ಶನಿವಾರ, ಡಿಸೆಂಬರ್ 28, 2013

ಪ್ರೀತಿ ಹುಟ್ಟುವುದು ಕಣ್ಣಿನಿಂದ, ಆದರೆ......!

ಪ್ರೀತಿ ನಮಗೆ ಬೇಕು ಅಂದಾಗ ಹುಟ್ಟುವುದಿಲ್ಲ. ಹಾಗೆ, ನಾನು ಪ್ರೀತಿಸಲೇ ಬೇಕು ಎಂದು ಹುಡುಕುತಾ ಹುಡುಕುತಾ ಹೋದರೆ ಸಿಗುವ ವಸ್ತುವು ಅದಲ್ಲ. ಸಿಗದೆ ಇದ್ದಾಗಲೂ ಯಾರೋ ಸುಂದರವಿರುವ ಹುಡುಗ/ಹುಡುಗಿಯರನ್ನು ಕಂಡು ಅವರು ನಮಗೆ ಇಷ್ಟ ಆಗಿ, ಇವರೆ ಸರಿ ಎಂದು ಪ್ರಸ್ತಾಪ ಮಾಡಿ `ನನ್ನನ್ನು ಪ್ರೀತಿಸು, ನಿನ್ನನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲಾ ಎಂದು' ಕೇಳಿಕೊಳ್ಳುವುದು ನಿಜವಾದ ಪ್ರೀತಿಯಲ್ಲ.
'ನಿಜವಾದ ಪ್ರೀತಿ' ಹುಟ್ಟೋದೆ ಒಂದು 'ವಿಸ್ಮಯ'. ಅದು ಹುಟ್ಟೊದು ಕಣ್ಣಿಂದ; ಅಕಸ್ಮಾತಾಗಿ ನಮ್ಮ ನೋಟ ಮತ್ಯಾರದೊ ನೋಟ ಆಗಿ ಮನಸ್ಸಿಗೆ ತಾಗಿ ಒಂದು ಕ್ಷಣ ಅಂತರಾಳದಲ್ಲಿ ನಡುಕವಾಗಿ, ಚಿತ್ತ ಚಂಚಲವಾಗಿ, ಮನಸ್ಸು ಶಾಂತವಾಗಿ, ಮತ್ತೊಂದು ಅರಿಯದ ಲೋಕದಲ್ಲಿ ತೇಲಾಡಿದಂತ ಅನುಭವವಾಗುತ್ತದೆ. ಜೊತೆಗೆ ನಮ್ಮ ನೋಟಕ್ಕೆ ನೋಟ ಪರಸ್ಪರ ಢಿಕ್ಕಿಯಾಗಿ, ನಮಗಿಷ್ಟದ ಮೊಗದಲ್ಲಿ ಸೂಕ್ಷ್ಮ ಬದಲಾವಣೆ, ಕಣ್ಣಿನಲ್ಲಿ ಚಂಚಲತೆ ಮತ್ತು ನಮ್ಮ ನೋಟಕ್ಕೆ ಸಿಕ್ಕಿಹಾಕಿಕೊಂಡೆನೆಂಬ ಭಾವದಿಂದ ತಪ್ಪಿಸಿಕೊಂಡು ಹೋಗುವ ಆತುರ ಉಂಟಾಗುತ್ತದೆ. ಈ ಅನುಭವ ಮತ್ತು ಆತುರ ನಮಗೂ ಆಗುತ್ತದೆ. ಈ ರೀತಿಯಲ್ಲಿ ಉಂಟಾಗುವ ಮಧುರ ಕ್ಷಣವೆ 'ನಿಜವಾದ ಪ್ರೀತಿಯ ಉಗಮ'.
ಹೀಗೆ ಹುಟ್ಟಿದ ಪ್ರೀತಿ ಮತ್ತೆ ಮತ್ತೆ ಅನಿರೀಕ್ಷಿತವಾಗಿ ಎದುರಾಗುತ್ತದೆ. ನಮಗೆ ತಿಳಿಯದೆ ನಮ್ಮ ಮನಸ್ಸು ಪ್ರೀತಿಯ ಸನಿಹದಲ್ಲೆ ಇರಲು ಚಡಪಡಿಸುತ್ತದೆ. ಎದುರು ಬರಲು ಭಯವಾಗುತ್ತದೆ. ದೂರವಿರಲು ಬೇಸರವಾಗುತ್ತದೆ. ಮಾತನಾಡಬೇಕೆನಿಸಿದರು ಮಾತನಾಡಲು ಸಂಕೋಚವಾಗಿ ನಾಲಿಗೆ ತೊದಲುತ್ತದೆ. ಇಷ್ಟಾದರು ಮತ್ತೆ ಮತ್ತೆ ನೋಡಬೇಕು, ಮಾತನಾಡಬೇಕು ಅನಿಸುತ್ತಲೇ ಇರುತ್ತದೆ.
ಹೀಗೆ ಮನಸ್ಸು ಮನಸ್ಸು ಒಂದಾಗಿ, ಕನಸು ಕಲ್ಪನೆಗಳಲ್ಲಿ ಒಂದಾಗಿ `ಪ್ರೀತಿ ಭಾವ' ನುಡಿಯಾಗಿ `ನಾನು ನಿನ್ನನ್ನು ಪ್ರೀತಿಸುತ್ತೇನೆ' ಅಂತಾ ಹೃದಯದಿಂದ ಹೊರಬರುವ ಉಸಿರಿಗೆ ಪ್ರತಿಯಾಗಿ `ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂಬ ಉಸಿರು ಒಂದಾಗುತ್ತದೆ. ಕಣ್ಣಿಂದ ಹುಟ್ಟಿದ ಪ್ರೀತಿ ಎರಡು ಹೃದಯಗಳನ್ನು ಒಂದಾಗಿಸಿ ಪ್ರೀತಿಯನ್ನು ಗೆಲ್ಲಿಸುತ್ತದೆ. ಹೀಗಿರುವಾಗ....
ಸಾಮಾನ್ಯವಾಗಿ ಎಲ್ಲರಿಗೂ ಪ್ರೀತಿಯನ್ನು ಹುಡುಕುವ ಆತುರ. ಹುಡುಕಿ... ಅದು ತಪ್ಪಲ್ಲ. ಪ್ರೀತಿ ಅನ್ನೋದು ಸುಂದರ ಭಾವನೆಗಳ ವಿಲಾಸ. ಹಾಗೆಯೇ ಪ್ರೀತಿ ಕಣ್ಣಿಂದ ಹುಟ್ಟುತ್ತದೆ ಎಂದು, ಕಣ್ಣನ್ನೆ ನೋಡುತ್ತಾ ಹುಡುಕುವುದು ತಪ್ಪು. ನೋಟಕ್ಕೆ ನೋಟ ಢಿಕ್ಕಿ ಆಗೋದು ಅರಿವಿಲ್ಲದೆ! ಪ್ರೀತಿ ಹುಡುಕುವ ಗುಂಗಿನಲ್ಲಿ ಸೌಂದರ್ಯ, ಮೋಹ, ಆಸೆಗೆ ಬಲಿಯಾಗಿ ನಿಜವಾದ ಪ್ರೀತಿ ಇರದೆ ಯಾರನ್ನೋ ಇಷ್ಟ ಪಟ್ಟು ಮೋಸ ಹೋಗಿ ಬದುಕನ್ನು ಹಾಳು ಮಾಡಿಕೊಳ್ಳಬಾರದು. ಪ್ರೀತಿ ಬದುಕಿಗೆ ಸ್ಪೂತರ್ಿಯಾಗಿ ಉನ್ನತ ಮಟ್ಟಕ್ಕೆ ಒಯ್ಯಬೇಕೆ ಹೊರತು ಪ್ರೀತಿಯಿಂದ ಬದುಕೇ ಅವನತಿಯಾಗಬಾರದು. 

ಶುಕ್ರವಾರ, ಡಿಸೆಂಬರ್ 27, 2013

ನಾನು... 'ಚಿಂದಿ' ಆಯುವ ಹುಡುಗಿ!

ಚಿಂದಿಯಾಯಿತಮ್ಮ ಈ ಬದುಕು ಚಿಂದಿಯಾಯಿತಮ್ಮ
ಓದು-ಬರಹ ಇಲ್ಲದ ಬಾಳು ಕುಂದಿಹೋಯಿತಮ್ಮ
ದುಡಿಮೆಯಲ್ಲಿಯೇ ಈ ಬದುಕು ಬಂಧಿಯಾಯಿತಮ್ಮ
ಹಕ್ಕಿಯ ಹಾಗೆ ಹಾರುವ ಆಸೆ ಕಮರಿ ಹೋಯಿತಮ್ಮ....
"ನಾನು ಮೀನಾ, 11 ವರ್ಷ ಆಗಿರಬಹುದು. ಅಪ್ಪ-ಅಮ್ಮ ಯಾರು ಅಂತ ಗೊತ್ತಿಲ್ಲ. ಚಿಂದಿ ಆಯುವುದು ನನ್ನ ನಿತ್ಯ ಕಾಯಕ. ಕೆಲಸದ ಮಧ್ಯೆ ಮಧ್ಯೆ ಸಾರ್ವಜನಿಕ ಪಾಕರ್್ಗಳಲ್ಲಿ ಜೋಕಾಲಿಯಾಡುತ್ತ ದಿನ ಕಳೆಯುತ್ತೇನೆ. ಕೆಳಗಿನಿಂದ ಮೇಲಕ್ಕೇರುತ್ತ ಹೋಗುವುದು ಎಷ್ಟು ಮೋಜೆನಿಸುತ್ತದೆ ಗೊತ್ತಾ...? ಆದರೆ, ಇದು ಆಟಕ್ಕೆ ಮಾತ್ರ ಸೀಮಿತ. ಬದುಕೆನ್ನುವುದು ಜೋಕಾಲಿಯಾಗಲಿಲ್ಲ; ಜಾರು ಬಂಡಿಯಷ್ಟೆ! ದಿನ-ಪ್ರತಿದಿನ ಈ ಬದುಕು ನನ್ನನ್ನು ಪ್ರಪಾತಕ್ಕೆ ಇಳಿಸುತ್ತಲೇ ಹೋಯಿತು. ಅಲ್ಲಿಂದ ಮೇಲೇಳೊ ಆಸೆ ಇದ್ದರೂ... ಉತ್ಸಾಹ ಇಲ್ಲ. ಕಾರಣ ನನಗೆ ಗೊತ್ತು, ಅದು ನಿಲುಕದ ನಕ್ಷತ್ರ... ಬತ್ತಿ ಹೋದ ಚಿಲುಮೆ.
ಬೀದಿಯಲ್ಲಿ ಅಲೆಯುವೆನು ಕಸವ ಹುಡುಕಿ ಹುಡುಕಿ
ರಟ್ಟು, ಪ್ಲಾಸ್ಟಿಕ್, ಕಬ್ಬಿಣ ಆಯುವೆನು ಕೆದಕಿ ಕೆದಕಿ...
ನನ್ನ ಹಾಗೆ ಚಿಂದಿ ಆಯ್ದು ಭಿಕ್ಷೆ ಬೇಡುವವರೆ ನನ್ನ ಸ್ನೇಹಿತರು, ಬಂಧುಗಳು ಎಲ್ಲವೂ. ನನ್ನದೊಂದು ಕಥೆಯಾದರೆ ನನ್ನ ಸ್ನೇಹಿತೆ ಗಂಗಾಳದು ಇನ್ನೊಂದು ಕಥೆ. ಅವಳು ತನ್ನ ತಮ್ಮನನ್ನು ಕಂಕುಳಲ್ಲಿ ಕಟ್ಟಿಕೊಂಡೆ ಓಡಾಡಬೇಕು. ನಾನು ಜೋಕಾಲಿ ಆಡುವಾಗ, ಅವಳ ಕಣ್ಣಂಚಿನಲಿ ಜಿನುಗುವ ನೀರು...! ನನಗೆ ಜೋಕಾಲಿ ಆಡಲಾದರೂ ಸ್ವಾತಂತ್ರ್ಯವಿದೆ, ಸುಖವಿದೆ. ಅವಳು ಆಡಲೆಂದು ಕೂತಾಗ ಅವಳ ಪುಟ್ಟ ತಮ್ಮ ಜೋಕಾಲಿಯನ್ನು ಹಿಡಿದು ನಿಂತಿರುತ್ತಾನೆ. ಈ ಕಡೆ ಜೋಕಾಲಿ ತೂಗುವ ಹಾಗೂ ಇಲ್ಲ, ತಮ್ಮನನ್ನು ಕುಳ್ಳಿರಿಸಿಕೊಂಡು ಆಡುವ ಹಾಗೂ ಇಲ್ಲ. ಯಾಕೆಂದರೆ ಅವನೆಲ್ಲಿಯಾದರೂ ಬಿದ್ದು ಹೋದರೆಂಬ ಭಯ. ಹಾಗೆ ಅವಳ ದಿನವೆಲ್ಲ ಚಿಂದಿ ಆಯುವುದರಲ್ಲಿಯೆ, ತಮ್ಮನ ಕಾಪಿಡುವುದರಲ್ಲಿಯೆ ಕಳೆದು ಹೋಗುತ್ತದೆ. ಹೆಗಲಲ್ಲೊಂದು ಚೀಲ, ಬಗಲಲ್ಲೊಂದು ಕೂಸು, ಮಗ್ಗಲುಗಳೆರಡು ನಗ್ಗಿಹೋಗಿವೆ. ತೊಗಲೆಂಬುದು ದೊಗಲಾಗಿದೆ...
ನಮಗೆ ದಿಕ್ಕು, ದೆಸೆ, ಮನೆ-ಮಠ ಎಂಬುದಿಲ್ಲ. ಹಾದಿ ಬೀದೆಯೇ ವಾಸಸ್ಥಾನ. ಗಿಡ-ಮರಗಳ ನೆರಳೆ ಆಶ್ರಯ ತಾಣ. ಶಾಲೆ-ಮಂದಿರಗಳೆ ಗುಡಿಸಲುಗಳು. ಒಮ್ಮೊಮ್ಮೆ ಆಕಾಶವೆ ಹೊದಿಕೆ! ನಮ್ಮಲ್ಲಿ ಕೆಲವರಿಗೆ ಅಪ್ಪ-ಅಮ್ಮರಿದ್ದಾರೆ. ಬಹುತೇಕರಿಗೆ ಆ `ಬಂಧ'ದ ಅರ್ಥವೇ ತಿಳಿದಿಲ್ಲ. ಜೀವನ ನಿರ್ವಹಣೆಗೆ ಈ ಚಿಂದಿ ಆಯೋ ಕಾಯಕ. ಅದನ್ನು ಬಿಟ್ಟರೆ ಬೇರೆ ಕೆಲಸ ತಿಳಿದಿಲ್ಲ.
ಬೀದಿಯುದ್ದಕ್ಕೂ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ, ಬೇಡೆವೆಂದು ಬೀಸಾಕಿದ ಅನುಪಯುಕ್ತ ವಸ್ತುಗಳಲ್ಲಿ, ತ್ಯಾಜ್ಯಗಳಲ್ಲಿ ಹಾಲಿನ ಕೊಟ್ಟೆ, ರಟ್ಟು, ತಗಡಿನ ಚೂರು ಇನ್ನಿತರ ವಸ್ತುಗಳನ್ನು ಹೆಕ್ಕುತ್ತೇವೆ. ಅದನ್ನು ಮಾರಿ ಅಂದಿನ ಬದುಕನ್ನು ದೂಡುತ್ತೇವೆ. ಒಂದರ್ಥದಲ್ಲಿ ಬೇಡೆವೆಂದು ಬೀಸಾಕಿದ ಕಸಗಳಲ್ಲಿ ಬದುಕನ್ನು ಕಾಣುವವರು ನಾವು... ನನಸಾಗದ ಕನಸನ್ನು ಹೆಣೆಯುತ್ತ ಸಂಭ್ರಮಿಸುವವರು ನಾವು... ಇಲ್ಲದ್ದರಲ್ಲಿ ಇದ್ದದ್ದನ್ನು ಹುಡುಕುವವರು ನಾವು...
ತಿಪ್ಪೆಯ ಕಸವನ್ನು ಹುಡುಕುತ್ತ, ಹುಡುಕುತ್ತ ಅಲೆಮಾರಿಯ ಹಾಗೆ ಎಲ್ಲೆಲ್ಲಿಗೋ ಹೋಗುತ್ತೇವೆ. ಗುರಿಯಿಲ್ಲದ ಜೀವನ ಸಾಗಿಸುವ ನಮಗೆ ನಾಳೆಯ ಚಿಂತೆಯಿಲ್ಲ. ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ, ಜನವಸತಿ ಹೆಚ್ಚಿರುವ ನಗರ ಪ್ರದೇಶಗಳಲ್ಲಿ ನಾವು ಹೆಚ್ಚಾಗಿ ಕಾಣ ಸಿಗುತ್ತೇವೆ. ಚರಂಡಿ, ಕೊಳಕು ಪ್ರದೇಶವೆ ನಮ್ಮ ಕಾರ್ಯ ಕ್ಷೇತ್ರವಾಗಿರುವದರಿಂದ ಕೊಳಕಾಗಿ ಕಾಣುತ್ತೇವೆ. ಇದರಿಂದ ಬಹುತೇಕರು ನಮ್ಮನ್ನು ಕಂಡರೆ ದೂರ ಸರಿಯುತ್ತಾರೆ. ಅದೂ ಸಹಜ ಬಿಡಿ. ನಮ್ಮಗಳ ವೇಷ ಅವರ ಮನಸ್ಸಿಗೆ ಸರಿ ಹೊಂದುವಂತದಲ್ಲ. ಕೊಳಕು ಬಟ್ಟೆ, ಹರಿದ ಅಂಗಿ, ಕೃಶ ಕಾಯ, ಎಣ್ಣೆ ಕಾಣದ ತಲೆ, ಬಾಚಣಿಗೆ ನೋಡದ ಕೂದಲು, ಸ್ನಾನವಿಲ್ಲದ ದೇಹ, ಗಬ್ಬೆದ್ದು ನಾರುತ್ತಿರುವ ಮೈ... ಹೀಗೆ ಅನೇಕ ಕುಂದುಗಳು ನಮ್ಮನ್ನು ಬಿಗಿದಪ್ಪಿವೆ.
ಕಣ್ಣಂಚಿನಲ್ಲಿದ್ದ ಕನಸುಗಳು ಕಸದಲ್ಲಿ ಕಸವಾಗಿ ಹೋಗಿವೆ. ಒಂದೇ ತರದ ಸಮವಸ್ತ್ರ ತೊಟ್ಟು ಕುಣಿಯುತ್ತ, ನಲಿಯುತ್ತ ಶಾಲೆಗೆ ಓಡುವ ಮಕ್ಕಳನ್ನು ಕಂಡಾಗ ನಮ್ಮಲ್ಲಿ ಅಸೂಯೆ ಹುಟ್ಟುವುದು ಸಹಜವಲ್ಲವೇ? ಯಾವ ತಪ್ಪಿಗಾಗಿ ನಮಗೆ ಈ ಶಿಕ್ಷೆ? ನಮ್ಮೆಲ್ಲ ಕಷ್ಟ-ಕಾರ್ಪಣ್ಯಗಳು, ನೋವುಗಳು ಯಾರಿಗೆ ತಾನೆ ಅರ್ಥವಾದೀತು? ಯಾರಲ್ಲಿ ಹೇಳಿಕೊಂಡು ಮನಸ್ಸಿನ ಭಾರ ಇಳಿಸಿಕೊಳ್ಳುವುದು? ಹಿಂದು-ಮುಂದಿಲ್ಲದ ನಮಗೆ ಬಡತನ ಎಂಬುದು ಬೆನ್ನಿಗಂಟಿಕೊಂಡು ಬಂದ ಶಾಪವಾಗಿದೆ. ಒಮ್ಮೊಮ್ಮೆ ಯಾವ್ಯಾವುದೋ ಕಾರಣಕ್ಕೆ ಒಬ್ಬರನ್ನೊಬ್ಬರು ಕಿತ್ತಾಡಿಕೊಂಡು ಜೋರಾಗಿ ಅಳುತ್ತೇವೆ. ಆಗ ನಮ್ಮನ್ನು ಯಾರೂ ಕೇಳುವುದಿಲ್ಲ.. ಸಂತೈಸುವುದಿಲ್ಲ.. ಮರುಗುವುದಿಲ್ಲ.. ನಾವೇ ನಮಗೆ ಅಪ್ಪ, ಅಮ್ಮ. ಅಮ್ಮನ `ಮಮತೆಯ ಮಡಿಲು... ಅಪ್ಪನ ಬೆಚ್ಚನೆ ಆಸರೆ...' ಎರಡನ್ನು ಕಾಣದ, ನೋಡದ ನತದೃಷ್ಟರು, ಅನಾಥರು.
ನಮ್ಮ ಜೀವನದ ಏಕೈಕ ಗುರಿ `ಒಪ್ಪತ್ತಿನ ಗಂಜಿ..!' ತುತ್ತಿನ ಚೀಲ ತುಂಬಿಸಲು ಅನಿವಾರ್ಯವಾಗಿ ಚಿಂದಿ ಆಯಬೇಕಾಗಿದೆ. ಕೆಲವೊಮ್ಮೆ ಸಂಬಂಧಗಳ ಅರ್ಥ ಗೊತ್ತಿಲ್ಲದ ನಾವು, ಮನುಷ್ಯ ರೂಪದ ಮೃಗಗಳೆ? ಎಂದೆನಿಸುತ್ತವೆ. ನಮ್ಮಯ ಬದುಕು, ಶೈಲಿ, ಆಚಾರ, ವಿಚಾರ ಎಲ್ಲವೂ ಭಿನ್ನ-ವಿಭಿನ್ನ. ನಾವು ಪಾರ್ಕಲ್ಲೋ.. ಬೀದಿಯಲ್ಲೂ.. ಎಲ್ಲೆಂದರಲ್ಲಿ ಮಲಗಿ ನಿದ್ರಿಸುತ್ತೇವೆ. ನಿದ್ದೆ ಎಂಬುದು ದೇವರು ಕೊಟ್ಟ ವರ. ಅದರಲ್ಲಷ್ಟೆ ನಾವು `ಆಗರ್ಭ ಶ್ರೀಮಂತ'ರು!" ಎಂದು ಕಣ್ಣರಳಿಸುತ್ತ, ಅಲ್ಲೇ ಪಕ್ಕದ ಚರಂಡಿಯಲ್ಲಿ ಬಿದ್ದ ಪ್ಲಾಸ್ಟಿಕ್ ಆಯಲು ಹೊರಟಳು.
ಇದು ಚಿಂದಿ ಆಯೋ ಮುಗ್ಧ ಬಾಲೆಯ ಮನದಾಳದ ಮಾತುಗಳು. ಅವಳ ಮಾತಲ್ಲಿ ನೋವಿದೆ, ನಲಿವಿದೆ.. ಕಂಡೂ ಕಾಣದ ಕನಸಿದೆ. ನಗರ ಪ್ರದೇಶದ ಕೊಳಚೆಯಲ್ಲಿ, ಚರಂಡಿಗಳಲ್ಲಿ ಕಂಡು ಬರುವ ಇವರು ಪ್ರಜ್ಞಾವಂತರ ಸೋಗಿನಲ್ಲಿರುವ ನಮಗೆ ಹೇಸಿಗೆ ಹುಟ್ಟಿಸುತ್ತಾರೆ..? `ಅಸಹ್ಯ.. ಹೊಲಸು ಸ್ಥಳಗಳಲ್ಲಿ ಓಡಾಡುತ್ತ, ನಿರುಪಯುಕ್ತ ವಸ್ತುಗಳನ್ನು ಹೆಕ್ಕುತ್ತಾರಲ್ಲ' ಎಂದು. ಹಾಗೆ ಮಾಡಿದರೆ ಮಾತ್ರ ಅವರ ತುತ್ತಿನ ಚೀಲ ತುಂಬುವುದು ಎಂಬ ಸಾಮಾನ್ಯ ಜ್ಞಾನ ನಮ್ಮಲ್ಲಿಲ್ಲ. ಹಿಂಬಾಲಿಸಿಕೊಂಡು ಬಂದ ಬಡತನ ಅವರನ್ನು ಹಿಂಡಿ, ಹಿಪ್ಪಿ ಮಾಡಿ ತೇಗಿ ಬಿಡುತ್ತಿವೆ. ಸುಂದರ ಕನಸನ್ನು ಕಟ್ಟಿಕೊಂಡು ಆಡಿ ನಲಿಯಬೇಕಾದ ವಯಸ್ಸಲ್ಲಿ ಹಲವು ಭಾರಗಳನ್ನು ಹೊತ್ತು ಸಾಗಬೇಕಾದ ಶೋಚನೀಯ ಸ್ಥಿತಿ.
ಪ್ರಪಂಚ ಅರಿಯದ ಪುಟ್ಟ ಕಂದಮ್ಮಗಳು ಮೈ ಕೈಗೆ ಕೊಳಕು ಅಂಟಿಸಿಕೊಂಡು ತಿಪ್ಪೆಯಲ್ಲಿ ಓಡಾಡುವ ದೃಶ್ಯ ಕರುಣಾಜನಕ. ಅಮ್ಮ ಲಗುಬಗೆಯಿಂದ ಚಿಂದಿ ಆಯುತ್ತ ಮುಂದೆ ಸಾಗುತ್ತಿದ್ದರೆ, ಹಿಂದೆ ಹಾಲುಗಲ್ಲದ ಪುಟ್ಟ ಮಗು ಅಳುತ್ತ, `ಅಮ್ಮಾ.. ಎಂದು ಕೈ ಮುಂದೆ ಮಾಡಿ ಓಡುವ ದೃಶ್ಯ'ವಂತೂ ಕರಳು ಹಿಂಡುವಂಥದ್ದು. ಒಮ್ಮೊಮ್ಮೆ ಸೊಂಟಕ್ಕೆ ಹಾಲು ಕುಡಿಯುವ ಮಗುವನ್ನು ಕುಳ್ಳಿರಿಸಿಕೊಂಡು, ಇನ್ನೊಂದು ಬಗಲಲ್ಲಿ ಚಿಂದಿ ಮೂಟೆ ಇಟ್ಟುಕೊಂಡು ತನ್ನ ಕಾಯಕದಲ್ಲಿ ತೊಡಗುತ್ತಾಳೆ. ಕೆಲವು ಬಾರಿ ಕಸದ ರಾಶಿಯಲ್ಲೆ ಮಗುವನ್ನು ಕುಳ್ಳಿರಿಸಿ ಹೊಟ್ಟೆ ತುಂಬಿಸುತ್ತಾಳೆ.
ಹೀಗೆ ಚಿಂದಿ ಆಯುವವರು ದಿನವಿಡೀ ಆಯ್ದ ಚಿಂದಿಯನ್ನು ಬೇರ್ಪಡಿಸಿ ಮಾರಿ, ಗಂಜಿಗೆ ಅಲ್ಪ ಸ್ವಲ್ಪ ಕಾಸು ಸಂಪಾದಿಸುತ್ತಾರೆ. ಹಾದಿಬೀದಿಯಲ್ಲೆ ಗಂಜಿ ಬೇಯಿಸಿ ಹಸಿದ ಹೊಟ್ಟೆ ತುಂಬಿಸಿಕೊಂಡು, ಆಕಾಶ ನೋಡುತ್ತ ಸಂತೃಪ್ತಿಯಿಂದ ನಿದ್ರೆಗೆ ಜಾರುತ್ತಾರೆ. ಬೆಳಕು ಹರಿಯುತ್ತಿದ್ದಂತೆ ಮತ್ತದೆ ಕಾಯಕ...!
2010ರಲ್ಲಿ ನವದೆಹಲಿಯ ಚರಂಡಿಯೊಂದಲ್ಲಿ ಚಿಂದಿ ಆಯುವಾಗ ಕೆಲವು ಮಕ್ಕಳು ಅಶ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಅವರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿತ್ತು. ಕೊನೆಗೆ ಆತ ನರಳಿ ನರಳಿ ಪ್ರಾಣ ಬಿಟ್ಟ. ಕಾರಣ ಚರಂಡಿಯಲ್ಲಿರುವ ವಿಷಾನಿಲ ಆತನ ಶ್ವಾಸಕೋಶದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಿತ್ತು. 2011ರಲ್ಲಿ ಬೆಂಗಳೂರಿನ ಬಡಾವಣೆಯೊಂದರಲ್ಲಿ ಚಿಂದಿ ಆಯುವ ಹುಡುಗರು ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿದ್ದರು. ಅವರಲ್ಲಿ ಒಬ್ಬನು ಕೋಪದಿಂದ ಇಟ್ಟಿಗೆ ತುಂಡೊಂದನ್ನು ಇನ್ನೊಬ್ಬನ ತಲೆ ಮೇಲೆ ಎತ್ತಿ ಹಾಕಿ ಪ್ರಾಣ ತೆಗೆದಿದ್ದಾನೆ. ಇದು ಕೆಲವು ನಿದರ್ಶನಗಳು ಮಾತ್ರ. ಪ್ರಪಂಚ ಜ್ಞಾನವಿಲ್ಲದ ಅವರು ಅನಾಗರಿಕರ ಹಾಗೆ ವರ್ತಿಸುವಲ್ಲಿ ಪ್ರಜ್ಞಾವಂತ ಸಮಾಜದ ನಿರ್ಲಕ್ಷ್ಯವೂ ಕಾರಣವಾಗಿದೆ.
ಒಂದು ಹೊತ್ತಿನ ಊಟಕ್ಕೆ ಐದತ್ತು ನಿಮಿಷ ತಡವಾದರೆ ಆಕಾಶವೆ ಕಳಚಿ ಬಿದ್ದ ಹಾಗೆ ನಾವು ವರ್ತಿಸುತ್ತೇವೆ. ಆದರೆ,  ತಿಂಗಳಾನುಗಟ್ಟಲೆ ಸರಿಯಾಗಿ ಊಟ-ತಿಂಡಿಯಿಲ್ಲದ ಅವರ ಬಾಳು ಹೇಗಿರಬೇಡ..? ಹಸಿದ ಹೊಟ್ಟೆಯ ವೇದನೆ ಹಸಿದವರಿಗೆ ಗೊತ್ತು. ಬಡತನ ನಿರ್ಮೂಲನೆಗಾಗಿ ಸರಕಾರ ಸಾವಿರಾರು ಕೋಟಿ ರೂ.ಗಳನ್ನು ಬಿಡುಗಡೆ ಮಾಡುತ್ತವೆ. ಅವೆಲ್ಲ ಕಾಗದ ಪತ್ರಗಳ ದಾಖಲೆಗೆ ಮಾತ್ರವೆ ಹೊರತು, ಇಂತಹ ನಿರ್ಗತಿಕರಿಗೆ ತಲುಪುವಲ್ಲಿ ವಿಫಲವಾಗಿದೆ. ನೂರಾರು ಕೋಟಿ ರೂ.ಗಳನ್ನು ಸರಕಾರ ಪ್ರತಿನಿತ್ಯ ಖರ್ಚು ಮಾಡುತ್ತವೆ. ಬಂಡವಾಳ ಶಾಹಿಗಳ ಲಕ್ಷಾಂತರ ಕೋಟಿ ರೂ. ತೆರಿಗೆಯನ್ನು ಮನ್ನಾ ಮಾಡುತ್ತಿವೆ. ಈ ಬಹುಪಾಲುಗಳಲ್ಲಿ ಒಂದು ಅಂಶವನ್ನಾದರೂ ಈ ಚಿಂದಿ ಆಯುವ ನಿರ್ಗತಿಕರಿಗೆ ಮೀಸಲಿಟ್ಟರೆ ಅವರು ಸ್ವಚ್ಛಂದವಾಗಿ ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದ್ದರು. ಇದಕ್ಕೆಲ್ಲ ರಾಜಾಕೀಯ ಇಚ್ಛಾಶಕ್ತಿ... ಅಧಿಕಾರಿಗಳ ಕಾಳಜಿ... ಸಂಘ ಸಂಸ್ಥೆಗಳ ಪರಿಶ್ರಮ ಹಾಗೂ ಸಮಸ್ತ ನಾಗರಿಕರ ಸಹಾಯ ಸಹಕಾರ ಬೇಕಾಗಿದೆ.
ಭ್ರಷ್ಟಾಚಾರದ ಕಬಂಧ ಬಾಹು ಎಲ್ಲೆಡೆ ವ್ಯಾಪಿಸಿ, ರುದ್ರ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ, `ಚಿಂದಿ' ಆಯುವ ಚಿನ್ನರ ಬದುಕು ಚಂದವಾಗಲು ಸಾಧ್ಯವೇ....?
-ನಾಗರಾಜ ಬಿ. ಎನ್.
ಬಾಡ-ಕುಮಟಾ
೯೪೮೧೦೫೨೩೭೮

ಮಂಗಳವಾರ, ಡಿಸೆಂಬರ್ 3, 2013

ವಿದ್ಯಾವಂತರೇ ಜೋಕೆ....

ಖೊಟ್ಟಿ ಉದ್ಯೋಗ ಮಾಹಿತಿ ಕೇಂದ್ರಗಳು ಹೆಚ್ಚಾಗುತ್ತಿವೆ..... 

-ನಾಗರಾಜ್ ಬಿ. ಏನ್. 
ಅಕ್ಷರ ಜ್ಞಾನವಿಲ್ಲದ ಅನಾಗರಿಕರು ಮೋಸ ಹೋಗುತ್ತಿರುವುದು ಕೇಳಿದ್ದೇವೆ... ಆದರೆ, ಎರಡು ಮೂರು ಪದವಿ ಪಡೆದು `ಬುದ್ಧಿವಂತರು' ಎನಿಸಿಕೊಂಡವರು ಮೋಸ ಹೋಗುತ್ತಿರುವುದು ಕೇಳಿದ್ದೀರಾ...? ಕೇಳಿದ್ದರೂ... ಕೇಳದಿದ್ದರೂ ಅವಶ್ಯವಾಗಿ ಓದಲೇ ಬೇಕಾದ ಲೇಖನ....
ಶೈಕ್ಷಣಿಕವಾಗಿ ಕರ್ನಾಟಕ ರಾಷ್ಟ್ರದಲ್ಲಿಯೇ ತೃತೀಯ ಸ್ಥಾನದಲ್ಲಿದೆ ಎನ್ನುವುದು ಸಂತೋಷದ ವಿಷಯವಾದರೂ, ವಿದ್ಯೆಗೆ ತಕ್ಕ ಉದ್ಯೋಗ ದೊರೆಯದಿರುವುದು ಕೂಡಾ ಅಷ್ಟೇ ವಿಷಾದ! ದಿನ ಕಳೆದಂತೆ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು, ಉದ್ಯೋಗದ ಸಂಖ್ಯೆ ಹೆಚ್ಚುತ್ತಿಲ್ಲ. ಕೆಲವು ಉದ್ಯೋಗದಾತ ಕಂಪನಿಗಳು, ಸಂಸ್ಥೆಗಳು `ವಿದ್ಯಾರ್ಹತೆ ಒಂದಿದ್ದರೆ ಸಾಲದು, ಪ್ರತಿಭೆಯೂ ಇರಬೇಕು' ಎನ್ನುತ್ತವೆ. ಇದರಿಂದ ಕೆಲವೆ ಕೆಲವರಿಗಷ್ಟೆ ಉದ್ಯೋಗ ಪ್ರಾಪ್ತಿ. ಇವೆಲ್ಲವುಗಳ ಪರಿಣಾಮ ಉದ್ಯೋಗದ ಬರ!
ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡ ಕೆಲವರು `ಉದ್ಯೋಗ ಸಲಹಾ ಕೇಂದ್ರ' (ಜಾಬ್ಸ್ ಕನ್ಸಲ್ಟೆನ್ಸಿ) ಪ್ರಾರಂಭಿಸಿಕೊಂಡಿದ್ದಾರೆ. ಈ ಮೂಲಕ ಉದ್ಯೋಗ ಹುಡುಕಿಕೊಂಡು ಬರುವವರಿಗೆ ನಂಬಿಸಿ, ವಿಶ್ವಾಸದಿಂದಲೆ ದ್ರೋಹ ಎಸಗುತ್ತಾರೆ.
ಬೆಂಗಳೂರಿನಂತ ಮಹಾನಗರದಲ್ಲಿ ಸಾವಿರಕ್ಕೂ ಹೆಚ್ಚು ಜಾಬ್ಸ್ ಕನ್ಸಲ್ಟೆನ್ಸಿಗಳು ಕಾರ್ಯ ನಿರತವಾಗಿದೆ. ಅವುಗಳಲ್ಲಿ ಕೆಲವು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದರೆ, ಬಹುತೇಕವು ಹಣ ದೋಚುವುದನ್ನೆ ಕಸುಬನ್ನಾಗಿ ಮಾಡಿಕೊಂಡಿವೆ. ಇದರಿಂದ ಬರುವ ಆದಾಯವನ್ನರಿತ ಕೆಲವು ಕುತ್ಸಿತ ಮತಿಯರು ರಾಜ್ಯದ ಹುಬ್ಬಳ್ಳಿ, ಮೈಸೂರು, ಗುಲಬರ್ಗಾ, ದಾವಣಗೇರಿ, ಮಂಗಳೂರು, ಉಡುಪಿ ನಗರಗಳಲ್ಲಿ ಜಾಬ್ಸ್ ಕನ್ಸಲ್ಟೆನ್ಸಿಗಳನ್ನು ಹುಟ್ಟು ಹಾಕುತ್ತಿದ್ದಾರೆ. ಐದಾರು ವರ್ಷಗಳ ಹಿಂದೆ ಈ ನಗರಗಳಲ್ಲಿ ಬೆರಳೆಣಿಕೆಯಷ್ಟಿದ್ದ (ಕೆಲವು ಕಡೆ ಅದೂ ಇರಲಿಲ್ಲ) ಉದ್ಯೋಗ ಸಲಹಾ ಕೇಂದ್ರಗಳು, ಇಂದು ಬರೋಬ್ಬರಿ ಶತಕದ ಅಂಚಿನಲ್ಲಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಹಾಗೆ, ಈ ಭಾಗಗಳಲ್ಲಿಯೂ ಸಹ ಗಲ್ಲಿ ಗಲ್ಲಿಗಳಲ್ಲಿ ನಾಯಿ ಕೊಡೆಯಂತೆ ಈ ಕೇಂದ್ರಗಳು ತಲೆ ಎತ್ತಿದರೂ ಆಶ್ಚರ್ಯ ಪಡಬೇಕಾಗಿಲ್ಲ!
ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ಕೆಲವು ವಿದ್ಯಾರ್ಥಿಗಳು ಪೋಷಕರಿಗೂ ಸಹ ತೊಂದರೆ ನೀಡದೆ, ಬ್ಯಾಂಕಿನಲ್ಲಿ ಶೈಕ್ಷಣಿಕ ಸಾಲ ಪಡೆದು ಶಿಕ್ಷಣ ಮುಗಿಸಿರುತ್ತಾರೆ. ಲಕ್ಷಗಟ್ಟಲೆ ಸಾಲ ತೆಗೆದು, ಪಡೆದ ಶಿಕ್ಷಣಕ್ಕೆ ನ್ಯಾಯ ಒದಗಿಸಲು ಹಾಗೂ ಬ್ಯಾಂಕಿನ ಸಾಲ ತುಂಬಲು ಅನಿವಾರ್ಯವಾಗಿ ಒಂದು ಉದ್ಯೋಗದ ಬೆನ್ನು ಹಿಡಿಯಬೇಕಾಗುತ್ತದೆ. ಹಳ್ಳಿಯಲ್ಲಿ ಕೈತುಂಬಾ ಸಂಪಾದಿಸಲಾಗದ ಕಾರಣ ಪಟ್ಟಣದ ಕಡೆ ಮುಖ ಮಾಡುತ್ತಾರೆ. ನಗರ ಜೀವನದ ಅಷ್ಟೊಂದು ಪರಿಚಯ ಇಲ್ಲದ ಇವರು, ಯೋಗ್ಯ ಉದ್ಯೋಗ ಪಡೆಯಲು ಅನಿವಾರ್ಯವೆಂಬಂತೆ ಜಾಬ್ಸ್ ಕನ್ಸಲ್ಟೆನ್ಸಿಯ ಮೊರೆ ಹೋಗುತ್ತಾರೆ.
ಮೋಸ ಮಾಡ್ತಾರೆ....?
ವಿದ್ಯಾರ್ಥಿಗಳು ಯಾವುದಾದರೊಂದು ಕನ್ಸಲ್ಟೆನ್ಸಿಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು, ಸ್ವ-ವಿವರದ ಜೊತೆಗೆ ಭಾವಚಿತ್ರಗಳನ್ನು ನೀಡಿ, ನೋಂದಣಿ ಶುಲ್ಕವಾಗಿ ರೂ. 300 ರಿಂದ 500 ನೀಡುತ್ತಾರೆ. ನಂತರ ಕನ್ಸಲ್ಟೆನ್ಸಿ ಸಿಬ್ಬಂದಿ, `ಒಂದು ವಾರದಲ್ಲಿ ನಿಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ನೋಡಿ, ಸಂದರ್ಶನಕ್ಕೆ ಕಳುಹಿಸುತ್ತೇವೆ' ಎಂದು ಉದ್ಯೋಗದ ಭರವಸೆ ನೀಡುತ್ತಾನೆ. ಅಲ್ಲದೆ `ಉದ್ಯೋಗ ದೊರೆತ ಮೇಲೆ ಪ್ರಥಮ ತಿಂಗಳ ಅರ್ಧದಷ್ಟು ಅಥವಾ ಸಂಪೂರ್ಣ ಸಂಬಳವನ್ನು ನೀಡಬೇಕು' ಎಂದು ಅಲಿಖಿತ ಒಪ್ಪಂದ ಮಾಡಿಕೊಳ್ಳುತ್ತಾನೆ!
ಪ್ರಾರಂಭದ ಒಂದೆರಡು ವಾರ ತಮ್ಮ ಪ್ರಾಮಾಣಿಕತೆ ಪ್ರದರ್ಶಿಸಲು ಹಾಳು ಮೂಳು ಕಂಪನಿಗಳಿಗೆ, ಸಂಸ್ಥೆಗಳಿಗೆ ಸಂದರ್ಶನಕ್ಕೆ ಹಾಜರಾಗಲು ತಿಳಿಸುತ್ತಾರೆ. ಸಂದರ್ಶಿತ ಕಂಪನಿಗಳು ಮತ್ತು ಜಾಬ್ಸ್ ಕನ್ಸಲ್ಟೆನ್ಸಿಗಳು ಕಾಣದ `ಕಳ್ಳ' ಒಪ್ಪಂದವೊಂದು ಮಾಡಿಕೊಂಡಿರುತ್ತದೆ! ಆ ಮೂಲಕ ಉದ್ಯೋಗ ಇಲ್ಲದಿದ್ದರೂ ಸಂದರ್ಶನ ನಡೆಸಿ ನೋಂದಣಿ ಶುಲ್ಕದಲ್ಲಿ ಪಾಲು ಮಾಡಿಕೊಳ್ಳುತ್ತಾರೆ. ಕೆಲವು ಕಂಪನಿಗಳು ಮಾನವ ಸಂಪನ್ಮೂಲ ವಿಭಾಗದಲ್ಲಿ, ವರ್ಷಕ್ಕೆ ಎಷ್ಟು ಉದ್ಯೋಗಾಂಕ್ಷಿಗಳು ಬಂದು ಸಂದರ್ಶನ ನೀಡಿದ್ದಾರೆ? ಎಷ್ಟು ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ? ಎಂದು ನಮೂದಿಸಬೇಕಾಗುತ್ತದೆ. ಇದರಿಂದ ಸಂದರ್ಶನ ಅವರಿಗೂ ಅನಿವಾರ್ಯವಾಗಿರುತ್ತದೆ.
ಉದ್ಯೋಗ ಕನಸನ್ನು ಹೊತ್ತ ನಿರುದ್ಯೋಗಿಗೆ ಕನ್ಸಲ್ಟೆನ್ಸಿಯವರ ಈ ಮೋಸದ ಅರಿವಿರುವುದಿಲ್ಲ. ಬಹುತೇಕ ಇಂತಹ ಕೇಂದ್ರಗಳು ಹಣ ಸಂಪಾದನೆಗಾಗಿಯೇ ತೆರೆದಿರುತ್ತವೆ. ಇದನ್ನು ನಡೆಸುವ ಮುಖ್ಯಸ್ಥನಿಗೆ ಹಾಗೂ ಕೆಲವು ಕೇಂದ್ರಕ್ಕೆ ಯಾವ ಕಂಪನಿಯ ಪರಿಚಯವೂ ಇರುವುದಿಲ್ಲ. ಜತೆಗೆ ಉದ್ಯೋಗ ಕಲ್ಪಿಸಿಕೊಡುವ ಯಾವೊಂದು ಸಂಪರ್ಕ ಜಾಲವೂ ಇರುವುದಿಲ್ಲ! ಸ್ವಯಂ ಘೋಷಿತ ನಾಯಕನ ಬೆಂಬಲ ಹಾಗೂ ಪುಡಿಗಾಸು ರಾಜಕಾರಣಿಯ ಬೆಂಬಲ ಮಾತ್ರ ಇವರಿಗಿರುವ ಆಸ್ತಿ. ಕೆಲವು ಕನ್ಸಲ್ಟೆನ್ಸಿಗಳು ಕಾನೂನು ಪ್ರಕಾರ ನೋಂದಣಿ ಸಹ ಆಗಿರದೆ ಮೋಸ ಎಸಗುತ್ತಿವೆ. ಈ ಕುರಿತು ಪ್ರಶ್ನಿಸಿದರೆ, `ನಮ್ಮ ಕೇಂದ್ರ ಕಚೇರಿ ಮಂಗಳೂರಿನಲ್ಲಿದೆ, ಬೆಂಗಳೂರಿನಲ್ಲಿದೆ, ಬೆಳಗಾವಿಯಲ್ಲಿದೆ' ಎಂದು ಹಾರಿಕೆ ಉತ್ತರ ನೀಡುತ್ತ, `ಇಲ್ಲಿ ಉದ್ಯೋಗ ಕೇಂದ್ರ ಪ್ರಾರಂಭಿಸಿ ಒಂದು ವಾರವಷ್ಟೆ ಆಗಿದೆ. ಕೆಲವೆ ದಿನಗಳಲ್ಲಿ ನೋಂದಣಿ ನಂ. ಪಡೆಯುತ್ತೇವೆ' ಎಂದು ಸಮಜಾಯಿಶಿ ನೀಡುತ್ತಾರೆ.


ಬೋರ್ಡ್ ಇರದ ಕಚೇರಿ...
ಕೆಲವು ಜಾಬ್ಸ್ ಕನ್ಸಲ್ಟೆನ್ಸಿ ಕಚೇರಿಗೆ ಯಾವ ವಿಳಾಸವೂ ಇರುವುದಿಲ್ಲ. ವಿಳಾಸ ದೊರೆತರೂ ಕಚೇರಿಗೆ `ಬೋರ್ಡ್' ಇರುವುದಿಲ್ಲ! ಹರಸಾಹಸ ಪಟ್ಟು ಹಾಗೋ ಹೀಗೋ ವಿಳಾಸ ಹುಡುಕಿಕೊಂಡು ಹೋದರೆ ಅಲ್ಲಿ `ಮುಖ್ಯಸ್ಥ'ನೇ ಇರುವುದಿಲ್ಲ. ಅವನನ್ನು ದೂರವಾಣಿ ಮೂಲಕ ಸಂಪಕರ್ಿಸಿ ಮಾಹಿತಿ ಪಡೆಯಬೇಕಾಗುತ್ತದೆ. ನಂತರ ಅವನ ಆದೇಶದಂತೆ ಬೋಡರ್್ ಇಲ್ಲದ ಕಚೇರಿ ಕೋಣೆಗೆ ಹೋಗಿ, ಅಲ್ಲಿದ್ದವರಿಗೆ ಸ್ವ-ವಿವರದ ಜಾತಕ ನೀಡಬೇಕಾಗುತ್ತದೆ. ಮಹಿಳಾ ಉದ್ಯೋಗಾಕಾಂಕ್ಷಿಗಳು ಇಂತಹ ಕನ್ಸಲ್ಟೆನ್ಸಿಗಳ ಬಗ್ಗೆ ತುಸು ಎಚ್ಚರಿಕೆ ವಹಿಸುವುದು ಒಳಿತು. ಆದರೆ, ನಂಬಿ ಮೋಸ ಮಾಡುವ ಇಂತಹ ಬ್ಲೇಡ್ ಕನ್ಸಲ್ಟೆನ್ಸಿಗಳಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಾಬ್ಸ್ ಕನ್ಸಲ್ಟೆನ್ಸಿಗಳಿಗೆ ಕೆಟ್ಟ ಹೆಸರು.