ಹೀಗೊಂದು ಮುನ್ನುಡಿ
ಗೀಚಿದ ಭಾವನೆ.....
ನಿದ್ದೆಯನ್ನು ಹಾಯಾಗಿಸುವ ಕನಸುಗಳಿಗೂ... ನಿದ್ದೆಯನ್ನು ಒದ್ದೋಡಿಸುವ ಕನಸುಗಳಿಗೂ.... ವ್ಯತ್ಯಾಸ ಬಹಳ. ತಾಯ ಗರ್ಭದಲ್ಲಿ ಮುದ್ದೆಯಾಗಿ ಮಲಗಿದಾಗ ಕಂಡ ಕನಸುಗಳ್ಯಾವುದು ನೆನಪೇ ಇಲ್ಲ. ಒಡಲಿಂದ ಒಡಮೂಡಿ ಮಡಿಲಲ್ಲಿ ಬೆಚ್ಚನೆ ಮಲಗಿ ಉಚ್ಚೆ ಹೊಯ್ದು ರಚ್ಚೆ ಹಿಡಿಯುವ ವಯಸ್ಸಲ್ಲಿ ಕಾಣುತ್ತಿದ್ದದ್ದು ಬಹುಶಃ ಹಾಲು ಕುಡಿಯುವ ಕನಸ್ಸೊಂದೇ! ಹಾಲುಗಲ್ಲದ ಕಂದಮ್ಮಗಳು ನಿದ್ದೆಯಲ್ಲಿ ಬಾಯಿ ಅಲುಗಾಡಿಸುವುದು ಕಂಡಾಗ ಹಾಗೆಯೇ ಅನಿಸುತ್ತದೆ. ಎಷ್ಟು ಸತ್ಯವೋ ನಾನರಿಯೇ...? ಪಿಟಿಪಿಟಿ ಹೆಜ್ಜೆಗಳನ್ನು ಇಡುತ್ತ, ಅನ್ಯಗ್ರಹದ ಭಾಷೆಗಳನ್ನು ಮಾತನಾಡುತ್ತ, ನಲಿಯುವ ವಯಸ್ಸಲ್ಲಿ ಕಂಡಿದ್ದು ತಿಂಡಿ-ಉಂಡಿ-ಚೆಂಡು ಅಷ್ಟೇ ಅನಿಸುತ್ತದೆ.ಆ ಕುತೂಹಲದ ಕಣ್ಣುಗಳಿಗೆ ಕೌಮುದಿಯಲ್ಲಿ ತೇಲಾಡುವ ಚಂದ್ರನೇ ಎಲ್ಲ. ಬೆಳೆಯುತ್ತ ಬೆಳೆಯುತ್ತ ನಿದ್ದೆಗೆಡೆಸುವ ಕನಸುಗಳು ಅಂಟುತ್ತ ಹೋದವು. ಕಾಲ ಗರ್ಭದಲ್ಲಿ ಕೊರಗಿ ಕೊರಗಿ ಕರಗಿದ ಕನಸುಗಳೆಷ್ಟೋ...? ಕಾಪಿಟ್ಟ ಕನಸುಗಳ ಜೊತೆ ಕೂಡುತ್ತ ಇಮ್ಮಡಿಯಾಗುತ್ತ ಬೆಳೆಯುತ್ತಿರುವ ನನ್ನ ಕನಸುಗಳು, ಮನಸ್ಸೆಂಬ ಕೋಣೆಯಲ್ಲಿ ತುಂಬಿಟ್ಟಿರುವ ಬಣ್ಣದ ರಾಶಿಯೋ....? ವಿಧವಿಧದ ಪುಷ್ಪಗಳ ಪಲ್ಲಕ್ಕಿಯ ಮೇಲೆ ತೂಗುವ ಚಿತ್ತಾರದ ಚುಕ್ಕಿಗಳೋ...?
`ಸಾಕಿಷ್ಟು ಕನಸುಗಳು' ಎಂದು ಕದ ಮುಚ್ಚೋಣ ಎಂದರೆ, ಧುತ್ತೆಂದು ಎದುರಾಗಿ, ಮುಚ್ಚಲಾಗದೆ ಮತ್ತೆ ಕದ ತೆರೆದು ಬಿಡುತ್ತೇನೆ. ಬಂದಷ್ಟು ಬರಲಿ, ತೊರೆಯಾಗಿ ಹರಿದರೂ ಚಿಂತೆಯಿಲ್ಲವೆಂದು. ತುಂಬಿ ತುಳುಕುತ್ತಿದೆಯೆಂದು ಗೋಡೆಯನ್ನು ಕೆಡವಿ ಬಿಡಲೂ ಆಗದು... ಯಾಕೆಂದರೆ, ನನ್ನೆದೆ ಬಟಾಬಯಲಲ್ಲ. ಆದರೆ, ಸೋತು ಸುಣ್ಣವಾದ ಕನಸುಗಳು ಸಹ ಕರಕಲಾದರೂ ಇದೆ ಕೋಣೆಯಲ್ಲಿ ಬಿದ್ದಿವೆ....!
ಏನೇ ಇರಲಿ, ನಿದ್ದೆಗೆಡೆಸುವ, ತಿದ್ದಿ ತೀಡುವ, ಮುದ್ದುಗರೆಯುವ, ಮನಸ್ಸು ಮುದ್ದೆಮಾಡುವ, ನಗಿಸುವ, ಕಣ್ಣರೆಪ್ಪೆ ತೋಯಿಸುವ ನನ್ನ ಕನಸುಗಳು ಕರೆಯದೇ ಬರುತ್ತವೆ...... ಸ್ವಾಗತಿಸುತ್ತ ನಾನೇ......
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ