ರೊಚ್ಚಿಗೆದ್ದ ಮಲಪ್ರಭೆ ಮಕ್ಕಳು
ಮಲಪ್ರಭೆ ಮಕ್ಕಳು ಮತ್ತೆ ರೊಚ್ಚಿಗೆದ್ದಿದ್ದಾರೆ. ತಾತ, ಅಪ್ಪಂದಿರು ಬುದುಕುವ ಹಕ್ಕಿಗಾಗಿ ಹಾಕಿಕೊಟ್ಟ ಹೋರಾಟದ ಹಾದಿಯನ್ನು ಮೊಮ್ಮಕ್ಕಳು, ಮಕ್ಕಳು ತುಳಿದು ಗಮ್ಯ ತಲುಪೇ ತೀರುತ್ತೇವೆ ಎಂದು ದಂಡ ಹಿಡಿದು ಹೊರಟಿದ್ದಾರೆ. ಅಂದು ಹೋರಾಡಿದ ಎಷ್ಟೋ ಜೀವಗಳು ಮಣ್ಣಲ್ಲಿ ಬೆರತುಹೋಗಿವೆ. ಉಳಿದ ಕೆಲವಷ್ಟು ತಲೆಗಳ ಕೂದಲುದುರಿ ಮಾಸಿ ಹೋಗಿವೆ. ಆದರೆ ಅವರ ಬೆನ್ನಹಿಂದೆಯೇ ಬಂದ ಕುಡಿಗಳು, ಹಿರಿತನದ ಹೋರಾಟಕ್ಕೆ ನ್ಯಾಯ ದೊರಕಿಸಿಕೊಡಲೇ ಬೇಕು ಅಬ್ಬರಿಸಿ ಹೂಂಕರಿಸುತ್ತಿದ್ದಾರೆ. ರಾಜ್ಯ, ಕೇಂದ್ರ ಸರಕಾರದ ವಿರುದ್ಧ ತೊಡೆ ತಟ್ಟಿ, ತಾಕತ್ತಿದ್ದರೆ ಕಣಕ್ಕಿಳಿಯಿರಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ!
ಪರಿಣಾಮ, ನಲವತ್ತು ವರ್ಷಗಳ ಕಾಲದ ಮಹದಾ ಯಿ-ಕಳಸಾ ಬಂಡೂರಿ ಯೋಜನೆ ಅನುಷ್ಠಾನದ ಹೋರಾಟದ ಕೆಂಡವೀಗ ನಿಗಿನಿಗಿಸುತ್ತಿವೆ. ಎದೆಯಲ್ಲಿಯೇ ಉಳಿದಿದ್ದ ದಾವಾಗ್ನಿ, ಅಪಧಮನಿ, ಅಭಿಧಮನಿಯನ್ನು ಸೀಳಿ ನರ ನಾಡಿಗಳ ಮೂಲಕ ಹೊರ ಬರುತ್ತಿವೆ. ಕಾಡ್ಗಿಚ್ಚಿನಂತೆ ಸುತ್ತೆಲ್ಲ ಪಸರಿಸಿ ಎದುರಿಗೆ ಬಂದ ಅಧಿಕಾರಶಾಹಿಗಳ ಹಾಗೂ ಅವರ ಕಚೇರಿಗಳನ್ನ ಆಪೋಶನ ತೆಗೆದುಕೊಳ್ಳುತ್ತಿವೆ!
ಇದು ಮಲಪ್ರಭೆ ಅಚ್ಚುಕಟ್ಟು ಪ್ರದೇಶಗಳಲ್ಲಿ ವಾಸಿಸುವ ರೈತ ಸಮುದಾಯದ ಆಕ್ರೋಶದ ಕಿಚ್ಚು. ಹಂತ ಹಂತವಾಗಿ ಹೊರಬಂದು, ಈಗ ಹೋಮದ ಅಗ್ನಿಕುಂಡವಾಗಿ ಮಾರ್ಪಟ್ಟಿದೆ. ಹುಣ್ಣಿಮೆ ಶರಧಿ ಎಲ್ಲೆ ಮೀರಿ ಉಕ್ಕುವಂತೆ, ಅಂತರಾಳದಲ್ಲಿ ಮಡುಗಟ್ಟಿದ್ದ ತಾಳ್ಮೆ ಕಟ್ಟೆ ಒಡೆದು ಜ್ವಾಲೆಯಾಗಿ ಬದಲಾಗಿದೆ. ತಾತ, ಅಪ್ಪಂದಿರ ಕಾಲದಿಂದ, ಮಕ್ಕಳು, ಮರಿ-ಮೊಮ್ಮಕ್ಕಳ ಕಾಲವಾದ ಇಂದಿನವರೆಗೂ ಕುಡಿಯುವ ನೀರಿಗಾಗಿ ಒತ್ತಾಯಿಸುತ್ತ ಬಂದರೂ, ಆಡಳಿತಾರೂಢ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಕ್ಯಾರೇ ಎನ್ನಲಿಲ್ಲ. ಹೋರಾಟ, ಪ್ರತಿಭಟನೆ, ಬಂದ್, ಗಲಭೆ ನಡೆದಾಗಲೆಲ್ಲ ಪಕ್ಷಗಳ ಪ್ರತಿಷ್ಠೆ, ಒಣ ರಾಜಕೀಯ ಮಾಡುತ್ತ ಕಾಲ ಕಳೆದರು. ಜತೆಗೆ, ರೈತ ಸಮುದಾಯದ ಹೋರಾಟ ಹತ್ತಿಕ್ಕಲು ತೆರೆಮರೆಯಲ್ಲಿ ಏನೇನು ಮಾಡಬೇಕೋ ಅವೆಲ್ಲವನ್ನು ಶಿಸ್ತುಬದ್ಧವಾಗಿ ಮಾಡಿದರು. ಇನ್ನೂ ಮುಂದುವರಿದರು, ಮೂರು ಪಕ್ಷದ ಮುಖಂಡರು ಪ್ರತ್ಯೇಕ ಪ್ರತಿಭಟನೆ ಮಾಡುವ ಮೂಲಕ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿದರು. ಮೂರು ಪಕ್ಷಗಳ ಜನಪ್ರತಿನಿಧಿಗಳು ಪರಸ್ಪರ ಒಬ್ಬರ ಮೇಲೊಬ್ಬರು ಕೆಸರೆರಚಾಡುತ್ತ ಪ್ರತಿಭಟನಾಕಾರರ ದಿಕ್ಕನ್ನು ಸಹ ಬದಲಿಸಲು ಪ್ರಯತ್ನಿಸಿದರು. ಕುಚೋದ್ಯವೆಂದರೆ ಅವರ ಅಂದಿನ ಆ ಪ್ರತಿಭಟನೆಗಳು ಯಾರ ವಿರುದ್ಧವಾಗಿತ್ತು ಎನ್ನುವುದು?
ಇರಲಿ, ಶಾಂತಿಯಿಂದಾಗದ್ದು ಕ್ರಾಂತಿಯಿಂದಾದರೂ ನಡೆಯಲೇಬೇಕು. ಅದೇ ಅಂತಿಮ ಎಂದಾದರೆ ಯಾರು ಏನೂ ಮಾಡಲು ಅಸಾಧ್ಯ. ಇನ್ನೊಬ್ಬರಿಗೆ ಅನ್ಯಾಯವಾಗಲೆನ್ನುವ ದುರುದ್ದೇಶವಿಟ್ಟುಕೊಂಡು ಭರತ ಭೂಮಿಯಲ್ಲಿ ಎಂದೂ ಜನಾಂದೋಲನ ನಡೆದಿಲ್ಲ. ಸಾರ್ವಜನಿಕ ಹಿತಾಸಕ್ತಿಗೋಸ್ಕರ ಮುಂದಿನ ದಿನಗಳನ್ನು ಅವಲೋಕಿಸಿ, ಅನಿವಾರ್ಯ ಸ್ವಾರ್ಥಗಳಿಂದ ಬೃಹತ್ ಪ್ರತಿಭಟನೆ, ಗಲಭೆಗಳು ಸರಕಾರದ ವಿರುದ್ಧ ನಡಿದಿವೆ. ಅಂತಹ ಬಹುತೇಕ ಹೋರಾಟವೆಲ್ಲ ಯಶಸ್ಫವಿಯೂ ಆಗಿವೆ. ಆದರೆ, ನಲವತ್ತು ವರ್ಷಗಳ ಕಾಲದಷ್ಟು ಸುದೀರ್ಘವಾದ ನಡೆಯುತ್ತಿರುವ ಹೋರಾಟವೆಂದರೆ ಬಹುಶಃ ಇದೊಂದೆ ಇರಬೇಕು. ಹಾಗೆಯೇ, ರಾಜಕೀಯ ನೇತಾರರೆನಿಸಿಕೊಂಡವರ ಸ್ವಾರ್ಥದ ಗಂಜಿ ಬಟ್ಟಲಲ್ಲಿ ಬಿದ್ದ ನೊಣದ ಗತಿಯಂತಾದ್ದು ಸಹ ಇದೊಂದೆ ಯೋಜನೆಯಿರಬೇಕು.ಮಾಡು ಇಲ್ಲವೇ ಮಡಿ ಎನ್ನುವ ಧ್ಯೇಯ ವಾಕ್ಯವನ್ನು ಹಸಿ ಎದೆಯಲ್ಲಿ ಕೊರೆಸಿಕೊಂಡು, ರಕ್ತ ಚಿಮ್ಮಿ ಹರಿದು ಉಸಿರು ನಿಲ್ಲುವವರೆಗೂ ಹೋರಾಟ ಕೈ ಬಿಡಲಾರೆವು ಎನ್ನುತ್ತ ರೈತರು ಬಂಡಾಯವೆದ್ದಿದ್ದಾರೆ. ನ್ಯಾಯ ದೇವತೆ ಎಂದು ಎರಡು ಕೈ ಕಟ್ಟಿ, ತಲೆ ಬಗ್ಗಿಸಿ ನಿಲ್ಲುತ್ತಿದ್ದವರು, ಈಗ ಅದೇ ಕೈಯ್ಯಲ್ಲಿ ಪಾಶು ಪತಾಸ್ತ್ರ ಹಿಡಿದು, ತಲೆಯಲ್ಲಿ ಕಿಚ್ಚು ತುಂಬಿಕೊಂಡು ನ್ಯಾಯ ದೇಗುಲವನ್ನು ಧ್ವಂಸ ಮಾಡಿದ್ದಾರೆ. ಗಂಟಲ ಪಸೆ ಒಣಗಿಸಿಕೊಳ್ಳಲು ನೀರು ನೀಡದೆ ನ್ಯಾಯ ದೇವತೆಯೇ ಅನ್ಯಾಯ ಎಸಗಿದ್ದಾಳೆಂದು, ಅವಳ ಮೇಲಿದ್ದ ನಂಬಿಕೆಯನ್ನು ಸಹ ಸುಟ್ಟು ಬೂದಿ ಮಾಡಿದ್ದಾರೆ. ಆ ಬೂದಿಯನ್ನೇ ಹಣೆಗೆ ಮೆತ್ತಿಕೊಂಡು ಗೆದ್ದೇ ಗೆಲ್ಲುತ್ತೇವೆ ಎಂದು ಸಪಥ ಗೈದಿದ್ದಾರೆ.
ಇಷ್ಟು ದಿನದ ಶಾಂತಿಯುತ ಹೋರಾಟಕ್ಕೆ ತೆರೆ ಎಳೆದ ಅವರು ಸಂಪೂರ್ಣ ಕಾನೂನನ್ನೇ ಕೈಗೆತ್ತಿಕೊಂಡು ನಟ್ಟ ನಡು ರಸ್ತೆಯಲ್ಲಿ ಹೊಟ್ಟೆ-ಬೆನ್ನು ಒಂದಾಗುವಂತೆ ಕೂಗುತ್ತ ಕೆಂಡದುಂಡೆಯನ್ನು ಉಗುಳುತ್ತಿದ್ದಾರೆ. ಅದರ ಕಾವಿಗೆ ಕೆಲವು ಸ್ಥಳೀಯ ಜನಪ್ರತಿನಿಧಿಗಳು ಥರಥರನೆ ನಡುಗುತ್ತ, ಖುರ್ಚಿಯಿಂದ ಮೇಲೇಳುತ್ತಿದ್ದಾರೆ. ಸಾಕಪ್ಪ ಈ ರಾಜಕೀಯ ಎಂದು ರೈತರ ಹೆಗಲಿಗೆ ಹೇಗಲಾಗಿ, ದನಿಗೆ ದನಿ ಸೇರಿಸಿ ಕದನದ ಕಹಳೆ ಊದುತ್ತಿದ್ದಾರೆ. ಸಂಸತ್ ಭವನದಲ್ಲಿ ಆಸೀನರಾಗುವ ಉಕ ಭಾಗದ ಜಪ್ರತಿನಿಧಿಗಳು ಒಗ್ಗಟ್ಟಾಗಬೇಕು, ಇಲ್ಲ ಖುರ್ಚಿ ಬಿಟ್ಟು ಸಿಡಿದೇಳಬೇಕು ಎಂದು ಸ್ಪಷ್ಟ ಸಂದೇಶ ಸಾರಿದ್ದಾರೆ. ಇವೆಲ್ಲದರ ಪರಿಣಾಮ ನರಗುಂದ-ನವಲಗುಂದ ಬಂಡಾಯ ನೆಲದ ರೈತರ ರಕ್ತವೆಲ್ಲ ಕೊಪ್ಪರಿಗೆಯಲ್ಲಿ ಹಾಕಿದ ಎಣ್ಣೆಯಂತೆ ಕೊತಕೊತನೆ ಕುದಿಯುತ್ತಿದೆ.
ಮುಂದೇ........!! ಆ ಭಗವಂತನಿಗೂ ಊಹಿಸಲು ಅಸಾಧ್ಯವೇನೋ.....!!
-ನಾಗರಾಜ್ ಬಿ.ಎನ್