ಚೆನ್ನೈ ಜಲ ಪ್ರಳಯದಲ್ಲಿನ ಆ ಮೂರು ದಿನಗಳು...
ತಮಿಳುನಾಡು ರಾಜ್ಯದ ರಾಜಧಾನಿ ಚೆನ್ನೈನಲ್ಲಿ ವಾಯುಭಾರ ಕುಸಿತದಿಂದ ಭೀಕರ ಮಳೆ ಸುರಿದು ಜಲ ಪ್ರಳಯವೇ ಸೃಷ್ಟಿಯಾಗಿತ್ತು. ನಗರವನ್ನೆಲ್ಲ ನೀರು ತನ್ನೊಳಗೆ ಇಟ್ಟುಕೊಂಡಿತ್ತು. ಸಂದರ್ಭದಲ್ಲಿ ಸಹೋದರಿ ಜೊತೆ ಅನುಭವಿಸಿದ 'ಜಲಾತಂಕ'ದ ಕ್ಷಣಗಳ ಅಕ್ಷರ ರೂಪ ಇಲ್ಲಿದೆ.
----------------
ಅಂದು ಸೋಮವಾರ. ಇಪ್ಪತ್ತು ದಿನಗಳಲ್ಲಿ ನಾಲ್ಕನೇ ಬಾರಿಗೆ ಚೆನೈನಲ್ಲಿ ವಾಯುಭಾರ ಕುಸಿತವಾಗಿತ್ತು. ನಸುಕಿನ ವೇಳೆ ಪ್ರಾರಂಭವಾದ ಮಳೆ ಎಂಟು ಗಂಟೆ ಸುಮಾರಿಗೆ ನಿಂತಿತ್ತು. ಆದರೆ, ಮಧ್ಯ ಮಧ್ಯ ತುಂತುರು ಮಳೆಯಾಗುತ್ತಿತ್ತು. ರಾತ್ರಿ ಒಮ್ಮಿಂದೊಮ್ಮೆಲೆ ಜೋರಾಗಿ ಮಳೆ ಬೀಳಲು ಪ್ರಾರಂಭಿಸಿತು.ಯಾವುದೇ ಆತಂಕವಿಲ್ಲದೆ, ಅಪಾಯದ ಕಲ್ಪನೆಯಿಲ್ಲದೆ ನಾವು ನಿದ್ದೆಗೆ ಜಾರಿಬಿಟ್ಟಿದ್ದೇವು. ಮಾರನೇ ದಿನ ಮಂಗಳವಾರವೂ ಮಳೆ ಮುಂದುವರಿದಿತ್ತು. ಮಳೆಯ ಆರ್ಭಟಕ್ಕೆ ಮುಂಜಾಗೃತವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಸಂಜೆಯಾದರೂ ವಿದ್ಯುತ್ ಬರಲಿಲ್ಲ. ಉರಿಸಲು ಮೋಂಬತ್ತಿಯೂ ಇರಲಿಲ್ಲ. ದೇವರ ಮುಂದೆ ಹಚ್ಚಿಟ್ಟಿದ್ದ ಪುಟ್ಟ ದೀಪದ ಬೇಳಕಲ್ಲಿಯೇ ಊಟ ಮಾಡಿ, ಮಲಗಿದ್ದಾಯಿತು. ಬೆಳಕು ಹರಿಯುವವರೆಗೂ ಆರ್ಭಟಿಸುತ್ತಿದ್ದ ವರುಣ, ನಂತರ ತಣ್ಣಗಾಗಿದ್ದ. ಆಕಾಶ ಶುಭ್ರವಾಗಿತ್ತು, ಆದರೆ ಅರುಣನ ಪತ್ತೆಯಿರಲಿಲ್ಲ.
ಮೊದಲ ಮಹಡಿಯಿಂದ ಇಣುಕಿ ನೋಡಿದಾಗಿ ರಸ್ತೆಯಲ್ಲಿ ಪಾದ ಮುಳುಗುವಷ್ಟು ನೀರು ನಿಂತಿತ್ತು. ರಾತ್ರಿ ಸುರಿದ ಮಳೆಗೆ ನೀರು ನಿಂತಿದೆ ಎಂದು, ಭಾವಿಸಿ ಇನ್ನೇನು ನೀರು ಇಳಿದು ಹೋಗುತ್ತದೆ ಎಂದು ಎದುರು ನೋಡುತ್ತಿದ್ದೇವು. ಆದರೆ, ಅದೆಲ್ಲ ಸುಳ್ಳು ಎಂದು ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕ್ಷಣ ಕ್ಷಣಕ್ಕೂ ನೀರು ಮೆಲ್ಲನೇ ಮೇಲೇರುತ್ತಲೇ ಇತ್ತು. ಸಾಯಂಕಾಲದ ಏಳರ ಹೊತ್ತಿಗೆ ಬಡಾವಣೆಯಲ್ಲಿರುವ ನೆಲ ಮಹಡಿಯೆಲ್ಲ ನೀರಿನಲ್ಲಿ ಮುಳುಗಿ ಹೋಗಿತ್ತು. ಅದೂ ಸಾಲದೆಂಬಂತೆ ನೀರು ಮತ್ತೆ ಮತ್ತೆ ಮೇಲೇರುತ್ತಲೇ ಇತ್ತು. ರಾತ್ರಿ ಒಂಬತ್ತರ ಹೊತ್ತಿಗೆ ಮೊದಲನೇ ಮಹಡಿವರೆಗೆ ನೀರು ಏರಲು ಎರಡು-ಮೂರು ಫೂಟ್ ಮಾತ್ರ ಬಾಕಿಯಿದ್ದವು...!
ನಿದ್ದೆ ಒತ್ತರಿಸಿ ಬಂದರೂ ಮಲಗಲಾಗದ ಪರಿಸ್ಥಿತಿ. ನೀರು ಹೇಗೆ ಕ್ಷಣ ಕ್ಷಣಕ್ಕೂ ಮೇಲೇರುತ್ತಿತ್ತೋ, ಹಾಗೆಯೇ... ಎದೆಯಲ್ಲಿ ಆತಂಕವೂ ಹೆಚ್ಚುತ್ತಲೇ ಹೋಗುತ್ತಿತ್ತು. ಏನು ಮಾಡಬೇಕೆಂದು ತಿಳಿಯದ ಪರಿಸ್ಥಿತಿಯದು. ಮುಂಜಾನೆಯೇ ಮೇಲ್ಮಹಡಿಯಲ್ಲಿ ವಾಸವಿದ್ದ ಮನೆಯವರಿಂದ ಮೂರು ಹೊತ್ತಿಗೂ ಸಾಕಾಗುವಷ್ಟು ಪುಲಾವ್ ಮಾಡಿಸಿಕೊಂಡಿದ್ದೇವು. ಅದನ್ನೇ ತಿಂದು ನಿದ್ದೆಗೆ ಅಣಿಯಾದೆವು. ಆದರೆ, ಮೂರೇ ಮೂರು ಫೂಟ್ ಕೆಳಗಿರುವ ನೀರು ಯಾವ ಘಳಿಗೆಯಲ್ಲಿ ಮೇಲೇರಿ ಬಿಡುತ್ತದೋ ಎನ್ನುವ ಆತಂಕ ಮನದಲ್ಲಿಯೇ ಮಡುಗಟ್ಟಿ, ರಾತ್ರಿ ನಿದ್ದೆಯನ್ನೆಲ್ಲ ಹತ್ತಿಕ್ಕಿಬಿಟ್ಟಿತ್ತು. ಈ ಆತಂಕ ನಮಗಷ್ಟೇ ಅಲ್ಲ, ಬಹುಶಃ ಸಮಸ್ತ ಚೆನೈ ಜನತೆಗೂ ಕಾಡಿದ್ದು ಸುಳ್ಳಲ್ಲ.ಆದರೆ, ಗುರವಾರ ಮುಂಜಾನೆಯಷ್ಟೊತ್ತಿಗೆ ನೀರಿನ ಏರಿಕೆ ಪ್ರಮಾಣ ಕಡಿಮೆಯಾಗಿತ್ತು. ಆದರೆ, ಇಳಿಕೆ ಪ್ರಮಾಣ ಮಾತ್ರ ತೀರಾ... ತೀರಾ... ಕಡಿಮೆ ಎಂದೆನಿಸುವಷ್ಟು ಇತ್ತು. ಅವತ್ತು ಕೂಡಾ ಊಟಕ್ಕಾಗಿ ಹಿಂದಿನ ದಿನದಂತೆಯೇ, ಮೇಲ್ಮಹಡಿಯಲ್ಲಿ ವಾಸವಿದ್ದವರಿಂದ ಪುಲಾವ್ ಮಾಡಿಸಿಕೊಂಡು ಮೂರು ಹೊತ್ತು ತಿಂದಿದ್ದೇವು. ಹಿಂದಿನ ದಿನದಂತೆ ರಾತ್ರಿ ನಿದ್ದೆ ಹತ್ತಲಿಲ್ಲ. ಅರ್ಧ ಗಂಟೆಗೊಮ್ಮೆ ಬಾಗಿಲು ತೆರೆದು, ಕಡುಗತ್ತಲಲ್ಲಿಯೇ ನೀರು ಎಷ್ಟು ಪ್ರಮಾಣದಲ್ಲಿ ಇಳಿದಿದೆ ಎಂದು ನೋಡುತ್ತಲೇ ಇದ್ದೆ. ಬೆಳಕು ಹರಿಯುವವರೆಗೂ ಅದೊಂದು ಕಾಯದಂತಾಗಿ ಬಿಟ್ಟಿತ್ತು. ಅವುಗಳ ನಡುವೆಯೇ, ಗಂಟೆಗೊಮ್ಮೆ ಮಳೆ ಧೋ.. ಎಂದು ಸುರಿಯುತ್ತಿತ್ತು. ಆ ಸಂದರ್ಭದಲ್ಲೆಲ್ಲ ಮತ್ತೆ ನೀರಿನ ಮಟ್ಟ ಎಲ್ಲಿ ಏರಿ ಬಿಡುತ್ತದೆ ಎನ್ನುವ ಭಯ ಕಾಡುತಲೇ ಇತ್ತು...!
ಅಂತೂ ಶುಭ ಶುಕ್ರವಾರದ ಬೆಳಕು ಹರಿದಿತ್ತು. ಹದಿನಾಲ್ಕು ಫೂಟ್ ಎತ್ತರಕ್ಕೆ ಏರಿದ ನೀರು ಸೊಂಟದ ಮಟ್ಟಕ್ಕೆ ಇಳಿಕೆ ಕಂಡಿತ್ತು. ಏನೋ ಧೈರ್ಯಮಾಡಿಕೊಂಡು, ಚೆನೈ ಕೇಂದ್ರ ಬಸ್ ನಿಲ್ದಾಣಕ್ಕೆ ಹೋಗಿ, ಮನೆಗೆ ಹೋಗೋಣ ಎಂದೆ. ಅವಳು ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ನೀಡಿ, ನನ್ನ ಜೊತೆ ಹೆಜ್ಜೆ ಹಾಕಿದಳು. ಸೊಂಟದವರೆಗೆ ನೀರಿನಲ್ಲಿ ಅತ್ತ ಈಜು ಅಲ್ಲದ, ಇತ್ತ ನಡೆದುಕೊಂಡು ಅಲ್ಲದ ಶೈಲಿಯಲ್ಲಿ ಎರಡು ಕಿ.ಮೀ. ದೂರದಲ್ಲಿರುವ ಅಶೋಕ ಪಿಲ್ಲರ್ ಪ್ರದೇಶಕ್ಕೆ ಬಂದು, ಅಲ್ಲಿಂದ ಉಪನಗರ ಬಸ್ ಹತ್ತಿ ಕೋಯಂಬಟ್ಟು ಬಸ್ ನಿಲ್ದಾಣಕ್ಕೆ ಬಂದೇವು.
ಮುಂಜಾನೆ ಉಪಹಾರ ಮಾಡೋಣ ಎಂದರೆ ಕೈಯಲ್ಲಿ 500 ರೂ. ಹೊರತಾಗಿ ಇನ್ನೇನು ಉಳಿದಿರಲಿಲ್ಲ. ಆದರೆ ಎಟಿಎಂನಲ್ಲಿ ಹಣವಿತ್ತು. ಬಸ್ ನಿಲ್ದಾನದಲ್ಲಿದ್ದ ಎಟಿಎಂ ಔಟ್ ಆಫ್ ಸರ್ವಿಸ್ ಎಂದು ತೋರಿಸುತ್ತಿತ್ತು. ನೋಡೋಣವೆಂದು ನಿಲ್ದಾಣದ ಸುತ್ತ ಒಂದು ಕಿ.ಮೀ. ಅಡ್ಡಾಡಿದೆ. ಎಟಿಎಂ ಕೇಂದ್ರವಿತ್ತು, ಆದರೆ ಅವೆಲ್ಲ ಪ್ರವಾಹಕ್ಕೆ ಸಿಲುಕಿ ಹಾಳಾಗಿ ಹೋಗಿದ್ದವು. ನಮ್ಮಲ್ಲಿದ್ದ ಹಣದಿಂದ ಬೆಂಗಳೂರು ತಲುಪಲು ಇಬ್ಬರಿಗೂ ಸಾಧ್ಯವಿಲ್ಲ ಎಂದು ಭಾವಿಸಿ, ಅಳುಕುತ್ತಲೇ ಚೆನೈ-ಹೊಸುರು(ತಮಿಳುನಾಡು ಸಾರಿಗೆ) ಬಸ್ ಹತ್ತಿದೇವು. ಒಬ್ಬರಿಗೆ 183 ರೂ. ಹೊಸುರವರೆಗೆ ಆಗಿದ್ದರಿಂದ ಇಬ್ಬರಿಗೆ 366 ರೂ. ನೀಡಿ ಟಿಕೇಟ್ ಪಡೆದೆವು. ಹೊಸುರಲ್ಲಿ 20 ರೂ. ಬಿಸ್ಕಟ್ ಪ್ಯಾಕೆಟ್ ಖರೀದಿಸಿ, ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ಅದರಲ್ಲಿಯೇ ಮುಗಿಸಿದೆವು. ಆಗಲೇ, ಸಾಯಂಕಾಲ 4:15 ಆಗಿತ್ತು. ಅಲ್ಲಿಂದ ಮತ್ತೆ ತಮಿಳುನಾಡು ಸಾರಿಗೆ ಬಸ್ ಹತ್ತಿ ಬೆಂಗಳೂರು ತಲುಪಿದೆವು. ನಂತರ ಅಲ್ಲಿಯೇ ರಾತ್ರಿ ಊಟ ಮಾಡಿ, 10:30ಕ್ಕೆ ಹುಬ್ಬಳ್ಳಿ ಬಸ್ ಹತ್ತಿ ಶನಿವಾರ ಮುಂಜಾನೆ 7ರ ಸುಮಾರಿಗೆ ಹುಬ್ಬಳ್ಳಿಗೆ ತಲುಪಿದೆವು.
ಇವು ಆತಂಕದ ದಿನಗಳು, ಕ್ಷಣಗಳು ಎನ್ನುವುದಕ್ಕಿಂತ ಬದುಕಿಗೆ ಹೊಸ ಅನುಭವ ನೀಡಿತ್ತು. ಪ್ರವಾಹದಲ್ಲಿ ಸಿಲುಕಿದ್ದ ಸಮಯದಲ್ಲಿ ಕುಡಿಯಲು ನೀರಿಲ್ಲದೆ ಜನತೆ ಒದ್ದಾಡುತ್ತಿದ್ದಾಗ, ಯಾರೋ ಮೂರ್ನಾಲ್ಕು ಪಡ್ಡ ಹುಡುಗರ ತಂಡವೊಂದು ಒಂದು ಲೀ. ನೀರಿನ ಬಾಟಲ್, ಬಿಸ್ಕಟನ್ನು ತಂದು ಹತ್ತು ಪಟ್ಟು ಹೆಚ್ಚಳಕ್ಕೆ ಮಾರಾಟ ಮಾಡುತ್ತಿದ್ದರು. ಸಂದರ್ಭಲ್ಲಿ ಅವರ ಕಣ್ಣಲ್ಲಿ ಮಾನವೀಯತೆ ಕಾಣಬೇಕೋ... ವ್ಯಾಪಾರೀ ಮನೋಭಾವನೆ ನೋಡಬೇಕೋ... ಜೀವ ಹೋಗುವ ಪರಿಸ್ಥಿತಿಯನ್ನು ಸಹ ತಮ್ಮ ಲಾಭಕ್ಕಾಗಿ ಹೇಗೆ ಸದುಪಯೋಗ ಮಾಡಿಕೊಳ್ಳುತ್ತಿದ್ದಾರಲ್ಲ ಎಂದು ಅಸಹ್ಯ ಪಟ್ಟುಕೊಳ್ಳಬೇಕೋ... ಅಥವಾ ಇದು ಅನಿವಾರ್ಯತೆಯ ಒಂದು ಮುಖವೇ ಎಂದುಕೊಳ್ಳಬೇಕೋ ತಿಳಿಯಲಿಲ್ಲ. ಒಂದು ಲೀ. ನೀರಿನ ಬಾಟಲಿಗೆ 100 ರೂ. ಪಡೆಯುತ್ತಿದ್ದರೆ, 5 ರೂ. ಬಿಸ್ಕಿಟ್ ಪ್ಯಾಕೆಟ್ಗೆ 50 ರೂ. ಪಡೆಯುತ್ತಿದ್ದರು. ಅನ್ನ-ನೀರು ಇಲ್ಲದ ಜನತೆ ಹಣವನ್ನು ಲೆಕ್ಕಿಸದೆ, ಹೇಳಿದಷ್ಟು ಹಣ ನೀಡಿ ಅದನ್ನು ಖರೀದಿಸಿ ಮಂದಹಾಸ ಬೀರುತ್ತಿದ್ದರು. ಪರಿಸ್ಥಿತಿ ಎಷ್ಟೊಂದು ಕಠೋರವಾಗಿರುತ್ತದೆ ಎನ್ನುವುದು ಅರಿವಾಗಿತ್ತು. ನಾವು ಅನುಭವಿಸಿದ್ದು ಶೇ. 5 ರಷ್ಟು ಮಾತ್ರ, ಉಳಿದವರಿಗೆ ಹೋಲಿಸಿದರೆ....!
------
ಸೈದಾಪೇಟ್ದಿಂದ ಸೊಂಟದಷ್ಟು ನೀರಿನಿಂದ ಹಾದು ಬರುವಾಗ ಎಲ್ಲಿ ತೆರೆದ ಮ್ಯಾನ್ಹೋಲ್ನಲ್ಲಿ ಬಿದ್ದು ಅಲ್ಲಿಯೇ ಜಲಸಮಾಧಿಯಾಗುತ್ತೇವೆಯೋ ಎಂದು ಭಯ ಆವರಿಸಿತ್ತು. ಹಾಗೆ ಎರಡು ಕಿ.ಮೀ. ನಡೆದು ಬರುವಾಗ ಆ ಮೂರು ದಿನ ಏನೇನು ನಡೆದಿತ್ತು ಎನ್ನುವುದು ಒಂದೊಂದಾಗಿ ನಿಧಾನವಾಗಿ ಅರ್ಥವಾಗುತ್ತ ಹೋಗಿತ್ತು. ನಾವು ಮನೆಯಲ್ಲಿ ಸಿಲುಕಿದ್ದಾಗ ನೀರಿನ ಪ್ರವಾಹ ಏರುತ್ತಿದೆ ಎನ್ನುವ ಆತಂಕವಷ್ಟೇ ಕಾಡುತ್ತಿತ್ತು. ಆದರೆ, ಏನೇನು ನಡೆದಿದೆ ಎನ್ನುವ ಸಾಕ್ಷಾತ್ ದರ್ಶನ ಎರಡು ಕಿ.ಮೀ. ನಡಿಗೆಯಲ್ಲಿ ತಿಳಿದು ಹೋಗಿತ್ತು. ಕಿರಾಣಿ ಅಂಗಡಿಗಳಲ್ಲಿದ್ದ ದಿನಸಿ ವಸ್ತುಗಳಾದ ಅಕ್ಕಿ, ಬೇಳೆ-ಕಾಳು, ಸಕ್ಕರೆ ಎಲ್ಲ ಪದಾರ್ಥಗಳು ರಸ್ತೆಯ ಅಕ್ಕ-ಪಕ್ಕ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ವೀಟ್ ಅಂಗಡಿಗಳೆಲ್ಲ ನೀರಿಗೆ ಆಹುತಿಯಾಗಿದ್ದವು. ಕೆಲವು ಮನೆಗಳಂತೂ ಸಂಪೂರ್ಣವಾಗಿ ಕುಸಿದು ಹೋಗಿತ್ತು. ಇನ್ನು ಕೆಲವು ಮನೆಯ ನಿವಾಸಿಗಳು ನೀರನ್ನು ಹೊರ ಹಾಕುವ ಸಾಹಸ ಮಾಡುತ್ತಿದ್ದರು. ಆಸ್ಪತ್ರೆಯ ಒಳಗೂ ನೀರು ನುಗ್ಗಿ, ರೋಗಿಗಳಿಗೆ ಚಿಕಿತ್ಸೆ ನೀಡದಂತ ಪರಿಸ್ಥಿತಿ ನಿಮರ್ಾಣವಾಗಿತ್ತು. ಹಾಲಿಗಾಗಿ ಅಂಗಡಿ ಮುಂದೆ ಸಾಲುಗಟ್ಟಿ ನಿಂತು, ಅರ್ಧ ಲೀ. ಹಾಲಿಗೆ 100 ರೂ. ನೀಡುತ್ತಿದ್ದರು. ಪೆಟ್ರೋಲ್ ಬಂಕ್ಗಳ ಮುಂದಂತೂ ವಾಹನದ ಸಂತೆಯೇ ನಡೆದಿತ್ತು. ಬಸ್ ನಿಲ್ದಾಣವಂತೂ ಕಿಕ್ಕಿರಿದು ತುಂಬಿತ್ತು. ಚೆನೈನಿಂದ ಬೆಂಗಳೂರಿಗೆ ಹಾಗೂ ಇತರೆಡೆ ಸಂಚರಿಸುವ ಎಲ್ಲ ಬಸ್ಗಳು ಪ್ರಯಾಣಿಕರಿಂದ ತುಂಬಿ ಹೋಗಿದ್ದವು. ಇವೆಲ್ಲ ಚಿತ್ರಣ ಚೆನೈ ನಗರವನ್ನು ಅನಾಥವನ್ನಾಗಿಸಿತ್ತು. ಸತ್ತು ಕಿತ್ತ ಕಳೆಬರದಂತೆ ಕಂಡು ಬಂದಿತ್ತು.
--------
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ