ಗುಪ್ತಾ೦ಗ ಛೇದನ...! ಇದು ಈಗಲೂ ಜೀವಂತ!!!
(ಓದಲೇ ಬೇಕಾದ ಹೊತ್ತಿಗೆ ‘ಮರುಭೂಮಿಯ ಹೂ’)
ಕೊನೆಯ ಅಧ್ಯಾಯದಲ್ಲಿ ಹೀಗೆ ಸಾಗುತ್ತದೆ.......
ಆಫ್ರಿಕಾದ ಬುಡಕಟ್ಟುಗಳ ಮಹಿಳೆಯರು ಪವಿತ್ರವಾಗಿ ಬದುಕಬೇಕಾದರೆ ನಾಗರಿಕ ಸಮಾಜ ಕಂಡು-ಕೇಳರಿಯದಂತಹ ಅನಿಷ್ಟ ಪದ್ಧತಿಗೆ ಒಳಗಾಗಲೇಬೇಕು. ಅದೊಂದು ಕಡ್ಡಾಯ ಧಾರ್ಮಿಕ ಕ್ರಿಯೆಯಾಗಿ ಅಲ್ಲಿ ಬದಲಾಗಿದೆ. ಹೆಣ್ಣು ಕೆಲವು ಪವಿತ್ರ ಭಾಗಗಳನ್ನು ಇಟ್ಟುಕೊಂಡು ಜನಿಸುವುದರಿಂದ, ಅವಳು ಪವಿತ್ರಳಾಗಿ ಮುಂದಿನ ದಿನಗಳಲ್ಲಿ ವಿವಾಹಕ್ಕೆ ಮತ್ತು ತಾಯಿಯಾಗಲು ಅರ್ಹತೆ ಗಳಿಸಬೇಕಾದರೆ, ಗುಪ್ತಾ೦ಗ ವಿಚ್ಛೇದನ ಕ್ರಿಯೆಗೆ ಒಳಗಾಗಬೇಕಾಗಿರುವುದು ಕಡ್ಡಾಯ. ಈ ಕ್ರಿಯೆಗೆ ಒಳಗಾಗದ ಮಹಿಳೆಯರನ್ನು ಮದುವೆಯಾಗಲು ಪುರುಷ ಸಮಾಜ ನಿರಾಕರಿಸುತ್ತಿರುವುದು ಇಂದಿಗೂ ಅಲ್ಲಿ ಜೀವಂತವಿದೆ ಎನ್ನುವ ಕಟು ವಾಸ್ತವವನ್ನು, ಬೆದರಿಕೆಗಳ ನಡುವೆಯೂ ವಾರಿಸ್ ನಾಗರಿಕ ಸಮಾಜಕ್ಕೆ ತಿಳಿಸುವ ಪರಿ ಅನನ್ಯವಾದದ್ದು.
ಈ ಅನಿಷ್ಟ ಕ್ರಿಯೆಗೆ ತನ್ನ ಅಕ್ಕನನ್ನು ಒಳಪಡಿಸಿದ್ದು, ಆಕೆ ಅನುಭವಿಸಿದ ನೋವು, ಸಂಕಟ, ಚೀರಾಟಗಳನ್ನು ಸ್ವತಃ ವಾರಿಸ್ ಕಣ್ಣಾರೆ ಕಂಡು ಭಯ ಭೀತಗೊಂಡಿದ್ದಳು. ಹಾಗಿದ್ದಾಗಲೂ, ತಾನು ಆ ಕ್ರಿಯೆಗೆ ಒಳಪಡಬೇಕೆಂದು ತಾಯಿಯ ಬೆನ್ನು ಬಿದ್ದು ಕಾಡಿ, ಕೊನೆಗೊಂದು ದಿನ ಆ ಅನಿಷ್ಟ ಕ್ರಿಯೆಗೆ ತನ್ನನ್ನು ಒಳಗಾಗಿಸಿಕೊಳ್ಳುತ್ತಾಳೆ. ಆದರೆ, ಇವೆಲ್ಲ ಏನೂ ಅರಿಯದ ಆಕೆಯ ಐದನೇ ವರ್ಷದಲ್ಲಿ ಕುತೂಹಲ ಹಾಗೂ ತಾನು ಗಟ್ಟಿಗಿತ್ತಿ ಎಂದು ತೋರಿಸಿಕೊಳ್ಳಲೋಸುಗ ಮಾತ್ರ. ಕತ್ತರಿಸಿದ ಆಕೆಯ ಗುಪ್ತಾ೦ಗದ ಎರಡು ಭಾಗಗಳನ್ನು ಸೇರಿಸಿ, ಮೂತ್ರ ವಿಸರ್ಜಿಸಲಷ್ಟೇ ಚಿಕ್ಕ ರಂಧ್ರದಷ್ಟು ಜಾಗ ಬಿಟ್ಟು ಹೊಲಿಗೆ ಹಾಕಲಾಗುತ್ತದೆ. ಅರಿಯದ ವಯಸ್ಸಲ್ಲಿ ಅಮ್ಮನ ಬೆನ್ನು ಬಿದ್ದು(ಬೆನ್ನು ಬೀಳದಿದ್ದರೂ ಆ ಕ್ರಿಯೆಗೆ ಒಳಪಡಲೇಬೇಕಿತ್ತು) ವಿಚ್ಛೇದನ ಕ್ರಿಯೆಗೆ ಒಳಪಟ್ಟ ಪರಿಣಾಮ ವಾರಿಸ್, ಇಪ್ಪತ್ತೆ೦ಟು ವರ್ಷಗಳ ಕಾಲ ಮೂತ್ರ ವಿಸರ್ಜನೆ ಮಾಡಲು ಅರ್ಧಗಂಟೆ ಸಮಯ ತೆಗೆದುಕೊಳ್ಳುತ್ತಿದ್ದಳು! ಪಿರೀಯಡ್ಸ್ ಸಮಯದಲ್ಲಂತೂ ರಕ್ತ ಸರಾಗವಾಗಿ ಹರಿಯದ ಕಾರಣ ನರಕ ಯಾತನೆ ಅನುಭವಿಸುತ್ತಿದ್ದಳು. ಕೊನೆಗೆ ಮೂವತ್ತನೇ ವಯಸ್ಸಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಎಲ್ಲ ನೋವಿಗೂ ಪರಿಹಾರ ಕಂಡುಕೊಂಡಳು.
ಆಫ್ರಿಕಾದ ಸೋಮಾಲಿಯಾದ ಮರುಭೂಮಿಯ ಬಡುಟಕಟ್ಟಿನಲ್ಲಿರುವ ಅನಿಷ್ಟ ಪದ್ಧತಿಯನ್ನು ವಾರಿಸ್, 'ರೆಸಾರ್ಟ್ ಫ್ಲವರ್’ ಹೊತ್ತಿಗೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಸ್ವತಃ ತಾನು ಆ ಕ್ರಿಯೆಗೆ ಒಳಗಾಗಿದ್ದು, ಆ ಸಂದರ್ಭದಲ್ಲಿ ತಾನು ಅನುಭವಿಸಿದ ನೋವು, ಮುಂದೆ ಎದುರಾದ ಸಂಕಷ್ಟ ಇವೆಲ್ಲವನ್ನು ಆಕೆ ಎದುರಿಗೆ ಕೂತು ಹೇಳಿದಂತೆ ಭಾಸವಾಗುತ್ತದೆ. ಇಂದಿಗೂ ಅಲ್ಲಿ ಲಕ್ಷಾ೦ತರ ಹೆಣ್ಣು ಮಕ್ಕಳು ಯೋನಿ ಛೇದದಂತಹ ಅನಿಷ್ಟ ಪದ್ಧತಿಗೆ ಒಳಗಾಗುತ್ತಿದ್ದಾರೆ ಎಂದು ವಾರಿಸ್ ಅಂಕಿ-ಸಂಖ್ಯೆ ತಿಳಿಸುವಾಗ, ಆಕ್ರೋಶಗಳೆಲ್ಲ ಒಂದೆಡೆ ಕೇಂದ್ರಿಕೃತವಾಗುತ್ತದೆ. ವಿಶ್ವಸಂಸ್ಥೆಯ ರಾಯಭಾರಿಯಾಗಿ, ಈ ಅನಿಷ್ಟ ಪದ್ಧತಿ ವಿರುದ್ಧ ಹೋರಾಟ ನಡೆಸಿರುವ ಆಕೆ, ವಿಯನ್ನಾದಲ್ಲಿ ‘ಡೆಸಾರ್ಟ್ ಫ್ಲವರ್ ಫೌಂಡೇಶನ್’ ಸಂಸ್ಥೆ ಹುಟ್ಟು ಹಾಕಿದ್ದಾಳೆ. ರೂಪದರ್ಶಿಯಾಗಿ ಗಳಿಸಿದ, ಗಳಿಸುತ್ತಿರುವ ಎಲ್ಲ ಆದಾಯವನ್ನು ಅದಕ್ಕೆ ಮೀಸಲಿಟ್ಟು, ಜಾಗೃತಿ ಅಭಿಯಾನದಲ್ಲಿ ತೊಡಗಿಕೊಂಡಿದ್ದಾಳೆ. ‘ಸೋಮಾಲಿಯಾದಲ್ಲಿ ಯೋನಿ ಛೇದನ ಶಿಕ್ಷೆ ನಿರ್ಬಂಧಿಸಲಾಗಿದೆ’ ಎನ್ನುವ ಸುದ್ದಿ ಕೇಳಲು ಕಾತುರಳಾಗಿದ್ದಾಳೆ.
ಒಟ್ಟಾರೆ, ‘ಮರುಭೂಮಿಯ ಹೂ’ ಭಾಷಾಂತರ ಕೃತಿ ಎಂದು ಎಲ್ಲಿಯೂ ಭಾಸವಾಗುವುದಿಲ್ಲ. ವಾರಿಸ್ ತನ್ನ ಬಾಲ್ಯದ ಜೀವನವನ್ನು ತೆರೆದಿಡುತ್ತ, ಮರಳುಗಾಡಿನ ಬುಡಕಟ್ಟು ಜನರ ಆಚಾರ, ವಿಚಾರ, ಸಂಸ್ಕೃತಿ, ಬದುಕು ಹೀಗೆ ಎಲ್ಲ ವಿಷಯವನ್ನು ಸೂಕ್ಷ್ಮವಾಗಿ ತಿಳಿಸಿಕೊಡುತ್ತಾರೆ. ಇದೊಂದು ಆತ್ಮಕಥನ ಎನ್ನುವುದಕ್ಕಿ೦ತ, ಕತ್ತಲ ಕೂಪದಲ್ಲಿರುವ ಜನಾಂಗದ ಅನಿಷ್ಟ ಪದ್ಧತಿ ವಿವರಿಸುವ ಜಾಗೃತ ಕಥಾಗುಚ್ಛ ಎನ್ನಬಹುದು. ಹೊತ್ತಿಗೆಯ ಹಿಂಬರಹದಲ್ಲಿ ಎಚ್. ದುಂಡಪ್ಪ ಅವರು ಹೇಳಿದಂತೆ, ಎಷ್ಟೋ ಜನರ ಮುಚ್ಚಿದ ಕಣ್ಣನ್ನು ಈ ಕೃತಿ ತೆರೆಯುವಂತೆ ಮಾಡಬಹುದು’.
ಇಂತಹದ್ದೊ೦ದು ಅದ್ಭುತ ಕೃತಿಯನ್ನು ಕನ್ನಡಲ್ಲಿ ಓದುವಂತೆ ಮಾಡಿದ ಡಾ. ಡಾ. ಎನ್. ಜಗದೀಶ ಕೊಪ್ಪ ಅವರಿಗೆ ಅಕ್ಷರದ ಅಭಿನಂದನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ