'ಸ್ನೇಹ'ದಲ್ಲೊಂದು ಪ್ರೇಮ ರಾಗ....
ನಾಗರಾಜ ಬಿ.ಎನ್.
ಆತನ ಹೆಸರು ಕುಮಾರ. ಸದಾ ಕ್ರಿಯಾಶೀಲ ವ್ಯಕ್ತಿತ್ವದ ಹುಡುಗ. ಗುಣವಂತ... ಪ್ರಾಮಾಣಿಕ... ಸ್ನೇಹ ಜೀವಿ.ದೈವಿಚ್ಛೆಯೋ.. ಆಕಸ್ಮಿಕವೋ... ವೃತ್ತಿ ಬದುಕೋ... ಅಥವಾ ಅನಿವಾರ್ಯವೋ.... ಗೊತ್ತಿಲ್ಲ. ರಾಜ ಎಂಬ ಹುಡುಗನಿಗೆ ಆತನ ಪರಿಚಯವಾಗುತ್ತದೆ. ಒಂದು ಕಿರು ನಗೆಯ ಪರಿಚಯ ಸ್ನೇಹವಾಗಿ ಆತ್ಮ ಸಂಬಂಧಕ್ಕೆ ತಿರುಗುತ್ತದೆ. ತೀರಾ ವೈಯಕ್ತಿಕ ಎನ್ನುವಂತ ಎಷ್ಟೋ ವಿಷಯಗಳನ್ನು ಒಬ್ಬರನ್ನೊಬ್ಬರು ಹಂಚಿಕೊಂಡು, ಕಷ್ಟ-ಸುಖದಲ್ಲಿ ಪಾಲುದಾರರಾಗಿ ಬದುಕನ್ನು ಮುನ್ನಡೆಸುತ್ತಾರೆ. ಅಗಲಿರಲಾರದ ಅವರಿಬ್ಬರ ಸ್ನೇಹ ಕಂಡು ಎಷ್ಟೋ ಜನರು ಮೂಗು ಮುರಿದದ್ದು ಇದೆ. ಅವರ ಸ್ನೇಹಕ್ಕೆ ತಡೆಯೊಡ್ಡಲು ಕಾಣದ ಕೈಗಳು ಕುತಂತ್ರ ನಡೆಸಿದ್ದೂ ಇದೆ. ಅವುಗಳ ನಡುವೆಯೇ ಅವರ ಪವಿತ್ರ ಹಾಗೂ ಗಟ್ಟಿ ಸ್ನೇಹ ಇನ್ನಷ್ಟು ಎತ್ತರೆತ್ತರಕ್ಕೆ ಬೆಳೆಯುತ್ತ ಸಾಗಿದೆ.
ಹೀಗಿರಲು ಒಂದು ದಿನ ಕುಮಾರ ಖಿನ್ನನಾಗಿ ಏನೋ ಚಿಂತಿಸುತ್ತ ಮನೆಯ ಮೂಲೆಯೊಂದರಲ್ಲಿ ಕುಳಿತಿರುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಸ್ನೇಹಿತ ರಾಜ ಭೆಟ್ಟಿ ನೀಡುತ್ತಾನೆ. ಸ್ನೇಹಿತನ ದುಃಖತಪ್ತ ಮನಸ್ಥಿತಿಯನ್ನು ಕಂಡು ರಾಜ ಅರೆಕ್ಷಣ ಗಾಬರಿಯಾಗುತ್ತಾನೆ. ನಿಧಾನವಾಗಿ ಸಾವರಿಸಿಕೊಂಡು ಮಾತಿಗಿಳಿಯುತ್ತಾನೆ.
`ಏನೋ ಗೆಳೆಯಾ.... ಏನಾಯ್ತೋ? ಯಾಕಿಷ್ಟು ಕೊರಗುತ್ತಿದ್ದೀಯಾ? ಪ್ಲೀಸ್....'
'......................'
ನೀರವ ಮೌನ. ಮನೆಯ ಹೊರಗಡೆ ಕಾಗೆ `ಕ್ರಾ.... ಕ್ರಾ....' ಎಂದು ಒಂದೇ ಸಮನೆ ಕೂಗುತ್ತಿದೆ. ಏನೋ ಅಪಶಕುನ ಕಾದಿದೆ ಎಂದು ರಾಜನಿಗೆ ಭಾಸವಾಗುತ್ತಿದೆ.
'ಕುಮಾರ, ನಾನು ನಿನ್ನ ಪ್ರಾಣ ಸ್ನೇಹಿತ ಕಣೋ.... ಯಾಕಿಷ್ಟು ಅಳುತ್ತಿದ್ದೀಯಾ? ಹೇಳೋ.....' ಎಂದು ಮತ್ತೆ ಮಾತಿಗಿಳಿಯುತ್ತಾನೆ.
'ಹಾಂ.... ಏನಂತ ಹೇಳ್ಲೋ..? ದಯವಿಟ್ಟು ನನ್ನ ಬಿಟ್ಬಿಡೋ..'
'ಹುಚ್ಚರ ಹಾಗೆ ಮಾತಾಡ್ಬೇಡ. ಏನಾಯ್ತಂತ ಹೇಳು'
'ನೀನು ನನ್ಮೇಲೆ ತಪ್ಪು ತಿಳ್ಕೋಳ್ಳಲ್ಲ ಅಂತ ಪ್ರಾಮಿಸ್ ಮಾಡು'
'ಹೂಂ... ಮಾಡ್ದೆ, ಹೇಳು ಮಾರಾಯ'
ಮತ್ತೆ ಹೊರಗಡೆ ಕಾಗೆಯ ಕರ್ಕಶ ಕೂಗು.
ರಾಜನ ಮನಸ್ಸು ಅವ್ಯಕ್ತ ದುಗುಡದಲ್ಲಿ ಮುಳುಗಿದೆ. ಮನದೊಳಗಿನ ಕಾತುರ, ತವಕ ಒಂದೇ ಸಮನೆ ಹೆಚ್ಚುತ್ತಿದೆ. ಆದರೂ ಅದ್ಯಾವುದರ ಕುರುಹನ್ನು ಆತ ಮುಖದ ಮೇಲೆ ತೋರ್ಪಡಿಸಿಕೊಳ್ಳುತ್ತಿಲ್ಲ. ನಿರಾಳ ವದನದವನಾಗಿ ಸ್ನೇಹಿತ ಕುಮಾರನ ಉತ್ತರದ ನಿರೀಕ್ಷೆಯಲ್ಲಿದ್ದಾನೆ.
ಕುಮಾರ ಹೇಳಲೋ ಬೇಡವೋ ಎಂದು ಮನಸ್ಸಲ್ಲಿಯೇ ಲೆಕ್ಕ ಹಾಕುತ್ತ, 'ಸ್ನೇಹಿತನಿಗೆ ಹೇಳದೆ ಇಷ್ಟು ದಿನ ನಾನು ವಿಷಯ ಮುಚ್ಚಿಟ್ಟದ್ದು ಸರಿನಾ? ಇದು ನನ್ನ ಸ್ನೇಹಕ್ಕೆ ಮಾಡಿದ ಅಪಚಾರನಾ? ವಿಷಯ ಗೊತ್ತಾದರೆ ರಾಜ ಏನಂದುಕೊಳ್ಳುತ್ತಾನೆ?' ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳುತ್ತಿದ್ದಾನೆ.
ಆದರೂ ಪ್ರಾಣ ಸ್ನೇಹಿತನ ಒತ್ತಾಯಕ್ಕೆ ಮಣಿದು ಮನದಾಳದ ಬೇಗುದಿಯನ್ನು ಹೊರ ಹಾಕುತ್ತಾನೆ.
'ಕಳೆದ ಒಂದು ವರ್ಷದಿಂದ ನಾನೊಬ್ಬಳನ್ನು ಪ್ರೀತಿಸುತ್ತಿದ್ದೇನೆ. ಪ್ರೀತಿ-ಪ್ರೇಮದ ಜಂಜಾಟವೇ ಬೇಡ ಎಂದು ಇಷ್ಟು ವರ್ಷಗಳ ಕಾಲ ದೂರವಿದ್ದ ನನಗೆ ಅವಳು ಅದ್ಹೆಗೆ ಮೋಡಿ ಮಾಡಿದಳೋ ಗೊತ್ತಿಲ್ಲ. ಬಹುಶಃ ಅವಳ ನಗು, ಮಾತು, ನೋಟವೇ ನನಗೆ ಹುಚ್ಚು ಹಿಡಿಸಿದ್ದು ಅನ್ಸತ್ತೆ. ಒಂದು ದಿನ ಅವಳನ್ನು ನೋಡದೆ ಇದ್ದರೆ ಏನೋ ಕಳೆದುಕೊಂಡಂತೆ. ಅವಳ ಜೊತೆ ಮಾತನಾಡದಿದ್ದರೆ, ಅಂದಿನ ಉತ್ಸಾಹವೇ ಕಳೆದುಕೊಂಡು ಬಿಡುತ್ತೇನೆ. ಮನ ಮನವೆಲ್ಲ ಅವಳು ಆವರಿಸಿ ಬಿಟ್ಟಿದ್ದಾಳೆ. ಮದುವೇ ಆಗುವುದಿದ್ದರೆ ಅವಳನ್ನೇ ಆಗಬೇಕು ಎಂದು ನಿರ್ಧರಿಸಿದ್ದೆ. ಆದರೆ ನಾನು ಪ್ರೀತಿಸುತ್ತಿದ್ದ ವಿಷಯ ಯಾರಿಗೂ ಹೇಳಿಲ್ಲ. ಪ್ರೀತಿಸುತ್ತಿರುವ ಹುಡುಗಿಗೂ ಹೇಳಿರಲಿಲ್ಲ.........'
ಕುಮಾರ ಒಂದೇ ಸಮನೆ ಬಚ್ಚಿಟ್ಟ ತನ್ನೆಲ್ಲ ಭಾವನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾನೆ. ರಾಜ ನೀಲಾಕಾಶ ನೋಡುತ್ತ ಆತನ ಮಾತನ್ನು ಕೇಳುತ್ತಿದ್ದಾನೆ.
'ಆದರೆ, ಇಂದು ಮುಂಜಾನೆ ಅವಳು ಆಕಸ್ಮಿಕವಾಗಿ ಭೆಟ್ಟಿಯಾದಳು. ಮಾತಿಗೆ ಮಾತು ಸಾಗುತ್ತ ವೈಯಕ್ತಿಕ ಬದುಕಿನತ್ತ ಹೊರಳಿತು. ನಾನು ಕೂಡಾ ಸೂಕ್ತ ಸಮಯಾವಕಾಶಕ್ಕೆ ಕಾಯುತ್ತಿದ್ದೆ. ನನ್ನ ಬದುಕನ್ನು ನಿರ್ಧರಿಸುವ ಬಹು ನಿರೀಕ್ಷಿತ ಕ್ಷಣ ಆಗಮಿಸಿದೆ ಎಂದು, ಅವಳನ್ನು ಪ್ರೀತಿಸುತ್ತಿರುವ ವಿಷಯ ಪ್ರಸ್ತಾಪಿಸಿದೆ. ಈಗಾಗಲೇ ಅವಳು ಇನ್ನೊಬ್ಬನ ಪ್ರೀತಿಯ ತೆಕ್ಕೆಗೆ ಬಿದ್ದಿದ್ದಾಳಂತೆ. ಒಂದೂವರೆ ವರ್ಷದಿಂದ ಅವರಿಬ್ಬರೂ ಪ್ರೀತಿಸುತ್ತಿದ್ದಾರಂತೆ. ಇಬ್ಬರ ಮನೆಗೂ ವಿಷಯ ತಿಳಿದಿದ್ದು, ಎರಡು ವರ್ಷದ ನಂತರ ಮದುವೆಗೆ ಒಪ್ಪಿಗೆ ನೀಡಿದ್ದಾರಂತೆ ಎಂದಳು. ಅವಳ ಆ ಮಾತುಗಳನ್ನು ಕೇಳಿ ಹೃದಯವೇ ಕಿತ್ತು ಬಂದ ಹಾಗೆ ಆಯ್ತು. ನನ್ನದು ಏಕಮುಖ ಪ್ರೇಮವಾದರೂ, ಅವಳನ್ನು ಜೀವ ಹೋಗುವಷ್ಟು ಪ್ರೀತಿಸುತ್ತಿದ್ದೆ. ಆರಾಧಿಸುತ್ತಿದ್ದೆ. ಪೂಜಿಸುತ್ತಿದ್ದೆ.... ಅವಳ ಬದುಕಲ್ಲಿ ಕಣ್ಣಾಗಿರಬೇಕೆಂದು ಬಯಸಿದ್ದೆ....'
ಕುಮಾರ ಬಿಕ್ಕಳಿಸುತ್ತ ಹೇಳುತ್ತಿದ್ದ.
ಅವನ ಪ್ರೇಮ ವೈಫಲ್ಯದ ಕಥೆಯನ್ನು ಕೇಳಿ ಗೆಳೆಯ ರಾಜ ಮರುಗುತ್ತಾನೆ. ತಲೆ ನೇವರಿಸುತ್ತ, ಸಾಂತ್ವನ ಹೇಳುತ್ತ, `ಹುಡುಗಿ ಎಲ್ಲಿಯವಳು, ಏನು ಮಾಡುತ್ತಿದ್ದಾಳೆ, ಅವಳ ಹೇಸರೇನು?' ಎಂದು ಸಹಜವಾಗಿ ಕೇಳುತ್ತಾನೆ.
'ಅವಳೇ ಕಣೋ, `...........'
ಕುಮಾರ ಹೆಸರು ಹೇಳುತ್ತಾನೆ.
ಸ್ನೇಹಿತ ರಾಜಗೆ ಗರ ಬಡಿದಂತಾಗುತ್ತದೆ. ಒಮ್ಮೆಲೆ ಬರಸಿಡಿಲು ಬಡಿದಪ್ಪಳಿಸಿದಂತಾಗುತ್ತದೆ. ತ್ಸುನಾಮಿಯ ಅಲೆಯಲ್ಲಿ ಸಿಲುಕಿ ಉಸಿರುಕಟ್ಟಿ ಒದ್ದಾಡಿದ ಅನುಭವವಾಗುತ್ತಿದೆ. ಕಾಗೆಯ ಕರ್ಕಶ ಸದ್ದು ಮತ್ತೆ ಜೋರಾಗುತ್ತಿದೆ. ಏನು ಹೇಳಬೇಕೆಂದು ತೋಚದೆ... ಕೈ ಕೈ ಹಿಚುಕಿಕೊಳ್ಳುತ್ತಾನೆ. ಅಳಬೇಕೋ...... ನಗಬೇಕೋ... ಏನೊಂದು ತಿಳಿಯದೆ ಅತ್ತಿಂದಿತ್ತ ಶತಪಥ ಹಾಕುತ್ತಿದ್ದಾನೆ.
'ಕುಮಾರ, ನನ್ನ ಕ್ಷಮಿಸೋ.... ನಾನು ದ್ರೋಹಿ. ಸ್ನೇಹಕ್ಕೆ ಮೋಸ ಮಾಡಿದ ಪಾಪಿ ಕಣೋ. ಪ್ಲೀಸ್..... ನನ್ನ ಕ್ಷಮಿಸೋ.... ಕ್ಷಮಿಸೋ....'
ಏನು ಎತ್ತ ಏನೂ ತೋಚದ ಕುಮಾರ ಕಕ್ಕಾಬಿಕ್ಕಿಯಾಗಿ ರಾಜನನ್ನೆ ನೋಡುತ್ತಿದ್ದಾನೆ..!
'ನೀನು ಪ್ರೀತಿಸುತ್ತಿರುವ ಹುಡುಗಿ ಹೇಳಿರುವ ಹುಡುಗ ಬೇರೆ ಯಾರೂ ಅಲ್ಲ ಕುಮಾರ, ಅವನು ನಾನೇ ಕಣೋ! ಒಂದೂವರೆ ವರ್ಷದ ನಮ್ಮ ಪ್ರೇಮ ಎಲ್ಲ ಮಜಲುಗಳನ್ನು ದಾಟಿ ಈಗ ಮದುವೆ ಎನ್ನುವ ಹಂತಕ್ಕೆ ಬಂದು ಮುಟ್ಟಿದೆ. ಆದರೆ ನಮ್ಮಗಳ ವೈಯಕ್ತಿಕ ಸಾಧನೆಗೋಸ್ಕರ ನಾವೇ ಎರಡು ವರ್ಷ ಮದುವೆಯನ್ನು ಮುಂದೂಡೆದ್ದೇವೆ. ಪ್ಲೀಸ್ ಗೆಳೆಯಾ, ಈ ವಿಷಯವನ್ನು ನಾನು ನಿನಗೆ ಹೇಳಿಲ್ಲ. ಹೇಳಿಕೊಳ್ಳುವ ಸಂದರ್ಭವೂ ಒದಗಿ ಬಂದಿಲ್ಲ. ನಿಜವಾಗಿ ನಾನು ಪಾಪಿ ಕಣೋ....'
ರಾಜ ಮಾತನಾಡುತ್ತಿದ್ದಾನೆ. ಕುಮಾರ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ..!
ಪ್ರೇಮದ ಮೊಗ್ಗು ಅರಳಿ ಸುಗಂಧ ಸೂಸಬಹುದು. ಆದರೆ, ಅರಳಿದ ಸ್ನೇಹ.....? ಇದಕ್ಕೆ ಕಾಲವೇ ಉತ್ತರ ನೀಡಬೇಕು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ