ಬುಧವಾರ, ಜನವರಿ 25, 2017

ಕರುಳ ಕುಡಿ ಇನ್ನಿಲ್ಲದಾಗ...
ಹಸಿ-ಹಸಿ ಕನಸುಗಳು ಇನ್ನೂ ಕಣ್ಮುಂದೆಯೇ ಇವೆ. ಇನ್ನೇನು ಆ ಕನುಸುಗಳೆಲ್ಲ ನನಸಾಯಿತು ಎನ್ನುವಷ್ಟರಲ್ಲಿಯೇ ಬಹುದಿನಗಳಿಂದ 'ಅತ್ಮ'ವನ್ನು ಕಾಡುತ್ತಿದ್ದ 'ಹತ್ಯೆ' ಧುತ್ತೆಂದು ಎದುರಾಗಿಯೇ ಬಿಟ್ಟಿತು. ಕ್ಷಣಾರ್ಧದಲ್ಲಿ ಎಲ್ಲವೂ ಶಾಂತ. ಸ್ಮಶಾನ ಮೌನ...!!
ಎದೆಗೆ ಒದ್ದ ಪುಟ್ಟ ಕಾಲುಗಳು, ಕಿರುಬೆರಳ ಹಿಡಿದು ನಡೆದ ದಾರಿ, ಎದೆ ಹಾಲು ಹೀರಿದ ಆ ಚೆಂದುಟಿ, 'ಅಮ್ಮಾ' ಎಂದು ಕರೆದ ಮಮತೆಯ ಕೂಗು.... ಎಲ್ಲವೂ ಆ ತಾಯಿಯ ಕಣ್ಮುಂದೆ ಮೆರವಣಿಗೆ ಹೊರಟಿವೆ.

'ಹೋಗಿ ಬರುತ್ತೇನೆ ಅಮ್ಮಾ...' ಎಂದು ಪಾದಕ್ಕೆರಗಿ ಹೊಸ್ತಿಲು ತುಳಿದ ಮಗ, ಕಾಣದ ಲೋಕಕ್ಕೆ ಪಯಣಿಸಿದ್ದ. ಆತ ತುಳಿದು ಹೋದ ಹೆಜ್ಜೆ ಗುರುತು ಮುಸ್ಸಂಜೆಯ ಬೆಳಕಿಗೆ ಅಸ್ಪಷ್ಟವಾಗಿ ಗೋಚರಿಸುತ್ತಿದೆ.
ಅತ್ತು, ಗೋಗರೆದು ತನು-ಮನವೆಲ್ಲ ನಿತ್ರಾಣವಾಗಿದೆ. ಕಣ್ಣಂಚಿನಿಂದ ಒಂದೇ ಒಂದು ಹನಿ ಕೂಡಾ ಉರುಳುತ್ತಿಲ್ಲ. ಎದೆಯಾಳ ಬತ್ತಿ, ಬಂಜರು ಭೂಮಿಯಂತಾಗಿದೆ.
ಬೆಚ್ಚನೆಯ ಮಡಿಲಲ್ಲಿ ಮಲಗಿರುತ್ತಿದ್ದ ಮಗ, ಈಗ ಚಿತೆಯ ಮೇಲೆ ನಿಸ್ತೇಜ. ಉಸಿರಿಲ್ಲದ ದೇಹಕ್ಕೆ ಬಿಳಿಯ ಹೊದಿಕೆ. ಇದ್ದಾಗ ಇಲ್ಲದ ಹಾರ-ತುರಾಯಿ, ಈಗ ಮುಖವೂ ಕಾಣಿಸದೆ ತುಂಬಿಕೊಂಡಿವೆ. ಒಂದು ಕಡೆ ಸಂಬಂಧಿಗಳ ರೋದನ, ಇನ್ನೊಂದು ಕಡೆ ಸಮಯ ಮೀರುತ್ತಿದೆ ಎನ್ನುವ 'ಸುಡುವ' ಮಾತು.
ಒಂದರೆ ಘಳಿಗೆ.... ಆತ್ಮವೇ ಇಲ್ಲದ ದೇಹ, ಪಂಚಭೂತಗಳಲ್ಲಿ ಲೀನ, ಎಲ್ಲವೂ ನೋಡು ನೋಡುತ್ತಲೇ!
ಅರೆ, ಒಂಬತ್ತು ತಿಂಗಳು ಗರ್ಭದಲ್ಲಿದ್ದು, ಪ್ರಸವದಲ್ಲಿ ನೋವನ್ನು ಉಂಡು, ಅಳುವ ದನಿ ಕೇಳಿದಾಗ 'ನೋವು ಮರೆತವಳು' ನಾನಲ್ಲವೇ!
ಪುಟ್ಟ ಹೆಜ್ಜೆಯನ್ನಿಟ್ಟು, ಅಂಗಳದ ರಂಗವಲ್ಲಿಯ ಅಳಿಸಿ ಹಿರಿಹಿರಿ ಹಿಗ್ಗಿದವನು ಇವನಲ್ಲವೇ!
ಹೌದು, ಕರಿಮಣಿ ಮಾಲೀಕನ ಹಿಂಸೆಗೆ ನಲುಗಿದಾಗ, ಕಾರ್ಗತ್ತಲ ಇರುಳಿನಲಿ ಒಬ್ಬಂಟಿಯಾದಾಗ, 'ಅಮ್ಮಾ' ಅನ್ನೋ ಒಂದೇ ಪದದಿಂದ ನೋವ ಮರೆಸಿದವನು ಇವನೇ! ಕರುಳ ಕುಡಿಯಾದರೂ ಆತ್ಮ ಬಂಧುವಿನಂತಾದವನು, ಆತ್ಮ ಸಖನೇ ಆದವನು, ನನ್ನಾತ್ಮವೇ ಆದವನು.
ಹ್ಹ...ಹ್ಹ........... ಹ್ಹ
ಆತ್ಮ, ಆತ್ಮ ಸಖ, ಆತ್ಮ ಬಂಧು.... ಕಣ್ತೆರೆಯುವ ಮೊದಲೇ ಆತ್ಮಾರ್ಪಣೆ ಮಾಡಿದನೆ? ಹತ್ಯೆಯಾಗದ ಆತ್ಮ, ಹತ್ಯೆಯ ಕರಾಳ ಮೊನಚಿಗೆ ಸಿಲುಕಿತೆ?
ಭವಿಷ್ಯದ ಕೈಯ್ಯಲ್ಲಿ ಭೂತದ ನರ್ತನ, ಕಾರಿರುಳ ಮಾರ್ಗದಲಿ ಮಿಂಚುಳ್ಳಿಯ ಬೆಳಕು. ಎಷ್ಟು ದೂರ ಸಾಗಬಲ್ಲೆ? ಇರುಳಿನ ಪರದೆ ಸರಿದು ಬೆಳಕು ಹರಿಯುತ್ತದೆ. ಮತ್ತದೆ 'ಆತ್ಮ' ಬಂದೆನ್ನ ಕಾಡುತ್ತದೆ. ನೆತ್ತಿಯ ಮೇಲೆ ಸುಡು ಸೂರ್ಯ. ದೂರದಲ್ಲೆಲ್ಲೋ ಬಿಸಿಲ್ಗುದುರೆ. ಮತ್ತೆ ಆವರಿಸುತ್ತದೆ ಸದ್ದಿಲ್ಲದೆ ಇರುಳು.
'ಹೋಗಿ ಬರುತ್ತೇನೆ' ಎಂದು ಹೊಸಿಲು ತುಳಿದ ಮಗ. ಭರವಸೆಯ ಬೆಳಕು ಕ್ಷಣ ಕ್ಷಣಕೂ ಕ್ಷೀಣ. ಹುಚ್ಚು ಭರವಸೆಯ ಕಿರಣ, ಅಮಾವಸ್ಯೆಯಲಿ ಬೆತ್ತಲು. ಬದಲಾಯ್ತು ಬದುಕು, ಬರಲಿಲ್ಲ ಆತ್ಮ.......!!!!
-ನಾಗರಾಜ್ ಬಿ.ಎನ್. 

ಕಾಮೆಂಟ್‌ಗಳಿಲ್ಲ: