ಬುಧವಾರ, ಜೂನ್ 12, 2013

ಕೈ ತಪ್ಪಿದ ಪ್ರೀತಿ....!?

ಕಾಡಿದ... ಕನವರಿಸಿದ... ತಡವರಿಸಿದ ಹುಡುಗಿ ಕೊನೆಗೂ ನೆನಪಾಗೇ ಹೋದಳಾ...!? ಒಲ್ಲದ ಮನಸ್ಸಿನಿಂದ `ನೀನು ನನಗೆ ಇಷ್ಟವಾಗಿದ್ದೀಯಾ, ಆದರೆ....?' ಎಂಬ ಉತ್ತರವಿಲ್ಲದ ಪ್ರಶ್ನೆಯನ್ನು ಮನಸಲ್ಲಿ ಬಿತ್ತಿ ಹೋದಳು. ಈಗವಳು ನನಗೆ ನೆನಪು ಮಾತ್ರ.
ಅವಳ ಜೊತೆ ಆಡಿದ, ಹರಟಿದ, ಕಚಕುಳಿ ಇಟ್ಟ ಮಾತುಗಳೆಷ್ಟೋ... ಹೆಜ್ಜೆ ಮೇಲೆ ಹೆಜ್ಜೆ ಹಾಕಿ ನಡೆದ ದೂರಗಳೆಷ್ಟೋ... ಪರಸ್ಪರ ಸಹಕರಿಸಿದ ಸಂದರ್ಭಗಳೆಷ್ಟೋ... ನಿದ್ರೆಯಿಲ್ಲದೆ ಪರಿತಪಿಸಿದ ರಾತ್ರಿಗಳೆಷ್ಟೋ... ಅರಿವಿಲ್ಲದೆ ಅವಳು ನನಗೆ ನೀಡಿದ ಉಡುಗೊರೆಗಳೆಷ್ಟೋ... ಎಂದು ಒಂದೊಂದಾಗಿ ನೆನಪಿಸಿಕೊಳ್ಳುತ್ತಿದ್ದೇನೆ. ಉತ್ಕನದ ಮಧ್ಯೆ ದೊರೆಯುವ ಪಳೆಯುಳಿಕೆಯಂತೆ, ಮನದ ಮೂಲೆಯಲ್ಲಿ ಅಲ್ಲೋ ಇಲ್ಲೋ ಬಿದ್ದ ಎಲ್ಲ ಸುಂದರ ಕ್ಷಣಗಳು ಒಂದೊಂದಾಗಿ ಗೋಚರಿಸುತ್ತಿವೆ. ಕಡಲಿನ ತೆರೆಗಳು ದಡಕ್ಕೆ ಬಂದು ಅಪ್ಪಳಿಸುವಂತೆ ಅವಳ ಜೊತೆ ಕಳೆದ ಪ್ರತಿಯೊಂದು ಕ್ಷಣವೂ ಸ್ಮೃತಿ ಪಟಲಕ್ಕೆ ಬಂದು ಅಪ್ಪಳಿಸುತ್ತಿವೆ. ಸುಳಿರ್ಗಾಳಿಗೆ ಸಿಕ್ಕ ತರಗೆಲೆಗಳು ಎಲ್ಲೆಲ್ಲಿಯೋ ಹೊಯ್ದಾಡುವಂತೆ ನನ್ನ ಮನಸ್ಸು ಕೂಡಾ ಹೊಯ್ದಾಡುತ್ತ ನಿಂತ ಸ್ಥಳವನ್ನೆ ಮರೆಯುತ್ತಿದ್ದೇನೆ.

ಪ್ರೇಮ ಜೀವನದಲ್ಲಿ ಇದು ಸಹಜ. ಆದರೆ ಆ ಸಂದರ್ಭದಲ್ಲಿ ಎಂದೂ ಇಂಥಹ `ನೆನಪಿನ ಆರ್ಭಟ'ವಾಗಿರಲಿಲ್ಲ. ನಮ್ಮದು ಗುರಿಯಿಲ್ಲದ ಪ್ರೇಮ ಯಾನವಾಗಿದ್ದರೂ, ಹಾಯಿ ದೋಣಿಯ ಪಯಣದಂತೆ ನಿರಾತಂಕವಾಗಿ ಸಾಗುತ್ತಿತ್ತು. ಪ್ರಸ್ತುತ ನನ್ನದು `ಕೈ ತಪ್ಪಿದ ಪ್ರೀತಿ'. ನನ್ನದಲ್ಲದ ಅವಳದಲ್ಲದ ತಪ್ಪಿಗೆ ಇಬ್ಬರಿಗೂ ಹಿಪ್ಪಿ-ಹಿಂಡಿ ಮಾಡುವ ನೆನಪಿನ ಶಿಕ್ಷೆ.
ಯಾರೂ ಪ್ರೇಮಿಸದಷ್ಟು ನಾನು ಅವಳನ್ನು ಪ್ರೇಮಿಸಿದೆ. ನನ್ನದು ಆಕರ್ಷಣೆಯ ಪ್ರೀತಿಯಾಗಿರಲಿಲ್ಲ. ಪ್ರಬುದ್ಧ ಬದುಕಿನ ಅಡಿಪಾಯದ ಮೇಲೆ ಅರಳಿನಿಂತ ಸ್ವಚ್ಛಂತ ಪ್ರೀತಿಯಾಗಿತ್ತು. ಅವಳನ್ನು ಚಿಕ್ಕ ಮಗುವಿನ ಹಾಗೆ ನೋಡಿಕೊಳ್ಳುತ್ತಿದ್ದೆ. ಅವಳು ಎಲ್ಲಿಯಾದರೂ ಹೊರಟು ನಿಂತಳೆಂದರೆ ನನಗೆ ಭಯವಾಗುತ್ತಿತ್ತು; ಆರೋಗ್ಯದಲ್ಲಿ ಏನಾದರೂ ಏರುಪೇರಾದೀತು ಎಂದು. ಅವಳಿಗಿಷ್ಟವಿಲ್ಲದಿದ್ದರೂ ಒಂದಿಷ್ಟು ಸಲಹೆಗಳನ್ನು ನೀಡುತ್ತಿದ್ದೆ. `ಹುಸಿ ಕೋಪ'ದಿಂದ `ಆಯ್ತಪ್ಪ... ಇನ್ನೇನಾದರೂ ಇದೆಯಾ?' ಎಂದು ಕೇಳುತ್ತಿದ್ದಳು. ಸುಮ್ಮನೆ ಅವಳನ್ನು ಇಲ್ಲಸಲ್ಲದ ಮಾತುಗಳಿಂದ ಕಾಡಿಸುತ್ತಿದ್ದೆ. ಪೀಡಿಸುತ್ತಿದ್ದೆ. ಲೆಕ್ಕವಿಲ್ಲದಷ್ಟು ಬಾರಿ ನಾವಿಬ್ಬರು ಕೋಪಿಸಿಕೊಂಡಿದ್ದೇವೆ. ಆದರೆ ಮರುಕ್ಷಣದಲ್ಲೇ ಒಂದಾಗಿ ಬಿಡುತ್ತಿದ್ದೇವು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅಪ್ಯಾಯಮಾನ. ಆದರೆ ಒಮ್ಮೆಯೂ ನಾವು ಪರಸ್ಪರ ನಮ್ಮ ಪ್ರೀತಿಯನ್ನು ಹೇಳಿಕೊಂಡಿರಲಿಲ್ಲ. ಅದರ ಅಗತ್ಯವೂ ಬಂದಿರಲಿಲ್ಲ. ಆದರೆ, ಅದೇ ನಾವು ಮಾಡಿದ ದೊಡ್ಡ ತಪ್ಪು! ಆ ತಪ್ಪಿಗೆ ಎಷ್ಟೇ ದಂಡ ತೆತ್ತರೂ ಶಿಕ್ಷೆ ಮಾತ್ರ ಅನವರತ... ಆ ಶಿಕ್ಷೆಯೇ `ಅಗಲಿಕೆ... 

ಕಾಮೆಂಟ್‌ಗಳಿಲ್ಲ: