ವಿದ್ಯಾವಂತರೇ ಜೋಕೆ....
ಖೊಟ್ಟಿ ಉದ್ಯೋಗ ಮಾಹಿತಿ ಕೇಂದ್ರಗಳು ಹೆಚ್ಚಾಗುತ್ತಿವೆ.....
ಅಕ್ಷರ ಜ್ಞಾನವಿಲ್ಲದ ಅನಾಗರಿಕರು ಮೋಸ ಹೋಗುತ್ತಿರುವುದು ಕೇಳಿದ್ದೇವೆ... ಆದರೆ, ಎರಡು ಮೂರು ಪದವಿ ಪಡೆದು `ಬುದ್ಧಿವಂತರು' ಎನಿಸಿಕೊಂಡವರು ಮೋಸ ಹೋಗುತ್ತಿರುವುದು ಕೇಳಿದ್ದೀರಾ...? ಕೇಳಿದ್ದರೂ... ಕೇಳದಿದ್ದರೂ ಅವಶ್ಯವಾಗಿ ಓದಲೇ ಬೇಕಾದ ಲೇಖನ....
ಶೈಕ್ಷಣಿಕವಾಗಿ ಕರ್ನಾಟಕ ರಾಷ್ಟ್ರದಲ್ಲಿಯೇ ತೃತೀಯ ಸ್ಥಾನದಲ್ಲಿದೆ ಎನ್ನುವುದು ಸಂತೋಷದ ವಿಷಯವಾದರೂ, ವಿದ್ಯೆಗೆ ತಕ್ಕ ಉದ್ಯೋಗ ದೊರೆಯದಿರುವುದು ಕೂಡಾ ಅಷ್ಟೇ ವಿಷಾದ! ದಿನ ಕಳೆದಂತೆ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು, ಉದ್ಯೋಗದ ಸಂಖ್ಯೆ ಹೆಚ್ಚುತ್ತಿಲ್ಲ. ಕೆಲವು ಉದ್ಯೋಗದಾತ ಕಂಪನಿಗಳು, ಸಂಸ್ಥೆಗಳು `ವಿದ್ಯಾರ್ಹತೆ ಒಂದಿದ್ದರೆ ಸಾಲದು, ಪ್ರತಿಭೆಯೂ ಇರಬೇಕು' ಎನ್ನುತ್ತವೆ. ಇದರಿಂದ ಕೆಲವೆ ಕೆಲವರಿಗಷ್ಟೆ ಉದ್ಯೋಗ ಪ್ರಾಪ್ತಿ. ಇವೆಲ್ಲವುಗಳ ಪರಿಣಾಮ ಉದ್ಯೋಗದ ಬರ!
ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡ ಕೆಲವರು `ಉದ್ಯೋಗ ಸಲಹಾ ಕೇಂದ್ರ' (ಜಾಬ್ಸ್ ಕನ್ಸಲ್ಟೆನ್ಸಿ) ಪ್ರಾರಂಭಿಸಿಕೊಂಡಿದ್ದಾರೆ. ಈ ಮೂಲಕ ಉದ್ಯೋಗ ಹುಡುಕಿಕೊಂಡು ಬರುವವರಿಗೆ ನಂಬಿಸಿ, ವಿಶ್ವಾಸದಿಂದಲೆ ದ್ರೋಹ ಎಸಗುತ್ತಾರೆ.
ಬೆಂಗಳೂರಿನಂತ ಮಹಾನಗರದಲ್ಲಿ ಸಾವಿರಕ್ಕೂ ಹೆಚ್ಚು ಜಾಬ್ಸ್ ಕನ್ಸಲ್ಟೆನ್ಸಿಗಳು ಕಾರ್ಯ ನಿರತವಾಗಿದೆ. ಅವುಗಳಲ್ಲಿ ಕೆಲವು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದರೆ, ಬಹುತೇಕವು ಹಣ ದೋಚುವುದನ್ನೆ ಕಸುಬನ್ನಾಗಿ ಮಾಡಿಕೊಂಡಿವೆ. ಇದರಿಂದ ಬರುವ ಆದಾಯವನ್ನರಿತ ಕೆಲವು ಕುತ್ಸಿತ ಮತಿಯರು ರಾಜ್ಯದ ಹುಬ್ಬಳ್ಳಿ, ಮೈಸೂರು, ಗುಲಬರ್ಗಾ, ದಾವಣಗೇರಿ, ಮಂಗಳೂರು, ಉಡುಪಿ ನಗರಗಳಲ್ಲಿ ಜಾಬ್ಸ್ ಕನ್ಸಲ್ಟೆನ್ಸಿಗಳನ್ನು ಹುಟ್ಟು ಹಾಕುತ್ತಿದ್ದಾರೆ. ಐದಾರು ವರ್ಷಗಳ ಹಿಂದೆ ಈ ನಗರಗಳಲ್ಲಿ ಬೆರಳೆಣಿಕೆಯಷ್ಟಿದ್ದ (ಕೆಲವು ಕಡೆ ಅದೂ ಇರಲಿಲ್ಲ) ಉದ್ಯೋಗ ಸಲಹಾ ಕೇಂದ್ರಗಳು, ಇಂದು ಬರೋಬ್ಬರಿ ಶತಕದ ಅಂಚಿನಲ್ಲಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಹಾಗೆ, ಈ ಭಾಗಗಳಲ್ಲಿಯೂ ಸಹ ಗಲ್ಲಿ ಗಲ್ಲಿಗಳಲ್ಲಿ ನಾಯಿ ಕೊಡೆಯಂತೆ ಈ ಕೇಂದ್ರಗಳು ತಲೆ ಎತ್ತಿದರೂ ಆಶ್ಚರ್ಯ ಪಡಬೇಕಾಗಿಲ್ಲ!
ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ಕೆಲವು ವಿದ್ಯಾರ್ಥಿಗಳು ಪೋಷಕರಿಗೂ ಸಹ ತೊಂದರೆ ನೀಡದೆ, ಬ್ಯಾಂಕಿನಲ್ಲಿ ಶೈಕ್ಷಣಿಕ ಸಾಲ ಪಡೆದು ಶಿಕ್ಷಣ ಮುಗಿಸಿರುತ್ತಾರೆ. ಲಕ್ಷಗಟ್ಟಲೆ ಸಾಲ ತೆಗೆದು, ಪಡೆದ ಶಿಕ್ಷಣಕ್ಕೆ ನ್ಯಾಯ ಒದಗಿಸಲು ಹಾಗೂ ಬ್ಯಾಂಕಿನ ಸಾಲ ತುಂಬಲು ಅನಿವಾರ್ಯವಾಗಿ ಒಂದು ಉದ್ಯೋಗದ ಬೆನ್ನು ಹಿಡಿಯಬೇಕಾಗುತ್ತದೆ. ಹಳ್ಳಿಯಲ್ಲಿ ಕೈತುಂಬಾ ಸಂಪಾದಿಸಲಾಗದ ಕಾರಣ ಪಟ್ಟಣದ ಕಡೆ ಮುಖ ಮಾಡುತ್ತಾರೆ. ನಗರ ಜೀವನದ ಅಷ್ಟೊಂದು ಪರಿಚಯ ಇಲ್ಲದ ಇವರು, ಯೋಗ್ಯ ಉದ್ಯೋಗ ಪಡೆಯಲು ಅನಿವಾರ್ಯವೆಂಬಂತೆ ಜಾಬ್ಸ್ ಕನ್ಸಲ್ಟೆನ್ಸಿಯ ಮೊರೆ ಹೋಗುತ್ತಾರೆ.
ಮೋಸ ಮಾಡ್ತಾರೆ....?
ವಿದ್ಯಾರ್ಥಿಗಳು ಯಾವುದಾದರೊಂದು ಕನ್ಸಲ್ಟೆನ್ಸಿಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು, ಸ್ವ-ವಿವರದ ಜೊತೆಗೆ ಭಾವಚಿತ್ರಗಳನ್ನು ನೀಡಿ, ನೋಂದಣಿ ಶುಲ್ಕವಾಗಿ ರೂ. 300 ರಿಂದ 500 ನೀಡುತ್ತಾರೆ. ನಂತರ ಕನ್ಸಲ್ಟೆನ್ಸಿ ಸಿಬ್ಬಂದಿ, `ಒಂದು ವಾರದಲ್ಲಿ ನಿಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ನೋಡಿ, ಸಂದರ್ಶನಕ್ಕೆ ಕಳುಹಿಸುತ್ತೇವೆ' ಎಂದು ಉದ್ಯೋಗದ ಭರವಸೆ ನೀಡುತ್ತಾನೆ. ಅಲ್ಲದೆ `ಉದ್ಯೋಗ ದೊರೆತ ಮೇಲೆ ಪ್ರಥಮ ತಿಂಗಳ ಅರ್ಧದಷ್ಟು ಅಥವಾ ಸಂಪೂರ್ಣ ಸಂಬಳವನ್ನು ನೀಡಬೇಕು' ಎಂದು ಅಲಿಖಿತ ಒಪ್ಪಂದ ಮಾಡಿಕೊಳ್ಳುತ್ತಾನೆ!
ಪ್ರಾರಂಭದ ಒಂದೆರಡು ವಾರ ತಮ್ಮ ಪ್ರಾಮಾಣಿಕತೆ ಪ್ರದರ್ಶಿಸಲು ಹಾಳು ಮೂಳು ಕಂಪನಿಗಳಿಗೆ, ಸಂಸ್ಥೆಗಳಿಗೆ ಸಂದರ್ಶನಕ್ಕೆ ಹಾಜರಾಗಲು ತಿಳಿಸುತ್ತಾರೆ. ಸಂದರ್ಶಿತ ಕಂಪನಿಗಳು ಮತ್ತು ಜಾಬ್ಸ್ ಕನ್ಸಲ್ಟೆನ್ಸಿಗಳು ಕಾಣದ `ಕಳ್ಳ' ಒಪ್ಪಂದವೊಂದು ಮಾಡಿಕೊಂಡಿರುತ್ತದೆ! ಆ ಮೂಲಕ ಉದ್ಯೋಗ ಇಲ್ಲದಿದ್ದರೂ ಸಂದರ್ಶನ ನಡೆಸಿ ನೋಂದಣಿ ಶುಲ್ಕದಲ್ಲಿ ಪಾಲು ಮಾಡಿಕೊಳ್ಳುತ್ತಾರೆ. ಕೆಲವು ಕಂಪನಿಗಳು ಮಾನವ ಸಂಪನ್ಮೂಲ ವಿಭಾಗದಲ್ಲಿ, ವರ್ಷಕ್ಕೆ ಎಷ್ಟು ಉದ್ಯೋಗಾಂಕ್ಷಿಗಳು ಬಂದು ಸಂದರ್ಶನ ನೀಡಿದ್ದಾರೆ? ಎಷ್ಟು ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ? ಎಂದು ನಮೂದಿಸಬೇಕಾಗುತ್ತದೆ. ಇದರಿಂದ ಸಂದರ್ಶನ ಅವರಿಗೂ ಅನಿವಾರ್ಯವಾಗಿರುತ್ತದೆ.
ಉದ್ಯೋಗ ಕನಸನ್ನು ಹೊತ್ತ ನಿರುದ್ಯೋಗಿಗೆ ಕನ್ಸಲ್ಟೆನ್ಸಿಯವರ ಈ ಮೋಸದ ಅರಿವಿರುವುದಿಲ್ಲ. ಬಹುತೇಕ ಇಂತಹ ಕೇಂದ್ರಗಳು ಹಣ ಸಂಪಾದನೆಗಾಗಿಯೇ ತೆರೆದಿರುತ್ತವೆ. ಇದನ್ನು ನಡೆಸುವ ಮುಖ್ಯಸ್ಥನಿಗೆ ಹಾಗೂ ಕೆಲವು ಕೇಂದ್ರಕ್ಕೆ ಯಾವ ಕಂಪನಿಯ ಪರಿಚಯವೂ ಇರುವುದಿಲ್ಲ. ಜತೆಗೆ ಉದ್ಯೋಗ ಕಲ್ಪಿಸಿಕೊಡುವ ಯಾವೊಂದು ಸಂಪರ್ಕ ಜಾಲವೂ ಇರುವುದಿಲ್ಲ! ಸ್ವಯಂ ಘೋಷಿತ ನಾಯಕನ ಬೆಂಬಲ ಹಾಗೂ ಪುಡಿಗಾಸು ರಾಜಕಾರಣಿಯ ಬೆಂಬಲ ಮಾತ್ರ ಇವರಿಗಿರುವ ಆಸ್ತಿ. ಕೆಲವು ಕನ್ಸಲ್ಟೆನ್ಸಿಗಳು ಕಾನೂನು ಪ್ರಕಾರ ನೋಂದಣಿ ಸಹ ಆಗಿರದೆ ಮೋಸ ಎಸಗುತ್ತಿವೆ. ಈ ಕುರಿತು ಪ್ರಶ್ನಿಸಿದರೆ, `ನಮ್ಮ ಕೇಂದ್ರ ಕಚೇರಿ ಮಂಗಳೂರಿನಲ್ಲಿದೆ, ಬೆಂಗಳೂರಿನಲ್ಲಿದೆ, ಬೆಳಗಾವಿಯಲ್ಲಿದೆ' ಎಂದು ಹಾರಿಕೆ ಉತ್ತರ ನೀಡುತ್ತ, `ಇಲ್ಲಿ ಉದ್ಯೋಗ ಕೇಂದ್ರ ಪ್ರಾರಂಭಿಸಿ ಒಂದು ವಾರವಷ್ಟೆ ಆಗಿದೆ. ಕೆಲವೆ ದಿನಗಳಲ್ಲಿ ನೋಂದಣಿ ನಂ. ಪಡೆಯುತ್ತೇವೆ' ಎಂದು ಸಮಜಾಯಿಶಿ ನೀಡುತ್ತಾರೆ.
ಬೋರ್ಡ್ ಇರದ ಕಚೇರಿ...
ಕೆಲವು ಜಾಬ್ಸ್ ಕನ್ಸಲ್ಟೆನ್ಸಿ ಕಚೇರಿಗೆ ಯಾವ ವಿಳಾಸವೂ ಇರುವುದಿಲ್ಲ. ವಿಳಾಸ ದೊರೆತರೂ ಕಚೇರಿಗೆ `ಬೋರ್ಡ್' ಇರುವುದಿಲ್ಲ! ಹರಸಾಹಸ ಪಟ್ಟು ಹಾಗೋ ಹೀಗೋ ವಿಳಾಸ ಹುಡುಕಿಕೊಂಡು ಹೋದರೆ ಅಲ್ಲಿ `ಮುಖ್ಯಸ್ಥ'ನೇ ಇರುವುದಿಲ್ಲ. ಅವನನ್ನು ದೂರವಾಣಿ ಮೂಲಕ ಸಂಪಕರ್ಿಸಿ ಮಾಹಿತಿ ಪಡೆಯಬೇಕಾಗುತ್ತದೆ. ನಂತರ ಅವನ ಆದೇಶದಂತೆ ಬೋಡರ್್ ಇಲ್ಲದ ಕಚೇರಿ ಕೋಣೆಗೆ ಹೋಗಿ, ಅಲ್ಲಿದ್ದವರಿಗೆ ಸ್ವ-ವಿವರದ ಜಾತಕ ನೀಡಬೇಕಾಗುತ್ತದೆ. ಮಹಿಳಾ ಉದ್ಯೋಗಾಕಾಂಕ್ಷಿಗಳು ಇಂತಹ ಕನ್ಸಲ್ಟೆನ್ಸಿಗಳ ಬಗ್ಗೆ ತುಸು ಎಚ್ಚರಿಕೆ ವಹಿಸುವುದು ಒಳಿತು. ಆದರೆ, ನಂಬಿ ಮೋಸ ಮಾಡುವ ಇಂತಹ ಬ್ಲೇಡ್ ಕನ್ಸಲ್ಟೆನ್ಸಿಗಳಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಾಬ್ಸ್ ಕನ್ಸಲ್ಟೆನ್ಸಿಗಳಿಗೆ ಕೆಟ್ಟ ಹೆಸರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ