ಮನ ತೋಯ್ದ ಘಳಿಗೆ....
ವರ್ಷೆಯ ಗುಣಗಾನ ಸಾಕು ಎಂದುಕೊಳ್ಳುತ್ತೇನೆ. ಆದರೆ, ಅವಳ ವಯ್ಯಾರ, ಮಂದ, ಬಿರುಸು, ತಂಪು; ಜೊತೆ ಜೊತೆಗೆ ಕಿವಿ ಇಂಪಾಗಿಸುವ ಆ ಜಿಟಿ ಜಿಟಿ ಸದ್ದು..... ಮತ್ತೆ ಅವಳೆಡೆಗೆ ಅರಿವಿಲ್ಲದೆ ಸೆಳೆದು ಬಿಡುತ್ತದೆ. ಇದೊಂಥರ 'ಇಷ್ಟಕಾಮ್ಯ' ಇದ್ದಂತೆ!
ಪ್ರತಿ ವರ್ಷ ಮುಂಗಾರಿನ ಮೊದಲ ಹನಿಗೆ ಹೊಳೆ ಅಂಚಿನ ಗದ್ದೆಯ ಬಯಲಲ್ಲಿ ಮೈಯೊಡ್ಡಬೇಕು ಅಂದುಕೊಳ್ಳುತ್ತೇನೆ. ಭೂಮಿ ಬಿರಿಯುವ ಸುಡು ಬಿಸಿಲಲ್ಲೇ ಲೆಕ್ಕಾಚಾರ ಹಾಕಿ, ಪುಳಕಿತನಾಗುತ್ತೇನೆ. ಆದರೆ ನನ್ನಿಷ್ಟದ ಪ್ರೀತಿಯ ಕಾಯಕ, ಆ ಮೊದಲ ಹನಿಯ ಸ್ಪರ್ಷದಿಂದ ವಂಚಿತನಾಗಿಸುತ್ತದೆ. ಆದರೂ, ಮುಂಗಾರು ತನ್ನ ಮೊದಲ ಪಾದ ತೆಗೆಯುವುದರೊಳಗೊಮ್ಮೆ ನಾ ಹೊಳೆಯಂಚಿನ ಗದ್ದೆಗೆ ಹೋಗುತ್ತೇನೆ. ಅಲ್ಲಿ ವರ್ಷೆಯ ಜೊತೆ ಆಟವಾಡಿ, ಮನಸೋ ಇಚ್ಛೆಯಾಗಿ ತೋಯ್ದು ತೊಪ್ಪೆಯಾಗುತ್ತೇನೆ. ಎರಡು ಕೈಗಳನ್ನು ಅಗಲಿಸಿ, ನೀಳುಸಿರು ಮೇಲಕ್ಕೆಳೆದುಕೊಂಡು, ಎರಡು ಕಣ್ಣುಗಳನ್ನು ಮುಚ್ಚಿ ಧ್ಯಾನಸ್ಥನಾಗುತ್ತೇನೆ. ಅನುಭವಾತೀತ ಕ್ಷಣವದು. ಪದಗಳಲ್ಲಿ ಕಟ್ಟಿಹಾಕಲಾಗದ ಎಲ್ಲೆಯಿರದ ಓಟವದು. ಎರಡು ದಿನದ ಹಿಂದಷ್ಟೆ ಆ ಪುನೀತ ಘಳಿಗೆಗೆ ಸಾಕ್ಷಿಯಾಗಿದ್ದೆ.
ಹೌದು, ಭೂಮಿ ಬಾನು ಒಂದಾದ ಘಳಿಗೆಯದು. ಧೋ ಎಂದು ಹುಚ್ಚೆದ್ದು ಸುರಿವ ವರ್ಷೆಗೆ, ತಂಗಾಳಿ ಅಲೆ ಅಲೆಯಾಗಿ ಬಂದು ಮೈ ಸವರುತ್ತದೆ. ಅವಳಲ್ಲಿ ಒಂದಾಗಿ ಬೆರೆತು, ಭುವಿಯೆಲ್ಲ ಬಾನೇ ಎಂದಿನಿಸುವಂತೆ ಕಣ್ಕಟ್ಟುತ್ತದೆ. ಹನಿಕಟ್ಟೋ ಕಾರ್ಮೋಡಕ್ಕೆ ಸವಾಲು ಎಸೆಯುವಂತೆ, ಇಬ್ಬನಿಯ ಮಂಜು ಸುತ್ತೆಲ್ಲ ಆವರಿಸಿ ಭುವಿಯೇ ನನ್ನದು ಎನ್ನುವ ಆ ಪರಿ ವರ್ಣನಾತೀತ. ಹಿಡಿದು ಬಚ್ಚಿಟ್ಟುಕೊಳ್ಳಬೇಕೆಂದು ಕೈ ಮುಷ್ಟಿ ಕಟ್ಟಿದರೆ, ಮೈ-ಮನವೆಲ್ಲ ತಂಪಾದ ಭಾವ. ದೂರದಲ್ಲಿ ಅರೆಬರೆಯಾಗಿ ಕಾಣುವ ಸಹ್ಯಾದ್ರಿ ಹಿಮಚ್ಛಾದ್ರಿತವಾಗಿ ಕಂಗೊಳಿಸುತ್ತದೆ. ಕಾಲಡಿಯೇ ಹಸಿರೊದ್ದು ಮೇಲೆದ್ದ ಸಾಲು ಸಾಲು ಭತ್ತದ ಸಸಿ, ಭೂರಮೆಗೆ ಹಸಿರು ಸೀರೆ ಉಡಿಸಿದಂತೆ. ಅಲ್ಲಿಯೇ ಪಕ್ಕದ ಗದ್ದೆಯಲ್ಲಿ ನಿಂತ ನೀರು, ಬಾನಂಗಳದಲ್ಲಿ ಓಡೋ ಮೇಘಗಳನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಆ ದೃಶ್ಯ ನಯನ ಮನೋಹರ. ತನ್ನಷ್ಟಕ್ಕೆ ತಾನು ಓರೆಯಾಗಿ ತಲೆ ಎತ್ತಿ ನಿಂತಿರುವ ಒಂಟಿ ಕಲ್ಪವೃಕ್ಷದ ಪ್ರತಿಬಿಂಬ ಇಳೆಯ ಎದೆ ಮೇಲೆ ಅಚ್ಚೊತ್ತಿ ಪ್ರತಿಫಲಿಸುತ್ತದೆ. ವರ್ಷೆಯ ಜಿಟಿ ಜಿಟಿ ಶಬ್ಧದ ನಡುವೆಯೂ, ದೂರದಲ್ಲಿ ಅಘನಾಶಿನಿಗಾಗಿ ಅಬ್ಬರಿಸುವ ಅರಬ್ಬೀಯ ಭೋರ್ಗರೆತ ಕಿವಿಗಪ್ಪಳಿಸುತ್ತವೆ.
ಮೈಗೆ ಬಿಗಿದಪ್ಪಿದ ತೋಯ್ದ ಬಟ್ಟೆ, ದುಕೂಲದಿಂದ ಹರಿದು ಕೆನ್ನೆಯಂಚಿಂದ ಜಾರುವ ಮುತ್ತಿನ ಹನಿ, ಒದ್ದೆಯಾದ ಕಣ್ರೆಪ್ಪೆಯ ಮೊನಚು, ಆಗೊಂದು, ಈಗೊಂದು ಎಂದು ಗಂಟಲಲ್ಲಿ ಇಳಿದ ಮಳೆಹನಿ, ತಂಗಾಳಿ ಜೊತೆ ಸೇರಿದ ಎದೆಯಾಳದ ಬಿಸಿಯುಸಿರು, ಒಲ್ಲೇ ಎನ್ನುತ್ತಲೇ ಕತ್ತು ತಿರುಗಿಸುತ್ತ ಮನೆಕಡೆ ಇಟ್ಟ ಹಸಿ ಹಸಿ ಹೆಜ್ಜೆ, ಮೈ ಮೇಲೆ ಬಿದ್ದ ಅಮ್ಮ ಕಾಸಿಟ್ಟ ಹಂಡೆ ನೀರು, ಆದೃ ಮನಸ್ಸಿಗೆ ಸಾಂತ್ವನ ನೀಡಿದ ವರ್ಷೆಯ ಆ ಒಡಲು.... ಸುಮ್ಮನೆ ಹೊತ್ತಲ್ಲದ ಹೊತ್ತಲ್ಲಿ ಬಂದು ಕಾಡುತ್ತಿರುತ್ತವೆ. ಅರೆಕ್ಷಣ ಕಣ್ಮುಚ್ಚಿ ಆನಂದಿಸುತ್ತೇನೆ. ನನ್ನ ಪ್ರೀತಿಯ ಬಿಡುವಿಲ್ಲದ ಕೆಲಸದ ನಡು ನಡುವೆಯೂ.....
-ನಾಗರಾಜ್ ಬಿ.ಎನ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ