ಮುಂಗಾರಿನ ಅಭಿಷೇಕಕೆ.......
ಒಂದೇ ಸಲ ಆವೇಶ ಬಂದವಳಂತೆ ನಾ ಎಳೆದ ಚಾದರವನ್ನು ಅವಳು ಗಟ್ಟಿಯಾಗಿ ಹಿಡಿದೆಳೆದಳು. ನಮ್ಮಿಬ್ಬರ ಜಗ್ಗಾಟದಲ್ಲಿ ನನ್ನ ಕ್ಯ ಮೇಲಾದರೂ ಎಂದಿನಂತೆ ಅವಳ ಸೋಲನ್ನು ಅಪೇಕ್ಷೀಸದ ನಾನು ಸೋತು ಬಿಟ್ಟೆ. ತಾನು ಗೆದ್ದ ಸಂತೋಷದಲ್ಲಿ ಮಕ್ಕಳಂತೆ ಅವಳು ಕುಣಿಯ ಹತ್ತಿದಳು. ನಾನು ಮೆಲ್ಲನೆ ಎದ್ದು ಅವಳ ಕೈ ಸವರಿ `ನೋವಾಯಿತಾ ಚಿನ್ನಾ' ಎಂದೆ. ಗಕ್ಕನೆ ನಿಂತ ಅವಳು ವ್ಯಾಕುಲತೆಯಿಂದ ನನ್ನ ಕಣ್ಣನ್ನೇ ದಿಟ್ಟಿಸಿ ನೋಡುತ್ತ ನಿಂತಳು..... ಒಮ್ಮೆಲೆ ಅಲ್ಲಿಂದ ಓಡಿದಳು. ತಾನು ಎಲ್ಲಿದ್ದೆನೆಂದು ಅರಿವಾಗಿರಬೇಕು.
ಎದ್ದು ಬಿಸಿಬಿಸಿಯಾದ ಹಂಡೆ ಸ್ನಾನ ಮಾಡಿ ಬಂದೆ. ಮೈಮನಗಳೆಲ್ಲ ಹಗುರೆನಿಸಿತು. ಇಣುಕುತ್ತಿದ್ದ ಸೂರ್ಯನಿಗೆ ನಮಸ್ಕರಿಸಿ ಗಾಯತ್ರಿ ಮಂತ್ರ ಪಠಿಸಿ ಒಳಗೆ ಬಂದೆ. ನನಗಿಂತ ಮೊದಲೆ ಫ್ರೆಸ್ಅಪ್ ಆಗಿ ಲಂಗದಾವಣಿಯಲ್ಲಿ ಮಿಂಚುತ್ತ ನಾಚುತ್ತ ನಿಂತಿದ್ದ ನನ್ನವಳನ್ನು ನೋಡುತ್ತ ಹಾಗೆ ನಿಂತುಬಿಟ್ಟೆ.
ಒಂದು ಹೆಜ್ಜೆ ಇಟ್ಟು ಕೈ ಮುಂದೆ ಮಾಡಿದವನನ್ನು, ಕೊಟ್ಟಿಗೆಯಲ್ಲಿನ `ಅಂಬಾ' ಎಂಬ ಧ್ವನಿ ಎಚ್ಚರಿಸಿತು. ಥಟ್ಟನೆ ಸಾವರಿಸಿಕೊಂಡು ತಿಂಡಿ, ತೀರ್ಥ ಏನೂ ಇಲ್ವ; ಹೊಟ್ಟೆ ಲಬೋ ಲಬೋ ಎನ್ನುತ್ತಿದೆ ಎಂದೆ. `ಬೆಳಗಾಯ್ತು ನಿನಗೆ, ಬರೀ ಹೊಟ್ಟೆ ಹೊರೆಯೋ ಚಿಂತೆ. ರಾತ್ರಿ 2 ಗಂಟೆಗೆ ಎಬ್ಬಿಸಿ 3ಕೆಜಿ ಸ್ವೀಟ್ ತಂದಿಟ್ಟರೂ ಮುಗಿಸಿಯೇ ಮಲ್ಗೋ ಜಾತಿ ನೀ... ಬಾ ಬಾ... ನಮ್ಮ ಆಯಿ ಸವತೆಕಾಯಿ ಇಡ್ಲಿ ಮಾಡಿದ್ದಾರೆ' ಎನ್ನುತ್ತ ಕೈ ಹಿಡಿದೆಳೆದೊಯ್ದವಳು.
ಅಡುಗೆ ಮನೆ ಬಾಗಿಲಲ್ಲಿ ಬಿಟ್ಟಳು. ಅವರಮ್ಮ ನಗುತ್ತ `ಬಾರಪ್ಪ' ಎಂದು ತಿಂಡಿಯನ್ನು ಮುಂದಿಟ್ಟರು. ನೀನು ಕುತ್ಕೊಳ್ಳೆ ಎನ್ನುತ್ತ ನನ್ನ ಪಕ್ಕದಲ್ಲಿ ಅವಳಿಗೂ ಪ್ಲೇಟನ್ನು ಇಟ್ಟರು. ತಿಂಡಿಪೋತ ಮುಕ್ಕು ಮುಕ್ಕು ಎಂದು ಅವಳು ಒಟಗುಡುತ್ತಿದ್ದುದು ನನಗೆ ಮಾತ್ರ ಕೇಳಿಸುತ್ತಿತ್ತು. ನಗು ನಿಯಂತ್ರಿಸಲಾಗದೇ ಬಾಯಿಗಿಟ್ಟ ಇಡ್ಲಿ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ಕೆಮ್ಮತೊಡಗಿದಾಗ, ಅವರಮ್ಮ ಓಡಿ ಬಂದು ನೀರು ಕೊಟ್ಟು `ಅಯ್ಯೋ.... ಮಗ ನೀರು ಕೊಡಲು ಮರೆತೆ, ನೀನಾದ್ರೂ ಕೊಡಬಾರದೆನೇ ಪಾಪ' ಎಂದು ತಲೆಯ ಮೇಲೆ ನಿಧಾನವಾಗಿ ಹೊಡೆದು ಬೆನ್ನು ತಿಕ್ಕಿದಾಗ, ಆ ತಾಯಿ ಪ್ರೀತಿಗೆ ನನ್ನ ಮನ ತುಂಬಿ ಬಂತು. ಆದರೆ ಪಕ್ಕದಲ್ಲಿದ್ದವಳು ನಿಧಾನವಾಗಿ ನನ್ನ ಭುಜ ಚಿವುಟಿ ತಿನ್ನೋ ಚಪಲಕ್ಕೆ ಬಕಬಕ ಮೇಯಬೇಕಿತ್ತಾ, ನಿಧಾನಕ್ಕೆ ಇಳಿಸು, ಮತ್ತೆ ಬೇಕಾದ್ರೂ ಇದೆ ಡೋಟ್ ವರಿ... ಎಂದಾಗ ನಸುನಕ್ಕು ಸುಮ್ಮನಾದೆ.
ತಿಂಡಿ ಮುಗಿಸಿ ಅವರಮ್ಮನ ಅಪ್ಪಣೆ ಪಡೆದು ಕಾಡಿನ ಕಡೆಗೆ ಹೊರಟೆವು. ನಮಗೆದುರಾದ ಪಕ್ಕದ್ಮನೆ ಪುಟ್ಟನನ್ನು ಜತೆ ಬರುತ್ತೀಯೇನೋ ಅಂದವಳು, ತುಟಿಕಚ್ಚಿಕೊಂಡು ಏನೋ ತಪ್ಪು ಮಾಡಿದವಳಂತೆ ನನ್ನ ನೋಡಿದಳು. ಶಿವ ಪೂಜೆಯಲ್ಲಿ ಕರಡಿ... ಎಂದು ನಾ ಬುಸುಗುಡುತ್ತಿದ್ದುದು ಅವಳಿಗೆ ಅರಿವಾಗಿ, ಬೇಡಾ ಪುಟ್ಟಾ ಎಂದು ಬಾಯಿ ತೆಗೆಯುವಷ್ಟರಲ್ಲಿ ಅವನು ನಮ್ಮನ್ನು ಬಿಟ್ಟು ಅಂಗಳ ದಾಟಿಯಾಗಿತ್ತು. ಸಿಕ್ಕ ಸಿಕ್ಕ ಮರಕ್ಕೆ ಕಲ್ಲು ಹೊಡೆಯುತ್ತ ಅವನು ಸಾಗುತ್ತಿದ್ದರೆ, ಅವನ ಹಿಂದೆ ಅವಳಿಟ್ಟ ಹೆಜ್ಜೆಯ ಮೇಲೆ ಹೆಜ್ಜೆಯನಿಡುತ್ತ ನಾನು ನಡೆಯುತ್ತಿದ್ದೆ.
`ಏನು ಸಪ್ತಪದಿ ತುಳಿತಿದ್ದೀಯಾ? ಬಾ ಕೋತಿ ಥರಾ ಆಡಬೇಡಾ ನೀ' ಎಂದು ಎಳೆದು ಜತೆ ನಡೆದಳು. ಮಗುಮ್ಮಾಗಿ ನಡೆಯುತ್ತಿದ್ದ ನನಗೆ `ಏನು ಬೇಜಾರಾಯ್ತಾ? ಸಾರಿ ಕಣೋ, ಪಾಪ ಮಗು ಅಲ್ವಾ? ಪ್ಲಿಸ್....' ಅಂದಳು. ಇದಕ್ಕೇನಾ ನನ್ನ ಇಷ್ಟು ದೂರ ಕರೆದುಕೊಂಡು ಬಂದಿದ್ದು? ಎಂದಾಗ ಹೇಳಿದ್ನಲ್ಲಾ `ಸಾ..........ರಿ' ಎಂದು ಗಟ್ಟಿಯಾಗಿ ಕೈ ಹಿಡಿದಳು. ಸರಿಬಿಡು ಎನ್ನುತ್ತಾ ಜಗಳ ಕಾಯುತ್ತಾ ನಡೆದೆವು. ಪುಟ್ಟ ತನಗೆ ನಿಮ್ಮ್ ಸಂಗವೇ ಬೇಡ ಎಂಬಂತೆ ಮುಂದೆ ಮುಂದೆ ಸಾಗುತ್ತಿದ್ದ. ಅಷ್ಟರಲ್ಲಿ ತುಂತುರು ಮಳೆ ಪ್ರಾರಂಭವಾಯಿತು. ಓಡಿ ಬಂದ ಪುಟ್ಟಾ ಅವಳ ಕೈಯಲಿದ್ದ ಛತ್ರಿಯನ್ನು ಕಿತ್ತುಕೊಂಡು ಓಡಿದ. ಅನಿವಾರ್ಯವಾಗಿ ಅವಳು ನನ್ನ ಛತ್ರಿಯಡಿಗೆ ಬರಬೇಕಾಯಿತು. ಮೌನವಾಗಿ ನಡೆದವು. ಅವಳ ತಲೆ ಒದ್ದೆಯಾಗಿ ಮುಂಗುರುಳಿನಿಂದ ನೀರ ಹನಿ ಒಂದೊಂದೆ ಇಳಿಯುತ್ತಿರುವಾಗ ನನ್ನ ಕೈಯನ್ನು ಅಡ್ಡ ಹಿಡಿದು, ಆ ನೀರನ್ನು ಹಿಡಿದೆ.
ಏನೋ ಇದು ಎಂದ ಅವಳ ಮಾತಿಗೆ `ಸ್ವಾತಿಮುತ್ತು' ಎಂದೆ. ಸುಮ್ಮನಾದಳು. ಥಟ್ಟನೆ ಕೊಡೆಯನ್ನು ಎಸೆದು, ತುಂತುರು ಮಳೆಗೆ ಮೈ ಒಡ್ಡಿ ಆಸ್ವಾದಿಸಿದೆ..... ಓಡಿ ಹೋಗಿ ಛತ್ರಿಎ ತ್ತಿಕೊಂಡು, `ಕತ್ತೆ ತರಾ ಆಡಬೇಡಾ... ಬಾ' ಎಂದು ಬೈದು ಛತ್ರಿಯನ್ನು ಹಿಡಿದಳು. ಕಾನನವ ಸುತ್ತಿ, ಬಿದಿರಿನ ಕಳಿಲನ್ನು ಮುರಿದುಕೊಂಡು ಹಿಂತಿರುಗುವಾಗ ಮತ್ತೆ ಸೂರ್ಯ ಇಣುಕಿದ್ದ. ಮನೆಗೆ ಬಂದಾಗ ಮಧ್ಯಾಹ್ನ 2 ಗಂಟೆ. ಅವರಮ್ಮ ಊಟ ಸಿದ್ಧ ಮಾಡಿಟ್ಟಿದ್ದರು. ಊಟ ಮುಗಿಸಿ 2 ತಾಸು ಗಡದ್ದಾಗಿ ನಿದ್ದೆ ಹೊಡೆದೆ. ರಾತ್ರಿ 8ಕ್ಕೆ ಬಸ್, ಎದ್ದೇಳು ಎಂದವಳಿಗೆ `ನೀ ನನ್ನ ಕರ್ಕೊಂಡು ಬಂದಿದ್ದು ಯಾಕೆ? ಎಂದೆ. ಮೌನವಾದಳು.
ಗಡಿಯಾರ ಆರು ಗಂಟೆ ತೋರಿಸುತ್ತಿತ್ತು. ಹಾಲು ಕುಡಿದು ಜೀಕುತ್ತಿದ್ದ ಕರು ಕನಕಳನ್ನು ಬಾಚಿ ತಬ್ಬಿಕೊಂಡು ಮುದ್ದುಗರೆದೆ. ಅವಳು ನನ್ನನ್ನೆ ದುರುಗುಟ್ಟಿ ನೋಡುತ್ತಿದ್ದಳು. ಹೆದರಿವನಂತೆ ಕರುವನ್ನು ಬಿಟ್ಟು `ಹೊಟ್ಟೆಕಿಚ್ಚಾ....?' ಎಂದೆ.
8ಕ್ಕೆ ಬಸ್ ಹತ್ತಬೇಕಾದ್ದರಿಂದ ಏಳು ಗಂಟೆಗೆ ಅವರಮ್ಮ ಊಟಕ್ಕೆ ಬಡಿಸಿದ್ದರು. ಬಾಳೆ ಎಲೆ ತಂದಿಟ್ಟು ಉಪ್ಪಿನಕಾಯಿ ಬಡಿಸುತ್ತಿದ್ದ ಅವಳ ಕೈ ಹಿಡಿದು `ಹೋಗುತ್ತಿದ್ದೇವೆ, ಧಾವಂತದಲ್ಲಿ ಕರೆ ತಂದಿದ್ದು ಯಾಕೆ ಎಂದು ಇನ್ನೂ ಹೇಳಲಿಲ್ಲವಲ್ಲ' ಎಂದು ಹಲ್ಲು ಕಡಿಯುತ್ತಾ ಹೇಳಿದೆ. ಆಗಲೂ ಮೌನ. ಪಕ್ಕ ಬಂದು ಊಟಕ್ಕೆ ಕೂತಳು. ಅವರಮ್ಮ ಅಕ್ಕಿರೊಟ್ಟಿ ತಂದು ಎಲೆಗೆ ಹಾಕಿದರು. ಘಮಘಮಿಸುತ್ತಿದ್ದ ಸಾಂಬಾರು ಹಾಕಿದಾಗ ಅವಳು ಸಣ್ಣಗೆ ನಕ್ಕಿದ್ದು ಕೇಳಿಸಿತು.
ಏನಿದು? ಅಂದೆ. `ಚಿಕನ್.... ತಿನ್ನು' ಎಂದಳು. `ಛೀ... ನಾನು ತಿನ್ನಲ್ಲ' ಎಂದು ಏಳಲು ಹೋದಾಗ, `ಅಲ್ವೋ ಮಾರಾಯಾ... ತಿಂದು ನೋಡು' ಎಂದಳು. ರೊಟ್ಟಿಯನ್ನು ಮುರಿದು ಸಾಂಬಾರಿಗೆ ಅದ್ದಿಸಿ ಅದರಲ್ಲಿದ್ದ ತುಂಡನ್ನು ಅಳುಕುತ್ತ ಬಾಯಿಗಿರಿಸಿದ್ದೆ. ಸಂತಷದಿಂದ `ಅಣಬೆನಾ?' ಎಂದು ಕೇಳಿದೆ. ಹೂಂ, ಮೊನ್ನೆ ಆಯಿ ಫೋನ್ ಮಾಡಿ `ಕಾಡಲ್ಲಿ ಅಣಬೆ ಮೊಳಕೆಯೊಡೆಯುತ್ತಿದೆ. ಎರಡು ದಿನಕ್ಕೆ ದೊಡ್ಡದಾಗುತ್ತೆ. ಬಂದುಬಿಡು' ಎಂದಿದ್ದಳು. ಅಣಬೆ ಎಂದರೆ ನಿನಗಿಷ್ಟ ಅಲ್ವಾ ಅದಕ್ಕೆ..... ಅಂದಾಗ ಕಕ್ಕುಲತೆಯಿಂದ ಅವಳ ಮುಖ ನೋಡಿದ್ದೆ.
ಚಿಮಣಿ ದೀಪದ ಬೆಳಕಲ್ಲಿ ಅವಳ ಮುಖ ಮಿಂಚುತ್ತಿತ್ತು...... ನನಗಿಷ್ಟವಾದ ಅಣಬೆ ಸಾರು ತಿನ್ನಿಸಿದ ಧನ್ಯತೆಯಿಂದ...