ಮಂಗಳವಾರ, ಏಪ್ರಿಲ್ 30, 2013

ನಿಶ್ಯಬ್ದದ  ವೇದನೆ 

ದು ಇಷ್ಟಪಟ್ಟು ಆಹ್ವಾನಿಸಿಕೊಂಡ ಯಾತನೆ.... ಸ್ಥಿಮಿತ ಕಳೆದುಕೊಂಡ ಮನಸ್ಸು ಅರೆ ಹುಚ್ಚರಂತೆ ಅಲೆದಾಡುತ್ತದೆ.... ಒಮ್ಮೊಮ್ಮೆ ನೆನಪಿನ ಅಲೆಯಲ್ಲಿ ತೇಲಾಡಿದರೆ.... ಇನ್ನೊಮ್ಮೆ ಧುತ್ತೆಂದು ಆವರಿಸಿ ಬಿಡುತ್ತದೆ ದುಃಖದ ಕಾರ್ಮೋಡ .....!! ಇವುಗಳೇ ನನ್ನ ಬಾಳ ಸಂಗಾತಿಗಳು.... ಒಂಟಿ ತನಕೆ ಜೊತೆಯಾಗೋ ವಿಷಾದದ ಅಲೆಗಳು...

ಇಲ್ಲಿ ನಾನು ಎಂಬುದು ನೆಪ ಮಾತ್ರ. ನನ್ನದೆಂಬುದು ಏನೂ ಇಲ್ಲ. ಆದರೂ ಭಗವಂತ ಕೊಟ್ಟ ಈ ಬದುಕನ್ನು ಪ್ರೀತಿಸುತ್ತೇನೆ. ಬದುಕಿಗೆ ಆಸರೆಯನ್ನು ಹುಡುಕುತ್ತೇನೆ. ಸುಂದರ ಕನಸನ್ನು ಕಾಣುತ್ತೇನೆ. ನಾನು ಎಂಬ ಬದುಕು ನೆಪ ಮಾತ್ರವಾದರೂ.... ಅದಕ್ಕೆ ಸ್ವಾರ್ಥದ ಲೇಪ ಬಳಿದು, ಬಣ್ಣಬಣ್ಣದ ಚಿತ್ತಾರ ಮೂಲಕ ಅದನ್ನು ಅಲಂಕರಿಸಲು ಇಷ್ಟಪಡುತ್ತೇನೆ.

ಅದು ಇಷ್ಟಪಟ್ಟ ಬಣ್ಣ ಎನ್ನುವುದಕ್ಕಿಂತ, ಪ್ರಕೃತಿ ವರವಾಗಿ ನೀಡಿದ ಬಣ್ಣ. ಸಂಭ್ರಮದ ಮೆರವಣಿಗೆಯಿಂದ ಅದನ್ನು ಮನದ ಕೋಣೆಗೆ ಸ್ವಾಗತಿಸಲು ಬಯಸಿದೆ. ಮನಸೂರೆಗೊಂಡ ಅದರ ವೈಯ್ಯಾರ, ಹೃದಯದಲ್ಲಿ ಚಿತ್ತಾರವನ್ನೆ ಬಿಡಿಸಿಬಿಟ್ಟಿತು. ಹಮ್ಮು-ಬಿಮ್ಮಿಲ್ಲ ಅದರ ಓರೆ ನೋಟ ಮೈ-ಮನವೆಲ್ಲ ತುಂಬಿಕೊಂಡಿತು. ಕಣ್ಣಂಚಿನ ನೋಟದ ಬಣ್ಣವೇ ತಾನೆಂದು ಒಲವಿನಾ ಗೀತೆ ಹಾಡಿತು. ಹೃದಯ ಸಮ್ಮಿಲನಕ್ಕೆ ಭಾಷ್ಯ ಬರೆಯಲು ಸ್ವಾಭಿಮಾನದ ಮುನ್ನುಡಿ ಇಟ್ಟಿತು. ಅತ್ತಾಗ, ನಕ್ಕಾಗ ಮೌನವಾಗೇ ಹುರುದುಂಬಿಸಿ, ಸ್ಪಂದಿಸಿದ ಆ ತಿಳಿಮುಗಿಲ ಬಣ್ಣ, ಇಂದು......
ಒಡಲಾಳದ ಕತ್ತಲಲ್ಲಿ ಹೂತು ಹೋಗುತ್ತಿದೆ! ಬದುಕ ಗೂಡಿಗೆ ಕೈ ಹಿಡಿದು ಕರೆತರಲು ಅಣಿಯಾದ ಮನಸ್ಸಿಗೆ ರಾಹುಕಾಲ ಬಂದೆರಗಿದೆ.
ಇಂಥಹ ತರಹೇವಾರಿ ಹುಚ್ಚು (ಭರವಸೆಯ) ಕಲ್ಪನೆಗಳು ಬದುಕಿನ ಗಾಲಿಗಳನ್ನು ಎಳೆಯುತ್ತವೆ. ಎದುರಾಗೋ ಆಕಸ್ಮಿಕಗಳಿಗೆ ಮೌನವಾಗಿ ಸ್ಪಂದಿಸುತ್ತ ಗುರಿಯಿಲ್ಲದ ಕಡೆ ಪಯಣಿಸುತ್ತವೆ. ಬಟ್ಟಬಯಲಲ್ಲಿ ಏಕಾಂಗಿ ನಡೆ..... ನಟ್ಟ ನಡುರಾತ್ರಿಯಲಿ ಭೀಭತ್ಸ ನೋಟ.... ಧೋ ಎಂದು ಸುರಿವ ಸಲಿಲದಲಿ ಜ್ವಾಲಾಮುಖಿ ಸ್ಪೋಟ.... ಭಾರದ ಹೆಜ್ಜೆಯಿಡುತ, ದಿಕ್ಕು ದೆಸೆಯಿಲ್ಲದೆ ಅಲೆವಾಗ ಕೆನ್ನೆಯನು ತೋಯಿಸುವ ಆ ಕಣ್ಣೀರ ಹನಿಗಳು, ಆ ಬಯಲಲ್ಲಿ... ನಡುರಾತ್ರಿಯಲಿ... ಸಲಿಲದಲಿ ಯಾರಿಗೂ ತೋರದು. ಮೂಕ ಮನಸಿನ ಭಾವನೆಗಳನ್ನು ಅಲ್ಲೆ ಮಡುಗಟ್ಟಿಸಿ ಏಕಾಂಗಿಯ ಹೆಜ್ಜೆಯಿಡುವಾಗ, ನೋವಿನ ಕತ್ತಲೆ ಆವರಿಸಿ ಬಿಡುತ್ತವೆ. ಪ್ರಕ್ಷುಬ್ಧಗೊಂಡ ಮನದ ಕೊಳದಲ್ಲಿ ಜಲಧಾರೆಯ ಭೋರ್ಗರೆವ ನರ್ತನ ಪ್ರಾರಂಭವಾಗುತ್ತವೆ. ಸಂದರ್ಭದಲ್ಲೆಲ್ಲ ನಿಂತಲ್ಲೆ, ಕೂತಲ್ಲೆ ಈ ಭೂಮಿ ನನ್ನ ಹಾಗೆ ನುಂಗಬಾರದಾ? ಎಂದು ಪ್ರಾರ್ಥಿಸುತ್ತೇನೆ . ಈ ನಿಶ್ಯಬ್ದದ ವೇದನೆ ಆ ಭಗವಂತನಿಗೆಲ್ಲಿ ಕೇಳಿಸಿತು...?
ಭಾವ ಶರಧಿಯಲ್ಲಿ ಎದ್ದ ಅಲೆಗಳು, ಮುಸ್ಸಂಜೆಯ ಅಸ್ತಕ್ಕೆ ಭೋರ್ಗಯುತ್ತವೆ. ಭರವಸೆಯ ಮುಂಜಾನೆಗೆ ಕಾದು ಕುಳಿತು, ಕಾಗುಣಿತದ ಕೂಡು-ಕಳೆಯುವಿಕೆಯ ಲೆಕ್ಕಾಚಾರದಲ್ಲಿ ಮುಳುಗುತ್ತವೆ. ಉದಯದ ಬೆಳಕು ಹರಿಯುತ್ತಿದ್ದಂತೆ ಮತ್ತೆ ಕನಸುಗಳು ಗರಿಬಿಚ್ಚಿ, ಹುಚ್ಚೆದ್ದು ಕುಣಿಯುತ್ತವೆ. ಕನಸು ನನಸಾಗಿಸೋ ಛಲ, ಆದರೆ, ಸ್ವಾಭಿಮಾನದ ಗೋಡೆ... ಧಿಕ್ಕರಿಸುವ ಛಾಟಿ ಏಟು... ಹೆಪ್ಪುಗಟ್ಟಿದ ದುಗುಡ... ಇವೆಲ್ಲ ತೊಡರಾಗುತ್ತಿವೆ!
ಇವುಗಳ ನಡುವೆಯೇ ಕತ್ತಲಾವರಿಸಿದ ಮನದ ಕೋಣೆಯಲಿ ಮೊಂಬೆಳಕಿನ ಬತ್ತಿ ಹಚ್ಚಲೇ ಬೇಕು. ಕರಕಲಾಗಿ ಬಿದ್ದ ಎಷ್ಟೋ ಕನಸುಗಳು ಜೀವಂತಿಕೆ ಪಡೆಯಬೇಕು. ಅದಕ್ಕೆ ಆ ನನ್ನ ಒಲವಿನ ಬಣ್ಣ ಹೃದಯ ಸೇರಲೇ ಬೇಕು............

ಭಾನುವಾರ, ಏಪ್ರಿಲ್ 28, 2013


ಹೀಗೊಂದು ಮುನ್ನುಡಿ

ಗೀಚಿದ ಭಾವನೆ.....

ನಿದ್ದೆಯನ್ನು ಹಾಯಾಗಿಸುವ ಕನಸುಗಳಿಗೂ... ನಿದ್ದೆಯನ್ನು ಒದ್ದೋಡಿಸುವ ಕನಸುಗಳಿಗೂ.... ವ್ಯತ್ಯಾಸ ಬಹಳ. ತಾಯ ಗರ್ಭದಲ್ಲಿ ಮುದ್ದೆಯಾಗಿ ಮಲಗಿದಾಗ ಕಂಡ ಕನಸುಗಳ್ಯಾವುದು ನೆನಪೇ ಇಲ್ಲ. ಒಡಲಿಂದ ಒಡಮೂಡಿ ಮಡಿಲಲ್ಲಿ ಬೆಚ್ಚನೆ ಮಲಗಿ ಉಚ್ಚೆ ಹೊಯ್ದು ರಚ್ಚೆ ಹಿಡಿಯುವ ವಯಸ್ಸಲ್ಲಿ ಕಾಣುತ್ತಿದ್ದದ್ದು ಬಹುಶಃ ಹಾಲು ಕುಡಿಯುವ ಕನಸ್ಸೊಂದೇ! ಹಾಲುಗಲ್ಲದ ಕಂದಮ್ಮಗಳು ನಿದ್ದೆಯಲ್ಲಿ ಬಾಯಿ ಅಲುಗಾಡಿಸುವುದು ಕಂಡಾಗ ಹಾಗೆಯೇ ಅನಿಸುತ್ತದೆ. ಎಷ್ಟು ಸತ್ಯವೋ ನಾನರಿಯೇ...? ಪಿಟಿಪಿಟಿ ಹೆಜ್ಜೆಗಳನ್ನು ಇಡುತ್ತ, ಅನ್ಯಗ್ರಹದ ಭಾಷೆಗಳನ್ನು ಮಾತನಾಡುತ್ತ, ನಲಿಯುವ ವಯಸ್ಸಲ್ಲಿ ಕಂಡಿದ್ದು ತಿಂಡಿ-ಉಂಡಿ-ಚೆಂಡು ಅಷ್ಟೇ ಅನಿಸುತ್ತದೆ.
ಆ ಕುತೂಹಲದ ಕಣ್ಣುಗಳಿಗೆ ಕೌಮುದಿಯಲ್ಲಿ ತೇಲಾಡುವ ಚಂದ್ರನೇ ಎಲ್ಲ. ಬೆಳೆಯುತ್ತ ಬೆಳೆಯುತ್ತ ನಿದ್ದೆಗೆಡೆಸುವ ಕನಸುಗಳು ಅಂಟುತ್ತ ಹೋದವು. ಕಾಲ ಗರ್ಭದಲ್ಲಿ ಕೊರಗಿ ಕೊರಗಿ ಕರಗಿದ ಕನಸುಗಳೆಷ್ಟೋ...? ಕಾಪಿಟ್ಟ ಕನಸುಗಳ ಜೊತೆ ಕೂಡುತ್ತ ಇಮ್ಮಡಿಯಾಗುತ್ತ ಬೆಳೆಯುತ್ತಿರುವ ನನ್ನ ಕನಸುಗಳು, ಮನಸ್ಸೆಂಬ ಕೋಣೆಯಲ್ಲಿ ತುಂಬಿಟ್ಟಿರುವ ಬಣ್ಣದ ರಾಶಿಯೋ....? ವಿಧವಿಧದ ಪುಷ್ಪಗಳ ಪಲ್ಲಕ್ಕಿಯ ಮೇಲೆ ತೂಗುವ ಚಿತ್ತಾರದ ಚುಕ್ಕಿಗಳೋ...?
`ಸಾಕಿಷ್ಟು ಕನಸುಗಳು' ಎಂದು ಕದ ಮುಚ್ಚೋಣ ಎಂದರೆ, ಧುತ್ತೆಂದು ಎದುರಾಗಿ, ಮುಚ್ಚಲಾಗದೆ ಮತ್ತೆ ಕದ ತೆರೆದು ಬಿಡುತ್ತೇನೆ. ಬಂದಷ್ಟು ಬರಲಿ, ತೊರೆಯಾಗಿ ಹರಿದರೂ ಚಿಂತೆಯಿಲ್ಲವೆಂದು. ತುಂಬಿ ತುಳುಕುತ್ತಿದೆಯೆಂದು ಗೋಡೆಯನ್ನು ಕೆಡವಿ ಬಿಡಲೂ ಆಗದು... ಯಾಕೆಂದರೆ, ನನ್ನೆದೆ ಬಟಾಬಯಲಲ್ಲ. ಆದರೆ, ಸೋತು ಸುಣ್ಣವಾದ ಕನಸುಗಳು ಸಹ ಕರಕಲಾದರೂ ಇದೆ ಕೋಣೆಯಲ್ಲಿ ಬಿದ್ದಿವೆ....!
ಏನೇ ಇರಲಿ, ನಿದ್ದೆಗೆಡೆಸುವ, ತಿದ್ದಿ ತೀಡುವ, ಮುದ್ದುಗರೆಯುವ, ಮನಸ್ಸು ಮುದ್ದೆಮಾಡುವ, ನಗಿಸುವ, ಕಣ್ಣರೆಪ್ಪೆ ತೋಯಿಸುವ ನನ್ನ ಕನಸುಗಳು ಕರೆಯದೇ ಬರುತ್ತವೆ...... ಸ್ವಾಗತಿಸುತ್ತ ನಾನೇ......