'ಪ್ರೇಮ'ದ ಆರಂಭ ತಿರಸ್ಕಾರದಿಂದಲೇ....
ಹೀಗೊಂದು ಮಾತು ನನ್ನ ವೃತ್ತಿ ಬಂಧುವೊಬ್ಬರು ಹೇಳಿದರು. ಅದು ಎಷ್ಟರ ಮಟ್ಟಿಗೆ ಸರಿ... ತಪ್ಪು ಎಂದು ನನಗಂತೂ ಖಂಡಿತ ಗೊತ್ತಿಲ್ಲ. ಆದರೆ, ಅವರಾಡಿ ಆ ಮಾತು ಚಿಂತನೆಗೆ ನೂಕಿದ್ದಂತೂ ಸತ್ಯ.
ಬಹುತೇಕ ಯುವ ಹೃದಯಿಗಳ ಮನಸ್ಸಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ `ಪ್ರೇಮ' ಅಂಕುರಿಸಿಯೇ ಇರುತ್ತದೆ. ಆ ಪ್ರೇಮ ಮುಂದುವರಿದು ಮದುವೆಯಲ್ಲಿ ತಾಕರ್ಿಕ ಅಂತ್ಯ ಕಾಣಬಹುದು; ಇಲ್ಲವೇ, ನಟ್ಟ ನಡು ರಸ್ತೆಯೇ ಟಿಸಿಲೊಡೆದು ಪಥ ಬದಲಿಸಬಹುದು. ಹೆಜ್ಜೆ ಮೂಡದ ಹಾದಿಯೆಂದು, ಆವರೆಗೆ ಸಾಗಿ ಬಂದ ಮಾರ್ಗವೇ ಮರೆತು ಹೊಸ ಬದುಕಿಗೆ ಮುನ್ನುಡಿಯನ್ನೂ ಬರೆಯಬಹುದು. ಎಷ್ಟೋ ಯುವ ಮನಸ್ಸುಗಳು ಅರಿತೋ ಅರಿಯದೆಯೋ ಇನ್ನೊಂದು ಹೃದಯವನ್ನು ತನ್ನಲ್ಲಿ ಪ್ರತಿಷ್ಟಾಪಿಸಿಕೊಂಡು ಆರಾಧಿಸಬಹುದು. ಕಾಲ ಚಕ್ರದ ಉರುಳಾಟದಲ್ಲಿ ಎಲ್ಲವೂ ಸುಖಾಂತ್ಯವೇ ಆಗುತ್ತದೆ ಎಂದೇನಿಲ್ಲ. ದುಃಖಾಂತ್ಯವೂ ಆಗಬಹುದು.ಕ್ಷಮಿಸಿ, ಬಹತೇಕ ಪ್ರೇಮ ಪ್ರಕರಣಗಳು ದುರಂತದಲ್ಲಿಯೇ ಕೊನೆಗೊಂಡಿವೆ. ಕೊನೆಗೊಳ್ಳುತ್ತಲೂ ಇವೆ. ಹಾಗಾದರೆ ಇದಕ್ಕೆ ಕಾರಣವೇನು? ಎನ್ನುವುದು ಮೇಲ್ನೋಟಕ್ಕೆ ಸರಳ ಹಾಗೂ ಸಾಮಾನ್ಯ ಪ್ರಶ್ನೆಯಾದರೂ.... ಅದರ ಅರ್ಥ ಹಾಗೂ ಹರಿವಿನ ವ್ಯಾಪ್ತಿ ತುಂಬಾ ವಿಶಾಲವಾದದ್ದೇ..! ಜೊತೆಗೆ ಕಲ್ಪನೆಗೂ ನಿಲುಕದ್ದು. ಯಾಕೆಂದರೆ ಬಹುತೇಕ 'ಪ್ರೇಮ' ಕಾರಣ ಇಲ್ಲದೆಯೇ ಹುಟ್ಟಿಕೊಳ್ಳುತ್ತವೆ, ಕಾರಣವಿಲ್ಲದೆಯೇ ಅಂತ್ಯಗೊಂಡಿರುತ್ತವೆ.
ಇವುಗಳ ನಡುವೆಯೇ `ಪ್ರೀತಿಯ ಆರಂಭ ತಿರಸ್ಕಾರದಿಂದ' ಎನ್ನುವ ವ್ಯಾಖ್ಯಾನ ರೇಜಿಗೆ ಹುಟ್ಟಿಸಿ, ಚಿಂತನೆಗೆ ನೂಕುತ್ತದೆ. ಅರ್ಥವ್ಯಾಪ್ತಿಯ ಆಳಕ್ಕಿಳಿದಾಗ, `ಪ್ರೇಮ' ಹುಟ್ಟಲು ಉಳಿದೆಲ್ಲ ಕಾರಣಕ್ಕಿಂತ ಮೊದಲ ಸ್ಥಾನ 'ತಿರಸ್ಕಾರ'ಕ್ಕೇ ಸೀಮಿತ...!
ಪ್ರೇಮ ನಿವೇದನೆ ಮಾಡಿಕೊಳ್ಳುವ ಸಂದರ್ಭದಲ್ಲಿ.... ಪ್ರೇಮ ಭಿಕ್ಷೆ ಯಾಚಿಸಿದ ವ್ಯಕ್ತಿಗೆ ಯಾರೂ ಕೂಡಾ ಹೃದಯವನ್ನು ಒಮ್ಮೆಲೆ ದಾನ ಮಾಡಿ ಬಿಡುವುದಿಲ್ಲ. ಬಹುತೇಕವಾಗಿ ತಿರಸ್ಕಾರಕ್ಕೆ ಒಳಗಾಗಿ ಬಿಡುತ್ತಾರೆ. ತೀರಾ ಕೆಲವು ಸಂದರ್ಭದಲ್ಲಿ ಮಾತ್ರ 'ನಿರ್ಲಿಪ್ತತೆ'ಗೆ ಜಾರಿ, ಭಾವನೆಯ ಮೇಲೆ ಪಯಣಿಸಿ ಬಿಡುತ್ತಾರೆ.
ಪ್ರೇಮ ಜಗತ್ತಿನ ಗಮ್ಮತ್ತೇ ವರ್ಣನಾತೀತ, ಭಾವನಾತೀತ ಎನ್ನುವಂತೆ... ನಿವೇದಿಸಿದ ವ್ಯಕ್ತಿಯ ಕುರಿತು, ಮನಸ್ಸಲ್ಲಿ ಅರಿವಿಲ್ಲದೆ ಕುತೂಹಲವೊಂದು ಮೊಳಕೆಯೊಡೆದಿರುತ್ತದೆ. ಅದು ಬೆಳೆದು ಹೆಮ್ಮೆರವಾಗಿ ತನು ಮನವೆಲ್ಲ ಆವರಿಸಿರುತ್ತದೆ. ಸದ್ದಿಲ್ಲದೆ ಆ ವ್ಯಕ್ತಿಯ ಮೇಲೆ ಆಸಕ್ತಿ ಅನುರಣಿಸುತ್ತಿರುತ್ತದೆ. ಭಾವನೆಗಳ ಏರಿಳಿತ ಹೊಸ ಅನುಭೂತಿ ನೀಡಲು ಪ್ರಾರಂಭಿಸುತ್ತದೆ. ತಿರಸ್ಕಾರದ ಮೊಟ್ಟೆಗೆ ಆಸಕ್ತಿಯ ಕಾವು ಸಿಕ್ಕು, ಸದ್ದಿಲ್ಲದೆ 'ಪ್ರೇಮ ಪಕ್ಷಿ' ಕಣ್ತೆರೆದಿರುತ್ತದೆ. ನಿಧಾನವಾಗಿ ರೆಕ್ಕೆ ಬಡಿದು ಮನದಾಗಸದ ತುಂಬ ಹಾರಾಡಲು ಶುರುವಿಟ್ಟುಕೊಳ್ಳುತ್ತದೆ.
ಅಂದರೆ, ನಿವೇದನೆಗೊಂಡು ತಿರಸ್ಕಾರಕ್ಕೆ ಒಳಗಾದ ಪ್ರೇಮ ಕೂಡಾ ತಾಳ್ಮೆ, ಸಹನೆ, ನಂಬಿಕೆ, ಆತ್ಮ ವಿಶ್ವಾಸ ಇವುಗಳ ನಡುವೆ ನಿಷ್ಕಲ್ಮಶ ಮನಸ್ಸಿದ್ದರೆ.... 'ಪ್ರೇಮ' ಕೈ ಹಿಡಿದು ನಡೆಸುತ್ತದೆ. ಬದುಕಿನ ಪಥ ಬದಲಿಸಿ, ಜೀವನದುದ್ದಕ್ಕೂ ದಾರಿ ದೀಪವಾಗಿ ಬೆಳಗುತ್ತಿರುತ್ತದೆ. ಅಂತಹ 'ತಿರಸ್ಕಾರದ ಪ್ರೇಮ' ನಿಮ್ಮದಾಗಲಿ. ಆ ಮೂಲಕ ಬದುಕು ಬೆಳಗಲಿ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ