ಮಂಗಳವಾರ, ಜೂನ್ 25, 2013

ಕಲ್ಪನೆಯ ಮೂಸೆಯಲಿ.....

ಹೀಗೊಂದು ಬದುಕು

ಶ್ರೀಮಂತರ ಕುಟುಂಬದಲ್ಲಿ ಜನಿಸಿದವನಾದರೂ, ಹಣದ ಮೌಲ್ಯ ಏನು ಎಂದು ಬಾಲ್ಯದಿಂದಲೇ ಅರಿತಿದ್ದೆ. ಅಪ್ಪ-ಅಮ್ಮರಲ್ಲಿ ತಿಂದು ತೇಗಲಾರದಷ್ಟು ಸಂಪತ್ತಿದ್ದರೂ, ತಮ್ಮ ಮಕ್ಕಳನ್ನು ಉತ್ತಮ ಸಂಸ್ಕಾರಯುತ ಪ್ರಜೆಗಳನ್ನಾಗಿ ರೂಪಿಸಬೇಕೆಂಬ ದೂರದೃಷ್ಟಿ ಉಳ್ಳವರಾಗಿದ್ದರು.
ಒಮ್ಮೊಮ್ಮೆ ಹೆತ್ತವರು ಕೈ ತುಂಬ ಹಣ ನೀಡಿ `ಜೋಪಾನವಾಗಿ ಎತ್ತಿಡು. ಬೇಕಾದಾಗ ಕೇಳುತ್ತೇವೆ' ಎನ್ನುತ್ತಿದ್ದರು. ದಾರಿತಪ್ಪಿ ಎಡವಿ ಬೀಳುವ ವಯಸ್ಸಲ್ಲಿ ಜವಾಬ್ದಾರಿಯನ್ನು ಹೊರಸಿ, ದೂರದಿಂದ ಪರೀಕ್ಷಿಸುತ್ತಿದ್ದರು. ಅವರು ನೀಡಿದ ಹಣದ ಲೆಕ್ಕಾಚಾರದಲ್ಲಿ ಎಲ್ಲಿಯೂ ಏರುಪೇರಾಗುತ್ತಿರಲಿಲ್ಲ. `ಅವನು ನನ್ನ ಮಗ, ಅವನು ನನ್ನ ಮಗ' ಎಂದು, ಹೆಮ್ಮೆಯಿಂದ ಅಪ್ಪ-ಅಮ್ಮರಿಬ್ಬರೂ ಕಿತ್ತಾಡುತ್ತಿದ್ದರು...!  ಈ ಪ್ರಾಮಾಣಿಕತೆಗೆ, ಬದುಕಿನ ಪಾಠಕ್ಕೆ ಕೈ ಹಿಡಿದು ಮುನ್ನುಡಿ ಬರೆಸಿದವರೂ ಅವರೇ ಆದರೂ, ಸಹೋದರಿಯ ಅಧ್ಯಾತ್ಮ ಹಾಗೂ ವ್ಯಕ್ತಿತ್ವ ವಿಕಸನದ ಹೊತ್ತಿಗೆಯು ಕೂಡಾ ನನಗೆ ಪ್ರಭಾವ ಬೀರುವಲ್ಲಿ ಸಾಕಾರವಾಯಿತೇನೋ...!
ಒಂದರ್ಥದಲ್ಲಿ ನಮ್ಮದು ಅಧ್ಯಾತ್ಮ ಕುಟುಂಬ. ಸಂಸ್ಕಾರ, ಸಂಸ್ಕೃತಿ ಹಾಸುಹೊಕ್ಕಾಗಿತ್ತು. ಮನೆ ಮಂದಿಯೆಲ್ಲರೂ ಸದಾ ದೈವತ್ವದ ಚಿಂತನೆ ಮಾಡುತ್ತ, ಪರರ ನೋವಿಗೆ ಸ್ಪಂದಿಸುತ್ತಲೆ ದಿನದ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಚಿಕ್ಕಂದಿನಿಂದಲೂ ಪ್ರಾಣಿ, ಪಕ್ಷಿ ಮತ್ತು ಪರಿಸರ ಎಂದು ಜೀವ ಬೀಡುತ್ತಿದ್ದ ನಾನು, ಕ್ರಮೇಣ ನನ್ನ ಭೌತಿಕ ಶರೀರವವನ್ನೆ ಪ್ರಕೃತಿಯನ್ನಾಗಿ ಮಾಡಿಕೊಂಡುಬಿಟ್ಟೆ! ಕನಸು-ಮನಸಲ್ಲೂ ಕೂಡಾ ಅವರದೇ ಚಿಂತನೆ. ಬಿಡುವಿದ್ದಾಗ ಹೆಚ್ಚಿನ ಸಮಯ ಅವರ ಜೊತೆ ಕಳೆಯುತ್ತ, ಅವರನ್ನು ಮಾತನಾಡಿಸುತ್ತ, ಮೈ ನೇವರಿಸುತ್ತ, ಪ್ರೀತಿಯಿಂದ ಮುದ್ದಿಸುತ್ತ, ನಗಿಸುತ್ತ ಅವರಲ್ಲಿಯೇ ಒಂದಾಗುತ್ತಿದ್ದೆ. ಒಮ್ಮೊಮ್ಮೆ ಅವರ ಮೂಕ ರೋದನಕ್ಕೆ ನಾನು ಭಾವುಕನಾಗಿ ಅತ್ತಿದ್ದು ಇದೆ. ಒಂದರ್ಥದಲ್ಲಿ ನನ್ನ ಪ್ರಪಂಚವೇ ಈ ಪ್ರಾಣಿ, ಪಕ್ಷಿ, ಮರ-ಗಿಡವಾಗಿ ಬಿಟ್ಟಿದ್ದವು.
ಸಮಾಜದ ಅರ್ಥಹೀನ ಆಚರಣೆ ಹಾಗೂ ಆಡಂಬರತೆಯನ್ನು ಸಹಿಸದ ನಾನು, ಸದಾ ವಿರೋಧಿಸುತ್ತಿದ್ದೆ. ದೇವರ ಹೆಸರಲ್ಲಿ ಬಲಿ ನೀಡುವುದು... ಕೆಲವು ನೆಪದಲ್ಲಿ ದೇಣಿಗೆ ಸಂಗ್ರಹಿಸುವುದು... ಚುನಾವಣಾ ಮುನ್ನಾದಿನ ನಡೆಯುವ ಅವ್ಯವಹಾರ... ಜಾತಿ-ಜಾತಿಗಳ ನಡುವಿನ ಕಚ್ಚಾಟ... ಗುಟ್ಕಾ-ತಂಬಾಕು-ಸಾರಾಯಿಯ ದಾಸರಾಗಿ ಬದುಕನ್ನು ಹಾಳು ಮಾಡಿಕೊಳ್ಳುವುದು... ಹೀಗೆ ಬದುಕಿನ ಮತ್ತು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಎಲ್ಲ ವಿಷಯವನ್ನು ಖಂಡಿಸಿ ಧ್ವನಿ ಎತ್ತುತ್ತಿದ್ದೆ.
ನಾನು ವೃತ್ತಿ ಜೀವನಕ್ಕೆ ಆಯ್ಕೆ ಮಾಡಿಕೊಂಡ ಶಿಕ್ಷಣ ಪತ್ರಿಕೋದ್ಯಮ. ಈ ಸಂದರ್ಭದಲ್ಲಿ ಪಾಲಕರು ಪ್ರತಿಷ್ಠಿತ ಕಾಲೇಜಿನಲ್ಲಿ ಮಗನಿಗೆ ಪ್ರವೇಶ ಕೊಡಿಸಬೇಕೆಂದು ಬೆಂಗಳೂರು, ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಮುಖ್ಯಸ್ಥರೊಡನೆ ಮಾತನಾಡಿ, ಸೀಟು ಕಾಯ್ದಿರಿಸಿದ್ದರು. ಇದ್ಯಾವುದಕ್ಕೂ ಒಪ್ಪದ ನಾನು ನಮ್ಮದೆ ವಿಶ್ವವಿದ್ಯಾಲಯದ, ಪ್ರವೇಶ ಪರೀಕ್ಷೆ ಬರೆದು, ಅರ್ಹತೆ ದೊರೆತರೆ ಮಾತ್ರ ಕಾಲೇಜಿಗೆ ಹೋಗುತ್ತೇನೆ ಎಂದೆ. ಮಗ ಕೈಗೊಂಡ ನಿರ್ಧಾರದಿಂದ ಹಿಂದೆ ಸರಿಯಲಾರ ಎಂದು ತಿಳಿದ ಅವರು, `ನಿನ್ನಿಷ್ಟ' ಎಂದು ಸುಮ್ಮನಾದರು. ಅಂತೂ ವಿಶ್ವವಿದ್ಯಾಲಯವೊಂದರಲ್ಲಿ ಪ್ರವೇಶ ಪರೀಕ್ಷೆ ಬರೆದು, ಸೀಟು ಪಡೆದು ಪತ್ರಿಕೋದ್ಯಮ ಅಧ್ಯನದಲ್ಲಿ ನಿರತನಾದೆ.
ಹೊಸಹೊಸ ಅನುಭವಗಳು....
ಬದುಕಿನ ಹೊಸಹೊಸ ಆಯಾಮಗಳು ಒಂದಾದಾಗಿ ಪರಿಚಯವಾಗತೊಡಗಿತು. ಭಿನ್ನ-ವಿಭಿನ್ನ ವರ್ಗದ ಸ್ನೇಹಿತರು... ಉಪನ್ಯಾಸಕರ ವಿಚಾರಾಧಾರೆಗಳು... ಆಹಾರ ಪದ್ಧತಿಗಳು... ನಡವಳಿಕೆಗಳು... ಬದುಕಿನ ಶೈಲಿಗಳು... ಹೀಗೆ ಎಲ್ಲವೂ ಹೊಸತಾಗಿ ಕಾಣತೊಡಗಿತು. ಸಾತ್ವಿಕ ಆಹಾರದ ವ್ಯಕ್ತಿಯಾಗಿ ಬೆಳೆದ ನನಗೆ ಸ್ನೇಹಿತರ ಮಾಂಸಾಹಾರದ ಪದ್ಧತಿ ಒಗ್ಗಿ ಬರಲಿಲ್ಲ. ಪ್ರತಿನಿತ್ಯ ಅವರಿಗೆ, ಕುರಿ-ಕೋಳಿ-ಮೀನುಗಳ ಮಾಂಸಾಹಾರಗಳು ಕಡ್ಡಾಯವಾಗಿ ಬೇಕಿತ್ತು! ಹಾಸ್ಟೆಲ್ ಸುತ್ತಮುತ್ತಲೇ ಇಂತಹ ಅಂಗಡಿಗಳಿದ್ದದ್ದು ಅವರಿಗೆ ವರದಾನವಾಗಿತ್ತು. ಆದರೆ ಸಸ್ಯಹಾರಿಯಾದ ನನಗೆ, ಹಾಸ್ಟೆಲ್ನ ತಿಳಿ ಸಾರಿನ ಊಟವೇ ಮೃಷ್ಟಾನ್ನವಾಗಿತ್ತು. ಉತ್ತಮ ಸಸ್ಯಹಾರದ ಹೊಟೆಲ್ನ್ನ ಊಟ ಬೇಕಾದರೆ 7ರೂ. ತೆತ್ತು ದೂರದ ಬಸ್ ಪ್ರಯಾಣ ಮಾಡಬೇಕಿತ್ತು!  ತಿಂಗಳಿಗೊಮ್ಮೊಮ್ಮೆ ನನ್ನೆಲ್ಲ ಸ್ನೇಹಿತರನ್ನು ಕರೆದುಕೊಂಡು ಅಲ್ಲಿಗೆ ಹೋಗಿ, ತೃಪ್ತಿಯಿಂದ ಊಟ ಮಾಡಿ ಬರುತ್ತಿದ್ದೆ!
ಕಾಲೇಜಿಗೆ ಸೇರುವ ಪೂರ್ವದಲ್ಲಿ ಹೆತ್ತವರು ಹೇಳಿದ್ದರು. ನಿನಗೆ ಎಷ್ಟು ಹಣ ಬೇಕಾದರೂ ಕೇಳು. ನಾವು ನೀಡುತ್ತೇವೆ. ನಿನ್ನ ಕಲಿಕೆಗೆ ಎಲ್ಲಿಯೂ ಕೊರತೆ ಮಾಡಿಕೊಳ್ಳಬೇಡ ಎಂದಿದ್ದರು. ಸ್ವಾಭಿಮಾನದ ಕಿಡಿಯಾದ ನಾನು, `ಕ್ಷಮಿಸಿ, ನನ್ನ ವಿದ್ಯಾಭ್ಯಾಸಕ್ಕೆ ನಾನೇ ಹಣ ಹೊಂದಿಸಿಕೊಳ್ಳುತ್ತೇನೆ. ಅವಶ್ಯಕತೆಯಿದ್ದಾಗ ನಿಮ್ಮಲ್ಲಿ ಕೇಳುತ್ತೇನೆ. ಆಗ ಖಂಡಿತ ನಾನು ಕೇಳಿದಷ್ಟು ಹಣ ನೀವು ಕೊಡಲೇಬೇಕು ಎಂದು ತಾಕೀತು ಹಾಕಿ ಸಮಾಧಾನ ಪಡಿಸಿದ್ದೆ. ಕಲಿಕೆಯ ಹಣಕ್ಕಾಗಿ ಬ್ಯಾಂಕ್ನಲ್ಲಿ ಶಿಕ್ಷಣ ಸಾಲ ಪಡೆದೆ.(ಈ ಶಿಕ್ಷಣ ಸಾಲ ಪಡೆದುಕೊಂಡಿದ್ದು ನನ್ನ ಬದುಕಿನ ದೊಡ್ಡ ಸಾಹಸಗಳಲ್ಲೊಂದು ಎನ್ನಬಹುದು!)
ಎರಡು ವರ್ಷದ ಸ್ನಾತಕೋತ್ತರ ಪತ್ರಿಕೋದ್ಯಮ ಪದವಿಯ ಕಾಲೇಜಿನ ಜೀವನಕ್ಕೆ ನಾನು ವ್ಯಯಿಸಿದ್ದ ಹಣ ಕೇವಲ 1,29,000 ರೂಪಾಯಿಗಳು. ನನ್ನ ಉಳಿದೆಲ್ಲ ಸ್ನೇಹಿತರು ಕನಿಷ್ಠವೆಂದರೂ ಬರೋಬ್ಬರಿ 2ಲಕ್ಷಕ್ಕಿಂತಲೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ! ಎಲ್ಲಿಯೂ ಊಟ-ತಿಂಡಿ-ಬಟ್ಟೆಗೆ ಮಾತ್ರ ಕಡಿಮೆ ಮಾಡಿಕೊಳ್ಳುತ್ತಿರಲಿಲ್ಲ. ಶಿಸ್ತುಬದ್ಧ ಜೀವನ ಅಳವಡಿಸಿಕೊಂಡಿದ್ದ ನಾನು, ಹೆಚ್ಚುಹೆಚ್ಚಾಗಿ ಫ್ಯಾಶನೇಬಲ್ ಬಟ್ಟೆಯನ್ನು ತೊಡುತ್ತಿದ್ದೆ. ಬಿಳಿ-ನೀಲಿ-ಕಪ್ಪು ಇಷ್ಟದ ಬಣ್ಣಗಳಾಗಿದ್ದು, ಅಂತಹ ಬಟ್ಟೆಯನ್ನೆ ಹೆಚ್ಚಾಗಿ ಖರೀದಿಸುತ್ತಿದ್ದೆ. ಅಪ್ಪ ಪ್ರತಿ ತಿಂಗಳು ನನ್ನ ಖರ್ಚಿಗೆಂದು 2ರಿಂದ 3ಸಾವಿರ ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ಹಾಕುತ್ತಿದ್ದರು. ಅವಶ್ಯಕತೆಯಿದ್ದಾಗ ಮಾತ್ರ ಆ ಹಣವನ್ನು ಬಳಸುತ್ತಿದ್ದು, ಬೇಕಾಬಿಟ್ಟಿಯಾಗಿ ಎಂದಿಗೂ ಹಾಳು ಮಾಡುತ್ತಿರಲಿಲ್ಲ.
ಸರಳಬದ್ಧ ಅಚ್ಚುಕಟ್ಟಾದ ನನ್ನ ಜೀವನ ಶೈಲಿ ನನ್ನ ಹೆತ್ತವರಿಗೆ, ಪಾಲಕರಿಗೆ ಅಭಿಮಾನವಾಗಿ ಕಾಣುತ್ತಿತ್ತು. `ನಮ್ಮಲ್ಲಿ ಇಷ್ಟೊಂದು ಹಣವಿದ್ದರೂ ನಮ್ಮ ಮಗ ನಮ್ಮನ್ನು ಆಶ್ರಯಿಸದೆ, ಸ್ವಾಭಿಮಾನದಿಂದ ಬದುಕು ಮುನ್ನಡೆಸುತ್ತಿದ್ದಾನಲ್ಲ ಎಂದು. ಪತ್ರಿಕೋದ್ಯಮ ಶಿಕ್ಷಣ ಮುಗಿಸಿ ವಾಪಸ್ಸು ಬರೋವಾಗ ನನ್ನ ಬ್ಯಾಂಕ್ ಖಾತೆಯಲ್ಲಿ 48,456 ರೂ.ಗಳಿತ್ತು. ನನ್ನದಲ್ಲದ ಆ ಹಣವನ್ನು ಮುಖ ಮುರಿತು ಅಪ್ಪನಿಗೆ ವಾಪಸ್ಸು ನೀಡುವಾದರೂ ಹೇಗೆ ಎಂದು ಚಿಂತಿಸುತ್ತಿದ್ದೆ...!
ಒಡಹುಟ್ಟಿದವಳಾ.....?
ಸ್ವಾಭಿಮಾನದಿಂದ ಶಿಕ್ಷಣ ಮುಗಿಸಿ ಉದ್ಯೋಗ ಹುಡುಕುತ್ತ ಬೆಂಗಳೂರೆಂಬ ಮಾಯಾನಗರಿಗೆ ಕಾಲಿಟ್ಟೆ! ಒಂದೆರಡು ತಿಂಗಳು ಸ್ನೇಹಿತರ ಜೊತೆ ಅಡ್ಡಾಡಿದೆ. ಅಲ್ಪಸ್ವಲ್ಪ ಬೆಂಗಳೂರಿನ ನಾಲ್ದೆಸೆಗಳನ್ನು ಪರಿಚಯಿಸಿಕೊಂಡೆ. ಆಗಲೇ ಕಣ್ಣಿಗೆ ಬಿದ್ದರು... ನಮ್ಮ ಚಿಂದಿ ಆಯುವ ಹುಡುಗರು! ಅವರ ಬದುಕು, ಜೀವನ, ಆಹಾರ ಎಲ್ಲವುಗಳ ಕುರಿತು ಸ್ವಲ್ಪ ಮಾಹಿತಿ ಸಂಗ್ರಹಿಸಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಅಂತರ್ಜಾಲ ತಡಕಾಡಿದೆ. ಅವರ ಬದುಕಿನ ಎಲ್ಲ ಮಗ್ಗಲುಗಳನ್ನು ಅಭ್ಯಸಿಸಿದೆ. ಇವರಿಗಾಗಿ ಏನಾದರೂ ಮಾಡಬೇಕಲ್ಲ ಎಂದು ಅಂತಃಕರಣ ಮಿಡಿಯುತ್ತಿತ್ತು. ಅದೇ ಸಂದರ್ಭಕ್ಕೆ `ಮೀನಾ' ಎಂಬ ಹೆಸರಿನ 7 ವರ್ಷದ ಚಿಂದಿ ಆಯುವ ಹುಡುಗಿಯೊಬ್ಬಳು ಎದುರಾದಳು. ಪ್ರೀತಿಯಿಂದ ಅವಳ ತಲೆ ನೇವರಿಸಿ, ಹತ್ತಿರ ಎಳೆದುಕೊಂಡು, ಯೋಗಕ್ಷೇಮ ವಿಚಾರಿಸಿದೆ. ಪ್ರೀತಿಯೆಂದರೇನು ಎಂದು ಜನ್ಮತಃ ನೋಡಿರದ ಅರಿತಿರದ ಆಕೆ, `ಪ್ರೀತಿಯ ಮಾತಿಗೆ, ಮಮತೆಯ ಸ್ಪರ್ಶಕ್ಕೆ' ಭಾವುಕಳಾಗಿ ಕಣ್ಣಂಚನ್ನು ಒದ್ದೆ ಮಾಡಿಕೊಂಡಳು. ತನ್ನ ನೆನಪಿನ ಬುತ್ತಿಯಲ್ಲಿರುವ ಘಟನೆಗಳ ಸರಮಾಲೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಳು. ಆ ಪುಟ್ಟ ಮಗುವಿನ ಮಾತಲ್ಲಿ ತಾನು ಏನಾದರೂ ಸಾಧಿಸಬೇಕೆಂಬ ಛಲ ಇದ್ದಂತೆ ಕಂಡಿತು. ಹೀಗೆ ಸುಮ್ಮನೆ, ಅವಳ ಗಲ್ಲವನ್ನು ಹಿಡಿದೆಳೆಯುತ್ತ, `ಪುಟ್ಟಾ... ಶಾಲೆಗೆ ಹೋಗುವ ಆಸೆ ಇದೆಯಾ?' ಎಂದು ಕೇಳಿದೆ.
ಅರೆಕ್ಷಣ ಮೌನವಾಗಿ, `ಹಾ... ನಾನು ಕೂಡಾ ಬಣ್ಣಬಣ್ಣದ ಅಂಗಿ ತೊಟ್ಟು ಶಾಲೆಗೆ ಹೋಗಬೇಕು ಅನ್ಸತ್ತೆ. ಆದರೆ.... ಅದೆಲ್ಲ ನಮಗೆಲ್ಲಿ?' ಎಂದು ತಲೆ ತಗ್ಗಿಸಿದಳು. ಮನಸ್ಸಲ್ಲಿ ಗಟ್ಟಿಯಾದ ನಿರ್ಧಾರವೊಂದನ್ನು ಮಾಡಿಕೊಂಡು ಅವಳ ವಾಸಸ್ಥಾನದ ವಿಳಾಸ ಪಡೆದು, ನಾಳೆ ಸಿಗುತ್ತೇನೆ ಎಂದು ಅಲ್ಲಿಂದ ಕಾಲ್ಕಿತ್ತೆ.
ಅಲ್ಲಿಂದ ಸಮಾಜ ಕಲ್ಯಾಣ ಇಲಾಖೆಗೆ ಭೆಟ್ಟಿ ನೀಡಿ, ಚಿಂದಿ ಆಯುವ ಮಕ್ಕಳ ಕಾನೂನಿನ ಬಗ್ಗೆ ಅಗತ್ಯ ಮಾಹಿತಿ ಸಂಗ್ರಹಿಸಿದೆ. ಆಕೆಯ ಶಿಕ್ಷಣಕ್ಕೆ ಯಾವೆಲ್ಲ ಕ್ರಮ ಕೈಗೊಳ್ಳಬಹುದೆಂದು ಅಲ್ಲಿಯ ಅಧಿಕಾರಿ ಶಿವರುದ್ರಪ್ಪ ಎಂ.ಎಸ್.ರ ಜೊತೆ ಚರ್ಚಿಸಿದೆ. ಅಧಿಕಾರಿ ಹಾಗೂ ಪೊಲೀಸ್ ಸಹಾಯದೊಂದಿಗೆ ಮೀನಾ ವಾಸಿಸುವ ಸ್ಥಳಕ್ಕೆ ಧಾವಿಸಿ, ಆಕೆಯನ್ನು ಪತ್ತೆ ಹಚ್ಚಿದೆ. ಆಕೆ ಅಲ್ಲಿಯೇ ತನ್ನ ಬಳಗದವರೊಂದಿಗೆ ಕೂಡಿಕೊಂಡು ಕಸವನ್ನು ಬೇರ್ಪಡಿಸುತ್ತಿಳು. ಅವಳ ತಂದೆಯನ್ನು ಪರಿಚಯಿಸಿಕೊಂಡು, ವಿಷಯವನ್ನು ಅರ್ಥವಾಗುವ ಹಾಗೆ ತಿಳಿ ಹೇಳಿದೆವು. ಒಲ್ಲದ ಮನಸ್ಸಿನಿಂದ ಆತ ಆಕೆಯನ್ನು ನಮ್ಮ ಜೊತೆ ಕಳುಹಿಸಿಕೊಡಲು ಒಪ್ಪಿಕೊಂಡ. ಒಂದೆರಡು ದಿನ ಬಿಟ್ಟು ಆಕೆಯನ್ನು ಕರೆದುಕೊಂಡು ಬಂದೆವು. ಅವಳು ಅಳುತ್ತಲೇ ನಮ್ಮ ಜೊತೆ ಭಾರದ ಹೆಜ್ಜೆಯಿಡುತ್ತ ಹಿಂಬಾಲಿದಳು.
ಕಣ್ಣಾಲಿಗಳು ತೋಯ್ದವು...!
ಹೊಸ ಜವಾಬ್ದಾರಿಯನ್ನು ಮೈಲೇಲೆ ಎಳೆದುಕೊಂಡ ನಾನು, ಅವಳನ್ನು ಅಲ್ಲಿಯ ಖಾಸಗಿ ಶಾಲೆಯೊಂದರಲ್ಲಿ ಒಂದನೇ ತರಗತಿಗೆ ಸೇರಿಸಿದೆ. ತಂದೆಯ ಸಮ್ಮುಖದಲ್ಲಿಯೇ ಆಕೆಯ ಪ್ರವೇಶಾತಿಯನ್ನು ಮಾಡಿಸಲಾಯಿತು. ಅವಳ ಒಂದು ವರ್ಷದ ಶಿಕ್ಷಣಕ್ಕೆ ಒಟ್ಟಾರೆ 15ಸಾವಿರ ರೂ.ಗಳನ್ನು ಮುಂಗಡವಾಗಿ ಕಟ್ಟಲಾಯಿತು. ಅವಳು ಎಲ್ಲಿಯವರೆಗೆ ಅಭ್ಯಸಿಸಲು ಆಸಕ್ತಿ ಹೊಂದಿರುತ್ತಾಳೋ ಅಲ್ಲಿಯವರೆಗೆ ಅವಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ನಾನೇ ನಿಭಾಯಿಸುವುದಾಗಿ ಅಲಿಖಿತ ಒಪ್ಪಂದ ಮಾಡಿಕೊಂಡೆ. ಆ ಕೂಡಲೇ ಅವಳ ಮತ್ತು ಶಾಲೆಯ ಹೆಸರಿನಲ್ಲಿ ಸೇರಿ ಒಂದು ಬ್ಯಾಂಕ್ ಖಾತೆ ತೆರದು, 30ಸಾವಿರ ರೂಪಾಯಿ ಅದರಲ್ಲಿ ಡಿಪೋಸಿಟ್ ಮಾಡಿದೆ! ಹಾಗೂ ಆಕೆಗೆ ಇಷ್ಟವಾದ ಕೆಲವು ಬಟ್ಟೆಗಳನ್ನು ಅವಳ ಜೊತೆಯೇ ಹೋಗಿ ಕೊಡಿಸಿದೆ.
ಇದೆಲ್ಲವನ್ನು ಮೌನವಾಗಿ ನೊಡುತ್ತಿದ್ದ ಅವಳ ತಂದೆಯ ಕಣ್ಣಲ್ಲಿ ನೀರು ಒಂದೆ ಸಮನೆ ಧಾರಕಾರವಾಗಿ ಇಳಿಯುತ್ತಿತ್ತು. `ಅವಳು ನನ್ನ ಒಡಹುಟ್ಟಿದವಳು. ಇದರಲ್ಲಿ ವಿಶೇಷವೇನೂ ಇಲ್ಲ' ಎಂದು, ಆತನ ಕಣ್ಣೀರನ್ನು ಒರೆಸಿದೆ. ನನ್ನ ನಿರೀಕ್ಷೆ ಮೀರಿ ಒಮ್ಮೆಲೆ ಆತ ನನ್ನ ಪಾದಕ್ಕೆರಗಲು ಮುಂದಾದ! ಆತನ ಕೈ ಹಿಡಿದೆತ್ತಿ, ನಾನೇ ಆತನಿಗೆ ನಮಸ್ಕರಿಸಿ... `ಇಂಥಹ ಪುಣ್ಯ ಕಾರ್ಯ ಮಾಡಲು ಅವಕಾಶ ಮಾಡಿಕೊಟ್ಟ ನಿಮಗೆ ನಾನು ನಮಸ್ಕರಿಸಬೇಕು' ಎಂದೆ...! ಈ ಘಟನಾವಳಿಗಳನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವರುದ್ರಪ್ಪ, ನನ್ನ ಸ್ನೇಹಿತರು ಹಾಗೂ ಪೊಲೀಸ್ ಮೂಕರಾಗಿ ನೋಡುತ್ತ ತಮ್ಮ ಕಣ್ಣಾಲಿಗಳನ್ನು ತೇವ ಮಾಡಿಕೊಂಡಿದ್ದರು.
ನನ್ನ ದೈವ ಸ್ವರೂಪಿ ಹೆತ್ತವರು ನನ್ನ ಶಿಕ್ಷಣಕ್ಕೆ ನೀಡಿದ ಹಣವನ್ನು ಈಕೆಯ ಶಿಕ್ಷಣಕ್ಕೆ ನೀಡುವುದರ ಮೂಲಕ ಸಾರ್ಥಕ ಪಡಿಸಿದೆ.
ದೂರವಾಣಿ ಮೂಲಕ ಅಮ್ಮನಿಗೆ ತಿಳಿಸಿದೆ. `ಮಗ ಯಾವ ನಿಧರ್ಾರ ಕೈಗೊಂಡರೂ ಅದು ಸರಿಯಾಗಿಯೇ ಇರುತ್ತವೆ' ಎಂಬ ಬಲವಾದ ನಂಬಿಕೆ ನನ್ನ ದೇವರುಗಳದು. ವಿಷಯ ಕಿವಿಗೆ ಬಿದ್ದಿದ್ದೆ ತಡ, `ಆ ಪುಟ್ಟಿಯನ್ನು ಒಂದು ಬಾರಿ ಕರೆದುಕೊಂಡು ಬಾ ಎಂದರು. ಅವಳಿಗೆ ಬಟ್ಟೆ, ಪುಸ್ತಕ, ಪಠ್ಯಗಳನ್ನು ಕೊಡಿಸಿದ್ದೀಯಾ? ಹಣ ಬೇಕಾದರೆ ಹೇಳು, ಬ್ಯಾಂಕಿಗೆ ಹಾಕುತ್ತೇವೆ' ಎಂದರು. ನಿಸ್ವಾರ್ಥ ಬದುಕಿಗೆ ಇಷ್ಟು ಸಾಕಲ್ಲವ ಹೆತ್ತವರ ಪ್ರೋತ್ಸಾಹ....! ಇಂತವರ ಮಗನಾಗಿ ಜನ್ಮ ತಳೆದ ನಾನು ನಿಜಕ್ಕೂ ಪುಣ್ಯವಂತ.
ಗೆಲುವಿನ ಜೊತೆ `ಪ್ರಾರ್ಥನಾ...!'
ಆ ಪುಟ್ಟ ಮೀನಾ ಈಗ ಮೂರನೇ ತರಗತಿಯಲ್ಲಿ ಅಭ್ಯಸಿಸುತ್ತಿದ್ದು, ಬೆಂಗಳೂರಿಗೆ ಹೋದಾಗಲೆಲ್ಲ ಆಕೆಯ ಜೊತೆ ಒಂದರ್ಧ ದಿನ ಅಡ್ಡಾಡಿಕೊಂಡು, ಅವಳಿಗಿಷ್ಟವಾದ ಬಟ್ಟೆ, ತಿಂಡಿ ಕೊಡಿಸಿ, ಮುದ್ದಿಸಿ ಬರುತ್ತೇನೆ. ಹಾಗೆ ಆಕೆಯ ಶಿಕ್ಷಣಕ್ಕೆ ಬೇಕಾದ ಎಲ್ಲ ಖರ್ಚನ್ನು ಸದ್ಯಕ್ಕೆ ನಿಭಾಯಿಸುತ್ತಿದ್ದೇನೆ. ಅಗತ್ಯಕ್ಕೆ ತಕ್ಕ ಸಲಹೆ ಸೂಚನೆ ನೀಡುತ್ತ ನನಗೆ ಬೆನ್ನೆಲುಬಾಗಿ ನಿಂತಿದ್ದು, ಬೆಂಗಳೂರಿನಲ್ಲಿಯೇ ಉದ್ಯೋಗ ಮಾಡುತ್ತಿರುವ ನನ್ನ ಪ್ರಾಣ ಸ್ನೇಹಿತೆ, ಸಹೋದರಿ ಪ್ರಾರ್ಥನಾ! ನನ್ನೆಲ್ಲ ಗೆಲುವಿನ ಹಿಂದೆ ಅವಳಿದ್ದಾಳೆ. ಅವಳ ಶ್ರಮವಿದೆ. ಹಾರೈಕೆಯಿದೆ. ನಿಷ್ಕಲ್ಮಶ ಪ್ರಾರ್ಥನೆಯಿದೆ.
ಹೀಗೆ ಕಾಲ ಚಕ್ರ ಉರುಳುತ್ತಿತ್ತು......................................................................
ಮುಂದೆ...?

ಕಾಮೆಂಟ್‌ಗಳಿಲ್ಲ: