ಶುಕ್ರವಾರ, ಏಪ್ರಿಲ್ 21, 2017

ಬಣ್ಣ ಬಳಿದುಕೊಂಡ ಅಕ್ಕಿ ಕಾಳು, ಚಪ್ಪಲಿಯಡಿಯಲ್ಲಿ ನಲುಗಿತು!

ಮಾವಿನ ಚಿಗುರೆಲೆಯ ಹಸಿರು ತೋರಣದ ಮಧ್ಯೆ ಹಸೆಮಣೆಯ ಮೇಲೆ ಕೋರಿರುವ ವಧು-ವರರಿಗೆ ಆರತಿ ಬೆಳಗಿ, ಸೋಬಾನೆ ಪದ ಹಾಡಿ ಅಕ್ಷತೆ ಕಾಳು ಹಾಕಿ ಶುಭಾಶೀರ್ವಾದ ಮಾಡುವ ಪದ್ಧತಿ ಈಗ ಕಾಲಗರ್ಭದಲ್ಲಿ ಹೂತು ಹೋಗಿದೆಯೇನೋ ಎಂದೆನಿಸುತ್ತದೆ. ಅದಕ್ಕೂ ಮಿಗಿಲಾಗಿ ಶುಭದ ಸಂಕೇತವಾದ 'ಅಕ್ಷತೆ' ಅರಿಸಿಣ-ಕುಂಕುಮ ಬಣ್ಣದ ಬದಲಾಗಿ ನವರಂಗೀಯಂತೆ ಒಂದೊಂದು ಬಣ್ಣ ಬಳಿದುಕೊಳ್ಳುತ್ತಿರುವುದು ಬಣ್ಣದ ಮನಸ್ಸಿನ ದ್ಯೋತಕ. ಇದು ಇಷ್ಟಕ್ಕೆ ನಿಲ್ಲದು; ವಧು-ವರರ ಬೈತಲೆಯ ಮೇಲೆ ಬಿದ್ದು ಶುಭಕೋರಿದ ಅಕ್ಕಿ ಕಾಳು ಅವರದ್ದೇ ಕಾಲ ಕೆಳಗೆ ಬಿದ್ದು ಒದ್ದಾಡುತ್ತದೆ! ಸಾಲದೆಂಬಂತೆ ಹರಸಲು ಬಂದ ಬಂಧು-ಬಾಂಧವರ, ಹಿತೈಷಿಗಳ ಪಾದದಡಿಯಲ್ಲೂ ದೀನವಾಗಿ ಬಿದ್ದಿರುತ್ತದೆ!
ಕೆಲದಿನಗಳ ಹಿಂದೆ ಸಾಮೂಹಿಕ ವಿವಾಹಕ್ಕೆ ಹೋಗಿದ್ದೆ. ವಧು-ವರರಿಗೆ ಹರಿಸಿದ ಅಕ್ಷತೆ ಕಾಳುಗಳೆಲ್ಲ ಮದುವೆ ಆವರಣದ ತುಂಬೆಲ್ಲ ಬಿದ್ದಿತ್ತು. ಶುಭ ಹಾರೈಸಿದ ಅಕ್ಕಿ ಕಾಳು ಕೆಲವರ ಪಾದದಡಿಯಲ್ಲಿ ಸಿಲುಕಿದ್ದರೆ, ಇನ್ನು ಕೆಲವರ ಚಪ್ಪಲಿಯಡಿ ಸಿಲುಕಿ ನರಳುತ್ತಿತ್ತು. ವಿಚಿತ್ರವೆಂದರೆ ನೂತನ ವಧು-ವರರ ಕಾಲಡಿಯಲ್ಲಿಯೂ ಅದು ಸಿಲುಕಿ ಹೊಸಕಿ ಹೋಗುತ್ತಿತ್ತು. 'ನಾನೆಲ್ಲರಿಗೂ ಬೇಕಾದವಳು' ಎನ್ನುವ ಅಕ್ಕಿಯ ಮೂಕ ರೋದನ, ಮದುವೆ ಗದ್ದಲದಲ್ಲಿ ಯಾರೊಬ್ಬರಿಗೂ ಕೇಳಿಸಲಿಲ್ಲ. ದಾಂಪತ್ಯಕ್ಕೆ ಮುನ್ನಡಿ ಬರೆದ ನವ ದಂಪತಿಯೂ ಸೇರಿದಂತೆ!
ಇದು ಬದಲಾದ ಮದುವೆಯ ಪದ್ಧತಿಯ ಆಚಾರದಲ್ಲಿ ಕಂಡು ಬರುವ ಹೀನ ನಡೆ ಎಂದೇ ಹೇಳಬಹುದು. ಕಾಲಕ್ಕೆ ತಕ್ಕಂತೆ ಪದ್ಧತಿಯಲ್ಲಿನ, ಆಚರಣೆಯಲ್ಲಿನ ವಿಧಿ-ವಿಧಾನಗಳನ್ನು ಅನಿವಾರ್ಯವಾಗಿಯಾದರೂ ಒಂದಷ್ಟು ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಂತಹ ಬದಲಾವಣೆ ಮೂಲ ಆಚಾರದಲ್ಲಿ, ಪದ್ಧತಿಯಲ್ಲಿ ತರವಲ್ಲ. ಸಂಪ್ರದಾಯಗಳು ಯಾಕೆ ಇರುತ್ತಿದ್ದವು, ಅವುಗಳ ಅರ್ಥ, ಆಶಯಗಳು ಏನಿದ್ದವು ಎನ್ನುವುದು ಅರಿತುಕೊಳ್ಳುವುದು ಬದಲಾವಣೆಗೆ ಒಗ್ಗುವ ಮನಸ್ಸು ತಿಳಿದುಕೊಳ್ಳಬೇಕು.
'ಅಕ್ಷತ' ಎಂದರೆ ಸಂಸ್ಕೃತ ಭಾಷೆಯಲ್ಲಿ ತುಂಡಾಗದ ಎಂದರ್ಥ. ಕನ್ನಡದಲ್ಲಿ ಸ್ವಲ್ಪ ಅಪಭ್ರಂಶಗೊಂಡು ಅದು 'ಅಕ್ಷತೆ' ಎಂದಾಗಿದೆ. ಅಕ್ಷತೆಯಲ್ಲಿ ಬಳಸುವ ಒಂದೊಂದು ಅಕ್ಕಿ ಕಾಳು ಸಹ ಇಡಿ ಇಡಿಯಾಗಿರಬೇಕು. ಅಲ್ಲಿ ತುಂಡಾಗಿರುವ, ನುಚ್ಚಿನ ಅಕ್ಕಿಗೆ ಒಂದಿನಿತೂ ಅವಕಾಶವಿಲ್ಲ. ಅಲ್ಲದೆ, ಅದಕ್ಕೆ ಎಷ್ಟೇ ಅರಿಶಿಣ ಕುಂಕುಮ ಹಚ್ಚಿದರೂ ಪ್ರಯೋಜನವಿಲ್ಲ, ಹಾಗೆಯೇ ಅದು ಅಕ್ಷತೆಯೂ ಆಗುವುದಿಲ್ಲ. ಎಲ್ಲ ಧಾರ್ಮಿಕ ಕಾರ್ಯಗಳಲ್ಲೂ ಅಕ್ಷತೆಗೆ ಪ್ರಥಮ ಸ್ಥಾನ. ಭಗವಂತನಿಗೆ ಅರ್ಪಿಸುವ ಪ್ರಮುಖ ಪೂಜಾದ್ರವ್ಯ. ಜತೆಗೆ ದೈವಾನುಗ್ರಹಕ್ಕೆ ಹಾಗೂ ಗುರುಹಿರಿಯರ ಆಶೀರ್ವಚನಕ್ಕೆ ಇಡಿಯಾದ ಅಕ್ಕಿಕಾಳು ಶುಭ ನುಡಿಯುತ್ತದೆ. ಇದರ ಹೊರತಾಗಿ ಅಧ್ಯಾತ್ಮಿಕವಾಗಿ ಹೇಳಬೇಕೆಂದರೆ 'ಅಕ್ಷತೆ' ಎನ್ನುವುದು ಫಲಾಪೇಕ್ಷೆಯ ಬೀಜ; ಬೀಜ ಮೊಳೆತು ಪಕ್ವವಾಗಿ ಅದರೊಳಗಿಂದ ಮೊಳಕೆ ಬಂದು ದೊರೆಯುವ ಫಲ!
ಅಧ್ಯಾತ್ಮಿಕ ಹಾಗೂ ಆಶೀರ್ವಾದದ ಅನುಗ್ರಹಕ್ಕೆ ಅಕ್ಷತೆ ಬಳಸುತ್ತಾರಾದರೂ, ಮದುವೆಯ ಮುಹೂರ್ತದ ವೇಳೆ ವಧು-ವರರು ಪರಸ್ಪರ ಮಾಲೆ ಹಾಕಿಕೊಂಡ ನಂತರ ಗಟ್ಟಿಮೇಳ ಮೊಳಗುತ್ತಿದ್ದಂತೆ, ಆಗಮಿಸಿದ ಅತಿಥಿ ಮಹೋದಯರೆಲ್ಲ ಅಕ್ಷತೆ ಪ್ರೋಕ್ಷಣೆ ಮಾಡುವ ಮೂಲಕ ನೂತನ ದಂಪತಿಯನ್ನು ಆಶೀರ್ವದಿಸುತ್ತಾರೆ. ಅದಕ್ಕೂ ಪೂರ್ವ ಅಂದರೆ ಅಂತಃಪಟ ಸರಿಯುವ ಮುನ್ನ, ವಧು-ವರರು ಎದುರುಬದುರಾಗಿ ನಿಲ್ಲುವುದು ಇದೇ ಅಕ್ಕಿಯ ಮೇಲೆ. ಸಪ್ತಪದಿ ತುಳಿಯುವುದು ಸಹ ಅಕ್ಕಿಯಿಂದ ಮಾಡಿದ ಏಳು ರಾಶಿಗಳ ಮೇಲೆಯೇ. ಇವೆಲ್ಲ ಮುಗಿದು ಗಂಡನ ಮನೆ ಪ್ರವೇಶಿಸುವ ಮೊದಲು ವಧು, ಹೊಸ್ತಿಲಲ್ಲಿಟ್ಟ ಅಕ್ಕಿ ಪಾತ್ರೆಯನ್ನು ಕಾಲಿನಿಂದ ಚೆಲ್ಲಿ ಒಳಬರುತ್ತಾಳೆ. ಇದರರ್ಥ ವರನ ಕೈ ಹಿಡಿದಾಕೆ ಧಾನ್ಯ ಲಕ್ಷ್ಮಿಯಂತೆ, ಬಾಳಿ-ಬದುಕುವ ಮನೆ ತುಂಬಿ ತುಳುಕಲಿ ಎಂದು.
ಅಕ್ಷತೆಗೆ ಇಷ್ಟೊಂದು ಸಮೃದ್ಧ ಅರ್ಥಗಳಿವೆ, ಸಾಕ್ಷಾತ್ ದೈವೀ ಸ್ವರೂಪದ ಅಕ್ಕಿ ಕಾಳನ್ನು ತಲೆ ಮೇಲಿಟ್ಟು ಪೂಜಿಸುವ ಸಂಸ್ಕೃತಿ ನಮ್ಮದು. ಆದರೆ, ಇಂದಿನ ಆಡಂಬರದ ಜೀವನದಲ್ಲಿ, ವಿವಾಹ ಮಹೋತ್ಸವದಲ್ಲಿ ಅದಕ್ಕೆ ಬೆಲೆಯೇ ಇಲ್ಲದಂತೆ ಮಾಡಿದ್ದೇವೆ. ಧಾರ್ಮಿಕ ಪರಂಪರೆ, ಸಂಪ್ರದಾಯಗಳನ್ನು ಗಾಳಿಗೆ ತೂರಿ ಅಕ್ಕಿ ಕಾಳನ್ನು ಫ್ಯಾಶನ್ ವಸ್ತುವನ್ನಾಾಗಿ ಬಳಸುತ್ತಿದ್ದೇವೆ. ಮೊದಲೆಲ್ಲ ಅರಿಶಿಣ -ಕುಂಕುಮ ಬಳಿದುಕೊಂಡಿದ್ದ ಅಕ್ಷತೆ ಇರುತ್ತಿತ್ತು. ಆದರೀಗ ಅದಕ್ಕೆ ಬಣ್ಣ ಬಣ್ಣದ ರಾಸಾಯನಿಕ ಹಚ್ಚಿ ಆಕರ್ಷಿಸುತ್ತಿದ್ದಾರೆ. ಕ್ರಿಯಾಶೀಲತೆಯ ಕಲಾತ್ಮಕತೆಯನ್ನು ಧಾರ್ಮಿಕ ಆಚಾರದಲ್ಲಿ ನುಸುಳಿಸಿ, ಅಕ್ಷತೆಯ ಪಾವಿತ್ರ್ಯತೆಯನ್ನು ಹಾಳುಗೆಡವಿದಿದ್ದಾರೆ.

ಬುಧವಾರ, ಮಾರ್ಚ್ 8, 2017

ನಂದಿನಿಯಂಥ ಮಾತೆಗೆ......

'ಕಣ್ಣಿದ್ದೂ ಕುರುಡರಾದರು' ಎನ್ನುವ ಮಾತಿದೆ. ಅದು ಅಕ್ಷರಶಃ ಸತ್ಯವೂ ಹೌದು. ಆದರೆ, `ಕಣ್ಣಿಲ್ಲದೇ ಬೆಳಕಾಗುವವರು' ಎನ್ನುವ ಮಾತು ವಿರಳಾತಿ ವಿರಳ. ಇಂದಿನ ದಿನಗಳಲ್ಲಿ ಇಂತವರು ಕಾಣಸಿಗುವುದು ಸಹ ತೀರಾ ಅಪರೂಪವೇ. ಈ ಅಪರೂಪದ ನಡುವೆಯೇ ಒಂದು ಆತ್ಮವಿಶ್ವಾಸದ ಜ್ಯೋತಿ ದೇದೀಪ್ಯಮಾನವಾಗಿ ಬೆಳಗುತ್ತಿದೆ. ಕಣ್ಣಿದ್ದವರೂ ತಲೆ ತಗ್ಗಿಸುವಂತೆ ಮಾಡಿ, ಅರಿವಿಲ್ಲದೆ ಕಣ್ಣಂಚನ್ನು ಒದ್ದೆ ಮಾಡಿಸುತ್ತದೆ.
ಆ ಭಿನ್ನ ವ್ಯಕ್ತಿಯೇ ನಂದಿನಿ.
ಬೆಂಗಳೂರಿನ ನಿವಾಸಿಯಾದ ಇವರು, ಸದ್ಯ ಅಲ್ಲಿಯ ಆ್ಯಕ್ಷನ್ ಆ್ಯಡ್ ಸಮಾಜ ಸೇವಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಟ್ಟುತ್ತಲೇ ತನ್ನೆರಡು ಕಣ್ಣನ್ನು ಕಳೆದುಕೊಂಡು ಅಂಧತ್ವನ್ನೇ ವರವನ್ನಾಗಿ ಪಡೆದುಕೊಂಡು ಬಂದವರು. ಬೆಳಕು ನೋಡದ, ಬಣ್ಣಗಳ ಅರಿವಿಲ್ಲದ ಇವರಿಗೆ ಒಂದು ಹಂತದವರೆಗೆ ಆಸರೆಯಾಗಿ ನಿಂತವರು ಹೆತ್ತವರು. ಮಗಳು ಬೆಳೆದು ದೊಡ್ಡವಳಾಗುತ್ತಿದ್ದಂತೆ ಮದುವೆ ಚಿಂತೆ ಕಾಡಲಾರಂಭಿಸುತ್ತದೆ. ಅಂಧತ್ವದ ಮಗಳನ್ನು ಯಾರು ವರಿಸುತ್ತಾರೆ ಎಂದು ಹೆತ್ತವರು ಒಂದಷ್ಟು ವರ್ಷ ತಟಸ್ಥರಾಗುತ್ತಾರೆ. ಆ ವೇಳೆ ನಂದಿನಿಯವರಿಗೆ ಅನ್ಯ ಧರ್ಮಿಯ ವ್ಯಕ್ತಿಯೊಬ್ಬ ಪರಿಚಯವಾಗುತ್ತಾನೆ. ಆ ಪರಿಚಯ ಸ್ನೇಹವಾಗಿ ಮದುವೆ ಹಂತಕ್ಕೆ ತಲುಪುತ್ತದೆ. ಧರ್ಮಿಷ್ಟರಾದ ಹೆತ್ತವರಿಗೆ ಮಗಳನ್ನು ಅನ್ಯ ಕೋಮಿನ ವ್ಯಕ್ತಿಗೆ ಕೊಡುವುದು ಇಷ್ಟವಿರುವುದಿಲ್ಲ. ಹೆತ್ತವರ, ಕುಟುಂಬದವರ ವಿರೋಧದ ನಡುವೆಯೂ ನಂದಿನಿ ಆತನನ್ನು ಮದುವೆಯಾಗುತ್ತಾರೆ.
ಮದುವೆಯಾಗಿ ಎರಡು ವರ್ಷಗಳ ನಂತರ ಅವರು ಗರ್ಭಿಣಿಯಾಗುತ್ತಾರೆ. ತಾಯ್ತನದ ತುಮುಲ ಹಾಗೂ ಭಾವುಕತೆ ಅವರನ್ನು ಮೈಮರೆಸುತ್ತದೆ. ಸಂದರ್ಭದಲ್ಲಿ ಅವರ ಕೆಲವು ಆಪ್ತೇಷ್ಟರು, `ನಿನಗೆ ಹುಟ್ಟುವ ಮಗು ಅಂಧತ್ವದಿಂದಲೇ ಹುಟ್ಟಬಹುದು, ಗರ್ಭಪಾತ ಮಾಡಿಸು' ಎಂದು ಬಿಟ್ಟಿ ಸಲಹೆ ನೀಡುತ್ತಾರೆ. ಸಾಕಷ್ಟು ಬಾರಿ ಒತ್ತಾಯ ಮಾಡಿ ಅವರ ಗರ್ಭವನ್ನು ತೆಗೆಸಲು ಪ್ರಯತ್ನಿಸುತ್ತಾರೆ. ಆದರೆ ಅವರ ಯಾವ ಸಲಹೆ, ಸೂಚನೆಗೂ ಬೆಲೆ ನೀಡದ ನಂದಿನಿ, `ನಾನು ತಾಯಿ ಆಗಲೇ ಬೇಕು, ತಾಯ್ತನದ ಸುಖವೇನೆಂದು ಅರಿಯಲೇ ಬೇಕು. ಅಂಧತ್ವದ ಮಗು ಜನಿಸಿದರೂ ಅದನ್ನು ಎಲ್ಲಿಗಿಂತಲೂ ಭಿನ್ನವಾಗಿ ಬೆಳೆಸುತ್ತೇನೆ` ಎಂದು ಅಮ್ಮನಾಗುವ ದೃಢ ಸಂಕಲ್ಪ ಮಾಡುತ್ತಾರೆ.
ನವಮಾಸಗಳ ಕಾಲ ತಮ್ಮ ಗರ್ಭದಲ್ಲಿ ಮಗುವನ್ನು ಜೋಪಾನವಾಗಿ ಸಲುಹಿ, ಕೊನೆಗೊಂದು ದಿನ ತಾನಿದ್ದ ಭೂಮಿಗೆ ಪುಟ್ಟ ಕಂದನನ್ನು ಪರಿಚಯಿಸುತ್ತಾರೆ. ಬಿಟ್ಟಿ ಸಲಹೆ ನೀಡಿದವರೆಲ್ಲ ಕಣ್ಣು ಒದ್ದೆಮಾಡಿಕೊಂಡು ಮಾತು ಬರದೆ ಮೌನಕ್ಕೆ ಜಾರುವ ಸಮಯವದು. ತಮಗರಿವಿಲ್ಲದೆ ಎಳೆಯ ಹಸಗೂಸನ್ನು ಎತ್ತಿಕೊಂಡು ಎದೆಗೆ ಬಿಗಿದಪ್ಪಿಕೊಳ್ಳುತ್ತಾರೆ. ನಂದಿನಿಯ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸಕ್ಕೆ ತಲೆದೂಗಿ, ಗಟ್ಟಿಗಿತ್ತಿ ಹೆಣ್ಣು ಎಂದು ಬೆನ್ನು ತಟ್ಟುತ್ತಾರೆ. ಕಾರಣ, ನಂದಿನಿಗೆ ಜನ್ಮಿಸಿದ ಮಗು ಯಾವ ವೈಕಲ್ಯವನ್ನೂ ಹೊಂದಿರದ ಆರೋಗ್ಯವಂತ ಹೆಣ್ಣು ಮಗುವಾಗಿತ್ತು. ಆ ಪುಟ್ಟ ಕಂದಮ್ಮ ಈಗ ಆಳೆತ್ತರಕ್ಕೆ ಬೆಳೆದು ಬೆಂಗಳೂರಿನಲ್ಲಿಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ಎಂಟನೇ ತರಗತಿ ಅಭ್ಯಸಿಸುತ್ತಿದ್ದಾಳೆ.
ಇವಗಳ ನಡುವೆಯೇ ನಂದಿನಿ, ತನ್ನಂತೆಯೇ ಅಂಧತ್ವ ಇರುವ ಅನಾಥ ಹೆಣ್ಣು ಮಗುವೊಂದನ್ನು ದತ್ತು ಪಡೆಯುತ್ತಾರೆ. ಆಕೆಯ ಎಲ್ಲ ಕೆಲಸ ಕಾರ್ಯಗಳನ್ನು ಅವರೇ ಮಾಡುತ್ತ, ಆಕೆಗೆ ತಾನು ಪರಾವಲಂಬಿ ಎನ್ನುವ ಭಾವ ಮೂಡದಂತೆ ನೋಡಿಕೊಳ್ಳುತ್ತಾರೆ. ನಂದಿನಿಯ ಗರಡಿಯಲ್ಲಿ ಬೆಳೆಯುತ್ತಿರುವ ಪುಟ್ಟ ಮಗುವಿಗೆ ಈಗ ಆರು ವರ್ಷ. ಸಾಮಾನ್ಯರಿಗಿಂತ ಬಲು ಚೂಟಿಯಾಗಿ ಎಲ್ಲರ ಗಮನ ಸೆಳೆಯುತ್ತ, ಕಣ್ಣಿದ್ದವರೂ ಬೆರಗಾಗುವಂತೆ ಮಾಡುತ್ತಿದ್ದಾಳೆ.
ತಾನು ನಿಸ್ಸಹಾಯಕಳು, ಪರಾವಲಂಬಿ ಎನ್ನುವ ಭಾವ ನಂದಿಯವರನ್ನು ಎಂದೂ ಕಾಡಿಲ್ಲ. ಅದಕ್ಕೆ ಅವಕಾಶವನ್ನು ಸಹ ನೀಡದೆ, ತಮ್ಮ ಬಿಡುವಿನ ವೇಳೆಯನ್ನು ಬ್ರೈಲ್ ಲಿಪಿಯಲ್ಲಿ ಕಥೆ, ಕವನ ಬರೆಯುವ ಮೂಲಕ ಸಾಹಿತ್ಯದ ರಸ ಅನುಭವಿಸುತ್ತಿದ್ದಾರೆ. ಮಹಿಳಾ ಸಬಲೀಕರಣದ ಕುರಿತಾಗಿ ಸಾಕಷ್ಟು ಲೇಖನಗಳನ್ನು ಬರೆದು ಮಹಿಳಾ ವರ್ಗದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮದೇ ಆದ ಜಾಗೃತ ಬಳಗ ಸೃಷ್ಟಿಸಿಕೊಂಡು, ನಾಡಿನಾದ್ಯಂತ ಮಹಿಳೆಯ ಕುರಿತಾಗಿ ಅಭಿಯಾನ ನಡೆಸುತ್ತಿದ್ದಾರೆ. ಕನ್ನಡ, ಇಂಗ್ಲೀಷ, ಹಿಂದಿ, ತಮಿಳು ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಇವರು, ರಾಷ್ಟ್ರಮಟ್ಟದ ಹೋರಾಟಗಾರರು. ದೆಹಲಿ, ಕಲ್ಕತ್ತಾ, ಮುಂಬೈ ನಗರಗಳಿಗೆ ಒಬ್ಬರೇ ಹೋಗಿ, ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ.
ಅನುಕಂಪ ಬೇಡ ಎನ್ನುವ ಇವರು, ಇನ್ನೊಬ್ಬರ ಬದುಕಲ್ಲಿ ಜೀವನೋತ್ಸಾಹ ತುಂಬುವ ಪರಿ ಎಂಥವರನ್ನಾದರೂ ನಿಬ್ಬೆರಗಾಗಿಸುತ್ತದೆ. ಬೆಂಗಳೂರಿನ ಹೆಣ್ಣೂರಿನಲ್ಲಿರುವ ಅವರ ಮನೆ ಎಷ್ಟು ಶುಚಿಯಾಗಿದೆಯೆಂದರೆ, ಎಂತವರಾದರೂ ಆಶ್ಚರ್ಯ ಚಕಿತರಾಗಬೇಕು. ಯಾರ ಸಹಾಯ, ಸಹಕಾರವಿಲ್ಲದೆ ಮನೆಗೆಲಸವನ್ನು ತಾವೇ ಮಾಡಿಕೊಳ್ಳುವ ಮೂಲಕ ಪರಾವಲಂಬಿಯಾಗಿ ಹೇಗೆ ಬದುಕಬಹುದು ಎಂದು ಹೇಳುತ್ತಾರೆ. ದತ್ತು ಪಡೆದ ಅನಾಥ ಅಂಧ ಮಗುವನ್ನು ಮಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವ ಪರಿ ಎಂಥವರನ್ನಾದರೂ ಮೂಕರನ್ನಾಗಿಸುತ್ತದೆ.
ಪ್ರೀತಿ, ವಿಶ್ವಾಸ, ಮಮತೆ, ಕರುಣೆ ಇವುಗಳ ಜತೆಗೆ ಬದುಕಿನ ಪ್ರೀತಿಯನ್ನು ಮೈ ಗೂಡಿಸಿಕೊಂಡ 'ನಂದಿನಿ'ಯಂಥ ಮಾತೆಯರಿಗೆ ಮಹಿಳಾ ದಿನದ ಶುಭಾಶಯಗಳು.
-ನಾಗರಾಜ್ ಬಿ.ಎನ್. 

ಗುರುವಾರ, ಫೆಬ್ರವರಿ 2, 2017

ತವರಿಗೆ ಬಂದ ಯಶೋಧೆ.....
ಅರಿಯದ ವಯಸ್ಸಲ್ಲಿ ದಿಕ್ಕು ತೋಚದೆ ದಿಕ್ಕೆಟ್ಟು ಹೋದಾಗ, ಮೈದವಡಿ ರಟ್ಟೆ ಹಿಡಿದು ಎಬ್ಬಿಸಿದ್ದು ಸೇವಾ ಭಾರತಿ. ಮೂರೊತ್ತು ಮೃಷ್ಟಾನ್ನ ತಿನ್ನಿಸಿ, ಸಂಸ್ಕಾರದ ಜತೆಗೆ ಶಿಕ್ಷಣ ನೀಡಿದ್ದು ಬಾಲಕಲ್ಯಾಣ. ಪ್ರಾಪ್ತೆಯಾದಾಗ ಹಸೆಮಣೆ ಏರಿಸಿ, ಸಪ್ತಪದಿ ತುಳಿಸಿದ್ದು ಸೇವಾಸದನ. ತವರಿಲ್ಲದಾ ಕೂಸಿಗೆ ತವರಿನಾ ವಾತ್ಸಲ್ಯ ತೋರಿಸಿದ್ದು ಮಾತೃಛಾಯಾ...

ಸರಿಸುಮಾರು ದಶಕಗಳ ಕಾಲ ಹುಬ್ಬಳ್ಳಿ ಕೇಶ್ವಾಪುರದ ಮಾತೃಛಾಯ ಆಶ್ರಯದಲ್ಲಿ ಬೆಳೆದು, ಕೊಪ್ಪಳದ ಸುಧೀಂದ್ರ ಎಂಬಾತನೊಂದಿಗೆ ವಿವಾಹ ಬಂಧನಕ್ಕೊಳಗಾದ ಯಶೋಧಾಗೆ ಬುಧವಾರ(ಫೆ. 1, 2017; ಸಂ. 6) ಸಂತಸದ ಕ್ಷಣ. ಅಲ್ಲಿದ್ದ ಮೂವತೈದು ಮಕ್ಕಳ ಸಾಮೂಹಿಕ ಜನ್ಮದಿನದ ಸಂಭ್ರಮದಲ್ಲಿ ಹಿರಿಯಕ್ಕನ ಪಾತ್ರ. ಪುಟ್ಟ ಪಾಪು ಸುರಭಿಯನ್ನು ಕಂಕುಳಲ್ಲಿ ಎತ್ತಿಕೊಂಡು ಅತ್ತಿಂದಿತ್ತ ಓಡಾಡುತ್ತ, ವಹಿಸಿದ್ದ ಜವಾಬ್ದಾರಿಯನ್ನು ನಿಭಾಯಿಸುತ್ತ ನೆರೆದ ಸಹೃದಯಿಗಳ ಕೇಂದ್ರಬಿಂದುವಾಗಿದ್ದಳು.
ಒಂದಿಷ್ಟು ವರ್ಷ ಯಶೋಧಾ ಸೇವಾಸನದ ವೇದಿಕೆಯಲ್ಲಿಯೇ ತನ್ನ ಸಂಗಡಿಗರೊಂದಿಗೆ ಜನ್ಮದಿನ ಆಚರಿಸಿಕೊಂಡಿದ್ದಳು. ನೂರಾರು ಮಾತೆಯರು ಸೆರಗು ತುಂಬು  ಹಾರೈಕೆಯ ಅಕ್ಷತೆ ತಂದು, ನೂರ್ಕಾಲ ಬಾಳಿ ಬದುಕವ್ವ ಎಂದು ನೆತ್ತಿ ಮೇಲೆ ಸುರಿದಿದ್ದರು. ದೇದೀಪ್ಯಮಾನವಾಗಿ ಬೆಳಗುವ ಪರಂಜ್ಯೋತಿಯ ಆರತಿ ಎತ್ತಿ ಮನದುಂಬಿ ಆಶೀರ್ವದಿಸಿದ್ದರು. ಅದೇ ದಿನಗಳ, ಅದೇ ಕ್ಷಣಗಳು ಯಶೋಧಾಳ ಕಣ್ಮುಂದೆ ಒಂದೊಂದಾಗಿ ಮೆರವಣಿಗೆ ಹೊರಟಿದ್ದವು. ಆ ಭಾವುಕ ಕ್ಷಣಗಳು ಅವಳನ್ನು ಆನಂದದ ಮಡುವಿಗೆ ನೂಕಿದಂತಿತ್ತು. ಅಲ್ಲಿಯೇ ಇರುವ ಆರತಿ ಬಟ್ಟಲಿಗೆ ಎಣ್ಣೆ ಸುರಿಯುತ್ತ, ಹಾಕಿದ ಬತ್ತಿ ಹಿಂಡುತ್ತ ತನ್ನನ್ನೇ ತಾನು ಮರೆತಿದ್ದಳು. ಅಷ್ಟೊಂದು ಭಾವಪರವಶಳಾಗಿ ಸಾಗಿ ಬಂದ ಹಾದಿಯ ಕಡೆ ಮನಸ್ಸು ನೆಟ್ಟಿದ್ದಳು!
ಯಶೋಧಾಗೆ, ಮಾತೃಛಾಯ ತವರು ಮನೆ. ಅಲ್ಲಿಯೇ ಆಡಿ, ಬೆಳೆದಾಕೆಗೆ ಅಲ್ಲಿದ್ದ ಮಾತೆಯರೇ ಅಮ್ಮಂದಿರು. ಮಡಿಲು ತುಂಬಿಸಿಕೊಂಡು ತವರಿಗೆ ಬಂದ ಸಂಭ್ರಮ ಆಕೆಯ ಮೊಗದಲ್ಲಿ ಕಳೆಕಟ್ಟಿತ್ತು. ಕರುಳ ಕುಡಿ ತನ್ನ ಅಜ್ಜಿ ಮನೆಯಲ್ಲಿ ಮನದಣಿಯೇ ಕುಣಿದು ಕುಪ್ಪಳಿಸಿತ್ತು. ಕೈಯ್ಯಲ್ಲಿ ಬಾಳೆಹಣ್ಣು ಹಿಡಿದು ವೇದಿಕೆಯ ಮೇಲೆಲ್ಲ ಓಡಾಡಿ, ತನ್ನ ಪುಟ್ಟ ಹೆಜ್ಜೆಯನ್ನು ಅಚ್ಚೊತ್ತಿತ್ತು. ಪುಟ್ಟ ಕಂದನ ಕೇಕೆ, ತುಂಟಾಟಗಳನ್ನೆಲ್ಲ ವೇದಿಕೆ ಮುಂಭಾಗದಲ್ಲಿ ಕುಳಿತ ಸಹೃದಯಿಗಳು ಶಾಂತಚಿತ್ತದಿಂದ ಆಸ್ವಾದಿಸುತ್ತಿದ್ದರು. ಮಹಾಮನೆಯಲ್ಲಿ ತನ್ನಂತೆಯೇ ಇರುವ ಸಹೋದರ, ಸಹೋದರಿಯರ ಸಾಮೂಹಿಕ ಜನ್ಮದಿನಕ್ಕೆ ಮನೆಯ ಹಿರಿ ಮಗಳಾಗಿ ಯಶೋಧಾ ಓಡಾಡಿದಳು.

'ಕೈಹಿಡಿದಾತ(ಸುಧೀಂದ್ರ) ಅನ್ಯಕಾರ್ಯದ ನಿಮಿತ ಬೇರೆಡೆ ಹೋಗಿದ್ದರಿಂದ, ಕರೆದುಕೊಂಡು ಬರಲಾಗಲಿಲ್ಲ. ಈ ಸುಮಧುರ ಕ್ಷಣದಲ್ಲಿ ಅವರಿಲ್ಲ ಎನ್ನುವ ಕೊರಗು ಕಾಡುತ್ತಿದೆಯಾದರೂ, ಪುಟ್ಟ ಮಕ್ಕಳ ಸಂಭ್ರಮದಲ್ಲಿ ನಾ ತೇಲಿ ಹೋಗಿದ್ದೇನೆ. ನನ್ನ ತವರಿನ ಮಕ್ಕಳ  ಜನ್ಮದಿನದಲ್ಲಿ ಪಾಲ್ಗೊಳ್ಳುವ ಖುಷಿಗಿಂತ, ಬೇರೊಂದು ಖುಷಿ ನನಗ್ಯಾವುದೂ ಇಲ್ಲ. ಯಾಕೆಂದರೆ, ಇದೇ ವೇದಿಕೆ ಮೇಲೆ ನಾನು ಕೂಡಾ ನಾಲ್ಕೈದು ಬಾರಿ ನೂರಾರು ಮಾತೆಯರಿಂದ ಆರತಿ ಬೆಳಗಿಸಿಕೊಂಡಿದ್ದೆ' ಎಂದು ತವರಿಗೆ ಬಂದ ಯಶೋಧಾ ಆನಂದಭಾಷ್ಪ ಹರಿಸಿದಳು.

-ಶುಭವಾಗಲಿ ಸಹೋದರಿ....... ಬದುಕು ಬಂಗಾರವಾಗಲಿ, ನಿನ್ನ ತವರು ಜಗದೆತ್ತರಕ್ಕೆ ಬೆಳಗಲಿ.

ಬುಧವಾರ, ಜನವರಿ 25, 2017

ಕರುಳ ಕುಡಿ ಇನ್ನಿಲ್ಲದಾಗ...
ಹಸಿ-ಹಸಿ ಕನಸುಗಳು ಇನ್ನೂ ಕಣ್ಮುಂದೆಯೇ ಇವೆ. ಇನ್ನೇನು ಆ ಕನುಸುಗಳೆಲ್ಲ ನನಸಾಯಿತು ಎನ್ನುವಷ್ಟರಲ್ಲಿಯೇ ಬಹುದಿನಗಳಿಂದ 'ಅತ್ಮ'ವನ್ನು ಕಾಡುತ್ತಿದ್ದ 'ಹತ್ಯೆ' ಧುತ್ತೆಂದು ಎದುರಾಗಿಯೇ ಬಿಟ್ಟಿತು. ಕ್ಷಣಾರ್ಧದಲ್ಲಿ ಎಲ್ಲವೂ ಶಾಂತ. ಸ್ಮಶಾನ ಮೌನ...!!
ಎದೆಗೆ ಒದ್ದ ಪುಟ್ಟ ಕಾಲುಗಳು, ಕಿರುಬೆರಳ ಹಿಡಿದು ನಡೆದ ದಾರಿ, ಎದೆ ಹಾಲು ಹೀರಿದ ಆ ಚೆಂದುಟಿ, 'ಅಮ್ಮಾ' ಎಂದು ಕರೆದ ಮಮತೆಯ ಕೂಗು.... ಎಲ್ಲವೂ ಆ ತಾಯಿಯ ಕಣ್ಮುಂದೆ ಮೆರವಣಿಗೆ ಹೊರಟಿವೆ.

'ಹೋಗಿ ಬರುತ್ತೇನೆ ಅಮ್ಮಾ...' ಎಂದು ಪಾದಕ್ಕೆರಗಿ ಹೊಸ್ತಿಲು ತುಳಿದ ಮಗ, ಕಾಣದ ಲೋಕಕ್ಕೆ ಪಯಣಿಸಿದ್ದ. ಆತ ತುಳಿದು ಹೋದ ಹೆಜ್ಜೆ ಗುರುತು ಮುಸ್ಸಂಜೆಯ ಬೆಳಕಿಗೆ ಅಸ್ಪಷ್ಟವಾಗಿ ಗೋಚರಿಸುತ್ತಿದೆ.
ಅತ್ತು, ಗೋಗರೆದು ತನು-ಮನವೆಲ್ಲ ನಿತ್ರಾಣವಾಗಿದೆ. ಕಣ್ಣಂಚಿನಿಂದ ಒಂದೇ ಒಂದು ಹನಿ ಕೂಡಾ ಉರುಳುತ್ತಿಲ್ಲ. ಎದೆಯಾಳ ಬತ್ತಿ, ಬಂಜರು ಭೂಮಿಯಂತಾಗಿದೆ.
ಬೆಚ್ಚನೆಯ ಮಡಿಲಲ್ಲಿ ಮಲಗಿರುತ್ತಿದ್ದ ಮಗ, ಈಗ ಚಿತೆಯ ಮೇಲೆ ನಿಸ್ತೇಜ. ಉಸಿರಿಲ್ಲದ ದೇಹಕ್ಕೆ ಬಿಳಿಯ ಹೊದಿಕೆ. ಇದ್ದಾಗ ಇಲ್ಲದ ಹಾರ-ತುರಾಯಿ, ಈಗ ಮುಖವೂ ಕಾಣಿಸದೆ ತುಂಬಿಕೊಂಡಿವೆ. ಒಂದು ಕಡೆ ಸಂಬಂಧಿಗಳ ರೋದನ, ಇನ್ನೊಂದು ಕಡೆ ಸಮಯ ಮೀರುತ್ತಿದೆ ಎನ್ನುವ 'ಸುಡುವ' ಮಾತು.
ಒಂದರೆ ಘಳಿಗೆ.... ಆತ್ಮವೇ ಇಲ್ಲದ ದೇಹ, ಪಂಚಭೂತಗಳಲ್ಲಿ ಲೀನ, ಎಲ್ಲವೂ ನೋಡು ನೋಡುತ್ತಲೇ!
ಅರೆ, ಒಂಬತ್ತು ತಿಂಗಳು ಗರ್ಭದಲ್ಲಿದ್ದು, ಪ್ರಸವದಲ್ಲಿ ನೋವನ್ನು ಉಂಡು, ಅಳುವ ದನಿ ಕೇಳಿದಾಗ 'ನೋವು ಮರೆತವಳು' ನಾನಲ್ಲವೇ!
ಪುಟ್ಟ ಹೆಜ್ಜೆಯನ್ನಿಟ್ಟು, ಅಂಗಳದ ರಂಗವಲ್ಲಿಯ ಅಳಿಸಿ ಹಿರಿಹಿರಿ ಹಿಗ್ಗಿದವನು ಇವನಲ್ಲವೇ!
ಹೌದು, ಕರಿಮಣಿ ಮಾಲೀಕನ ಹಿಂಸೆಗೆ ನಲುಗಿದಾಗ, ಕಾರ್ಗತ್ತಲ ಇರುಳಿನಲಿ ಒಬ್ಬಂಟಿಯಾದಾಗ, 'ಅಮ್ಮಾ' ಅನ್ನೋ ಒಂದೇ ಪದದಿಂದ ನೋವ ಮರೆಸಿದವನು ಇವನೇ! ಕರುಳ ಕುಡಿಯಾದರೂ ಆತ್ಮ ಬಂಧುವಿನಂತಾದವನು, ಆತ್ಮ ಸಖನೇ ಆದವನು, ನನ್ನಾತ್ಮವೇ ಆದವನು.
ಹ್ಹ...ಹ್ಹ........... ಹ್ಹ
ಆತ್ಮ, ಆತ್ಮ ಸಖ, ಆತ್ಮ ಬಂಧು.... ಕಣ್ತೆರೆಯುವ ಮೊದಲೇ ಆತ್ಮಾರ್ಪಣೆ ಮಾಡಿದನೆ? ಹತ್ಯೆಯಾಗದ ಆತ್ಮ, ಹತ್ಯೆಯ ಕರಾಳ ಮೊನಚಿಗೆ ಸಿಲುಕಿತೆ?
ಭವಿಷ್ಯದ ಕೈಯ್ಯಲ್ಲಿ ಭೂತದ ನರ್ತನ, ಕಾರಿರುಳ ಮಾರ್ಗದಲಿ ಮಿಂಚುಳ್ಳಿಯ ಬೆಳಕು. ಎಷ್ಟು ದೂರ ಸಾಗಬಲ್ಲೆ? ಇರುಳಿನ ಪರದೆ ಸರಿದು ಬೆಳಕು ಹರಿಯುತ್ತದೆ. ಮತ್ತದೆ 'ಆತ್ಮ' ಬಂದೆನ್ನ ಕಾಡುತ್ತದೆ. ನೆತ್ತಿಯ ಮೇಲೆ ಸುಡು ಸೂರ್ಯ. ದೂರದಲ್ಲೆಲ್ಲೋ ಬಿಸಿಲ್ಗುದುರೆ. ಮತ್ತೆ ಆವರಿಸುತ್ತದೆ ಸದ್ದಿಲ್ಲದೆ ಇರುಳು.
'ಹೋಗಿ ಬರುತ್ತೇನೆ' ಎಂದು ಹೊಸಿಲು ತುಳಿದ ಮಗ. ಭರವಸೆಯ ಬೆಳಕು ಕ್ಷಣ ಕ್ಷಣಕೂ ಕ್ಷೀಣ. ಹುಚ್ಚು ಭರವಸೆಯ ಕಿರಣ, ಅಮಾವಸ್ಯೆಯಲಿ ಬೆತ್ತಲು. ಬದಲಾಯ್ತು ಬದುಕು, ಬರಲಿಲ್ಲ ಆತ್ಮ.......!!!!
-ನಾಗರಾಜ್ ಬಿ.ಎನ್. 

ಶನಿವಾರ, ಜನವರಿ 7, 2017

ವಲಸೆಯ ಬಂಡಿ ಉರುಳಿದಾಗ......
'ಗೇಣುದ್ದ ಹೊಟ್ಟೆ ತುಂಬಿಸಿಕೊಳ್ಳಲು ಊರು ತೊರೆಯುತ್ತಿದ್ದೇವೆ ಎನ್ನುವ ಚಿಕ್ಕ ನೋವು ಬಿಟ್ಟರೆ, ನಮ್ಮದು ತುಂಬು ಕುಟುಂಬ. ಸಂಪಾದಿಸಿದ ಅಷ್ಟೋ ಇಷ್ಟೋ ಹಣದಲ್ಲಿ ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ಸಮಾನವಾಗಿ ತಿನ್ನುತ್ತೇವೆ. ಕೂಡಿ ಬಾಳುತ್ತೇವೆ. ನೆಮ್ಮದಿಯ ಬದುಕಿಗೆ ಇನ್ನೇನು ಬೇಕು?'
ಸುರಪುರ ತಾಲೂಕಿನಿಂದ ವಲಸೆ ಹೊರಟ ಕುಟುಂಬವೊಂದರ ಯಜಮಾನನ ಮಾತಿತು. ಶನಿವಾರ ಶಿರಸಿಯಿಂದ ಹುಬ್ಬಳ್ಳಿಗೆ ಬೈಕ್ ಮೇಲೆ ಬರುವಾಗ ಮುಂಡಗೋಡ ಸನಿಹ ಈ ವಲಸೆ ಕುಟುಂಬ ಎದುರಾಯಿತು. ಮೊದಲೇ ಹೆಗಲಿಗೆ ನೇತಾಡುತ್ತಿದ್ದ ಕ್ಯಾಮರಾ, ದೂರದಿಂದಲೇ ಚಕ್ಕಡಿ ಮೇಲೆ ಸಾಲಾಗಿ ಬರುತ್ತಿದ್ದ 'ವಲಸೆ' ಚಿತ್ರವನ್ನು ಸೆರೆಹಿಡಿಯಲು ಪ್ರಯತ್ನಿಸಿತು. ಹತ್ತಿರ ಬರುತ್ತಿದ್ದಂತೆ ಅವರನ್ನು ಮಾತನಾಡಿಸಿದಾಗ, ಕುಟುಂಬದ ಯಜಮಾನ ಹತ್ತು ನಿಮಿಷ ನನಗಾಗಿ ಮೀಸಲಿಟ್ಟ. ಆ ಸೀಮಿತ ಸಮಯದಲ್ಲಿ ನಾ ಮಾತಾಡಿದ್ದು 'ಎಲ್ಲಿಂದ ಬಂದಿದ್ದು? ಯಾಕೆ?' ಎನ್ನು ಎರಡೇ ಎರಡು ಮಾತು. ಅದು ಕೂಡಾ ಒಂದೋ, ಎರಡು ಸೆಕೆಂಡ್. ಉಳಿದದ್ದೆಲ್ಲ ಆತನದ್ದೇ ಮಾತು... ಮಾತು....!
 ಯಜಮಾನನ ಹೆಸರು ಭರಮಪ್ಪ ಚನ್ನಬಸಪ್ಪ. ಸುರಪುರದ ಬಿದೊಡ್ಡಿ ಅನ್ನೋ ಪುಟ್ಟ ಕುಗ್ರಾಮದಲ್ಲಿ ವಾಸ. ಅಣ್ಣ, ತಮ್ಮ, ಅಕ್ಕ ಹಾಗೂ ಅವರ ಸಂಸಾರವೆಂದು ಹದಿಮೂರು ಜನರಿರುವ ತುಂಬು ಕುಟುಂಬ. 36 ಎಕರೆ ಹೊಲವಿರುವ ವಾರಸ್ದಾರ. ಜೋಳ, ಸೂರ್ಯಕಾಂತಿ ಮತ್ತಿನ್ಯಾವುದೋ ಎರಡು ಬೆಳೆ ಬೆಳೆದಿದ್ದನಂತೆ. ಮೊದಲೇ ಬಿಸಿಲು ನಾಡು... ಮಳೆಯೂ ಇಲ್ಲದ ಕಾರಣ ಅವೆಲ್ಲ ಮೊಳಕೆಯೂ ಬರದೆ ಬಿತ್ತಿದ್ದಲ್ಲಿಯೇ ಸುಟ್ಟು ಕರಕಲಾಯ್ತಂತೆ. ತುಂಬ ಕುಟುಂಬ ಊರಲ್ಲೇ ಇದ್ದರೆ ಸಂಸಾರ ಅಸಾಧ್ಯ ಎಂದರಿತ ಆತ, ಊರು ಬಿಡಲು ನಿರ್ಧರಿಸಿ ಕುಟುಂಬದವರ ಜೊತೆ ಚರ್ಚಿಸಿ ಹದಿನೈದು ದಿನದ ಹಿಂದೆ, ಕುಟುಂಬ ಸಮೇತನಾಗಿ ವಲಸೆ ಬಂದಿದ್ದಾನೆ.
ತಮ್ಮ ಪಯಣದ ಗಮ್ಯ ಎಲ್ಲಿಗೆ ಎನ್ನುವುದು ಆ ಕುಟುಂಬಕ್ಕೆ ಗೊತ್ತಿಲ್ಲ. ಬರುವಾಗ ಮನೆಯಲ್ಲಿದ್ದ ಒಂದಿಷ್ಟು ಅಕ್ಕಿ, ಕಾಳು, ಕಡಿಗಳನ್ನು ಹೊತ್ತುಕೊಂಡು ಚಕ್ಕಡಿಗೆ ಹಾಕಿಕೊಂಡು ಬಂದಿದ್ದಾರೆ. ಸಾಯಂಕಾಲವಾಗುತ್ತಿದ್ದಂತೆ ಎಲ್ಲಿ ತಲುಪಿದ್ದಾರೋ ಅದೇ ಊರಲ್ಲಿ ಟೆಂಟ್ ಕಟ್ಟಿಕೊಂಡು, ಬಯಲಲ್ಲಿಯೇ ಅಡುಗೆ ಮಾಡಿ ಅಲ್ಲಿಯೇ ರಾತ್ರಿ ಬೆಳಗು ಮಾಡುತ್ತಾರೆ. ಮುಂಜಾನೆ ಕಿರಣ ಭೂಮಿ ಸ್ಪರ್ಶಿಸುತ್ತಿದ್ದಂತೆ, ಮತ್ತೆ ದಾರಿ ಕಾಣದ ಹಾದಿಯಲ್ಲಿ ಬಂಡಿಯ ಚಕ್ರಗಳು ಉರುಳುತ್ತವೆ, ಬದುಕಿನ ಚಕ್ರ ಉರುಳಿದಂತೆ.
ವಿಶೇಷವೆಂದರೆ ಈ ಕುಟುಂಬ ಕಮ್ಮಾರಿಕೆ ಕಾರ್ಯದಲ್ಲೂ ನಿಪುಣವಿದೆ ಎನ್ನುವುದು. ಇದೇ ಧೈರ್ಯ ಹಾಗೂ ಆತ್ಮವಿಶ್ವಾಸ ವಲಸೆ ಕುಟುಂಬದ ಯಜಮಾನನಿಗೆ. ಆ ಕುಟುಂಬದ ಪಯಣ ಮಲೆನಾಡ ದಿಕ್ಕಿನತ್ತ ಇರುವುದರಿಂದ, ಅಲ್ಲಿಯ ರೈತಾಪಿ ವರ್ಗದವರ ನೇಗಿಲು, ಕತ್ತಿ, ಕೊಡಲಿ, ಹಾರಿ, ಪಿಕಾಸುಗಳಂತ ಸಾಮಗ್ರಿಗಳಿಗೆ ಈ ಸಮಯದಲ್ಲಿ ಒಂದಿಷ್ಟು ಹದ ಹಾಕಬೇಕಾಗುತ್ತದೆ. ಸೂಕ್ತ ಗ್ರಾಮಕ್ಕೆ ಹೋಗಿ ಅಲ್ಲಿಯೇ ಒಂದಿಷ್ಟು ದಿನ, ವಾರವೋ ಉಳಿದು ಸಂಸಾರದ ನೊಗ ಹೊರುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಆತನ ಮಾತಿನಿಂದಲೂ ತಿಳಿದು ಬಂದ ಅಂಶ.
ಏಳು ಎತ್ತಿನ ಬಂಡಿಯಲ್ಲಿ ಹದಿಮೂರು ಜನರಷ್ಟೇ ಪಯಣಿಸುತ್ತಿಲ್ಲ. ಆ ಪಯಣದಲ್ಲಿ ಎರಡು ನಾಯಿ, ನಾಲ್ಕು ಕುರಿ, ಐದು ಕೋಳಿಗಳು ಸಹ ಕಾಣದ ಊರಿನತ್ತ ಮುಖ ಮಾಡಿವೆ. ಎತ್ತುಗಳಿಗೆ ಸಾಕಾಗುವಷ್ಟು ಹುಲ್ಲುಗಳನ್ನು ಒಂದು ಚಕ್ಕಡಿಯಲ್ಲಿ ತುಂಬಿಸಿಕೊಂಡಿದ್ದಾರೆ. ಹಾಸಿಗೆ, ದಿಂಬು, ಪಾತ್ರೆ, ಬಿಂದಿಗೆ, ಕೊಡ, ವಸ್ತ್ರ ಹೀಗೆ ಬದುಕಲು ಏನೇನು ಬೇಕೋ ಎಲ್ಲವೂ ಇನ್ನುಳಿದ ಆರು ಚಕ್ಕಡಿಯಲ್ಲಿ ತುಂಬಿವೆ. ಹಗಲಿನ ಹಾದಿಯಲ್ಲಿ ಹೆಂಗಸರು, ಮಕ್ಕಳು ವಿಶ್ರಮಿಸಲೆಂದು ಚಾಪೆಯನ್ನು ಹಾಸಲಾಗಿದೆ. ಒಂದು ವೇಳೆ ರಾತ್ರಿ ಪಯಣಿಸಬೇಕಾದರೆ ಯಾವುದಕ್ಕೂ ಇರಲಿ ಎಂದು, ಕಂದೀಲುಗಳನ್ನು ಸಹ ವ್ಯವಸ್ಥೆ ಮಾಡಿಟ್ಟುಕೊಂಡಿದ್ದಾರೆ.
'ತುತ್ತು ಕೂಳಿಗಾಗಿ ಮನೆ ಬಿಟ್ಟು ಬಂದಿರಬಹುದು. ಆದರೆ ನಾವು(ಅಣ್ಣ-ತಮ್ಮ) ಪ್ರೀತಿ ವಿಶ್ವಾಸದಿಂದ ಕೂಡಿ ಬಾಳುತ್ತಿದ್ದೇವೆ. ಸಂಪಾದಿಸಿದ ಒಂದಿಷ್ಟು ಹಣದಲ್ಲಿ ಎಲ್ಲರೂ ಹಂಚಿಕೊಂಡು ತೃಪ್ತಿಯಿಂದ ನಗುತ್ತೇವೆ. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕುವ ಶಕ್ತಿ ನಮ್ಮ ಅಣ್ಣ-ತಮ್ಮರಿಗಿಲ್ಲ. ಹೆಣ್ಣು ಮಕ್ಕಳು ದೊಡ್ಡವರಾಗುತ್ತಿದ್ದಾರೆ. ಬೇಸಿಗೆ ಬರುವವರೆಗೆ ವಲಸೆ ಇರುತ್ತೇವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ಊರಿನ ಕಡೆ ಮುಖ ಮಾಡುತ್ತೇವೆ. ಎಲ್ಲವೂ ಭಗವಂತನ ಚಿತ್ತ. ಇರುವಷ್ಟು ದಿನ ಮನೆ&ಮಂದಿಯೊಂದಿಗೆ ಪ್ರೀತಿಯಿಂದ ನಗುತ್ತ ಬದುಕುವುದಷ್ಟೇ ನಮಗೆ ಗೊತ್ತು' ಎನ್ನುವುದು ಭರಮಪ್ಪನ ಬದುಕಿನ ಮಾತು.

ನಿಜಕ್ಕೂ ಆ ಕ್ಷಣದಲ್ಲಿ ಕಣ್ಣಾಲಿಗಳು ತೇವಗೊಂಡವು. ಹೊಟ್ಟೆಗೆ ಕೂಳಿಲ್ಲದಿದ್ದರೂ ಸಂತೃಪ್ತಿಯಿಂದ ಕುಟುಂಬದವರೊಂದಿಗೆ ಹೇಗೆ ಬದುಕಬೇಕೆನ್ನುವ ನೀತಿ ಪಾಠ ಭರಮಪ್ಪ ಹೇಳಿದ್ದ....... 

ಬುಧವಾರ, ಡಿಸೆಂಬರ್ 21, 2016

ಮಸ್ಟ್ ರೀಡ್......
ಮಾನವ ಕಳ್ಳಸಾಗಾಣಿಕೆ ಉದ್ಯಮದ ಬೆನ್ನು ಮೂಳೆಯೇ ಮುರಿಯಿತು...!

ನೋಟು ಅಪಮೌಲ್ಯೀಕರಣದ ಕುರಿತು ಯಾರು ಎಷ್ಟೇ ವಿರೋಧಿಸಲಿ. ಬೊಬ್ಬಿರಿದು ಬಾಯಿ ಬಡಿದುಕೊಳ್ಳಲಿ. ಮನಸ್ಸೋ ಇಚ್ಛೆಯಾಗಿ ಬೈದುಕೊಳ್ಳಲಿ. ಆದರೆ, ಮಾನವೀಯತೆಯ ಒಳಗಣ್ಣಿನಿಂದ ನೋಡಿದಾಗ, ಸೂಕ್ಷ್ಮವಾಗಿ ಅವಲೋಕಿಸಿದಾಗ ಎಷ್ಟೋ... ಎಷ್ಟೋ.... ಸಾವಿರ ಲೆಕ್ಕಾಚಾರದಲ್ಲಿ ನನ್ನ ಅಕ್ಕ, ತಂಗಿಯರು ಜತನವಾಗಿದ್ದಾರೆ. ಭಯಾನಕ ಕೂಪದೊಳಗೆ ಬಲವಂತವಾಗಿ ಬೀಳುವಂತ ಸನ್ನಿವೇಶದಿಂದ ತಪ್ಪಿಸಿಕೊಂಡಿದ್ದಾರೆ!

Yes... ಮಾನವ ಕಳ್ಳ ಸಾಗಾಣಿಕೆಯಿಂದ ಪ್ರತಿವರ್ಷ ಸಾವಿರಾರು ಅಪ್ರಾಪ್ತೆಯರು ವೇಶ್ಯಾವಾಟಿಕೆ ಗೃಹಕ್ಕೆ ನೂಕಲ್ಪಡುತ್ತಿದ್ದರು. ದೇಶಾದ್ಯಂತ ವ್ಯಾಪಿಸಿರುವ ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ನಮ್ಮ ಸುತ್ತ ಮುತ್ತಲಿರುವ ಪುಟ್ಟ ಪುಟ್ಟ ಕಂದಮ್ಮಗಳೇ ಸಿಲುಕುತ್ತಿದ್ದವು. ಶಾಲೆಗೆ ಹೋಗುವಾಗ, ಬರುವಾಗ ಅವರನ್ನು ಅಪಹರಿಸುವುದು, ಬಡ ಮಕ್ಕಳಿಗೆ ಆಮೀಷ ತೋರಿಸಿ ಕರೆದೊಯ್ಯುವುದು, ಕೆಲಸದ ನೆಪದಲ್ಲಿ ಕರೆದುಕೊಂಡು ಹೋಗುವುದು....  ಹೀಗೆ ನಾನಾ ವಿಧದಲ್ಲಿ ಇನ್ನೂ ವಯಸ್ಸಿಗೆ ಬರದ ಹೆಣ್ಣು ಮಕ್ಕಳನ್ನು ದುರುಳರು ಹೊತ್ತೊಯ್ಯುತ್ತಿದ್ದರು. ದೆಲ್ಲಿ, ಓರಿಸ್ಸಾ, ಮುಂಬೈ ಸೇರಿದಂತೆ ಬಾಂಗ್ಲಾ, ನೇಪಾಳದಂತಹ ಹೊರ ರಾಷ್ಟ್ರಗಳಿಗೂ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಸಾಗಾಣಿಕೆ ಮಾಡುತ್ತಿದ್ದರು. ಹೊಸವರ್ಷದ ಹಿನ್ನೆಲೆಯಲ್ಲಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಳ್ಳ ಸಾಗಾಣಿಕೆ ವ್ಯವಹಾರ ಎಲ್ಲೆ ಮೀರುತ್ತಿತ್ತು. ಆದರೆ, ನವೆಂಬರ್ 8ರ ನಂತರ ಈ ವ್ಯವಹಾರ ಸಂಪೂರ್ಣ ನೆಲಕಚ್ಚಿದೆ! ಇದ್ದ ಬಿದ್ದ ವೇಶ್ಯಾಗೃಹಗಳೆಲ್ಲ ಅರಚಾಟ, ಗೂಗಾಟಗಳಿಂದ ಶಾಂತವಾಗಿದೆ. ಗಬ್ಬೆದ್ದು ನಾರುತ್ತಿದ್ದ ಹಾಸಿಗೆ, ದಿಂಬುಗಳೆಲ್ಲ ಮತ್ತಷ್ಟು ನಾರುತ್ತ, ಧೂಳು ತಿನ್ನುತ್ತ ಬಿದ್ದಿವೆ! ಕಾರಣ 500, 1000 ಮುಖಬೆಲೆಯ ನೋಟುಗಳ ಅಪಮೌಲ್ಯ!
ಇಂತಹ ವಿಭಿನ್ನ ದೃಷ್ಟಿಕೋನದ ಮಾಹಿತಿಯೊಂದನ್ನು POST.COM ಹೊರಹಾಕಿದೆ.

ಕಳ್ಳ ಸಾಗಾಣಿಕೆ ವ್ಯವಹಾರದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿಗೇ ಹೆಚ್ಚು ಬೇಡಿಕೆ. 10 ರಿಂದ 12 ವರ್ಷದ ಒಳಗಿನ ಮಕ್ಕಳಿಗೆ 5 ಲಕ್ಷ ರು. ನಿಗದಿ ಪಡಿಸಿದರೆ, 13 ರಿಂದ 15 ವರ್ಷದೊಳಗಿನ ಮಕ್ಕಳಿಗೆ 4 ಲಕ್ಷ ರು.  ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ 3, 2 ಲಕ್ಷ ರು.ನಂತೆ ವೇಶ್ಯಾಗೃಹದ ಮಾಲೀಕರಿಗೆ ಮಾರಾಟ ಮಾಡುತ್ತಾರೆ. ಅವರನ್ನು ಖರೀದಿಸಿದ ಮಾಲೀಕರು ಬಲವಂತವಾಗಿ ವೇಶ್ಯಾವೃತ್ತಿಗೆ ನೂಕುತ್ತಾರೆ. ಒಂದು ವೇಳೆ ತಪ್ಪಿಸಿಕೊಳ್ಳಲೇನಾದರೂ ಪ್ರಯತ್ನಿಸಿದರೆ ಕ್ರೂರವಾದ ಶಿಕ್ಷೆಗೆ ಒಳಪಡಿಸುತ್ತಾರೆ. ಇನ್ನೂ ಪ್ರಪಂಚದ ಅರಿವಿಲ್ಲದ ಮುಗ್ಧ ಕಂದಮ್ಮಗಳು ದುರುಳ ಹಣದಾಸೆಗೆ ತಮ್ಮ ಬದುಕನ್ನು ಒತ್ತೆ ಇಡಬೇಕು. ಪರಿಣಾಮ ಅವರು ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿಯೂ ಜರ್ಜರಿತವಾಗಿ ಹೋಗುತ್ತಾರೆ. ನಂತರ ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಮೊದಲಿನ ಬದುಕು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಕ್ರಮೇಣ ಕಷ್ಟವಾದರೂ ಸರಿಯೇ ಎಂದು ಹಗಲಿರುಳೆನ್ನದೆ ವೇಶ್ಯಾವೃತ್ತಿಯಲ್ಲಿಯೇ ಕಣ್ಣೀರು ಸುರಿಸುತ್ತ ಬದುಕುತ್ತಾರೆ. ಅಂದ ಹಾಗೆ, ಈ ಮಾನವ ಕಳ್ಳ ಸಾಗಾಣಿಕೆ ಆಡಳಿತ ಯಂತ್ರಕ್ಕೆ ತಿಳಿಯದ ವಿಷಯವೇನಲ್ಲ. ಪೊಲೀಸ್ ಹಾಗೂ ಸರಕಾರಿ ಇಲಾಖೆ ಅಧಿಕಾರಿಗಳ ಮೂಗಿನ ನೇರಕ್ಕೇ ನಡೆಯುವ ಕಾನೂನು ಬಾಹಿರ ವ್ಯವಹಾರವಿದು. ಇದಕ್ಕೆ ಬಿಳಿ ಬಟ್ಟೆ ತೊಟ್ಟ ಜನಪ್ರತಿನಿಧಿಗಳ ಕೃಪಾಕಟಾಕ್ಷವೂ ಇದೆ ಎನ್ನುವುದು ಕನ್ನಡಿಯಷ್ಟೇ ಸತ್ಯ.

ಒಂದು ಮಗುವಿನ ಕಳ್ಳ ಸಾಗಾಣಿಕೆಗೆ 2.5 ರಿಂದ 3 ಲಕ್ಷ ರು. ವೆಚ್ಚವಾಗುತ್ತದೆ. ಜನಪ್ರತಿನಿಧಿಗಳಿಗೆ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ, ಆಡಳಿತದಲ್ಲಿರುವ ಅಧಿಕಾರಿ ವರ್ಗದವರಿಗೆ ಹಾಗೂ ಮಕ್ಕಳನ್ನು ಅಂದಗೊಳಿಸುವ ಕೆಲಸಗಾರರಿಗೆಂದು ಕನಿಷ್ಠ ಇಷ್ಟಾದರೂ ಅವರು ವೆಚ್ಚಮಾಡಲೇಬೇಕು. ಇದರಲ್ಲಿ ಸಾಗಾಣಿಕೆ ವೆಚ್ಚ ಮಾತ್ರ ಕೇವಲ 20ಸಾವಿರ ರು. ಇರಬಹುದು. ಪ್ರತಿ ವರ್ಷ 19 ಕೋಟಿ ರು.ಗಳ ವ್ಯವಹಾರ ಮಕ್ಕಳ ಕಳ್ಳ ಸಾಗಾಣಿಕೆಯಿಂದ ನಡೆಯುತ್ತಿದೆ ಎಂದು ರಾಷ್ಟ್ರೀಯ ಬಾಲ ಕಾರ್ಮಿಕ ಸಂಸ್ಥೆ, ಕಾರ್ಮಿಕ ಸಂಘಗಳ ಜಾಲ ಹಾಗೂ ವಿವಿಧ ಸಾಮಾಜಿಕ ಸಂಸ್ಥೆಗಳು ನಡೆಸಿದ ಅಧ್ಯಯನ ಹೇಳುತ್ತದೆ. ಪ್ರತಿ ದಿನ ಹತ್ತರಿಂದ ಹದಿನೈದು ಮಕ್ಕಳು ಕಳ್ಳ ಸಾಗಾಣಿಕೆಗೆ ಒಳಗಾಗುತ್ತಿದ್ದರು. ಆದರೆ, ನ. 8ರ ನಂತರ ಒಂದೇ ಒಂದು ಮಗು ಸಾಗಾಣಿಕೆಯಾದ, ಅಪಹರಣವಾದ ಕುರಿತು ಎಲ್ಲಿಯೂ ದೂರು ದಾಖಲಾಗಿಲ್ಲ. ಇದೊಂದು ಅದ್ಭುತ ಬೆಳವಣಿಗೆ ಅಲ್ಲವೇ? ಎಂದು ಬಚಪನ್ ಬಚಾವೋ ಆಂದೋಲನ ಸಂಸ್ಥೆಯ ರಾಕೇಶ ಸೆಂಗಾರರ ಅಭಿಪ್ರಾಯಪಡುತ್ತಾರೆ.

ಹಳೆ ನೋಟಿನ ಅಪಮೌಲ್ಯದಿಂದ ವೇಶ್ಯಾಗೃಹದ ಕಡೆಗೆ ಗ್ರಾಹಕರು ಮುಖಮಾಡುತ್ತಿಲ್ಲ. ಇದರಿಂದ ಮಾಲೀಕರು ತಮ್ಮ ವ್ಯಾಪಾರ ಕಳೆದುಕೊಂಡು ತೆಪ್ಪಗೆ ಕುಳಿತಿದ್ದಾರೆ. ಮಕ್ಕಳ ಸಾಗಾಣಿಕೆ ಉದ್ಯಮದ ಬೆನ್ನು ಮೂಳೆಯೇ ಕಪ್ಪು ಹಣ ಆಗಿತ್ತು. ಅದಕ್ಕೆ ಪ್ರಧಾನಿ ಮೋದಿ ಕಡಿವಾಣ ಹಾಕಿದ್ದರಿಂದ, ಉದ್ಯಮದ ಮೂಳೆಯೇ ಮುರಿದು ಬಿದ್ದಂತಾಗಿದೆ. ಹೊಸ ನೋಟು ಬಂದಾಗ ಈ ವ್ಯವಹಾರಕ್ಕೆ ಅವಕಾಶ ಇಲ್ಲದಂತೆ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ನೊಬೆಲ್ ಪುರಸ್ಕೃತ ಕೈಲಾಸ ಸತ್ಯಾರ್ಥ ಹೇಳುತ್ತಾರೆ.....

ಮಂಗಳವಾರ, ನವೆಂಬರ್ 8, 2016

ಮತ್ತದೆ ಮಾತು..... ಸತ್ತರೂ ಬದುಕಿರಲಿ ಆತ್ಮವಿಶ್ವಾಸ!

'ಸೋಲೇ ಗೆಲುವಿನ ಸೋಪಾನ' ಎಂದು ಬಾಲ್ಯದಿಂದಲೂ ಕೇಳುತ್ತಾ ಬಂದಿರುವ ಗಾದೆ ಮಾತು. ಆದರೆ ಆ ಸೋಲು ನೆರಳಿನಂತೆ ಜೀವನ ಪರ್ಯಂತ ಸದಾ ಹಿಂಬಾಲಿಸುತ್ತಲೇ ಇದ್ದರೆ ಸೋಪಾನ ಯಾವಾಗ ಬರಬೇಕು?

'ಒಳ್ಳೆಯದಾಗುತ್ತದೆ... ಭವಿಷ್ಯ ಚೆನ್ನಾಗಿದೆ... ಆತ್ಮವಿಶ್ವಾಸ ಕಳೆದುಕೊಳ್ಳಬೇಡ...' ಎನ್ನುವ ಮಾತಿನ ನಡುವೆಯೇ `ಸತ್ತರೂ ಬದುಕಿರಲಿ, ಆತ್ಮವಿಶ್ವಾಸ' ಎನ್ನುವ ಕವಿ ದಿನಕರ ದೇಸಾಯಿ ಅವರ ಕವನದ ಸಾಲುಗಳು ಧುತ್ತೆಂದು ಸುಳಿದಾಡುತ್ತದೆ. ಸೂಲು, ಸೋಪಾನ, ಜೀವನ, ಭವಿಷ್ಯ, ಆತ್ಮವಿಶ್ವಾಸ ಇವುಗಳ ಆಳಕ್ಕಿಳಿದು ಯೋಚಿಸುತ್ತಾ ಹೋದರೆ, 'ಸತ್ತ ಮೇಲೆ ಯಾಕೆ ಬೇಕು ಆತ್ಮವಿಶ್ವಾಸ' ಎನ್ನುವ ವಾಸ್ತವ ಅರಿವಾಗುತ್ತದೆ. ಯಾಕೆಂದರೆ, ಇದ್ದಾಗ ಮಾತ್ರ ಬದುಕಿಗೊಂದು ಅರ್ಥ. ಅದೊಂದು ಶೂನ್ಯದ ಹೊರಗಿನ ಬದುಕು. ಆದರೆ, ಹೋದಾಗ ಅದು ಶೂನ್ಯದೊಳಗೆ ಬಂಧಿ!


ಕೆಲವು ವೇಳೆ 'ಪರೋಪಕಾರ, ಒಳ್ಳೆಯತನ, ಪ್ರಾಮಾಣಿಕತೆಯ ಬದುಕೇ ಮಗ್ಗಲು ಮುಳ್ಳಾಗಿ ಬಿಡುತ್ತವೆ. ಎಂದೂ ಯಾರಿಗೂ ಕೆಡುಕನ್ನು ಬಯಸದೆ, ಎಲ್ಲರಲ್ಲಿಯೂ ಒಳಿತನ್ನೇ ಕಾಣುತ್ತ, ನನ್ನ ಜೊತೆ ನೀನೂ ಸುಖವಾಗಿರುವ` ಎನ್ನುವ ಬದುಕಿನ ಧ್ಯೇಯ ಇಂದಿನ ದಿನಮಾನಕ್ಕೆ ಸೂಕ್ತವಲ್ಲವೇನೋ? 'ನಾ ಮಾಡಿದ ಒಳ್ಳೆಯ ಕೆಲಸಕ್ಕೆ ಮುಂದೊಂದು ದಿನ ಪ್ರತಿಫಲ ದೊರೆಯುತ್ತದೆ' ಎನ್ನುವ ಆಶಾಭಾವನೆ, ಆಸೆಯನ್ನೇ ಹತ್ತಿಕ್ಕಿ ಬಿಡುತ್ತವೆ. ದಿನ, ತಿಂಗಳು, ವರ್ಷ ಕಳೆದರೂ ಆ `ಮುಂದೊಂದು ದಿನ' ಎದುರಾಗುವುದೇ ಇಲ್ಲ...! `ನನ್ನ ಜೊತೆ ನಿನಗೂ ಒಳ್ಳೆಯದಾಗಲಿ' ಎನ್ನುವ  ಪರೋಪಕಾರದ ಗುಣ ಬದುಕನ್ನೇ ಮಖಾಡೆ ಮಲಗಿಸಿಬಿಡುತ್ತದೆ. ಒಳ್ಳೆಯದಾಗಲಿ ಎಂದು ಪ್ರಾಮಾಣಿಕವಾಗಿ ಹರಸಿ, ಕೈ ಹಿಡಿದು ಕರೆದುಕೊಂಡು ಹೋದವನಿಗೆ `ಹಣೆ ಬರಹ'ದ ಗೋಡೆ ಎದುರಾದರೆ, ಕೈ ಹಿಡಿದು ನಡೆಯುವವನಿಗೆ 'ಅದೃಷ್ಟ' ದೇವತೆ ಹಿಂಬಾಲಿಸುತ್ತದೆ. ಇಲ್ಲಿ ದಾರಿ ತೋರಿದವನೇ ದಾರಿ ಕಾಣದಂತಾಗಿ ತಡವರಿಸುತ್ತ ಮುಗ್ಗರಿಸಿ ಬೀಳುತ್ತಾನೆ. ನನ್ನ ಬದುಕೇ ಇಷ್ಟು ಎಂದು ತನಗೆ ತಾನೇ ಶಾಪ ಹಾಕಿಕೊಳ್ಳುತ್ತ ಮೇಲೆದ್ದು, ಇನ್ನೊಂದು ಭರವಸೆಯ ಕಿರಣದ ಜಾಡು ಹಿಡಿಯಲು ಪ್ರಯತ್ನಿಸುತ್ತಾನೆ.
ಇನ್ನಿಲ್ಲ ಬದುಕು ಎಂದು ಕುಸಿದು ಬಿದ್ದಾಗ, ಭವಿಷ್ಯದ ಹಾದಿಯೇ ಮುಸುಕಾದಾಗ ಈ ಗಾದೆ ಮಾತು, ಕವನದ ಸಾಲು ಹಾಸ್ಯಾಸ್ಪದ ಎಂದೆನಿಸಿ ಬಿಡುತ್ತದೆ.(ಕೆಲವು ವೇಳೆ). ಯಾಕೆಂದರೆ ದಿನ, ಸಮಯ, ಕ್ಷಣ ಎಂದೂ ನಮಗಾಗಿ ಕಾಯುವುದಿಲ್ಲ. ಅದು ಸದಾ ಓಡುತ್ತಲೇ ಇರುತ್ತದೆ. ಆ ಓಟದ ಮಧ್ಯದಲ್ಲಿಯೇ ಯಾವುದೋ ಒಂದು ಸಮಯ ನಮ್ಮ ಬದುಕು ಕೂಡಾ ನಿಂತು ಬಿಡುತ್ತವೆ. ಆಗ ಪರೋಪಕಾರ, ಪ್ರಾಮಾಣಿಕತೆ, ಒಳ್ಳೆಯ ಗುಣಗಳು ನಮ್ಮ ಜೊತೆಯೇ ಲೀನವಾಗಿಬಿಡುತ್ತವೆ. ಕೈ ಹಿಡಿದು ನಡೆದಾತ 'ಅದೃಷ್ಟ' ಎಂದು ನೆಮ್ಮದಿಯ ಬದುಕು ಕಟ್ಟಿಕೊಂಡಿರುತ್ತಾನೆ. ಕೈ ಹಿಡಿದು ನಡೆಸಿದಾತ `ಹಣೆ ಬರಹ' ಎಂದು ಬದುಕಿಗೆ ಪೂರ್ಣ ವಿರಾಮ ಹಾಕಿರುತ್ತಾನೆ.
ಮತ್ತದೆ ಮಾತು..... ಸತ್ತರೂ ಬದುಕಿರಲಿ ಆತ್ಮವಿಶ್ವಾಸ!
('ಅರ್ಥ'ಕ್ಕೆ ನಿಲುಕದ್ದು......)