ಮೌನ ಪ್ರೀತಿ... ಶೂನ್ಯದೆಡೆಗೆ!
ಇಡೀ ಮೌನ ಸಾಮ್ರಾಜ್ಯಕ್ಕೆ ತಾನೇ ಯುವರಾಣಿ ಎಂದು ಬೀಗುತ್ತಿದ್ದ ನನ್ನವಳು, ಇಂದು ಬೆಕ್ಕಿನ ಹೆಜ್ಜೆಯಂತೆ ಮೌನವಾಗೆ ನನ್ನಿಂದ ದೂರ ಸರಿದಳು!ಅವಳದು ನಿಷ್ಕಲ್ಮಶ ಗುಣ, ಪ್ರಬುದ್ಧ ಯೋಚನೆ, ಮಗುವಿನ ಮನಸ್ಸು. ಈ ಗುಣಗಳೇ ಅವಳೆಡೆಗೆ ನನ್ನನ್ನು ಸೆಳೆದದ್ದು. ಪರಿಚಯದ ಪ್ರಾರಂಭದಲ್ಲಿ ಕೆಲವಷ್ಟು ಅಂತರವಿದ್ದರೂ, ನಂತರದಲ್ಲಿ ನಾವೆಲ್ಲ ಒಂದೇ ಎಂದು ತೀರಾ ಹತ್ತಿರವಾದೆವು. ಪ್ರತಿ ದಿನ ಅವಳನ್ನು ನೋಡುವ ಹೆಬ್ಬಯಕೆ. 'ಎಲ್ಲಿ ಬರುತ್ತಾಳೆ, ಎಲ್ಲಿ ಸಿಗುತ್ತಾಳೆ' ಎಂದು ಮನದಲ್ಲಿಯೇ ಯೋಚಿಸುತ್ತಿದ್ದೆ. ಎಷ್ಟೋ ಬಾರಿ ಈ ಯೋಚನೆಗಳೆಲ್ಲಾ ತಲೆ ಕೆಳಗಾಗಿ, ಅನಿರೀಕ್ಷಿತವಾಗಿ ಅವಳು ಎದುರಾಗಿ ಬಿಡುತ್ತಿದ್ದಳು. ಒಮ್ಮೆಲೆ ಎದೆ ಝಲ್ಲೆನ್ನುತ್ತಿತ್ತು! ಸಂದರ್ಭದಲ್ಲಿ ಅವಳು ಮನಸಾರೆ ನಗುತ್ತ ಕಣ್ಣು ಮುಚ್ಚುತ್ತಿದ್ದರೆ, ನಾನು ಸುಧಾರಿಸಿಕೊಳ್ಳಲು ಹವಣಿಸುತ್ತಿದ್ದೆ! ಈಗ ಅವೆಲ್ಲ ಬರೀ ನೆನಪಷ್ಟೇ...!
ಅವಳ ಮಾತಿನ ಓಘ ಎಷ್ಟಿತ್ತೆಂದರೆ, ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿದಂತೆ ಅವಳು ಮಾತಿಗೆ ಶುರುವಿಟ್ಟುಕೊಂಡಳೆಂದರೆ, ಅದಕ್ಕೆ ಪೂರ್ಣವಿರಾಮವೇ ಇರುತ್ತಿರಲಿಲ್ಲ. ಎಲ್ಲ ರಾಜ್ಯದ ರಾಜಧಾನಿಯ ಸಂಪರ್ಕ ಕಲ್ಪಿಸಿಕೊಡುವ `ರಾಜಧಾನಿ ಎಕ್ಸ್ಪ್ರೆಸ್' ರೇಲ್ವೆ ತರಹ ಒಂದೇ ಸಮನೆ ಮಾತನಾಡುತ್ತಿದ್ದಳು. ಸಂದರ್ಭದಲ್ಲೆಲ್ಲ ನಾನು ಅವಳ ಮಾತನ್ನೆ ಕೇಳುತ್ತ ಸುಮ್ಮನಾಗಿರುತ್ತಿದ್ದೆ! ಅವಳ ಮಾತುಗಳನ್ನು ಕೇಳುವುದೆಂದರೇನೆ ಒಂಥರ ಸಂತೋಷ. ಕರ್ಣಾನಂದಕರವಾದ ಅವಳ ಧ್ವನಿ ಕೇಳಿದಷ್ಟು ಮತ್ತೆಮತ್ತೆ ಕೇಳಬೇಕೆನಿಸುತ್ತಿತ್ತು. ಹಾಗಂತ ಎಲ್ಲಿಯೂ ಅಸಂಬದ್ಧವಾದ ಮಾತುಗಳು ಅವಳಿಂದ ಬರುತ್ತಿರಲಿಲ್ಲ. ಅಳೆದು ತೂಗಿ ಮಾತನಾಡುತ್ತಿದ್ದಾಳೇನೋ ಎಂದು ಭಾಸವಾಗುತ್ತಿತ್ತು. ಇಂಥಹ ಕ್ಷಣಗಳು ಈಗ ಇತಿಹಾಸವಷ್ಟೇ..!?
ಅವಳ ಜೊತೆ ಕಳೆಯುತ್ತಿದ್ದ ಪ್ರತಿ ಕ್ಷಣವೂ ಕೂಡಾ ನಾನೇ ಅವಳಾಗಿರುತ್ತಿದ್ದೆ. ಅವಳ ಮಾತಿಗೆ ಕಡಿವಾಣವಿಲ್ಲದಿದ್ದರೂ, ಕೆಲವು ವಿಷಯಕ್ಕೆ ಮಾತ್ರ ಅಪ್ಪಿ-ತಪ್ಪಿಯೂ ಮಾತನಾಡುತ್ತಿರಲಿಲ್ಲ. ನಮ್ಮಿಬ್ಬರ ವಿಷಯಕ್ಕೆ ಸಂಬಂಧಿಸಿದಂತೆ ಅವಳು ಮೌನಕ್ಕೆ ಶರಣಾಗಿದ್ದೇ ಹೆಚ್ಚು. ಯಾವೊಂದು ವಿಷಯವನ್ನು ಹೊರಹಾಕುತ್ತಿರಲಿಲ್ಲ. ಮನಸ್ಸಲ್ಲೆ ಎಲ್ಲವನ್ನು ಸಹಿಸಿಕೊಂಡು, ನೋವನ್ನು ಅನುಭವಿಸುತ್ತ, ವ್ಯಥೆ ಪಡುತ್ತಿದ್ದಳು. ನಿಂದಕರ ಬಾಯಿಗೆ ನಾವ್ಯಾಕೆ ಬೀಳಬೇಕೆಂದು ದೂರಾಲೋಚನೆಯಿಂದ ಕೆಲವಷ್ಟು ಅಂತರ ಕಾಯ್ದು ಕೊಂಡಿದ್ದಳು. ಹೊರ ಪ್ರಪಂಚಕ್ಕೆ ನಾವಿಬ್ಬರು ಈಗಷ್ಟೆ ಪರಿಚಯವಾದ ಸ್ನೇಹಿತರಾಗಿದ್ದೇವು. ಆದರೆ, ಅಂತರಂಗದಲ್ಲಿ ಮಾತ್ರ ಪರಸ್ಪರ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದೇವು. ಈ ಹಚ್ಚಿಕೊಳ್ಳುವ ವಿಷಯದಲ್ಲಿ ಇಬ್ಬರಿಗೂ ಪೈಪೋಟಿಯಿದ್ದರೂ, ಒಂದು ಹೆಜ್ಜೆ ನಾನೇ ಮುಂದಿದ್ದೆ ಎನ್ನಬಹುದು! ಅದು ಅವಳಿಗೂ ಗೊತ್ತಿತ್ತು...
ಒಮ್ಮೊಮ್ಮೆ ಅವಳನ್ನು ನಾ ಎಷ್ಟು ಪ್ರೀತಿಸುತ್ತಿದ್ದೆ ಎಂದರೆ, ಸಂಪೂರ್ಣ ಅವಳಲ್ಲೇ ತಲ್ಲೀನನಾಗಿಬಿಡುತ್ತಿದ್ದೆ. ಮಾಡುತ್ತಿರುವ ಕಾಯಕ ಮರೆತು, ಅವಳ ಧ್ಯಾನದಲ್ಲಿಯೇ ಮುಳುಗಿ ಬಿಡುತ್ತಿದ್ದೆ. ಅವಳನ್ನೇ ದಿಟ್ಟಿಸಿ ನೋಡುತ್ತ ನನ್ನ ಹುಡುಗಿಯ ವರ್ಣಿಸಲು ಬೇರೆ ಪದಗಳಿವೆಯೇ ಎಂದು ಯೋಚಿಸುತ್ತಿದ್ದೆ...!
ಹುಚ್ಚು ಪ್ರೀತಿಯ ವಿವಿಧ ಮಜಲುಗಳು ಎಂಬಂತೆ, ಸಂಪೂರ್ಣ ನನ್ನ ಬದುಕೇ ಅವಳಾಗಿದ್ದಳು. ಅವಳು ಕೂಡಾ, ಎಣೆಯಿಲ್ಲದಷ್ಟು ನನ್ನ ಪ್ರೀತಿಸುತ್ತಿದ್ದಳು.... ಆರಾಧಿಸುತ್ತಿದ್ದಳು.... ಪೂಜಿಸುತ್ತಿದ್ದಳು.... ಆದರೆ, ಎಲ್ಲಿಯೂ ಅದನ್ನು ನನ್ನಲ್ಲಿ ಹೇಳಿಕೊಂಡಿರಲಿಲ್ಲ. ಅದಕ್ಕೆ ಕಾರಣವೂ ಇದ್ದಿರಬಹುದು. ಆ ಕಾರಣ ಏನೆಂದು ತಿಳಿಯುವಷ್ಟರಲ್ಲಿಯೇ ಅವಳು,
`ಕ್ಷಮಿಸು ಕಣೋ...' ಎಂದು ಕಣ್ಣಂಚಿನಿಂದ ದೂರ ಸರಿದಳು! ಮೌನವಾಗಿಯೇ ಪ್ರೀತಿಸಿ, ಮನದಲ್ಲಿ ಪ್ರೇಮ ಸಿಂಚನಗೈದು ಬದುಕು ಹಸನಾಗುವ ಸಮಯದಲ್ಲಿ ಮರೆಯಾಗಿ ಹೋದಳು.....! ಹೃದಯದಲ್ಲಿ ಹಚ್ಚಿದ ಪ್ರೇಮ ಜ್ಯೋತಿ ಆರುತ್ತಿವೆ. ಬೆಳಕು ಮಾಯವಾಗಿ ಮತ್ತೆ ಕತ್ತಲಾವರಿಸುತ್ತಿವೆ. ಎಲ್ಲ ಶೂನ್ಯ..... ಶೂನ್ಯ!!! ಕರುಣಾಳು ಬಾ ಬೆಳಕೆ......
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ