ಬುಧವಾರ, ಮಾರ್ಚ್ 8, 2017

ನಂದಿನಿಯಂಥ ಮಾತೆಗೆ......

'ಕಣ್ಣಿದ್ದೂ ಕುರುಡರಾದರು' ಎನ್ನುವ ಮಾತಿದೆ. ಅದು ಅಕ್ಷರಶಃ ಸತ್ಯವೂ ಹೌದು. ಆದರೆ, `ಕಣ್ಣಿಲ್ಲದೇ ಬೆಳಕಾಗುವವರು' ಎನ್ನುವ ಮಾತು ವಿರಳಾತಿ ವಿರಳ. ಇಂದಿನ ದಿನಗಳಲ್ಲಿ ಇಂತವರು ಕಾಣಸಿಗುವುದು ಸಹ ತೀರಾ ಅಪರೂಪವೇ. ಈ ಅಪರೂಪದ ನಡುವೆಯೇ ಒಂದು ಆತ್ಮವಿಶ್ವಾಸದ ಜ್ಯೋತಿ ದೇದೀಪ್ಯಮಾನವಾಗಿ ಬೆಳಗುತ್ತಿದೆ. ಕಣ್ಣಿದ್ದವರೂ ತಲೆ ತಗ್ಗಿಸುವಂತೆ ಮಾಡಿ, ಅರಿವಿಲ್ಲದೆ ಕಣ್ಣಂಚನ್ನು ಒದ್ದೆ ಮಾಡಿಸುತ್ತದೆ.
ಆ ಭಿನ್ನ ವ್ಯಕ್ತಿಯೇ ನಂದಿನಿ.
ಬೆಂಗಳೂರಿನ ನಿವಾಸಿಯಾದ ಇವರು, ಸದ್ಯ ಅಲ್ಲಿಯ ಆ್ಯಕ್ಷನ್ ಆ್ಯಡ್ ಸಮಾಜ ಸೇವಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಟ್ಟುತ್ತಲೇ ತನ್ನೆರಡು ಕಣ್ಣನ್ನು ಕಳೆದುಕೊಂಡು ಅಂಧತ್ವನ್ನೇ ವರವನ್ನಾಗಿ ಪಡೆದುಕೊಂಡು ಬಂದವರು. ಬೆಳಕು ನೋಡದ, ಬಣ್ಣಗಳ ಅರಿವಿಲ್ಲದ ಇವರಿಗೆ ಒಂದು ಹಂತದವರೆಗೆ ಆಸರೆಯಾಗಿ ನಿಂತವರು ಹೆತ್ತವರು. ಮಗಳು ಬೆಳೆದು ದೊಡ್ಡವಳಾಗುತ್ತಿದ್ದಂತೆ ಮದುವೆ ಚಿಂತೆ ಕಾಡಲಾರಂಭಿಸುತ್ತದೆ. ಅಂಧತ್ವದ ಮಗಳನ್ನು ಯಾರು ವರಿಸುತ್ತಾರೆ ಎಂದು ಹೆತ್ತವರು ಒಂದಷ್ಟು ವರ್ಷ ತಟಸ್ಥರಾಗುತ್ತಾರೆ. ಆ ವೇಳೆ ನಂದಿನಿಯವರಿಗೆ ಅನ್ಯ ಧರ್ಮಿಯ ವ್ಯಕ್ತಿಯೊಬ್ಬ ಪರಿಚಯವಾಗುತ್ತಾನೆ. ಆ ಪರಿಚಯ ಸ್ನೇಹವಾಗಿ ಮದುವೆ ಹಂತಕ್ಕೆ ತಲುಪುತ್ತದೆ. ಧರ್ಮಿಷ್ಟರಾದ ಹೆತ್ತವರಿಗೆ ಮಗಳನ್ನು ಅನ್ಯ ಕೋಮಿನ ವ್ಯಕ್ತಿಗೆ ಕೊಡುವುದು ಇಷ್ಟವಿರುವುದಿಲ್ಲ. ಹೆತ್ತವರ, ಕುಟುಂಬದವರ ವಿರೋಧದ ನಡುವೆಯೂ ನಂದಿನಿ ಆತನನ್ನು ಮದುವೆಯಾಗುತ್ತಾರೆ.
ಮದುವೆಯಾಗಿ ಎರಡು ವರ್ಷಗಳ ನಂತರ ಅವರು ಗರ್ಭಿಣಿಯಾಗುತ್ತಾರೆ. ತಾಯ್ತನದ ತುಮುಲ ಹಾಗೂ ಭಾವುಕತೆ ಅವರನ್ನು ಮೈಮರೆಸುತ್ತದೆ. ಸಂದರ್ಭದಲ್ಲಿ ಅವರ ಕೆಲವು ಆಪ್ತೇಷ್ಟರು, `ನಿನಗೆ ಹುಟ್ಟುವ ಮಗು ಅಂಧತ್ವದಿಂದಲೇ ಹುಟ್ಟಬಹುದು, ಗರ್ಭಪಾತ ಮಾಡಿಸು' ಎಂದು ಬಿಟ್ಟಿ ಸಲಹೆ ನೀಡುತ್ತಾರೆ. ಸಾಕಷ್ಟು ಬಾರಿ ಒತ್ತಾಯ ಮಾಡಿ ಅವರ ಗರ್ಭವನ್ನು ತೆಗೆಸಲು ಪ್ರಯತ್ನಿಸುತ್ತಾರೆ. ಆದರೆ ಅವರ ಯಾವ ಸಲಹೆ, ಸೂಚನೆಗೂ ಬೆಲೆ ನೀಡದ ನಂದಿನಿ, `ನಾನು ತಾಯಿ ಆಗಲೇ ಬೇಕು, ತಾಯ್ತನದ ಸುಖವೇನೆಂದು ಅರಿಯಲೇ ಬೇಕು. ಅಂಧತ್ವದ ಮಗು ಜನಿಸಿದರೂ ಅದನ್ನು ಎಲ್ಲಿಗಿಂತಲೂ ಭಿನ್ನವಾಗಿ ಬೆಳೆಸುತ್ತೇನೆ` ಎಂದು ಅಮ್ಮನಾಗುವ ದೃಢ ಸಂಕಲ್ಪ ಮಾಡುತ್ತಾರೆ.
ನವಮಾಸಗಳ ಕಾಲ ತಮ್ಮ ಗರ್ಭದಲ್ಲಿ ಮಗುವನ್ನು ಜೋಪಾನವಾಗಿ ಸಲುಹಿ, ಕೊನೆಗೊಂದು ದಿನ ತಾನಿದ್ದ ಭೂಮಿಗೆ ಪುಟ್ಟ ಕಂದನನ್ನು ಪರಿಚಯಿಸುತ್ತಾರೆ. ಬಿಟ್ಟಿ ಸಲಹೆ ನೀಡಿದವರೆಲ್ಲ ಕಣ್ಣು ಒದ್ದೆಮಾಡಿಕೊಂಡು ಮಾತು ಬರದೆ ಮೌನಕ್ಕೆ ಜಾರುವ ಸಮಯವದು. ತಮಗರಿವಿಲ್ಲದೆ ಎಳೆಯ ಹಸಗೂಸನ್ನು ಎತ್ತಿಕೊಂಡು ಎದೆಗೆ ಬಿಗಿದಪ್ಪಿಕೊಳ್ಳುತ್ತಾರೆ. ನಂದಿನಿಯ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸಕ್ಕೆ ತಲೆದೂಗಿ, ಗಟ್ಟಿಗಿತ್ತಿ ಹೆಣ್ಣು ಎಂದು ಬೆನ್ನು ತಟ್ಟುತ್ತಾರೆ. ಕಾರಣ, ನಂದಿನಿಗೆ ಜನ್ಮಿಸಿದ ಮಗು ಯಾವ ವೈಕಲ್ಯವನ್ನೂ ಹೊಂದಿರದ ಆರೋಗ್ಯವಂತ ಹೆಣ್ಣು ಮಗುವಾಗಿತ್ತು. ಆ ಪುಟ್ಟ ಕಂದಮ್ಮ ಈಗ ಆಳೆತ್ತರಕ್ಕೆ ಬೆಳೆದು ಬೆಂಗಳೂರಿನಲ್ಲಿಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ಎಂಟನೇ ತರಗತಿ ಅಭ್ಯಸಿಸುತ್ತಿದ್ದಾಳೆ.
ಇವಗಳ ನಡುವೆಯೇ ನಂದಿನಿ, ತನ್ನಂತೆಯೇ ಅಂಧತ್ವ ಇರುವ ಅನಾಥ ಹೆಣ್ಣು ಮಗುವೊಂದನ್ನು ದತ್ತು ಪಡೆಯುತ್ತಾರೆ. ಆಕೆಯ ಎಲ್ಲ ಕೆಲಸ ಕಾರ್ಯಗಳನ್ನು ಅವರೇ ಮಾಡುತ್ತ, ಆಕೆಗೆ ತಾನು ಪರಾವಲಂಬಿ ಎನ್ನುವ ಭಾವ ಮೂಡದಂತೆ ನೋಡಿಕೊಳ್ಳುತ್ತಾರೆ. ನಂದಿನಿಯ ಗರಡಿಯಲ್ಲಿ ಬೆಳೆಯುತ್ತಿರುವ ಪುಟ್ಟ ಮಗುವಿಗೆ ಈಗ ಆರು ವರ್ಷ. ಸಾಮಾನ್ಯರಿಗಿಂತ ಬಲು ಚೂಟಿಯಾಗಿ ಎಲ್ಲರ ಗಮನ ಸೆಳೆಯುತ್ತ, ಕಣ್ಣಿದ್ದವರೂ ಬೆರಗಾಗುವಂತೆ ಮಾಡುತ್ತಿದ್ದಾಳೆ.
ತಾನು ನಿಸ್ಸಹಾಯಕಳು, ಪರಾವಲಂಬಿ ಎನ್ನುವ ಭಾವ ನಂದಿಯವರನ್ನು ಎಂದೂ ಕಾಡಿಲ್ಲ. ಅದಕ್ಕೆ ಅವಕಾಶವನ್ನು ಸಹ ನೀಡದೆ, ತಮ್ಮ ಬಿಡುವಿನ ವೇಳೆಯನ್ನು ಬ್ರೈಲ್ ಲಿಪಿಯಲ್ಲಿ ಕಥೆ, ಕವನ ಬರೆಯುವ ಮೂಲಕ ಸಾಹಿತ್ಯದ ರಸ ಅನುಭವಿಸುತ್ತಿದ್ದಾರೆ. ಮಹಿಳಾ ಸಬಲೀಕರಣದ ಕುರಿತಾಗಿ ಸಾಕಷ್ಟು ಲೇಖನಗಳನ್ನು ಬರೆದು ಮಹಿಳಾ ವರ್ಗದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮದೇ ಆದ ಜಾಗೃತ ಬಳಗ ಸೃಷ್ಟಿಸಿಕೊಂಡು, ನಾಡಿನಾದ್ಯಂತ ಮಹಿಳೆಯ ಕುರಿತಾಗಿ ಅಭಿಯಾನ ನಡೆಸುತ್ತಿದ್ದಾರೆ. ಕನ್ನಡ, ಇಂಗ್ಲೀಷ, ಹಿಂದಿ, ತಮಿಳು ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಇವರು, ರಾಷ್ಟ್ರಮಟ್ಟದ ಹೋರಾಟಗಾರರು. ದೆಹಲಿ, ಕಲ್ಕತ್ತಾ, ಮುಂಬೈ ನಗರಗಳಿಗೆ ಒಬ್ಬರೇ ಹೋಗಿ, ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ.
ಅನುಕಂಪ ಬೇಡ ಎನ್ನುವ ಇವರು, ಇನ್ನೊಬ್ಬರ ಬದುಕಲ್ಲಿ ಜೀವನೋತ್ಸಾಹ ತುಂಬುವ ಪರಿ ಎಂಥವರನ್ನಾದರೂ ನಿಬ್ಬೆರಗಾಗಿಸುತ್ತದೆ. ಬೆಂಗಳೂರಿನ ಹೆಣ್ಣೂರಿನಲ್ಲಿರುವ ಅವರ ಮನೆ ಎಷ್ಟು ಶುಚಿಯಾಗಿದೆಯೆಂದರೆ, ಎಂತವರಾದರೂ ಆಶ್ಚರ್ಯ ಚಕಿತರಾಗಬೇಕು. ಯಾರ ಸಹಾಯ, ಸಹಕಾರವಿಲ್ಲದೆ ಮನೆಗೆಲಸವನ್ನು ತಾವೇ ಮಾಡಿಕೊಳ್ಳುವ ಮೂಲಕ ಪರಾವಲಂಬಿಯಾಗಿ ಹೇಗೆ ಬದುಕಬಹುದು ಎಂದು ಹೇಳುತ್ತಾರೆ. ದತ್ತು ಪಡೆದ ಅನಾಥ ಅಂಧ ಮಗುವನ್ನು ಮಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವ ಪರಿ ಎಂಥವರನ್ನಾದರೂ ಮೂಕರನ್ನಾಗಿಸುತ್ತದೆ.
ಪ್ರೀತಿ, ವಿಶ್ವಾಸ, ಮಮತೆ, ಕರುಣೆ ಇವುಗಳ ಜತೆಗೆ ಬದುಕಿನ ಪ್ರೀತಿಯನ್ನು ಮೈ ಗೂಡಿಸಿಕೊಂಡ 'ನಂದಿನಿ'ಯಂಥ ಮಾತೆಯರಿಗೆ ಮಹಿಳಾ ದಿನದ ಶುಭಾಶಯಗಳು.
-ನಾಗರಾಜ್ ಬಿ.ಎನ್. 

ಕಾಮೆಂಟ್‌ಗಳಿಲ್ಲ: