ಎಲೆಗಳ ಮೇಲೆ ಮಳೆ ಹನಿಗಳ ಥಕಧಿಮಿತ...
ಇವನು ನಮ್ಮ ಆತ್ಮೀಯ ದಿನು. ಹುಚ್ಚು ಪರಿಸರ ಪ್ರೇಮಿ. ಮರ ಎಂದರೆ ನೆರಳು, ಗಿಡ ಎಂದರೆ ಬದುಕು, ಹಸಿರು ಎಂದರೆ ಉಸಿರು, ಪರಿಸರ ಎಂದರೆ ಮನುಕುಲ ಎನ್ನುವ ಈತ ನಿಜಕ್ಕೂ ನಿಸ್ವಾರ್ಥ.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ, 'ಜಾ, ಕುಮಟಾ ಬಸ್ ಸ್ಟ್ಯಾಂಡಿನಲ್ಲಿ ಗಿಡ ಹಾಕೋಣ, ರೈಲ್ವೆ ಪ್ಲಾಟ್ ಫಾರ್ಂ ಅಕ್ಕ ಪಕ್ಕ ಗಿಡ ನೆಡೋಣ, ಮಂಗಳೂರು-ಕಾರವಾರ ರಸ್ತೆ ಇಕ್ಕೆಲಗಳಲ್ಲಿ ಗಿಡ ಹಾಕಿದರೆ ಹೇಗೆ? ಶಾಲೆಗಳಿಗೆ ಭೇಟಿ ನೀಡಿ ಗಿಡ ನೆಡಲು ಹೇಳೋಣ...... ಹೀಗೆ ಒಂದೇ ಓಘದಲ್ಲಿ ಆತನ ಮಾತುಗಳು ಸಾಗುತ್ತಿತ್ತು. ಮಳೆ ಹನಿ ಭೂಮಿಗೆ ಬೀಳುತ್ತಿದ್ದಂತೆ ಗಿಡ ನೆಡುವ ಆತನ ಕನಸು ಗರಿಗೆದರುತ್ತಿತ್ತು. ವಿಚಿತ್ರವೆಂದರೆ ಆತ ಕರೆ ಮಾಡಿದಾಗಲೆಲ್ಲ ಮೊದಲ ಮಾತು 'ಜಾ ಎಲ್ಲಿ ಗಿಡ ಹಾಕುವುದು?' ಎನ್ನುವುದೇ ಆಗಿರುತ್ತಿತ್ತು. ಉತ್ತರ-ದಕ್ಷಿಣ ದಿಕ್ಕಿನತ್ತಿರುವ ನಾವಿಬ್ಬರು ಸಂಧಿಸುವುದು ವರ್ಷಕ್ಕೆ ಮೂರು, ನಾಲ್ಕು ಬಾರಿ ಮಾತ್ರ! ಹಾಗಿದ್ದಾಗ, ಆತ ಗಿಡ ಹಾಕುವ ಮಾತಿಗೆಲ್ಲ ನನ್ನದು ಮೌನ ಹಾಗೂ 'ಮಾಡೋಣ' ಎನ್ನುವುದಾಗಿತ್ತು.
ಆದರೆ, ಛಲದಂಕ ಮಲ್ಲನಂತೆ ಈ ವರ್ಷ ಗಿಡ ನೆಟ್ಟೇ ನೆಡುತ್ತೇನೆ ಎನ್ನುವ ದೃಢ ಸಂಕಲ್ಪ ಮಾಡಿಕೊಂಡು, ಒಂದು ತಿಂಗಳಿನಿಂದ ಅಲ್ಲಿ, ಇಲ್ಲಿ ಎಂದು ಓಡಾಡಲು ಪ್ರಾರಂಭಿಸಿದ್ದ. ಕೆಲ ದಿನಗಳ ಹಿಂದೆ, ಸುರತ್ಕಲ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿರುವ ಎಟಿಎಂ ಅಧಿಕಾರಿಯಿಂದ ನಂದಿಕೂರ, ಸುರತ್ಕಲ್ ಹಾಗೂ ಇನ್ನೆರಡು ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಂ ಅಕ್ಕಪಕ್ಕ ಗಿಡ ನೆಡಲು ಅನುಮತಿ ಪಡೆದಿದ್ದ. ಒಂದು ದಿನ ರಾತ್ರಿ ದೂರವಾಣಿ ಕರೆ ಮೂಲಕ ಎರಡು ಗಂಟೆಗಳ ಕಾಲ ಮಾತನಾಡಿ ಪರವಾನಿಗೆ ದೊರೆತ ಸಂತೋಷವನ್ನು ಹಂಚಿಕೊಂಡಿದ್ದ. ಪರವಾನಿಗೆಯೇನೋ ಪಡೆದಿದ್ದ. ಆದರೆ, ಗಿಡ ಎಲ್ಲಿಂದ ಖರೀದಿಸುವುದು? ಎನ್ನುವ ಪ್ರಶ್ನೆ ಆತನ ತಲೆಯಲ್ಲಿ ನುಸುಳಿದಾಗ, ಯಾರೋ ಪರಿಸರ ಪ್ರೇಮಿ ಹೇಳಿದನಂತೆ, 'ಮಂಗಳೂರಿನ ಪಡೀಲ್ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಗಿಡ ದೊರೆಯುತ್ತದೆ' ಎಂದು. ಒಂದು ಸೋಮವಾರ ಕಂಪನಿಗೆ ರಜೆ ಹಾಕಿ, ಅಲ್ಲಿಗೆ ಹೋಗಿ ಮೂವತ್ತು ಗಿಡಗಳಿಗೆ ಅರ್ಜಿ ಸಲ್ಲಿಸಿದ್ದ. ಆತ ಇರುವುದು ಸುರತ್ಕಲ್ ಆಗಿರುವುದರಿಂದ, ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿರುವ ನರ್ಸರಿಯಿಂದ ಗಿಡ ತರವುದು ತುಸು ತ್ರಾಸದಾಯಕವೇ ಆಗಿತ್ತು. ಬಾಡಿಗೆ ರಿಕ್ಷಾ ಕೇಳಿದಾಗ ಅವರು 1,200 ರು. ಬೇಡಿಕೆ ಮುಂದಿಟ್ಟಿದ್ದರು. ನಂತರ, ತನ್ನ ಸ್ನೇಹಿತರಿಗೆ ಹೇಳಿ, ಅವರ ಕಾರಿನಲ್ಲಿ ಅಲ್ಲಿಂದ ಸುರತ್ಕಲ್ಗೆ ಗಿಡವನ್ನು ತಂದಿದ್ದ.
ಅಂತೂ... ಇಂದು ಬುಧವಾರ(ಜು. 6) ತನ್ನ ಕನಸನ್ನು ನನಸಾಗಿಸಿಕೊಂಡ. ತನ್ನ ಇಚ್ಛೆಯಂತೆ ಸುರತ್ಕಲ್ ಹಾಗೂ ನಂದಿಕೂರ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಂ ಅಕ್ಕ ಪಕ್ಕ ಮಹಾಗನಿ, ಕಕ್ಕೆ, ಬಾಗೆ, ಅವಲಾಂಡ, ಸೀಮೆರೂಬ, ರೇಂಜ, ಹೂವರಸಿ ಎಂದು ಮೂವತ್ತು ಗಿಡಗಳನ್ನು ಭೂ ಮಾತೆ ಮಡಿಲಿಗೆ ಹಾಕಿದ. ಸರ್ವ ಸ್ವತಂತ್ರವಾಗಿ ಯಾರೊಬ್ಬರ ಸಹಾಯವೂ ಇಲ್ಲದೆ ಏಕಾಂಗಿಯಾಗಿ ಕನಸನ್ನು ಮೆಟ್ಟಿ ನಿಂತ. ಮೂವತ್ತು ಗಿಡ ಬೆಳೆದು ದೊಡ್ಡದಾಗುವವರೆಗೂ ಅದರ ಜವಾಬ್ದಾರಿ ತಾನೇ ಹೊರುತ್ತೇನೆ ಎಂದು ರೈಲ್ವೆ ಅಧಿಕಾರಿಗಳಿಗೆ ಮಾತು ಕೊಟ್ಟ. ಆತನಲ್ಲಿರುವ ಪರಿಸರ ಕಾಳಜಿ ಹಾಗೂ ಪ್ರಾಮಾಣಿಕತೆ ಅರಿತ ರೈಲ್ವೆ ಅಧಿಕಾರಿಗಳು, 'ನಾವೇ ಮಾಡಬೇಕಾದ ಕಾರ್ಯಕ್ಕೆ ನೀವು ಸಾಥ್ ನೀಡಿದ್ದೀರಿ. ಇದರ ಸಂಪೂರ್ಣ ಹೊಣೆ ರೈಲ್ವೆ ಇಲಾಖೆಯೇ ಹೊರುತ್ತದೆ' ಎಂದು ಅವನಿಗೆ ಅವರು ಪ್ರತಿ ಭರವಸೆ ನೀಡಿದರು.
ಸ್ನೇಹಿತ ದಿನುವಿನ ಮೊಗದಲ್ಲಿ ಆತ್ಮ ಸಂತೃಪ್ತಿಯ ನಗು. ಎದೆ ಗೂಡಿನ ಬಿಸಿ ಉಸಿರಲ್ಲಿ, ತಣ್ಣನೆಯ ಹಸಿ ಉಸಿರು. ಭೂ ಮಾತೆಯ ಮಡಿಲಲ್ಲಿರುವ ಆ ಪುಟ್ಟ ಗಿಡಗಳ ಎಲೆಗಳ ಮೇಲೆ ಮಳೆ ಹನಿಯ ಥಕಧಿಮಿತ. ಸುಂಯ್ಯನೆ ಬೀಸುವ ಕುಳಿರ್ಗಾಳಿಗೆ ಓಲಾಡುವ ಭಾಗ್ಯ! ಮುಂದೊಂದು ದಿನ ಗಿಡ(ಬದುಕು) ಮರ(ನೆರಳು)ವಾಗಿ ಹಸಿರು(ಉಸಿರು) ಚೆಲ್ಲಲಿದೆ. ಈ ದಿನಕ್ಕೆ ಸಾಕ್ಷಿಯಾಗಿ ಇತಿಹಾಸ ಪುಟ ಸೇರಲಿದೆ. ಆಗ, ರೈಲಿನ ಮೇಲೆ ಪಯಣಿಸುವಾಗ, ಬಾಗಿಲ ಬಳಿ ನಿಂತು, 'ನಮ್ಮ ದಿನುವಿನ ಮರ' ಎಂದು ಕಣ್ತುಂಬಿಸಿಕೊಳ್ಳುತ್ತೇವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ