ಮುಂಗಾರಿನ ಅಭಿಷೇಕಕೆ......
ಮುಂದುವರಿದ ಭಾಗ........ಅಲ್ವೋ, ನಾವು ಬಸ್ಸಲ್ಲಿದ್ದೀವಿ ಅನ್ನೋ ಜ್ಞಾನಾ ಆದ್ರೂ ಇದ್ಯಾ ನಿಂಗೆ. ಸುಮ್ನೆ ಮಲ್ಕೊ' ಎಂದಳು. ಅವಳ ಮಾತಲ್ಲಿನ ಸತ್ಯಾಂಶ ಅರಿತು, 'ಹುಂ ಕಣೆ' ಎಂದು, ಅವಳ ಕಾಲ ಮೇಲೆಯೇ ತಲೆ ಇಟ್ಟು ಮಲಗಿದೆ. ಅವಳು ನನ್ನ ತಲೆಯನ್ನು ನೇವರಿಸುತ್ತಾ,'ರಾತ್ರಿ 10.30ರ ಸುಮಾರಿಗೆ ನಮ್ಮೂರಲ್ಲಿರುತ್ತೇವೆ. ಬೇಜಾರು ಮಾಡ್ಕೋ ಬೇಡ' ಎಂದಳು. ಆಗ ಸಾಯಂಕಾಲ ಏಳರ ಸಮಯ.
ಪ್ರಥಮವಾಗಿ ಅವಳ ಕಾಲ ಮೇಲೆ ಮಲಗಿದ ಅನುಭೂತಿಯನ್ನು ಅನುಭವಿಸುತ್ತಲೇ ಕಣ್ಣನ್ನು ಮುಚ್ಚಿಕೊಂಡೆ. ಎಚ್ಚರಾದಾಗ ರಾತ್ರಿ 9.50. ಹತ್ತರ ಸುಮಾರಿಗೆ ಅವಳೂರಿನ ಪಕ್ಕದ ಪಟ್ಟಣದಲ್ಲಿದ್ದೇವು. ಅಲ್ಲಿಂದ ರಿಕ್ಷಾ ಮಾಡಿಕೊಂಡು ಅವಳ ಗ್ರಾಮಕ್ಕೆ ರಾತ್ರಿ 10.45ಕ್ಕೆ ಕಾಲಿಟ್ಟೆವು.
ನಮ್ಮ ಬರುವಿಕೆಗಾಗಿಯೇ ಕಾದು ಕುಳಿತಿದ್ದ ಅವಳಮ್ಮ, ತುಂಬು ಹೃದಯದಿಂದ ನನ್ನನ್ನು ಬರಮಾಡಿಕೊಂಡರು. ಸಂಕೋಚದಿಂದಲೇ ಮನೆಯೊಳಗೆ ಕಾಲಿಟ್ಟ ನಾನು ಸುತ್ತಲೂ ಒಮ್ಮೆ ಕಣ್ಣಾಡಿಸಿದೆ. ಅಪ್ಪಟ ಮಲೆನಾಡ ಶೈಲಿಯಲ್ಲಿ ನಿರ್ಮಿಸಿದ ಮನೆ. ಪ್ರಥಮ ನೋಟದಲ್ಲೆ ಅದು ನನ್ನನ್ನು ಸೆಳೆದುಕೊಂಡು ಬಿಟ್ಟಿತು. ಅಷ್ಟರಲ್ಲಾಗಲೆ, ಅಮ್ಮ 'ಕೈ-ಕಾಲು ತೊಳೆದುಕೊಂಡು ಬನ್ನಿ' ಎಂದು ಸ್ನಾನದ ಗೃಹದ ಕಡೆ ಕೈ ತೋರಿಸಿದರು.
ಅವರ ಆಣತಿಯಂತೆ ಸ್ನಾನದ ಕೊಠಡಿಗೆ ತೆರಳುತ್ತಿದ್ದೆ. ಒಮ್ಮೆಲೆ ಕತ್ತಲಾವರಿಸಿತು...! ಏನಿದು ಎಂದು ಅರಿಯುವಷ್ಟರಲ್ಲಿಯೇ, 'ಅಯ್ಯೋ, ಕರೆಂಟ್ ಹೊಯ್ತಾ? ಅವರು ಸ್ನಾನದ ಕೊಠಡಿಗೆ ಹೋಗಿದ್ದಾರೆ, ಬೇಗ ಮೊಂಬತ್ತಿ ಹಚ್ಚಿಕೊಂಡು ಹೋಗು' ಎಂದು ಅಮ್ಮ ಮಗಳಿಗೆ ಹೇಳಿದ್ದು ಕಿವಿಗೆ ಬಿತ್ತು. ಸುತ್ತೆಲ್ಲ ಕತ್ತಲಾವರಿಸಿದ್ದು, ಏನೂ ಕಾಣದಂತಾಗಿ ನಿಂತಲ್ಲೆ ತಡವರಿಸುತ್ತಿದ್ದೆ.
ಅರೆಕ್ಷಣದಲ್ಲಿ ಮಗ(ನನ್ನವ)ಳು ಮೊಂಬತ್ತಿ ಹಿಡಿದುಕೊಂಡು ನನ್ನೆಡೆಗೆ ಬಂದಳು. ಹೊರಗೆ ಸುಯ್ಯನೆ ಬೀಸುವ ಸುಳಿಗಾಳಿಗೆ ಮೊಂಬತ್ತಿಯ ಬೆಳಕು ಆಕಡೆ, ಈಕಡೆ ಓಲಾಡುತ್ತಿತ್ತು. ಬೆಳಕು ಆರಿ ಹೋಗುವುದೆಂದು ಅದಕ್ಕೆ ಅಡ್ಡವಾಗಿ ತನ್ನ ಕೈ ಹಿಡಿದಿದ್ದಳು. ಆ ಕಾರ್ಗತ್ತಲಲ್ಲಿ ಮೊಂಬತ್ತಿಯ ಬೆಳಕು ಬಿಟ್ಟರೆ ಮತ್ತ್ಯಾವ ಬೆಳಕು ಗೋಚರಿಸುತ್ತಿರಲಿಲ್ಲ. ಅಡ್ಡವಾಗಿ ಹಿಡಿದ ಮೊಂಬತ್ತಿಯ ಬೆಳಕಿಗೆ ಅವಳ ಮೊಗ ಚಂದ್ರನಂತೆ ಹೊಳೆಯುತ್ತಿತ್ತು. 'ಅಮವಾಸ್ಯೆಯ ಕತ್ತಲಲ್ಲಿ ಚಂದ್ರನ ದರ್ಶನವೇ...?' ಎಂದು ನಸುನಗುತ್ತ ಕೇಳಿದೆ. 'ಬೇಗ ಮುಖ ತೊಳಿರಿ, ಯಾವ ಘಳೀಗೆಲಿ ನಮ್ಮನೆಗೆ ಕಾಲಿಟ್ಟಿದ್ದಿರೋ... ಏನೋ? ಕರೆಂಟೇ ಹೋಯ್ತು; ಥೂ... ನಿಮ್ಮ' ಎಂದು ಸುಮ್ಮನೇ ರೇಗಿದಳು. 'ಬೇಗ ಬನ್ನಿ, ಊಟಕ್ಕೆ ಬಡಸಿದ್ದೀನಿ' ಅನ್ನೋ ಅಮ್ಮನ ಮಾತು ದೂರದಿಂದ ಸಣ್ಣಗೆ ಕೇಳಿಸಿತು.
ಕಾಯಿ ಚಟ್ನಿ, ತಂಬಳಿ, ಹಪ್ಪಳ ಮತ್ತು ಸಂಡಿಗೆಯ ಊಟ, ಬಾಯಿ ಚಪ್ಪರಿಸುವಂತೆ ಮಾಡಿತು. ಹೊಟ್ಟೆ ತುಂಬಿದರೂ ಮತ್ತೂ ಸ್ವಲ್ಪ ತಿನ್ನೋಣ ಎಂದುಕೊಂಡೆ. ಪಕ್ಕದಲ್ಲೆ ಊಟ ಮಾಡುತ್ತ ಕುಳಿತ ಅವಳಿಗೆ ನನ್ನ ಬಯಕೆ ಅರ್ಥವಾಗಿರಬೇಕು. `ಯಾಕೋ ಹೊಟ್ಟೆಬಾಕ... ನಾಚ್ಕೋತಿಯಾ? ನಿನಗೆ ಇಷ್ಟ ಅಂತಾನೆ ಅಮ್ಮ ಮಾಡಿದ್ದು, ಬೇಕಾದಷ್ಟು ಇಳಿಸು' ಎಂದು ಖಾರವಾಗಿ ಉತ್ತೇಜಿಸಿದಳು. ಸ್ವಲ್ಪ ಅನ್ನ ಹಾಕಿಸಿಕೊಂಡು ತಂಬಳಿ ಜತೆ ಊಟ ಮಾಡಿ ತೇಗಿದೆ. 'ಈಗ ತೃಪ್ತಿ ಆಯ್ತು ನೋಡು ಹುಡುಗಿ' ಎಂದು, ಕೈ ತೊಳೆಯಲು ಹೊರಟೆ, ಮಾಯವಾದ ಕರೆಂಟ್ ಆಗ ಪ್ರತ್ಯಕ್ಷವಾಗಿತ್ತು.
'ಬಾ ಮೇಲೆ ಹೋಗೋಣ' ಎಂದು ನನ್ನನ್ನು ಅಟ್ಟದ ಮೇಲೆ ಅವಳು ಕರೆದೊಯ್ದಳು. ಅಲ್ಲಿ ಎರಡು ಕೊಠಡಿಯಿದ್ದು, ಒಂದು ಕೊಠಡಿ ಮನೆಗೆ ಬಂದ ಅತಿಥಿಗೆಂದು ಸಿದ್ದಪಡಿಸಲಾಗಿತ್ತು. ಅಲ್ಲಿಗೆ ನನ್ನನ್ನು ಕರೆದೊಯ್ದ ಅವಳು, 'ಎರಡು ದಿನ ಈ ಕೊಠಡಿ ನಿನಗಾಗಿ ಮೀಸಲು' ಎಂದಳು. 'ಹೌದಾ.. ನನಗೊಬ್ಬನಿಗೆ ಇಲ್ಲಿ ಮಲಗಲು ಭಯವಾಗುತ್ತದೆ, ಹೊಸ ಜಾಗ' ಎಂದೆ. ಏನೋ ಅರ್ಥ ಮಾಡಿಕೊಂಡವಳಂತೆ. 'ಪರ್ವಾಗಿಲ್ಲ, ನಮ್ಮ ತೋಟದ ಕೆಲಸ ಮಾಡುವ ತಿಮ್ಮನನ್ನು ಕಳುಹಿಸುತ್ತೇನೆ' ಎಂದು ಕೆನ್ನೆ ಕೆಂಪಗೆ ಮಾಡಿಕೊಂಡು, ಬಾಗಿಲನ್ನು ಧಡಕ್ಕನೇ ಹಾಕಿ ಹೊರ ಹೋದಳು....!
ಪಯಣದ ಆಯಾಸ ಮೈ-ಮನಗಳನ್ನು ಹೈರಾಣವಾಗಿಸಿತ್ತು. ಹಾಸಿಗೆ ಮೇಲೆ ಮಲಗಿದ್ದೊಂದು ಗೊತ್ತು. ಯಾವ ಕ್ಷಣದಲ್ಲಿ ನನ್ನನ್ನು ನಿದ್ರೆ ಆವರಿಸಿತ್ತೋ ಗೊತ್ತಿಲ್ಲ. ಎಚ್ಚರವಾದಾಗ ಮುಂಜಾನೆ ಒಂಬತ್ತು. ಸೂರ್ಯನ ಕಿರಣ ನನ್ನನ್ನು ಅಣಕಿಸುವಂತೆ ಕಿಟಕಿಯನ್ನು ನುಸಳಿ ಬರುತ್ತಿತ್ತು. ಆಲಸ್ಯ ನನ್ನನ್ನು ಬಿಗಿದಪ್ಪಿಕೊಂಡಿದೆಯೇನೋ ಎಂಬಂತೆ, ಮೈ ಮುರಿದು ಮತ್ತೆ ಹೊರಳಿ ಮಲಗಿದೆ. ಮುಂಜಾನೆಯ ಆ ನಿದ್ರೆಯ ಸುಖ.... ಅನುಭವಿಸಿದವನಿಗೇ ಗೊತ್ತು. ಆ ಸುಖದ ಮತ್ತಲಿನಲ್ಲಿ ಪವಡಿಸಿ ತೇಲಾಡುತ್ತಿದ್ದ ನನಗೆ, ಹೊರಗಡೆಯಿಂದ ಯಾವುದೋ ದೇವಿಯ ಸ್ತೋಸ್ತ್ರ ಸಣ್ಣದಾಗಿ ಕೇಳಿ ಬರುತ್ತಿತ್ತು? ಬರಬರುತ್ತ ಆ ಸ್ತೋಸ್ತ್ರ ದೊಡ್ಡದಾಗಿ ಅದು, ಶ್ರೀದೇವಿಯದಲ್ಲ ನನ್ನ ದೇವಿಯ ಬೈಗುಳದ ಸ್ತೋಸ್ತ್ರ ಎಂದು ಮನದಟ್ಟಾಯಿತು. 'ನಾಚಿಕೆ ಬಿಟ್ಟವನೆ, ಒಂಬತ್ತಾಯಿತು; ಇನ್ನೂ ಹಾಸಿಗೆ ಮೇಲೆ ಹೊರಳಾಡ್ತಾ ಇದ್ದಿಯಾ? ಥೂ... ನಿನ್ನ, ಏಳೋ ಮೇಲೆ' ಎಂದು ಚಾದರ ಎಳೆದು ತಂಬಿಗೆಯಿಂದ ನೀರು ಸುರಿಯಲು ಅಣಿಯಾದಳು...!
ಮಿಂಚಿನಂತೆ ಕ್ಷಣ ಮಾತ್ರದಲ್ಲಿ ಎಚ್ಚೆತ್ತುಕೊಂಡು ನನ್ನತ್ತ ಎಳೆದುಕೊಂಡೆ....................................!
ಮುಂದುವರಿಯುವುದು........
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ