ಬುಧವಾರ, ಡಿಸೆಂಬರ್ 31, 2014

ಮೌನ ಗರ್ಭದಲಿ........!!!!!!!!!

ಯಾಕೋ..... ಮಳೆ ಎಂದರೆ, ಮನಸ್ಸೇ ಹುಚ್ಚೆದ್ದು ಕುಣಿಯುತ್ತದೆ. ಮೈ-ಮನವೆಲ್ಲ ಪುಲಕಿತವನ್ನಾಗಿಸುತ್ತದೆ. ಸೃಷ್ಠಿ ಕ್ರಿಯೆಯಲ್ಲಿ ಮಳೆಗಿರುವ ಉತ್ಕೃಷ್ಠ ಸ್ಥಾನ ಬಹುಶಃ ಇನ್ಯಾವುದಕ್ಕೂ ಇಲ್ಲವೇನೋ....!
ಮುಂಗಾರು ಪ್ರಾರಂಭವಾಗುವುದೇ ತಡ, ಸದ್ದಿಲ್ಲದೆ ಇಳೆ ಹಸಿರಾಗುತ್ತಾಳೆ. ಬಿರು ಬಿಸಲ ಬೇಸಿಗೆಯಿಂದ ಬಾಯ್ತೆರೆದ ಬರಡು ಜಾಗದಲ್ಲೆಲ್ಲ ಹಸಿರು. ದೃಷ್ಟಿ ಹಾಯಿಸಿದಲ್ಲೆಲ್ಲ ಹಸಿರೋ... ಹಸಿರು...!! ಹಸಿರು ಹೊದ್ದ ಭೂಮ್ತಾಯಿ ಕಾರ್ಮುಗಿಲನ್ನೇ ದಿಟ್ಟಿಸಿ ನೋಡುವ ದೃಶ್ಯ ವರ್ಣನಾತೀತ!
ದಿನಂಪ್ರತಿ ಓಡಾಡುತ್ತಿರುವ ಸುತ್ತಮುತ್ತಲಿನ ಸ್ಥಳದಲ್ಲೆಲ್ಲ, ಈವರೆಗೆ ಇಲ್ಲದ ಹಸಿರುಗಳು ಚಿಕ್ಕದಾಗಿ ತಲೆ ಎತ್ತಿ ನಿಂತಿವೆ. ಅವುಗಳ ಮೇಲೆ ಬಿದ್ದ ಮಳೆ ಹನಿ, ಮೋಡದ ಮರೆಯಲ್ಲಿ ಇಣುಕು ಹಾಕುವ ರವಿಯ ನೋಟಕ್ಕೆ ನಾಚಿ ನೀರಾಗುತ್ತಿದೆ. ತಂಪನೆಯ ಬೀಸುವ ತಂಗಾಳಿಗೆ ಓಲಾಡುತ್ತ, ಫಳಫಳಿಸಿ ಅಲ್ಲೇ ಮರೆಯಾಗುತ್ತಿದೆ. ಪ್ರಕೃತಿಯ ಮಡಿಲಲ್ಲಿ ಸೃಷ್ಟಿಯಾಗುವ ಈ ನಿಸರ್ಗ ಸೌಂದರ್ಯಕ್ಕೆ ಮೈ-ಮನವೆಲ್ಲ ಪುಳಕ.
ಬೆಟ್ಟ-ಗುಡ್ಡಗಳೆಲ್ಲ ಮಂಜಿನಿಂದ ಆವರಿಸಿಕೊಂಡು, ಇಲ್ಲಿ ಕೇವಲ ಹಸಿರಿಗಷ್ಟೇ ಸ್ಥಾನಮಾನ... ಏನಿದ್ದರೂ ಅದರದ್ದೇ ಕಾರು ಬಾರು' ಎಂದು ತಮ್ಮ ಇರುವಿಕೆಯನ್ನೇ ಮರೆ ಮಾಚಿಸುತ್ತಾರೆ. ಭೋರ್ಗರೆದು ಸುರಿವ ವರ್ಷಧಾರೆಗೆ ಹಾದಿ-ಬೀದಿಗಳಲ್ಲೆಲ್ಲ ಹೊಂಡಬಿದ್ದು, ನೀರು ತುಂಬಿಕೊಂಡು... ಕಾರ್ಮುಗಿಲ ಮೋಡವನ್ನು ಅದರಲ್ಲಿ ಪ್ರತಿಫಲಿಸುತ್ತವೆ. ನಿಮಿಷಾರ್ಧದಲ್ಲಿ ಬಿಸಿಲು.... ಕಣ್ಣು ಮಿಟುಕಿಸುವಷ್ಟರಲ್ಲಿ ಮತ್ತೆ ವರ್ಷ...!! ಅವರಿಬ್ಬರ ಕಣ್ಣಾ-ಮುಚ್ಚಾಲೆಯಾಟ ಕಣ್ತುಂಬಿಸಿಕೊಳ್ಳುವುದೇ ಒಂದು ಹಿತಾನುಭವ. ಹಸಿ-ಹಸಿ ಮನಸ್ಸಲ್ಲಿ ಬೆಚ್ಚನೆಯ ನೆನಪುಗಳ ಮೆರವಣಿಗೆ....!! ಬಾನಂಗಳದಿ ಕಾರ್ಮೋಡ ಸರಿಯುವವರೆಗೂ....!!

ಅಘನಾಶಿನಿ ನೀ.... ಸೌಂದರ್ಯವತಿ...!!

ಇಂದಿನ ಧಾವಂತದ ದಿನಗಳಲ್ಲಿ ಪ್ರಕ್ಷುಬ್ಧಗೊಂಡ ಮೈಮನಗಳಿಗೆ ಅಘನಾಶಿನಿ' ತುಸು ನೆಮ್ಮದಿಯನ್ನು ನೀಡುವಲ್ಲಿ ಯಾವುದೇ ಸಂಶಯವಿಲ್ಲ. ವಿರಹ ತಾಳದೆ ನಲ್ಲೆಗಾಗಿ ಪರಿತಪಿಸುವ ನಲ್ಲನಂತೆ ಅರಬ್ಬೀ, ಅಘನಾಶಿನಿಯನ್ನು ಭೋರ್ಗರೆದು ಕರೆಯುತ್ತಾನೆ.
ಅವನ ಮನ ತಣಿಸಲೆಂದು `ಅಘನಾಶಿನಿ' ಅಳುಕುತ್ತ, ಬಳುಕುತ್ತ ವಯ್ಯಾರದಿಂದಲೇ ಅವನಲ್ಲಿ ಮಿಲನವಾಗುತ್ತಾಳೆ. ಆಹಾ.... ನಿಸರ್ಗ ಸೌಂದರ್ಯ ಎಂದರೆ ಇದೇ ಅಲ್ಲವೇ...!?
ಭಾವನಾತ್ಮಕ ಬೆಸುಗೆ.................
ಉದ್ಯೋಗದ ನಿಮಿತ್ತ ದೂರ ದೂರದ ಊರುಗಳಲ್ಲಿರುವವರು ವರ್ಷಕ್ಕೊಮ್ಮೆಯೋ, ಎರಡು ಬಾರಿಯೋ ಊರ 'ಮಣ್ಣ ಘಮ'ಕ್ಕೆ ಮೂಗೊಡ್ಡುತ್ತಾರೆ. ತವರಿಗೆ ತರಾತುರಿಯಿಂದ ಹೊರಟು ರಾತ್ರಿ ಇಡೀ ನಿದ್ದೆ ಮಾಡದೆ ಕಿಟಕಿ ಹೊರಗೆ ದೃಷ್ಟಿ ಹಾಯಿಸುತ್ತ, ಕೈಯ್ಯಲ್ಲಿರೋ ವಾಚಲ್ಲೋ, ಮೊಬೈಲಲ್ಲೋ ಸಮಯ ನೋಡುತ್ತ... ಯಾವಾಗ ಬೆಳಗಾಯಿತೋ ಎಂದು ಕಾತುರತೆಯಿಂದ ಕಾಯುತ್ತಿರುತ್ತಾರೆ. ಅವರ ಆ ಕಾತುರತೆಯನ್ನು ಕೊನೆಗೊಳಿಸುವುದು ಈ ಅಘನಾಶಿನಿ ತಾಯಿಯೆ! ದೊಡ್ಡಮನೆ ಘಟ್ಟದ ಹಾದಿಯಿಂದ ಬಂದರೆ ಶರಾವತಿಯು ಸೆರಗೊಡ್ಡಿ ಸ್ವಾಗತಿಸಿದರೆ, ಶಿರಸಿ-ಕಾರವಾರದ ಮಾರ್ಗದಿಂದ ಬಂದರೆ ಆಡಿದ, ಕುಣಿದ, ಕುಪ್ಪಳಿಸಿದ, ಈಜಿದ, ಗಾಳ ಹಾಕಿದ ಪಾಪನಾಶಿನಿ.... ಬಾ ಕಂದ ಎಂದು ಮಡಿಲು ಹಾಸಿ ಮಮತೆಯಿಂದ ಬರ ಮಾಡಿಕೊಳ್ಳುತ್ತಾಳೆ. ಆಕೆಯನ್ನು ಕಂಡೊಡನೆ ಕರಾವಳಿಯ ಕಂಪು, ನಮ್ಮದು ಅನ್ನೋ ಭಾವ ಸ್ವಜಾಗೃತವಾಗಿ ಬಿಡುತ್ತದೆ. ಆಕೆಯನ್ನೇ ದಿಟ್ಟಿಸಿ ನೋಡುತ್ತ ಸಾಗುವ ಆ ಕ್ಷಣದಲ್ಲಿ ಅಮಿತಾನಂದದ ಕಣ್ಣೀರು ಅರಿವಿಲ್ಲದೇ....!
ತಾಯಿ ಜೊತೆಗಿನ ಭಾವನಾತ್ಮಕ ಬೆಸುಗೆಯೇ ಅಂತಹದ್ದು...!!

ಮಂಗಳವಾರ, ಡಿಸೆಂಬರ್ 30, 2014

ಅವಳನ್ನು.... ಅವಳ ಪಾಡಿಗೆ ಬಿಟ್ಟು ಬಿಡೋಣ..... ಪ್ಲೀಸ್...!! 

ಇವೆಲ್ಲ ಆಗಬಾರದಿತ್ತು. ಆಗಿಹೋಗಿದೆ. ವಿಷಾದವೇ...! ಈ ಘಟನೆಗಳು ನಮಗೆಲ್ಲರಿಗೂ ಪಾಠವಾಗಲಿ.ಇನ್ನಾದರೂ ಪ್ರಕೃತಿ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗಲಿ. ಹರಿಯುವ ನದಿಗೆ, ತೊರೆಗೆ ಎಂದೂ ತಡೆಯೊಡ್ಡುವುದು ಬೇಡ. ಸ್ವಚ್ಛಂದವಾಗಿ ಬೆಳೆದು ನಿಂತ ಮರ-ಗಿಡಗಳನ್ನು ಕಡಿಯದೇ ಅಲ್ಲಿ ಇನ್ನಷ್ಟು ಮರಗಳನ್ನು ಬೆಳೆಸೋಣ. ಪ್ರಕೃತಿ ವಿರುದ್ಧ ಈಜಿ ಜಯಸಲು ನಮ್ಮಿಂದ ಸಾಧ್ಯವಾಗದು. ಒಂದು ವೇಳೆ ಗೆದ್ದೆನೆಂದು ಬೀಗಿದರೂ ಅದು ಕ್ಷಣಿಕವೇ ಹೊರತು ನಿರಂತರವಲ್ಲ.

ನಾಗರಾಜ್ ಬಿ.ಎನ್.
ಪ್ರಕೃತಿ ಮಾತೆ ಈ ಹಿಂದೆ ಎಂದೂ ಯಾರ ಮೇಲೂ ದಬ್ಬಾಳಿಕೆ ನಡೆಸಿಲ್ಲ. ಈಗಲೂ ನಡೆಸುತ್ತಿಲ್ಲ. ಹಾಗೆಯೇ ಮುಂದೆಯೂ ನಡೆಸುವುದಿಲ್ಲ. ಹಾಗಂತ ಅವಳ ತಂಟೆಗೆ ಬಂದವರನ್ನು ಮಾತ್ರ ಅವಳು ಎಂದೂ ಬಿಟ್ಟಿಲ್ಲ. ಬಿಡುವುದೂ ಇಲ್ಲ...!!
ಪ್ರಕೃತಿ ಹೇಗಿದ್ದಾಳೋ ಹಾಗೆಯೇ ನಾವು ಅವಳನ್ನು ಸ್ವೀಕರಿಸಬೇಕು... ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು, ನಮ್ಮ ಸ್ವಾರ್ಥಕ್ಕಾಗಿ ಅವಳ ಮೇಲೆ ದೌರ್ಜನ್ಯ ಎಸಗುತ್ತ, ಅವಳ ಅಸ್ತಿತ್ವಕ್ಕೆ ಪೆಟ್ಟು ನೀಡಿದರೆ, ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ತಾಜಾ
ಉದಾಹರಣೆ... ಮಹಾರಾಷ್ಟ್ರ ಪುಣೆಯ 'ಮಾಲಿನ್' ಗ್ರಾಮ.
ಸಹ್ಯಾದ್ರಿ ತಪ್ಪಲಿನಲ್ಲಿ ವಾಸಿಸುತ್ತಿರುವ ವನವಾಸಿ ಸಮಾಜದ ಸುಮಾರು 60 ಕುಟುಂಬಗಳು ಜುಲೈ 30ರಂದು ಗುಡ್ಡ ಜರಿದ ಪರಿಣಾಮ ಸಂಪೂರ್ಣ ನೆಲಸಮವಾಗಿದೆ. 300ರಕ್ಕೂ ಹೆಚ್ಚು ಜನರು ಮಣ್ಣಿನಡಿ ಸಿಲುಕಿ, ಹೂತುಹೋಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈವರೆಗೆ ಅವಶೇಷದಡಿ ಸಿಲುಕಿರುವ ಕೇವಲ 40ರಷ್ಟು ಮೃತ ದೇಹಗಳು ಮಾತ್ರ ದೊರಕಿವೆ. ಕಾರ್ಯಾಚರಣೆ ಸಮರೋಪಾದಿಯಲ್ಲಿ ಮುಂದುವರಿದೆ.
 ಪುಣೆಯಿಂದ ಕೇವಲ 120 ಕಿ.ಮೀ ದೂರದಲ್ಲಿರುವ ಈ ಗ್ರಾಮದ ಜನರು ಆಧುನಿಕತೆಗೆ ಈಗಷ್ಟೆ ತೆರೆದುಕೊಳ್ಳುತ್ತಿದ್ದರು. ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿ ಕೃಷಿ ಬೇಸಾಯ ಮಾಡಿ ಜೀವನ ಸಾಗಿಸುತ್ತಿದ್ದರು. ತಾವು ವಾಸಿ
ಸುವ ಮನೆಗಳ ಹಿಂದೆ ಇರುವ ಇರುವ ಬೆಟ್ಟವು ಇವರಿಗೆ ಸದಾ ಕಾಲ ನೆರಳಾಗಿ ಆಸರೆ ನೀಡುತ್ತಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ಬಿಟ್ಟು ಬಿಡದೆ ಸಉರಿಯುತ್ತಿರುವ ಮಳೆಯಿಂದಾಗಿ, ಆಸರೆ ನೀಡಿದ ಬೆಟ್ಟವೇ ಇವರ ಪ್ರಾಣಕ್ಕೆ ನೆರವಾಯಿತು. ನೋಡು ನೋಡುತ್ತಿದ್ದಂತೆ ಆ ಬೆಟ್ಟ ಮುನ್ನೂರಕ್ಕೂ ಹೆಚ್ಚು ಜೀವಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು...!!
ಬೆಟ್ಟ ಕುಸಿಯಲು ಕಾರಣವೇನು.....?
ಇತ್ತೀಚೆಗೆ ಅಲ್ಲಿ ವಾಸಿಸುವ ವನವಾಸಿ ಕುಟುಂಬದವರು ಕೃಷಿ ಚಟುವಟಿಕೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗುಡ್ಡದ ತಪ್ಪಲಿನಲ್ಲಿರುವ ಭೂಮಿಯನ್ನು ಕಡಿದು, ಕೊಚ್ಚಿ ಸಮತಟ್ಟು ಮಾಡಿದ್ದರು. ಅಲ್ಲದೆ, ವ್ಯವಸಾಯಕ್ಕೆ ಬೇಕಾಗುವ ರೀತಿಯಲ್ಲಿ ಬೆಟ್ಟವನ್ನು ಕಡಿದಿದ್ದರು. ಬೆಟ್ಟಕ್ಕೆ ಹೊಂದಿಕೊಂಡಿರುವ ನೂರಾರು ಮರಗಳನ್ನು ಕಡಿದು ಬೆಟ್ಟದ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದರು. ಅಲ್ಲದೆ, ಬೆಟ್ಟದ ಮೇಲೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿ, ತಮ್ಮಲ್ಲಿರುವ ಶಕ್ತಿ ಪ್ರದರ್ಶಿಸಿದ್ದರು. ಸಂದರ್ಭದಲ್ಲಿ ಭಾರೀ ಗಾತ್ರದ ಯಂತ್ರಗಳು ಓಡಾಡಿ ಬೆಟ್ಟವನ್ನೇ ಅಲುಗಾಡಿಸಿತ್ತು. ಇವೆಲ್ಲದರ ಪರಿಣಾಮವಾಗಿ ಬೆಟ್ಟದ ಮಣ್ಣು ಸಡಿಲಗೊಂಡಿದ್ದವು. ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಸಡಿಲಗೊಂಡ ಮಣ್ಣುಗಳು ಕುಸಿಯತೊಡಗಿದ್ದವು. ಕ್ಷಣ ಮಾತ್ರದಲ್ಲಿ ಮಣ್ಣು, ಕೆಸರಿನಡಿ ನೂರಾರು ಜೀವಗಳು ಹೂತು ಹೋದವು..!!
ಪ್ರಕೃತಿ ತನಗೆ ಹೇಗೇ ಬೇಕೋ ಹಾಗೆ ತನ್ನ ಸುತ್ತಮುತ್ತಲಿನ ವಾತಾವರಣವನ್ನು ನಿರ್ಮಿಸಿಕೊಂಡಿರುತ್ತಾಳೆ. ಅವಳ ಪಾಡಿಗೆ ಅವಳನ್ನು ಬಿಟ್ಟು ಬಿಡಬೇಕು. ಅವಳು ಎಂದಿಗೂ ಮಾನವನ ಮೇಲೆ ತನ್ನ ಬಲ ಪ್ರದರ್ಶನ ಮಾಡಿಲ್ಲ. ಮಾನವನೇ ತನ್ನ ಸ್ವಾರ್ಥಕ್ಕಾಗಿ ಅವಳ ಮುಂದೆ ತನ್ನ ಬಲ ಪ್ರದರ್ಶನ ಮಾಡುತ್ತಾನೆ. ಕಳೆದ ವರ್ಷ ನಡೆದ ಕೇದಾರನಾಥದ ರುದ್ರ ಪ್ರಳಯಕ್ಕೂ ಕೂಡಾ ಮಾನವನ ಸ್ವಾರ್ಥವೇ ಕಾರಣ..!
ಇವೆಲ್ಲ ಆಗಬಾರದಿತ್ತು. ಆಗಿಹೋಗಿದೆ. ವಿಷಾದವೇ...! ಈ ಘಟನೆಗಳು ನಮಗೆಲ್ಲರಿಗೂ ಪಾಠವಾಗಲಿ.ಇನ್ನಾದರೂ ಪ್ರಕೃತಿ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗಲಿ. ಹರಿಯುವ ನದಿಗೆ, ತೊರೆಗೆ ಎಂದೂ ತಡೆಯೊಡ್ಡುವುದು ಬೇಡ. ಸ್ವಚ್ಛಂದವಾಗಿ ಬೆಳೆದು ನಿಂತ ಮರ-ಗಿಡಗಳನ್ನು ಕಡಿಯದೇ ಅಲ್ಲಿ ಇನ್ನಷ್ಟು ಮರಗಳನ್ನು ಬೆಳೆಸೋಣ. ಪ್ರಕೃತಿ ವಿರುದ್ಧ ಈಜಿ ಜಯಸಲು ನಮ್ಮಿಂದ ಸಾಧ್ಯವಾಗದು. ಒಂದು ವೇಳೆ ಗೆದ್ದೆನೆಂದು ಬೀಗಿದರೂ ಅದು ಕ್ಷಣಿಕವೇ ಹೊರತು ನಿರಂತರವಲ್ಲ.
ಪ್ರಕೃತಿ ಮಾತೆಯನ್ನು ಅವಳ ಪಾಡಿಗೆ ಬಿಟ್ಟು ಬಿಡೋಣ... ಹಾಗೆಯೇ, ಅವಳ ಮಡಿಲಲ್ಲಿ ಅವಳ ಮಕ್ಕಳಾಗಿ ನಾವು ಬದುಕೋಣ.... ಪ್ಲೀಸ್....!

ಹಸಿರೊಡಲ ಭಾವ.....!

ಚಿತೆಯಿಂದ ಎದ್ದು ಬಂದರೂ
ಚಿತ್ತದಲ್ಲಿಲ್ಲ ಯಾವೊಂದು ಭಾವ
ಸತ್ತು ಕಿತ್ತ ಭಾವನೆಯ ಕಳೇಬರದಿ
ಕತ್ತೆತ್ತಿ ನೋಡುತಿಹೆ ದಿಗಂತದೆಡೆ...!!
ಪಟಪಟನೇ ಹಾರಾಡಿದ ಬಣ್ಣದ ಪಟ
ಕುಳಿರ್ಗಾಳಿಗೆ ಸಿಲುಕಿ ಮಾಯವಾಗಿದೆ
ಸದ್ದಿಲ್ಲದೆ ಸುಡುತಿರುವ ಭಾವ ದೀಪ್ತಿ
ಇತಿಹಾಸ ಬರೆಯಲು ಸಜ್ಜಾಗಿದೆ...!!
ಬಳೆಯ ರಿಂಗಣಗಳಿಲ್ಲ, ಗೆಜ್ಜೆಯ ನಾದಗಳಿಲ್ಲ
ಕಾಡುವ ಸವಿ ಮಧುರ ನೆನಪುಗಳಿಲ್ಲ
ಬಿದಪ್ಪಿ ಸಂತೈಸಿ ನೇವರಿಸಿದ ಕೈಗಳಿಲ್ಲ
ರುದ್ರತಾಂಡವದ ನರ್ತನವೇ ಎಲ್ಲ...!!
ನಟ್ಟ ನಡು ದಾರಿಯಲಿ ಕತ್ತಲೆಯ ಅಧಿಪತ್ಯ
ಭಾರವಾದ ಹೆಜ್ಜೆಯಲಿ ಬದುಕು ನೇಪಥ್ಯ
ಇರಲಿರಲಿ ಇದೊಂದು ಒಬ್ಬಂಟಿ ಜೀವ
ಸ್ಮಶಾನದಲೂ ಇದ್ದಾನೆ ಆ ರುದ್ರ ದೇವ...!
ಬಟ್ಟ ಬಯಲಲ್ಲಿ ನಿಂತ ಒಂಟಿ ಗಿಡ
ಜೀವ ಜಲದ ಹಂಗಿಲ್ಲದೆ ಮರವಾಗಿದೆ ನೋಡ
ಒಡಲಾಳದ ಬೇಗುದಿಯ ಬಚ್ಚಿಟ್ಟುಕೊಂಡು
ಬೆಳೆಯುತ್ತಿದೆ ಎತ್ತರಕೆ ತಲೆಯೆತ್ತಿ ನೋಡ...!
-ನಾಗರಾಜ್ ಬಿ.ಎನ್. 

ಸಂಬಂಧಗಳು ಕೂಡಿ ಕಳೆಯುವ ಲೆಕ್ಕಾಚಾರವೇ...?
ಕಾಲಾಯ ತಸ್ಮೈ ನಮಃ.................!
 

'ಮಾನವ ಜನ್ಮ ಹಾಳು ಮಾಡಿಕೊಳ್ಳಬೇಡಿರಾ ಹುಚ್ಚಪ್ಪಗಳಿರಾ....' ಎಂಬಂತೆ ಭಗವಂತ ನೀಡಿದ ಸುಂದರ ಮಾನವ ಜನ್ಮವನ್ನು ಪ್ರೀತಿ, ಸ್ನೇಹ, ವಿಶ್ವಾಸದಿಂದ ಕಾಪಾಡಿಕೊಂಡು ಹೋಗಬೇಕು. ನಂಬಿ ಬಂದ ಬಾಳ ಸಂಗಾತಿಯ ಜೊತೆ ನಂಬಿಕಸ್ಥರಾಗಿ ಬದುಕಿನ ಬಂಡಿಯನ್ನು ಮುನ್ನಡೆಸಬೇಕು. ಮನಸ್ಸು ಮತ್ತು ದೇಹ ಒಬ್ಬರಿಗೇ ಮೀಸಲಾಗಿ ಸಮರ್ಪಣಾ ಭಾವದಿಂದ ದಾಂಪತ್ಯ ಗೀತೆಯನ್ನು ಬರೆಯಬೇಕು.....

ನಾಗರಾಜ್ ಬಿ.ಎನ್.
ಕಾಲಚಕ್ರದ ಉರುಳಾಟದಲ್ಲಿ ಬದುಕಿನ ಶೈಲಿಯೂ ಹಂತ ಹಂತವಾಗಿ ಬದಲಾಗಿಬಿಟ್ಟಿದೆ. ಪ್ರತಿಕ್ಷಣವೂ ಕೂಡಾ ಆಧುನಿಕತೆಯ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗಿ ಒದ್ದಾಡುತ್ತಿದ್ದೇವೆ. ಮಾನವ ಸಂಬಂಧಗಳೆಲ್ಲ ಕೂಡಿ-ಕಳೆಯುವ ಲೆಕ್ಕಾಚಾರವಾಗಿ, ವ್ಯವಹಾರದ ದ್ಯೋತಕವಾಗಿಬಿಟ್ಟಿದೆ. ಸಂಸ್ಕಾರ, ಸಂಸ್ಕೃತಿ ಎನ್ನುವುದು ಮಖಾಡೆ ಮಲಗಿ ಇನ್ನಿಲ್ಲವಾಗಿದೆ. 'ಪರಿವರ್ತನೆ ಜಗದ ನಿಯಮ' ಎಂದರೆ ಇದೇನಾ....!!? ಹಿರಿಯರು ನಡೆದ ಸನ್ಮಾರ್ಗಗಳು ಈಗ ಮುಸುಕು ಮುಸುಕಾಗಿ, ಕಂಡೂ ಕಾಣದಂತಾಗಿವೆ. ಅವರ ಭವ್ಯ ಪರಂಪರೆ ಅವರ ಜೊತೆ ಜೊತೆಯಲ್ಲಿಯೇ ಮಣ್ಣಾಗಿ ಇತಿಹಾಸದ ಕಾಲ ಗರ್ಭದಲ್ಲಿ ಹೂತು ಹೋಗುತ್ತಿವೆ. ಅಪ್ಪಟ ಸಾಂಪ್ರದಾಯಿಕ ಶೈಲಿಯ ಆ ಬದುಕು ಬೇಕೆನಿಸಿದರೂ ಈಗ ನಮಗೆ ಸಿಗಲಾರದು. ಈಗೇನಿದ್ದರೂ ವ್ಯಾವಹಾರಿಕ ಜಗತ್ತಿನ ಬೇಕು-ಬೇಡಗಳ ಜೀವನ ಮಾತ್ರ. ಲೌಕಿಕ ಪ್ರಪಂಚದಲ್ಲಿ ಸ್ವಾರ್ಥಕ್ಕೆ ಪ್ರಾಮುಖ್ಯತೆ ನೀಡಿ ನಮ್ಮದಾದಂತ ಸಂಸ್ಕಾರವನ್ನೇ ಅಧೋಗತಿಗೆ ಕೊಂಡೊಯ್ಯುತ್ತಿದ್ದೇವೆ.
 ಸ್ವೇಚ್ಛಾಚಾರದ ಬದುಕು ಬೇಕೇ...?
ಈ ಹಿಂದೆ ನಮ್ಮ ಶರಣರು ದೇಹವನ್ನು ದೇವಾಲಯಕ್ಕೆ ಹೋಲಿಸಿ 'ದೇಹವೆ ದೇವಾಲಯ' ಎಂದು ಹಾಡಿ ಹೊಗಳಿದ್ದರು. ದೇಹದಲ್ಲಿರುವ ಜೀವಾತ್ಮನಿಗೆ ಪರಮಾತ್ಮನ ಸ್ಥಾನ ನೀಡಿ, ಪೂಜಿಸಿ, ಆರಾಧಿಸಿ ಎಂದು ಸೂಕ್ಷ್ಮವಾಗಿ ತಿಳಿ ಹೇಳಿದ್ದರು. ಅಷ್ಟೊಂದು ಉತ್ಕೃಷ್ಠ ಸ್ಥಾನಕ್ಕೆ ಏರಿಸಿದ ದೇಹ, ಪ್ರಸ್ತುತ ದಿನಗಳಲ್ಲಿ ವ್ಯಾವಹಾರಿಕ ಸರಕಾಗುತ್ತಿರುವುದು ವಿಪಯರ್ಾಸದ ಸಂಗತಿ....! ಈ ಜಗತ್ತಿನಲ್ಲಿ ಹಣಕ್ಕಾಗಿ ಏನೆಲ್ಲ ನಡೆಯುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ. ಅಗ್ನಿ ಸಾಕ್ಷಿಯಾಗಿ ಕೈ ಹಿಡಿದು ಕಾಯಾ, ವಾಚಾ, ಮನಸಾ ಜೀವನ ಪರ್ಯಂತ ಜೊತೆಯಾಗಿಯೇ ಬಾಳಿ ಬದುಕುತ್ತೇನೆ ಎಂದು ಹೇಳಿದವರು, ಎಲ್ಲ ರೀತಿ-ನೀತಿಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ವತರ್ಿಸುತ್ತಾರೆ. ನಾಲ್ಕು ಗೋಡೆಗಳ ನಡುವೆ ಮಾತ್ರ ಸೀಮಿತವಾಗಿರಬೇಕಾದ ಕೆಲವು ವೈಯಕ್ತಿಕ ಬದುಕು, ಹಾದಿ-ಬೀದಿಯಲ್ಲಿ ಹರಾಜಾಗುತ್ತಿವೆ. ಊಟದಲ್ಲಿ ಉಪ್ಪಿನಕಾಯಿ ಇರುವಂತೆ ಆಡುವವರ ನಾಲಿಗೆಯ ಮೇಲೆ ಅಂಕೆಯಿಲ್ಲದೆ ಅದು ಹರಿದಾಡುತ್ತಿದೆ. ಆದರೂ ಕೂಡಾ ಇದ್ಯಾವುದರ ಪರಿವೇ ಇಲ್ಲದಂತೆ ಸ್ವೇಚ್ಛೆಯಿಂದ ಬದುಕು ಮುನ್ನಡೆಸುತ್ತಾರೆ.ದೈವ ಸಂಕಲ್ಪಿತ ಜೋಡಿಗಳು....!!ದಾಂಪತ್ಯದ ಗೀತೆ ಹಾಡಿದವರೇ ಇರಲಿ... ಪ್ರೇಮ ರಾಗದಲ್ಲಿ ಓಲಾಡುತ್ತಿರುವ ಜೋಡಿಗಳೇ ಇರಲಿ... ಇಬ್ಬರು ಸಹ ಪರಸ್ಪರ ಒಬ್ಬರನ್ನೊಬ್ಬರು ಅರಿತು ಬಾಳಬೇಕು.
'ಒಂದು ಗಂಡಿಗೊಂದು ಹೆಣ್ಣು' ಎಂಬ ಕೆ.ಎಸ್. ನರಸಿಂಹಸ್ವಾಮಿಯವರ ಮಾತಿನಂತೆ, ನಂಬಿ ಬಂದ ಹುಡಗಿ/ಹುಡುಗನಿಗೆ ಜೀವನ ಪರ್ಯಂತ ನಂಬಿಕಸ್ಥರಾಗಿಯೇ ಬದುಕಬೇಕು. ಹೆಣ್ಣು ಹೇಗೆ ತನ್ನ ಗಂಡ ಶ್ರೀರಾಮನಂತೆ ಇರಬೇಕೆಂದು ಬಯಸುತ್ತಾಳೆಯೋ ಹಾಗೆಯೇ, ಗಂಡು ಕೂಡಾ ತನ್ನ ಹೆಂಡತಿ ಸೀತೆಯಂತೆಯೇ ಇರಬೇಕೆಂದು ಬಯಸುವುದರಲ್ಲಿ ಯಾವ ತಪ್ಪಿಲ್ಲ ಅಲ್ಲವೇ?
ಅಮ್ಮನ ಮಡಿಲಲ್ಲಿ ಬೆಳೆದ ಹುಡುಗ ಮದುವೆಯಾದ ನಂತರ ಜೊತೆಯಾಗಿ ಬಂದ ಹುಡುಗಿಯ ಜೊತೆ ಬಾಳಿ ಬದುಕ ಬೇಕಾಗುತ್ತದೆ. ಅವನಿಗೆ ಅವಳೇ ಸರ್ವಸ್ವವಾಗಿ, ತನ್ನೆಲ್ಲ ಬೇಕು ಬೇಡಗಳನ್ನು ಪೂರೈಸುವ ದೇವತೆಯಾಗುತ್ತಾಳೆ. ಹಾಗೆಯೇ, ಹೆಣ್ಣು ಕೂಡಾ ತನ್ನೆಲ್ಲ ರಕ್ತ ಸಂಬಂಧಿಗಳನ್ನು ಬಿಟ್ಟು ಸುಂದರ ಬದುಕಿನ ಕನಸು ಕಟ್ಟಿಕೊಂಡು ಹುಡುಗನನ್ನು ಹಿಂಬಾಲಿಸುತ್ತಾಳೆ. ಅವಳ ಪಾಲಿಗೆ ಆಕೆಯ ಗಂಡ ಸಾಕ್ಷಾತ್ ಭಗವಂತನೇ...!! ಹೀಗೆ ಇಬ್ಬರೂ ಕೂಡಾ ಪರಸ್ಪರ ಒಬ್ಬರಿಗೊಬ್ಬರು ದೈವ ಸಮಾನರಾಗಿ ಕಂಡು ಬರುತ್ತಾರೆ. ಇಂತಹ ಅದ್ಭುತ ದೈವ ಸಂಕಲ್ಪಿತ ಕೆಲವು ಜೋಡಿಗಳು ಬರ ಬರುತ್ತ ಹಾದಿ ತಪ್ಪಿ ಎಲ್ಲೆ ಮೀರುತ್ತಿರುವುದು ವಿಷಾದನೀಯ.
ಪಿಸುಮಾತಿನ ಪ್ರೀತಿ.....!!
ಪ್ರೀತಿ ಯಾವಾಗಲೂ ಒತ್ತಾಯ ಪೂರ್ವಕವಾಗಿ ಹುಟ್ಟಿಕೊಳ್ಳುವುದಿಲ್ಲ. ಅದೊಂದು ಆಕಸ್ಮಿಕ ಅವಘಡ. ಆ ಸನ್ನಿವೇಶದಲ್ಲಿ ಮೇಳೈಸಿದ ಹೃದಯಾಂತರಾಳದ ಪ್ರೀತಿ ಪರಸ್ಪರ ವಿನಿಮಯ ಮಾಡಿಕೊಂಡಾಗ ಅದು ಅರ್ಥ ಪಡೆದುಕೊಳ್ಳುತ್ತದೆ. ಆಗ ಸುಂದರ ಪ್ರೀತಿಯ ಮಹಾಕಾವ್ಯ ರಚನೆಯಾಗಿ, ಪರಸ್ಪರ ಬದುಕಿಗೆ ಸ್ಪೂರ್ತಿಯಾಗುತ್ತದೆ. ಅಲ್ಲಿ ಮನಸ್ಸುಗಳು ಪಿಸುಮಾತಿನೊಂದಿಗೆ ಬೆರೆತಿರುತ್ತವೆ. ಕನಸಿನ ಗೂಡನ್ನು ಹೆಣೆದುಕೊಂಡು ನೀಲಾಕಾಸದಲ್ಲಿ ತೇಲಾಡುತ್ತಿರುತ್ತವೆ. ಅಂದರೆ ಮಾನಸಿಕವಾಗಿ ಅವರ ಮನಸ್ಸುಗಳು ಒಂದಾಗಿರುತ್ತವೆ
 ಹೀಗೆ ಒಂದಾದ ಮನಸ್ಸುಗಳು ಉದ್ದೇಶ ಪೂರ್ವಕವಾಗಿಯೋ, ಅನಿವಾರ್ಯವಾಗಿಯೋ ದೂರಾಗುತ್ತವೆ. ಆಗ ಆ ಮನಸ್ಸುಗಳು ಇನ್ನೊಂದು ಮನಸ್ಸಿನೊಂದಿಗೆ ಸಮ್ಮಿಲನಗೊಳ್ಳುತ್ತವೆ. ಈಗಾಗಲೇ ಒಬ್ಬರಿಗೆ ಮನಸ್ಸು ನೀಡಿ ಬದುಕಿನ ಎಲ್ಲ ಪುಟಗಳಲ್ಲಿ ಸುಂದರ ಕಾವ್ಯ ಬರೆದಿರುತ್ತಾರೆ. ಆದರೆ, ಬದಲಾದ ಸನ್ನಿವೇಶದಿಂದ ದೇಹ ಇನ್ನೊಬ್ಬರಿಗೆ ನೀಡಲು ಅಣಿಯಾಗಬೇಕಾಗುತ್ತದೆ. ಮನಸ್ಸು ಒಬ್ಬರಿಗೆ ನೀಡಿ ದೇಹ ಇನ್ನೊಬ್ಬರಿಗೆ ನೀಡಿದರೆ ಅದಕ್ಕೇನರ್ಥ...!? ಆ ವೈವಾಹಿಕ ಜೀವನ ನಿಜವಾಗಿಯೂ ಸಾರ್ಥಕತೆ ಪಡೆದುಕೊಳ್ಳುತ್ತವೆಯೇ...?

ಕುಕ್ಕಿ ತಿನ್ನದ ಹತ್ತಿಕ್ಕಿದ ಭಾವನೆ...!!

-ನಾಗರಾಜ ಬಿ.ಎನ್
ಕರೆದಾಗ ಬಂದು ಸಂತೈಸುತ್ತದೆ
ತಲೆಯ ನೇವರಿಸುತ್ತ ಬಗಿದಪ್ಪಿ ಮುದ್ದಾಡುತ್ತದೆ
ಜೋಗುಳವ ಹಾಡಿ ಮಲಗಿಸುತ್ತದೆ
ಸದ್ದಿಲ್ಲದೆ ಸರಸರನೆ ಹೊರಟು ಹೋಗುತ್ತದೆ
ಪಾಪ... ಹತ್ತಿಕ್ಕಿದ ಭಾವನೆ ಕುಕ್ಕಿ ತಿನ್ನುವುದಿಲ್ಲ...!!
ಆಡಿ ನಲಿದ, ಕೂಡಿ ಬೆಳೆದ ವರುಷಗಳೆಷ್ಟೋ
ಕೋಪ-ತಾಪಕ್ಕೆ ಬಲಿಯಾದ ದಿನಗಳೆಷ್ಟೋ
ಜೊತೆ ಜೊತೆಯಾಗಿ ಹಣೆದ ಕನಸುಗಳೆಷ್ಟೋ
ಅವೆಲ್ಲ ರಾತ್ರಿ ಬಿದ್ದ ಕನಸುಗಳಂತಾಗಿ
ಕುಳಿರ್ಗಾಳಿಯ ಹೊಡೆತಕ್ಕೆ ಎಲ್ಲೊ ಹಾರಿ ಹೋಗಿವೆ
ಪಾಪ... ಹತ್ತಿಕ್ಕಿದ ಭಾವನೆ ಕುಕ್ಕಿ ತಿನ್ನುವುದಿಲ್ಲ...!!

ಉಸಿರಲ್ಲಿ ಉಸಿರಾಗಿ, ಸರ್ವಸ್ವವೇ ಆಗಿ
ಎರಡು ದೇಹದಲಿ ಬೆರೆತ ಒಂದೇ ಆತ್ಮವಾಗಿ
ಭಾವನೆ ಜೊತೆಯಲ್ಲಿ ಕಾಲವ ದೂಡಿ
ಮುಸ್ಸಂಜೆ ಬದುಕಿನ ಹೆಜ್ಜೆಯ ನೋಡಿ
ಅರಿವಿಲ್ಲದೆ ಸುರಿದ ಜಡಿ ಮಳೆಗೆ ಮೈಯೊಡ್ಡಿ
ಇದ್ದ-ಬಿದ್ದ ಭಾವನೆ ದೂರವಾದವಲ್ಲ
ಪಾಪ... ಹತ್ತಿಕ್ಕಿದ ಭಾವನೆ ಕುಕ್ಕಿ ತಿನ್ನುವುದಿಲ್ಲ...!!

ಭಾವ ಪರಿಧಿಯಲಿ ತನ್ನದೆಲ್ಲವ ಎಂದೆ
ಇತಿಹಾಸ ತಿಳಿದು ಯೋಗಿಯಂತಾದೆ
ಇರುವುದ ಬಿಟ್ಟು ಇರದುದರೆಡೆ ಜಾರಿದೆ
ಭಾವ ಸಾಗರದಿ ಮುಳುಗುತ್ತಲೇ ಹೋದೆ
ಚಿತ್ತ ಸಮಾಧಿಯಾಗಿ, ನೆನಪಾಗಷ್ಟೇ ಉಳಿದೆ
ಪಾಪ... ಹತ್ತಿಕ್ಕಿದ ಭಾವನೆ
ಕೊನೆಗೂ ಕುಕ್ಕಿ ತಿನ್ನಲೇ ಇಲ್ಲ...!!

ಬರ ಸಿಡಿಲು ಎರಗಿದಾಗ......!!

ತೇನ ವಿನಾ ತೃಣಮಪಿ ನ ಚಲತೆ...

ಇತ್ತ ಮನೆಯಲ್ಲಿ ಆತಂಕ ಮಡುಗಟ್ಟಿತ್ತು. ಯಜಮಾನನ ಹೆಂಡತಿ ಒಂದೇ ಸಮನೆ ಅಳುತ್ತ, ಕಣ್ಣೆಲ್ಲ ಕೆಂಪಾಗಿಸಿಕೊಂಡಿದ್ದಳು. ಹೊಸ ಮನೆಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಆನಂದ ಭಾಷ್ಪ ಹರಿಸಬೇಕಾದ ಕಣ್ಣಾಲಿಗಳು, ದುಃಖದಿಂದ ಕಣ್ಣೀರ ಹೊಳೆಯನ್ನು ಹರಿಸುತ್ತಿತ್ತು. ಇಪ್ಪತ್ತು ವರ್ಷಗಳಿಂದ ಕಂಡ ಕನಸು ನನಸಾಗೋ ಅಂತಿಮ ಕ್ಷಣದಲ್ಲಿ, ಅನಿರೀಕ್ಷಿತವಾಗಿ ಬಂದೆರಗಿದ ಬರಸಿಡಿಲು ಬದುಕನ್ನೇ ಹಿಂಡಿ-ಹಿಪ್ಪೆ ಮಾಡಿದಂತಿತ್ತು
ವಿಪರ್ಯಾಸ... ನೋವು... ನಿರಾಶೆ... ದುಃಖ... ಕಣ್ಣಿರು... ಸಾಂತ್ವನ... ಹತಾಶೆ... ಇವುಗಳ ನಡುವೆಯೇ ಭಗವಂತನಲ್ಲಿ ಆರ್ತ ಮೊರೆ...!!
ಅದೊಂದು ಅಪೂರ್ವ ಸಂಗಮ. ಅಲ್ಲಿದ್ದ ಪ್ರತಿಯೊಬ್ಬರಲ್ಲೂ ಸಂಭ್ರಮ-ಉತ್ಸಾಹ ಎಲ್ಲೆ ಮೀರಿತ್ತು. ತಳಿರು-ತೋರಣಗಳಿಂದ ಮನೆ ಸಿಂಗಾರಗೊಂಡು ಮಧುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ವಿದ್ಯುದ್ದೀಪಗಳ ಬೆಳಕು ಕಣ್ಮನಗಳನ್ನು ಸೂರೆಗೊಳಿಸುತ್ತಿತ್ತು. ಮನೆ-ಮಂದಿಯೆಲ್ಲ ಹಿರಿಹಿರಿ ಹಿಗ್ಗುತ್ತ ಅತ್ತಿಂದಿತ್ತ ಓಡಾಡುತ್ತಿದ್ದರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಅದು ಸ್ವರ್ಗಕ್ಕೆ ಕಿಚ್ಚು ಹಚ್ಚುವ ವಾತಾವರಣ...!!
ಇನ್ನೇನು ಬೆಳಕು ಹರಿದರೆ ಸಾಕು, ಕನಸಿನ ಮನೆಗೆ ಪ್ರವೇಶ ಮಾಡುವ ನಾಂದಿ ಕಾರ್ಯಕ್ರಮಕ್ಕೆ ಚಾಲನೆ. ಪೂರ್ವ ನಿಯೋಜಿತವಾಗಿ ಎಲ್ಲ ಕಾರ್ಯಗಳು ಮುಗಿದಿದ್ದವು. ನೆಂಟರಿಷ್ಟರು ಒಂದೆಡೆ ಸೇರಿ ರಾತ್ರಿ 12ರ ವರೆಗೂ ಹರಟೆ ಹೊಡೆಯುತ್ತಿದ್ದರು. ಅಷ್ಟರಲ್ಲಾಗಲೇ ಅಲ್ಲೆ, ಪಕ್ಕದಲ್ಲಿ ಕುಳಿತ ಮನೆ ಯಜಮಾನ ಚಿಕ್ಕದಾಗಿ ಕೆಮ್ಮಲು ಪ್ರಾರಂಭಿಸಿದ. ಆ ಕೆಮ್ಮು ನಿಧಾನವಾಗಿ ಹೆಚ್ಚುತ್ತ ಹೋಯಿತು. ನೋಡು ನೋಡುತ್ತಿದ್ದಂತೆ ವಾಂತಿ ಮಾಡಲಾರಂಭಿಸಿದ. ಹರಟೆಯಲ್ಲಿ ತೊಡಗಿದ್ದ ನೆಂಟರೆಲ್ಲ ಗಾಬರಿಯಾದರು. ಕಾರ್ಗತ್ತಲ ರಾತ್ರಿಯಲ್ಲಿ ಗರ ಬಡಿದವರಂತಾದ ಮನೆಯವರು ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಿದರು. ಅವರನ್ನು ಕೂಲಕಂಷವಾಗಿ ಪರೀಕ್ಷಿಸಿದ ವೈದ್ಯರು ಹೃದಯದಲ್ಲಿ ಹೋಲ್ ಆಗಿದೆ. ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಸಲಹೆ ನೀಡಿದರು.
ಇತ್ತ ಮನೆಯಲ್ಲಿ ಆತಂಕ ಮಡುಗಟ್ಟಿತ್ತು. ಯಜಮಾನನ ಹೆಂಡತಿ ಒಂದೇ ಸಮನೆ ಅಳುತ್ತ, ಕಣ್ಣೆಲ್ಲ ಕೆಂಪಾಗಿಸಿಕೊಂಡಿದ್ದಳು. ಹೊಸ ಮನೆಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಆನಂದ ಭಾಷ್ಪ ಹರಿಸಬೇಕಾದ ಕಣ್ಣಾಲಿಗಳು, ದುಃಖದಿಂದ ಕಣ್ಣೀರ ಹೊಳೆಯನ್ನು ಹರಿಸುತ್ತಿತ್ತು. ಇಪ್ಪತ್ತು ವರ್ಷಗಳಿಂದ ಕಂಡ ಕನಸು ನನಸಾಗೋ ಅಂತಿಮ ಕ್ಷಣದಲ್ಲಿ, ಅನಿರೀಕ್ಷಿತವಾಗಿ ಬಂದೆರಗಿದ ಬರಸಿಡಿಲು ಬದುಕನ್ನೇ ಹಿಂಡಿ-ಹಿಪ್ಪೆ ಮಾಡಿದಂತಿತ್ತು. ಹೊಸ ಮನೆಯ ಪ್ರವೇಶದ ಉತ್ಸಾಹದಲ್ಲಿ ಪಾಲ್ಗೊಳ್ಳಲು ಬಂದ ಸಂಬಂಧಿಗಳ ಹೃದಯಗಳೆಲ್ಲ ಆದ್ರಗೊಂಡಿತ್ತು.ಕಂಡ-ಕಂಡ ದೇವರಿಗೆ ಸಾಲು ಸಾಲಾಗಿ ಮೆರವಣಿಗೆ ರೂಪದಲ್ಲಿ ಪ್ರಾರ್ಥನೆಗಳು ಹೋಗುತ್ತಿದ್ದವು. ಹರಕೆಗಳನ್ನು ಹೊತ್ತು ಕರಗಳನ್ನು ಜೋಡಿಸಿ, ಎದುರಾದ ಸಂಕಷ್ಟ ದೂರಮಾಡಪ್ಪ ಎಂದು ಮೊರೆಯಿಡುತ್ತಿದ್ದರು. ಅಳುವ ಮನಸ್ಸುಗಳಿಗೆ ಸಾಂತ್ವನ ಹೇಳುವ ಪ್ರಬುದ್ಧ ಜೀವಗಳು ಅಲ್ಲಿದ್ದು, ಧೈರ್ಯ ತುಂಬುತ್ತಿದ್ದವು.
ದೈವಿಚ್ಛೆಯೋ.... ಪ್ರಾರ್ಥನೆಯ ಫಲವೋ.... ಬಂಧುಗಳ ಆರ್ತ ಮೊರೆಯೋ.... ಏನೋ, ಆಸ್ಪತ್ರೆಯಲ್ಲಿ ದಾಖಲಾದ ಯಜಮಾನ ನಿಧಾನವಾಗಿ ಚೇತರಿಕೊಳ್ಳಲಾರಂಭಿಸಿದ. ಅನ್ನಾಹಾರ ತಿನ್ನುತ್ತ, ಗೆದ್ದು ಬಂದೆ ಎನ್ನುವ ಸಂತಸವನ್ನು ಮೊಗದಲ್ಲಿ ಕಾಣಿಸುತ್ತಿದ್ದ. ಆ ಸುದ್ದಿ ಇತ್ತ ಕಿವಿಗೆ ಅಪ್ಪಳಿಸುತ್ತಿದ್ದಂತೆ, ತುಪ್ಪದ ದೀಪಗಳು ದೇವರ ಮುಂದೆ ಪ್ರತ್ಯಕ್ಷವಾದವು. ದುಃಖದ ಕಣ್ಣೀರಿನಿಂದ ತೇವವಾದ ಕಣ್ಣಾಲಿಗಳು, ಆನಂದ ಭಾಷ್ಪ ಹರಿಸುತ್ತಿದ್ದವು.
ಅನಿವಾರ್ಯವೆಂಬಂತೆ ಮನೆಯ ಪ್ರವೇಶವನ್ನು ಮುಂದೂಡಲಾಗಿದೆ. ಒಂದೆಡೆ ಸೇರಿದ ನೆಂಟರಿಷ್ಟರೆಲ್ಲ ತಮ್ಮ ತಮ್ಮ ಮನೆಗೆಳಿಗೆ ವಾಪಸ್ಸಾಗಿದ್ದಾರೆ. ಯಜಮಾನ ಗುಣಮುಖನಾಗಿ ಮನೆಗೆ ಬಂದ ಮೇಲೆ `ಮನೆ ಪ್ರವೇಶ'ದ ದಿನವನ್ನು ನಿಗದಿ ಮಾಡಲು ನಿರ್ಧರಿಸಲಾಗಿದೆ. ಈ ಬಂಧು-ಬಾಂಧವರ ಜೊತೆ ಆಪ್ತೇಷ್ಟರೂ ಕೂಡಾ ಮುಂದೂಡಿದ `ಮನೆ ಪ್ರವೇಶ'ಕ್ಕೆ ಜೊತೆಯಾಗಲಿದ್ದಾರೆ. ಸಂಭ್ರವ, ಸಂತೋಷ, ಉತ್ಸಾಹ ಇನ್ನೊಮ್ಮೆ ತುಂಬಿ ತುಳಕಲಿದೆ. ಆ ಕುಟುಂಬ ನೂರ್ಕಾಲ ಸುಖ-ಸಂತೋಷದಿಂದ ನೂತನ ಮನೆಯಲ್ಲಿ ಬದುಕಿ ಬಾಳಿ ಎಂದು ಹರಸಿ ಹಾರೈಸೋಣ....!!