ಗುರುವಾರ, ಆಗಸ್ಟ್ 24, 2017

ತೀರದ ದಾಹ!

ಚಾಚಿದೆ ಬರದ ಕರಿನೆರಳು ಮಲೆನಾಡ ಬುಡದಲ್ಲೂ
ಗುಟುಕು ನೀರಿಗೂ ಹಾಹಾಕಾರ ಸಹ್ಯಾದ್ರಿ ಹಾಸಲ್ಲೂ
ಬಾನಿಗೆ ಬಾಯಾನಿಸಿದೆ ಜೀವಜಲ ಹೊತ್ತ ಬಿಂದಿಗೆ
ಧರೆಗೊತ್ತುತಿದೆ ಗಟ್ಟಿಪಾದ ತೀರದ ಬದುಕಿಗೆ!
ಕೂಳು ಬೇಯಿಸಲು ಬೇಕು, ದಾಹ ನೀಗಲು ಬೇಕು
ಸುಡು ಬಿಸಲಲ್ಲೂ ನೆತ್ತಿ ಮಣ ಭಾರ ಹೊರಲೇಬೇಕು
ಸಿಹಿ ನೀರ ಬಾವಿಗೆ ಮೂರ್ನಾಲ್ಕು ಮೈಲಿ ಪರ್ಲಾಂಗು
ಅಘಳ ಲವಣಾಂಶ ನೀರಿಗೆ ಮನೆಯಂಗಳವೇ ಜಂಪು!

ನೈಟಿ, ದುಪ್ಪಟ, ಚೂಡಿ ಬಣ್ಣ ಬಣ್ಣದ ಉಡುಪು
ಬಳಕುವ ಸೊಂಟದಿ ನೋಡ ಜೀವ ಜಲದ ಒನಪು
ಕುತೂಹಲದ ದೃಷ್ಟಿಗೆ ಹುಬ್ಬೇರಿಸೋ ಅಂದಚಂದ
ನೆಲದ ಕಣ್ಣಿಗೆ ಸುತ್ತಲ ಜಲರಾಶಿಯೇ ಪರಮಾನಂದ!

ಹಸಿರೊದ್ದ ಹಾದಿ ಸವಿಸಲೇಬೇಕು ನಿತ್ಯ ಮೂರೊತ್ತು
ಎಳೆ ಬಾಲೆ, ವೃದ್ಧೆಯೆಂಬ ಭೇದಗಳ ಬದಿಗೊತ್ತು
ಅಂಗಳದಿ ಓಡಾಡೋ ಅಳಕು ಬಳಕಿನ ಅಘಳು
ಬದುಕು ಕಟ್ಟಿಕೊಟ್ಟು ದಾಹ ತೀರಿಸದೇ ಹೋದಳು!
ಗಣೇಶೋತ್ಸವದ ಸಂಭ್ರಮ, ಸಡಗರ ಎಲ್ಲೆಡೆ ಮನೆಮಾಡಿದೆ. ಚೆಂದದ ಗಣಪ ಮೂರ್ತಿಗಳನ್ನು ಮನೆಗೆ ತರಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ, ಇವುಗಳ ಮಧ್ಯೆ ಪಿಒಪಿ ಗಣೇಶನ ಅಬ್ಬರ ಒಂದಡೆಯಾಗಿದ್ದು, ಇದಕ್ಕೆ ಮಾರುಹೋಗದೆ ಪಾರ್ವತಿ ಪುತ್ರ ಪರಿಸರ ಪೂರಕವಾಗಿರಲಿ ಎನ್ನುವುದು ನಮ್ಮ ಕಳಕಳಿ.

ಶಾಸ್ತ್ರಕ್ಕೂ, ಹಿತಕ್ಕೂ ಮಣ್ಣಿನ ಗಣಪನೇ ಸೈ!!

ನಾವು ಆಧುನಿಕ ಜಗತ್ತಿನಲ್ಲಿದ್ದೇವೆ, ತಾಂತ್ರಿಕವಾಗಿ-ವೈಜ್ಞಾನಿಕವಾಗಿ ಮಹತ್ತರ ಮೈಲಿಗಲ್ಲು ಸಾಧಿಸಿದ್ದೇವೆ ಎಂದೆಲ್ಲ ಜಂಭ ಕೊಚ್ಚಿಕೊಳ್ಳುತ್ತ, ಆಡಿ-ನಲಿದ ನೆಲದ ಮಣ್ಣಿನ ಒಲವನ್ನೇ ಮರೆಯುತ್ತಿದ್ದೇವೆ.
ಆಧುನಿಕತೆಯ ಸೋಗಿನಲ್ಲಿ ಎಲ್ಲವನ್ನೂ ತಾಂತ್ರಿಕತೆಯ ಕೈಯ್ಯಲ್ಲಿಟ್ಟು ಯಂತ್ರ ಮಾನವರಾಗಿ ಬಿಟ್ಟಿದ್ದೇವೆ. ಕಣ್ಣಿಗೆ ಕಾಣುವ ಆಕರ್ಷಕ ವಸ್ತುಗಳ ಹಿಂದೆ ಬಿದ್ದು, ಬೆಳೆದು ಬಂದ ಪರಂಪರೆಯ ಹೆಜ್ಜೆ ಗುರುತನ್ನೇ ಅಳಿಸಿ ಬಿಟ್ಟಿದ್ದೇವೆ. ಮೈ ಸುಡವ ಕಾಂಕ್ರಿಟ್ ಕಾಡಿನಲ್ಲಿಯೇ ಜೀವನ ಸವೆಸುತ್ತ, ಹಸಿರೊದ್ದ ತಂಪನೆಯ ಪರಿಸರವನ್ನು ಮರೆಯುತ್ತಿದ್ದೇವೆ. ನಗರದಲ್ಲಿ ಕುಳಿತು ಅಭಿವೃದ್ಧಿಯ ರಾಜಮಾರ್ಗ ಮಂತ್ರಕ್ಕೆ ಲಕ್ಷಾ೦ತರ ಮರಗಿಡಗಳನ್ನು ಆಹುತಿ ನೀಡುತ್ತಿದ್ದೇವೆ. ಪರಿಣಾಮ ನೀರು, ಮಣ್ಣು, ಗಾಳಿ ಎಲ್ಲವೂ ಕಲುಷಿತ! ಎಲ್ಲವೂ ವಿಷಮಯ!! ಉಸಿರಾಡುವ ಉಸಿರು ಕೂಡಾ!!!

ಮತ್ತೆ ಬಂದಿದೆ ಗಣೇಶನ ಹಬ್ಬ. ಎಲ್ಲೆಡೆ ಪರಿಸರ ಪ್ರೇಮಿ ಗಣಪನ ಹಬ್ಬ ಆಚರಣೆಗೆ ಜಾಗೃತಿ, ಅಭಿಯಾನ ನಡೆಯುತ್ತಿದೆ. ಸಂಘ, ಸಂಸ್ಥೆಗಳು ಹಗಲಿರುಳೆನ್ನದೇ ಮಣ್ಣಿನ ಗಣಪನ ಸ್ಥಾಪನೆಗೆ ಸಾರ್ವಜನಿಕರನ್ನು ಉತ್ತೇಜಿಸುತ್ತಿವೆ. ಇವುಗಳ ನಡುವೆಯೇ ನ್ಯಾಯಾಲಯದ ಆದೇಶ ಎಂದು ಸರಕಾರದ ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಯಾವುದೇ ಕಾರಣಕ್ಕೂ ಪಿಒಪಿ ಮೂರ್ತಿ ಪ್ರತಿಷ್ಠಾಪಿಸಬಾರದು ಎಂದು ಕಟ್ಟು ನಿಟ್ಟಿನ ಸೂಚನೆ ನೀಡುತ್ತಿವೆ. ಇಷ್ಟಾಗಿಯೂ ಕೆಲವು ಸಂಘಟನೆಗಳು ಪಿಒಪಿ ಮೂರ್ತಿಯನ್ನೇ ಪ್ರತಿಷ್ಠಾಪಿಸುತ್ತೇವೆಂದು ಭಂಡತನ ಪ್ರದರ್ಶಿಸುತ್ತ, ಪರಿಸರಕ್ಕೆ ಮಾರಕವಾದ ಹೆಜ್ಜೆಯಿಡುತ್ತಿವೆ.

ಪ್ರಸ್ತುತ ಸಂದರ್ಭದಲ್ಲೊ೦ದು ನಮ್ಮ, ನಿಮ್ಮ ಉಳಿವಿಗಾಗಿ, ಮುಂದಿನ ಪೀಳಿಗೆಗಾಗಿ ನಾವು-ನೀವೆಲ್ಲ ಒಗ್ಗಟ್ಟಾಗಿ ಗಂಭೀರ ಚಿಂತನೆ ಮಾಡಲೇಬೇಕಿದೆ. ಪರಿಸರ ಉಳಿವಿಗಾಗಿ ಎಚ್ಚರಿಕೆಯ ಹೆಜ್ಜೆ ಇಡಲೇಬೇಕಿದೆ. ಈಗಾಗಲೇ ಪ್ರಕೃತಿ ಮಾತೆ ತಿದ್ದಿಕೊಳ್ಳಲೆಂದು ಸಾಕಷ್ಟು ಅವಕಾಶ ನೀಡಿದೆ. ಆದರೂ ಆ ನಿಟ್ಟಿನಲ್ಲಿ ನಾವು ಚಿಂತಿಸಿಲ್ಲ! ಈಗ ನಮ್ಮೆದುರಿಗೆ ಇರುವುದು ಕಟ್ಟ ಕಡೆಯ ಅವಕಾಶ, ಪರಿಸರ ರಕ್ಷಿಸಿ, ಮನುಕುಲ ಉಳಿಸಿ! ಬೇರೆ ದಾರಿಯೇ ಇಲ್ಲ!

ಪರಿಸರ ರಕ್ಷಣೆಯ ಸಾಕಷ್ಟು ಅಭಿಯಾನದ ನಡುವೆ, ಪಿಒಪಿ ಮೂರ್ತಿ ನಿಷೇಧವೂ ಒಂದು. ಪಿಒಪಿ ಮೂರ್ತಿ ನೀರಿನಲ್ಲಿ ಸುಲಭವಾಗಿ ಕರಗದು. ಕರಗುವ ಪ್ರಕ್ರಿಯೆಯಲ್ಲಿಯೂ ಅದು ನೀರಿನಲ್ಲಿ ವಿಷಯುಕ್ತ ರಾಸಾಯನಿಕ ಬಿಡುತ್ತಲೇ ಹೋಗುತ್ತದೆ. ಇದು ಅಲ್ಲಿರುವ ಜಲಚರಗಳಿಗೆ, ಜೀವ ಜಂತುಗಳಿಗೆ, ಜೀವ ವೈವಿಧ್ಯಕ್ಕೆ ಪಾಷಾಣ ಹಾಕಿದಂತೆಯೇ! ಸುಮ್ಮನೇ ಒಂದು ಪ್ರಾಾತ್ಯಕ್ಷಿಕೆ ಮಾಡಿ ನೋಡಿ. ನಿಮ್ಮ ಅನುಭವಕ್ಕೇ ಬಂದೀತು. ಒಂದು ಮುಷ್ಠಿಯಷ್ಟು ಪಿಒಪಿ ಹುಡಿಯನ್ನು ನೆಲದ ಮೇಲಿಟ್ಟು ಬೆಂಕಿ ಹಚ್ಚಿರಿ. ಅದು ದಟ್ಟವಾದ ವಿಷಕಾರಕ ಹೊಗೆ ಉಗುಳುತ್ತ ಸುತ್ತಲಿನ ವಾತಾವರಣವನ್ನೇ ಕಾಪಿಡುತ್ತದೆ. ಅಲ್ಲದೇ, ಪಿಒಪಿ ಸುಟ್ಟ ಜಾಗದಲ್ಲಿ ಒಂದೇ ಒಂದು ಹುಲ್ಲು ಕಡ್ಡಿ ಸಹ ಮೊಳಕೆ ಒಡೆಯದು! ಭೂಮಿಯನ್ನು ಸಹ ಬಂಜರನ್ನಾಗಿಸುತ್ತದೆ. ಮೊದಲೇ ಹೇಳಿದಂತೆ, ವಿಸರ್ಜನೆಗೊಂಡ ಮೂರ್ತಿ ಕರಗದಿದ್ದರೆ ಅದನ್ನು ಯಂತ್ರದ ಸಹಾಯದಿಂದ ಮೇಲೆತ್ತಬೇಕಾಗುತ್ತದೆ. ಎಷ್ಟೋ ಬಾರಿ ಚಪ್ಪಲಿ ಹಾಕಿದ ಕಾಲನ್ನು ಮೂರ್ತಿ ಮೇಲೆ ಇಟ್ಟು ವಿಸರ್ಜನೆಗೊಂಡ ಮೂರ್ತಿ ಮೇಲೆತ್ತುತ್ತೇವೆ. ಪೂಜಿಸುವ ಗಣಪನಿಗೆ ನಾವು ನೀಡುವ ಗೌರವ ಇದು!

ಬದಲಾಗಿ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸೋಣ. ಪರಿಸರಕ್ಕೆ ಪೂರಕವಾಗಿ ಪೂಜೆ, ಪುನಸ್ಕಾಾರ ಉತ್ಸವ ಆಚರಿಸಿ ಸಂಭ್ರಮಿಸೋಣ. ನೀರಿನಲ್ಲಿ ಮಣ್ಣಿನ ಗಣಪನ ಮೂರ್ತಿ ವಿಸರ್ಜಿಸಿದಾಗ ಐದಾರು ಗಂಟೆಯಲ್ಲಿ ಸಹಜವಾಗಿ ಕರಗುತ್ತದೆ. ಆ ಮಣ್ಣನ್ನು ಮೇಲೆತ್ತಿ ಅದಕ್ಕೊ೦ದಿಷ್ಟು ಸಗಣಿ ಗೊಬ್ಬರ ಮಿಶ್ರಣ ಮಾಡಿ ಗಿಡ ಅಥವಾ ಮರ ಆಗುವ ಬೀಜವೊಂದು ಬಿತ್ತೋಣ. ತಿಂಗಳೊಪ್ಪತ್ತರಲ್ಲಿ ಸಣ್ಣದೊಂದು ಮೊಳಕೆ ಒಡೆದು, ನಂತರದ ದಿನಗಳಲ್ಲಿ ಚಿಗುರೊಡೆದು ಹಸಿರು ಚೆಲ್ಲುತ್ತದೆ. ಅದೇ ಗಿಡಕ್ಕೆ ಹಾಡು ಹಕ್ಕಿ ಬಂದು ಹಣ್ಣು ತಿನ್ನುತ್ತ ಚಿಲಿಪಿಲಿ ದನಿಯಲ್ಲಿ ಹಾಡು ಹೇಳುತ್ತದೆ. ಮನೆಯ ಜಗುಲಿ ಮೇಲೆ ಕುಳಿತು ಆ ಸೌದರ್ಯ ಆಸ್ವಾದಿಸೋಣ. ಸಾರ್ಥಕವಾಯಿತಲ್ಲ ಗಣಪನ ಹಬ್ಬ ಎಂದು ಮನದಲ್ಲಿಯೇ ಮುಂದೊಂದು ದಿನ ಹೇಳೋಣ. ಇದರ ಮುಂದುವರಿದ ಜಾಗೃತಿ ಅಭಿಯಾನವೇ ‘ಬೀಜ ಗಣಪ..!’ ಶಾಸ್ತ್ರಕ್ಕೂ, ಹಿತಕ್ಕೂ ಮಣ್ಣಿನ ಗಣಪನೇ ಸೈ!!

ಗಣೇಶನ ಹಬ್ಬದ ಆಚರಣೆಯಲ್ಲಿ ಸ್ವೇಚ್ಛಾಚಾರ ಎಲ್ಲೆ ಮೀರುತ್ತದೆ. ಹಬ್ಬದ ಪರಂಪರೆಗೆ ಧಕ್ಕೆ ಬರುತ್ತಿದೆ ಎಂದು ಹೇಳಿದಾಗಲೆಲ್ಲ ಕೆಲವರು, ಇನ್ನೊ೦ದು ಧರ್ಮದ ಕಡೆ ಬೊಟ್ಟು ತೋರಿಸುತ್ತ ‘ಆಗೇಕೆ ನೀವ್ಯಾರೂ ಮಾತನಾಡುವುದಿಲ್ಲ’ ಎಂದು ಪ್ರಶ್ನಿಸುತ್ತಾರೆ. ಯಾರೇ ಮಾಡಿದರೂ ಅದು ತಪ್ಪೇ! ಖಂಡನೀಯವೇ. ಒಬ್ಬರು ಮಾಡುವ ತಪ್ಪನ್ನೇ ಇನ್ನೊಬ್ಬರು ಮಾಡಿದರೆ ಅದು ಸರಿಯಾಗುತ್ತದೆಯೇ? ಪರಿಸರಕ್ಕೆ ಹಾನಿ ಮಾಡುವ ರೀತಿಯಲ್ಲಿ ಹಾಗೂ ಜನರ ಮಾನಸಿಕ ಶಾಂತಿಗೆ ಧಕ್ಕೆ ಬರುವ ರೀತಿಯಲ್ಲಿ ಉತ್ಸವಗಳನ್ನು ಯಾರೇ ಆಚರಿಸಿದರೂ ಅದು ತಪ್ಪೇ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ನಮ್ಮಿ೦ದಲೇ ಆರಂಭವಾದರೆ ಒಳಿತು. ಏನಂತೀರಾ?

ಬುಧವಾರ, ಜೂನ್ 7, 2017

ಕೈ ಕಟ್ಟಿ, ಹೇಳಿದ್ದಕ್ಕೆಲ್ಲ ಗೋಣು ಅಲ್ಲಾಡಿಸದಿರಿ....
ಇದೊಂದೆರಡು ತಿಂಗಳು ಪತ್ರಿಕೆಯ ಬಹುಪಾಲು ಜಾಗ ಪರಿಸರ ದಿನಾಚರಣೆ ಸುದ್ದಿಗೇ ಮೀಸಲು. ನಮ್ಮ ಪರಿಸರಕ್ಕೆ ನಾವು ಅಷ್ಟೂ ಮಾಡದಿದ್ದರೇ ಏನರ್ಥ? ಆದರೆ, ಪತ್ರಿಕೆಯಲ್ಲಿ ಫೋಟೋ ಬರುತ್ತದೆ ಎನ್ನುವ ಉದ್ದೇಶಕ್ಕೇ ಕೆಲವರು ವನಮಹೋತ್ಸವ ಆಚರಿಸುತ್ತಾರೆ. ಇನ್ನು ಕೆಲವರು ಪ್ರಚಾರ ಗಿಟ್ಟಿಸಿಕೊಳ್ಳಲು ಸಂಘ-ಸಂಸ್ಥೆಯ ಜತೆಗೂಡಿ ಕಾರ್ಯಕ್ರಮ ನಡೆಸುತ್ತಾರೆ. ಬಹುತೇಕ ಜನಪ್ರತಿನಿಧಿಗಳಿಗಂತೂ ಈ ಆಚರಣೆ ಪುಕ್ಕಟೆ ಪ್ರಚಾರ ನೀಡಿ ಬಿಡುತ್ತದೆ.

ಪರಿಸರ ನಮ್ಮಮ್ಮ. ಅವಳು ಎಲ್ಲರನ್ನೂ ಸಲುಹಿ, ಪೊರೆಯುವವಳು. ಅವಳು ನಳನಳಿಸಿದರೆ ಮಾತ್ರ, ನಾವು ನೆಮ್ಮದಿಯ ಉಸಿರೆಳೆಯಬಹುದು. ಅವಳು ಬದುಕಬೇಕೆಂದರೆ ಹಸಿರು ಚಿಗುರಬೇಕು. ಚಿಗುರೊಡೆದ ಹಸಿರನ್ನು ಬೆಳೆಸಿ ಪೋಷಿಸಬೇಕು. ಅಭಿವೃದ್ಧಿ ಎನ್ನುತ್ತ ಬೆಳೆದು ನಿಂತ ಮರ-ಗಿಡಗಳನ್ನು ಕಡಿದು, ನಮ್ಮ ಅವನತಿಗೆ ನಾವೇ ಕಾರಣರಾಗುತ್ತಿದ್ದೇವೆ. ಈಗಾಗಲೇ ಪರಿಸರಕ್ಕೆ ಸಂಬಂಧಿಸಿದ ಸಾಕಷ್ಟು ವರದಿಗಳು, ‘ಪರಿಸರದ ಮೇಲೆ ಹೀಗೆ ದೌರ್ಜನ್ಯ ನಡೆಯುತ್ತ ಹೋದರೆ ಕೆಲವೇ ವರ್ಷಗಳಲ್ಲಿ ಮನುಕುಲ ಊಹಿಸಲಾಗದಷ್ಟು ಗಂಭೀರ ಸ್ಥಿತಿಗೆ ತಲುಪುತ್ತದೆ’ ಎಂದು ಹೇಳುತ್ತಿವೆ. ಸಾಕಷ್ಟು ವಿಜ್ಞಾನಿಗಳು ಸಹ ಈ ಕುರಿತು ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಆದರೂ ಸರಕಾರಕ್ಕೆ ಅಭಿವೃದ್ಧಿ ಎದುರು ಇದ್ಯಾವುದೂ ಗಮನಕ್ಕೆ ಬರುತ್ತಿಲ್ಲ. ಅವೈಜ್ಞಾನಿಕ ಯೋಜನೆ ಸಿದ್ಧಪಡಿಸುತ್ತದೆ, ಕಣ್ಣುಮುಚ್ಚಿ ತೆರೆಯುವುದರೊಳಗೆ ಅದನ್ನು ಅನುಷ್ಠಾನಕ್ಕೂ ತಂದು ಬಿಡುತ್ತದೆ. ಪರಿಣಾಮ ಲಕ್ಷೋಪ ಲಕ್ಷ ಮರಗಳ ಮಾರಣಹೋಮ ವಾರ ಕಳೆಯುವುದರೊಳಗೆ ನಡೆದು ಬಿಡುತ್ತದೆ. ಇವೆಲ್ಲದರ ಒಟ್ಟು ಪರಿಣಾಮ ಬರ!

ವರ್ಷದಿಂದ ವರ್ಷಕ್ಕೆ ಬರ ತನ್ನ ಕಬಂಧ ಬಾಹುವನ್ನು ಇಕ್ಕೆಲುಗಳಲ್ಲಿ ಚಾಚುತ್ತಲೇ ಇದೆ. ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಮೂರ್ನಾಲ್ಕು ವರ್ಷಗಳ ಹಿಂದೆ ಹತ್ತು-ಹದಿನೈದು ಅಡಿಗೆ ನೀರು ದೊರೆಯುತ್ತಿತ್ತು. ಈಗ ಮೂವತ್ತು-ನಲವತ್ತು ಅಡಿ ಆಳ ಅಗೆದರೂ ನೀರು ಸಿಗುವುದು ಅಪರೂಪ. ಕೆರೆ, ಕಟ್ಟೆ, ಬಾವಿಗಳೇ ಅಲ್ಲಿಯ ಜನರಿಗೆ ನೀರಿನ ಮೂಲವಾಗಿತ್ತು. ಶಾಲೆ ಹಾಗೂ ಕೆಲವು ಸರಕಾರಿ ಆವರಣದಲ್ಲಿ ಬೆರಳೆಣಿಕೆಯಷ್ಟು ಕೊಳವೆ ಬಾವಿ ಹಾಗೂ ಬೋರ್‌ವೆಲ್‌ಗಳು ಇರುತ್ತಿದ್ದವು. ಆದರೆ, ಇತ್ತೀಚಿನ ಎರಡು ವರ್ಷಗಳಲ್ಲಿ ಅಲ್ಲೂ ಕೊಳವೆ ಬಾವಿ ಸಂಸ್ಕೃತಿ ಉತ್ತುಂಗಕ್ಕೇರಿದೆ. ವಿಶೇಷವೆಂದರೆ, ಕಡಲಂಚಿನ ಪ್ರದೇಶದ ಮನೆ-ಮನೆಗಳಲ್ಲೂ ಕೊಳವೆ ಬಾವಿಯದ್ದೇ ಕಾರುಬಾರು! ಅಂದರೆ, ವಿಷಯವಿಷ್ಟೇ, ಸದಾ ನೀರಿರುವ ಕರಾವಳಿ ಪ್ರದೇಶದಲ್ಲಿಯೂ ಅಂತರ್ಜಲ ಮಟ್ಟ ಕುಸಿದಿದೆ. ಮುಂದೊಂದು ದಿನ ಆ ಭಾಗದ ಜನರು ಸಹ ಉತ್ತರ ಕರ್ನಾಟಕ ಭಾಗದ ಜನರಂತೆ ಹನಿ ನೀರಿಗಾಗಿ ಬಿಂದಿಗೆ ಹಿಡಿದು ಏಳೆಂಟು ಕಿ.ಮೀ. ಪಯಣಿಸುವ ಸ್ಥಿತಿ ಎದುರಾದರೂ ಅಚ್ಚರಿಯಿಲ್ಲ. ಯಾಕೆಂದರೆ, ಈಗಾಗಲೇ ನೀರಿಲ್ಲದ ಅಲ್ಲಿಯ ಕೆಲವು ಪ್ರದೇಶಗಳಿಗೆ ತಾಲೂಕಾಡಳಿತ ಟ್ಯಾ೦ಕರ್ ಮೂಲಕ ನೀರು ಪೂರೈಸುವ ಯೋಜನೆಗೆ ಮುನ್ನುಡಿ ಬರೆದಾಗಿದೆ.

ಈ ಮೊದಲು ಮಲೆನಾಡಿನ ಆಗುಂಬೆ, ಶಿಕಾರಿಪುರ, ಸಾಗರ, ಚಿಕ್ಕಮಗಳೂರು, ಕೊಡಗು, ಶಿರಸಿ ಹಾಗೂ ಕರಾವಳಿಯ ಕೆಲವು ಸ್ಥಳಗಳ ಹೆಸರು ಕೇಳಿದರೆ ಸಾಕಿತ್ತು, ಬಿಟ್ಟು ಬಿಡದೆ ಸುರಿವ ಮಳೆ ಹಾಗೂ ಹಸಿರ ಹಾಸು ಕಣ್ಮುಂದೆ ಬಂದು ನಿಲ್ಲುತ್ತಿತ್ತು. ಮಳೆ ಅಬ್ಬರಿಸುವಾಗ ದಟ್ಟವಾದ ಮಂಜು ಪರ್ವತಗಳ ಸಾಲಿನ ನಡುವೆ ಭುಗಿಲೇಳುತ್ತಿತ್ತು. ಯಾವುದಾದರೂ ಗುಡ್ಡದ ನೆತ್ತಿ ಮೇಲೆ ನಿಂತರೆ ಮೋಡಗಳು ಎಲ್ಲಿ ತಲೆಗೆ ತಾಕುತ್ತವೋ ಎಂದು ಭಾಸವಾಗುತ್ತಿತ್ತು. ಇದ್ದಬಿದ್ದ ಚಿಕ್ಕ ಜಲಪಾತಗಳೆಲ್ಲ ಮೈದುಂಬಿ ಹರಿಯುತ್ತಿದ್ದವು. ಆದರೆ ಈಗೀಗ ಮಳೆ ಕಾಡು ಖ್ಯಾತಿಯ ಈ ಪಶ್ಚಿಮಘಟ್ಟ ಪ್ರದೇಶಗಳು ಸದ್ದಿಲ್ಲದೆ ಒಣಗಲಾರಂಭಿಸಿವೆ. ವರ್ಷದಿಂದ ವರ್ಷಕ್ಕೆ ಈ ಪ್ರದೇಶದಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗುತ್ತಿದೆ. ಕರಾವಳಿ ಸೇರಿ ಈ ಪ್ರದೇಶದಲ್ಲಿ ಮುಂಗಾರು ವೇಳೆ ಪ್ರತಿದಿನ 40-50 ಮಿ.ಮೀ. ಪ್ರಮಾಣದಷ್ಟು ಮಳೆಯಾಗಿ, ತಿಂಗಳಿಗೆ 2900 ಮಿ.ಮೀ ದಾಖಲಾಗುತ್ತಿತ್ತು. ಅದು ಕಳೆದ ವರ್ಷ 30-40 ಮಿ.ಮೀ.ಗೆ ಇಳಿಕೆಯಾಗಿದೆ. ಆಗುಂಬೆ ಒಂದೇ ಪ್ರದೇಶದಲ್ಲಿ ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಲ್ಲಿ 1750 ಮಿ.ಮೀ.ರಷ್ಟು ಮಳೆಯಾಗುತ್ತಿತ್ತು. ಐದಾರು ವರ್ಷದ ಮಳೆ ವರದಿಯಿಟ್ಟುಕೊಂಡು ಲೆಕ್ಕ ಹಾಕಿದರೆ ಕಳೆದ ವರ್ಷ ಶೇ.10ರಷ್ಟು ಮಳೆ ಕಡಿಮೆಯಾಗಿದೆ. ಎಡೆಬಿಡದೆ ಭೋರ್ಗರೆದು ಮಳೆ ಸುರಿಯುವ ಪ್ರದೇಶದಲ್ಲಿಯೇ ಮಳೆ ಪ್ರಮಾಣ ಕಡಿಮೆಯಾಗಿದೆ ಎಂದರೆ ಇನ್ನು ಉಳಿದ ಪ್ರದೇಶಗಳ ಕಥೆ ಏನಾಗಿರಬೇಡ?

ಮಳೆಗಾಗಿ ಪ್ರಾಾರ್ಥಿಸುವ ಕೈಗಳು ಸಾಕಷ್ಟು ಇವೆ. ಕೆಲವು ಗ್ರಾಮೀಣ ಭಾಗಗಳಲ್ಲಿ ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವ ಮೂಲಕ ವರುಣ ದೇವನ ಮೊರೆ ಹೋಗುತ್ತಾರೆ. ಅದು ಆಯಾಯ ಭಾಗದ ಸಮುದಾಯದ, ಪರಂಪರೆಯ ಒಂದು ಆಚರಣೆ, ನಂಬಿಕೆ. ಆದರೆ, ವೈಜ್ಞಾನಿಕ ನೆಲೆಗಟ್ಟಿನಡಿ ಆಡಳಿತ ನಡೆಸುವ ಸರಕಾರವೇ ಮೌಢ್ಯತೆಗೆ ಬಿದ್ದು, ನದಿಗೆ ಬಾಗಿನ ಅರ್ಪಿಸುವ ಮೂಲಕ ಮಳೆಗೆ ಪ್ರಾರ್ಥಿಸುತ್ತದೆ ಎಂದರೆ ಇದಕ್ಕಿ೦ತ ಕುಚೋದ್ಯ ಇನ್ನೇನಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ ಎಂದರೆ ‘ಮೋಡ ಬಿತ್ತನೆ’ಗೆ ಮುಂದಾಗುತ್ತದೆ, ಭೀಕರ ಬರ ತಲೆದೋರುತ್ತಿದೆ ಎಂದು ‘ಪಾತಾಳ ಗಂಗೆ’ಯ ಮೇಲೆ ಕಣ್ಣಿಡುತ್ತದೆ. ಈ ಕುರಿತು ಬೇಕಾಬಿಟ್ಟಿ ಪ್ರಚಾರಗಿಟ್ಟಿಸಿ ಸಾರ್ವಜನಿಕ ಅಭಿಪ್ರಾಯಕ್ಕೆ ಮುಂದಾಗುತ್ತದೆ. ಹಾಗಂತ ‘ಮರ-ಗಿಡಗಳನ್ನು ಕಡಿದ ಪರಿಣಾಮ ಈ ಸಮಸ್ಯೆ ತಲೆದೋರುತ್ತಿದೆ. ಇನ್ನು ಮುಂದೆ ಅಭಿವೃದ್ಧಿ ಹೆಸರಲ್ಲಿ ಪ್ರಕೃತಿಯ ಮೇಲೆ ದೌರ್ಜನ್ಯ ಎಸಗುವುದಿಲ್ಲ. ಪ್ರಾಾಮಾಣಿಕವಾಗಿ ಪರಿಸರ ರಕ್ಷಣೆಯಲ್ಲಿ ತೊಡಗಿಕೊಳ್ಳುತ್ತೇವೆ’ ಎಂದು ಎಲ್ಲಿಯೂ ಹೇಳುವುದಿಲ್ಲ. ಯಾಕೆಂದರೆ, ಜಡ್ಡುಗಟ್ಟಿದ ಆಡಳಿತಕ್ಕೆ ಪರಿಸರ ನಾಶ ಮಾಡಿ ರಸ್ತೆ, ಸ್ಥಾವರ, ಬಂದರು, ಕಟ್ಟಡ ನಿರ್ಮಿಸುವುದೇ ಒಂದು ಅಭಿವೃದ್ಧಿಯೆನ್ನುವಂತಾಗಿದೆ.

ಅನಕ್ಷರಸ್ಥ ಜನಪ್ರತಿನಿಧಿಗಳಿಗಿಂತ ಅಕ್ಷರಸ್ಥ ಜನಪ್ರತಿನಿಧಿಗಳು ಬಲು ಅಪಾಯಕಾರಿ. ಯಾಕೆಂದರೆ, ಅಕ್ಷರಸ್ಥ ರಾಜಕಾರಣಿಗೆ ಕಾನೂನಿನ ಹಾಗೂ ಸರಕಾರದ ಕೆಲವು ನಿಯಮಾವಳಿಗಳು ಅರಿವಿರುತ್ತದೆ. ಅದರಿಂದಾಗಿ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿದಾರನಾದರೂ ಸುಲಭವಾಗಿ ಮೈಕೊಡವಿ ಎದ್ದು ಬರುತ್ತಾನೆ. ಸಾಲದೆಂಬಂತೆ ಉನ್ನತ ಅಧಿಕಾರಿಗಳ ಜತೆಗೆ ‘ಸಹಭಾಗಿತ್ವ’ದ ಹೆಜ್ಜೆ ಇಟ್ಟಿರುತ್ತಾನೆ. ಅಂದರೆ ನಮ್ಮ ಬಹುತೇಕ ಐಎಎಸ್, ಕೆಎಎಸ್ ಅಧಿಕಾರಿಗಳ ಜತೆಗೆ ಸಣ್ಣ-ಪುಟ್ಟ ಅಧಿಕಾರಿಗಳು ಸಹ ಭ್ರಷ್ಟ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಜನಪ್ರತಿಗಳು ದಾರಿ ತಪ್ಪಿದಾಗ, ಅವೈಜ್ಞಾನಿಕ ಯೋಜನೆಗೆ ಮುಂದಾಗ ಉನ್ನತ ಅಧಿಕಾರಿಗಳು ಅದರಿಂದಾಗುವ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಕಾರಣ ನೀಡಬೇಕು. ಮುಂದೆ ತಲೆದೋರುವ ಸಮಸ್ಯೆಗಳನ್ನು ಅವರಿಗೆ ಸೂಕ್ಷ್ಮವಾಗಿ ಮನವರಿಕೆ ಮಾಡಿಕೊಡಬೇಕು. ಅದು ಬಿಟ್ಟು ಅವರ ಎದುರು ಕೈ ಕಟ್ಟಿ, ಹೇಳಿದ್ದಕ್ಕೆಲ್ಲ ಗೋಣು ಅಲ್ಲಾಡಿಸಿದರೆ, ಹುಬ್ಬಳ್ಳಿ ಧಾರವಾಡ ಅವಳಿನಗರದ ಮಧ್ಯೆ ನಡೆಯುತ್ತಿರುವ ಬಿಆರ್‌ಟಿಎಸ್ ಕಾಮಗಾರಿಯ ಕಥೆಯಂತೆಯೇ ಆಗುತ್ತದೆ.

ಏನೇ ಇರಲಿ. ಕೋಟಿ ವೃಕ್ಷಾ೦ದೋಲನಕ್ಕೆ ಸರಕಾರ ಮುಂದಾಗಿದೆ. ಪ್ರತಿಯೊಂದು ಮನೆ-ಮನೆಗಳಲ್ಲಿ ಒಂದೊಂದು ಗಿಡ ಚಿಗುರೊಡೆಯಲಿ. ರಸ್ತೆ, ಶಾಲೆ, ಊರು, ಕೇರಿ ಎನ್ನದೆ ಖಾಲಿಯಿದ್ದ ಜಾಗದಲ್ಲೆಲ್ಲ ಗಿಡಗಳು ತಲೆ ಎತ್ತಲಿ. ಗಿಡ ನೆಟ್ಟು ನೀರುಣಿಸಿದರಾಗಲಿಲ್ಲ; ಅದನ್ನು ಜತನದಿಂದ ಕನಿಷ್ಠ ಮೂರು ವರ್ಷಗಳ ಕಾಲವಾದರೂ ಆರೈಕೆ ಮಾಡುವಂತಾಗಲಿ. ವನಮಹೋತ್ಸವ ಎನ್ನುತ್ತ ಫೋಟೋಗೆ ಪೋಸ್ ಕೊಡುವ ಬದಲು, ಪ್ರಾಮಾಣಿಕವಾಗಿ ‘ನನ್ನ ಪರಿಸರದ ಉಳಿವಿಗೆ ನಾನೊಂದು ಗಿಡ ನೆಡುತ್ತೇನೆ’ ಎನ್ನುವ ಮನೋಭಾವ ಒಡಮೂಡಲಿ.

ಶುಕ್ರವಾರ, ಮೇ 19, 2017

ಕಡಲ ಕನವರಿಕೆ

ಓ ಕಡಲೇ...
ಯಾಕೋ... ನಿನ್ನ ಎದೆ ಹರಿವಿನ ಮೇಲೆ ಅಂಗಾತ ಬಿದ್ದು ತೇಲಾಡಬೇಕೆನಿಸಿದೆ. ನಿನ್ನ ಕಡು ನೀಲ ಬಣ್ಣದ ಎದೆಯಾಳದಲ್ಲಿ ಧುಮುಕಿ ಉಸಿರು ಬಿಗಿಡಿಯಬೇಕೆನಿಸಿದೆ. ನಿನ್ನ ನೆತ್ತಿಯ ಮೇಲೆ ಓಡಾಡುವ ಕಾರ್ಮೋಡದೊಳಗೆ ಅವಿತುಕೊಳ್ಳಬೇಕೆನಿಸಿದೆ....

ಹೌದು.... ಒಂದು ದಿನ ಪೂರ್ತಿ ನಿನ್ನ ಜೊತೆ ಕಳೆದು ಭಾರವಾದ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕಿದೆ. ನಾಚುತ್ತ ಬಂದು ಕಾಲಿಗೆ ಕಚಗುಳಿಯಿಡುವ ನಿನ್ನ ಹಾಲ್ನೊರೆಯ ಗುಳ್ಳೆಯನ್ನು ಬೆರಳಲ್ಲಿ ಎತ್ತಿ ಆಡಬೇಕು. ಕೆನ್ನೆ ಕೆಂಪೇರಿಸಿಕೊಂಡು ಪ್ರಸ್ತದ ಕೋಣೆಗೆ ಹೋಗುವ ಮಧುವಣಗಿತ್ತಿಯಂತೆ ಕಾಣುವ ಭಾನುವನ್ನು ಕಣ್ತುಂಬಿಸಿಕೊಳ್ಳಬೇಕು. ನಿನ್ನ ಉಬ್ಬರದ ಆರ್ಭಟದಲ್ಲಿ ನೀರ್ಗಲ್ಲು ಮುರಿವ ಸದ್ದನ್ನು ಕೇಳಿ ಎದೆ ಬಡಿತ ಹೆಚ್ಚಿಸಿಕೊಳ್ಳಬೇಕು. ಹೀಗೆ, ಏನೇನೋ ಹುಚ್ಚು ಆಸೆ... ಕಲ್ಪನೆಯಂತೂ ಅಲ್ಲ. ಯಾಕೆಂದರೆ, ನಾ ನಿನ್ನ ಮಡಿಲಲ್ಲೇ ಬೆಳೆದ ಹುಚ್ಚ ಹುಡುಗ.
ಇರಲಿ, ಹತ್ತಿರದವರಲ್ಲಿ ಹೇಳಿಕೊಳ್ಳಲಾಗದ ಭಾವವನ್ನು ನಿನ್ನ ಮುಂದಾದರೂ ಹೇಳಿಕೊಳ್ಳೋಣ ಎಂದುಕೊಂಡಿದ್ದೆ. ಆದರೆ, ಅಬ್ಬರಿಸುವ ನೀನೇ ಬಿಸಿಲ ಬೇಗೆಗೆ ತಣ್ಣಗಾಗಿ ಹೋಗಿದ್ದೀಯ. ನಾನೇ ಆದಿ, ನಾನೇ ಅಂತ್ಯ ಎಂದೆಲ್ಲ ಬೀಗುತ್ತಿದ್ದ ನೀನು, ಎಷ್ಟೊಂದು ಕೃಶವಾಗಿದ್ದೀಯ?  ನಿನ್ನ ತಟಕ್ಕೆ ಬಂದು ಒಂದು ಹೆಜ್ಜೆ ಊರಿದರೆ ಸಾಕಿತ್ತು, ಓಡೋಡಿ ಬಂದು ಪಾದಸ್ಪರ್ಶಿಸಿ ಪುನೀತರನ್ನಾಗಿಸುತ್ತಿದ್ದೆ. ಆದರೆ, ಈಗ... ಗಾವುದ ದೂರ ಸುಡುವ ಮರಳ ರಾಶಿ ಮೇಲೆ ಹೆಜ್ಜೆ ಹಾಕಬೇಕು. ಎರಡ್ಮೂರು ಮೈಲಿ ದೂರವಿದ್ದರೂ ನಿನ್ನ ಅಬ್ಬರದ ಸದ್ದು ರಾತ್ರಿ ನಿದ್ದೆಗೆ ಜೋಗುಳ ಹಾಡಿದಂತಿರುತ್ತಿತ್ತು. ನಿನ್ನ ಸನಿಹ ಬಂದರೂ ಈಗ ಆ ಸದ್ದು ಕೇಳಲೊಲ್ಲದು. ಬಿರು ಬೇಸಿಗೆ ನಿನ್ನನ್ನು ಸಹ ಇಷ್ಟು ಹೈರಾಣಾಗಿಸಿದೆಯೇ?

ಬಿಡು, ಇನ್ನೊಂದು ವಾರವಷ್ಟೇ! ಕೊತ ಕೊತನೆ ಕುದಿಯುತ್ತಿದ್ದ ನಿನ್ನ ಮೈ-ಮನವೆಲ್ಲ ತಣ್ಣಗಾಗಲಿದೆ. ಮುಗ್ಧನಂತೆ ಶಾಂತವಾಗಿದ್ದ ನೀನು ಹುಚ್ಚೆದ್ದು ಅಬ್ಬರಿಸುತ್ತೀಯಾ. ಎಷ್ಟು ಹುಚ್ಚನೆಂದರೆ, ಆಗತಾನೆ ಅಂಬೆಗಾಲಿಡುವ ಮಗುವನ್ನು ಮಣ್ಣಲ್ಲಿ ಬಿಟ್ಟರೆ, ಏನೆಲ್ಲ ಮಾಡುತ್ತದೆಯೋ.. ಹಾಗೆ! ಅಂದರೆ, ಈಗಿರುವ ಶುಭ್ರ ನೀಲಿಯ ಬದಲಾಗಿ, ಹೊಲಸನ್ನು ಮೈಗೆ ಮೆತ್ತಿಕೊಂಡ ಕೊಳಕನಂತೆ! ನಿನ್ನ ಅಲೆಗಳ ಆರ್ಭಟಕ್ಕೆ ನಿನ್ನದೇ ತಟದಲ್ಲಿದ್ದ ಮರಗಳೆಷ್ಟು ಧರೆಗುರಳಬೇಕೋ? ನಿನ್ನಂಗಳದಲ್ಲಿ ಬೆಚ್ಚನೆಯ ಗೂಡು ಕಟ್ಟಿಕೊಂಡಿದ್ದ ಗುಡಿಸಲುಗಳೆಷ್ಟು ನುಚ್ಚು-ನೂರಾಗಬೇಕೋ? ಇಂತಹದ್ದೇ ಹುಚ್ಚಾಟಕ್ಕೆ ನೀನು ಎದುರು ನೋಡುತ್ತಿದ್ದೀಯಾ ಎನ್ನುವುದು ನನಗೆ ಚೆನ್ನಾಗಿ ಗೊತ್ತು!

ದೂರದ ಅಂಡಮಾನ-ನಿಕೋಬಾರ ಸಮುದ್ರ ತೀರಕ್ಕೆ ಮುಂಗಾರು ಕಾಲಿಟ್ಟು, ಅದಾಗಲೇ ವಾರ ಕಳೆದಿದೆ. ಇನ್ನೊಂದು ವಾರದಲ್ಲಿ ಬಂಗಾಳಕೊಲ್ಲಿ ಮೂಲಕ ಕೇರಳ ಪ್ರವೇಶಿಸಿ ನಿನ್ನನ್ನು(ಅರಬ್ಬೀ) ಬಿಗಿದಪ್ಪಿಕೊಳ್ಳಲಿದೆ. ಆ ಸಂದರ್ಭದಲ್ಲಿ ನೀ ವರ್ತಿಸುವ ರೀತಿ ಹಾಗೂ ಆ ದೃಶ್ಯ ನಿಜಕ್ಕೂ ಭಯಾನಕ. ನೆನೆಸಿಕೊಂಡರೆ ಎದೆ ಸಣ್ಣಗೆ ಕಂಪಿಸುತ್ತದೆ. ನೆತ್ತಿಯ ಮೇಲೆ ಕಾಪಿಟ್ಟ ಮೋಡಗಳ ಸಾಲು ಸಾಲು, ಶರವೇಗದಿಂದ ಎಲ್ಲಿಂದಲೂ ತೂರಿ ಬರುವ ಬಿರುಗಾಳಿ, ನಿನ್ನ ಕಡಲಿನ ಮೊರೆತದ ಅಬ್ಬರ, ಬಾನಂಗಳದಿಂದ ಕಬ್ಬಿಣ ಚೂರನ್ನು ಎಸೆದಂತೆ ಭಾಸವಾಗುವ ಮಳೆ ಹನಿಗಳ ಥಕಧಿಮಿತ, ಸುತ್ತೆಲ್ಲ ಆವರಿಸುವ ಕತ್ತಲು, ನೋಡು ನೋಡುತ್ತಲೇ ಮಂಜಿಗೆ ಮುಸುಕಾಗುವ ಕಾಗಾಲ ಗುಡ್ಡ, ಗಾಳಿ ರಭಸಕೆ ಎಲ್ಲಿಯೋ ತೂರಿ ಹೋಗುವ ಚಿತೆಯೇರಿದವರ ಭಸ್ಮ.......

ಈ ಭೀಭತ್ಸ ಸನ್ನಿವೇಶದಲ್ಲಿ ನಾನು ಏಕಾಂಗಿಯಾಗಿ, ಧರಿಸಿದ ಮೇಲಂಗಿಯ ಗುಂಡಿ ತೆಗೆದು, ಎರಡು ಕೈ ಅಗಲಿಸಿ ‘ಈ ಕಡಲೆಲ್ಲ ನನ್ನದು’ ಎನ್ನಬೇಕು! ಮನದಣಿಯೇ ‘ಕಣ್ಣಂಚು ಒದ್ದೆ ’ ಮಾಡಿಕೊಳ್ಳಬೇಕು.

ಇಂತಿ ನಿನ್ನ.. 
ಎದೆಯಾಳೋ ಹುಡುಗ


ಬುಧವಾರ, ಮೇ 3, 2017

ನನ್ನ ಮನೆಯಂಗಳದ ಸೌಂದರ್ಯ ರಾಶಿ
ಕಣ್ಣ ಅಳತೆಗೆ ನಿಲುಕದಷ್ಟು ವಿಶಾಲವಾದ ಗದ್ದೆ ಬಯಲು. ಈ ಅನಂತವನ್ನು ಸೀಳಿವೆಯೇನೋ ಎಂದೆನಿಸುವ ಹೆಬ್ಬಾವಿನಂತೆ ಸುಮ್ಮನೆ ಮಲಗಿದ ರಸ್ತೆ. ಕತ್ತೆೆತ್ತಿದರೆ ಹತ್ತಿಯ ರಾಶಿ ಒಂದೆಡೆ ಕೂಡಿ ಹಾಕಿದ ಬಿಳಿ ಮೋಡಗಳ ಸರತಿಯ ಓಟ. ಬಯಲಿಗೆ ಎದುರಾಗಿ ನಾಲ್ಕು ಹೆಜ್ಜೆ ಹಾಕಿದರೆ ಅಘನಾಶಿನಿಯ ಝುಳು ಝುಳು ನಾದ. ಸುತ್ತೆಲ್ಲ ಕಣ್ಣಾಡಿಸಿದರೆ ಮಂಜು ಮುಸುಕಿದ ಸಹ್ಯಾದ್ರಿ ಪರ್ವತಗಳ ಸಾಲು...
ಇದು ನಮ್ಮನೆಯಂಗಳದ ಸೌಂದರ್ಯ ರಾಶಿ. ತೆಂಗು, ಅಡಿಕೆ, ಮಾವು, ಹಲಸು, ಪೇರಲ, ಚಿಕ್ಕು ಮರಗಳ ಜೊತೆ ಜೊತೆಗೆ ಅಬ್ಬಲ್ಲಿ, ಮಲ್ಲಿಗೆ, ಮುತ್ತು ಮಲ್ಲಿಗೆ, ಕಾಬಾಳಿ, ಸಂಪಿಗೆ, ಮಧ್ಯಾಹ್ನ ಮಲ್ಲಿಗೆ, ಜಿನ್ನಿ, ತುಳಸಿಯಂತಹ ಚಿಕ್ಕ ಪುಟ್ಟ ಗಿಡಗಳ ಹಸಿರ ತೋರಣದ ನಡುವೆ ಪುಟ್ಟದೊಂದು ಮನೆ. ಮನೆ ಹೊಸ್ತಿಲು ತುಳಿದು ಐದತ್ತು ಹೆಜ್ಜೆ ಇಟ್ಟರೆ ಮೈ-ಮನಗಳ ಬೇಗುದಿಗೆ ಮುಲಾಮು ಹಚ್ಚುವ ಗದ್ದೆ ಬಯಲು. ದೂರದಿಂದ ತೂರಿ ಬರುವ ಬಿಸಿ ಗಾಳಿಯನ್ನು ಸಹ ಈ ಗದ್ದೆ, ತಂಪು ಗಾಳಿಯನ್ನಾಗಿ ಬದಲಾಯಿಸುತ್ತದೆ. ಅಳತೆಗೋಲಾಗಿ ಕಾಲುದಾರಿಯಾಗಿರುವ ಕಂಟದ ಮೇಲಿನ ಪ್ರತಿ ನಡಿಗೆ ಹೊಸ ಹೊಸ ಭಾವಾನುಭವಕ್ಕೆ ನಾಂದಿ. ಅಲ್ಲೇ ಕಂಟದ ಮೇಲೆ ಗಂಭೀರವಾಗಿ ತಲೆ ಎತ್ತಿ ನಿಂತಿದ್ದ ತೆಂಗಿನ ಮರ, ಈಗ ಬಳಲಿ ಬೆಂಡಾಗಿ ಗೂನು ಬೆನ್ನು ಹಾಕಿದೆ.
ಗದ್ದೆಗುಂಟ ಸರತಿ ಸಾಲಾಗಿ ನಿಂತಿರುವ ವಿದ್ಯುತ್ ಕಂಬಗಳು, ಅಘನಾಶಿನಿ ಹೊಳೆಯಲ್ಲಿ ಮೀನು ಹಿಡಿಯಲು ಗಾಳ ಹಾಕಿದೆಯೇನೋ ಎನ್ನುವ ಭಾವ ಒಡಮೂಡಿಸುತ್ತದೆ. ವಿದ್ಯುತ್ ತಂತಿಯ ಮೇಲೆ ಕುಳಿತು ಮರಿ ಹಕ್ಕಿಗೆ ಗುಟುಕು ನೀಡುವ ತಾಯಿ ಹಕ್ಕಿಯ ತಾಯ್ತನ, ಜೀಕುತ್ತ ಜೋಕಾಲಿಯಾಡುವ ಹರೆಯದ ಹಕ್ಕಿಗಳ ತುಂಟತನ, ಪಕ್ಕದಲ್ಲಿ ಬೇಲಿ ಮೇಲಿನ ಹಸಿರು ಪದೆಯೊಳಗೆ ಅವಿತು ಟುವ್ವಿ... ಟುವ್ವಿ.. ಎಂದು ಕೂಗುವ ಪಿಳ್ಳಕ್ಕಿಗಳ ಇಂಚರ, ಒಣಗಿದ ತರಗೆಲೆಯ ಅಡಿಯಲ್ಲಿ ಸದ್ದು ಮಾಡುತ್ತ ಹರಿದಾಡುವ ಸರಿಸೃಪಗಳು, ಇವುಗಳ ಹರಿದಾಟವನ್ನು ಬಾನಂಗಳದಲ್ಲಿ ಸೂಕ್ಷ್ಮವಾಗಿ ಗಮನಿಸುತ್ತ ಹೊಂಚು ಹಾಕಿ ರೆಕ್ಕೆ ಬಿಚ್ಚಿ ಹಾರಾಡುವ ಹದ್ದುಗಳು, ಗದ್ದೆ ಮಣ್ಣಿನಲ್ಲಿಯೇ ಕಣ್ಣಿಗೆ ಕಾಣದಷ್ಟು ಚಿಕ್ಕ ಗೂಡು ಕಟ್ಟಿಕೊಂಡು ವಾಸಿಸುವ ಗುಬ್ಬಿ ಹುಳಗಳು, ಆ ಗೂಡುಗಳ ಮೇಲೆಯೇ ಆಹಾರ ಹುಡುಕುತ್ತ ಸಾಗುವ ಇರುವೆಯ ಸರತಿ ಸಾಲುಗಳು.... ಒಂದೇ ಎರಡೇ, ಪ್ರಕೃತಿಯ ಎಲ್ಲ ಅನುಭೂತಿಗಳು ಒಂದೆಡೆ ಸೆರೆಯಾದ ಪವಿತ್ರ ಸ್ಥಳ.
ಗದ್ದೆ ಮೇಲಿನ ಕಂಟದ ಮೇಲೆ ಅಘನಾಶಿನಿ ಕಡೆ ಮುಖ ಮಾಡಿ ಹೆಜ್ಜೆ  ಹಾಕಿದರೆ, ತಾತ, ಮುತ್ತಾರ ಕಾಲದ ಮಾರ್ಗ ಸೂಚಕ ಬೃಹತ್ ಅರಳಿ ಮರ ಎದುರಾಗುತ್ತದೆ. ಅಲ್ಲಲ್ಲಿ ಇರುವ ಈ ಅರಳಿ ಮರಗಳು ಅಂದಿನ ಕಾಲುದಾರಿಯ ಪಯಣದಲ್ಲಿ ಹಿರಿಯರಿಗೆ ದಾರಿಯ ಹೆಗ್ಗುರುತಾಗಿತ್ತು. ನಡೆದು ಸುಸ್ತಾದಾಗ ಅರಳಿ ಕಟ್ಟೆಯ ಮೇಲೆಯೇ ವಿಶ್ರಮಿಸಿ, ಬುತ್ತಿ ತಿಂದು ಮುಂದೆ ಪಯಣಿಸುತ್ತಿದ್ದರು. ಈಗ ಈ ಅರಳಿ ಮರ ಕಾಗೆ, ಪಾರಿವಾಳ, ಹದ್ದುಗಳಿಗೆ ನೆಲೆ ನೀಡಿದ ಮಹಾ ವೃಕ್ಷ. ಮುಂಜಾನೆಯ ಸೂರ್ಯೋದಯದ ಮೊದಲ ಕಿರಣ, ಅಘನಾಶಿನಿಯ ಬಳಕುವ ಮೈ ಮೇಲೆ ಬಿದ್ದು ಈ ಅರಳಿಗೆ ನಮಿಸಿ ಮೇಲೇಳುತ್ತದೆ. ಹಾಗೆಯೇ, ಮುಸ್ಸಂಜೆಯ ಸೂರ್ಯಾಸ್ತದ ಕೊನೆಯ ಕಿರಣ ಅರಳಿಯ ನೆತ್ತಿಯ ಮೇಲಿರುವ ಚಿಗುರೆಲೆಗೆ ಸ್ಪರ್ಶಿಸಿ ಮಾಯವಾಗುತ್ತದೆ.
ದೈವೀದತ್ತ ಈ ಹಸಿರು ಹೊನ್ನ ರಾಶಿಯ ಪ್ರಕೃತಿಯ ಮಡಿಲಲ್ಲಿ ಉಸಿರು ಪಡೆದ ನಾನೇ ಧನ್ಯ! ಕ್ಷಮಿಸಿ..... ನಾವೇ ಧನ್ಯ!!

ಮಂಗಳವಾರ, ಮೇ 2, 2017

ವರ್ಷೆಯ ತೆಕ್ಕೆಗೆ ಬಿದ್ದು ಬಿಟ್ಟೆ
ಮುಂಗಾರು ಆರಂಭಕ್ಕೂ ಪೂರ್ವವೇ ವರ್ಷೆಯ ತೆಕ್ಕೆಗೆ ಬಿದ್ದು ಬಿಟ್ಟೆ...! ಎಂದೂ ಬಾರದ ವಿರಹಾಗ್ನಿ ಇಂದು ಮೈ ಮನವನ್ನೆಲ್ಲ ಆವರಿಸಿ ಧಗಧಗನೆ ಬೇಯಿಸುತ್ತಿತ್ತು. ಅದರ ಬೇಗುದಿಗೆ ಬೆಂದು ಹೋಗುತ್ತೇನೋ ಎನ್ನುವ ಭೀಭತ್ಸ ಭಾವ ಕಾಡುತ್ತಲೇ ಇತ್ತು.   ಇನಿಯನ ತೊಳಲಾಟ ನೋಡದ ವರ್ಷೆ, ಮುಸ್ಸಂಜೆ ಹೊತ್ತಲ್ಲಿ ಬಾನಂಗಳದಿಂದ ಓಡೋಡಿ ಬಂದಳು. ಎದೆಯ ಹರವಿನ ಮೇಲೆ ಬಿದ್ದು ಓಲಾಡಿದಳು. ಕಚಕುಳಿ ಇಡುತ್ತ ಮನದಣಿಯೇ ಕುಣಿದಾಡಿದಳು. ಕೊತಕೊತನೆ ಕುದಿಯುತ್ತಿದ್ದ ಇನಿಯನ ವಿರಹಾಗ್ನಿಯನ್ನು ತನ್ನ ತಣ್ಣನೆಯ ಸ್ಪರ್ಷದಿಂದ ಮಾಯವಾಗಿದಳು. ನನ್ನ ವರ್ಷೆಯ ಧ್ಯಾನದಲ್ಲಿಯೇ ಇನ್ನೊಂದೆರಡು ದಿನ ಕಳೆಯಬಹುದು. ತದನಂತರ ಮತ್ತೆ ಆರಂಭ, ವಿರಹ, ವೇದನೆ... ಮುಂಗಾರು ಆರಂಭವಾಗುವವರೆಗೂ!

ಸರ್ವಜನಾಂಗದ ಶಾಂತಿಯ ತೋಟ
(ಹೂಬಳ್ಳಿಯಲ್ಲಿ  ಇದು ನಿಮ್ಮ ಗಮನಕ್ಕೂ ಬಂದಿರಬಹುದು....!)

ಇಲ್ಲಿ ಜಾತಿ-ಧರ್ಮದ ಹಂಗಿಲ್ಲ, ಬಡವ-ಬಲ್ಲಿದ ಎನ್ನುವ ಭೇದವಿಲ್ಲ. ಕಂಠಪೂರ್ತಿ ಕುಡಿದು ನಶೆ ಏರಿದವರೂ ಬರುತ್ತಾರೆ, ಒಂದರ್ಧ ಗಂಟೆ ಧ್ಯಾನಕ್ಕೆ ಮೊರೆ ಹೋಗುವವರೂ ಬರುತ್ತಾರೆ. ಒಂದರ್ಥದಲ್ಲಿ ಎಲ್ಲರನ್ನೂ ಒಂದೆಡೆ ಸೆಳೆದುಕೊಳ್ಳುವ ಆಕರ್ಷಣೀಯ ಸ್ಥಳ!
ಈ ಭಿನ್ನ ಸೆಳೆತದ ಸ್ಥಳ ಇನ್ನೂ ಬೆಳಕಿಗೆ ಬಾರದ ಊರ ಹೊರಗಡೆಯೆಲ್ಲೆಲ್ಲೂ ಇಲ್ಲ. ಹುಬ್ಬಳ್ಳಿ ನಗರದ ಕೇಂದ್ರ ಭಾಗವಾದ ಹುಧಾ ಮಹಾನಗರ ಪಾಲಿಕೆಯ ಬೆನ್ನಿಗೆ ಒರಗಿಕೊಂಡೇ ಇದೆ. ಹೌದು, ಅಂದ ಹಾಗೆ ಈ ಸ್ಥಳದ ಹೆಸರು ಚಿಟಗುಪ್ಪಿ ಪಾರ್ಕ್!
 ಹೆಸರಿಗೆ ಇದು ಉದ್ಯಾನವಾದರೂ ಹೇಳಿಕೊಳ್ಳಲು ಸಹ ಒಂದೇ ಒಂದು ಅಂದದ ಗಿಡ ಇಲ್ಲಿಲ್ಲ. ಎಲ್ಲಿಯಾದರೂ ಹಸಿರು ಹುಲ್ಲಿನ ಹಾಸಿಗೆ ಇದೆಯೇ ಎಂದು ಕಣ್ಣಾಡಿಸಿದರೆ, ಅದು ಕೂಡಾ ಗೋಚರಿಸದು. ಉದ್ಯಾನದ ಮಧ್ಯ ಭಾಗದಲ್ಲಿ ಇತಿಹಾಸದ ಕಥೆ ಹೇಳುತ್ತ ಗಾಂಭೀರ್ಯದಿಂದ ಬೃಹದಾಕಾರವಾಗಿ ಅರಳಿ ಮರ ಬೆಳೆದು ನಿಂತಿದ್ದರೆ, ಸುತ್ತೆಲ್ಲ ಅಲ್ಲಲ್ಲಿ ಎಂದು ಒಂದಿಷ್ಟು ಮರಗಳು ತಲೆದೂಗುತ್ತ ನಿಂತಿವೆ. ಈ ಮರಗಳು ಮನುಷ್ಯ ಎಂಬ ಪ್ರಾಣಿಗೆ ನೆರಳನ್ನು ನೀಡಿದರೆ, ಚಿಕ್ಕಪುಟ್ಟ ಪಕ್ಷಿಗಳಿಗೆ ತನ್ನ ಮಡಿಲಲ್ಲಿ ಬೆಚ್ಚನೆಯ ಜಾಗವನ್ನೇ ನೀಡಿ ಸಾರ್ಥಕತೆ ಪಡೆದುಕೊಡಿದೆ.
ವಾಣಿಜ್ಯ ನಗರಿಯ ಕೇಂದ್ರ ಭಾಗದಲ್ಲಿ ಇಂದಿರಾ ಗಾಜಿನ ಮನೆ ಉದ್ಯಾನ ಹಾಗೂ ಈ ಚಿಟಗುಪ್ಪಿ ಉದ್ಯಾನ ಹೊರತು ಪಡಿಸಿದರೆ ಮತ್ಯಾವ ಉದ್ಯಾನವೂ ಇಲ್ಲ. ಈ ಚಿಟಗುಪ್ಪಿ ಉದ್ಯಾನಕ್ಕೆ ಹೊಂದಿಕೊಂಡು ಮಹಾನಗರ ಪಾಲಿಕೆ, ಆಸ್ಪತ್ರೆ, ಸಂಸದರ ಕಚೇರಿ ಹಾಗೂ ಕಲಾ ಮಹಾವಿದ್ಯಾಲಯ ಇರುವುದರಿಂದ ಸಹಜವಾಗಿಯೇ ದಿನಪೂರ್ತಿ ಉದ್ಯಾನ ಜನಜಂಗುಳಿಯಿಂದ ತುಂಬಿರುತ್ತದೆ. ಒಂದಿಲ್ಲೊಂದು ಕಾರ್ಯದ ನಿಮಿತ್ತ ಪಾಲಿಕೆಗೆ ಬರುವ ನಾಗರಿಕರು, ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು, ಕಲಾ ಮಹಾವಿದ್ಯಾಲಯಕ್ಕೆ ಬರುವ ನೂರಾರು ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆ ಕಳೆಯಲು ಇಲ್ಲಿಯ ಮರದ ನೆರಳನ್ನೇ ಆಶ್ರಯಿಸುತ್ತಾರೆ. ಇವರ ಹೊರತಾಗಿಯೂ ಈ ಪುಟ್ಟ ಉದ್ಯಾನ ಎಷ್ಟೋ ಜೀವಗಳಿಗೆ ಆಸರೆಯಾಗಿದೆ ಎನ್ನುವುದು ಸೋಜಿಗವೇ!
ಜಾತಿ, ಧರ್ಮದ ಹಂಗಿಲ್ಲದೆ ಪ್ರತಿಯೊಬ್ಬರೂ ಚಿಟಗುಪ್ಪಿ ಉದ್ಯಾನಕ್ಕೆ ಬಂದು ಬಿಡುವಿನ ಕಾಲ ಕಳೆಯುತ್ತಾರೆ. ಅಪರಿಚಿತರಾಗಿ ಬಂದು ಪರಿಚಿತರಾಗಿ ಹೆಜ್ಜೆ ಕೀಳುತ್ತಾಾರೆ. ಧರ್ಮದ ಎಲ್ಲೆ ಮೀರಿದ ಸಣ್ಣದಾದ ಎಳೆಯೊಂದು ಉದ್ಯಾನ ಅನ್ಯ ಧರ್ಮಿಯರನ್ನು ಒಂದುಗೂಡಿಸುತ್ತದೆ. ಉದ್ಯಾನದ ಪ್ರವೇಶ ದ್ವಾರದಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕವಿರುವುದರಿಂದ ಕೆಲವರು ದಾಹ ನೀಗಿಸಿಕೊಳ್ಳಲು ಬಾಟಲು ಹಿಡಿದು ಬಂದರೆ, ಬೀದಿ ವ್ಯಾಪಾರಸ್ಥರು ತಮ್ಮ ಉದ್ಯಮಕ್ಕೆಂದು ಕ್ಯಾನ್ ಹಿಡಿದು ಬರುತ್ತಾರೆ. ಹಾಗೆಯೇ, ದೃಷ್ಟಿಯನ್ನು ಪಕ್ಕಕ್ಕೆ ಹೊರಳಿಸಿದರೆ ಪುಟ್ಟ ಮಕ್ಕಳು ಜೋಕಾಲಿಯಲ್ಲಿ ಕುಳಿತು ತೂಗುಯ್ಯಾಲೆಯಲ್ಲಿ ತೂಗುವುದು ಕಂಡು ಬರುತ್ತದೆ. ಅನತಿ ದೂರದಲ್ಲಿ ಮಕ್ಕಳ ಈ ಆಟವನ್ನು ನೋಡುತ್ತ ಕುಳಿತಿರುವ ಹೆತ್ತಾಕೆಯ ಕಣ್ಣಲ್ಲಿ ಸಂಭ್ರಮದ ಬುಗ್ಗೆ ಎದ್ದೇಳುತ್ತದೆ.
ಉದ್ಯಾನದ ಮೂಲೆಯಲ್ಲಿರುವ ಮರದ ನೆರಳಲ್ಲಿ, ಇಲ್ಲವೇ ಅಲ್ಲಿಯೇ ಇರುವ ಆಸನದಲ್ಲಿ ಬದುಕಿನ ಯಾವ ಜಂಜಾಟವೂ ಇಲ್ಲದೆ ನಿಶ್ಚಿಂತೆಯಿಂದ ಮಲಗಿರುವವರು ಇಲ್ಲಿ ಸಾಮಾನ್ಯವಾಗಿ ಕಾಣ ಸಿಗುತ್ತಾರೆ. ಅವರಲ್ಲಿ ಕೆಲವರು ಹಿರಿಯರಾದರೆ ಇನ್ನು ಕೆಲವರು ದೂರದ ಊರಿನಿಂದ ನಗರಿಗೆ ವಲಸೆ ಬಂದವರೋ ಇನ್ಯಾರೋ ಆಗಿರುತ್ತಾರೆ. ಮಾನಸಿಕ ಸ್ಥೀಮಿತ ಕಳೆದುಕೊಂಡವರು ಸಹ ಉದ್ಯಾನದಲ್ಲಿ ಆಶ್ರಯ ಪಡೆದು, ತಮ್ಮಲ್ಲಿರುವ ಒಬ್ಬಂಟಿತನದ ಬೇಗುದಿಯನ್ನು ಬಾನಿಗೆ ಬಾಯಾನಿಸಿರುವ ಮರದ ಬುಡದ ಕೆಳಗೆ ಕೂತು ತೋಡಿಕೊಳ್ಳುತ್ತಾರೆ. ಅಲ್ಲಿಯೇ ಪಕ್ಕದ ಕಟ್ಟೆಯ ಮೇಲೆ ಸಾರ್ವಜನಿಕರು ಕೂತು, ತಮ್ಮ ಕಷ್ಟ-ಸುಖ ಹಂಚಿಕೊಳ್ಳುತ್ತ ಪಂಚಾಯಿತಿ ಕಟ್ಟೆಯನ್ನು ಸೃಷ್ಟಿಸುತ್ತಾರೆ. ಇದ್ಯಾವುದರ ಅರಿವಿಲ್ಲದ ಯುವಕನೋರ್ವ ಅಂದಿನ ಪತ್ರಿಕೆಯೊಂದು ಕೈಯ್ಯಲ್ಲಿ ಹಿಡಿದು, ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಮಸ್ತಕಕ್ಕೆ ತುರುಕುತ್ತಿರುತ್ತಾನೆ.

ಇವೆಲ್ಲಕ್ಕೂ ಮಿಗಿಲಾಗಿ ಚಿಟಗುಪ್ಪಿ ಉದ್ಯಾನ ವಧು-ವರರ ಅನ್ವೇಷಣಾ ಕೇಂದ್ರವಾಗಿಯೂ ಮಾರ್ಪಟ್ಟಿದೆ. ಸಂಬಂಧಿಗಳು ವಧು-ವರರನ್ನು ಕರೆತಂದು ಪರಸ್ಪರ ಒಪ್ಪಿಗೆಯನ್ನು ಪಡೆದು ಸಂಬಂಧಕ್ಕೆ ನಾಂದಿ ಹಾಡುತ್ತಾರೆ. ಕೆಲವು ಪಡ್ಡೆ ಹುಡುಗರು ಕೇಕೆ ಹಾಕುತ್ತ, ಪೋಲಿ ಮಾತುಗಳ ಡೈಲಾಗ್ ಹೇಳುತ್ತ ಹರಟೆ ಹೊಡೆದರೆ, ಕೆಲವು ಕುಡುಕರು ಉದ್ಯಾನದ ಉದ್ದ-ಅಗಲ ಎಷ್ಟಿದೆ ಎಂದು ಓಲಾಡುತ್ತ ಸರ್ವೇ ನಡೆಸುತ್ತಾರೆ. ಹೆಂಗಳೆಯರೇನಾದರೂ ಎದುರಾದರೆ, ಅಮಲಿನ ಕಣ್ಣಲ್ಲೇ ಅವರನ್ನು ದುರುಗುಟ್ಟಿ ನೋಡುತ್ತಾರೆ. ಯ್ಯಾಕ್... ಥೂ... ಎಂದು ಉಗಿಸಿಕೊಳ್ಳುತ್ತಾರೆ. ಸುತ್ತೆಲ್ಲ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಮಯ ಕಳೆಯುತ್ತಿದ್ದರೆ, ಕಡ್ಲೆ-ಪುರಿ ಮಾರುವ ಅಂಗವಿಲಕ ಸ್ವಾಭಿಮಾನಿಯೊಬ್ಬ ಅವರಿಗೆ ಎದುರಾಗಿ, 'ಸರ್.... ಪ್ಲೀಸ್' ಎನ್ನುತ್ತಾನೆ. ಅಷ್ಟಾದ ಕೆಲವೇ ಕ್ಷಣದಲ್ಲಿ ಟೀ ಮಾರುವ ಹುಡುಗ ಬಂದು, 'ಟೀ...' ಎಂದು ಮುಗುಳ್ನಗುತ್ತಾನೆ. ಇವೆಲ್ಲದ ನಡುವೆ ಕೊರವಂಜಿಯರು ಸದ್ದಿಲ್ಲದೆ ಅಲ್ಲಿದ್ದವರ ಹಣೆ ಬರಹ ಓದಿ ಹೇಳಿ, ತಮ್ಮ ಬದುಕಿನ ಚೀಲ ತುಂಬಿಸಿಕೊಳ್ಳುತ್ತಾರೆ.

ವೈವಿಧ್ಯಮಯ ಬದುಕು, ಭಿನ್ನ-ವಿಭಿನ್ನ ಮನಸ್ಸುಗಳು, ನಾನಾ ತೆರನಾದ ಬದುಕುಗಳು, ನಗುವಿನ ಜತೆಗೆ ಅಳು, ಕಷ್ಟ-ಸುಖದ ಪಾಠ... ಹೀಗೆ ಜೀವನದ ಸೂಕ್ಷ್ಮಾತಿ ಸೂಕ್ಷ್ಮತೆಯ ಎಷ್ಟೋ ಸಂಗತಿಗಳನ್ನು ಚಿಟಗುಪ್ಪಿ ಉದ್ಯಾನ ತಿಳಿಸಿಕೊಡುತ್ತದೆ. ಇಷ್ಟೊಂದು ಜೀವಿಗಳಿಗೆ ಅವರಿಷ್ಟದಂತೆ ನೆಮ್ಮದಿಯ ಆಸರೆ ನೀಡುತ್ತಿರುವ ಚಿಟಗುಪ್ಪಿ ಉದ್ಯಾನ ಆದಷ್ಟು ಬೇಗ ಹಸಿರಿನಿಂದ ನಳನಳಿಸುವಂತಾಗಲಿ.
(ಮೇ. ೨, ೨೦೧೭... ವಿಶ್ವವಾಣಿಯಲ್ಲಿ ಪ್ರಕಟಿತ ಬರಹ)