ಭಾನುವಾರ, ಮೇ 25, 2014

ಎಲ್ಲಿ ಹೋದವು ಅಮ್ಮಾ ನನ್ನ ಗುಬ್ಬಚ್ಚಿಗಳು.....?

ನಾಗರಾಜ್ ಬಿ.ಎನ್. ಬಾಡ-ಕುಮಟ
ಮುಂಜಾನೆಯ ಹಾಯಾದ ಸುಖ ನಿದ್ದೆ. ಆಗಲೇ ಮೂರುಸಾವಿರ ಮಠದ ಗಂಟೆ ಆರು ಬಾರಿ ಹೊಡೆದುಕೊಂಡಿತ್ತು. ಕಣ್ಣನ್ನು ಉಜ್ಜುತ್ತ ಯಾಕಾದರೂ ಬೆಳಕು ಹರಿಯುತ್ತೋ ಎಂದು ಗೊಣಗುತ್ತಲೇ ಹಾಸಿಗೆಯಿಂದ ಮೇಲೆದ್ದೆ. ಬಾಗಿಲು ತೆರೆದು ಹೊರಗಡೆ ಒಮ್ಮೆ ಕಣ್ಣಾಡಿಸಿದೆ.
ದೂರದ ಬನ್ನಿ ಮರದ ಮೇಲೆ ಎರಡು ಗುಬ್ಬಚ್ಚಿಗಳು ಸ್ವಚ್ಛಂದವಾಗಿ ಹಾರಾಡುತ್ತಿದ್ದವು.
ಪುಟ್ಟ ಗುಬ್ಬಚ್ಚಿಗಳ ಹಾರಾಟ ನೋಡುತ್ತ, ಚಿಂವ ಚಿಂವ ಸದ್ದು ಕೇಳುತ್ತ ಅಲ್ಲಿಯೇ ನಿಂತು ಬಿಟ್ಟೆ. ಅರಿವಿಲ್ಲದೆ ಕಣ್ಣಾಲಿಗಳು ತೇವಗೊಂಡವು.
ಅರೆ ಕ್ಷಣದಲ್ಲಿಯೇ ಮನೆಗೆ ಫೋನಾಯಿಸಿದೆ. ಅಮ್ಮ ಫೋನ್ ರಿಸೀವ್ ಮಾಡಿದ್ದಳು.
`ಅಮ್ಮಾ, ಗುಬ್ಬಚ್ಚಿಗಳು ಮನೆಗೆ ಬರ್ತಾ ಇವೆಯಾ? ಬರ್ಡ್ ಫೀಡರ್(ಸ್ನೇಹಿತ ದಿನು, ತನ್ನ ಜನ್ಮದಿನಕ್ಕೆ ನನಗೆ ನೀಡಿದ ಗಿಫ್ಟ್)ನಲ್ಲಿ ಹಾಕಿಟ್ಟ ಆಹಾರ ತಿನ್ನೋಕೆ ಎಷ್ಟು ಗುಬ್ಬಚ್ಚಿಗಳು ಬರ್ತಾ ಇವೆ?'
ಬೆಳ್ಳಂಬೆಳಿಗ್ಗೆ ಮಗನ ಫೋನ್ ಗೆ ಮತ್ತು ಪ್ರಶ್ನೆಗಳಿಗೆ ಅಮ್ಮ ತುಸು ಆಶ್ಚರ್ಯಕ್ಕೀಡಾದಳು ಅನ್ಸತ್ತೆ.
`ಏನಾಯ್ತೋ ಮಗ.. ಹಾಸಿಗೆಯಿಂದ ಏಳ್ತಾನೆ ಗುಬ್ಬಿ, ಗುಬ್ಬಿ ಅಂತ ಇದ್ದೀಯಾ?'
`ಯಾಕಿಲ್ಲಮ್ಮಾ, ಇಲ್ಲಿ ಎರಡು ಗುಬ್ಬಚ್ಚಿಗಳು ಚಿಂವ ಚಿಂವ ಎನ್ನುತ್ತ ಓಡಾಡ್ತಾ ಇವೆ. ಅಲ್ಲಿಯೂ ಹೀಗೆ ಆಟ ಆಡ್ತಾ ಇವೆಯಾ ಅಂತ ಫೋನ್ ಮಾಡಿದೆ'
'ಈಗ ಎಲ್ಲೋ ಆ ಪುಟ್ಟ ಗುಬ್ಬಚ್ಚಿಗಳು? ಏಳೆಂಟು ವರ್ಷಗಳೇ ಕಳೆದು ಹೋದವು. ಹುಡುಕುತ್ತಾ ಹೋದರೂ ಒಂದು ಗುಬ್ಬಿ ಸಹ ಕಾಣಲ್ಲ'
`ಅಮ್ಮಾ, ನಾನು ಕನ್ನಡ ಶಾಲೆಗೆ ಹೋಗುವಾಗ ಎಷ್ಟೊಂದು ಗುಬ್ಬಚ್ಚಿಗಳು ಮನೆಗೆ ಬರ್ತಾ ಇದ್ದವು ಅಲ್ವಾ? ಮನೆ ಒಳಗಡೆಯ ಫೋಟೋದ ಹಿಂದೆ, ಹಂಚಿನ ಕೆಳಗೆ ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡಿ ಸಂಸಾರ ನಡೆಸ್ತಾ ಇದ್ದವು. ಈಗ ಅವೆಲ್ಲ ಎಲ್ಲಿ ಅಮ್ಮಾ...?'
ಅಮ್ಮ ಮೌನಕ್ಕೆ ಶರಣಗಾಗಿದ್ದಳು.... ನನ್ನ ಮಾತು ಮುಂದುವರಿದಿತ್ತು.
`ಕೈ-ಕಾಲಿಗೆ ಎಡತಾಕುತ್ತ, ಚಿಂವ ಚಿಂವ ಎಂದು ಹಾರಾಡುತ್ತ ಮನೆಯ ವಾರಸುದಾರರ ಹಾಗೆ ಕಾರುಬಾರು ನಡೆಸ್ತಾ ಇರ್ತಿದ್ದರು ಅಲ್ವಾ ಅಮ್ಮ? ನೀನು ಅಕ್ಕಿ ಆರಿಸುವಾಗ ನಿನ್ನ ಪಕ್ಕದಲ್ಲಿಯೇ ಅವರು ಕುಣಿದು ಕುಪ್ಪಳಿಸಿ, ಒಂದೊಂದೆ ಕಾಳನ್ನು ಹೆಕ್ಕಿ ತಿನ್ತಾ ಇದ್ದರು. ಅಪರಿಚಿತರೇನಾದರೂ ಬಂದಾಗ ಪುರ್ರ ಎಂದು ಹಾರಿ ಹೋಗ್ತಾ ಇದ್ದರು. ನಾನು ಶಾಲೆಗೆ ಹೋದ ಸಮಯ ಆ ಗುಬ್ಬಚ್ಚಿಗಳೇ ಅಲ್ವಾ ಅಮ್ಮಾ, ನಿನ್ನ ಜೊತೆಯಾಗಿರ್ತಿದ್ದವರು? ಎಲ್ಲಿ ಹೋದವು ಅಮ್ಮಾ ಆ ನನ್ನ ಮುದ್ದು ಗುಬ್ಬಚ್ಚಿಗಳು.....?'
ಅಮ್ಮನಿಗೆ ಮಾತೇ ಹೊರಡುತ್ತಿರಲಿಲ್ಲ. ಏನು ಹೇಳಬೇಕೆಂದು ತೋಚದೆ ಹಾಂ... ಹಾಂ... ಎನ್ನುತ್ತಿದ್ದಳು. ಕೊನೆಗೂ ಅಮ್ಮ ತುಟಿ ಬಿಚ್ಚಿದಳು...
'ಮಗ, ಅದೇ ಮೊಬೈಲ್ ಟವರ್ ಗಳಿಂದ ಗುಬ್ಬಿ ಸಂತತಿ ನಾಶವಾಗಿದೆಯಂತೆ. ಕೆಲವು ಗುಬ್ಬಚ್ಚಿಗಳು ಬೇರಡೆ ವಲಸೆ ಹೋಗಿವೆಯಂತೆ. ರಾಸಾಯನಿಕ ಮಿಶ್ರಿತ ಆಹಾರದಿಂದಾಗಿ ಅದಕ್ಕೆ ಬೇಕಾದ ಸಾವಯವ ಆಹಾರ ಕೂಡಾ ಸರಿಯಾಗಿ ಸಿಗ್ತಾ ಇಲ್ವಂತೆ. ಏನ್ಮಾಡೋದು.. ಆಧುನಿಕ ತಂತ್ರಜ್ಞಾನ ಬೆಳೆದಂತೆ ಪ್ರಕೃತಿಯ ಸಮತೋಲನ ಕೂಡಾ ಏರುಪೇರಾಗುತ್ತಿದೆ. ಅದು ನೇರವಾಗಿ ನಮ್ಮ ಗುಬ್ಬಚ್ಚಿಯ ಸಂತತಿಗೆ ಮಾರಕವಾಗ್ತಿರೋದು ವಿಪರ್ಯಾಸ. ಪಾಪ, ವಲಸೆ ಹೋಗಿರುವ ಗುಬ್ಬಚ್ಚಿಗಳಾದರೂ ಬೆಚ್ಚಗಿರಲಿ'
ಈಗ ಮಾತನಾಡುವ ಸರದಿ ಅಮ್ಮನದಾಗಿತ್ತು. ನಾನು ಅವಳ ಮಾತಿಗೆ ಕಿವಿಯಷ್ಟೇ ಆಗಿದ್ದೆ.
'ಅಂದ ಹಾಗೆ, ಬರ್ಡ್ ಫೀಡರ್ ಅಂದ್ಯಲ್ಲ. ನೀ ತೂಗು ಹಾಕಿದ ಜಾಗದಲ್ಲಿ ಇಷ್ಟು ದಿನ ಆದ್ರೂ ಒಂದು ಗುಬ್ಬಚ್ಚಿನೂ ಬಂದಿಲ್ಲ. ಹಕ್ಕಿಯೂ ಬಂದಿಲ್ಲ. ಅದಕ್ಕಾಗಿ ಆ ಜಾಗವನ್ನು ಬದಲಿಸಿ ಬೇರೆಡೆ ಇಟ್ಟಿದ್ದೇನೆ. ನೋಡೋಣ, ಅಲ್ಲಿಯಾದರೂ ಬರ್ತವೋ ಇಲ್ವೋ ಎಂದು. ನೀ ಬೇಜಾರು ಮಾಡ್ಕೋ ಬೇಡ. ಹೂಂ ನಾ?'
ಅಮ್ಮ ಮಾತನಾಡುತ್ತ ಮಾತನಾಡುತ್ತ ಗದ್ಗದಿತಳಾದಳು. ಉಮ್ಮಳಿಸಿ ಬರುವ ದುಃಖವನ್ನು ತಡೆದು ನನ್ನನ್ನು ಸಂತೈಸುವ ಸಾಹಸಕ್ಕಿಳಿದಿದ್ದಳು. ಇತ್ತ ನನ್ನ ಕೆನ್ನೆಯ ಮೇಲಿಂದ ಕಂಬನಿಗಳು ನಿಧಾನವಾಗಿ ಉರುಳುತ್ತಿದ್ದವು. ಎಷ್ಟಾದರೂ ಕರಳು-ಬಳ್ಳಿಯ ಸಂಬಂಧ ಅಲ್ವಾ...?
ನಂತರ ದೂರದಲ್ಲಿರುವ ನನ್ನ ಆತ್ಮ ಬಂಧುವಿಗೆ ಫೋನಾಯಿಸಿ, ನಡೆದ ಎಲ್ಲ ವಿಷಯವನ್ನು ಹೇಳಿದೆ. ನನಗೆ ಗುಬ್ಬಚ್ಚಿ ಬೇಕು ಎಂದು ಗೋಗರೆದೆ. ಮಾತಿನ ಮಧ್ಯೆ ಅವಳು 'ಗುಬ್ಬಚ್ಚಿ ಪಾರ್ಕ್' ಮಾಡುವ ಯೋಜನೆ ಹರಿಯ ಬಿಟ್ಟಳು.
ಗುಬ್ಬಚ್ಚಿ ಪಾರ್ಕ್ ಯೋಜನೆ ನನಸಾಗಿದ್ದು, ಗುಬ್ಬಚ್ಚಿಗಳ ಜೊತೆ ಒಡನಾಡುತ್ತಿದ್ದದ್ದು, ಅವುಗಳ ಚಿಂವ ಚಿಂವ ಕಲರವ..... ಎಲ್ಲವನ್ನು ಕಲ್ಪಿಸಿಕೊಳ್ಳುತ್ತ ಕ್ಷಣಕಾಲ ಕಣ್ಮುಚ್ಚಿದೆ.
ಕಲ್ಪನಾ ಲೋಕದಲ್ಲಿ ಗುಬ್ಬಚ್ಚಿಗಾಗಿ ಬದುಕಿದ ಸಾರ್ಥಕತೆಯ ಭಾವ ನನ್ನಲ್ಲಿ ಮೇಳೈಸಿತು. ಆದರೇ.... ಅದು ನಿಜ ಬದುಕಲ್ಲಿ ಎಂದೋ...? 

ಶುಕ್ರವಾರ, ಮೇ 23, 2014

'ಸ್ನೇಹ'ದಲ್ಲೊಂದು ಪ್ರೇಮ ರಾಗ....

ನಾಗರಾಜ ಬಿ.ಎನ್.
ಆತನ ಹೆಸರು ಕುಮಾರ. ಸದಾ ಕ್ರಿಯಾಶೀಲ ವ್ಯಕ್ತಿತ್ವದ ಹುಡುಗ. ಗುಣವಂತ... ಪ್ರಾಮಾಣಿಕ... ಸ್ನೇಹ ಜೀವಿ.
ದೈವಿಚ್ಛೆಯೋ.. ಆಕಸ್ಮಿಕವೋ... ವೃತ್ತಿ ಬದುಕೋ... ಅಥವಾ ಅನಿವಾರ್ಯವೋ.... ಗೊತ್ತಿಲ್ಲ. ರಾಜ ಎಂಬ ಹುಡುಗನಿಗೆ ಆತನ ಪರಿಚಯವಾಗುತ್ತದೆ. ಒಂದು ಕಿರು ನಗೆಯ ಪರಿಚಯ ಸ್ನೇಹವಾಗಿ ಆತ್ಮ ಸಂಬಂಧಕ್ಕೆ ತಿರುಗುತ್ತದೆ. ತೀರಾ ವೈಯಕ್ತಿಕ ಎನ್ನುವಂತ ಎಷ್ಟೋ ವಿಷಯಗಳನ್ನು ಒಬ್ಬರನ್ನೊಬ್ಬರು ಹಂಚಿಕೊಂಡು, ಕಷ್ಟ-ಸುಖದಲ್ಲಿ ಪಾಲುದಾರರಾಗಿ ಬದುಕನ್ನು ಮುನ್ನಡೆಸುತ್ತಾರೆ. ಅಗಲಿರಲಾರದ ಅವರಿಬ್ಬರ ಸ್ನೇಹ ಕಂಡು ಎಷ್ಟೋ ಜನರು ಮೂಗು ಮುರಿದದ್ದು ಇದೆ. ಅವರ ಸ್ನೇಹಕ್ಕೆ ತಡೆಯೊಡ್ಡಲು ಕಾಣದ ಕೈಗಳು ಕುತಂತ್ರ ನಡೆಸಿದ್ದೂ ಇದೆ. ಅವುಗಳ ನಡುವೆಯೇ ಅವರ ಪವಿತ್ರ ಹಾಗೂ ಗಟ್ಟಿ ಸ್ನೇಹ ಇನ್ನಷ್ಟು ಎತ್ತರೆತ್ತರಕ್ಕೆ ಬೆಳೆಯುತ್ತ ಸಾಗಿದೆ.
ಹೀಗಿರಲು ಒಂದು ದಿನ ಕುಮಾರ ಖಿನ್ನನಾಗಿ ಏನೋ ಚಿಂತಿಸುತ್ತ ಮನೆಯ ಮೂಲೆಯೊಂದರಲ್ಲಿ ಕುಳಿತಿರುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಸ್ನೇಹಿತ ರಾಜ ಭೆಟ್ಟಿ ನೀಡುತ್ತಾನೆ. ಸ್ನೇಹಿತನ ದುಃಖತಪ್ತ ಮನಸ್ಥಿತಿಯನ್ನು ಕಂಡು ರಾಜ ಅರೆಕ್ಷಣ ಗಾಬರಿಯಾಗುತ್ತಾನೆ. ನಿಧಾನವಾಗಿ ಸಾವರಿಸಿಕೊಂಡು ಮಾತಿಗಿಳಿಯುತ್ತಾನೆ.
`ಏನೋ ಗೆಳೆಯಾ.... ಏನಾಯ್ತೋ? ಯಾಕಿಷ್ಟು ಕೊರಗುತ್ತಿದ್ದೀಯಾ? ಪ್ಲೀಸ್....'
'......................'
ನೀರವ ಮೌನ. ಮನೆಯ ಹೊರಗಡೆ ಕಾಗೆ `ಕ್ರಾ.... ಕ್ರಾ....' ಎಂದು ಒಂದೇ ಸಮನೆ ಕೂಗುತ್ತಿದೆ. ಏನೋ ಅಪಶಕುನ ಕಾದಿದೆ ಎಂದು ರಾಜನಿಗೆ ಭಾಸವಾಗುತ್ತಿದೆ.
'ಕುಮಾರ, ನಾನು ನಿನ್ನ ಪ್ರಾಣ ಸ್ನೇಹಿತ ಕಣೋ.... ಯಾಕಿಷ್ಟು ಅಳುತ್ತಿದ್ದೀಯಾ? ಹೇಳೋ.....' ಎಂದು ಮತ್ತೆ ಮಾತಿಗಿಳಿಯುತ್ತಾನೆ.
'ಹಾಂ.... ಏನಂತ ಹೇಳ್ಲೋ..? ದಯವಿಟ್ಟು ನನ್ನ ಬಿಟ್ಬಿಡೋ..'
'ಹುಚ್ಚರ ಹಾಗೆ ಮಾತಾಡ್ಬೇಡ. ಏನಾಯ್ತಂತ ಹೇಳು'
'ನೀನು ನನ್ಮೇಲೆ ತಪ್ಪು ತಿಳ್ಕೋಳ್ಳಲ್ಲ ಅಂತ ಪ್ರಾಮಿಸ್ ಮಾಡು'
'ಹೂಂ... ಮಾಡ್ದೆ, ಹೇಳು ಮಾರಾಯ'
ಮತ್ತೆ ಹೊರಗಡೆ ಕಾಗೆಯ ಕರ್ಕಶ ಕೂಗು.
ರಾಜನ ಮನಸ್ಸು ಅವ್ಯಕ್ತ ದುಗುಡದಲ್ಲಿ ಮುಳುಗಿದೆ. ಮನದೊಳಗಿನ ಕಾತುರ, ತವಕ ಒಂದೇ ಸಮನೆ ಹೆಚ್ಚುತ್ತಿದೆ. ಆದರೂ ಅದ್ಯಾವುದರ ಕುರುಹನ್ನು ಆತ ಮುಖದ ಮೇಲೆ ತೋರ್ಪಡಿಸಿಕೊಳ್ಳುತ್ತಿಲ್ಲ. ನಿರಾಳ ವದನದವನಾಗಿ ಸ್ನೇಹಿತ ಕುಮಾರನ ಉತ್ತರದ ನಿರೀಕ್ಷೆಯಲ್ಲಿದ್ದಾನೆ.
ಕುಮಾರ ಹೇಳಲೋ ಬೇಡವೋ ಎಂದು ಮನಸ್ಸಲ್ಲಿಯೇ ಲೆಕ್ಕ ಹಾಕುತ್ತ, 'ಸ್ನೇಹಿತನಿಗೆ ಹೇಳದೆ ಇಷ್ಟು ದಿನ ನಾನು ವಿಷಯ ಮುಚ್ಚಿಟ್ಟದ್ದು ಸರಿನಾ? ಇದು ನನ್ನ ಸ್ನೇಹಕ್ಕೆ ಮಾಡಿದ ಅಪಚಾರನಾ? ವಿಷಯ ಗೊತ್ತಾದರೆ ರಾಜ ಏನಂದುಕೊಳ್ಳುತ್ತಾನೆ?' ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳುತ್ತಿದ್ದಾನೆ.
ಆದರೂ ಪ್ರಾಣ ಸ್ನೇಹಿತನ ಒತ್ತಾಯಕ್ಕೆ ಮಣಿದು ಮನದಾಳದ ಬೇಗುದಿಯನ್ನು ಹೊರ ಹಾಕುತ್ತಾನೆ.
'ಕಳೆದ ಒಂದು ವರ್ಷದಿಂದ ನಾನೊಬ್ಬಳನ್ನು ಪ್ರೀತಿಸುತ್ತಿದ್ದೇನೆ. ಪ್ರೀತಿ-ಪ್ರೇಮದ ಜಂಜಾಟವೇ ಬೇಡ ಎಂದು ಇಷ್ಟು ವರ್ಷಗಳ ಕಾಲ ದೂರವಿದ್ದ ನನಗೆ ಅವಳು ಅದ್ಹೆಗೆ ಮೋಡಿ ಮಾಡಿದಳೋ ಗೊತ್ತಿಲ್ಲ. ಬಹುಶಃ ಅವಳ ನಗು, ಮಾತು, ನೋಟವೇ ನನಗೆ ಹುಚ್ಚು ಹಿಡಿಸಿದ್ದು ಅನ್ಸತ್ತೆ. ಒಂದು ದಿನ ಅವಳನ್ನು ನೋಡದೆ ಇದ್ದರೆ ಏನೋ ಕಳೆದುಕೊಂಡಂತೆ. ಅವಳ ಜೊತೆ ಮಾತನಾಡದಿದ್ದರೆ, ಅಂದಿನ ಉತ್ಸಾಹವೇ ಕಳೆದುಕೊಂಡು ಬಿಡುತ್ತೇನೆ. ಮನ ಮನವೆಲ್ಲ ಅವಳು ಆವರಿಸಿ ಬಿಟ್ಟಿದ್ದಾಳೆ. ಮದುವೇ ಆಗುವುದಿದ್ದರೆ ಅವಳನ್ನೇ ಆಗಬೇಕು ಎಂದು ನಿರ್ಧರಿಸಿದ್ದೆ. ಆದರೆ ನಾನು ಪ್ರೀತಿಸುತ್ತಿದ್ದ ವಿಷಯ ಯಾರಿಗೂ ಹೇಳಿಲ್ಲ. ಪ್ರೀತಿಸುತ್ತಿರುವ ಹುಡುಗಿಗೂ ಹೇಳಿರಲಿಲ್ಲ.........'
ಕುಮಾರ ಒಂದೇ ಸಮನೆ ಬಚ್ಚಿಟ್ಟ ತನ್ನೆಲ್ಲ ಭಾವನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾನೆ. ರಾಜ ನೀಲಾಕಾಶ ನೋಡುತ್ತ ಆತನ ಮಾತನ್ನು ಕೇಳುತ್ತಿದ್ದಾನೆ.
'ಆದರೆ, ಇಂದು ಮುಂಜಾನೆ ಅವಳು ಆಕಸ್ಮಿಕವಾಗಿ ಭೆಟ್ಟಿಯಾದಳು. ಮಾತಿಗೆ ಮಾತು ಸಾಗುತ್ತ ವೈಯಕ್ತಿಕ ಬದುಕಿನತ್ತ ಹೊರಳಿತು. ನಾನು ಕೂಡಾ ಸೂಕ್ತ ಸಮಯಾವಕಾಶಕ್ಕೆ ಕಾಯುತ್ತಿದ್ದೆ. ನನ್ನ ಬದುಕನ್ನು ನಿರ್ಧರಿಸುವ ಬಹು ನಿರೀಕ್ಷಿತ ಕ್ಷಣ ಆಗಮಿಸಿದೆ ಎಂದು, ಅವಳನ್ನು ಪ್ರೀತಿಸುತ್ತಿರುವ ವಿಷಯ ಪ್ರಸ್ತಾಪಿಸಿದೆ. ಈಗಾಗಲೇ ಅವಳು ಇನ್ನೊಬ್ಬನ ಪ್ರೀತಿಯ ತೆಕ್ಕೆಗೆ ಬಿದ್ದಿದ್ದಾಳಂತೆ. ಒಂದೂವರೆ ವರ್ಷದಿಂದ ಅವರಿಬ್ಬರೂ ಪ್ರೀತಿಸುತ್ತಿದ್ದಾರಂತೆ.  ಇಬ್ಬರ ಮನೆಗೂ ವಿಷಯ ತಿಳಿದಿದ್ದು, ಎರಡು ವರ್ಷದ ನಂತರ ಮದುವೆಗೆ ಒಪ್ಪಿಗೆ ನೀಡಿದ್ದಾರಂತೆ ಎಂದಳು. ಅವಳ ಆ ಮಾತುಗಳನ್ನು ಕೇಳಿ ಹೃದಯವೇ ಕಿತ್ತು ಬಂದ ಹಾಗೆ ಆಯ್ತು. ನನ್ನದು ಏಕಮುಖ ಪ್ರೇಮವಾದರೂ, ಅವಳನ್ನು ಜೀವ ಹೋಗುವಷ್ಟು ಪ್ರೀತಿಸುತ್ತಿದ್ದೆ. ಆರಾಧಿಸುತ್ತಿದ್ದೆ. ಪೂಜಿಸುತ್ತಿದ್ದೆ.... ಅವಳ ಬದುಕಲ್ಲಿ ಕಣ್ಣಾಗಿರಬೇಕೆಂದು ಬಯಸಿದ್ದೆ....'
ಕುಮಾರ ಬಿಕ್ಕಳಿಸುತ್ತ ಹೇಳುತ್ತಿದ್ದ.
ಅವನ ಪ್ರೇಮ ವೈಫಲ್ಯದ ಕಥೆಯನ್ನು ಕೇಳಿ ಗೆಳೆಯ ರಾಜ ಮರುಗುತ್ತಾನೆ. ತಲೆ ನೇವರಿಸುತ್ತ, ಸಾಂತ್ವನ ಹೇಳುತ್ತ, `ಹುಡುಗಿ ಎಲ್ಲಿಯವಳು, ಏನು ಮಾಡುತ್ತಿದ್ದಾಳೆ, ಅವಳ ಹೇಸರೇನು?' ಎಂದು ಸಹಜವಾಗಿ ಕೇಳುತ್ತಾನೆ.
'ಅವಳೇ ಕಣೋ, `...........'
ಕುಮಾರ ಹೆಸರು ಹೇಳುತ್ತಾನೆ.
ಸ್ನೇಹಿತ ರಾಜಗೆ ಗರ ಬಡಿದಂತಾಗುತ್ತದೆ. ಒಮ್ಮೆಲೆ ಬರಸಿಡಿಲು ಬಡಿದಪ್ಪಳಿಸಿದಂತಾಗುತ್ತದೆ. ತ್ಸುನಾಮಿಯ ಅಲೆಯಲ್ಲಿ ಸಿಲುಕಿ ಉಸಿರುಕಟ್ಟಿ ಒದ್ದಾಡಿದ ಅನುಭವವಾಗುತ್ತಿದೆ. ಕಾಗೆಯ ಕರ್ಕಶ ಸದ್ದು ಮತ್ತೆ ಜೋರಾಗುತ್ತಿದೆ. ಏನು ಹೇಳಬೇಕೆಂದು ತೋಚದೆ... ಕೈ ಕೈ ಹಿಚುಕಿಕೊಳ್ಳುತ್ತಾನೆ. ಅಳಬೇಕೋ...... ನಗಬೇಕೋ... ಏನೊಂದು ತಿಳಿಯದೆ ಅತ್ತಿಂದಿತ್ತ ಶತಪಥ ಹಾಕುತ್ತಿದ್ದಾನೆ.
'ಕುಮಾರ, ನನ್ನ ಕ್ಷಮಿಸೋ.... ನಾನು ದ್ರೋಹಿ. ಸ್ನೇಹಕ್ಕೆ ಮೋಸ ಮಾಡಿದ ಪಾಪಿ ಕಣೋ. ಪ್ಲೀಸ್..... ನನ್ನ ಕ್ಷಮಿಸೋ.... ಕ್ಷಮಿಸೋ....'
ಏನು ಎತ್ತ ಏನೂ ತೋಚದ ಕುಮಾರ ಕಕ್ಕಾಬಿಕ್ಕಿಯಾಗಿ ರಾಜನನ್ನೆ ನೋಡುತ್ತಿದ್ದಾನೆ..!
'ನೀನು ಪ್ರೀತಿಸುತ್ತಿರುವ ಹುಡುಗಿ ಹೇಳಿರುವ ಹುಡುಗ ಬೇರೆ ಯಾರೂ ಅಲ್ಲ ಕುಮಾರ, ಅವನು ನಾನೇ ಕಣೋ! ಒಂದೂವರೆ ವರ್ಷದ ನಮ್ಮ ಪ್ರೇಮ ಎಲ್ಲ ಮಜಲುಗಳನ್ನು ದಾಟಿ ಈಗ ಮದುವೆ ಎನ್ನುವ ಹಂತಕ್ಕೆ ಬಂದು ಮುಟ್ಟಿದೆ. ಆದರೆ ನಮ್ಮಗಳ ವೈಯಕ್ತಿಕ ಸಾಧನೆಗೋಸ್ಕರ ನಾವೇ ಎರಡು ವರ್ಷ ಮದುವೆಯನ್ನು ಮುಂದೂಡೆದ್ದೇವೆ. ಪ್ಲೀಸ್ ಗೆಳೆಯಾ, ಈ ವಿಷಯವನ್ನು ನಾನು ನಿನಗೆ ಹೇಳಿಲ್ಲ. ಹೇಳಿಕೊಳ್ಳುವ ಸಂದರ್ಭವೂ ಒದಗಿ ಬಂದಿಲ್ಲ. ನಿಜವಾಗಿ ನಾನು ಪಾಪಿ ಕಣೋ....'
ರಾಜ ಮಾತನಾಡುತ್ತಿದ್ದಾನೆ. ಕುಮಾರ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ..!
ಪ್ರೇಮದ ಮೊಗ್ಗು ಅರಳಿ ಸುಗಂಧ ಸೂಸಬಹುದು. ಆದರೆ, ಅರಳಿದ ಸ್ನೇಹ.....? ಇದಕ್ಕೆ ಕಾಲವೇ ಉತ್ತರ ನೀಡಬೇಕು.