ಗುರುವಾರ, ಆಗಸ್ಟ್ 1, 2013


ಮುಂಗಾರಿನ ಅಭಿಷೇಕಕೆ...

`ಮಲೆನಾಡಿನ ಮಳೆಯ ವೈಭವವನ್ನು ಕಣ್ತುಂಬಿಸಿಕೊಳ್ಳುವ ಅವಕಾಶ ಈ ಬಾರಿ ಇಲ್ಲವೇನೋ' ಎಂದುಕೊಂಡಿದ್ದೆ. ಆದರೆ `ದಿಢೀರ್ ಎಂದು ಬದಲಾದ ಕಾರ್ಯ' ಆ ಸಂತೋಷವನ್ನು ಅನುಭವಿಸುವ ಜೀವನೋತ್ಸಾಹಕ್ಕೆ ಎಡೆಮಾಡಿಕೊಟ್ಟಿತು. ಹಾಗೆ, ಪ್ರೀತಿಸಿದವಳ ಜೊತೆ ಪ್ರಥಮ ಮಲೆನಾಡ ಪಯಣಕ್ಕೆ ಇದು ಮುನ್ನುಡಿಯನ್ನು ಸಹ ಬರೆದಿತ್ತು. ಒಟ್ಟೊಟ್ಟೆಗೆ ಎರಡೆರಡು ಸಂತೋಷವನ್ನು ಆಸ್ವಾದಿಸುವ ಭಾಗ್ಯ ನನಗೊದಗಿ ಬಂದಿತ್ತು ಎನ್ನಬಹುದೇನೋ....
ಬಯಲು ಸೀಮೆಯ ಹೆಬ್ಬಾಗಿಲಾದ ಹುಬ್ಬಳ್ಳಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಜಿಟಿಜಿಟಿ ಮಳೆ ನಿರಂತರವಾಗಿ ಒಂದೇ ಸಮನೆ ಸುರಿಯುತ್ತಿತ್ತು. ನಗರದಲ್ಲಿ ಇತ್ತೀಚೆಗೆ ಕೈಗೊಂಡ ಒಳಚರಂಡಿ ಕಾಮಗಾರಿಯಿಂದಾಗಿ ರಸ್ತೆ, ಹಾದಿ, ಬೀದಿಗಳೆಲ್ಲ ಹೊಲಸೆದ್ದು ಹೋಗಿದ್ದವು. ಪ್ರತಿನಿತ್ಯ ಅವುಗಳ ಮೇಲೆಯೇ ಓಡಾಡಿ ಓಡಾಡಿ ಮನಸ್ಸೆಲ್ಲ ಅವುಗಳ ಹಾಗೆಯೇ ರಾಡಿಯಾದಂತೆ ಭಾಸವಾಗುತ್ತಿತ್ತು. ಅವುಗಳಿಂದ ಮಲಿನವಾದ ಮನಸ್ಸನ್ನು ಮಲೆನಾಡ ಮಳೆಯಲ್ಲಿ ಶುಚಿಗೊಳಿಸಿಕೊಳ್ಳುವ ಸುವರ್ಣಾವಕಾಶ ಬಂದೊದಗಿ ಬಂದದ್ದಕ್ಕೆ ಹುಚ್ಚೆದ್ದು ಕುಣಿದು ಬಿಟ್ಟೆ...!
****************************************
ಊರಿಗೆ ಹೋಗದೆ ಒಂದೆರಡು ತಿಂಗಳಾಗಿತ್ತು. ಅದರಲ್ಲೂ ಈ ಮುಂಗಾರು ಮಳೆಯನ್ನು ಒಂದು ವರ್ಷವೂ ಕೂಡಾ ನಾ ತಪ್ಪಿಸಿಕೊಂಡಿರಲಿಲ್ಲ. ಆದರೆ ಕೆಲಸದ ಒತ್ತಡದಿಂದಾಗಿ ಈ ವರ್ಷ ಅದನ್ನು ತಪ್ಪಿಸಿಕೊಂಡೆನಲ್ಲ ಎಂದು ನೊಂದುಕೊಳ್ಳುತ್ತಿದ್ದೆ. ಆದರೆ, ಅನಿರೀಕ್ಷಿತವಾಗಿ ಎದುರಾದ ಸಂದರ್ಭವೊಂದು ನನ್ನನ್ನು ಊರಿಗೆ ಕರೆದುಕೊಂಡು ಹೋಗಿಲ್ಲವಾದರೂ, ಮಲೆನಾಡ ಮಳೆಯಲ್ಲಿ ಕುಣಿದು ಕುಪ್ಪಳಿಸುವಂತೆ ಮಾಡಿತು.
ಹೇಗಪ್ಪಾ ಅಂತೀರಾ..........?
ಅಂದು ಯಾಕೋ ಏನೋ ಹಾಸಿಗೆಯಿಂದ ಎದ್ದೇಳಲು ಮನಸ್ಸೆ ಬರ್ತಾ ಇರ್ಲಿಲ್ಲ. ಆಗಲೇ ಗಂಟೆ 9ರ ಸನೀಹಕ್ಕೆ ಬಂದಿತ್ತು. 11ಕ್ಕೆ ಪೂರ್ವ ನಿಯೋಜಿತವಾಗಿ ಕಾರ್ಯಕ್ರಮವೊಂದಕ್ಕೆ ಹಾಜರಾಗಬೇಕಿದ್ದ ನಾನು ಲಘುಬಗೆಯಲ್ಲಿ ಎದ್ದು, ರೂಮ್ಲಿದ್ದ ಕೆಲವಷ್ಟು ತಿಂಡಿ-ತಿನಿಸುಗಳನ್ನು ತಿಂದು ತಯಾರಾಗುತ್ತಿದ್ದೆ. ಆಗಲೇ ನನ್ನ ಮೊಬೈಲ್ `ಕರೆದರೂ ಕೇಳದೆ....' ಎಂದು ಹಾಡಲು ಸುರುವಿಟ್ಟುಕೊಂಡಿತು. `ಮೊದಲೇ ಸಮಯವಿಲ್ಲ. ಅದರಲ್ಲಿ ಈ ಕರೆ ಬೇರೆ' ಎಂದು ಗೊಣಗುತ್ತಲೇ ಮೊಬೈಲ್ ನೋಡಿದೆ. ಅದು ನಾ ಪ್ರೀತಿಸಿದ ಹುಡುಗಿಯ ಕರೆಯಾಗಿತ್ತು. ಆಮೇಲೆ ನಾನೇ ಕರೆ ಮಾಡಿ ಮಾತಾಡೋಣ ಎಂದು, ಆ ಕರೆಯನ್ನು ರಿಸೀವ್ ಮಾಡದೆ ಹಾಗೆ ಬಿಟ್ಟೆ. ಒಂದೆರಡು ನಿಮಿಷ ಪುನಃ ಕರೆ ಮಾಡಿದಳು. ಆಗಲೂ ಸುಮ್ಮನೇ ಇದ್ದೆ. ಮತ್ತೆ ಮಾಡಿದಳು..... ಯಾಕಪ್ಪ ಇವಳು ಒಂದೇ ಸಮನೆ ಹೀಗೆ ತೊಂದರೆ ಕೊಡುತ್ತಿದ್ದಾಳೆ ಎಂದು ಕರೆಯನ್ನು ರಿಸೀವ್ ಮಾಡಿದೆ.
`ಅಲ್ಲಾ, ಎಷ್ಟಂತ ನಿನಗೆ ಕಾಲ್ ಮಾಡ್ಬೇಕು. ನಾನ್ ಕಾಲ್ ಮಾಡಿದ್ರೂ ನಿನಗೆ ರಿಸೀವ್ ಮಾಡುವಷ್ಟು ಟೈಮ್ ಇಲ್ವಾ? ಇದ್ಕೇನಾ ನನ್ನ ಪ್ರೀತಿಸಿದ್ದು?' ಎಂದು ನಾನ್ ಸ್ಟಾಪ್ ಆಗಿ ಏನೇನೋ ಹೇಳಿದಳು. `ಸಾರಿ ಕಣೆ.... ಏನಾಯ್ತು ಹೇಳು ಪಾಪು...' ಎಂದೆ.
`ನಾಳೆ ನಾವಿಬ್ರು ನಮ್ಮ ಊರಿಗೆ ಹೋಗ್ತಾ ಇದ್ದೀವಿ. ನನ್ನ ಸ್ನೇಹಿತರೊಬ್ಬರನ್ನು ಮನೆಗೆ ಕರ್ಕೊಂಡು ಬರ್ತೀನಿ ಎಂದು ಹೇಳಿದ್ದೇನೆ. ಅದ್ಕೆ ನಾಳೆ ಮಧ್ಯಾಹ್ನ 4ಕ್ಕೆ ಬಸ್ ನಿಲ್ದಾಣದಲ್ಲಿ ಇರ್ತೀಯಾ ಅಷ್ಟೆ' ಎಂದು, ನನಗೆ ಮಾತನಾಡಲು ಅವಕಾಶ ಕೊಡದೆ ಕಾಲ್ ಕಟ್ ಮಾಡಿದಳು.
ಅನಿರೀಕ್ಷಿತವಾಗಿ ಒದಗಿ ಬಂದ ಅವಕಾಶ ಹಾಳು ಮಾಡಿಕೊಳ್ಳುವ ಮನಸ್ಸಿರಲಿಲ್ಲ. ಆದರೆ ಮೂರು ದಿನ ರಜೆ ಹಾಕಬೇಕು. ಏನು ಮಾಡುವುದೆಂದು ಯೋಚಿಸುತ್ತಲೇ, ಲಗು ಬಗೆಯಲ್ಲಿ ತಯಾರಾಗಿ ನಿಯೋಜಿತ ಕರ್ತವ್ಯಕ್ಕೆ ಹಾಜಾರಾದೆ.
ಅಂತೂ ಇಂತೂ ಎಂದು ಹರಸಾಹಸ ಪಟ್ಟು ನಾಲ್ಕು ದಿನ ರಜೆ ಪಡೆದೆ. ಅವಳ ಕೋರಿಕೆಯಂತೆ, ಅವಳು ಹೇಳಿದ ಸಮಯಕ್ಕಿಂತ ಅರ್ಧಗಂಟೆ ಮುಂಚಿತವಾಗಿಯೇ ಬಸ್ ನಿಲ್ದಾಣದಲ್ಲಿ ನಾನು ಅವಳಿಗಾಗಿ ಕಾಯುತ್ತಿದ್ದೆ. ಮಳೆಯಂತೂ ಧೋ ಧೋ ಎಂದು ಸುರಿಯುತ್ತಿತ್ತು. ಆ ಮಳೆಯಲ್ಲಿಯೇ ದೂರದಿಂದ ನನ್ನನ್ನು ಗಮನಿಸಿದ ಅವಳು, ನಸುನಕ್ಕಳು. ಬಿಂಕದಿಂದ ಹೆಜ್ಜೆ ಹಾಕುತ್ತ ಹತ್ತಿರ ಬಂದು `ಪ್ರೀತಿಸೋ ಹುಡುಗ ಅಂದ್ರೆ ಹೀಗಿರಬೇಕು' ಎಂದು ಗಲ್ಲ ಹಿಡಿದು, `ನಮ್ಮೂರ ಕಡೆ ಹೋಗೋ ಬಸ್ ಬಂದಿಲ್ವಾ' ಎಂದು ಕೇಳಿದಳು.
ಐದತ್ತು ನಿಮಿಷದಲ್ಲಿ ಮಲೆನಾಡ ಕಡೆ ಪಯಣಿಸೂ ಬಸ್ ಬಂದು ನಿಂತಿತು. ಮಧ್ಯದಲ್ಲಿ ಆಸನದಲ್ಲಿ ಹೋಗಿ ಆಸೀನರಾದೇವು. ಬಸ್ಸ ಹೊರಡಲು ಇನ್ನೂ ಹದಿನೈದು ನಿಮಿಷವಿತ್ತು. ಆಗಲೇ ಶುರುವಿಟ್ಟುಕೊಂಡೆ ಅವಳ ತಲೆ ತಿನ್ನಲು.....
`ನಾನು ಯಾಕಾಗಿ ನಿಮ್ಮ ಮನೆಗೆ ಬರಬೇಕು? ಅಲ್ಲಿಯ ವಾತಾವರಣ ಹೇಗಿದೆ? ಗುಡ್ಡ ಬೆಟ್ಟಗಳಿವೆಯಾ? ಎಷ್ಟು ಗಂಟೆ ಪಯಣದ ಹಾದಿ? ಕತ್ತಲಾದರೆ ಏನು ಮಾಡುವುದು? ಹಸಿವೆಯಾದರೆ ತಿನ್ನಲು ಏನಾದರೂ ತಂದಿದ್ದೇಯಾ?' ಹೀಗೆ ಅವಳ ಮಾತಿನ ಶೈಲಿಯಲ್ಲಿಯೇ ನಾನು ಕೂಡಾ ಮಾತನಾಡತೊಡಗಿದೆ. ಅವಳ ತಲೆ ಕೆಟ್ಟು ಹೋಗಿತ್ತು. ಉಕ್ಕಿ ಬರುವ ಕೋಪವನ್ನೆಲ್ಲ ಬಿಗಿ ಹಿಡಿದು ಹಲ್ಲನ್ನು ಕಟಕಟನೇ ಕಡಿಯ ಹತ್ತಿದಳು. ನಾನು ನನ್ನ ಪಾಡಿಗೆ ಮಾತನಾಡುತ್ತಲೇ ಇದ್ದೆ. `ಅಯ್ಯೋ ಭಗವಂತ, ದಯವಿಟ್ಟು ಇಲ್ಲೆ ಇಳಿದು ಬಿಡು. ನೀನು ನಮ್ಮ ಮನೆಗೆ ಬರುವುದು ಬೇಡ. ಅಲ್ಲಿಯೂ ಕೂಡಾ ಹೀಗೆ ಮಾತನಾಡಿದರೆ ನನ್ನ ಮರ್ಯಾದೆ ಹೋದ ಹಾಗೆ' ಎಂದು ಬಯ್ಯತೊಡಗಿದಳು. ಪೆಚ್ಚು ಮೋರೆ ಹಾಕಿ ಸುಮ್ಮನೆ ಕುಳಿತುಕೊಂಡೆ.
*********************************************
ಒಮ್ಮೆಲೆ ಎಚ್ಚರಾಯಿತು. ಅವಳು ನಿದ್ರೆಯಲ್ಲಿದ್ದಳು. ಕಿಟಕಿಯಾಚೆ ಕಣ್ಣಾಡಿಸಿದೆ. ಅಬ್ಬಾ!! ಹಸಿರು ಕಾನನಗಳ ನಡುವೆ ಭೋರ್ಗರೆವ ವರ್ಷಧಾರೆಯ ಅಬ್ಬರ ಮನಸ್ಸನ್ನು ಹುಚ್ಚು ಹಿಡಿಸಿದವು. ಬಸ್ನ್ನು ಒಮ್ಮೆ ನಿಲ್ಲಿಸಿದರೆ ಕೆಳಗಿಳಿದು ಮಳೆಯಲ್ಲಿ ತೋಯ್ದು ಬರಬೇಕು ಎಂದೆನಿಸಿತ್ತು. ಬೆಟ್ಟಗಳ ಸಾಲುಗಳ ನಡುವೆ ಹೆಬ್ಬಾವಿನಂತ ರಸ್ತೆಯಲ್ಲಿ ಮಳೆಗಾಲದ ಪಯಣ ನಿಜಕ್ಕೂ ವರ್ಣನಾತೀತ. ವರ್ಣಿಸಲಸದಳ. ನಿಜವಾದ ಪ್ರಕೃತಿಯ ಸೌಂದರ್ಯ ಅನುಭವಿಸಬೇಕೆಂದರೆ ಇಂತಹ ಪಯಣ ಮಾಡಲೇ ಬೇಕು. ಆಗೊಮ್ಮೆ ಈಗೊಮ್ಮೆ ಧುತ್ತೆಂದು ಎದುರಾಗುವ ಘಟ್ಟಗಳು .... ಬಿದ್ದೆ ಬಿಟ್ಟೆವು ಎಂದು ಭಾಸವಾಗುವ ಇಳಿಜಾರುಗಳು.... ದೂರದಲ್ಲೆಲ್ಲೋ ಕಾಣುವ ಚಿಕ್ಕ ಪುಟ್ಟ ಝರಿಗಳು.... ಗಾಳಿಯ ರಭಸಕ್ಕೆ ತಡವರಿಸುತ್ತ ಓಲಾಡುತ್ತಿರುವ ಮರಗಿಡಗಳು.... ಹೃದಯ ಬಡಿತ ಹೆಚ್ಚಿಸುವ ರಸ್ತೆ ಪಕ್ಕದ ಕಂದಕಗಳು.....ಅಬ್ಬಾ!! ಒಂದೇ ಎರಡೇ..... ಹೀಗೆ ಹಲವು ವೈವಿದ್ಯಮ ಪ್ರಾಕೃತಿಕ ಸೌಂದರ್ಯಗಳು  ಕಣ್ಣಿಗೆ ಎದುರಾಗುತ್ತ ಹೋದವು.
ನಾನು ಸಂಪೂರ್ಣ ಪ್ರಕೃತಿ ಮಡಿಲಲ್ಲಿಯೇ ಲೀನವಾಗಿದ್ದೆ. `ನನ್ನವಳು ಕೂಡಾ ಒಂದರ್ಥದಲ್ಲಿ ಪ್ರಕೃತಿಯೇ ಅಲ್ವಾ? ಅವಳ ಮನಸ್ಸು, ನೋಟ, ಮಾತು, ವರ್ತನೆ ಹೀಗೆ ಯಾವೊಂದರಲ್ಲಿಯೂ ಕಲ್ಮಶಗಳಿಲ್ಲ. ಪ್ರಕೃತಿಯಷ್ಟೇ ಪರಿಶುದ್ದವಾದ ಅವಳ ಪ್ರೀತಿಯನ್ನು ಪಡೆದ ನಾನು ನಿಜಕ್ಕೂ ಅದೃಷ್ಟವಂತ ಎಂದು ಮನಸ್ಸಲ್ಲೆ ಅವಳನ್ನು ಪ್ರಕೃತಿಗೆ ಹೋಲಿಕೆ ಮಾಡಿಕೊಳ್ಳುತ್ತ, ಅವಳ ಕೈಯನ್ನು ಹಿಡಿದುಕೊಂಡಿದ್ದೆ.
ಭಾವೋನ್ಮಾದ ಎಲ್ಲೇ ಮೀರಿ ಅರಿವಿಲ್ಲದೆ ಅವಳ ಕೈಯನ್ನು ಗಟ್ಟಿಯಾಗಿ ಹಿಚುಕಿಬಿಟ್ಟೆ..!! ನಿದ್ರೆಯಲ್ಲಿದ್ದ ಅವಳು, ದುರುಗುಟ್ಟಿ ನನ್ನನ್ನು ನೋಡಿದಳು. ಅಮ್ಮನ ಎದುರು ಮಗು ತಪ್ಪು ಮಾಡಿದಾಗ ಕೆಳ ಮುಖ ಹಾಕಿ ನಿಲ್ಲುವಂತೆ, ನಾನು ಕೂಡಾ ಮುಖವನ್ನು ಕೆಳಗಡೆ ಹಾಕಿ `ಯಾಕೆ ಹಾಗೆ ನೋಡ್ತಾ ಇದ್ದೀಯಾ? ಕಣ್ಣನ್ನು ಚಿಕ್ಕದಾಗಿ ಮಾಡು' ಎಂದೆ.

.............................................ಮುಂದುವರಿದು....? ಭಾಗ ಎರಡರಲ್ಲಿ.......

1 ಕಾಮೆಂಟ್‌:

SHAKUNI ಹೇಳಿದರು...

`ನಾಳೆ ನಾವಿಬ್ರು ನಮ್ಮ ಊರಿಗೆ ಹೋಗ್ತಾ ಇದ್ದೀವಿ. ನನ್ನ ಸ್ನೇಹಿತರೊಬ್ಬರನ್ನು ಮನೆಗೆ ಕರ್ಕೊಂಡು ಬರ್ತೀನಿ ಎಂದು ಹೇಳಿದ್ದೇನೆ.

endu baredididaraa. andare idar artha avalu yaro bere snehitarannu karakonud hoguvavaliddalu, avaru kai kottiddake nimge gal haakidalaa vichar maadi.
andu nanu kandante nimginta avale alwa jasti matadodu....
ha ha ha..
shakuni.....