ಮಂಗಳವಾರ, ಡಿಸೆಂಬರ್ 8, 2015

'ಅನಾರ್ಕಲಿ' ಬಟ್ಟೆಯಲ್ಲಿ ನೀ ಅಂದು ಕಂಡಾಗ!
ನನ್ನೊಲವಿನ ಪುಟ್ಟ ಪಾರಿಜಾತವೇ,
ನೀ ಒಂದು ಮುಗಿಯದ ಕವನ ಎಂದು ಭಾವಿಸಿದ್ದೆ ಗೆಳತಿ. ನಿನ್ನ ಬಗ್ಗೆ ಎಷ್ಟು ಬರೆದರೂ ಸಾಲದು ಎನ್ನುವಂತಿತ್ತು ನನ್ನ ಭಾವ. ಆದರೆ, ನಿನ್ನೀ ದೀರ್ಘ ಮೌನ, ಸರಾಗವಾಗಿ ಹರಿಯುತ್ತಿದ್ದ ಕವನಕ್ಕೆ ತಡೆಯೊಡ್ಡುತ್ತಿದೆ. ನೀ ನನಗೆ ಪರಿಚಯವಾಗಿದ್ದ ಘಳಿಗೆ ಬಹುಶಃ ಯಮಗಂಡ ಕಾಲವಿತ್ತೇನೋ ಎಂದೆನಿಸುತ್ತಿದೆ....!
'ಯಾರೋ ಯಾರೋ ಗೀಚಿ ಹೋದ
ಹಾಳು ಹಣೆಯ ಬರಹ...
ದಿಕ್ಕು ದಾರಿ ತೋಚದೇನೆ
ಕಾಲ ಕಳೆಯೋ ವಿರಹ...' ಎನ್ನುವ ಸಿನೇಮಾದ ಪ್ಯಾಥೋ ಸಾಂಗಿನಂತೆ, ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಬ್ರಹ್ಮ ನನ್ನ ಹಣೆ ಬರಹ ಬರೆದಿರಬೇಕು. ಪ್ರೀತಿ-ಪ್ರೇಮದ ಜಂಜಾಟವೇ ಬೇಡ ಎಂದು ಸುಮ್ಮನಿದ್ದ ನಾ, ಅರಿವಿಲ್ಲದೆ ನಿನ್ನ ಪ್ರೀತಿಸಿ ವಿಲವಿಲನೇ ಒದ್ದಾಡುತ್ತಿದ್ದೇನೆ. ಏನು ಮಾಡಬೇಕೆಂದು ತೋಚದೆ `ಮುಂಗಾರು ಮಳೆ' ಪ್ರೀತಮನ ಹಾಗೆ ತಲೆ ಕೆರೆದುಕೊಳ್ಳುತ್ತಿದ್ದೇನೆ.
ಅಲ್ಲಾ ಕಣೇ, ಪ್ರೀತಿ ಇಷ್ಟೊಂದು ಘೋರ ಎಂದು ತಿಳಿದಿದ್ದರೆ ಖಂಡಿತ ನಿನ್ನನ್ನು ಪ್ರೀತಿಸುವ ಸಾಹಸಕ್ಕೆ ಇಳಿಯುತ್ತಿರಲಿಲ್ವೆ. ರಾತ್ರೆ ನಿದ್ದೆನೂ ಸರಿಯಾಗಿ ಬರ್ತಾಯಿಲ್ಲ. ಊಟ-ತಿಂಡಿಯಂತೂ ರುಚಿನೇ ಇಲ್ಲದ ಹಾಗಾಗಿದೆ. ಏನು ಮಾಡಿದರೂ, ಎಲ್ಲೇ ಹೋದರೂ ನೆರಳಿನಂತೆ ನೀ ನನ್ನನ್ನೇ ಹಿಂಬಾಲಿಸಿದಂತೆ ಭಾಸವಾಗುತ್ತಿದೆ. ಹೌದು ಕಣೇ, ನೀ ನನ್ನ ಬದುಕೇ ಆಗಿ ಪರಿವರ್ತನೆ ಆಗ್ಬಿಟ್ಟಿದ್ದೀಯಾ. ನಿನ್ನ ಬಿಟ್ಟು ಬದುಕೋ ಸಾಮಥ್ರ್ಯವಂತೂ ನನ್ನಲ್ಲಿಲ್ಲ ಎನ್ನುವುದು ಅರಿವಾಗ್ಬಿಟ್ಟಿದೆ.
ಅಲ್ವೆ, ಅದೆಷ್ಟು ಬಾರಿ ನಾ ನಿನಗೆ ಹೇಳಿಲ್ಲ ಹೇಳು, 'ನಾ ನಿನ್ನನ್ನು ಎಷ್ಟೊಂದು ಗಾಢವಾಗಿ ಪ್ರೀತಿಸ್ತಾ ಇದ್ದೀನಿ ಅಂತ. ಎಷ್ಟು ವಿಧದಲ್ಲಿ ತೋರಿಸಿಕೊಟ್ಟಿಲ್ಲ ಹೇಳು. ಆರು ತಿಂಗಳಿನಿಂದ ನಿರಂತರವಾಗಿ ನಿನ್ನ ಪ್ರೀತಿಯ ಹಿಂದೆ ಬಿದ್ದು, ಒಂದು ಹಿಡಿ ಪ್ರೀತಿಗಾಗಿ ಮಂಡಿಯೂರಿ ಅಂಗಲಾಚುತ್ತಿದ್ದೇನೆ. ಆ ನನ್ನ ವೇದನೆಗೆ, ತಾಕಲಾಟಕ್ಕೆ ನೀ ಒಂದಿನಿತು ಸ್ಪಂದನೆ ತೋರದೆ, ಮಾತೇ ಬರದ ಮೂಕಿಯಂತೆ ವತರ್ಿಸುತ್ತಿದ್ದೀಯಲ್ಲೇ. ಬೇಡ ಕಣೇ, 'ಪ್ರೀತಿಸ್ತೀನಿ' ಅಂತಾದ್ರೂ ಹೇಳು, ಇಲ್ಲಾ, 'ನೀ ನನಗೆ ಇಷ್ಟವಿಲ್ಲ' ಅಂತಾದ್ರೂ ಹೇಳು ಮಾರಾಯ್ತಿ. ಎಷ್ಟು ದಿನ ಅಂತ ಹೀಗೆ ಪರಿತಪಿಸ್ತಾ ಇರಬೇಕು? ಕಾದು ಕಾದು ನನ್ನನ್ನೇ ನಾ ಕಳೆದುಕೊಳ್ಳುತ್ತಿದ್ದೇನೆ. ಏನಾದ್ರೂ ಹೇಳೇ ಹುಡುಗಿ, ನಿನ್ನ ಉತ್ತರ ಕೇಳಿ ಎಲ್ಲಿಯಾದ್ರೂ, ಹೇಗಾದ್ರೂ ಬದುಕಿಕೊಳ್ತೇನೆ!
ಅವತ್ತು ಕೇಳಿದ್ಯಲ್ಲಾ, ನಾ ನಿನಗೆ ಹೇಗೆ ಪರಿಚಯ? ನನ್ನ ಮೊಬೈಲ್ ನಂಬರ್ ಯಾರು ನಿನಗೆ ಕೊಟ್ಟಿದ್ದು? ಎಂತ. ಹೇಳ್ತೀನಿ ಕೇಳು. ಅಂದು ಯಾಕೋ ಮನಸ್ಸು ಅವ್ಯಕ್ತ ಭಾವದಲ್ಲಿ ತಿಣುಕಾಡುತ್ತಿತ್ತು. ತುಸು ಟೈಂ ಪಾಸಾದೀತೆಂದು ಕಣ್ಮುಂದೆ ಇದ್ದ ಲ್ಯಾಪಿಗೆ ಬಿಎಸ್ಎನ್ಎಲ್ ಡಾಟಾ ಕಾಡರ್್ ಕನೆಕ್ಟ್ ಮಾಡಿ ನೇರವಾಗಿ ಫೇಸ್ಬುಕ್ಗೆ ಲಾಗಿನ್ ಆದೆ. ವಾಲ್ ಪಕ್ಕದಲ್ಲಿ ನೀಲಿ ಬಣ್ಣದ ಅನಾರ್ಕಲಿ ಬಟ್ಟೆ ಧರಿಸಿದ ನೀ ಕಂಡು ಬಂದೆ. ಹಿಂದೆ-ಮುಂದೆ ಯೋಚಿಸದೆ ನಿನಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಬಿಟ್ಟಿದ್ದೆ. ಒಂದು ದಿನ ಬಿಟ್ಟು ನೀ ನನ್ನ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿಕೊಂಡಿದ್ದೆ.
ಆ ಒಂದು ದಿನದಲ್ಲಿಯೇ ನಾ ನಿನ್ನೆಲ್ಲ ಜಾತಕವನ್ನು ತಡಕಾಡಿ ಬಿಟ್ಟಿದ್ದೆ. ನೀ ಹುಟ್ಟಿದ ಊರು, ಅಆಇಈ ಕಲಿತ ಬಾಲವಾಡಿ, ಅಳು ಮುಂಜಿ ಮುಖ ಮಾಡಿಕೊಂಡು ಹೋದ ಕನ್ನಡ ಶಾಲೆ, ಠಾಕು-ಠೀಕಾಗಿ ಹತ್ತಿದ ಕಾಲೇಜ್ ಮೆಟ್ಟಿಲು, ಸ್ನಾತಕೋತ್ತರ ಪದವಿ ಪಡೆದು ಬಿಗುಮಾನದಿಂದ ಹೊರಬಿದ್ದ ವಿಶ್ವವಿದ್ಯಾಲಯ ಹೀಗೆ.... ನೀ ಹೆಜ್ಜೆ ಇಟ್ಟಲ್ಲೆಲ್ಲ ನಾ ಮಾನಸಿಕವಾಗಿ ಓಡಾಡಿಬಿಟ್ಟಿದ್ದೆ. ಅದೂ ಅಲ್ಲದೆ, ನಿನ್ನೆಲ್ಲ ಹತ್ತಿರದ ಸ್ನೇಹಿತರ, ಸಂಬಂಧಿಗಳ ಮಾಹಿತಿ ಸಂಗ್ರಹಿಸಿದ್ದೆ. ಅವರಲ್ಲಿ ಕೆಲವರು ನನಗೆ ಪರಿಚಯದವರಾಗಿದ್ದರೆ, ಇನ್ನು ಕೆಲವರು ನನ್ನಾತ್ಮೀಯರಾಗಿದ್ದರು. ಅವರೇ ಕಣೇ ನನಗೆ ನಿನ್ನ ಮಗುವಿನಂತ ಮುಗ್ದ ಗುಣದ ಬಗ್ಗೆ ಹೇಳಿದ್ದು, ಯಾರಿಗೂ ನೋವು ನೀಡದೆ ಬದುಕುವ ನಿನ್ನ ಸೌಮ್ಯತೆ ಬಗ್ಗೆ ಹೇಳಿದ್ದು, ಪ್ರಾಣಿ, ಪಕ್ಷಿ, ಪ್ರಕೃತಿ ಎಂದರೆ ನಿನಗಿಷ್ಟ ಎಂದು ಹೇಳಿದ್ದು....!
ಹುಡುಗಿ, ಅಷ್ಟರಲ್ಲಾಗಲೇ ನನ್ನೆದೆಯ ಕೊಳದಲ್ಲಿ ಪ್ರೇಮದಾವರೆಯ ದಳಗಳು ಮೆಲ್ಲನೆ ಚಿಗುರೊಡೆಯಲಾರಂಭಿಸಿದ್ದವು ಗೊತ್ತಾ? ನನಗಾಗಿ ಒಂದು ಹೃದಯ ಮಿಡಿಯಬೇಕು, ನನ್ನೊಲವ ಜೇನಿಗಾಗಿ ತುಡಿಯಬೇಕು ಎನ್ನುವ ಆಸೆ ಹೊತ್ತ ವಯಸ್ಸಿನಲ್ಲಿಯೇ ನಿನ್ನ ಮೇಲೆಪ್ರೇಮಾಂಕುರವಾಗಿತ್ತು. ನಿನಗೆ ನನ್ನದು ಮೊದಲ ಪ್ರೀತಿಯಾಗದಿರಬಹುದು, ಆದರೆ, ನನ್ನೆದೆಯ ಪ್ರೇಮದ ಬಾಗಿಲನ್ನು ತಟ್ಟಿದವಳು ನೀನೇ ಮೊದಲಿಗಳು ನೆನಪಿರಲಿ!
ಸರಿ, ನಿನ್ನ ದೀರ್ಘ ಮೌನಕ್ಕೆ ಉತ್ತರ ಬಯಸಿ, ಈ ಪತ್ರ ಬರೆದಿದ್ದೇನೆ. ಇಲ್ಲಿ ಬರೆದಿರುವ ಒಂದೊಂದು ಸಾಲುಗಳು ನಿನ್ನ ಪಾದದ ಮೇಲಿಟ್ಟ ಪುಟ್ಟ ಪಾರಿಜಾತ. ಅದನ್ನು ನೀ ಮುಡಿಗೇರಿಸಿಕೊಂಡು ಕಿರು ಬೆರಳು ಹಿಡಿಯುತ್ತೀಯೋ... ಅಥವಾ, ಕಾಲಲ್ಲಿಯೇ ಹೊಸಕಿಹಾಕಿ ಇತಿಶ್ರೀ ಹಾಡುತ್ತೀಯೋ.... ನಿನಗೆ ಬಿಟ್ಟಿದ್ದು!
-ಮಾಧವ
'ಪ್ರೇಮ'ದ ಆರಂಭ ತಿರಸ್ಕಾರದಿಂದಲೇ....
ಹೀಗೊಂದು ಮಾತು ನನ್ನ ವೃತ್ತಿ ಬಂಧುವೊಬ್ಬರು ಹೇಳಿದರು. ಅದು ಎಷ್ಟರ ಮಟ್ಟಿಗೆ ಸರಿ... ತಪ್ಪು ಎಂದು ನನಗಂತೂ ಖಂಡಿತ ಗೊತ್ತಿಲ್ಲ. ಆದರೆ, ಅವರಾಡಿ ಆ ಮಾತು ಚಿಂತನೆಗೆ ನೂಕಿದ್ದಂತೂ ಸತ್ಯ.
ಬಹುತೇಕ ಯುವ ಹೃದಯಿಗಳ ಮನಸ್ಸಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ `ಪ್ರೇಮ' ಅಂಕುರಿಸಿಯೇ ಇರುತ್ತದೆ. ಆ ಪ್ರೇಮ ಮುಂದುವರಿದು ಮದುವೆಯಲ್ಲಿ ತಾಕರ್ಿಕ ಅಂತ್ಯ ಕಾಣಬಹುದು; ಇಲ್ಲವೇ, ನಟ್ಟ ನಡು ರಸ್ತೆಯೇ ಟಿಸಿಲೊಡೆದು ಪಥ ಬದಲಿಸಬಹುದು. ಹೆಜ್ಜೆ ಮೂಡದ ಹಾದಿಯೆಂದು, ಆವರೆಗೆ ಸಾಗಿ ಬಂದ ಮಾರ್ಗವೇ ಮರೆತು ಹೊಸ ಬದುಕಿಗೆ ಮುನ್ನುಡಿಯನ್ನೂ ಬರೆಯಬಹುದು. ಎಷ್ಟೋ ಯುವ ಮನಸ್ಸುಗಳು ಅರಿತೋ ಅರಿಯದೆಯೋ ಇನ್ನೊಂದು ಹೃದಯವನ್ನು ತನ್ನಲ್ಲಿ ಪ್ರತಿಷ್ಟಾಪಿಸಿಕೊಂಡು ಆರಾಧಿಸಬಹುದು. ಕಾಲ ಚಕ್ರದ ಉರುಳಾಟದಲ್ಲಿ ಎಲ್ಲವೂ ಸುಖಾಂತ್ಯವೇ ಆಗುತ್ತದೆ ಎಂದೇನಿಲ್ಲ. ದುಃಖಾಂತ್ಯವೂ ಆಗಬಹುದು.
ಕ್ಷಮಿಸಿ, ಬಹತೇಕ ಪ್ರೇಮ ಪ್ರಕರಣಗಳು ದುರಂತದಲ್ಲಿಯೇ ಕೊನೆಗೊಂಡಿವೆ. ಕೊನೆಗೊಳ್ಳುತ್ತಲೂ ಇವೆ. ಹಾಗಾದರೆ ಇದಕ್ಕೆ ಕಾರಣವೇನು? ಎನ್ನುವುದು ಮೇಲ್ನೋಟಕ್ಕೆ ಸರಳ ಹಾಗೂ ಸಾಮಾನ್ಯ ಪ್ರಶ್ನೆಯಾದರೂ.... ಅದರ ಅರ್ಥ ಹಾಗೂ ಹರಿವಿನ ವ್ಯಾಪ್ತಿ ತುಂಬಾ ವಿಶಾಲವಾದದ್ದೇ..! ಜೊತೆಗೆ ಕಲ್ಪನೆಗೂ ನಿಲುಕದ್ದು. ಯಾಕೆಂದರೆ ಬಹುತೇಕ 'ಪ್ರೇಮ' ಕಾರಣ ಇಲ್ಲದೆಯೇ ಹುಟ್ಟಿಕೊಳ್ಳುತ್ತವೆ, ಕಾರಣವಿಲ್ಲದೆಯೇ ಅಂತ್ಯಗೊಂಡಿರುತ್ತವೆ.
ಇವುಗಳ ನಡುವೆಯೇ `ಪ್ರೀತಿಯ ಆರಂಭ ತಿರಸ್ಕಾರದಿಂದ' ಎನ್ನುವ ವ್ಯಾಖ್ಯಾನ ರೇಜಿಗೆ ಹುಟ್ಟಿಸಿ, ಚಿಂತನೆಗೆ ನೂಕುತ್ತದೆ. ಅರ್ಥವ್ಯಾಪ್ತಿಯ ಆಳಕ್ಕಿಳಿದಾಗ, `ಪ್ರೇಮ' ಹುಟ್ಟಲು ಉಳಿದೆಲ್ಲ ಕಾರಣಕ್ಕಿಂತ ಮೊದಲ ಸ್ಥಾನ 'ತಿರಸ್ಕಾರ'ಕ್ಕೇ ಸೀಮಿತ...!
ಪ್ರೇಮ ನಿವೇದನೆ ಮಾಡಿಕೊಳ್ಳುವ ಸಂದರ್ಭದಲ್ಲಿ.... ಪ್ರೇಮ ಭಿಕ್ಷೆ ಯಾಚಿಸಿದ ವ್ಯಕ್ತಿಗೆ ಯಾರೂ ಕೂಡಾ ಹೃದಯವನ್ನು ಒಮ್ಮೆಲೆ ದಾನ ಮಾಡಿ ಬಿಡುವುದಿಲ್ಲ. ಬಹುತೇಕವಾಗಿ ತಿರಸ್ಕಾರಕ್ಕೆ ಒಳಗಾಗಿ ಬಿಡುತ್ತಾರೆ. ತೀರಾ ಕೆಲವು ಸಂದರ್ಭದಲ್ಲಿ ಮಾತ್ರ 'ನಿರ್ಲಿಪ್ತತೆ'ಗೆ ಜಾರಿ, ಭಾವನೆಯ ಮೇಲೆ ಪಯಣಿಸಿ ಬಿಡುತ್ತಾರೆ.
ಪ್ರೇಮ ಜಗತ್ತಿನ ಗಮ್ಮತ್ತೇ ವರ್ಣನಾತೀತ, ಭಾವನಾತೀತ ಎನ್ನುವಂತೆ... ನಿವೇದಿಸಿದ ವ್ಯಕ್ತಿಯ ಕುರಿತು, ಮನಸ್ಸಲ್ಲಿ ಅರಿವಿಲ್ಲದೆ ಕುತೂಹಲವೊಂದು ಮೊಳಕೆಯೊಡೆದಿರುತ್ತದೆ. ಅದು ಬೆಳೆದು ಹೆಮ್ಮೆರವಾಗಿ ತನು ಮನವೆಲ್ಲ ಆವರಿಸಿರುತ್ತದೆ. ಸದ್ದಿಲ್ಲದೆ ಆ ವ್ಯಕ್ತಿಯ ಮೇಲೆ ಆಸಕ್ತಿ ಅನುರಣಿಸುತ್ತಿರುತ್ತದೆ. ಭಾವನೆಗಳ ಏರಿಳಿತ ಹೊಸ ಅನುಭೂತಿ ನೀಡಲು ಪ್ರಾರಂಭಿಸುತ್ತದೆ. ತಿರಸ್ಕಾರದ ಮೊಟ್ಟೆಗೆ ಆಸಕ್ತಿಯ ಕಾವು ಸಿಕ್ಕು, ಸದ್ದಿಲ್ಲದೆ 'ಪ್ರೇಮ ಪಕ್ಷಿ' ಕಣ್ತೆರೆದಿರುತ್ತದೆ. ನಿಧಾನವಾಗಿ ರೆಕ್ಕೆ ಬಡಿದು ಮನದಾಗಸದ ತುಂಬ ಹಾರಾಡಲು ಶುರುವಿಟ್ಟುಕೊಳ್ಳುತ್ತದೆ.
ಅಂದರೆ, ನಿವೇದನೆಗೊಂಡು ತಿರಸ್ಕಾರಕ್ಕೆ ಒಳಗಾದ ಪ್ರೇಮ ಕೂಡಾ ತಾಳ್ಮೆ, ಸಹನೆ, ನಂಬಿಕೆ, ಆತ್ಮ ವಿಶ್ವಾಸ ಇವುಗಳ ನಡುವೆ ನಿಷ್ಕಲ್ಮಶ ಮನಸ್ಸಿದ್ದರೆ.... 'ಪ್ರೇಮ' ಕೈ ಹಿಡಿದು ನಡೆಸುತ್ತದೆ. ಬದುಕಿನ ಪಥ ಬದಲಿಸಿ, ಜೀವನದುದ್ದಕ್ಕೂ ದಾರಿ ದೀಪವಾಗಿ ಬೆಳಗುತ್ತಿರುತ್ತದೆ. ಅಂತಹ 'ತಿರಸ್ಕಾರದ ಪ್ರೇಮ' ನಿಮ್ಮದಾಗಲಿ. ಆ ಮೂಲಕ ಬದುಕು ಬೆಳಗಲಿ... 
ಚೆನ್ನೈ ಜಲ ಪ್ರಳಯದಲ್ಲಿನ ಆ ಮೂರು ದಿನಗಳು... 
ತಮಿಳುನಾಡು ರಾಜ್ಯದ ರಾಜಧಾನಿ ಚೆನ್ನೈನಲ್ಲಿ ವಾಯುಭಾರ ಕುಸಿತದಿಂದ ಭೀಕರ ಮಳೆ ಸುರಿದು ಜಲ ಪ್ರಳಯವೇ ಸೃಷ್ಟಿಯಾಗಿತ್ತು. ನಗರವನ್ನೆಲ್ಲ ನೀರು ತನ್ನೊಳಗೆ ಇಟ್ಟುಕೊಂಡಿತ್ತು. ಸಂದರ್ಭದಲ್ಲಿ ಸಹೋದರಿ ಜೊತೆ ಅನುಭವಿಸಿದ 'ಜಲಾತಂಕ'ದ ಕ್ಷಣಗಳ ಅಕ್ಷರ ರೂಪ ಇಲ್ಲಿದೆ.
----------------
ಅಂದು ಸೋಮವಾರ. ಇಪ್ಪತ್ತು ದಿನಗಳಲ್ಲಿ ನಾಲ್ಕನೇ ಬಾರಿಗೆ ಚೆನೈನಲ್ಲಿ ವಾಯುಭಾರ ಕುಸಿತವಾಗಿತ್ತು. ನಸುಕಿನ ವೇಳೆ ಪ್ರಾರಂಭವಾದ ಮಳೆ ಎಂಟು ಗಂಟೆ ಸುಮಾರಿಗೆ ನಿಂತಿತ್ತು. ಆದರೆ, ಮಧ್ಯ ಮಧ್ಯ ತುಂತುರು ಮಳೆಯಾಗುತ್ತಿತ್ತು. ರಾತ್ರಿ ಒಮ್ಮಿಂದೊಮ್ಮೆಲೆ ಜೋರಾಗಿ ಮಳೆ ಬೀಳಲು ಪ್ರಾರಂಭಿಸಿತು.
ಯಾವುದೇ ಆತಂಕವಿಲ್ಲದೆ, ಅಪಾಯದ ಕಲ್ಪನೆಯಿಲ್ಲದೆ ನಾವು ನಿದ್ದೆಗೆ ಜಾರಿಬಿಟ್ಟಿದ್ದೇವು. ಮಾರನೇ ದಿನ ಮಂಗಳವಾರವೂ ಮಳೆ ಮುಂದುವರಿದಿತ್ತು. ಮಳೆಯ ಆರ್ಭಟಕ್ಕೆ ಮುಂಜಾಗೃತವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಸಂಜೆಯಾದರೂ ವಿದ್ಯುತ್ ಬರಲಿಲ್ಲ. ಉರಿಸಲು ಮೋಂಬತ್ತಿಯೂ ಇರಲಿಲ್ಲ. ದೇವರ ಮುಂದೆ ಹಚ್ಚಿಟ್ಟಿದ್ದ ಪುಟ್ಟ ದೀಪದ ಬೇಳಕಲ್ಲಿಯೇ ಊಟ ಮಾಡಿ, ಮಲಗಿದ್ದಾಯಿತು. ಬೆಳಕು ಹರಿಯುವವರೆಗೂ ಆರ್ಭಟಿಸುತ್ತಿದ್ದ ವರುಣ, ನಂತರ ತಣ್ಣಗಾಗಿದ್ದ. ಆಕಾಶ ಶುಭ್ರವಾಗಿತ್ತು, ಆದರೆ ಅರುಣನ ಪತ್ತೆಯಿರಲಿಲ್ಲ.
ಮೊದಲ ಮಹಡಿಯಿಂದ ಇಣುಕಿ ನೋಡಿದಾಗಿ ರಸ್ತೆಯಲ್ಲಿ ಪಾದ ಮುಳುಗುವಷ್ಟು ನೀರು ನಿಂತಿತ್ತು. ರಾತ್ರಿ ಸುರಿದ ಮಳೆಗೆ ನೀರು ನಿಂತಿದೆ ಎಂದು, ಭಾವಿಸಿ ಇನ್ನೇನು ನೀರು ಇಳಿದು ಹೋಗುತ್ತದೆ ಎಂದು ಎದುರು ನೋಡುತ್ತಿದ್ದೇವು. ಆದರೆ, ಅದೆಲ್ಲ ಸುಳ್ಳು ಎಂದು ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕ್ಷಣ ಕ್ಷಣಕ್ಕೂ ನೀರು ಮೆಲ್ಲನೇ ಮೇಲೇರುತ್ತಲೇ ಇತ್ತು. ಸಾಯಂಕಾಲದ ಏಳರ ಹೊತ್ತಿಗೆ ಬಡಾವಣೆಯಲ್ಲಿರುವ ನೆಲ ಮಹಡಿಯೆಲ್ಲ ನೀರಿನಲ್ಲಿ ಮುಳುಗಿ ಹೋಗಿತ್ತು. ಅದೂ ಸಾಲದೆಂಬಂತೆ ನೀರು ಮತ್ತೆ ಮತ್ತೆ ಮೇಲೇರುತ್ತಲೇ ಇತ್ತು. ರಾತ್ರಿ ಒಂಬತ್ತರ ಹೊತ್ತಿಗೆ ಮೊದಲನೇ ಮಹಡಿವರೆಗೆ ನೀರು ಏರಲು ಎರಡು-ಮೂರು ಫೂಟ್ ಮಾತ್ರ ಬಾಕಿಯಿದ್ದವು...!
ನಿದ್ದೆ ಒತ್ತರಿಸಿ ಬಂದರೂ ಮಲಗಲಾಗದ ಪರಿಸ್ಥಿತಿ. ನೀರು ಹೇಗೆ ಕ್ಷಣ ಕ್ಷಣಕ್ಕೂ ಮೇಲೇರುತ್ತಿತ್ತೋ, ಹಾಗೆಯೇ... ಎದೆಯಲ್ಲಿ ಆತಂಕವೂ ಹೆಚ್ಚುತ್ತಲೇ ಹೋಗುತ್ತಿತ್ತು. ಏನು ಮಾಡಬೇಕೆಂದು ತಿಳಿಯದ ಪರಿಸ್ಥಿತಿಯದು. ಮುಂಜಾನೆಯೇ ಮೇಲ್ಮಹಡಿಯಲ್ಲಿ ವಾಸವಿದ್ದ ಮನೆಯವರಿಂದ ಮೂರು ಹೊತ್ತಿಗೂ ಸಾಕಾಗುವಷ್ಟು ಪುಲಾವ್ ಮಾಡಿಸಿಕೊಂಡಿದ್ದೇವು. ಅದನ್ನೇ ತಿಂದು ನಿದ್ದೆಗೆ ಅಣಿಯಾದೆವು. ಆದರೆ, ಮೂರೇ ಮೂರು ಫೂಟ್ ಕೆಳಗಿರುವ ನೀರು ಯಾವ ಘಳಿಗೆಯಲ್ಲಿ ಮೇಲೇರಿ ಬಿಡುತ್ತದೋ ಎನ್ನುವ ಆತಂಕ ಮನದಲ್ಲಿಯೇ ಮಡುಗಟ್ಟಿ, ರಾತ್ರಿ ನಿದ್ದೆಯನ್ನೆಲ್ಲ ಹತ್ತಿಕ್ಕಿಬಿಟ್ಟಿತ್ತು. ಈ ಆತಂಕ ನಮಗಷ್ಟೇ ಅಲ್ಲ, ಬಹುಶಃ ಸಮಸ್ತ ಚೆನೈ ಜನತೆಗೂ ಕಾಡಿದ್ದು ಸುಳ್ಳಲ್ಲ.
ಆದರೆ, ಗುರವಾರ ಮುಂಜಾನೆಯಷ್ಟೊತ್ತಿಗೆ ನೀರಿನ ಏರಿಕೆ ಪ್ರಮಾಣ ಕಡಿಮೆಯಾಗಿತ್ತು. ಆದರೆ, ಇಳಿಕೆ ಪ್ರಮಾಣ ಮಾತ್ರ ತೀರಾ... ತೀರಾ... ಕಡಿಮೆ ಎಂದೆನಿಸುವಷ್ಟು ಇತ್ತು. ಅವತ್ತು ಕೂಡಾ ಊಟಕ್ಕಾಗಿ ಹಿಂದಿನ ದಿನದಂತೆಯೇ, ಮೇಲ್ಮಹಡಿಯಲ್ಲಿ ವಾಸವಿದ್ದವರಿಂದ ಪುಲಾವ್ ಮಾಡಿಸಿಕೊಂಡು ಮೂರು ಹೊತ್ತು ತಿಂದಿದ್ದೇವು. ಹಿಂದಿನ ದಿನದಂತೆ ರಾತ್ರಿ ನಿದ್ದೆ ಹತ್ತಲಿಲ್ಲ. ಅರ್ಧ ಗಂಟೆಗೊಮ್ಮೆ ಬಾಗಿಲು ತೆರೆದು, ಕಡುಗತ್ತಲಲ್ಲಿಯೇ ನೀರು ಎಷ್ಟು ಪ್ರಮಾಣದಲ್ಲಿ ಇಳಿದಿದೆ ಎಂದು ನೋಡುತ್ತಲೇ ಇದ್ದೆ. ಬೆಳಕು ಹರಿಯುವವರೆಗೂ ಅದೊಂದು ಕಾಯದಂತಾಗಿ ಬಿಟ್ಟಿತ್ತು. ಅವುಗಳ ನಡುವೆಯೇ, ಗಂಟೆಗೊಮ್ಮೆ ಮಳೆ ಧೋ.. ಎಂದು ಸುರಿಯುತ್ತಿತ್ತು. ಆ ಸಂದರ್ಭದಲ್ಲೆಲ್ಲ ಮತ್ತೆ ನೀರಿನ ಮಟ್ಟ ಎಲ್ಲಿ ಏರಿ ಬಿಡುತ್ತದೆ ಎನ್ನುವ ಭಯ ಕಾಡುತಲೇ ಇತ್ತು...!
ಅಂತೂ ಶುಭ ಶುಕ್ರವಾರದ ಬೆಳಕು ಹರಿದಿತ್ತು. ಹದಿನಾಲ್ಕು ಫೂಟ್ ಎತ್ತರಕ್ಕೆ ಏರಿದ ನೀರು ಸೊಂಟದ ಮಟ್ಟಕ್ಕೆ ಇಳಿಕೆ ಕಂಡಿತ್ತು. ಏನೋ ಧೈರ್ಯಮಾಡಿಕೊಂಡು, ಚೆನೈ ಕೇಂದ್ರ ಬಸ್ ನಿಲ್ದಾಣಕ್ಕೆ ಹೋಗಿ, ಮನೆಗೆ ಹೋಗೋಣ ಎಂದೆ. ಅವಳು ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ನೀಡಿ, ನನ್ನ ಜೊತೆ ಹೆಜ್ಜೆ ಹಾಕಿದಳು. ಸೊಂಟದವರೆಗೆ ನೀರಿನಲ್ಲಿ ಅತ್ತ ಈಜು ಅಲ್ಲದ, ಇತ್ತ ನಡೆದುಕೊಂಡು ಅಲ್ಲದ ಶೈಲಿಯಲ್ಲಿ ಎರಡು ಕಿ.ಮೀ. ದೂರದಲ್ಲಿರುವ ಅಶೋಕ ಪಿಲ್ಲರ್ ಪ್ರದೇಶಕ್ಕೆ ಬಂದು, ಅಲ್ಲಿಂದ ಉಪನಗರ ಬಸ್ ಹತ್ತಿ ಕೋಯಂಬಟ್ಟು ಬಸ್ ನಿಲ್ದಾಣಕ್ಕೆ ಬಂದೇವು.
ಮುಂಜಾನೆ ಉಪಹಾರ ಮಾಡೋಣ ಎಂದರೆ ಕೈಯಲ್ಲಿ 500 ರೂ. ಹೊರತಾಗಿ ಇನ್ನೇನು ಉಳಿದಿರಲಿಲ್ಲ. ಆದರೆ ಎಟಿಎಂನಲ್ಲಿ ಹಣವಿತ್ತು. ಬಸ್ ನಿಲ್ದಾನದಲ್ಲಿದ್ದ ಎಟಿಎಂ ಔಟ್ ಆಫ್ ಸರ್ವಿಸ್ ಎಂದು ತೋರಿಸುತ್ತಿತ್ತು. ನೋಡೋಣವೆಂದು ನಿಲ್ದಾಣದ ಸುತ್ತ ಒಂದು ಕಿ.ಮೀ. ಅಡ್ಡಾಡಿದೆ. ಎಟಿಎಂ ಕೇಂದ್ರವಿತ್ತು, ಆದರೆ ಅವೆಲ್ಲ ಪ್ರವಾಹಕ್ಕೆ ಸಿಲುಕಿ ಹಾಳಾಗಿ ಹೋಗಿದ್ದವು. ನಮ್ಮಲ್ಲಿದ್ದ ಹಣದಿಂದ ಬೆಂಗಳೂರು ತಲುಪಲು ಇಬ್ಬರಿಗೂ ಸಾಧ್ಯವಿಲ್ಲ ಎಂದು ಭಾವಿಸಿ, ಅಳುಕುತ್ತಲೇ ಚೆನೈ-ಹೊಸುರು(ತಮಿಳುನಾಡು ಸಾರಿಗೆ) ಬಸ್ ಹತ್ತಿದೇವು. ಒಬ್ಬರಿಗೆ 183 ರೂ. ಹೊಸುರವರೆಗೆ ಆಗಿದ್ದರಿಂದ ಇಬ್ಬರಿಗೆ 366 ರೂ. ನೀಡಿ ಟಿಕೇಟ್ ಪಡೆದೆವು. ಹೊಸುರಲ್ಲಿ 20 ರೂ. ಬಿಸ್ಕಟ್ ಪ್ಯಾಕೆಟ್ ಖರೀದಿಸಿ, ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ಅದರಲ್ಲಿಯೇ ಮುಗಿಸಿದೆವು. ಆಗಲೇ, ಸಾಯಂಕಾಲ 4:15 ಆಗಿತ್ತು. ಅಲ್ಲಿಂದ ಮತ್ತೆ ತಮಿಳುನಾಡು ಸಾರಿಗೆ ಬಸ್ ಹತ್ತಿ ಬೆಂಗಳೂರು ತಲುಪಿದೆವು. ನಂತರ ಅಲ್ಲಿಯೇ ರಾತ್ರಿ ಊಟ ಮಾಡಿ, 10:30ಕ್ಕೆ ಹುಬ್ಬಳ್ಳಿ ಬಸ್ ಹತ್ತಿ ಶನಿವಾರ ಮುಂಜಾನೆ 7ರ ಸುಮಾರಿಗೆ ಹುಬ್ಬಳ್ಳಿಗೆ ತಲುಪಿದೆವು.
ಇವು ಆತಂಕದ ದಿನಗಳು, ಕ್ಷಣಗಳು ಎನ್ನುವುದಕ್ಕಿಂತ ಬದುಕಿಗೆ ಹೊಸ ಅನುಭವ ನೀಡಿತ್ತು. ಪ್ರವಾಹದಲ್ಲಿ ಸಿಲುಕಿದ್ದ ಸಮಯದಲ್ಲಿ ಕುಡಿಯಲು ನೀರಿಲ್ಲದೆ ಜನತೆ ಒದ್ದಾಡುತ್ತಿದ್ದಾಗ, ಯಾರೋ ಮೂರ್ನಾಲ್ಕು ಪಡ್ಡ ಹುಡುಗರ ತಂಡವೊಂದು ಒಂದು ಲೀ. ನೀರಿನ ಬಾಟಲ್, ಬಿಸ್ಕಟನ್ನು ತಂದು ಹತ್ತು ಪಟ್ಟು ಹೆಚ್ಚಳಕ್ಕೆ ಮಾರಾಟ ಮಾಡುತ್ತಿದ್ದರು. ಸಂದರ್ಭಲ್ಲಿ ಅವರ ಕಣ್ಣಲ್ಲಿ ಮಾನವೀಯತೆ ಕಾಣಬೇಕೋ... ವ್ಯಾಪಾರೀ ಮನೋಭಾವನೆ ನೋಡಬೇಕೋ... ಜೀವ ಹೋಗುವ ಪರಿಸ್ಥಿತಿಯನ್ನು ಸಹ ತಮ್ಮ ಲಾಭಕ್ಕಾಗಿ ಹೇಗೆ ಸದುಪಯೋಗ ಮಾಡಿಕೊಳ್ಳುತ್ತಿದ್ದಾರಲ್ಲ ಎಂದು ಅಸಹ್ಯ ಪಟ್ಟುಕೊಳ್ಳಬೇಕೋ... ಅಥವಾ ಇದು ಅನಿವಾರ್ಯತೆಯ ಒಂದು ಮುಖವೇ ಎಂದುಕೊಳ್ಳಬೇಕೋ ತಿಳಿಯಲಿಲ್ಲ. ಒಂದು ಲೀ. ನೀರಿನ ಬಾಟಲಿಗೆ 100 ರೂ. ಪಡೆಯುತ್ತಿದ್ದರೆ, 5 ರೂ. ಬಿಸ್ಕಿಟ್ ಪ್ಯಾಕೆಟ್ಗೆ 50 ರೂ. ಪಡೆಯುತ್ತಿದ್ದರು. ಅನ್ನ-ನೀರು ಇಲ್ಲದ ಜನತೆ ಹಣವನ್ನು ಲೆಕ್ಕಿಸದೆ, ಹೇಳಿದಷ್ಟು ಹಣ ನೀಡಿ ಅದನ್ನು ಖರೀದಿಸಿ ಮಂದಹಾಸ ಬೀರುತ್ತಿದ್ದರು. ಪರಿಸ್ಥಿತಿ ಎಷ್ಟೊಂದು ಕಠೋರವಾಗಿರುತ್ತದೆ ಎನ್ನುವುದು ಅರಿವಾಗಿತ್ತು. ನಾವು ಅನುಭವಿಸಿದ್ದು ಶೇ. 5 ರಷ್ಟು ಮಾತ್ರ, ಉಳಿದವರಿಗೆ ಹೋಲಿಸಿದರೆ....!
------
ಸೈದಾಪೇಟ್ದಿಂದ ಸೊಂಟದಷ್ಟು ನೀರಿನಿಂದ ಹಾದು ಬರುವಾಗ ಎಲ್ಲಿ ತೆರೆದ ಮ್ಯಾನ್ಹೋಲ್ನಲ್ಲಿ ಬಿದ್ದು ಅಲ್ಲಿಯೇ ಜಲಸಮಾಧಿಯಾಗುತ್ತೇವೆಯೋ ಎಂದು ಭಯ ಆವರಿಸಿತ್ತು. ಹಾಗೆ ಎರಡು ಕಿ.ಮೀ. ನಡೆದು ಬರುವಾಗ ಆ ಮೂರು ದಿನ ಏನೇನು ನಡೆದಿತ್ತು ಎನ್ನುವುದು ಒಂದೊಂದಾಗಿ ನಿಧಾನವಾಗಿ ಅರ್ಥವಾಗುತ್ತ ಹೋಗಿತ್ತು. ನಾವು ಮನೆಯಲ್ಲಿ ಸಿಲುಕಿದ್ದಾಗ ನೀರಿನ ಪ್ರವಾಹ ಏರುತ್ತಿದೆ ಎನ್ನುವ ಆತಂಕವಷ್ಟೇ ಕಾಡುತ್ತಿತ್ತು. ಆದರೆ, ಏನೇನು ನಡೆದಿದೆ ಎನ್ನುವ ಸಾಕ್ಷಾತ್ ದರ್ಶನ ಎರಡು ಕಿ.ಮೀ. ನಡಿಗೆಯಲ್ಲಿ ತಿಳಿದು ಹೋಗಿತ್ತು. ಕಿರಾಣಿ ಅಂಗಡಿಗಳಲ್ಲಿದ್ದ ದಿನಸಿ ವಸ್ತುಗಳಾದ ಅಕ್ಕಿ, ಬೇಳೆ-ಕಾಳು, ಸಕ್ಕರೆ ಎಲ್ಲ ಪದಾರ್ಥಗಳು ರಸ್ತೆಯ ಅಕ್ಕ-ಪಕ್ಕ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ವೀಟ್ ಅಂಗಡಿಗಳೆಲ್ಲ ನೀರಿಗೆ ಆಹುತಿಯಾಗಿದ್ದವು. ಕೆಲವು ಮನೆಗಳಂತೂ ಸಂಪೂರ್ಣವಾಗಿ ಕುಸಿದು ಹೋಗಿತ್ತು. ಇನ್ನು ಕೆಲವು ಮನೆಯ ನಿವಾಸಿಗಳು ನೀರನ್ನು ಹೊರ ಹಾಕುವ ಸಾಹಸ ಮಾಡುತ್ತಿದ್ದರು. ಆಸ್ಪತ್ರೆಯ ಒಳಗೂ ನೀರು ನುಗ್ಗಿ, ರೋಗಿಗಳಿಗೆ ಚಿಕಿತ್ಸೆ ನೀಡದಂತ ಪರಿಸ್ಥಿತಿ ನಿಮರ್ಾಣವಾಗಿತ್ತು. ಹಾಲಿಗಾಗಿ ಅಂಗಡಿ ಮುಂದೆ ಸಾಲುಗಟ್ಟಿ ನಿಂತು, ಅರ್ಧ ಲೀ. ಹಾಲಿಗೆ 100 ರೂ. ನೀಡುತ್ತಿದ್ದರು. ಪೆಟ್ರೋಲ್ ಬಂಕ್ಗಳ ಮುಂದಂತೂ ವಾಹನದ ಸಂತೆಯೇ ನಡೆದಿತ್ತು. ಬಸ್ ನಿಲ್ದಾಣವಂತೂ ಕಿಕ್ಕಿರಿದು ತುಂಬಿತ್ತು. ಚೆನೈನಿಂದ ಬೆಂಗಳೂರಿಗೆ ಹಾಗೂ ಇತರೆಡೆ ಸಂಚರಿಸುವ ಎಲ್ಲ ಬಸ್ಗಳು ಪ್ರಯಾಣಿಕರಿಂದ ತುಂಬಿ ಹೋಗಿದ್ದವು. ಇವೆಲ್ಲ ಚಿತ್ರಣ ಚೆನೈ ನಗರವನ್ನು ಅನಾಥವನ್ನಾಗಿಸಿತ್ತು. ಸತ್ತು ಕಿತ್ತ ಕಳೆಬರದಂತೆ ಕಂಡು ಬಂದಿತ್ತು.
--------