ಬುಧವಾರ, ಜನವರಿ 25, 2017

ಕರುಳ ಕುಡಿ ಇನ್ನಿಲ್ಲದಾಗ...
ಹಸಿ-ಹಸಿ ಕನಸುಗಳು ಇನ್ನೂ ಕಣ್ಮುಂದೆಯೇ ಇವೆ. ಇನ್ನೇನು ಆ ಕನುಸುಗಳೆಲ್ಲ ನನಸಾಯಿತು ಎನ್ನುವಷ್ಟರಲ್ಲಿಯೇ ಬಹುದಿನಗಳಿಂದ 'ಅತ್ಮ'ವನ್ನು ಕಾಡುತ್ತಿದ್ದ 'ಹತ್ಯೆ' ಧುತ್ತೆಂದು ಎದುರಾಗಿಯೇ ಬಿಟ್ಟಿತು. ಕ್ಷಣಾರ್ಧದಲ್ಲಿ ಎಲ್ಲವೂ ಶಾಂತ. ಸ್ಮಶಾನ ಮೌನ...!!
ಎದೆಗೆ ಒದ್ದ ಪುಟ್ಟ ಕಾಲುಗಳು, ಕಿರುಬೆರಳ ಹಿಡಿದು ನಡೆದ ದಾರಿ, ಎದೆ ಹಾಲು ಹೀರಿದ ಆ ಚೆಂದುಟಿ, 'ಅಮ್ಮಾ' ಎಂದು ಕರೆದ ಮಮತೆಯ ಕೂಗು.... ಎಲ್ಲವೂ ಆ ತಾಯಿಯ ಕಣ್ಮುಂದೆ ಮೆರವಣಿಗೆ ಹೊರಟಿವೆ.

'ಹೋಗಿ ಬರುತ್ತೇನೆ ಅಮ್ಮಾ...' ಎಂದು ಪಾದಕ್ಕೆರಗಿ ಹೊಸ್ತಿಲು ತುಳಿದ ಮಗ, ಕಾಣದ ಲೋಕಕ್ಕೆ ಪಯಣಿಸಿದ್ದ. ಆತ ತುಳಿದು ಹೋದ ಹೆಜ್ಜೆ ಗುರುತು ಮುಸ್ಸಂಜೆಯ ಬೆಳಕಿಗೆ ಅಸ್ಪಷ್ಟವಾಗಿ ಗೋಚರಿಸುತ್ತಿದೆ.
ಅತ್ತು, ಗೋಗರೆದು ತನು-ಮನವೆಲ್ಲ ನಿತ್ರಾಣವಾಗಿದೆ. ಕಣ್ಣಂಚಿನಿಂದ ಒಂದೇ ಒಂದು ಹನಿ ಕೂಡಾ ಉರುಳುತ್ತಿಲ್ಲ. ಎದೆಯಾಳ ಬತ್ತಿ, ಬಂಜರು ಭೂಮಿಯಂತಾಗಿದೆ.
ಬೆಚ್ಚನೆಯ ಮಡಿಲಲ್ಲಿ ಮಲಗಿರುತ್ತಿದ್ದ ಮಗ, ಈಗ ಚಿತೆಯ ಮೇಲೆ ನಿಸ್ತೇಜ. ಉಸಿರಿಲ್ಲದ ದೇಹಕ್ಕೆ ಬಿಳಿಯ ಹೊದಿಕೆ. ಇದ್ದಾಗ ಇಲ್ಲದ ಹಾರ-ತುರಾಯಿ, ಈಗ ಮುಖವೂ ಕಾಣಿಸದೆ ತುಂಬಿಕೊಂಡಿವೆ. ಒಂದು ಕಡೆ ಸಂಬಂಧಿಗಳ ರೋದನ, ಇನ್ನೊಂದು ಕಡೆ ಸಮಯ ಮೀರುತ್ತಿದೆ ಎನ್ನುವ 'ಸುಡುವ' ಮಾತು.
ಒಂದರೆ ಘಳಿಗೆ.... ಆತ್ಮವೇ ಇಲ್ಲದ ದೇಹ, ಪಂಚಭೂತಗಳಲ್ಲಿ ಲೀನ, ಎಲ್ಲವೂ ನೋಡು ನೋಡುತ್ತಲೇ!
ಅರೆ, ಒಂಬತ್ತು ತಿಂಗಳು ಗರ್ಭದಲ್ಲಿದ್ದು, ಪ್ರಸವದಲ್ಲಿ ನೋವನ್ನು ಉಂಡು, ಅಳುವ ದನಿ ಕೇಳಿದಾಗ 'ನೋವು ಮರೆತವಳು' ನಾನಲ್ಲವೇ!
ಪುಟ್ಟ ಹೆಜ್ಜೆಯನ್ನಿಟ್ಟು, ಅಂಗಳದ ರಂಗವಲ್ಲಿಯ ಅಳಿಸಿ ಹಿರಿಹಿರಿ ಹಿಗ್ಗಿದವನು ಇವನಲ್ಲವೇ!
ಹೌದು, ಕರಿಮಣಿ ಮಾಲೀಕನ ಹಿಂಸೆಗೆ ನಲುಗಿದಾಗ, ಕಾರ್ಗತ್ತಲ ಇರುಳಿನಲಿ ಒಬ್ಬಂಟಿಯಾದಾಗ, 'ಅಮ್ಮಾ' ಅನ್ನೋ ಒಂದೇ ಪದದಿಂದ ನೋವ ಮರೆಸಿದವನು ಇವನೇ! ಕರುಳ ಕುಡಿಯಾದರೂ ಆತ್ಮ ಬಂಧುವಿನಂತಾದವನು, ಆತ್ಮ ಸಖನೇ ಆದವನು, ನನ್ನಾತ್ಮವೇ ಆದವನು.
ಹ್ಹ...ಹ್ಹ........... ಹ್ಹ
ಆತ್ಮ, ಆತ್ಮ ಸಖ, ಆತ್ಮ ಬಂಧು.... ಕಣ್ತೆರೆಯುವ ಮೊದಲೇ ಆತ್ಮಾರ್ಪಣೆ ಮಾಡಿದನೆ? ಹತ್ಯೆಯಾಗದ ಆತ್ಮ, ಹತ್ಯೆಯ ಕರಾಳ ಮೊನಚಿಗೆ ಸಿಲುಕಿತೆ?
ಭವಿಷ್ಯದ ಕೈಯ್ಯಲ್ಲಿ ಭೂತದ ನರ್ತನ, ಕಾರಿರುಳ ಮಾರ್ಗದಲಿ ಮಿಂಚುಳ್ಳಿಯ ಬೆಳಕು. ಎಷ್ಟು ದೂರ ಸಾಗಬಲ್ಲೆ? ಇರುಳಿನ ಪರದೆ ಸರಿದು ಬೆಳಕು ಹರಿಯುತ್ತದೆ. ಮತ್ತದೆ 'ಆತ್ಮ' ಬಂದೆನ್ನ ಕಾಡುತ್ತದೆ. ನೆತ್ತಿಯ ಮೇಲೆ ಸುಡು ಸೂರ್ಯ. ದೂರದಲ್ಲೆಲ್ಲೋ ಬಿಸಿಲ್ಗುದುರೆ. ಮತ್ತೆ ಆವರಿಸುತ್ತದೆ ಸದ್ದಿಲ್ಲದೆ ಇರುಳು.
'ಹೋಗಿ ಬರುತ್ತೇನೆ' ಎಂದು ಹೊಸಿಲು ತುಳಿದ ಮಗ. ಭರವಸೆಯ ಬೆಳಕು ಕ್ಷಣ ಕ್ಷಣಕೂ ಕ್ಷೀಣ. ಹುಚ್ಚು ಭರವಸೆಯ ಕಿರಣ, ಅಮಾವಸ್ಯೆಯಲಿ ಬೆತ್ತಲು. ಬದಲಾಯ್ತು ಬದುಕು, ಬರಲಿಲ್ಲ ಆತ್ಮ.......!!!!
-ನಾಗರಾಜ್ ಬಿ.ಎನ್. 

ಶನಿವಾರ, ಜನವರಿ 7, 2017

ವಲಸೆಯ ಬಂಡಿ ಉರುಳಿದಾಗ......
'ಗೇಣುದ್ದ ಹೊಟ್ಟೆ ತುಂಬಿಸಿಕೊಳ್ಳಲು ಊರು ತೊರೆಯುತ್ತಿದ್ದೇವೆ ಎನ್ನುವ ಚಿಕ್ಕ ನೋವು ಬಿಟ್ಟರೆ, ನಮ್ಮದು ತುಂಬು ಕುಟುಂಬ. ಸಂಪಾದಿಸಿದ ಅಷ್ಟೋ ಇಷ್ಟೋ ಹಣದಲ್ಲಿ ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ಸಮಾನವಾಗಿ ತಿನ್ನುತ್ತೇವೆ. ಕೂಡಿ ಬಾಳುತ್ತೇವೆ. ನೆಮ್ಮದಿಯ ಬದುಕಿಗೆ ಇನ್ನೇನು ಬೇಕು?'
ಸುರಪುರ ತಾಲೂಕಿನಿಂದ ವಲಸೆ ಹೊರಟ ಕುಟುಂಬವೊಂದರ ಯಜಮಾನನ ಮಾತಿತು. ಶನಿವಾರ ಶಿರಸಿಯಿಂದ ಹುಬ್ಬಳ್ಳಿಗೆ ಬೈಕ್ ಮೇಲೆ ಬರುವಾಗ ಮುಂಡಗೋಡ ಸನಿಹ ಈ ವಲಸೆ ಕುಟುಂಬ ಎದುರಾಯಿತು. ಮೊದಲೇ ಹೆಗಲಿಗೆ ನೇತಾಡುತ್ತಿದ್ದ ಕ್ಯಾಮರಾ, ದೂರದಿಂದಲೇ ಚಕ್ಕಡಿ ಮೇಲೆ ಸಾಲಾಗಿ ಬರುತ್ತಿದ್ದ 'ವಲಸೆ' ಚಿತ್ರವನ್ನು ಸೆರೆಹಿಡಿಯಲು ಪ್ರಯತ್ನಿಸಿತು. ಹತ್ತಿರ ಬರುತ್ತಿದ್ದಂತೆ ಅವರನ್ನು ಮಾತನಾಡಿಸಿದಾಗ, ಕುಟುಂಬದ ಯಜಮಾನ ಹತ್ತು ನಿಮಿಷ ನನಗಾಗಿ ಮೀಸಲಿಟ್ಟ. ಆ ಸೀಮಿತ ಸಮಯದಲ್ಲಿ ನಾ ಮಾತಾಡಿದ್ದು 'ಎಲ್ಲಿಂದ ಬಂದಿದ್ದು? ಯಾಕೆ?' ಎನ್ನು ಎರಡೇ ಎರಡು ಮಾತು. ಅದು ಕೂಡಾ ಒಂದೋ, ಎರಡು ಸೆಕೆಂಡ್. ಉಳಿದದ್ದೆಲ್ಲ ಆತನದ್ದೇ ಮಾತು... ಮಾತು....!
 ಯಜಮಾನನ ಹೆಸರು ಭರಮಪ್ಪ ಚನ್ನಬಸಪ್ಪ. ಸುರಪುರದ ಬಿದೊಡ್ಡಿ ಅನ್ನೋ ಪುಟ್ಟ ಕುಗ್ರಾಮದಲ್ಲಿ ವಾಸ. ಅಣ್ಣ, ತಮ್ಮ, ಅಕ್ಕ ಹಾಗೂ ಅವರ ಸಂಸಾರವೆಂದು ಹದಿಮೂರು ಜನರಿರುವ ತುಂಬು ಕುಟುಂಬ. 36 ಎಕರೆ ಹೊಲವಿರುವ ವಾರಸ್ದಾರ. ಜೋಳ, ಸೂರ್ಯಕಾಂತಿ ಮತ್ತಿನ್ಯಾವುದೋ ಎರಡು ಬೆಳೆ ಬೆಳೆದಿದ್ದನಂತೆ. ಮೊದಲೇ ಬಿಸಿಲು ನಾಡು... ಮಳೆಯೂ ಇಲ್ಲದ ಕಾರಣ ಅವೆಲ್ಲ ಮೊಳಕೆಯೂ ಬರದೆ ಬಿತ್ತಿದ್ದಲ್ಲಿಯೇ ಸುಟ್ಟು ಕರಕಲಾಯ್ತಂತೆ. ತುಂಬ ಕುಟುಂಬ ಊರಲ್ಲೇ ಇದ್ದರೆ ಸಂಸಾರ ಅಸಾಧ್ಯ ಎಂದರಿತ ಆತ, ಊರು ಬಿಡಲು ನಿರ್ಧರಿಸಿ ಕುಟುಂಬದವರ ಜೊತೆ ಚರ್ಚಿಸಿ ಹದಿನೈದು ದಿನದ ಹಿಂದೆ, ಕುಟುಂಬ ಸಮೇತನಾಗಿ ವಲಸೆ ಬಂದಿದ್ದಾನೆ.
ತಮ್ಮ ಪಯಣದ ಗಮ್ಯ ಎಲ್ಲಿಗೆ ಎನ್ನುವುದು ಆ ಕುಟುಂಬಕ್ಕೆ ಗೊತ್ತಿಲ್ಲ. ಬರುವಾಗ ಮನೆಯಲ್ಲಿದ್ದ ಒಂದಿಷ್ಟು ಅಕ್ಕಿ, ಕಾಳು, ಕಡಿಗಳನ್ನು ಹೊತ್ತುಕೊಂಡು ಚಕ್ಕಡಿಗೆ ಹಾಕಿಕೊಂಡು ಬಂದಿದ್ದಾರೆ. ಸಾಯಂಕಾಲವಾಗುತ್ತಿದ್ದಂತೆ ಎಲ್ಲಿ ತಲುಪಿದ್ದಾರೋ ಅದೇ ಊರಲ್ಲಿ ಟೆಂಟ್ ಕಟ್ಟಿಕೊಂಡು, ಬಯಲಲ್ಲಿಯೇ ಅಡುಗೆ ಮಾಡಿ ಅಲ್ಲಿಯೇ ರಾತ್ರಿ ಬೆಳಗು ಮಾಡುತ್ತಾರೆ. ಮುಂಜಾನೆ ಕಿರಣ ಭೂಮಿ ಸ್ಪರ್ಶಿಸುತ್ತಿದ್ದಂತೆ, ಮತ್ತೆ ದಾರಿ ಕಾಣದ ಹಾದಿಯಲ್ಲಿ ಬಂಡಿಯ ಚಕ್ರಗಳು ಉರುಳುತ್ತವೆ, ಬದುಕಿನ ಚಕ್ರ ಉರುಳಿದಂತೆ.
ವಿಶೇಷವೆಂದರೆ ಈ ಕುಟುಂಬ ಕಮ್ಮಾರಿಕೆ ಕಾರ್ಯದಲ್ಲೂ ನಿಪುಣವಿದೆ ಎನ್ನುವುದು. ಇದೇ ಧೈರ್ಯ ಹಾಗೂ ಆತ್ಮವಿಶ್ವಾಸ ವಲಸೆ ಕುಟುಂಬದ ಯಜಮಾನನಿಗೆ. ಆ ಕುಟುಂಬದ ಪಯಣ ಮಲೆನಾಡ ದಿಕ್ಕಿನತ್ತ ಇರುವುದರಿಂದ, ಅಲ್ಲಿಯ ರೈತಾಪಿ ವರ್ಗದವರ ನೇಗಿಲು, ಕತ್ತಿ, ಕೊಡಲಿ, ಹಾರಿ, ಪಿಕಾಸುಗಳಂತ ಸಾಮಗ್ರಿಗಳಿಗೆ ಈ ಸಮಯದಲ್ಲಿ ಒಂದಿಷ್ಟು ಹದ ಹಾಕಬೇಕಾಗುತ್ತದೆ. ಸೂಕ್ತ ಗ್ರಾಮಕ್ಕೆ ಹೋಗಿ ಅಲ್ಲಿಯೇ ಒಂದಿಷ್ಟು ದಿನ, ವಾರವೋ ಉಳಿದು ಸಂಸಾರದ ನೊಗ ಹೊರುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಆತನ ಮಾತಿನಿಂದಲೂ ತಿಳಿದು ಬಂದ ಅಂಶ.
ಏಳು ಎತ್ತಿನ ಬಂಡಿಯಲ್ಲಿ ಹದಿಮೂರು ಜನರಷ್ಟೇ ಪಯಣಿಸುತ್ತಿಲ್ಲ. ಆ ಪಯಣದಲ್ಲಿ ಎರಡು ನಾಯಿ, ನಾಲ್ಕು ಕುರಿ, ಐದು ಕೋಳಿಗಳು ಸಹ ಕಾಣದ ಊರಿನತ್ತ ಮುಖ ಮಾಡಿವೆ. ಎತ್ತುಗಳಿಗೆ ಸಾಕಾಗುವಷ್ಟು ಹುಲ್ಲುಗಳನ್ನು ಒಂದು ಚಕ್ಕಡಿಯಲ್ಲಿ ತುಂಬಿಸಿಕೊಂಡಿದ್ದಾರೆ. ಹಾಸಿಗೆ, ದಿಂಬು, ಪಾತ್ರೆ, ಬಿಂದಿಗೆ, ಕೊಡ, ವಸ್ತ್ರ ಹೀಗೆ ಬದುಕಲು ಏನೇನು ಬೇಕೋ ಎಲ್ಲವೂ ಇನ್ನುಳಿದ ಆರು ಚಕ್ಕಡಿಯಲ್ಲಿ ತುಂಬಿವೆ. ಹಗಲಿನ ಹಾದಿಯಲ್ಲಿ ಹೆಂಗಸರು, ಮಕ್ಕಳು ವಿಶ್ರಮಿಸಲೆಂದು ಚಾಪೆಯನ್ನು ಹಾಸಲಾಗಿದೆ. ಒಂದು ವೇಳೆ ರಾತ್ರಿ ಪಯಣಿಸಬೇಕಾದರೆ ಯಾವುದಕ್ಕೂ ಇರಲಿ ಎಂದು, ಕಂದೀಲುಗಳನ್ನು ಸಹ ವ್ಯವಸ್ಥೆ ಮಾಡಿಟ್ಟುಕೊಂಡಿದ್ದಾರೆ.
'ತುತ್ತು ಕೂಳಿಗಾಗಿ ಮನೆ ಬಿಟ್ಟು ಬಂದಿರಬಹುದು. ಆದರೆ ನಾವು(ಅಣ್ಣ-ತಮ್ಮ) ಪ್ರೀತಿ ವಿಶ್ವಾಸದಿಂದ ಕೂಡಿ ಬಾಳುತ್ತಿದ್ದೇವೆ. ಸಂಪಾದಿಸಿದ ಒಂದಿಷ್ಟು ಹಣದಲ್ಲಿ ಎಲ್ಲರೂ ಹಂಚಿಕೊಂಡು ತೃಪ್ತಿಯಿಂದ ನಗುತ್ತೇವೆ. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕುವ ಶಕ್ತಿ ನಮ್ಮ ಅಣ್ಣ-ತಮ್ಮರಿಗಿಲ್ಲ. ಹೆಣ್ಣು ಮಕ್ಕಳು ದೊಡ್ಡವರಾಗುತ್ತಿದ್ದಾರೆ. ಬೇಸಿಗೆ ಬರುವವರೆಗೆ ವಲಸೆ ಇರುತ್ತೇವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ಊರಿನ ಕಡೆ ಮುಖ ಮಾಡುತ್ತೇವೆ. ಎಲ್ಲವೂ ಭಗವಂತನ ಚಿತ್ತ. ಇರುವಷ್ಟು ದಿನ ಮನೆ&ಮಂದಿಯೊಂದಿಗೆ ಪ್ರೀತಿಯಿಂದ ನಗುತ್ತ ಬದುಕುವುದಷ್ಟೇ ನಮಗೆ ಗೊತ್ತು' ಎನ್ನುವುದು ಭರಮಪ್ಪನ ಬದುಕಿನ ಮಾತು.

ನಿಜಕ್ಕೂ ಆ ಕ್ಷಣದಲ್ಲಿ ಕಣ್ಣಾಲಿಗಳು ತೇವಗೊಂಡವು. ಹೊಟ್ಟೆಗೆ ಕೂಳಿಲ್ಲದಿದ್ದರೂ ಸಂತೃಪ್ತಿಯಿಂದ ಕುಟುಂಬದವರೊಂದಿಗೆ ಹೇಗೆ ಬದುಕಬೇಕೆನ್ನುವ ನೀತಿ ಪಾಠ ಭರಮಪ್ಪ ಹೇಳಿದ್ದ....... 

ಬುಧವಾರ, ಡಿಸೆಂಬರ್ 21, 2016

ಮಸ್ಟ್ ರೀಡ್......
ಮಾನವ ಕಳ್ಳಸಾಗಾಣಿಕೆ ಉದ್ಯಮದ ಬೆನ್ನು ಮೂಳೆಯೇ ಮುರಿಯಿತು...!

ನೋಟು ಅಪಮೌಲ್ಯೀಕರಣದ ಕುರಿತು ಯಾರು ಎಷ್ಟೇ ವಿರೋಧಿಸಲಿ. ಬೊಬ್ಬಿರಿದು ಬಾಯಿ ಬಡಿದುಕೊಳ್ಳಲಿ. ಮನಸ್ಸೋ ಇಚ್ಛೆಯಾಗಿ ಬೈದುಕೊಳ್ಳಲಿ. ಆದರೆ, ಮಾನವೀಯತೆಯ ಒಳಗಣ್ಣಿನಿಂದ ನೋಡಿದಾಗ, ಸೂಕ್ಷ್ಮವಾಗಿ ಅವಲೋಕಿಸಿದಾಗ ಎಷ್ಟೋ... ಎಷ್ಟೋ.... ಸಾವಿರ ಲೆಕ್ಕಾಚಾರದಲ್ಲಿ ನನ್ನ ಅಕ್ಕ, ತಂಗಿಯರು ಜತನವಾಗಿದ್ದಾರೆ. ಭಯಾನಕ ಕೂಪದೊಳಗೆ ಬಲವಂತವಾಗಿ ಬೀಳುವಂತ ಸನ್ನಿವೇಶದಿಂದ ತಪ್ಪಿಸಿಕೊಂಡಿದ್ದಾರೆ!

Yes... ಮಾನವ ಕಳ್ಳ ಸಾಗಾಣಿಕೆಯಿಂದ ಪ್ರತಿವರ್ಷ ಸಾವಿರಾರು ಅಪ್ರಾಪ್ತೆಯರು ವೇಶ್ಯಾವಾಟಿಕೆ ಗೃಹಕ್ಕೆ ನೂಕಲ್ಪಡುತ್ತಿದ್ದರು. ದೇಶಾದ್ಯಂತ ವ್ಯಾಪಿಸಿರುವ ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ನಮ್ಮ ಸುತ್ತ ಮುತ್ತಲಿರುವ ಪುಟ್ಟ ಪುಟ್ಟ ಕಂದಮ್ಮಗಳೇ ಸಿಲುಕುತ್ತಿದ್ದವು. ಶಾಲೆಗೆ ಹೋಗುವಾಗ, ಬರುವಾಗ ಅವರನ್ನು ಅಪಹರಿಸುವುದು, ಬಡ ಮಕ್ಕಳಿಗೆ ಆಮೀಷ ತೋರಿಸಿ ಕರೆದೊಯ್ಯುವುದು, ಕೆಲಸದ ನೆಪದಲ್ಲಿ ಕರೆದುಕೊಂಡು ಹೋಗುವುದು....  ಹೀಗೆ ನಾನಾ ವಿಧದಲ್ಲಿ ಇನ್ನೂ ವಯಸ್ಸಿಗೆ ಬರದ ಹೆಣ್ಣು ಮಕ್ಕಳನ್ನು ದುರುಳರು ಹೊತ್ತೊಯ್ಯುತ್ತಿದ್ದರು. ದೆಲ್ಲಿ, ಓರಿಸ್ಸಾ, ಮುಂಬೈ ಸೇರಿದಂತೆ ಬಾಂಗ್ಲಾ, ನೇಪಾಳದಂತಹ ಹೊರ ರಾಷ್ಟ್ರಗಳಿಗೂ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಸಾಗಾಣಿಕೆ ಮಾಡುತ್ತಿದ್ದರು. ಹೊಸವರ್ಷದ ಹಿನ್ನೆಲೆಯಲ್ಲಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಳ್ಳ ಸಾಗಾಣಿಕೆ ವ್ಯವಹಾರ ಎಲ್ಲೆ ಮೀರುತ್ತಿತ್ತು. ಆದರೆ, ನವೆಂಬರ್ 8ರ ನಂತರ ಈ ವ್ಯವಹಾರ ಸಂಪೂರ್ಣ ನೆಲಕಚ್ಚಿದೆ! ಇದ್ದ ಬಿದ್ದ ವೇಶ್ಯಾಗೃಹಗಳೆಲ್ಲ ಅರಚಾಟ, ಗೂಗಾಟಗಳಿಂದ ಶಾಂತವಾಗಿದೆ. ಗಬ್ಬೆದ್ದು ನಾರುತ್ತಿದ್ದ ಹಾಸಿಗೆ, ದಿಂಬುಗಳೆಲ್ಲ ಮತ್ತಷ್ಟು ನಾರುತ್ತ, ಧೂಳು ತಿನ್ನುತ್ತ ಬಿದ್ದಿವೆ! ಕಾರಣ 500, 1000 ಮುಖಬೆಲೆಯ ನೋಟುಗಳ ಅಪಮೌಲ್ಯ!
ಇಂತಹ ವಿಭಿನ್ನ ದೃಷ್ಟಿಕೋನದ ಮಾಹಿತಿಯೊಂದನ್ನು POST.COM ಹೊರಹಾಕಿದೆ.

ಕಳ್ಳ ಸಾಗಾಣಿಕೆ ವ್ಯವಹಾರದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿಗೇ ಹೆಚ್ಚು ಬೇಡಿಕೆ. 10 ರಿಂದ 12 ವರ್ಷದ ಒಳಗಿನ ಮಕ್ಕಳಿಗೆ 5 ಲಕ್ಷ ರು. ನಿಗದಿ ಪಡಿಸಿದರೆ, 13 ರಿಂದ 15 ವರ್ಷದೊಳಗಿನ ಮಕ್ಕಳಿಗೆ 4 ಲಕ್ಷ ರು.  ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ 3, 2 ಲಕ್ಷ ರು.ನಂತೆ ವೇಶ್ಯಾಗೃಹದ ಮಾಲೀಕರಿಗೆ ಮಾರಾಟ ಮಾಡುತ್ತಾರೆ. ಅವರನ್ನು ಖರೀದಿಸಿದ ಮಾಲೀಕರು ಬಲವಂತವಾಗಿ ವೇಶ್ಯಾವೃತ್ತಿಗೆ ನೂಕುತ್ತಾರೆ. ಒಂದು ವೇಳೆ ತಪ್ಪಿಸಿಕೊಳ್ಳಲೇನಾದರೂ ಪ್ರಯತ್ನಿಸಿದರೆ ಕ್ರೂರವಾದ ಶಿಕ್ಷೆಗೆ ಒಳಪಡಿಸುತ್ತಾರೆ. ಇನ್ನೂ ಪ್ರಪಂಚದ ಅರಿವಿಲ್ಲದ ಮುಗ್ಧ ಕಂದಮ್ಮಗಳು ದುರುಳ ಹಣದಾಸೆಗೆ ತಮ್ಮ ಬದುಕನ್ನು ಒತ್ತೆ ಇಡಬೇಕು. ಪರಿಣಾಮ ಅವರು ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿಯೂ ಜರ್ಜರಿತವಾಗಿ ಹೋಗುತ್ತಾರೆ. ನಂತರ ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಮೊದಲಿನ ಬದುಕು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಕ್ರಮೇಣ ಕಷ್ಟವಾದರೂ ಸರಿಯೇ ಎಂದು ಹಗಲಿರುಳೆನ್ನದೆ ವೇಶ್ಯಾವೃತ್ತಿಯಲ್ಲಿಯೇ ಕಣ್ಣೀರು ಸುರಿಸುತ್ತ ಬದುಕುತ್ತಾರೆ. ಅಂದ ಹಾಗೆ, ಈ ಮಾನವ ಕಳ್ಳ ಸಾಗಾಣಿಕೆ ಆಡಳಿತ ಯಂತ್ರಕ್ಕೆ ತಿಳಿಯದ ವಿಷಯವೇನಲ್ಲ. ಪೊಲೀಸ್ ಹಾಗೂ ಸರಕಾರಿ ಇಲಾಖೆ ಅಧಿಕಾರಿಗಳ ಮೂಗಿನ ನೇರಕ್ಕೇ ನಡೆಯುವ ಕಾನೂನು ಬಾಹಿರ ವ್ಯವಹಾರವಿದು. ಇದಕ್ಕೆ ಬಿಳಿ ಬಟ್ಟೆ ತೊಟ್ಟ ಜನಪ್ರತಿನಿಧಿಗಳ ಕೃಪಾಕಟಾಕ್ಷವೂ ಇದೆ ಎನ್ನುವುದು ಕನ್ನಡಿಯಷ್ಟೇ ಸತ್ಯ.

ಒಂದು ಮಗುವಿನ ಕಳ್ಳ ಸಾಗಾಣಿಕೆಗೆ 2.5 ರಿಂದ 3 ಲಕ್ಷ ರು. ವೆಚ್ಚವಾಗುತ್ತದೆ. ಜನಪ್ರತಿನಿಧಿಗಳಿಗೆ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ, ಆಡಳಿತದಲ್ಲಿರುವ ಅಧಿಕಾರಿ ವರ್ಗದವರಿಗೆ ಹಾಗೂ ಮಕ್ಕಳನ್ನು ಅಂದಗೊಳಿಸುವ ಕೆಲಸಗಾರರಿಗೆಂದು ಕನಿಷ್ಠ ಇಷ್ಟಾದರೂ ಅವರು ವೆಚ್ಚಮಾಡಲೇಬೇಕು. ಇದರಲ್ಲಿ ಸಾಗಾಣಿಕೆ ವೆಚ್ಚ ಮಾತ್ರ ಕೇವಲ 20ಸಾವಿರ ರು. ಇರಬಹುದು. ಪ್ರತಿ ವರ್ಷ 19 ಕೋಟಿ ರು.ಗಳ ವ್ಯವಹಾರ ಮಕ್ಕಳ ಕಳ್ಳ ಸಾಗಾಣಿಕೆಯಿಂದ ನಡೆಯುತ್ತಿದೆ ಎಂದು ರಾಷ್ಟ್ರೀಯ ಬಾಲ ಕಾರ್ಮಿಕ ಸಂಸ್ಥೆ, ಕಾರ್ಮಿಕ ಸಂಘಗಳ ಜಾಲ ಹಾಗೂ ವಿವಿಧ ಸಾಮಾಜಿಕ ಸಂಸ್ಥೆಗಳು ನಡೆಸಿದ ಅಧ್ಯಯನ ಹೇಳುತ್ತದೆ. ಪ್ರತಿ ದಿನ ಹತ್ತರಿಂದ ಹದಿನೈದು ಮಕ್ಕಳು ಕಳ್ಳ ಸಾಗಾಣಿಕೆಗೆ ಒಳಗಾಗುತ್ತಿದ್ದರು. ಆದರೆ, ನ. 8ರ ನಂತರ ಒಂದೇ ಒಂದು ಮಗು ಸಾಗಾಣಿಕೆಯಾದ, ಅಪಹರಣವಾದ ಕುರಿತು ಎಲ್ಲಿಯೂ ದೂರು ದಾಖಲಾಗಿಲ್ಲ. ಇದೊಂದು ಅದ್ಭುತ ಬೆಳವಣಿಗೆ ಅಲ್ಲವೇ? ಎಂದು ಬಚಪನ್ ಬಚಾವೋ ಆಂದೋಲನ ಸಂಸ್ಥೆಯ ರಾಕೇಶ ಸೆಂಗಾರರ ಅಭಿಪ್ರಾಯಪಡುತ್ತಾರೆ.

ಹಳೆ ನೋಟಿನ ಅಪಮೌಲ್ಯದಿಂದ ವೇಶ್ಯಾಗೃಹದ ಕಡೆಗೆ ಗ್ರಾಹಕರು ಮುಖಮಾಡುತ್ತಿಲ್ಲ. ಇದರಿಂದ ಮಾಲೀಕರು ತಮ್ಮ ವ್ಯಾಪಾರ ಕಳೆದುಕೊಂಡು ತೆಪ್ಪಗೆ ಕುಳಿತಿದ್ದಾರೆ. ಮಕ್ಕಳ ಸಾಗಾಣಿಕೆ ಉದ್ಯಮದ ಬೆನ್ನು ಮೂಳೆಯೇ ಕಪ್ಪು ಹಣ ಆಗಿತ್ತು. ಅದಕ್ಕೆ ಪ್ರಧಾನಿ ಮೋದಿ ಕಡಿವಾಣ ಹಾಕಿದ್ದರಿಂದ, ಉದ್ಯಮದ ಮೂಳೆಯೇ ಮುರಿದು ಬಿದ್ದಂತಾಗಿದೆ. ಹೊಸ ನೋಟು ಬಂದಾಗ ಈ ವ್ಯವಹಾರಕ್ಕೆ ಅವಕಾಶ ಇಲ್ಲದಂತೆ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ನೊಬೆಲ್ ಪುರಸ್ಕೃತ ಕೈಲಾಸ ಸತ್ಯಾರ್ಥ ಹೇಳುತ್ತಾರೆ.....

ಮಂಗಳವಾರ, ನವೆಂಬರ್ 8, 2016

ಮತ್ತದೆ ಮಾತು..... ಸತ್ತರೂ ಬದುಕಿರಲಿ ಆತ್ಮವಿಶ್ವಾಸ!

'ಸೋಲೇ ಗೆಲುವಿನ ಸೋಪಾನ' ಎಂದು ಬಾಲ್ಯದಿಂದಲೂ ಕೇಳುತ್ತಾ ಬಂದಿರುವ ಗಾದೆ ಮಾತು. ಆದರೆ ಆ ಸೋಲು ನೆರಳಿನಂತೆ ಜೀವನ ಪರ್ಯಂತ ಸದಾ ಹಿಂಬಾಲಿಸುತ್ತಲೇ ಇದ್ದರೆ ಸೋಪಾನ ಯಾವಾಗ ಬರಬೇಕು?

'ಒಳ್ಳೆಯದಾಗುತ್ತದೆ... ಭವಿಷ್ಯ ಚೆನ್ನಾಗಿದೆ... ಆತ್ಮವಿಶ್ವಾಸ ಕಳೆದುಕೊಳ್ಳಬೇಡ...' ಎನ್ನುವ ಮಾತಿನ ನಡುವೆಯೇ `ಸತ್ತರೂ ಬದುಕಿರಲಿ, ಆತ್ಮವಿಶ್ವಾಸ' ಎನ್ನುವ ಕವಿ ದಿನಕರ ದೇಸಾಯಿ ಅವರ ಕವನದ ಸಾಲುಗಳು ಧುತ್ತೆಂದು ಸುಳಿದಾಡುತ್ತದೆ. ಸೂಲು, ಸೋಪಾನ, ಜೀವನ, ಭವಿಷ್ಯ, ಆತ್ಮವಿಶ್ವಾಸ ಇವುಗಳ ಆಳಕ್ಕಿಳಿದು ಯೋಚಿಸುತ್ತಾ ಹೋದರೆ, 'ಸತ್ತ ಮೇಲೆ ಯಾಕೆ ಬೇಕು ಆತ್ಮವಿಶ್ವಾಸ' ಎನ್ನುವ ವಾಸ್ತವ ಅರಿವಾಗುತ್ತದೆ. ಯಾಕೆಂದರೆ, ಇದ್ದಾಗ ಮಾತ್ರ ಬದುಕಿಗೊಂದು ಅರ್ಥ. ಅದೊಂದು ಶೂನ್ಯದ ಹೊರಗಿನ ಬದುಕು. ಆದರೆ, ಹೋದಾಗ ಅದು ಶೂನ್ಯದೊಳಗೆ ಬಂಧಿ!


ಕೆಲವು ವೇಳೆ 'ಪರೋಪಕಾರ, ಒಳ್ಳೆಯತನ, ಪ್ರಾಮಾಣಿಕತೆಯ ಬದುಕೇ ಮಗ್ಗಲು ಮುಳ್ಳಾಗಿ ಬಿಡುತ್ತವೆ. ಎಂದೂ ಯಾರಿಗೂ ಕೆಡುಕನ್ನು ಬಯಸದೆ, ಎಲ್ಲರಲ್ಲಿಯೂ ಒಳಿತನ್ನೇ ಕಾಣುತ್ತ, ನನ್ನ ಜೊತೆ ನೀನೂ ಸುಖವಾಗಿರುವ` ಎನ್ನುವ ಬದುಕಿನ ಧ್ಯೇಯ ಇಂದಿನ ದಿನಮಾನಕ್ಕೆ ಸೂಕ್ತವಲ್ಲವೇನೋ? 'ನಾ ಮಾಡಿದ ಒಳ್ಳೆಯ ಕೆಲಸಕ್ಕೆ ಮುಂದೊಂದು ದಿನ ಪ್ರತಿಫಲ ದೊರೆಯುತ್ತದೆ' ಎನ್ನುವ ಆಶಾಭಾವನೆ, ಆಸೆಯನ್ನೇ ಹತ್ತಿಕ್ಕಿ ಬಿಡುತ್ತವೆ. ದಿನ, ತಿಂಗಳು, ವರ್ಷ ಕಳೆದರೂ ಆ `ಮುಂದೊಂದು ದಿನ' ಎದುರಾಗುವುದೇ ಇಲ್ಲ...! `ನನ್ನ ಜೊತೆ ನಿನಗೂ ಒಳ್ಳೆಯದಾಗಲಿ' ಎನ್ನುವ  ಪರೋಪಕಾರದ ಗುಣ ಬದುಕನ್ನೇ ಮಖಾಡೆ ಮಲಗಿಸಿಬಿಡುತ್ತದೆ. ಒಳ್ಳೆಯದಾಗಲಿ ಎಂದು ಪ್ರಾಮಾಣಿಕವಾಗಿ ಹರಸಿ, ಕೈ ಹಿಡಿದು ಕರೆದುಕೊಂಡು ಹೋದವನಿಗೆ `ಹಣೆ ಬರಹ'ದ ಗೋಡೆ ಎದುರಾದರೆ, ಕೈ ಹಿಡಿದು ನಡೆಯುವವನಿಗೆ 'ಅದೃಷ್ಟ' ದೇವತೆ ಹಿಂಬಾಲಿಸುತ್ತದೆ. ಇಲ್ಲಿ ದಾರಿ ತೋರಿದವನೇ ದಾರಿ ಕಾಣದಂತಾಗಿ ತಡವರಿಸುತ್ತ ಮುಗ್ಗರಿಸಿ ಬೀಳುತ್ತಾನೆ. ನನ್ನ ಬದುಕೇ ಇಷ್ಟು ಎಂದು ತನಗೆ ತಾನೇ ಶಾಪ ಹಾಕಿಕೊಳ್ಳುತ್ತ ಮೇಲೆದ್ದು, ಇನ್ನೊಂದು ಭರವಸೆಯ ಕಿರಣದ ಜಾಡು ಹಿಡಿಯಲು ಪ್ರಯತ್ನಿಸುತ್ತಾನೆ.
ಇನ್ನಿಲ್ಲ ಬದುಕು ಎಂದು ಕುಸಿದು ಬಿದ್ದಾಗ, ಭವಿಷ್ಯದ ಹಾದಿಯೇ ಮುಸುಕಾದಾಗ ಈ ಗಾದೆ ಮಾತು, ಕವನದ ಸಾಲು ಹಾಸ್ಯಾಸ್ಪದ ಎಂದೆನಿಸಿ ಬಿಡುತ್ತದೆ.(ಕೆಲವು ವೇಳೆ). ಯಾಕೆಂದರೆ ದಿನ, ಸಮಯ, ಕ್ಷಣ ಎಂದೂ ನಮಗಾಗಿ ಕಾಯುವುದಿಲ್ಲ. ಅದು ಸದಾ ಓಡುತ್ತಲೇ ಇರುತ್ತದೆ. ಆ ಓಟದ ಮಧ್ಯದಲ್ಲಿಯೇ ಯಾವುದೋ ಒಂದು ಸಮಯ ನಮ್ಮ ಬದುಕು ಕೂಡಾ ನಿಂತು ಬಿಡುತ್ತವೆ. ಆಗ ಪರೋಪಕಾರ, ಪ್ರಾಮಾಣಿಕತೆ, ಒಳ್ಳೆಯ ಗುಣಗಳು ನಮ್ಮ ಜೊತೆಯೇ ಲೀನವಾಗಿಬಿಡುತ್ತವೆ. ಕೈ ಹಿಡಿದು ನಡೆದಾತ 'ಅದೃಷ್ಟ' ಎಂದು ನೆಮ್ಮದಿಯ ಬದುಕು ಕಟ್ಟಿಕೊಂಡಿರುತ್ತಾನೆ. ಕೈ ಹಿಡಿದು ನಡೆಸಿದಾತ `ಹಣೆ ಬರಹ' ಎಂದು ಬದುಕಿಗೆ ಪೂರ್ಣ ವಿರಾಮ ಹಾಕಿರುತ್ತಾನೆ.
ಮತ್ತದೆ ಮಾತು..... ಸತ್ತರೂ ಬದುಕಿರಲಿ ಆತ್ಮವಿಶ್ವಾಸ!
('ಅರ್ಥ'ಕ್ಕೆ ನಿಲುಕದ್ದು......)

ಗುರುವಾರ, ಆಗಸ್ಟ್ 25, 2016

ಈತ ದೇವರಲ್ಲ ನನ್ನಾತ್ಮ ಸಖ......  

ಎಲ್ಲವನ್ನು ಕಳೆದುಕೊಂಡು ಇನ್ನಿಲ್ಲ ಬದುಕು ಎಂದಾಗ, ಸುಮ್ಮನೆ ಬಂದು ಹೆಗಲ ಮೇಲೆ ಕೈ ಹಾಕಿ ಗಟ್ಟಿಯಾಗಿ ಅದಮುತ್ತಾನೆ. ಕುಸಿದು ಬೀಳುವ ಜೀವ-ಭಾವಕ್ಕೆ ಮನದಣಿಯೇ ಸಂತೈಸಿ ಮುಗುಳ್ನಗುತ್ತಾನೆ. ತಾನೊಬ್ಬ ಪರಮಾತ್ಮ ಎಂಬುದನ್ನು ಮರೆತು, ಜೀವಾತ್ಮ ಎಂದು ಸಾರುತ್ತಾನೆ. ಪೂಜಿಸುವುದಕ್ಕಿಂತ ನನ್ನ ಮೇಲೆ ವಿಶ್ವಾಸವಿಡಿ ಎಂದು ಹೇಳುತ್ತಾನೆ. ಎಲ್ಲವನ್ನು ಕಳೆದುಕೊಂಡ ಭಾವ ನನಗೂ ಇದೆ ಎನ್ನುತ್ತ, ನೋವು ಬದುಕಲ್ಲ ಎಂದು ಹಸನ್ಮುಖಿಯಾಗಿರುವ ಪಾಠ ಹೇಳುತ್ತಾನೆ.
ಹಾಗಾದರೆ ಕೃಷ್ಣ ಯಾರು?
ಸಿಂಪಲ್..... ಆತ ಆತ್ಮ ಸಖ. ಅವನೊಬ್ಬ ನೆಚ್ಚಿನ ಗೆಳೆಯ. ಹೌದು, ಬಹುಶಃ ಕೃಷ್ಣ ಇದಕ್ಕೆ ಇಷ್ಟವಾಗುತ್ತಾನೆ. ಆತನ ಬದುಕಿನ ಒಂದೊಂದು ಹೆಜ್ಜೆಯೂ ಅರ್ಥಗರ್ಭಿತ ಹಾಗೂ ಅಷ್ಟೇ, ಅಖ್ಯಾನ! ಹೆತ್ತಾಕೆಯ ಎದೆ ಹಾಲನ್ನು ಆತ ಕುಡಿದಿಲ್ಲ. ಅವಳ ಮಡಿಲಲ್ಲಿ ಆಡಿ ನಲಿದಿಲ್ಲ. ಸಲುಹಿದ ತಾಯಿಗೆ ಆತ ಸಿಗಲಿಲ್ಲ. ಪ್ರೀತಿಸಿದ ರಾಧೆಗೂ ಸಂಪೂರ್ಣ ಸಿಗಲಿಲ್ಲ. ಸೋದರ ಮಾವನ ಪ್ರೀತಿಯೂ ಆತನಿಗೆ ದೊರೆಯಲಿಲ್ಲ. ಆತ ತನಗೆ ಸಿಕ್ಕಿದ ಅಂತ ಅಂದುಕೊಂಡವರಿಗೆ ಸುಳ್ಳಾದ. ಯಾವೊಂದು ಭವ-ಬಂಧನದ ಚೌಕಟ್ಟಿಗೂ ಆತ ಒಳಪಡಲಿಲ್ಲ. ಬದುಕಲ್ಲಿ ಎದುರಾದ ಪ್ರತಿಯೊಂದು ಸಂಬಂಧ-ಬಾಂಧವ್ಯವನ್ನು ಸಮರ್ಥವಾಗಿ ನಿಭಾಯಿಸಿದ. ಸಮಯ ದೊರೆತಾಗಲೆಲ್ಲ ಬದುಕಿನ ಪಾಠವನ್ನು ಹೇಳುತ್ತಲೇ ಹೋದ. ಸಂದರ್ಭದಲ್ಲಿ ಹೊಗಳಿಕೆ ಜತೆಗೆ, ಸಾಕಷ್ಟು ಟೀಕೆಗಳ ಕೊಂಕು ಮಾತುಗಳನ್ನು ಕೇಳಿದ. ತಂತ್ರ, ಕಪಟ, ಚಾಣಾಕ್ಷ್ಯತೆಯನ್ನು ಧರ್ಮ ಸಂಸ್ಥಾಪನೆಗೆ ಹೇಗೆ ಉಪಯೋಗಿಸಬೇಕೆನ್ನುವುದನ್ನು ತಿಳಿಸಿದ.
ಕೃಷ್ಣ ಹೀಗೆಯೇ.... ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಒಂದೊಮ್ಮೆ ಹೇಳಿದರೂ ಅದು ಅವರವರ ಕಲ್ಪನೆ, ಬುದ್ಧಿಮಟ್ಟದ ವ್ಯಾಖ್ಯಾನ. ಅರ್ಥಕ್ಕೆ ನಿಲುಕದ ವಿಭಿನ್ನ ವ್ಯಕ್ತಿಯಾತ. ದೇವಕಿ ಯಶೋದೆಗೆ ತಾಯಿಯಾದ, ದೇವರೆಂದು ಪೂಜಿಸುವ ಅಕ್ರೂರ-ವಿಧುರನಿಗೆ ಭಗವಂತನಾದ, ಹುಚ್ಚಿಯ ಹಾಗೆ ಪ್ರೀತಿಸುವ ರಾಧೆಗೆ ಪ್ರೇಮಿಯಾದ, ರುಕ್ಮಿಣಿ-ಸತ್ಯಭಾಮೆಗೆ ಮಡದಿಯಾದ, ದ್ರೌಪದಿಯಂಥ ಸಹೋದರಿಗೆ ಆತ್ಮ ಬಂಧುವಾದ, ಧರ್ಮಕ್ಕೆ ಗಂಟು ಬಿದ್ದು ವಿರೋಧಿಸುವ ಭೀಷ್ಮ-ದ್ರೋಣರಿಗೆ ನಿರ್ಲಿಪ್ತನಾದ, ಶಕುನಿ-ದುಶ್ಯಾಸನ-ಶಿಶುಪಾಲ-ಜರಾಸಂಧರ ಪಾಲಿಗೆ ಶಿಕ್ಷಕನಾದ, ಶಿಷ್ಟರಾದ ಕುಂತಿ ಪುತ್ರರ ಪಾಲಿಗೆ ರಕ್ಷಕನಾದ, ಮಗುವಿಗಿಂತ ಮುಗ್ಧನಾದ ಸುಧಾಮನಿಗೆ ಗೆಳೆಯನಾದ, ಗೋಕುಲದಲ್ಲಿ ಓಡಾಡುವ ಗೋಪಿಕೆಯರಿಗೆ ತುಂಟನಾದ........
ಒಂದೇ... ಎರಡೇ....! ಕೃಷ್ಣ ಯಾರಿಗೆ? ಏನು? ಆಗಿಲ್ಲ ಹೇಳಿ. ಅವರವರ ಭಾವಕ್ಕೆ, ಅವರವರ ಅರ್ಥಕ್ಕೆ ಆತ ಏನು ಆಗಬೇಕೋ ಅವೆಲ್ಲವನ್ನೂ ಆಗಿದ್ದಾನೆ. ಹಾಗೆಯೇ, ಚೌಕಟ್ಟಿನ ವ್ಯಾಪ್ತಿಗೆ ಸಿಗದೆ ಇನ್ನೂ ಏನೇನೋ ಆಗಿದ್ದಾನೆ. ಅಷ್ಟೊಂದು ಮಾಯಾವಿ, ವಿವೇಚನೆಗೆ ಸಿಗದಷ್ಟು ಪ್ರಬುದ್ಧ, ಬ್ರಹ್ಮಾಂಡವನ್ನೇ ತನ್ನೊಳಗಿಟ್ಟುಕೊಂಡ ಪ್ರಚಂಡ, ಕೊನೆಗೊಂದು ದಿನ ಮಿಥ್ಯದ ಭ್ರಮೆಯಲ್ಲಿ ಬದುಕುತ್ತೇವೆ ಎನ್ನುವ ಸೂಕ್ಷ್ಮವನ್ನು ತನ್ನ ಅಂತ್ಯದ ಮೂಲಕ ಸಾರಿಹೋದ ಮೇಧಾವಿ.
ಹೀಗೆ ಅರ್ಥಕ್ಕೆ ನಿಲುಕದ ತಂತ್ರಗಾರ, ಮಾಯಗಾರ ನನ್ನಾತ್ಮ ಸ್ನೇಹಿತ ಕೃಷ್ಣ. ಆತ ಜನ್ಮಿಸಿದ ಪವಿತ್ರ ದಿನವಿಂದು. ಬರಿಗೈಯಲ್ಲಿ ಹುಟ್ಟಿ, ಅಷ್ಟೇ ಬರಿಗೈಯ್ಯಲ್ಲಿ ಮರಳೋ ಬದುಕು ನಮ್ಮದು. ಕಣ್ಮುಂದೆ ಸಾವಿದೆ ಎನ್ನುವ ಕಟು ಸತ್ಯ ಮರೆತು, ಅಟ್ಟಹಾಸದಿಂದ ಮೆರೆದಾಡುವವರಿಗೆ ನನ್ನ ಗೆಳೆಯನ ಬದುಕು ಒಂದು ನಿದರ್ಶನ. ದೇಹದಲ್ಲಿ ಉಸಿರಿರುವವರೆಗೆ ಮಾತ್ರ ಅದಕ್ಕೊಂದು ಅರ್ಥ, ನಂತರ ಅದೊಂದು ಉಪಯೋಗಕ್ಕೆ ಬಾರದ ವಸ್ತು ಎನ್ನುವ ಸೂಕ್ಷ್ಮ ತಿಳಿಸಿದ ವಿಶ್ವಗುರು ನನ್ನಾತ್ಮ ಸಖ ಕೃಷ್ಣ.
ಹ್ಯಾಪಿ ಬಡ್ಡೆ ಹುಡುಗಾ........
-ನಾಗರಾಜ್ ಬಿ.ಎನ್.


ಭಾನುವಾರ, ಆಗಸ್ಟ್ 21, 2016

ನೀಲ ಗಗನದಲ್ಲೊಂದು ಕಪ್ಪು ಚುಕ್ಕಿ........ 
ಮುಂಜಾನೆ ಏಳಲಾಗದ ಸ್ಥಿತಿ. ತಲೆ ಧೀಂ ಧೀಂ ಎನ್ನುತ್ತಿದೆ. ಅಂತೂ ಸಾವರಿಸಿಕೊಂಡು ಪ್ರಾತಃವಿಧಿಗಳನ್ನು ಮುಗಿಸಿದ ಗಗನ, ಬೈಕ್ ಸ್ಟಾರ್ಟ್ ಮಾಡಿ ಕಚೇರಿ ಕಡೆ ಮುಖ ಮಾಡಿದ.
ಆತನ ಮನಸ್ಸು ಯಾಕೋ ವಿಚಿಲಿತವಾಗುತ್ತಿತ್ತು. ಕಳೆದ ದಿನ ಬಾಕಿಯಿದ್ದ ಕೆಲಸಗಳನ್ನು ಲಗುಬಗೆಯಲ್ಲಿ ಮುಗಿಸಿ, ಯಾವುದೋ ಕಾರ್ಯದ ನಿಮಿತ್ತ ಹೊರಗಡೆ ಹೋಗುತ್ತಾನೆ. ಅಲ್ಲಿ ತನ್ನ ಕೆಲಸ ಮುಗಿಸಿ ವಾಪಸ್ ಕಚೇರಿಗೆ ಮರಳುವ ವೇಳೆ, ರಸ್ತೆಯ ಚರಂಡಿ ಬಳಿ ಶೂಟ್-ಬೂಟು ಹಾಕಿಕೊಂಡಿರುವ ವ್ಯಕ್ತಿಯೊಬ್ಬ ಅಂಗಾತ ಬಿದ್ದಿರುವುದು ಕಣ್ಣಿಗೆ ಕಾಣುತ್ತದೆ.
'ಅರೇ..... ಎಲ್ಲೋ ನೋಡಿದ್ದೀನಲ್ಲ ಈತನನ್ನ........?' ಎಂದು ಒಂದು ಕ್ಷಣ ಯೋಚನೆಗೆ ಬೀಳುತ್ತಾನೆ.
ಉಹೂಂ ..... ನೆನಪಿಗೆ ಬರುತ್ತಿಲ್ಲ. ಆತನನ್ನ ಹಿಂದಿರುಗಿ ನೋಡುತ್ತಲೇ ನಾಲ್ಕೈದು ಹೆಜ್ಜೆ ಇಟ್ಟಿರುತ್ತಾನೆ. ಮನಃಪಟಲದಲ್ಲಿ ಮಸುಕು ಮಸುಕಾದ ಮುಖವೊಂದು ಸ್ಪಷ್ಟರೂಪ ಪಡೆದುಕೊಳ್ಳುತ್ತದೆ. ಗಗನಗೆ ಒಮ್ಮೆಲೆ ಬರ ಸಿಡಿಲು ಬಡಿದಂತಾಗುತ್ತದೆ.
'ಭಗವಂತ...!' ಎಂದು ಉದ್ಘಾರ ತೆಗೆಯುತ್ತ, ಚರಂಡಿಯ ಪಕ್ಕದಲ್ಲಿ ಬಿದ್ದಿರುವ ಆತನಲ್ಲಿಗೆ ತಡವರಿಸುತ್ತ ಧಾವಿಸುತ್ತಾನೆ.
ಹತ್ತಿರ ಹೋಗುತ್ತಿದ್ದಂತೆ ಸಾರಾಯಿ ವಾಸನೆ ಗಬ್ಬೆಂದು ಮೂಗಿಗೆ ಬಡಿಯುತ್ತದೆ. ಸುತ್ತಮುತ್ತ ಒಮ್ಮೆ ಕಣ್ಣಾಡಿಸುತ್ತಾನೆ.
ಹಾದಿ ಹೋಕರು, 'ಏಯ್, ಬಿಡಪ್ಪ... ಕುಡ್ಕೊಂಡು ಬಿದ್ದವರಿಗೆ ಏನ್ ಸಹಾಯ ಮಾಡ್ತೀಯ' ಎಂದು ವ್ಯಂಗ್ಯವಾಡಿ ಮುಂದೆ ಸಾಗುತ್ತಾರೆ.
ಆತನನ್ನು ತನ್ನ ಕಾಲ ಮೇಲೆ ಮಲಗಿಸಿ, ತನ್ನ ಬ್ಯಾಗ್ನಲ್ಲಿದ್ದ ಬಾಟಲಿ ನೀರನ್ನು ತೆಗೆದು, ಆತನ ಮುಖಕ್ಕೆ ಸಿಂಪಡಿಸುತ್ತಾನೆ. ಅಮಲಿನಲ್ಲಿದ್ದಾತನ ಮುಖಕ್ಕೆ ತಣ್ಣನೆಯ ನೀರು ಬಿದ್ದಾಗ, ನಿಶೆಯ ಕಣ್ಣನ್ನು ಅರೆಬರೆಯಾಗಿ ತೆರೆಯುತ್ತಾನೆ.
'ಯಾರೋ ನೀನು, ಹೋಗಲೇ....' ಎನ್ನುತ್ತ, ಏನೇನೋ ಅಸಭ್ಯವಾಗಿ ಬೈಯ್ಯುತ್ತಾನೆ.
ಆತ ಭಾನು. ಮೂರುವರ್ಷದ ಹಿಂದೆ 'ಸಂದರ್ಭವೊಂದರಲ್ಲಿ' ಗಗನಗೆ ಆತನ ಮುಖ ಪರಿಚಯ. ಭಾನುವಿಗು ಕೂಡಾ ಗಗನ ಮುಖ ಪರಿಚಯವೇ. ಆದರೆ, ಭಾನುವಿಗೆ ಗಗನ ಯಾರು ಎಂದು ಈ ಸಂದರ್ಭದಲ್ಲಿ ಪರಿಚಯ ಹಿಡಿಯಲಾಗುತ್ತಿಲ್ಲ. ಯಾಕೆಂದರೆ, ಸಾರಾಯಿ ಆತನ ಮೈ-ಮನವೆಲ್ಲ ತುಂಬಿಕೊಂಡು, ಇಹದ ಪರಿವನ್ನೇ ಅಳಿಸಿಬಿಟ್ಟಿದೆ.(ಅಥವಾ ಮರೆತೂ ಇರಬಹುದು).
ಗಗನ ಒಳಗಗೊಳಗೆ ಅಳುತ್ತಿದ್ದಾನೆ. ಉಮ್ಮಳಿಸಿ ಬರುವ ದುಃಖವನ್ನು ತಡೆ ಹಿಡಿಯುತ್ತಿದ್ದಾನೆ.
'ಅಯ್ಯೋ..... ಎಂಥ ಅನ್ಯಾಯವಿದು?' ಎಂದು ವಿಧಿಯನ್ನು ಶಪಿಸುತ್ತಿದ್ದಾನೆ. ಮನದಲ್ಲಿ ಸಾವಿರ... ಸಾವಿರ ಆಲೋಚನೆಗಳು. ಅದಕ್ಕೆ ಪ್ರತಿಸ್ಪರ್ಧಿಯೆನ್ನುವಂತೆ ಹಿಪ್ಪಿ ಹಿಂಡುವಂತ ಯಾತನೆಗಳು.
ನೋವಿನಲ್ಲೂ ನಗುವನ್ನು ರೂಢಿಸಿಕೊಂಡ ಗಗನ, ನಗುತ್ತಲೇ ದಾರಿಹೋಕನೊಬ್ಬನನ್ನು ಕರೆದು ಸಹಾಯ ಕೇಳುತ್ತಾನೆ. ಆಟೋ ಎಂದು ಕೂಗಿ, ದಾರಿಹೋಕನ ಸಹಾಯದಿಂದ ಭಾನುವನ್ನು ರಸ್ತೆಗೆ ಕರೆತಂದು ಆಟೋ ಹತ್ತಿಸುತ್ತಾನೆ. ಗೋವರ್ಧನ ರಸ್ತೆಗೆ ಆಟೋ ತಿರುಗಿಸುವಂತೆ ಹೇಳಿ, ತಾನು ಪಯಣಿಸುತ್ತಾನೆ.
ಏನೇನೋ ಚಿತ್ರ ವಿಚಿತ್ರ ಯೋಚನೆಗಳು ಗಗನ ಮನದಾಳದಲ್ಲಿ ಸುಳಿದಾಡುತ್ತಿವೆ. ಎದೆಯಲ್ಲೊಂದು ಸಣ್ಣ ನಡುಕ. ಕಾರ್ಮೋಡಗಳೆಲ್ಲ ಒಂದೇ ಕಡೆ ಹೆಪ್ಪುಗಟ್ಟಿದಂಥ ಭಾವ. ಗಗನ ಮೊಗದಲ್ಲಿದ್ದ ನಗು ನಿಧಾನವಾಗಿ ಮಾಯವಾಗುತ್ತಿದೆ.
ತಲುಪಬೇಕಾದ ಗಮ್ಯ ಸ್ಥಳ ಸನಿಹವಾಗುತ್ತಿದೆ.
ಅದು ಭಾನುವಿನ ಮನೆ. 'ಸಂದರ್ಭ'ವೊಂದರಲ್ಲಿ ಆತನ ಮನೆ ಹಠ ಹಿಡಿದು ಹುಡುಕಿದ್ದ. ಆದರೆ, ಇಂತಹ ಸಂದರ್ಭದಲ್ಲಿ ಆ ಮನೆಯ ಹೊಸಿಲು ತುಳಿಯುತ್ತೇನೆ ಎಂದು ಆತ ಅಂದುಕೊಂಡಿರಲಿಲ್ಲ.
ಆಟೋ ಇಳಿದು ಭಾನುವಿನ ಒಂದು ಕೈಯ್ಯನ್ನು ತನ್ನ ಹೆಗಲ ಮೇಲಿಟ್ಟುಕೊಂಡು, ನಿಧಾನಕ್ಕೆ ಆತನ ಜತೆ ಹೆಜ್ಜೆ ಮನೆ ದಿಕ್ಕಿನತ್ತ ಹೆಜ್ಜೆ ಇಡುತ್ತಿದ್ದಾನೆ.
ಮನೆ ಮುಂದೆ ಬಂದು ಗಗನ ಕಾಲಿಂಗ್ ಬೆಲ್ ಒತ್ತಿ, ಭಾನುವಿನ ಹಿಂದೆ ಹಿಮ್ಮುಖ ಹಾಕಿಕೊಂಡು ನಿಲ್ಲುತ್ತಾನೆ. ಅಷ್ಟರಲ್ಲಿ ಒಳಗಿದ್ದ ನಾಯಿ ಒಂದೇ ಸಮನೆ ಕೂಗುತ್ತದೆ.
ಮನೆ ಬಾಗಿಲು ತೆರೆದ ಭಾನುವಿನ ಮಡದಿ, ಅಮಲಿನಲ್ಲಿ ಜೋಲಿ ಹೊಡೆಯುತ್ತಿದ್ದ ಗಂಡನನ್ನು ನೋಡಿ ಬಯ್ಯುತ್ತಾಳೆ.
'ಪ್ರತಿದಿನ ನಿಮ್ಮದು ಇದೇ ಹಣೆಬರಹ. ಹಾದಿ ಬೀದಿಲಿ ಹೋಗೋರು ನಿಮ್ಮನ್ನು ಕರ್ಕೊಂಡು ಮನೆಗೆ ತಂದು ಬಿಡೋದು. ಯಾಕಾದ್ರೂ ನಾ ನಿಮ್ಮನ್ನು ಮದ್ವೆ ಆದ್ನೋ?' ಎಂದು ತನ್ನ ಸಂಕಟವನ್ನು ಹೊರಹಾಕುತ್ತಾಳೆ.
ಆಕೆಯ ಮಾತನ್ನು ಕೇಳಿ ಗಗನ, ಬಿಕ್ಕಳಿಸಿ ಬರುವ ದುಃಖವನ್ನು ತಡೆಹಿಡಿದು ತನ್ನೆರಡು ತುಟಿಗಳನ್ನು ಬಲವಂತವಾಗಿ ಕಚ್ಚಿ ಹಿಡಿದಿದ್ದಾನೆ. ಏನು ಮಾಡಬೇಕೆಂದು ತೋಚದೆ ವಿಭ್ರಾಂತನಾಗಿದ್ದಾನೆ. ಸಾವರಿಸಿಕೊಳ್ಳಲು ಪಟ್ಟ ಪ್ರಯತ್ನವೆಲ್ಲ ಒಂದೊಂದಾಗಿ ವಿಫಲವಾಗುತ್ತಿದೆ. ನಿಶೆಯಲ್ಲಿದ್ದ ಭಾನುವಿನ ಓಲಾಟದ ಜತೆಗೆ, ನಿತ್ರಾಣಗೊಂಡ ತನ್ನ ದೇಹದ ನಿಶ್ಯಕ್ತಿ ಆತನನ್ನು ಅಲ್ಲಿಯೇ ಕುಸಿದು ಬೀಳುವಂತೆ ಮಾಡುತ್ತಿದೆ. ಉಸಿರನ್ನು ಗಟ್ಟಿಯಾಗಿ ಬಿಗಿಹಿಡಿದುಕೊಂಡು ........
'ಕ್ಷಮಿಸು ನೀಲಿ... ನಾನು ಗಗನ' ಎನ್ನುತ್ತ ಮುಖ ತಿರುಗಿಸುತ್ತಾನೆ...!
ಗಗನನನ್ನು ನೋಡಿದ್ದೇ ನೀಲಿಗೆ ಮಾತೇ ಬರದಂತಾಗಿ, ಗರ ಬಡಿದವಳಂಗಾಗುತ್ತಾಳೆ. ಬಿಟ್ಟು ಕಣ್ಣು ಬಿಟ್ಟಂತೆ, ಆಶ್ಚರ್ಯದಿಂದ ಗಗನನ್ನು ನೋಡುತ್ತಿದ್ದಾಳೆ. ಹಾಗೆ ಅರಿವಿಲ್ಲದೆ ಎರಡು ಕಣ್ಣಂಚಿನಿಂದ ನೀರು, ಆಕೆಯ ಗುಳಿಬಿದ್ದ ಕೆನ್ನೆಯನ್ನು ತೋಯಿಸುತ್ತಿದೆ. ತುಟಿ ಬಿಗಿಹಿಡಿದು ಬಿಕ್ಕಳಿಸುವ ಸರದಿ ಈಗ ನೀಲಿಯದ್ದು.
ಎರಡು ಕೈ ಜೋಡಿಸಿ...... ಅಳುತ್ತಲೇ ನೆಲಕ್ಕೆ ಕುಸಿದು ಬೀಳುತ್ತಾಳೆ.
'ಅಯ್ಯೋ...' ಎನ್ನುತ್ತ ತನ್ನೆರಡು ಕೈಗಳಿಂದ ತಲೆಯನ್ನು ಗಟ್ಟಿಯಾಗಿ ಬಡಿದುಕೊಳ್ಳುತ್ತಿದ್ದಾಳೆ. ಭಾನುವನ್ನು ಹಿಡಿದುಕೊಂಡು ಎದುರಿಗೆ ನಿಂತ ಗಗನ, ಏನೂ ಹೇಳಲಾಗದಂತವನಾಗಿ ಮೂಗನ ಹಾಗೆ ಇವೆಲ್ಲವನ್ನು ನೋಡುತ್ತಾ ಸುಮ್ಮನೆ ನಿಂತು ಬಿಟ್ಟಿದ್ದಾನೆ.
'ಹುಚ್ಚುಕೋಡಿ ಮನಸ್ಸಿಗೆ ಬೆಲೆ ಕೊಟ್ಟು, ಈಗ ನೀನೇ ಬೆಲೆ ತೆರುವಂತಾಯಿತಲ್ಲ' ಎಂದು ಮನಸ್ಸಿನಲ್ಲಿಯೇ ಮಮ್ಮುಲ ಮರುಗುತ್ತಿದ್ದಾನೆ.
ಭಾನುವನ್ನು ಅಲ್ಲಿಯೇ ಇರುವ ಸೋಫಾದಲ್ಲಿ ಕುಳ್ಳರಿಸಿದ ಗಗನ, 'ಈತನಿಗೆ ತಣ್ಣೀರ ಸ್ನಾನ ಮಾಡಿಸು. ಊಟ ಮಾಡಿದ ಹಾಗೆ ಕಾಣುತ್ತಿಲ್ಲ, ಹಸಿದಿರುವ ಹಾಗಿದೆ' ಎನ್ನುತ್ತಾನೆ.
ನೀಲಿಯಿಂದ ಯಾವುದೇ ಪ್ರತ್ಯುತ್ತರವಿಲ್ಲ. 'ತಾ ಮಾಡಿದ ತಪ್ಪಿಗೆ, ತನ್ನ ನಿರ್ಧಾರಕ್ಕೆ, ತನ್ನ ಹಠಕ್ಕೆ ಭಗವಂತ ತಕ್ಕ ಶಿಕ್ಷೆ ನೀಡಿದ್ದಾನೆ' ಎಂದು ತನ್ನನ್ನು ತಾನೇ ಶಪಿಸಿಕೊಳ್ಳುತ್ತಿದ್ದಾಳೆ.
'ಸರಿ... ನಾ ಇನ್ನು ಹೊರಡುತ್ತೇನೆ' ಎಂದು ಎದ್ದ ಗಗನನಿಗೆ ಗೋಡೆ ಮೇಲೆ ತೂಗಿ ಹಾಕಿದ ಚಿಕ್ಕ ಮಗುವಿನ ಫೋಟೋ ಕಣ್ಣಿಗೆ ಬೀಳುತ್ತದೆ. ನೀಲಿಯ ನೋವನ್ನು ಮರೆ ಮಾಚಬೇಕೆಂದು,
'ಎಷ್ಟು ಮುದ್ದಾಗಿದೆಯಲ್ವಾ ಪಾಪು? ಇಂಥದ್ದೆ ಪಾಪು ನೀಲಿ ಮಡಿಲು ತುಂಬಲಿ' ಎನ್ನುತ್ತಾನೆ.
ಆತನ ಮಾತಿಗೆ ನೀಲಿ, ನಗುತ್ತ....
'ಥ್ಯಾಂಕ್ಸ್ ಗಗನ, ಅದು ನನ್ನದೇ ಮಗು, ಪ್ರಕೃತಿ ಅಂತ...... ಮುಂದೇನೋ ಹೇಳಲಿದ್ದ ಅವಳನ್ನು ಅಲ್ಲಿಯೇ ತಡಿದು, 'ವ್ಹಾವ್.... ನೀಲಿ, ತುಂಬಾ ಸಂತೋಷವಾಯ್ತು. ಎಲ್ಲಿದೆ ಕಂದಮ್ಮ?' ಎಂದು ಪ್ರಶ್ನಿಸುತ್ತಾನೆ.
ನೀಲಿ ಮತ್ತೆ ನಗುತ್ತಾಳೆ. ನಗು ದೊಡ್ಡದಾಗುತ್ತ ಹೋಗುತ್ತದೆ.
ಇತ್ತ ಗಗನ 'ಹೇಳು ನೀಲಿ.... ಪ್ರಕೃತಿ ಪಾಪು ಎಲ್ಲಿ?' ಎಂದು ಮತ್ತೆ ಕೇಳುತ್ತಾನೆ.
ನೀಲಿ ತಕ್ಷಣ ನಗು ನಿಲ್ಲಿಸಿ, 'ಪ್ರಕೃತಿ ಮಡಿಲು ತುಂಬಿ, ಬರಿದು ಮಾಡಿ ಹೋದಳು ಗಗನ' ಎಂದು ಶಾಂತವಾಗಿ ಉಸುರುತ್ತಾಳೆ.
ಗಗನ ತನ್ನೆರಡು ಕಣ್ಣುಗಳನ್ನು ನಿಧಾವಾಗಿ ಮುಚ್ಚಿ, ಉಸಿರನ್ನು ಒಳಗೆಳೆದುಕೊಂಡು 'ಶೂನ್ಯದತ್ತ' ಮನಸ್ಸನ್ನು ಕೇಂದ್ರಿಕರಿಸುತ್ತಾನೆ.
ಸಾವರಿಸಿಕೊಂಡಂತೆ ಮಾಡಿ, ತೊದಲಿಸುತ್ತ ಅರೆಬರೆ ಮುಚ್ಚಿದ ಕಣ್ಣಲ್ಲೆ, 'ಕ್ಷಮಿಸು ನೀಲಿ, ಹೋರಡುತ್ತೇನೆ' ಎಂದು ಭಾರವಾದ ಹೆಜ್ಜೆ ಹಾಕುತ್ತ ಮನೆಯ ಹೊಸ್ತಿಲಿನ ಹೊರಗೆ ಕಾಲಿಡುತ್ತಾನೆ.
-ನಾಗರಾಜ್ ಬಿ.ಎನ್. 

ಬುಧವಾರ, ಆಗಸ್ಟ್ 17, 2016

ಗೂಡು ತೊರೆದ ನೀಲಿ ಹಕ್ಕಿ....

ಕೊನೆಗೂ ಎದೆ ಗೂಡಿನ ಗೋಡೆಗೆ ಬಳಿದುಕೊಂಡ ನೀಲಿ ಬಣ್ಣ ರಂಗೇರಲೇ ಇಲ್ಲ.
ಇರಲಿ.... ಹುಚ್ಚು ಹಿಡಿಸೋ ಆ ನೀಲಿ ಬಣ್ಣ ಆತನ ಬದುಕನ್ನು ಆವರಿಸಿ ಬಾನಂಗಳದ ನೀಲಿಯಲ್ಲಿ ಬೆರೆತು ಹೋಗುತ್ತವೆ ಅಂದುಕೊಂಡಿದ್ದ. ಆದರೆ, ಬಣ್ಣಗಳ ಹೊಯ್ದಾಟದಲ್ಲಿ ನೀಲಿ ಕಡುಗಪ್ಪಾಗಿ ಕಾಪಿಟ್ಟ ಮೋಡಗಳಾಗುತ್ತವೆ ಅನ್ನೋ ಸತ್ಯ ಅರಿವಾಗಿದ್ದು ಅವನಿಗೆ ಆವಾಗಲೇ..! ಮೋಡ ಕಾಪಿಟ್ಟಿದೆಯೋ, ಬಣ್ಣ ಕಾಪಿಟ್ಟಿದ್ದೇ ಮೋಡವಾಗಿದೆಯೋ ಗೊತ್ತಿಲ್ಲ. ಎದೆಯ ಬಾನಲ್ಲಿ ಮಾತ್ರ ಅಕಾಲಿಕ ವರ್ಷೆ ಧೋ ಧೋ... ಎಂದು ಸುರಿಯುತ್ತಿದೆ. ಮುಷ್ಟಿಯಗಲಷ್ಟಿಲ್ಲದ ಪುಟ್ಟ ಎದೆಗೂಡು ವರ್ಷೆ ಆರ್ಭಟಕ್ಕೆ ನಲುಗಿ ಹೋಗಿದೆ. ಪ್ರಳಯದಂಚಿಗೆ ತಲುಪಿ, ಆಸರೆಯ ಹುಡುಕಾಟದಲ್ಲಿ ಕಣ್ಣಂಚಿಗೆ ಜೋತು ಬಿದ್ದಿದೆ. ನಾಡಿ ಬಡಿತ ಕ್ಷಣ ಕ್ಷಣಕ್ಕೂ ನಿಧಾನವಾಗುತ್ತಿದೆ. ಅನಿಶ್ಚಿತತೆಯ ಉಸಿರು, ನಿಶ್ಚಿತ ಅರ್ಥಕ್ಕೆ ಕಾದು ಕುಳಿತಿದೆ....!
ಒಂದೇ ಸಮನೆ ಎದೆಗೆ ನಾಟಿದ ಬಾಣಕ್ಕೆ ರಕ್ತವೂ ಒಸರುತ್ತಿಲ್ಲ. ನರನಾಡಿಗಳಲ್ಲಿ ಹರಿದಾಡುವ ರಕ್ತ ಸಹ ವರ್ಷೆಯ ಚಳಿಗೆ ಹೆಪ್ಪುಗಟ್ಟಿ ಬಿಟ್ಟಿವೆ. ಮಡುಗಟ್ಟಿದ ಕನಸು ಬಾವಾಗಿ ಕಾಣಿಸಿಕೊಂಡಿದೆ. ಸಹಿಸಲಾಗದ ಪ್ರಚಂಡ ನೋವು. ಮಿಡುಕಾಡಲು ಅಸಾಧ್ಯವಾದ ಯಾತನೆ. ನಿಂತ ಜಾಗವೇ ಕುಸಿದು ಬೀಳಲಿದೆಯೋ ಅನ್ನೋ ಭಾವ.
ಆದರೂ ಸಾವರಿಸಿಕೊಳ್ಳುತ್ತಿದ್ದಾನೆ. ನೋವಿನ ವಿರುದ್ಧವೆ ಸೆಣಸಾಡುತ್ತಿದ್ದಾನೆ. ಎದೆಯಾಳದಲ್ಲಿ ಬೆಂಕಿಹಚ್ಚಿ, ಹೆಪ್ಪುಗಟ್ಟಿದ ರಕ್ತವನ್ನು ತಿಳಿಗೊಳಿಸುತ್ತಿದ್ದಾನೆ. ನೋವಿನ ಬಾವು ಸುಟ್ಟು ಭಸ್ಮವಾಗುತ್ತಿದೆ. ಕನಸಿನ ಅರಮನೆ ಚಟಪಟನೆ ಉರಿದು ಹೋಗುತ್ತಿದೆ. ಆ ಉರಿವ ಜ್ವಾಲೆ ನಿನ್ನ ಬಾಳ ದಾರಿಗೆ ಬೆಳಕಾಗಿರಲಿ.... ಅದರ ಶಾಖ ನಿನ್ನ ಬದುಕನ್ನು ಬೆಚ್ಚಗಿರಿಸಲಿ..... ಎಂದು ಮನದಲ್ಲಿಯೇ ಪ್ರಾರ್ಥಿಸುತ್ತಿದ್ದಾನೆ.
ಆತ ಅಂದು ಎದೆಗೂಡಿಗೆ ಬಳಿದುಕೊಂಡ ನೀಲಿ ಬಣ್ಣವೆಲ್ಲ ಈಗ ಮಾಯವಾಗಿದೆ. ಬೆಂಕಿಯ ಕೆನ್ನಾಲಿಗೆ ಎದೆಗೂಡು ಬೆಂದು ಹೋಗಿದೆ. ಕಣ್ಣಾಡಿಸಿದಲ್ಲೆಲ್ಲ ದಟ್ಟ ಹೊಗೆ. ಮೂಗಿಗೆ ಬಡಿಯುವ ಅರೆಬರೆ ಬೆಂದ ಕನಸಿನ ವಾಸನೆ. ಇನ್ನೇನಿದ್ದರೂ ಅಳಿದುಳಿದ ಬೂದಿಯಲ್ಲಿ ಕೆದುಕಾಟ. ಗೂಡು ಬಿಟ್ಟು ನೀಲಾಕಾಶಕ್ಕೆ ಹಾರಿದ
ನೀಲಿ ಹಕ್ಕಿಯ ಹುಡುಕಾಟ. ನಿತ್ಯ... ನಿರಂತರ.
ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಹಾಡು, ಇನ್ನಿಲ್ಲವಾಯಿತೇ ಆ ಹಕ್ಕಿ ಹಾಡು.........
-ನಾಗರಾಜ್ ಬಿ.ಎನ್.