ಬುಧವಾರ, ಜನವರಿ 25, 2017

ಕರುಳ ಕುಡಿ ಇನ್ನಿಲ್ಲದಾಗ...
ಹಸಿ-ಹಸಿ ಕನಸುಗಳು ಇನ್ನೂ ಕಣ್ಮುಂದೆಯೇ ಇವೆ. ಇನ್ನೇನು ಆ ಕನುಸುಗಳೆಲ್ಲ ನನಸಾಯಿತು ಎನ್ನುವಷ್ಟರಲ್ಲಿಯೇ ಬಹುದಿನಗಳಿಂದ 'ಅತ್ಮ'ವನ್ನು ಕಾಡುತ್ತಿದ್ದ 'ಹತ್ಯೆ' ಧುತ್ತೆಂದು ಎದುರಾಗಿಯೇ ಬಿಟ್ಟಿತು. ಕ್ಷಣಾರ್ಧದಲ್ಲಿ ಎಲ್ಲವೂ ಶಾಂತ. ಸ್ಮಶಾನ ಮೌನ...!!
ಎದೆಗೆ ಒದ್ದ ಪುಟ್ಟ ಕಾಲುಗಳು, ಕಿರುಬೆರಳ ಹಿಡಿದು ನಡೆದ ದಾರಿ, ಎದೆ ಹಾಲು ಹೀರಿದ ಆ ಚೆಂದುಟಿ, 'ಅಮ್ಮಾ' ಎಂದು ಕರೆದ ಮಮತೆಯ ಕೂಗು.... ಎಲ್ಲವೂ ಆ ತಾಯಿಯ ಕಣ್ಮುಂದೆ ಮೆರವಣಿಗೆ ಹೊರಟಿವೆ.

'ಹೋಗಿ ಬರುತ್ತೇನೆ ಅಮ್ಮಾ...' ಎಂದು ಪಾದಕ್ಕೆರಗಿ ಹೊಸ್ತಿಲು ತುಳಿದ ಮಗ, ಕಾಣದ ಲೋಕಕ್ಕೆ ಪಯಣಿಸಿದ್ದ. ಆತ ತುಳಿದು ಹೋದ ಹೆಜ್ಜೆ ಗುರುತು ಮುಸ್ಸಂಜೆಯ ಬೆಳಕಿಗೆ ಅಸ್ಪಷ್ಟವಾಗಿ ಗೋಚರಿಸುತ್ತಿದೆ.
ಅತ್ತು, ಗೋಗರೆದು ತನು-ಮನವೆಲ್ಲ ನಿತ್ರಾಣವಾಗಿದೆ. ಕಣ್ಣಂಚಿನಿಂದ ಒಂದೇ ಒಂದು ಹನಿ ಕೂಡಾ ಉರುಳುತ್ತಿಲ್ಲ. ಎದೆಯಾಳ ಬತ್ತಿ, ಬಂಜರು ಭೂಮಿಯಂತಾಗಿದೆ.
ಬೆಚ್ಚನೆಯ ಮಡಿಲಲ್ಲಿ ಮಲಗಿರುತ್ತಿದ್ದ ಮಗ, ಈಗ ಚಿತೆಯ ಮೇಲೆ ನಿಸ್ತೇಜ. ಉಸಿರಿಲ್ಲದ ದೇಹಕ್ಕೆ ಬಿಳಿಯ ಹೊದಿಕೆ. ಇದ್ದಾಗ ಇಲ್ಲದ ಹಾರ-ತುರಾಯಿ, ಈಗ ಮುಖವೂ ಕಾಣಿಸದೆ ತುಂಬಿಕೊಂಡಿವೆ. ಒಂದು ಕಡೆ ಸಂಬಂಧಿಗಳ ರೋದನ, ಇನ್ನೊಂದು ಕಡೆ ಸಮಯ ಮೀರುತ್ತಿದೆ ಎನ್ನುವ 'ಸುಡುವ' ಮಾತು.
ಒಂದರೆ ಘಳಿಗೆ.... ಆತ್ಮವೇ ಇಲ್ಲದ ದೇಹ, ಪಂಚಭೂತಗಳಲ್ಲಿ ಲೀನ, ಎಲ್ಲವೂ ನೋಡು ನೋಡುತ್ತಲೇ!
ಅರೆ, ಒಂಬತ್ತು ತಿಂಗಳು ಗರ್ಭದಲ್ಲಿದ್ದು, ಪ್ರಸವದಲ್ಲಿ ನೋವನ್ನು ಉಂಡು, ಅಳುವ ದನಿ ಕೇಳಿದಾಗ 'ನೋವು ಮರೆತವಳು' ನಾನಲ್ಲವೇ!
ಪುಟ್ಟ ಹೆಜ್ಜೆಯನ್ನಿಟ್ಟು, ಅಂಗಳದ ರಂಗವಲ್ಲಿಯ ಅಳಿಸಿ ಹಿರಿಹಿರಿ ಹಿಗ್ಗಿದವನು ಇವನಲ್ಲವೇ!
ಹೌದು, ಕರಿಮಣಿ ಮಾಲೀಕನ ಹಿಂಸೆಗೆ ನಲುಗಿದಾಗ, ಕಾರ್ಗತ್ತಲ ಇರುಳಿನಲಿ ಒಬ್ಬಂಟಿಯಾದಾಗ, 'ಅಮ್ಮಾ' ಅನ್ನೋ ಒಂದೇ ಪದದಿಂದ ನೋವ ಮರೆಸಿದವನು ಇವನೇ! ಕರುಳ ಕುಡಿಯಾದರೂ ಆತ್ಮ ಬಂಧುವಿನಂತಾದವನು, ಆತ್ಮ ಸಖನೇ ಆದವನು, ನನ್ನಾತ್ಮವೇ ಆದವನು.
ಹ್ಹ...ಹ್ಹ........... ಹ್ಹ
ಆತ್ಮ, ಆತ್ಮ ಸಖ, ಆತ್ಮ ಬಂಧು.... ಕಣ್ತೆರೆಯುವ ಮೊದಲೇ ಆತ್ಮಾರ್ಪಣೆ ಮಾಡಿದನೆ? ಹತ್ಯೆಯಾಗದ ಆತ್ಮ, ಹತ್ಯೆಯ ಕರಾಳ ಮೊನಚಿಗೆ ಸಿಲುಕಿತೆ?
ಭವಿಷ್ಯದ ಕೈಯ್ಯಲ್ಲಿ ಭೂತದ ನರ್ತನ, ಕಾರಿರುಳ ಮಾರ್ಗದಲಿ ಮಿಂಚುಳ್ಳಿಯ ಬೆಳಕು. ಎಷ್ಟು ದೂರ ಸಾಗಬಲ್ಲೆ? ಇರುಳಿನ ಪರದೆ ಸರಿದು ಬೆಳಕು ಹರಿಯುತ್ತದೆ. ಮತ್ತದೆ 'ಆತ್ಮ' ಬಂದೆನ್ನ ಕಾಡುತ್ತದೆ. ನೆತ್ತಿಯ ಮೇಲೆ ಸುಡು ಸೂರ್ಯ. ದೂರದಲ್ಲೆಲ್ಲೋ ಬಿಸಿಲ್ಗುದುರೆ. ಮತ್ತೆ ಆವರಿಸುತ್ತದೆ ಸದ್ದಿಲ್ಲದೆ ಇರುಳು.
'ಹೋಗಿ ಬರುತ್ತೇನೆ' ಎಂದು ಹೊಸಿಲು ತುಳಿದ ಮಗ. ಭರವಸೆಯ ಬೆಳಕು ಕ್ಷಣ ಕ್ಷಣಕೂ ಕ್ಷೀಣ. ಹುಚ್ಚು ಭರವಸೆಯ ಕಿರಣ, ಅಮಾವಸ್ಯೆಯಲಿ ಬೆತ್ತಲು. ಬದಲಾಯ್ತು ಬದುಕು, ಬರಲಿಲ್ಲ ಆತ್ಮ.......!!!!
-ನಾಗರಾಜ್ ಬಿ.ಎನ್. 

ಶನಿವಾರ, ಜನವರಿ 7, 2017

ವಲಸೆಯ ಬಂಡಿ ಉರುಳಿದಾಗ......
'ಗೇಣುದ್ದ ಹೊಟ್ಟೆ ತುಂಬಿಸಿಕೊಳ್ಳಲು ಊರು ತೊರೆಯುತ್ತಿದ್ದೇವೆ ಎನ್ನುವ ಚಿಕ್ಕ ನೋವು ಬಿಟ್ಟರೆ, ನಮ್ಮದು ತುಂಬು ಕುಟುಂಬ. ಸಂಪಾದಿಸಿದ ಅಷ್ಟೋ ಇಷ್ಟೋ ಹಣದಲ್ಲಿ ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ಸಮಾನವಾಗಿ ತಿನ್ನುತ್ತೇವೆ. ಕೂಡಿ ಬಾಳುತ್ತೇವೆ. ನೆಮ್ಮದಿಯ ಬದುಕಿಗೆ ಇನ್ನೇನು ಬೇಕು?'
ಸುರಪುರ ತಾಲೂಕಿನಿಂದ ವಲಸೆ ಹೊರಟ ಕುಟುಂಬವೊಂದರ ಯಜಮಾನನ ಮಾತಿತು. ಶನಿವಾರ ಶಿರಸಿಯಿಂದ ಹುಬ್ಬಳ್ಳಿಗೆ ಬೈಕ್ ಮೇಲೆ ಬರುವಾಗ ಮುಂಡಗೋಡ ಸನಿಹ ಈ ವಲಸೆ ಕುಟುಂಬ ಎದುರಾಯಿತು. ಮೊದಲೇ ಹೆಗಲಿಗೆ ನೇತಾಡುತ್ತಿದ್ದ ಕ್ಯಾಮರಾ, ದೂರದಿಂದಲೇ ಚಕ್ಕಡಿ ಮೇಲೆ ಸಾಲಾಗಿ ಬರುತ್ತಿದ್ದ 'ವಲಸೆ' ಚಿತ್ರವನ್ನು ಸೆರೆಹಿಡಿಯಲು ಪ್ರಯತ್ನಿಸಿತು. ಹತ್ತಿರ ಬರುತ್ತಿದ್ದಂತೆ ಅವರನ್ನು ಮಾತನಾಡಿಸಿದಾಗ, ಕುಟುಂಬದ ಯಜಮಾನ ಹತ್ತು ನಿಮಿಷ ನನಗಾಗಿ ಮೀಸಲಿಟ್ಟ. ಆ ಸೀಮಿತ ಸಮಯದಲ್ಲಿ ನಾ ಮಾತಾಡಿದ್ದು 'ಎಲ್ಲಿಂದ ಬಂದಿದ್ದು? ಯಾಕೆ?' ಎನ್ನು ಎರಡೇ ಎರಡು ಮಾತು. ಅದು ಕೂಡಾ ಒಂದೋ, ಎರಡು ಸೆಕೆಂಡ್. ಉಳಿದದ್ದೆಲ್ಲ ಆತನದ್ದೇ ಮಾತು... ಮಾತು....!
 ಯಜಮಾನನ ಹೆಸರು ಭರಮಪ್ಪ ಚನ್ನಬಸಪ್ಪ. ಸುರಪುರದ ಬಿದೊಡ್ಡಿ ಅನ್ನೋ ಪುಟ್ಟ ಕುಗ್ರಾಮದಲ್ಲಿ ವಾಸ. ಅಣ್ಣ, ತಮ್ಮ, ಅಕ್ಕ ಹಾಗೂ ಅವರ ಸಂಸಾರವೆಂದು ಹದಿಮೂರು ಜನರಿರುವ ತುಂಬು ಕುಟುಂಬ. 36 ಎಕರೆ ಹೊಲವಿರುವ ವಾರಸ್ದಾರ. ಜೋಳ, ಸೂರ್ಯಕಾಂತಿ ಮತ್ತಿನ್ಯಾವುದೋ ಎರಡು ಬೆಳೆ ಬೆಳೆದಿದ್ದನಂತೆ. ಮೊದಲೇ ಬಿಸಿಲು ನಾಡು... ಮಳೆಯೂ ಇಲ್ಲದ ಕಾರಣ ಅವೆಲ್ಲ ಮೊಳಕೆಯೂ ಬರದೆ ಬಿತ್ತಿದ್ದಲ್ಲಿಯೇ ಸುಟ್ಟು ಕರಕಲಾಯ್ತಂತೆ. ತುಂಬ ಕುಟುಂಬ ಊರಲ್ಲೇ ಇದ್ದರೆ ಸಂಸಾರ ಅಸಾಧ್ಯ ಎಂದರಿತ ಆತ, ಊರು ಬಿಡಲು ನಿರ್ಧರಿಸಿ ಕುಟುಂಬದವರ ಜೊತೆ ಚರ್ಚಿಸಿ ಹದಿನೈದು ದಿನದ ಹಿಂದೆ, ಕುಟುಂಬ ಸಮೇತನಾಗಿ ವಲಸೆ ಬಂದಿದ್ದಾನೆ.
ತಮ್ಮ ಪಯಣದ ಗಮ್ಯ ಎಲ್ಲಿಗೆ ಎನ್ನುವುದು ಆ ಕುಟುಂಬಕ್ಕೆ ಗೊತ್ತಿಲ್ಲ. ಬರುವಾಗ ಮನೆಯಲ್ಲಿದ್ದ ಒಂದಿಷ್ಟು ಅಕ್ಕಿ, ಕಾಳು, ಕಡಿಗಳನ್ನು ಹೊತ್ತುಕೊಂಡು ಚಕ್ಕಡಿಗೆ ಹಾಕಿಕೊಂಡು ಬಂದಿದ್ದಾರೆ. ಸಾಯಂಕಾಲವಾಗುತ್ತಿದ್ದಂತೆ ಎಲ್ಲಿ ತಲುಪಿದ್ದಾರೋ ಅದೇ ಊರಲ್ಲಿ ಟೆಂಟ್ ಕಟ್ಟಿಕೊಂಡು, ಬಯಲಲ್ಲಿಯೇ ಅಡುಗೆ ಮಾಡಿ ಅಲ್ಲಿಯೇ ರಾತ್ರಿ ಬೆಳಗು ಮಾಡುತ್ತಾರೆ. ಮುಂಜಾನೆ ಕಿರಣ ಭೂಮಿ ಸ್ಪರ್ಶಿಸುತ್ತಿದ್ದಂತೆ, ಮತ್ತೆ ದಾರಿ ಕಾಣದ ಹಾದಿಯಲ್ಲಿ ಬಂಡಿಯ ಚಕ್ರಗಳು ಉರುಳುತ್ತವೆ, ಬದುಕಿನ ಚಕ್ರ ಉರುಳಿದಂತೆ.
ವಿಶೇಷವೆಂದರೆ ಈ ಕುಟುಂಬ ಕಮ್ಮಾರಿಕೆ ಕಾರ್ಯದಲ್ಲೂ ನಿಪುಣವಿದೆ ಎನ್ನುವುದು. ಇದೇ ಧೈರ್ಯ ಹಾಗೂ ಆತ್ಮವಿಶ್ವಾಸ ವಲಸೆ ಕುಟುಂಬದ ಯಜಮಾನನಿಗೆ. ಆ ಕುಟುಂಬದ ಪಯಣ ಮಲೆನಾಡ ದಿಕ್ಕಿನತ್ತ ಇರುವುದರಿಂದ, ಅಲ್ಲಿಯ ರೈತಾಪಿ ವರ್ಗದವರ ನೇಗಿಲು, ಕತ್ತಿ, ಕೊಡಲಿ, ಹಾರಿ, ಪಿಕಾಸುಗಳಂತ ಸಾಮಗ್ರಿಗಳಿಗೆ ಈ ಸಮಯದಲ್ಲಿ ಒಂದಿಷ್ಟು ಹದ ಹಾಕಬೇಕಾಗುತ್ತದೆ. ಸೂಕ್ತ ಗ್ರಾಮಕ್ಕೆ ಹೋಗಿ ಅಲ್ಲಿಯೇ ಒಂದಿಷ್ಟು ದಿನ, ವಾರವೋ ಉಳಿದು ಸಂಸಾರದ ನೊಗ ಹೊರುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಆತನ ಮಾತಿನಿಂದಲೂ ತಿಳಿದು ಬಂದ ಅಂಶ.
ಏಳು ಎತ್ತಿನ ಬಂಡಿಯಲ್ಲಿ ಹದಿಮೂರು ಜನರಷ್ಟೇ ಪಯಣಿಸುತ್ತಿಲ್ಲ. ಆ ಪಯಣದಲ್ಲಿ ಎರಡು ನಾಯಿ, ನಾಲ್ಕು ಕುರಿ, ಐದು ಕೋಳಿಗಳು ಸಹ ಕಾಣದ ಊರಿನತ್ತ ಮುಖ ಮಾಡಿವೆ. ಎತ್ತುಗಳಿಗೆ ಸಾಕಾಗುವಷ್ಟು ಹುಲ್ಲುಗಳನ್ನು ಒಂದು ಚಕ್ಕಡಿಯಲ್ಲಿ ತುಂಬಿಸಿಕೊಂಡಿದ್ದಾರೆ. ಹಾಸಿಗೆ, ದಿಂಬು, ಪಾತ್ರೆ, ಬಿಂದಿಗೆ, ಕೊಡ, ವಸ್ತ್ರ ಹೀಗೆ ಬದುಕಲು ಏನೇನು ಬೇಕೋ ಎಲ್ಲವೂ ಇನ್ನುಳಿದ ಆರು ಚಕ್ಕಡಿಯಲ್ಲಿ ತುಂಬಿವೆ. ಹಗಲಿನ ಹಾದಿಯಲ್ಲಿ ಹೆಂಗಸರು, ಮಕ್ಕಳು ವಿಶ್ರಮಿಸಲೆಂದು ಚಾಪೆಯನ್ನು ಹಾಸಲಾಗಿದೆ. ಒಂದು ವೇಳೆ ರಾತ್ರಿ ಪಯಣಿಸಬೇಕಾದರೆ ಯಾವುದಕ್ಕೂ ಇರಲಿ ಎಂದು, ಕಂದೀಲುಗಳನ್ನು ಸಹ ವ್ಯವಸ್ಥೆ ಮಾಡಿಟ್ಟುಕೊಂಡಿದ್ದಾರೆ.
'ತುತ್ತು ಕೂಳಿಗಾಗಿ ಮನೆ ಬಿಟ್ಟು ಬಂದಿರಬಹುದು. ಆದರೆ ನಾವು(ಅಣ್ಣ-ತಮ್ಮ) ಪ್ರೀತಿ ವಿಶ್ವಾಸದಿಂದ ಕೂಡಿ ಬಾಳುತ್ತಿದ್ದೇವೆ. ಸಂಪಾದಿಸಿದ ಒಂದಿಷ್ಟು ಹಣದಲ್ಲಿ ಎಲ್ಲರೂ ಹಂಚಿಕೊಂಡು ತೃಪ್ತಿಯಿಂದ ನಗುತ್ತೇವೆ. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕುವ ಶಕ್ತಿ ನಮ್ಮ ಅಣ್ಣ-ತಮ್ಮರಿಗಿಲ್ಲ. ಹೆಣ್ಣು ಮಕ್ಕಳು ದೊಡ್ಡವರಾಗುತ್ತಿದ್ದಾರೆ. ಬೇಸಿಗೆ ಬರುವವರೆಗೆ ವಲಸೆ ಇರುತ್ತೇವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ಊರಿನ ಕಡೆ ಮುಖ ಮಾಡುತ್ತೇವೆ. ಎಲ್ಲವೂ ಭಗವಂತನ ಚಿತ್ತ. ಇರುವಷ್ಟು ದಿನ ಮನೆ&ಮಂದಿಯೊಂದಿಗೆ ಪ್ರೀತಿಯಿಂದ ನಗುತ್ತ ಬದುಕುವುದಷ್ಟೇ ನಮಗೆ ಗೊತ್ತು' ಎನ್ನುವುದು ಭರಮಪ್ಪನ ಬದುಕಿನ ಮಾತು.

ನಿಜಕ್ಕೂ ಆ ಕ್ಷಣದಲ್ಲಿ ಕಣ್ಣಾಲಿಗಳು ತೇವಗೊಂಡವು. ಹೊಟ್ಟೆಗೆ ಕೂಳಿಲ್ಲದಿದ್ದರೂ ಸಂತೃಪ್ತಿಯಿಂದ ಕುಟುಂಬದವರೊಂದಿಗೆ ಹೇಗೆ ಬದುಕಬೇಕೆನ್ನುವ ನೀತಿ ಪಾಠ ಭರಮಪ್ಪ ಹೇಳಿದ್ದ.......