಆಗ್ತೀರಾ? ಇದೇನಾ ನಿಮ್ಮ ನಾಡು, ನುಡಿ ಕೆಲಸ... ಛೀ.

'ದಂಡುಪಾಳ್ಯ'ದ ಮಹಾರಾಯ...!

'ದೊಡ್ಡ ಮಗ ಇಲ್ಲೇ ಕೂಗಳತೆ ದೂರದಲ್ಲಿದ್ದಾನೆ. ನಾಲ್ಕು ವರ್ಷದ ಹಿಂದೆ ಆಕಸ್ಮಿಕವಾಗಿ ಎದುರಾಗಿದ್ದ. ಅಂದಿನಿಂದ ಇಲ್ಲಿಯವರೆಗೂ ಆತನ ಮುಖ ನಾ ನೋಡಿಲ್ಲ'
ಇದು ದಂಡುಪಾಳ್ಯ ಹೊಟೆಲ್(ನಮ್ಮ ಸಹದ್ಯೋಗಿಗಳು ಇಟ್ಟ ಹೆಸರು)ನಲ್ಲಿರುವ ವೇರ್ಟ ನಾರಾಯಣನ ಹತಾಶೆ ನುಡಿಗಳು.
ಈತ ಮುಗ್ದ, ಬಡಕಲು ದೇಹದವನಾದರೂ ಸದಾ ನಗುಮೊಗದ ವ್ಯಕ್ತಿ. ಹೊಟೆಲ್ಗೆ ಬಂದವರನ್ನು ಮನೆಯವರಂತೆ ಸತ್ಕರಿಸಿ ಆದರಿಸುವ ಅಪರೂಪದ ಮನುಷ್ಯ. ನಯ, ವಿನಯ, ಸೌಜನ್ಯ, ಪ್ರೀತಿ, ವಿಶ್ವಾಸ ಹೀಗೆ ಎಲ್ಲವನ್ನೂ ಮೈಗೂಡಿಸಿಕೊಂಡ ಮಹಾರಾಯ!
ಎಂದಿನಂತೆ, ಮಧ್ಯಾಹ್ನ ಊಟಕ್ಕೆ ಹೋದಾಗ ನಗುನಗುತ್ತಲೇ ಸ್ವಾಗತಿಸಿ 'ಅನ್ನ-ಸಾಂಬಾರ' ಮುಂದಿಟ್ಟ. ಸುಮ್ಮನೆ ಮಾತಿಗೆಳೆದೆ. ಆತ, ಒಂದೊಂದಾಗಿ ತನ್ನ ಬದುಕಿನ ಕಥೆಯನ್ನೇ ಬಿಚ್ಚಿಡುತ್ತ ಹೋದ. ಅದನ್ನು ಕೇಳುತ್ತಿದ್ದ ನನಗೆ ಬಾಯಿಗೆ ಹಾಕುತ್ತಿರುವ ತುತ್ತೆಲ್ಲ, ಗಂಟಲಲ್ಲಿಯೇ ಉಳಿದಿದ್ದವು. ಕಣ್ಣಂಚು ಒದ್ದೆಯಾಗುತ್ತಿದ್ದರೂ, ಬಲವಂತವಾಗಿ ತಡೆದುಕೊಳ್ಳುತ್ತಿದ್ದೆ. ಆದರೆ ಆತ ಮಾತ್ರ ಒಂದೇ ಓಘದಲ್ಲಿ ಯಾವ ಮುಚ್ಚು-ಮರೆಯಿಲ್ಲದೆ ತನ್ನ ಬದುಕನ್ನು ಬೆತ್ತಲಾಗಿಸುತ್ತಿದ್ದ. ಸಂದರ್ಭದಲ್ಲಿ ಆತ ನೋವನ್ನು ನುಂಗಿಕೊಳ್ಳುವ ಪರಿ, ಭಾವನೆಯ ಏರುಪೇರು ಮನಸ್ಸನ್ನು ಶಾಂತತೆಗೆ ನೂಕಿತ್ತು.
ನಾರಾಯಣ ಮಂಗಳೂರಿನಿಂದ ಹುಬ್ಬಳ್ಳಿಗೆ ಬಂದು ಒಂಬತ್ತು ವರ್ಷಗಳು ಗತಿಸಿವೆ. ದುಡಿದು ತಿಂದರೆ ಮಾತ್ರ ಹೊಟ್ಟೆಗೆ ಕೂಳು ಎನ್ನುವ ಪರಿಸ್ಥಿತಿ ಮನೆಯದ್ದಾಗಿತ್ತು. ಹೆಂಡತಿ ಜೊತೆ ಎರಡು ಜನ ಗಂಡು ಮಕ್ಕಳು. ಒಬ್ಬ ಮಗ ಹುಬ್ಬಳ್ಳಿಯಲ್ಲಿಯೇ ಬದುಕು ಕಟ್ಟಿಕೊಂಡಿದ್ದರೆ, ಇನ್ನೊಬ್ಬ ಊರಲ್ಲಿ ಹೊಟೆಲ್ ಉದ್ಯಮದಲ್ಲಿ ತೊಡಗಿದ್ದಾನೆ.
ನಾಲ್ಕು ವರ್ಷದ ಹಿಂದೆ ದೊಡ್ಡ ಮಗ ತನ್ನದಲ್ಲದ ಜಾತಿಯ ಹುಡುಗಿಯನ್ನು ಪ್ರೀತಿಸಿದ್ದ. ಅದಕ್ಕೆ ನಾರಾಯಣ ವಿರೋಧ ವ್ಯಕ್ತಪಡಿಸಿದರು ಎಂದು, ಮನೆಯವರನ್ನೆಲ್ಲ ದೂರ ಮಾಡಿಕೊಂಡು ಪ್ರೀತಿಸಿದವಳನ್ನೇ ಮದುವೆಯಾಗಿ ಹುಬ್ಬಳ್ಳಿಯಲ್ಲಿಯೇ ನೆಲೆಸಿದ್ದಾನೆ. ಕೈತುಂಬ ಸಂಬಳ ಪಡೆಯುವ ಆ ಮಗ, ಐಷಾರಾಮಿ ಜೀವನ ನಡೆಸುತ್ತಿದ್ದಾನೆ!
'ಮಗನ ಇಚ್ಛೆಯ ವಿರುದ್ಧವಾಗಿ ಅಂದು ನಾನು ನಡೆದುಕೊಂಡ ಪರಿಣಾಮ, ಕೂಗಳತೆ ದೂರದಲ್ಲಿ ಮಗ-ಸೊಸೆ ಇದ್ದರೂ ಅವರನ್ನು ನೋಡಲಾಗದ ಪರಿಸ್ಥಿತಿ ನನ್ನದು. ಅಂದು ಆಕಸ್ಮಿಕವಾಗಿ ಅಂಗಡಿಯೊಂದರಲ್ಲಿ ಭೇಟಿಯಾಗಿದ್ದ. ಜನ್ಮ ನೀಡಿದ ತಂದೆ ಎನ್ನುವ ಭಾವವೂ ಆತನಲ್ಲಿ ಕಂಡು ಬಂದಿಲ್ಲ. ನಾನು ಮಾಡಿದ್ದು ತಪ್ಪು ಎಂದು ಹೇಳಬೇಕೆಂದು ಬಾಯಿ ತೆರೆಯುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದ' ಎಂದು ನಾಲ್ಕು ವರ್ಷದ ಹಿಂದೆ ಮಗನನ್ನು ಕಣ್ತುಂಬಿಸಿಕೊಂಡ ಕ್ಷಣ ನೆನಪಿಸಿಕೊಂಡಿದ್ದ ವೇರ್ಟ ನಾರಾಯಣ.
ದೊಡ್ಡ ಮಗ ಸಣ್ಣ ಮಗನ ಸಂಪರ್ಕದಲ್ಲಿದ್ದಾನಂತೆ. ಕರೆ ಮಾಡಿದಾಗ ತಾಯಿಯ ಯೋಗ-ಕ್ಷೇಮವಷ್ಟೇ ವಿಚಾರಿಸುತ್ತಾನಂತೆ. ಆದರೆ, 'ಅಪ್ಪ ಹೇಗಿದ್ದಾನೆ, ಎಲ್ಲಿದ್ದಾನೆ' ಎಂದು ಎಂದೂ ಕೇಳಿಲ್ಲವಂತೆ. 'ಇಲ್ಲೇ ಇರುವ ಮಗನನ್ನು ಒಮ್ಮೆ ನೋಡಿಕೊಂಡು ಬರಬೇಕು ಎಂದೆನಿಸಿದರೂ, ಅವನಿಗೆ ನಾ ಬೇಡವಾದ ಮೇಲೆ ಮತ್ಯಾಕೆ ಅಲ್ಲಿಗೆ ಹೋಗಿ ಅವನ ನೆಮ್ಮದಿ ಹಾಳು ಮಾಡಲಿ' ಎಂದು ತನಗೆ ತಾನೇ ನಾರಾಯಣ ಸಾಂತ್ವನ ಹೇಳಿಕೊಳ್ಳುತ್ತಾನೆ.
--------------------------------------------
ವಿಷಯವಿಷ್ಟೇ.... ಬೆಳೆದು ನಿಂತ ಮಕ್ಕಳನ್ನು ಸ್ನೇಹಿತರ ಹಾಗೆ ಕಾಣಬೇಕು ಎನ್ನುವ ಹಿತೋಕ್ತಿಯಿದೆ. ಅವರ ಇಚ್ಛೆಯ ವಿರುದ್ಧವಾಗಿ ನಡೆದುಕೊಂಡರೆ, ಹೆತ್ತವರನ್ನೂ ದೂರ ತಳ್ಳಿಬಿಡುತ್ತಾರೆ. ಇದು ಮಕ್ಕಳ ತಪ್ಪು, ಹೆತ್ತವರ ತಪ್ಪು ಎನ್ನುವ ವಿಮಶರ್ೆಗಿಂತ.... ಬೆಳೆದು ಬಂದ ಸಂಸ್ಕಾರ ಎಂತಹದ್ದು ಎಂದು ಯೋಚಿಸಬೇಕು. ಹಾಗಂತ ಇಲ್ಲಿ ನಾರಾಯಣನ ನಿಧರ್ಾರ ತಪ್ಪು ಎಂದಲ್ಲ, ಸರಿ ಎಂತಲೂ ಅಲ್ಲ. ನಾರಾಯಣ ಬೆಳೆದು ಬಂದ ಪರಿಸರ ಹಾಗಿತ್ತು, ಅದಕ್ಕೆ ತನ್ನ ಜಾತಿಯ ಹುಡುಗಿಯಲ್ಲ ಎಂದು ಮಗನ ಆಯ್ಕೆಯನ್ನು ವಿರೋಧಿಸಿದ್ದ.
ಈಗ ನಾರಾಯಣನಿಗೆ ತನ್ನ ತಪ್ಪಿನ ಅರಿವಾಗಿದೆ. ಬದಲಾಗಿದ್ದಾನೆ. ಮಗ ಆಧುನಿಕ ಜಗತ್ತಿಗೆ ತೆರದುಕೊಂಡಿದ್ದಾನೆ. ಕೈ ತುಂಬಾ ದುಡಿದು, ಸುಖಿ ಜೀವನ ನಡೆಸುತ್ತಿದ್ದಾನೆ. ಆದರೆ ಮನದಲ್ಲಿ ಇನ್ನೂ ಅಪ್ಪನ ಬಗ್ಗೆ ತಾತ್ಸಾರ ಪುಟಿದೇಳುತ್ತಲೇ ಇದೆ.
ಈಗ ಹೇಳಿ ತಪ್ಪು ಯಾರದ್ದು...? ತಪ್ಪಿಗೆ ಕ್ಷಮೆ ಎನ್ನುವುದೇ ಇಲ್ಲವೇ..? ಇಂತಹ ಎಷ್ಟೋ ಕಥೆಗಳು ನಮ್ಮ ಕಣ್ಮುಂದೆಯೇ ಇವೆ.

ಮಂಗಳವಾರ, ಡಿಸೆಂಬರ್ 8, 2015

'ಅನಾರ್ಕಲಿ' ಬಟ್ಟೆಯಲ್ಲಿ ನೀ ಅಂದು ಕಂಡಾಗ!
ನನ್ನೊಲವಿನ ಪುಟ್ಟ ಪಾರಿಜಾತವೇ,
ನೀ ಒಂದು ಮುಗಿಯದ ಕವನ ಎಂದು ಭಾವಿಸಿದ್ದೆ ಗೆಳತಿ. ನಿನ್ನ ಬಗ್ಗೆ ಎಷ್ಟು ಬರೆದರೂ ಸಾಲದು ಎನ್ನುವಂತಿತ್ತು ನನ್ನ ಭಾವ. ಆದರೆ, ನಿನ್ನೀ ದೀರ್ಘ ಮೌನ, ಸರಾಗವಾಗಿ ಹರಿಯುತ್ತಿದ್ದ ಕವನಕ್ಕೆ ತಡೆಯೊಡ್ಡುತ್ತಿದೆ. ನೀ ನನಗೆ ಪರಿಚಯವಾಗಿದ್ದ ಘಳಿಗೆ ಬಹುಶಃ ಯಮಗಂಡ ಕಾಲವಿತ್ತೇನೋ ಎಂದೆನಿಸುತ್ತಿದೆ....!
'ಯಾರೋ ಯಾರೋ ಗೀಚಿ ಹೋದ
ಹಾಳು ಹಣೆಯ ಬರಹ...
ದಿಕ್ಕು ದಾರಿ ತೋಚದೇನೆ
ಕಾಲ ಕಳೆಯೋ ವಿರಹ...' ಎನ್ನುವ ಸಿನೇಮಾದ ಪ್ಯಾಥೋ ಸಾಂಗಿನಂತೆ, ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಬ್ರಹ್ಮ ನನ್ನ ಹಣೆ ಬರಹ ಬರೆದಿರಬೇಕು. ಪ್ರೀತಿ-ಪ್ರೇಮದ ಜಂಜಾಟವೇ ಬೇಡ ಎಂದು ಸುಮ್ಮನಿದ್ದ ನಾ, ಅರಿವಿಲ್ಲದೆ ನಿನ್ನ ಪ್ರೀತಿಸಿ ವಿಲವಿಲನೇ ಒದ್ದಾಡುತ್ತಿದ್ದೇನೆ. ಏನು ಮಾಡಬೇಕೆಂದು ತೋಚದೆ `ಮುಂಗಾರು ಮಳೆ' ಪ್ರೀತಮನ ಹಾಗೆ ತಲೆ ಕೆರೆದುಕೊಳ್ಳುತ್ತಿದ್ದೇನೆ.
ಅಲ್ಲಾ ಕಣೇ, ಪ್ರೀತಿ ಇಷ್ಟೊಂದು ಘೋರ ಎಂದು ತಿಳಿದಿದ್ದರೆ ಖಂಡಿತ ನಿನ್ನನ್ನು ಪ್ರೀತಿಸುವ ಸಾಹಸಕ್ಕೆ ಇಳಿಯುತ್ತಿರಲಿಲ್ವೆ. ರಾತ್ರೆ ನಿದ್ದೆನೂ ಸರಿಯಾಗಿ ಬರ್ತಾಯಿಲ್ಲ. ಊಟ-ತಿಂಡಿಯಂತೂ ರುಚಿನೇ ಇಲ್ಲದ ಹಾಗಾಗಿದೆ. ಏನು ಮಾಡಿದರೂ, ಎಲ್ಲೇ ಹೋದರೂ ನೆರಳಿನಂತೆ ನೀ ನನ್ನನ್ನೇ ಹಿಂಬಾಲಿಸಿದಂತೆ ಭಾಸವಾಗುತ್ತಿದೆ. ಹೌದು ಕಣೇ, ನೀ ನನ್ನ ಬದುಕೇ ಆಗಿ ಪರಿವರ್ತನೆ ಆಗ್ಬಿಟ್ಟಿದ್ದೀಯಾ. ನಿನ್ನ ಬಿಟ್ಟು ಬದುಕೋ ಸಾಮಥ್ರ್ಯವಂತೂ ನನ್ನಲ್ಲಿಲ್ಲ ಎನ್ನುವುದು ಅರಿವಾಗ್ಬಿಟ್ಟಿದೆ.
ಅಲ್ವೆ, ಅದೆಷ್ಟು ಬಾರಿ ನಾ ನಿನಗೆ ಹೇಳಿಲ್ಲ ಹೇಳು, 'ನಾ ನಿನ್ನನ್ನು ಎಷ್ಟೊಂದು ಗಾಢವಾಗಿ ಪ್ರೀತಿಸ್ತಾ ಇದ್ದೀನಿ ಅಂತ. ಎಷ್ಟು ವಿಧದಲ್ಲಿ ತೋರಿಸಿಕೊಟ್ಟಿಲ್ಲ ಹೇಳು. ಆರು ತಿಂಗಳಿನಿಂದ ನಿರಂತರವಾಗಿ ನಿನ್ನ ಪ್ರೀತಿಯ ಹಿಂದೆ ಬಿದ್ದು, ಒಂದು ಹಿಡಿ ಪ್ರೀತಿಗಾಗಿ ಮಂಡಿಯೂರಿ ಅಂಗಲಾಚುತ್ತಿದ್ದೇನೆ. ಆ ನನ್ನ ವೇದನೆಗೆ, ತಾಕಲಾಟಕ್ಕೆ ನೀ ಒಂದಿನಿತು ಸ್ಪಂದನೆ ತೋರದೆ, ಮಾತೇ ಬರದ ಮೂಕಿಯಂತೆ ವತರ್ಿಸುತ್ತಿದ್ದೀಯಲ್ಲೇ. ಬೇಡ ಕಣೇ, 'ಪ್ರೀತಿಸ್ತೀನಿ' ಅಂತಾದ್ರೂ ಹೇಳು, ಇಲ್ಲಾ, 'ನೀ ನನಗೆ ಇಷ್ಟವಿಲ್ಲ' ಅಂತಾದ್ರೂ ಹೇಳು ಮಾರಾಯ್ತಿ. ಎಷ್ಟು ದಿನ ಅಂತ ಹೀಗೆ ಪರಿತಪಿಸ್ತಾ ಇರಬೇಕು? ಕಾದು ಕಾದು ನನ್ನನ್ನೇ ನಾ ಕಳೆದುಕೊಳ್ಳುತ್ತಿದ್ದೇನೆ. ಏನಾದ್ರೂ ಹೇಳೇ ಹುಡುಗಿ, ನಿನ್ನ ಉತ್ತರ ಕೇಳಿ ಎಲ್ಲಿಯಾದ್ರೂ, ಹೇಗಾದ್ರೂ ಬದುಕಿಕೊಳ್ತೇನೆ!
ಅವತ್ತು ಕೇಳಿದ್ಯಲ್ಲಾ, ನಾ ನಿನಗೆ ಹೇಗೆ ಪರಿಚಯ? ನನ್ನ ಮೊಬೈಲ್ ನಂಬರ್ ಯಾರು ನಿನಗೆ ಕೊಟ್ಟಿದ್ದು? ಎಂತ. ಹೇಳ್ತೀನಿ ಕೇಳು. ಅಂದು ಯಾಕೋ ಮನಸ್ಸು ಅವ್ಯಕ್ತ ಭಾವದಲ್ಲಿ ತಿಣುಕಾಡುತ್ತಿತ್ತು. ತುಸು ಟೈಂ ಪಾಸಾದೀತೆಂದು ಕಣ್ಮುಂದೆ ಇದ್ದ ಲ್ಯಾಪಿಗೆ ಬಿಎಸ್ಎನ್ಎಲ್ ಡಾಟಾ ಕಾಡರ್್ ಕನೆಕ್ಟ್ ಮಾಡಿ ನೇರವಾಗಿ ಫೇಸ್ಬುಕ್ಗೆ ಲಾಗಿನ್ ಆದೆ. ವಾಲ್ ಪಕ್ಕದಲ್ಲಿ ನೀಲಿ ಬಣ್ಣದ ಅನಾರ್ಕಲಿ ಬಟ್ಟೆ ಧರಿಸಿದ ನೀ ಕಂಡು ಬಂದೆ. ಹಿಂದೆ-ಮುಂದೆ ಯೋಚಿಸದೆ ನಿನಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಬಿಟ್ಟಿದ್ದೆ. ಒಂದು ದಿನ ಬಿಟ್ಟು ನೀ ನನ್ನ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿಕೊಂಡಿದ್ದೆ.
ಆ ಒಂದು ದಿನದಲ್ಲಿಯೇ ನಾ ನಿನ್ನೆಲ್ಲ ಜಾತಕವನ್ನು ತಡಕಾಡಿ ಬಿಟ್ಟಿದ್ದೆ. ನೀ ಹುಟ್ಟಿದ ಊರು, ಅಆಇಈ ಕಲಿತ ಬಾಲವಾಡಿ, ಅಳು ಮುಂಜಿ ಮುಖ ಮಾಡಿಕೊಂಡು ಹೋದ ಕನ್ನಡ ಶಾಲೆ, ಠಾಕು-ಠೀಕಾಗಿ ಹತ್ತಿದ ಕಾಲೇಜ್ ಮೆಟ್ಟಿಲು, ಸ್ನಾತಕೋತ್ತರ ಪದವಿ ಪಡೆದು ಬಿಗುಮಾನದಿಂದ ಹೊರಬಿದ್ದ ವಿಶ್ವವಿದ್ಯಾಲಯ ಹೀಗೆ.... ನೀ ಹೆಜ್ಜೆ ಇಟ್ಟಲ್ಲೆಲ್ಲ ನಾ ಮಾನಸಿಕವಾಗಿ ಓಡಾಡಿಬಿಟ್ಟಿದ್ದೆ. ಅದೂ ಅಲ್ಲದೆ, ನಿನ್ನೆಲ್ಲ ಹತ್ತಿರದ ಸ್ನೇಹಿತರ, ಸಂಬಂಧಿಗಳ ಮಾಹಿತಿ ಸಂಗ್ರಹಿಸಿದ್ದೆ. ಅವರಲ್ಲಿ ಕೆಲವರು ನನಗೆ ಪರಿಚಯದವರಾಗಿದ್ದರೆ, ಇನ್ನು ಕೆಲವರು ನನ್ನಾತ್ಮೀಯರಾಗಿದ್ದರು. ಅವರೇ ಕಣೇ ನನಗೆ ನಿನ್ನ ಮಗುವಿನಂತ ಮುಗ್ದ ಗುಣದ ಬಗ್ಗೆ ಹೇಳಿದ್ದು, ಯಾರಿಗೂ ನೋವು ನೀಡದೆ ಬದುಕುವ ನಿನ್ನ ಸೌಮ್ಯತೆ ಬಗ್ಗೆ ಹೇಳಿದ್ದು, ಪ್ರಾಣಿ, ಪಕ್ಷಿ, ಪ್ರಕೃತಿ ಎಂದರೆ ನಿನಗಿಷ್ಟ ಎಂದು ಹೇಳಿದ್ದು....!
ಹುಡುಗಿ, ಅಷ್ಟರಲ್ಲಾಗಲೇ ನನ್ನೆದೆಯ ಕೊಳದಲ್ಲಿ ಪ್ರೇಮದಾವರೆಯ ದಳಗಳು ಮೆಲ್ಲನೆ ಚಿಗುರೊಡೆಯಲಾರಂಭಿಸಿದ್ದವು ಗೊತ್ತಾ? ನನಗಾಗಿ ಒಂದು ಹೃದಯ ಮಿಡಿಯಬೇಕು, ನನ್ನೊಲವ ಜೇನಿಗಾಗಿ ತುಡಿಯಬೇಕು ಎನ್ನುವ ಆಸೆ ಹೊತ್ತ ವಯಸ್ಸಿನಲ್ಲಿಯೇ ನಿನ್ನ ಮೇಲೆಪ್ರೇಮಾಂಕುರವಾಗಿತ್ತು. ನಿನಗೆ ನನ್ನದು ಮೊದಲ ಪ್ರೀತಿಯಾಗದಿರಬಹುದು, ಆದರೆ, ನನ್ನೆದೆಯ ಪ್ರೇಮದ ಬಾಗಿಲನ್ನು ತಟ್ಟಿದವಳು ನೀನೇ ಮೊದಲಿಗಳು ನೆನಪಿರಲಿ!
ಸರಿ, ನಿನ್ನ ದೀರ್ಘ ಮೌನಕ್ಕೆ ಉತ್ತರ ಬಯಸಿ, ಈ ಪತ್ರ ಬರೆದಿದ್ದೇನೆ. ಇಲ್ಲಿ ಬರೆದಿರುವ ಒಂದೊಂದು ಸಾಲುಗಳು ನಿನ್ನ ಪಾದದ ಮೇಲಿಟ್ಟ ಪುಟ್ಟ ಪಾರಿಜಾತ. ಅದನ್ನು ನೀ ಮುಡಿಗೇರಿಸಿಕೊಂಡು ಕಿರು ಬೆರಳು ಹಿಡಿಯುತ್ತೀಯೋ... ಅಥವಾ, ಕಾಲಲ್ಲಿಯೇ ಹೊಸಕಿಹಾಕಿ ಇತಿಶ್ರೀ ಹಾಡುತ್ತೀಯೋ.... ನಿನಗೆ ಬಿಟ್ಟಿದ್ದು!
-ಮಾಧವ
'ಪ್ರೇಮ'ದ ಆರಂಭ ತಿರಸ್ಕಾರದಿಂದಲೇ....
ಹೀಗೊಂದು ಮಾತು ನನ್ನ ವೃತ್ತಿ ಬಂಧುವೊಬ್ಬರು ಹೇಳಿದರು. ಅದು ಎಷ್ಟರ ಮಟ್ಟಿಗೆ ಸರಿ... ತಪ್ಪು ಎಂದು ನನಗಂತೂ ಖಂಡಿತ ಗೊತ್ತಿಲ್ಲ. ಆದರೆ, ಅವರಾಡಿ ಆ ಮಾತು ಚಿಂತನೆಗೆ ನೂಕಿದ್ದಂತೂ ಸತ್ಯ.
ಬಹುತೇಕ ಯುವ ಹೃದಯಿಗಳ ಮನಸ್ಸಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ `ಪ್ರೇಮ' ಅಂಕುರಿಸಿಯೇ ಇರುತ್ತದೆ. ಆ ಪ್ರೇಮ ಮುಂದುವರಿದು ಮದುವೆಯಲ್ಲಿ ತಾಕರ್ಿಕ ಅಂತ್ಯ ಕಾಣಬಹುದು; ಇಲ್ಲವೇ, ನಟ್ಟ ನಡು ರಸ್ತೆಯೇ ಟಿಸಿಲೊಡೆದು ಪಥ ಬದಲಿಸಬಹುದು. ಹೆಜ್ಜೆ ಮೂಡದ ಹಾದಿಯೆಂದು, ಆವರೆಗೆ ಸಾಗಿ ಬಂದ ಮಾರ್ಗವೇ ಮರೆತು ಹೊಸ ಬದುಕಿಗೆ ಮುನ್ನುಡಿಯನ್ನೂ ಬರೆಯಬಹುದು. ಎಷ್ಟೋ ಯುವ ಮನಸ್ಸುಗಳು ಅರಿತೋ ಅರಿಯದೆಯೋ ಇನ್ನೊಂದು ಹೃದಯವನ್ನು ತನ್ನಲ್ಲಿ ಪ್ರತಿಷ್ಟಾಪಿಸಿಕೊಂಡು ಆರಾಧಿಸಬಹುದು. ಕಾಲ ಚಕ್ರದ ಉರುಳಾಟದಲ್ಲಿ ಎಲ್ಲವೂ ಸುಖಾಂತ್ಯವೇ ಆಗುತ್ತದೆ ಎಂದೇನಿಲ್ಲ. ದುಃಖಾಂತ್ಯವೂ ಆಗಬಹುದು.
ಕ್ಷಮಿಸಿ, ಬಹತೇಕ ಪ್ರೇಮ ಪ್ರಕರಣಗಳು ದುರಂತದಲ್ಲಿಯೇ ಕೊನೆಗೊಂಡಿವೆ. ಕೊನೆಗೊಳ್ಳುತ್ತಲೂ ಇವೆ. ಹಾಗಾದರೆ ಇದಕ್ಕೆ ಕಾರಣವೇನು? ಎನ್ನುವುದು ಮೇಲ್ನೋಟಕ್ಕೆ ಸರಳ ಹಾಗೂ ಸಾಮಾನ್ಯ ಪ್ರಶ್ನೆಯಾದರೂ.... ಅದರ ಅರ್ಥ ಹಾಗೂ ಹರಿವಿನ ವ್ಯಾಪ್ತಿ ತುಂಬಾ ವಿಶಾಲವಾದದ್ದೇ..! ಜೊತೆಗೆ ಕಲ್ಪನೆಗೂ ನಿಲುಕದ್ದು. ಯಾಕೆಂದರೆ ಬಹುತೇಕ 'ಪ್ರೇಮ' ಕಾರಣ ಇಲ್ಲದೆಯೇ ಹುಟ್ಟಿಕೊಳ್ಳುತ್ತವೆ, ಕಾರಣವಿಲ್ಲದೆಯೇ ಅಂತ್ಯಗೊಂಡಿರುತ್ತವೆ.
ಇವುಗಳ ನಡುವೆಯೇ `ಪ್ರೀತಿಯ ಆರಂಭ ತಿರಸ್ಕಾರದಿಂದ' ಎನ್ನುವ ವ್ಯಾಖ್ಯಾನ ರೇಜಿಗೆ ಹುಟ್ಟಿಸಿ, ಚಿಂತನೆಗೆ ನೂಕುತ್ತದೆ. ಅರ್ಥವ್ಯಾಪ್ತಿಯ ಆಳಕ್ಕಿಳಿದಾಗ, `ಪ್ರೇಮ' ಹುಟ್ಟಲು ಉಳಿದೆಲ್ಲ ಕಾರಣಕ್ಕಿಂತ ಮೊದಲ ಸ್ಥಾನ 'ತಿರಸ್ಕಾರ'ಕ್ಕೇ ಸೀಮಿತ...!
ಪ್ರೇಮ ನಿವೇದನೆ ಮಾಡಿಕೊಳ್ಳುವ ಸಂದರ್ಭದಲ್ಲಿ.... ಪ್ರೇಮ ಭಿಕ್ಷೆ ಯಾಚಿಸಿದ ವ್ಯಕ್ತಿಗೆ ಯಾರೂ ಕೂಡಾ ಹೃದಯವನ್ನು ಒಮ್ಮೆಲೆ ದಾನ ಮಾಡಿ ಬಿಡುವುದಿಲ್ಲ. ಬಹುತೇಕವಾಗಿ ತಿರಸ್ಕಾರಕ್ಕೆ ಒಳಗಾಗಿ ಬಿಡುತ್ತಾರೆ. ತೀರಾ ಕೆಲವು ಸಂದರ್ಭದಲ್ಲಿ ಮಾತ್ರ 'ನಿರ್ಲಿಪ್ತತೆ'ಗೆ ಜಾರಿ, ಭಾವನೆಯ ಮೇಲೆ ಪಯಣಿಸಿ ಬಿಡುತ್ತಾರೆ.
ಪ್ರೇಮ ಜಗತ್ತಿನ ಗಮ್ಮತ್ತೇ ವರ್ಣನಾತೀತ, ಭಾವನಾತೀತ ಎನ್ನುವಂತೆ... ನಿವೇದಿಸಿದ ವ್ಯಕ್ತಿಯ ಕುರಿತು, ಮನಸ್ಸಲ್ಲಿ ಅರಿವಿಲ್ಲದೆ ಕುತೂಹಲವೊಂದು ಮೊಳಕೆಯೊಡೆದಿರುತ್ತದೆ. ಅದು ಬೆಳೆದು ಹೆಮ್ಮೆರವಾಗಿ ತನು ಮನವೆಲ್ಲ ಆವರಿಸಿರುತ್ತದೆ. ಸದ್ದಿಲ್ಲದೆ ಆ ವ್ಯಕ್ತಿಯ ಮೇಲೆ ಆಸಕ್ತಿ ಅನುರಣಿಸುತ್ತಿರುತ್ತದೆ. ಭಾವನೆಗಳ ಏರಿಳಿತ ಹೊಸ ಅನುಭೂತಿ ನೀಡಲು ಪ್ರಾರಂಭಿಸುತ್ತದೆ. ತಿರಸ್ಕಾರದ ಮೊಟ್ಟೆಗೆ ಆಸಕ್ತಿಯ ಕಾವು ಸಿಕ್ಕು, ಸದ್ದಿಲ್ಲದೆ 'ಪ್ರೇಮ ಪಕ್ಷಿ' ಕಣ್ತೆರೆದಿರುತ್ತದೆ. ನಿಧಾನವಾಗಿ ರೆಕ್ಕೆ ಬಡಿದು ಮನದಾಗಸದ ತುಂಬ ಹಾರಾಡಲು ಶುರುವಿಟ್ಟುಕೊಳ್ಳುತ್ತದೆ.
ಅಂದರೆ, ನಿವೇದನೆಗೊಂಡು ತಿರಸ್ಕಾರಕ್ಕೆ ಒಳಗಾದ ಪ್ರೇಮ ಕೂಡಾ ತಾಳ್ಮೆ, ಸಹನೆ, ನಂಬಿಕೆ, ಆತ್ಮ ವಿಶ್ವಾಸ ಇವುಗಳ ನಡುವೆ ನಿಷ್ಕಲ್ಮಶ ಮನಸ್ಸಿದ್ದರೆ.... 'ಪ್ರೇಮ' ಕೈ ಹಿಡಿದು ನಡೆಸುತ್ತದೆ. ಬದುಕಿನ ಪಥ ಬದಲಿಸಿ, ಜೀವನದುದ್ದಕ್ಕೂ ದಾರಿ ದೀಪವಾಗಿ ಬೆಳಗುತ್ತಿರುತ್ತದೆ. ಅಂತಹ 'ತಿರಸ್ಕಾರದ ಪ್ರೇಮ' ನಿಮ್ಮದಾಗಲಿ. ಆ ಮೂಲಕ ಬದುಕು ಬೆಳಗಲಿ... 
ಚೆನ್ನೈ ಜಲ ಪ್ರಳಯದಲ್ಲಿನ ಆ ಮೂರು ದಿನಗಳು... 
ತಮಿಳುನಾಡು ರಾಜ್ಯದ ರಾಜಧಾನಿ ಚೆನ್ನೈನಲ್ಲಿ ವಾಯುಭಾರ ಕುಸಿತದಿಂದ ಭೀಕರ ಮಳೆ ಸುರಿದು ಜಲ ಪ್ರಳಯವೇ ಸೃಷ್ಟಿಯಾಗಿತ್ತು. ನಗರವನ್ನೆಲ್ಲ ನೀರು ತನ್ನೊಳಗೆ ಇಟ್ಟುಕೊಂಡಿತ್ತು. ಸಂದರ್ಭದಲ್ಲಿ ಸಹೋದರಿ ಜೊತೆ ಅನುಭವಿಸಿದ 'ಜಲಾತಂಕ'ದ ಕ್ಷಣಗಳ ಅಕ್ಷರ ರೂಪ ಇಲ್ಲಿದೆ.
----------------
ಅಂದು ಸೋಮವಾರ. ಇಪ್ಪತ್ತು ದಿನಗಳಲ್ಲಿ ನಾಲ್ಕನೇ ಬಾರಿಗೆ ಚೆನೈನಲ್ಲಿ ವಾಯುಭಾರ ಕುಸಿತವಾಗಿತ್ತು. ನಸುಕಿನ ವೇಳೆ ಪ್ರಾರಂಭವಾದ ಮಳೆ ಎಂಟು ಗಂಟೆ ಸುಮಾರಿಗೆ ನಿಂತಿತ್ತು. ಆದರೆ, ಮಧ್ಯ ಮಧ್ಯ ತುಂತುರು ಮಳೆಯಾಗುತ್ತಿತ್ತು. ರಾತ್ರಿ ಒಮ್ಮಿಂದೊಮ್ಮೆಲೆ ಜೋರಾಗಿ ಮಳೆ ಬೀಳಲು ಪ್ರಾರಂಭಿಸಿತು.
ಯಾವುದೇ ಆತಂಕವಿಲ್ಲದೆ, ಅಪಾಯದ ಕಲ್ಪನೆಯಿಲ್ಲದೆ ನಾವು ನಿದ್ದೆಗೆ ಜಾರಿಬಿಟ್ಟಿದ್ದೇವು. ಮಾರನೇ ದಿನ ಮಂಗಳವಾರವೂ ಮಳೆ ಮುಂದುವರಿದಿತ್ತು. ಮಳೆಯ ಆರ್ಭಟಕ್ಕೆ ಮುಂಜಾಗೃತವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಸಂಜೆಯಾದರೂ ವಿದ್ಯುತ್ ಬರಲಿಲ್ಲ. ಉರಿಸಲು ಮೋಂಬತ್ತಿಯೂ ಇರಲಿಲ್ಲ. ದೇವರ ಮುಂದೆ ಹಚ್ಚಿಟ್ಟಿದ್ದ ಪುಟ್ಟ ದೀಪದ ಬೇಳಕಲ್ಲಿಯೇ ಊಟ ಮಾಡಿ, ಮಲಗಿದ್ದಾಯಿತು. ಬೆಳಕು ಹರಿಯುವವರೆಗೂ ಆರ್ಭಟಿಸುತ್ತಿದ್ದ ವರುಣ, ನಂತರ ತಣ್ಣಗಾಗಿದ್ದ. ಆಕಾಶ ಶುಭ್ರವಾಗಿತ್ತು, ಆದರೆ ಅರುಣನ ಪತ್ತೆಯಿರಲಿಲ್ಲ.
ಮೊದಲ ಮಹಡಿಯಿಂದ ಇಣುಕಿ ನೋಡಿದಾಗಿ ರಸ್ತೆಯಲ್ಲಿ ಪಾದ ಮುಳುಗುವಷ್ಟು ನೀರು ನಿಂತಿತ್ತು. ರಾತ್ರಿ ಸುರಿದ ಮಳೆಗೆ ನೀರು ನಿಂತಿದೆ ಎಂದು, ಭಾವಿಸಿ ಇನ್ನೇನು ನೀರು ಇಳಿದು ಹೋಗುತ್ತದೆ ಎಂದು ಎದುರು ನೋಡುತ್ತಿದ್ದೇವು. ಆದರೆ, ಅದೆಲ್ಲ ಸುಳ್ಳು ಎಂದು ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕ್ಷಣ ಕ್ಷಣಕ್ಕೂ ನೀರು ಮೆಲ್ಲನೇ ಮೇಲೇರುತ್ತಲೇ ಇತ್ತು. ಸಾಯಂಕಾಲದ ಏಳರ ಹೊತ್ತಿಗೆ ಬಡಾವಣೆಯಲ್ಲಿರುವ ನೆಲ ಮಹಡಿಯೆಲ್ಲ ನೀರಿನಲ್ಲಿ ಮುಳುಗಿ ಹೋಗಿತ್ತು. ಅದೂ ಸಾಲದೆಂಬಂತೆ ನೀರು ಮತ್ತೆ ಮತ್ತೆ ಮೇಲೇರುತ್ತಲೇ ಇತ್ತು. ರಾತ್ರಿ ಒಂಬತ್ತರ ಹೊತ್ತಿಗೆ ಮೊದಲನೇ ಮಹಡಿವರೆಗೆ ನೀರು ಏರಲು ಎರಡು-ಮೂರು ಫೂಟ್ ಮಾತ್ರ ಬಾಕಿಯಿದ್ದವು...!
ನಿದ್ದೆ ಒತ್ತರಿಸಿ ಬಂದರೂ ಮಲಗಲಾಗದ ಪರಿಸ್ಥಿತಿ. ನೀರು ಹೇಗೆ ಕ್ಷಣ ಕ್ಷಣಕ್ಕೂ ಮೇಲೇರುತ್ತಿತ್ತೋ, ಹಾಗೆಯೇ... ಎದೆಯಲ್ಲಿ ಆತಂಕವೂ ಹೆಚ್ಚುತ್ತಲೇ ಹೋಗುತ್ತಿತ್ತು. ಏನು ಮಾಡಬೇಕೆಂದು ತಿಳಿಯದ ಪರಿಸ್ಥಿತಿಯದು. ಮುಂಜಾನೆಯೇ ಮೇಲ್ಮಹಡಿಯಲ್ಲಿ ವಾಸವಿದ್ದ ಮನೆಯವರಿಂದ ಮೂರು ಹೊತ್ತಿಗೂ ಸಾಕಾಗುವಷ್ಟು ಪುಲಾವ್ ಮಾಡಿಸಿಕೊಂಡಿದ್ದೇವು. ಅದನ್ನೇ ತಿಂದು ನಿದ್ದೆಗೆ ಅಣಿಯಾದೆವು. ಆದರೆ, ಮೂರೇ ಮೂರು ಫೂಟ್ ಕೆಳಗಿರುವ ನೀರು ಯಾವ ಘಳಿಗೆಯಲ್ಲಿ ಮೇಲೇರಿ ಬಿಡುತ್ತದೋ ಎನ್ನುವ ಆತಂಕ ಮನದಲ್ಲಿಯೇ ಮಡುಗಟ್ಟಿ, ರಾತ್ರಿ ನಿದ್ದೆಯನ್ನೆಲ್ಲ ಹತ್ತಿಕ್ಕಿಬಿಟ್ಟಿತ್ತು. ಈ ಆತಂಕ ನಮಗಷ್ಟೇ ಅಲ್ಲ, ಬಹುಶಃ ಸಮಸ್ತ ಚೆನೈ ಜನತೆಗೂ ಕಾಡಿದ್ದು ಸುಳ್ಳಲ್ಲ.
ಆದರೆ, ಗುರವಾರ ಮುಂಜಾನೆಯಷ್ಟೊತ್ತಿಗೆ ನೀರಿನ ಏರಿಕೆ ಪ್ರಮಾಣ ಕಡಿಮೆಯಾಗಿತ್ತು. ಆದರೆ, ಇಳಿಕೆ ಪ್ರಮಾಣ ಮಾತ್ರ ತೀರಾ... ತೀರಾ... ಕಡಿಮೆ ಎಂದೆನಿಸುವಷ್ಟು ಇತ್ತು. ಅವತ್ತು ಕೂಡಾ ಊಟಕ್ಕಾಗಿ ಹಿಂದಿನ ದಿನದಂತೆಯೇ, ಮೇಲ್ಮಹಡಿಯಲ್ಲಿ ವಾಸವಿದ್ದವರಿಂದ ಪುಲಾವ್ ಮಾಡಿಸಿಕೊಂಡು ಮೂರು ಹೊತ್ತು ತಿಂದಿದ್ದೇವು. ಹಿಂದಿನ ದಿನದಂತೆ ರಾತ್ರಿ ನಿದ್ದೆ ಹತ್ತಲಿಲ್ಲ. ಅರ್ಧ ಗಂಟೆಗೊಮ್ಮೆ ಬಾಗಿಲು ತೆರೆದು, ಕಡುಗತ್ತಲಲ್ಲಿಯೇ ನೀರು ಎಷ್ಟು ಪ್ರಮಾಣದಲ್ಲಿ ಇಳಿದಿದೆ ಎಂದು ನೋಡುತ್ತಲೇ ಇದ್ದೆ. ಬೆಳಕು ಹರಿಯುವವರೆಗೂ ಅದೊಂದು ಕಾಯದಂತಾಗಿ ಬಿಟ್ಟಿತ್ತು. ಅವುಗಳ ನಡುವೆಯೇ, ಗಂಟೆಗೊಮ್ಮೆ ಮಳೆ ಧೋ.. ಎಂದು ಸುರಿಯುತ್ತಿತ್ತು. ಆ ಸಂದರ್ಭದಲ್ಲೆಲ್ಲ ಮತ್ತೆ ನೀರಿನ ಮಟ್ಟ ಎಲ್ಲಿ ಏರಿ ಬಿಡುತ್ತದೆ ಎನ್ನುವ ಭಯ ಕಾಡುತಲೇ ಇತ್ತು...!
ಅಂತೂ ಶುಭ ಶುಕ್ರವಾರದ ಬೆಳಕು ಹರಿದಿತ್ತು. ಹದಿನಾಲ್ಕು ಫೂಟ್ ಎತ್ತರಕ್ಕೆ ಏರಿದ ನೀರು ಸೊಂಟದ ಮಟ್ಟಕ್ಕೆ ಇಳಿಕೆ ಕಂಡಿತ್ತು. ಏನೋ ಧೈರ್ಯಮಾಡಿಕೊಂಡು, ಚೆನೈ ಕೇಂದ್ರ ಬಸ್ ನಿಲ್ದಾಣಕ್ಕೆ ಹೋಗಿ, ಮನೆಗೆ ಹೋಗೋಣ ಎಂದೆ. ಅವಳು ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ನೀಡಿ, ನನ್ನ ಜೊತೆ ಹೆಜ್ಜೆ ಹಾಕಿದಳು. ಸೊಂಟದವರೆಗೆ ನೀರಿನಲ್ಲಿ ಅತ್ತ ಈಜು ಅಲ್ಲದ, ಇತ್ತ ನಡೆದುಕೊಂಡು ಅಲ್ಲದ ಶೈಲಿಯಲ್ಲಿ ಎರಡು ಕಿ.ಮೀ. ದೂರದಲ್ಲಿರುವ ಅಶೋಕ ಪಿಲ್ಲರ್ ಪ್ರದೇಶಕ್ಕೆ ಬಂದು, ಅಲ್ಲಿಂದ ಉಪನಗರ ಬಸ್ ಹತ್ತಿ ಕೋಯಂಬಟ್ಟು ಬಸ್ ನಿಲ್ದಾಣಕ್ಕೆ ಬಂದೇವು.
ಮುಂಜಾನೆ ಉಪಹಾರ ಮಾಡೋಣ ಎಂದರೆ ಕೈಯಲ್ಲಿ 500 ರೂ. ಹೊರತಾಗಿ ಇನ್ನೇನು ಉಳಿದಿರಲಿಲ್ಲ. ಆದರೆ ಎಟಿಎಂನಲ್ಲಿ ಹಣವಿತ್ತು. ಬಸ್ ನಿಲ್ದಾನದಲ್ಲಿದ್ದ ಎಟಿಎಂ ಔಟ್ ಆಫ್ ಸರ್ವಿಸ್ ಎಂದು ತೋರಿಸುತ್ತಿತ್ತು. ನೋಡೋಣವೆಂದು ನಿಲ್ದಾಣದ ಸುತ್ತ ಒಂದು ಕಿ.ಮೀ. ಅಡ್ಡಾಡಿದೆ. ಎಟಿಎಂ ಕೇಂದ್ರವಿತ್ತು, ಆದರೆ ಅವೆಲ್ಲ ಪ್ರವಾಹಕ್ಕೆ ಸಿಲುಕಿ ಹಾಳಾಗಿ ಹೋಗಿದ್ದವು. ನಮ್ಮಲ್ಲಿದ್ದ ಹಣದಿಂದ ಬೆಂಗಳೂರು ತಲುಪಲು ಇಬ್ಬರಿಗೂ ಸಾಧ್ಯವಿಲ್ಲ ಎಂದು ಭಾವಿಸಿ, ಅಳುಕುತ್ತಲೇ ಚೆನೈ-ಹೊಸುರು(ತಮಿಳುನಾಡು ಸಾರಿಗೆ) ಬಸ್ ಹತ್ತಿದೇವು. ಒಬ್ಬರಿಗೆ 183 ರೂ. ಹೊಸುರವರೆಗೆ ಆಗಿದ್ದರಿಂದ ಇಬ್ಬರಿಗೆ 366 ರೂ. ನೀಡಿ ಟಿಕೇಟ್ ಪಡೆದೆವು. ಹೊಸುರಲ್ಲಿ 20 ರೂ. ಬಿಸ್ಕಟ್ ಪ್ಯಾಕೆಟ್ ಖರೀದಿಸಿ, ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ಅದರಲ್ಲಿಯೇ ಮುಗಿಸಿದೆವು. ಆಗಲೇ, ಸಾಯಂಕಾಲ 4:15 ಆಗಿತ್ತು. ಅಲ್ಲಿಂದ ಮತ್ತೆ ತಮಿಳುನಾಡು ಸಾರಿಗೆ ಬಸ್ ಹತ್ತಿ ಬೆಂಗಳೂರು ತಲುಪಿದೆವು. ನಂತರ ಅಲ್ಲಿಯೇ ರಾತ್ರಿ ಊಟ ಮಾಡಿ, 10:30ಕ್ಕೆ ಹುಬ್ಬಳ್ಳಿ ಬಸ್ ಹತ್ತಿ ಶನಿವಾರ ಮುಂಜಾನೆ 7ರ ಸುಮಾರಿಗೆ ಹುಬ್ಬಳ್ಳಿಗೆ ತಲುಪಿದೆವು.
ಇವು ಆತಂಕದ ದಿನಗಳು, ಕ್ಷಣಗಳು ಎನ್ನುವುದಕ್ಕಿಂತ ಬದುಕಿಗೆ ಹೊಸ ಅನುಭವ ನೀಡಿತ್ತು. ಪ್ರವಾಹದಲ್ಲಿ ಸಿಲುಕಿದ್ದ ಸಮಯದಲ್ಲಿ ಕುಡಿಯಲು ನೀರಿಲ್ಲದೆ ಜನತೆ ಒದ್ದಾಡುತ್ತಿದ್ದಾಗ, ಯಾರೋ ಮೂರ್ನಾಲ್ಕು ಪಡ್ಡ ಹುಡುಗರ ತಂಡವೊಂದು ಒಂದು ಲೀ. ನೀರಿನ ಬಾಟಲ್, ಬಿಸ್ಕಟನ್ನು ತಂದು ಹತ್ತು ಪಟ್ಟು ಹೆಚ್ಚಳಕ್ಕೆ ಮಾರಾಟ ಮಾಡುತ್ತಿದ್ದರು. ಸಂದರ್ಭಲ್ಲಿ ಅವರ ಕಣ್ಣಲ್ಲಿ ಮಾನವೀಯತೆ ಕಾಣಬೇಕೋ... ವ್ಯಾಪಾರೀ ಮನೋಭಾವನೆ ನೋಡಬೇಕೋ... ಜೀವ ಹೋಗುವ ಪರಿಸ್ಥಿತಿಯನ್ನು ಸಹ ತಮ್ಮ ಲಾಭಕ್ಕಾಗಿ ಹೇಗೆ ಸದುಪಯೋಗ ಮಾಡಿಕೊಳ್ಳುತ್ತಿದ್ದಾರಲ್ಲ ಎಂದು ಅಸಹ್ಯ ಪಟ್ಟುಕೊಳ್ಳಬೇಕೋ... ಅಥವಾ ಇದು ಅನಿವಾರ್ಯತೆಯ ಒಂದು ಮುಖವೇ ಎಂದುಕೊಳ್ಳಬೇಕೋ ತಿಳಿಯಲಿಲ್ಲ. ಒಂದು ಲೀ. ನೀರಿನ ಬಾಟಲಿಗೆ 100 ರೂ. ಪಡೆಯುತ್ತಿದ್ದರೆ, 5 ರೂ. ಬಿಸ್ಕಿಟ್ ಪ್ಯಾಕೆಟ್ಗೆ 50 ರೂ. ಪಡೆಯುತ್ತಿದ್ದರು. ಅನ್ನ-ನೀರು ಇಲ್ಲದ ಜನತೆ ಹಣವನ್ನು ಲೆಕ್ಕಿಸದೆ, ಹೇಳಿದಷ್ಟು ಹಣ ನೀಡಿ ಅದನ್ನು ಖರೀದಿಸಿ ಮಂದಹಾಸ ಬೀರುತ್ತಿದ್ದರು. ಪರಿಸ್ಥಿತಿ ಎಷ್ಟೊಂದು ಕಠೋರವಾಗಿರುತ್ತದೆ ಎನ್ನುವುದು ಅರಿವಾಗಿತ್ತು. ನಾವು ಅನುಭವಿಸಿದ್ದು ಶೇ. 5 ರಷ್ಟು ಮಾತ್ರ, ಉಳಿದವರಿಗೆ ಹೋಲಿಸಿದರೆ....!
------
ಸೈದಾಪೇಟ್ದಿಂದ ಸೊಂಟದಷ್ಟು ನೀರಿನಿಂದ ಹಾದು ಬರುವಾಗ ಎಲ್ಲಿ ತೆರೆದ ಮ್ಯಾನ್ಹೋಲ್ನಲ್ಲಿ ಬಿದ್ದು ಅಲ್ಲಿಯೇ ಜಲಸಮಾಧಿಯಾಗುತ್ತೇವೆಯೋ ಎಂದು ಭಯ ಆವರಿಸಿತ್ತು. ಹಾಗೆ ಎರಡು ಕಿ.ಮೀ. ನಡೆದು ಬರುವಾಗ ಆ ಮೂರು ದಿನ ಏನೇನು ನಡೆದಿತ್ತು ಎನ್ನುವುದು ಒಂದೊಂದಾಗಿ ನಿಧಾನವಾಗಿ ಅರ್ಥವಾಗುತ್ತ ಹೋಗಿತ್ತು. ನಾವು ಮನೆಯಲ್ಲಿ ಸಿಲುಕಿದ್ದಾಗ ನೀರಿನ ಪ್ರವಾಹ ಏರುತ್ತಿದೆ ಎನ್ನುವ ಆತಂಕವಷ್ಟೇ ಕಾಡುತ್ತಿತ್ತು. ಆದರೆ, ಏನೇನು ನಡೆದಿದೆ ಎನ್ನುವ ಸಾಕ್ಷಾತ್ ದರ್ಶನ ಎರಡು ಕಿ.ಮೀ. ನಡಿಗೆಯಲ್ಲಿ ತಿಳಿದು ಹೋಗಿತ್ತು. ಕಿರಾಣಿ ಅಂಗಡಿಗಳಲ್ಲಿದ್ದ ದಿನಸಿ ವಸ್ತುಗಳಾದ ಅಕ್ಕಿ, ಬೇಳೆ-ಕಾಳು, ಸಕ್ಕರೆ ಎಲ್ಲ ಪದಾರ್ಥಗಳು ರಸ್ತೆಯ ಅಕ್ಕ-ಪಕ್ಕ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ವೀಟ್ ಅಂಗಡಿಗಳೆಲ್ಲ ನೀರಿಗೆ ಆಹುತಿಯಾಗಿದ್ದವು. ಕೆಲವು ಮನೆಗಳಂತೂ ಸಂಪೂರ್ಣವಾಗಿ ಕುಸಿದು ಹೋಗಿತ್ತು. ಇನ್ನು ಕೆಲವು ಮನೆಯ ನಿವಾಸಿಗಳು ನೀರನ್ನು ಹೊರ ಹಾಕುವ ಸಾಹಸ ಮಾಡುತ್ತಿದ್ದರು. ಆಸ್ಪತ್ರೆಯ ಒಳಗೂ ನೀರು ನುಗ್ಗಿ, ರೋಗಿಗಳಿಗೆ ಚಿಕಿತ್ಸೆ ನೀಡದಂತ ಪರಿಸ್ಥಿತಿ ನಿಮರ್ಾಣವಾಗಿತ್ತು. ಹಾಲಿಗಾಗಿ ಅಂಗಡಿ ಮುಂದೆ ಸಾಲುಗಟ್ಟಿ ನಿಂತು, ಅರ್ಧ ಲೀ. ಹಾಲಿಗೆ 100 ರೂ. ನೀಡುತ್ತಿದ್ದರು. ಪೆಟ್ರೋಲ್ ಬಂಕ್ಗಳ ಮುಂದಂತೂ ವಾಹನದ ಸಂತೆಯೇ ನಡೆದಿತ್ತು. ಬಸ್ ನಿಲ್ದಾಣವಂತೂ ಕಿಕ್ಕಿರಿದು ತುಂಬಿತ್ತು. ಚೆನೈನಿಂದ ಬೆಂಗಳೂರಿಗೆ ಹಾಗೂ ಇತರೆಡೆ ಸಂಚರಿಸುವ ಎಲ್ಲ ಬಸ್ಗಳು ಪ್ರಯಾಣಿಕರಿಂದ ತುಂಬಿ ಹೋಗಿದ್ದವು. ಇವೆಲ್ಲ ಚಿತ್ರಣ ಚೆನೈ ನಗರವನ್ನು ಅನಾಥವನ್ನಾಗಿಸಿತ್ತು. ಸತ್ತು ಕಿತ್ತ ಕಳೆಬರದಂತೆ ಕಂಡು ಬಂದಿತ್ತು.
--------