ಶುಕ್ರವಾರ, ಏಪ್ರಿಲ್ 21, 2017

ಬಣ್ಣ ಬಳಿದುಕೊಂಡ ಅಕ್ಕಿ ಕಾಳು, ಚಪ್ಪಲಿಯಡಿಯಲ್ಲಿ ನಲುಗಿತು!

ಮಾವಿನ ಚಿಗುರೆಲೆಯ ಹಸಿರು ತೋರಣದ ಮಧ್ಯೆ ಹಸೆಮಣೆಯ ಮೇಲೆ ಕೋರಿರುವ ವಧು-ವರರಿಗೆ ಆರತಿ ಬೆಳಗಿ, ಸೋಬಾನೆ ಪದ ಹಾಡಿ ಅಕ್ಷತೆ ಕಾಳು ಹಾಕಿ ಶುಭಾಶೀರ್ವಾದ ಮಾಡುವ ಪದ್ಧತಿ ಈಗ ಕಾಲಗರ್ಭದಲ್ಲಿ ಹೂತು ಹೋಗಿದೆಯೇನೋ ಎಂದೆನಿಸುತ್ತದೆ. ಅದಕ್ಕೂ ಮಿಗಿಲಾಗಿ ಶುಭದ ಸಂಕೇತವಾದ 'ಅಕ್ಷತೆ' ಅರಿಸಿಣ-ಕುಂಕುಮ ಬಣ್ಣದ ಬದಲಾಗಿ ನವರಂಗೀಯಂತೆ ಒಂದೊಂದು ಬಣ್ಣ ಬಳಿದುಕೊಳ್ಳುತ್ತಿರುವುದು ಬಣ್ಣದ ಮನಸ್ಸಿನ ದ್ಯೋತಕ. ಇದು ಇಷ್ಟಕ್ಕೆ ನಿಲ್ಲದು; ವಧು-ವರರ ಬೈತಲೆಯ ಮೇಲೆ ಬಿದ್ದು ಶುಭಕೋರಿದ ಅಕ್ಕಿ ಕಾಳು ಅವರದ್ದೇ ಕಾಲ ಕೆಳಗೆ ಬಿದ್ದು ಒದ್ದಾಡುತ್ತದೆ! ಸಾಲದೆಂಬಂತೆ ಹರಸಲು ಬಂದ ಬಂಧು-ಬಾಂಧವರ, ಹಿತೈಷಿಗಳ ಪಾದದಡಿಯಲ್ಲೂ ದೀನವಾಗಿ ಬಿದ್ದಿರುತ್ತದೆ!
ಕೆಲದಿನಗಳ ಹಿಂದೆ ಸಾಮೂಹಿಕ ವಿವಾಹಕ್ಕೆ ಹೋಗಿದ್ದೆ. ವಧು-ವರರಿಗೆ ಹರಿಸಿದ ಅಕ್ಷತೆ ಕಾಳುಗಳೆಲ್ಲ ಮದುವೆ ಆವರಣದ ತುಂಬೆಲ್ಲ ಬಿದ್ದಿತ್ತು. ಶುಭ ಹಾರೈಸಿದ ಅಕ್ಕಿ ಕಾಳು ಕೆಲವರ ಪಾದದಡಿಯಲ್ಲಿ ಸಿಲುಕಿದ್ದರೆ, ಇನ್ನು ಕೆಲವರ ಚಪ್ಪಲಿಯಡಿ ಸಿಲುಕಿ ನರಳುತ್ತಿತ್ತು. ವಿಚಿತ್ರವೆಂದರೆ ನೂತನ ವಧು-ವರರ ಕಾಲಡಿಯಲ್ಲಿಯೂ ಅದು ಸಿಲುಕಿ ಹೊಸಕಿ ಹೋಗುತ್ತಿತ್ತು. 'ನಾನೆಲ್ಲರಿಗೂ ಬೇಕಾದವಳು' ಎನ್ನುವ ಅಕ್ಕಿಯ ಮೂಕ ರೋದನ, ಮದುವೆ ಗದ್ದಲದಲ್ಲಿ ಯಾರೊಬ್ಬರಿಗೂ ಕೇಳಿಸಲಿಲ್ಲ. ದಾಂಪತ್ಯಕ್ಕೆ ಮುನ್ನಡಿ ಬರೆದ ನವ ದಂಪತಿಯೂ ಸೇರಿದಂತೆ!
ಇದು ಬದಲಾದ ಮದುವೆಯ ಪದ್ಧತಿಯ ಆಚಾರದಲ್ಲಿ ಕಂಡು ಬರುವ ಹೀನ ನಡೆ ಎಂದೇ ಹೇಳಬಹುದು. ಕಾಲಕ್ಕೆ ತಕ್ಕಂತೆ ಪದ್ಧತಿಯಲ್ಲಿನ, ಆಚರಣೆಯಲ್ಲಿನ ವಿಧಿ-ವಿಧಾನಗಳನ್ನು ಅನಿವಾರ್ಯವಾಗಿಯಾದರೂ ಒಂದಷ್ಟು ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಂತಹ ಬದಲಾವಣೆ ಮೂಲ ಆಚಾರದಲ್ಲಿ, ಪದ್ಧತಿಯಲ್ಲಿ ತರವಲ್ಲ. ಸಂಪ್ರದಾಯಗಳು ಯಾಕೆ ಇರುತ್ತಿದ್ದವು, ಅವುಗಳ ಅರ್ಥ, ಆಶಯಗಳು ಏನಿದ್ದವು ಎನ್ನುವುದು ಅರಿತುಕೊಳ್ಳುವುದು ಬದಲಾವಣೆಗೆ ಒಗ್ಗುವ ಮನಸ್ಸು ತಿಳಿದುಕೊಳ್ಳಬೇಕು.
'ಅಕ್ಷತ' ಎಂದರೆ ಸಂಸ್ಕೃತ ಭಾಷೆಯಲ್ಲಿ ತುಂಡಾಗದ ಎಂದರ್ಥ. ಕನ್ನಡದಲ್ಲಿ ಸ್ವಲ್ಪ ಅಪಭ್ರಂಶಗೊಂಡು ಅದು 'ಅಕ್ಷತೆ' ಎಂದಾಗಿದೆ. ಅಕ್ಷತೆಯಲ್ಲಿ ಬಳಸುವ ಒಂದೊಂದು ಅಕ್ಕಿ ಕಾಳು ಸಹ ಇಡಿ ಇಡಿಯಾಗಿರಬೇಕು. ಅಲ್ಲಿ ತುಂಡಾಗಿರುವ, ನುಚ್ಚಿನ ಅಕ್ಕಿಗೆ ಒಂದಿನಿತೂ ಅವಕಾಶವಿಲ್ಲ. ಅಲ್ಲದೆ, ಅದಕ್ಕೆ ಎಷ್ಟೇ ಅರಿಶಿಣ ಕುಂಕುಮ ಹಚ್ಚಿದರೂ ಪ್ರಯೋಜನವಿಲ್ಲ, ಹಾಗೆಯೇ ಅದು ಅಕ್ಷತೆಯೂ ಆಗುವುದಿಲ್ಲ. ಎಲ್ಲ ಧಾರ್ಮಿಕ ಕಾರ್ಯಗಳಲ್ಲೂ ಅಕ್ಷತೆಗೆ ಪ್ರಥಮ ಸ್ಥಾನ. ಭಗವಂತನಿಗೆ ಅರ್ಪಿಸುವ ಪ್ರಮುಖ ಪೂಜಾದ್ರವ್ಯ. ಜತೆಗೆ ದೈವಾನುಗ್ರಹಕ್ಕೆ ಹಾಗೂ ಗುರುಹಿರಿಯರ ಆಶೀರ್ವಚನಕ್ಕೆ ಇಡಿಯಾದ ಅಕ್ಕಿಕಾಳು ಶುಭ ನುಡಿಯುತ್ತದೆ. ಇದರ ಹೊರತಾಗಿ ಅಧ್ಯಾತ್ಮಿಕವಾಗಿ ಹೇಳಬೇಕೆಂದರೆ 'ಅಕ್ಷತೆ' ಎನ್ನುವುದು ಫಲಾಪೇಕ್ಷೆಯ ಬೀಜ; ಬೀಜ ಮೊಳೆತು ಪಕ್ವವಾಗಿ ಅದರೊಳಗಿಂದ ಮೊಳಕೆ ಬಂದು ದೊರೆಯುವ ಫಲ!
ಅಧ್ಯಾತ್ಮಿಕ ಹಾಗೂ ಆಶೀರ್ವಾದದ ಅನುಗ್ರಹಕ್ಕೆ ಅಕ್ಷತೆ ಬಳಸುತ್ತಾರಾದರೂ, ಮದುವೆಯ ಮುಹೂರ್ತದ ವೇಳೆ ವಧು-ವರರು ಪರಸ್ಪರ ಮಾಲೆ ಹಾಕಿಕೊಂಡ ನಂತರ ಗಟ್ಟಿಮೇಳ ಮೊಳಗುತ್ತಿದ್ದಂತೆ, ಆಗಮಿಸಿದ ಅತಿಥಿ ಮಹೋದಯರೆಲ್ಲ ಅಕ್ಷತೆ ಪ್ರೋಕ್ಷಣೆ ಮಾಡುವ ಮೂಲಕ ನೂತನ ದಂಪತಿಯನ್ನು ಆಶೀರ್ವದಿಸುತ್ತಾರೆ. ಅದಕ್ಕೂ ಪೂರ್ವ ಅಂದರೆ ಅಂತಃಪಟ ಸರಿಯುವ ಮುನ್ನ, ವಧು-ವರರು ಎದುರುಬದುರಾಗಿ ನಿಲ್ಲುವುದು ಇದೇ ಅಕ್ಕಿಯ ಮೇಲೆ. ಸಪ್ತಪದಿ ತುಳಿಯುವುದು ಸಹ ಅಕ್ಕಿಯಿಂದ ಮಾಡಿದ ಏಳು ರಾಶಿಗಳ ಮೇಲೆಯೇ. ಇವೆಲ್ಲ ಮುಗಿದು ಗಂಡನ ಮನೆ ಪ್ರವೇಶಿಸುವ ಮೊದಲು ವಧು, ಹೊಸ್ತಿಲಲ್ಲಿಟ್ಟ ಅಕ್ಕಿ ಪಾತ್ರೆಯನ್ನು ಕಾಲಿನಿಂದ ಚೆಲ್ಲಿ ಒಳಬರುತ್ತಾಳೆ. ಇದರರ್ಥ ವರನ ಕೈ ಹಿಡಿದಾಕೆ ಧಾನ್ಯ ಲಕ್ಷ್ಮಿಯಂತೆ, ಬಾಳಿ-ಬದುಕುವ ಮನೆ ತುಂಬಿ ತುಳುಕಲಿ ಎಂದು.
ಅಕ್ಷತೆಗೆ ಇಷ್ಟೊಂದು ಸಮೃದ್ಧ ಅರ್ಥಗಳಿವೆ, ಸಾಕ್ಷಾತ್ ದೈವೀ ಸ್ವರೂಪದ ಅಕ್ಕಿ ಕಾಳನ್ನು ತಲೆ ಮೇಲಿಟ್ಟು ಪೂಜಿಸುವ ಸಂಸ್ಕೃತಿ ನಮ್ಮದು. ಆದರೆ, ಇಂದಿನ ಆಡಂಬರದ ಜೀವನದಲ್ಲಿ, ವಿವಾಹ ಮಹೋತ್ಸವದಲ್ಲಿ ಅದಕ್ಕೆ ಬೆಲೆಯೇ ಇಲ್ಲದಂತೆ ಮಾಡಿದ್ದೇವೆ. ಧಾರ್ಮಿಕ ಪರಂಪರೆ, ಸಂಪ್ರದಾಯಗಳನ್ನು ಗಾಳಿಗೆ ತೂರಿ ಅಕ್ಕಿ ಕಾಳನ್ನು ಫ್ಯಾಶನ್ ವಸ್ತುವನ್ನಾಾಗಿ ಬಳಸುತ್ತಿದ್ದೇವೆ. ಮೊದಲೆಲ್ಲ ಅರಿಶಿಣ -ಕುಂಕುಮ ಬಳಿದುಕೊಂಡಿದ್ದ ಅಕ್ಷತೆ ಇರುತ್ತಿತ್ತು. ಆದರೀಗ ಅದಕ್ಕೆ ಬಣ್ಣ ಬಣ್ಣದ ರಾಸಾಯನಿಕ ಹಚ್ಚಿ ಆಕರ್ಷಿಸುತ್ತಿದ್ದಾರೆ. ಕ್ರಿಯಾಶೀಲತೆಯ ಕಲಾತ್ಮಕತೆಯನ್ನು ಧಾರ್ಮಿಕ ಆಚಾರದಲ್ಲಿ ನುಸುಳಿಸಿ, ಅಕ್ಷತೆಯ ಪಾವಿತ್ರ್ಯತೆಯನ್ನು ಹಾಳುಗೆಡವಿದಿದ್ದಾರೆ.

ಕಾಮೆಂಟ್‌ಗಳಿಲ್ಲ: