ಶುಕ್ರವಾರ, ಡಿಸೆಂಬರ್ 27, 2013

ನಾನು... 'ಚಿಂದಿ' ಆಯುವ ಹುಡುಗಿ!

ಚಿಂದಿಯಾಯಿತಮ್ಮ ಈ ಬದುಕು ಚಿಂದಿಯಾಯಿತಮ್ಮ
ಓದು-ಬರಹ ಇಲ್ಲದ ಬಾಳು ಕುಂದಿಹೋಯಿತಮ್ಮ
ದುಡಿಮೆಯಲ್ಲಿಯೇ ಈ ಬದುಕು ಬಂಧಿಯಾಯಿತಮ್ಮ
ಹಕ್ಕಿಯ ಹಾಗೆ ಹಾರುವ ಆಸೆ ಕಮರಿ ಹೋಯಿತಮ್ಮ....
"ನಾನು ಮೀನಾ, 11 ವರ್ಷ ಆಗಿರಬಹುದು. ಅಪ್ಪ-ಅಮ್ಮ ಯಾರು ಅಂತ ಗೊತ್ತಿಲ್ಲ. ಚಿಂದಿ ಆಯುವುದು ನನ್ನ ನಿತ್ಯ ಕಾಯಕ. ಕೆಲಸದ ಮಧ್ಯೆ ಮಧ್ಯೆ ಸಾರ್ವಜನಿಕ ಪಾಕರ್್ಗಳಲ್ಲಿ ಜೋಕಾಲಿಯಾಡುತ್ತ ದಿನ ಕಳೆಯುತ್ತೇನೆ. ಕೆಳಗಿನಿಂದ ಮೇಲಕ್ಕೇರುತ್ತ ಹೋಗುವುದು ಎಷ್ಟು ಮೋಜೆನಿಸುತ್ತದೆ ಗೊತ್ತಾ...? ಆದರೆ, ಇದು ಆಟಕ್ಕೆ ಮಾತ್ರ ಸೀಮಿತ. ಬದುಕೆನ್ನುವುದು ಜೋಕಾಲಿಯಾಗಲಿಲ್ಲ; ಜಾರು ಬಂಡಿಯಷ್ಟೆ! ದಿನ-ಪ್ರತಿದಿನ ಈ ಬದುಕು ನನ್ನನ್ನು ಪ್ರಪಾತಕ್ಕೆ ಇಳಿಸುತ್ತಲೇ ಹೋಯಿತು. ಅಲ್ಲಿಂದ ಮೇಲೇಳೊ ಆಸೆ ಇದ್ದರೂ... ಉತ್ಸಾಹ ಇಲ್ಲ. ಕಾರಣ ನನಗೆ ಗೊತ್ತು, ಅದು ನಿಲುಕದ ನಕ್ಷತ್ರ... ಬತ್ತಿ ಹೋದ ಚಿಲುಮೆ.
ಬೀದಿಯಲ್ಲಿ ಅಲೆಯುವೆನು ಕಸವ ಹುಡುಕಿ ಹುಡುಕಿ
ರಟ್ಟು, ಪ್ಲಾಸ್ಟಿಕ್, ಕಬ್ಬಿಣ ಆಯುವೆನು ಕೆದಕಿ ಕೆದಕಿ...
ನನ್ನ ಹಾಗೆ ಚಿಂದಿ ಆಯ್ದು ಭಿಕ್ಷೆ ಬೇಡುವವರೆ ನನ್ನ ಸ್ನೇಹಿತರು, ಬಂಧುಗಳು ಎಲ್ಲವೂ. ನನ್ನದೊಂದು ಕಥೆಯಾದರೆ ನನ್ನ ಸ್ನೇಹಿತೆ ಗಂಗಾಳದು ಇನ್ನೊಂದು ಕಥೆ. ಅವಳು ತನ್ನ ತಮ್ಮನನ್ನು ಕಂಕುಳಲ್ಲಿ ಕಟ್ಟಿಕೊಂಡೆ ಓಡಾಡಬೇಕು. ನಾನು ಜೋಕಾಲಿ ಆಡುವಾಗ, ಅವಳ ಕಣ್ಣಂಚಿನಲಿ ಜಿನುಗುವ ನೀರು...! ನನಗೆ ಜೋಕಾಲಿ ಆಡಲಾದರೂ ಸ್ವಾತಂತ್ರ್ಯವಿದೆ, ಸುಖವಿದೆ. ಅವಳು ಆಡಲೆಂದು ಕೂತಾಗ ಅವಳ ಪುಟ್ಟ ತಮ್ಮ ಜೋಕಾಲಿಯನ್ನು ಹಿಡಿದು ನಿಂತಿರುತ್ತಾನೆ. ಈ ಕಡೆ ಜೋಕಾಲಿ ತೂಗುವ ಹಾಗೂ ಇಲ್ಲ, ತಮ್ಮನನ್ನು ಕುಳ್ಳಿರಿಸಿಕೊಂಡು ಆಡುವ ಹಾಗೂ ಇಲ್ಲ. ಯಾಕೆಂದರೆ ಅವನೆಲ್ಲಿಯಾದರೂ ಬಿದ್ದು ಹೋದರೆಂಬ ಭಯ. ಹಾಗೆ ಅವಳ ದಿನವೆಲ್ಲ ಚಿಂದಿ ಆಯುವುದರಲ್ಲಿಯೆ, ತಮ್ಮನ ಕಾಪಿಡುವುದರಲ್ಲಿಯೆ ಕಳೆದು ಹೋಗುತ್ತದೆ. ಹೆಗಲಲ್ಲೊಂದು ಚೀಲ, ಬಗಲಲ್ಲೊಂದು ಕೂಸು, ಮಗ್ಗಲುಗಳೆರಡು ನಗ್ಗಿಹೋಗಿವೆ. ತೊಗಲೆಂಬುದು ದೊಗಲಾಗಿದೆ...
ನಮಗೆ ದಿಕ್ಕು, ದೆಸೆ, ಮನೆ-ಮಠ ಎಂಬುದಿಲ್ಲ. ಹಾದಿ ಬೀದೆಯೇ ವಾಸಸ್ಥಾನ. ಗಿಡ-ಮರಗಳ ನೆರಳೆ ಆಶ್ರಯ ತಾಣ. ಶಾಲೆ-ಮಂದಿರಗಳೆ ಗುಡಿಸಲುಗಳು. ಒಮ್ಮೊಮ್ಮೆ ಆಕಾಶವೆ ಹೊದಿಕೆ! ನಮ್ಮಲ್ಲಿ ಕೆಲವರಿಗೆ ಅಪ್ಪ-ಅಮ್ಮರಿದ್ದಾರೆ. ಬಹುತೇಕರಿಗೆ ಆ `ಬಂಧ'ದ ಅರ್ಥವೇ ತಿಳಿದಿಲ್ಲ. ಜೀವನ ನಿರ್ವಹಣೆಗೆ ಈ ಚಿಂದಿ ಆಯೋ ಕಾಯಕ. ಅದನ್ನು ಬಿಟ್ಟರೆ ಬೇರೆ ಕೆಲಸ ತಿಳಿದಿಲ್ಲ.
ಬೀದಿಯುದ್ದಕ್ಕೂ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ, ಬೇಡೆವೆಂದು ಬೀಸಾಕಿದ ಅನುಪಯುಕ್ತ ವಸ್ತುಗಳಲ್ಲಿ, ತ್ಯಾಜ್ಯಗಳಲ್ಲಿ ಹಾಲಿನ ಕೊಟ್ಟೆ, ರಟ್ಟು, ತಗಡಿನ ಚೂರು ಇನ್ನಿತರ ವಸ್ತುಗಳನ್ನು ಹೆಕ್ಕುತ್ತೇವೆ. ಅದನ್ನು ಮಾರಿ ಅಂದಿನ ಬದುಕನ್ನು ದೂಡುತ್ತೇವೆ. ಒಂದರ್ಥದಲ್ಲಿ ಬೇಡೆವೆಂದು ಬೀಸಾಕಿದ ಕಸಗಳಲ್ಲಿ ಬದುಕನ್ನು ಕಾಣುವವರು ನಾವು... ನನಸಾಗದ ಕನಸನ್ನು ಹೆಣೆಯುತ್ತ ಸಂಭ್ರಮಿಸುವವರು ನಾವು... ಇಲ್ಲದ್ದರಲ್ಲಿ ಇದ್ದದ್ದನ್ನು ಹುಡುಕುವವರು ನಾವು...
ತಿಪ್ಪೆಯ ಕಸವನ್ನು ಹುಡುಕುತ್ತ, ಹುಡುಕುತ್ತ ಅಲೆಮಾರಿಯ ಹಾಗೆ ಎಲ್ಲೆಲ್ಲಿಗೋ ಹೋಗುತ್ತೇವೆ. ಗುರಿಯಿಲ್ಲದ ಜೀವನ ಸಾಗಿಸುವ ನಮಗೆ ನಾಳೆಯ ಚಿಂತೆಯಿಲ್ಲ. ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ, ಜನವಸತಿ ಹೆಚ್ಚಿರುವ ನಗರ ಪ್ರದೇಶಗಳಲ್ಲಿ ನಾವು ಹೆಚ್ಚಾಗಿ ಕಾಣ ಸಿಗುತ್ತೇವೆ. ಚರಂಡಿ, ಕೊಳಕು ಪ್ರದೇಶವೆ ನಮ್ಮ ಕಾರ್ಯ ಕ್ಷೇತ್ರವಾಗಿರುವದರಿಂದ ಕೊಳಕಾಗಿ ಕಾಣುತ್ತೇವೆ. ಇದರಿಂದ ಬಹುತೇಕರು ನಮ್ಮನ್ನು ಕಂಡರೆ ದೂರ ಸರಿಯುತ್ತಾರೆ. ಅದೂ ಸಹಜ ಬಿಡಿ. ನಮ್ಮಗಳ ವೇಷ ಅವರ ಮನಸ್ಸಿಗೆ ಸರಿ ಹೊಂದುವಂತದಲ್ಲ. ಕೊಳಕು ಬಟ್ಟೆ, ಹರಿದ ಅಂಗಿ, ಕೃಶ ಕಾಯ, ಎಣ್ಣೆ ಕಾಣದ ತಲೆ, ಬಾಚಣಿಗೆ ನೋಡದ ಕೂದಲು, ಸ್ನಾನವಿಲ್ಲದ ದೇಹ, ಗಬ್ಬೆದ್ದು ನಾರುತ್ತಿರುವ ಮೈ... ಹೀಗೆ ಅನೇಕ ಕುಂದುಗಳು ನಮ್ಮನ್ನು ಬಿಗಿದಪ್ಪಿವೆ.
ಕಣ್ಣಂಚಿನಲ್ಲಿದ್ದ ಕನಸುಗಳು ಕಸದಲ್ಲಿ ಕಸವಾಗಿ ಹೋಗಿವೆ. ಒಂದೇ ತರದ ಸಮವಸ್ತ್ರ ತೊಟ್ಟು ಕುಣಿಯುತ್ತ, ನಲಿಯುತ್ತ ಶಾಲೆಗೆ ಓಡುವ ಮಕ್ಕಳನ್ನು ಕಂಡಾಗ ನಮ್ಮಲ್ಲಿ ಅಸೂಯೆ ಹುಟ್ಟುವುದು ಸಹಜವಲ್ಲವೇ? ಯಾವ ತಪ್ಪಿಗಾಗಿ ನಮಗೆ ಈ ಶಿಕ್ಷೆ? ನಮ್ಮೆಲ್ಲ ಕಷ್ಟ-ಕಾರ್ಪಣ್ಯಗಳು, ನೋವುಗಳು ಯಾರಿಗೆ ತಾನೆ ಅರ್ಥವಾದೀತು? ಯಾರಲ್ಲಿ ಹೇಳಿಕೊಂಡು ಮನಸ್ಸಿನ ಭಾರ ಇಳಿಸಿಕೊಳ್ಳುವುದು? ಹಿಂದು-ಮುಂದಿಲ್ಲದ ನಮಗೆ ಬಡತನ ಎಂಬುದು ಬೆನ್ನಿಗಂಟಿಕೊಂಡು ಬಂದ ಶಾಪವಾಗಿದೆ. ಒಮ್ಮೊಮ್ಮೆ ಯಾವ್ಯಾವುದೋ ಕಾರಣಕ್ಕೆ ಒಬ್ಬರನ್ನೊಬ್ಬರು ಕಿತ್ತಾಡಿಕೊಂಡು ಜೋರಾಗಿ ಅಳುತ್ತೇವೆ. ಆಗ ನಮ್ಮನ್ನು ಯಾರೂ ಕೇಳುವುದಿಲ್ಲ.. ಸಂತೈಸುವುದಿಲ್ಲ.. ಮರುಗುವುದಿಲ್ಲ.. ನಾವೇ ನಮಗೆ ಅಪ್ಪ, ಅಮ್ಮ. ಅಮ್ಮನ `ಮಮತೆಯ ಮಡಿಲು... ಅಪ್ಪನ ಬೆಚ್ಚನೆ ಆಸರೆ...' ಎರಡನ್ನು ಕಾಣದ, ನೋಡದ ನತದೃಷ್ಟರು, ಅನಾಥರು.
ನಮ್ಮ ಜೀವನದ ಏಕೈಕ ಗುರಿ `ಒಪ್ಪತ್ತಿನ ಗಂಜಿ..!' ತುತ್ತಿನ ಚೀಲ ತುಂಬಿಸಲು ಅನಿವಾರ್ಯವಾಗಿ ಚಿಂದಿ ಆಯಬೇಕಾಗಿದೆ. ಕೆಲವೊಮ್ಮೆ ಸಂಬಂಧಗಳ ಅರ್ಥ ಗೊತ್ತಿಲ್ಲದ ನಾವು, ಮನುಷ್ಯ ರೂಪದ ಮೃಗಗಳೆ? ಎಂದೆನಿಸುತ್ತವೆ. ನಮ್ಮಯ ಬದುಕು, ಶೈಲಿ, ಆಚಾರ, ವಿಚಾರ ಎಲ್ಲವೂ ಭಿನ್ನ-ವಿಭಿನ್ನ. ನಾವು ಪಾರ್ಕಲ್ಲೋ.. ಬೀದಿಯಲ್ಲೂ.. ಎಲ್ಲೆಂದರಲ್ಲಿ ಮಲಗಿ ನಿದ್ರಿಸುತ್ತೇವೆ. ನಿದ್ದೆ ಎಂಬುದು ದೇವರು ಕೊಟ್ಟ ವರ. ಅದರಲ್ಲಷ್ಟೆ ನಾವು `ಆಗರ್ಭ ಶ್ರೀಮಂತ'ರು!" ಎಂದು ಕಣ್ಣರಳಿಸುತ್ತ, ಅಲ್ಲೇ ಪಕ್ಕದ ಚರಂಡಿಯಲ್ಲಿ ಬಿದ್ದ ಪ್ಲಾಸ್ಟಿಕ್ ಆಯಲು ಹೊರಟಳು.
ಇದು ಚಿಂದಿ ಆಯೋ ಮುಗ್ಧ ಬಾಲೆಯ ಮನದಾಳದ ಮಾತುಗಳು. ಅವಳ ಮಾತಲ್ಲಿ ನೋವಿದೆ, ನಲಿವಿದೆ.. ಕಂಡೂ ಕಾಣದ ಕನಸಿದೆ. ನಗರ ಪ್ರದೇಶದ ಕೊಳಚೆಯಲ್ಲಿ, ಚರಂಡಿಗಳಲ್ಲಿ ಕಂಡು ಬರುವ ಇವರು ಪ್ರಜ್ಞಾವಂತರ ಸೋಗಿನಲ್ಲಿರುವ ನಮಗೆ ಹೇಸಿಗೆ ಹುಟ್ಟಿಸುತ್ತಾರೆ..? `ಅಸಹ್ಯ.. ಹೊಲಸು ಸ್ಥಳಗಳಲ್ಲಿ ಓಡಾಡುತ್ತ, ನಿರುಪಯುಕ್ತ ವಸ್ತುಗಳನ್ನು ಹೆಕ್ಕುತ್ತಾರಲ್ಲ' ಎಂದು. ಹಾಗೆ ಮಾಡಿದರೆ ಮಾತ್ರ ಅವರ ತುತ್ತಿನ ಚೀಲ ತುಂಬುವುದು ಎಂಬ ಸಾಮಾನ್ಯ ಜ್ಞಾನ ನಮ್ಮಲ್ಲಿಲ್ಲ. ಹಿಂಬಾಲಿಸಿಕೊಂಡು ಬಂದ ಬಡತನ ಅವರನ್ನು ಹಿಂಡಿ, ಹಿಪ್ಪಿ ಮಾಡಿ ತೇಗಿ ಬಿಡುತ್ತಿವೆ. ಸುಂದರ ಕನಸನ್ನು ಕಟ್ಟಿಕೊಂಡು ಆಡಿ ನಲಿಯಬೇಕಾದ ವಯಸ್ಸಲ್ಲಿ ಹಲವು ಭಾರಗಳನ್ನು ಹೊತ್ತು ಸಾಗಬೇಕಾದ ಶೋಚನೀಯ ಸ್ಥಿತಿ.
ಪ್ರಪಂಚ ಅರಿಯದ ಪುಟ್ಟ ಕಂದಮ್ಮಗಳು ಮೈ ಕೈಗೆ ಕೊಳಕು ಅಂಟಿಸಿಕೊಂಡು ತಿಪ್ಪೆಯಲ್ಲಿ ಓಡಾಡುವ ದೃಶ್ಯ ಕರುಣಾಜನಕ. ಅಮ್ಮ ಲಗುಬಗೆಯಿಂದ ಚಿಂದಿ ಆಯುತ್ತ ಮುಂದೆ ಸಾಗುತ್ತಿದ್ದರೆ, ಹಿಂದೆ ಹಾಲುಗಲ್ಲದ ಪುಟ್ಟ ಮಗು ಅಳುತ್ತ, `ಅಮ್ಮಾ.. ಎಂದು ಕೈ ಮುಂದೆ ಮಾಡಿ ಓಡುವ ದೃಶ್ಯ'ವಂತೂ ಕರಳು ಹಿಂಡುವಂಥದ್ದು. ಒಮ್ಮೊಮ್ಮೆ ಸೊಂಟಕ್ಕೆ ಹಾಲು ಕುಡಿಯುವ ಮಗುವನ್ನು ಕುಳ್ಳಿರಿಸಿಕೊಂಡು, ಇನ್ನೊಂದು ಬಗಲಲ್ಲಿ ಚಿಂದಿ ಮೂಟೆ ಇಟ್ಟುಕೊಂಡು ತನ್ನ ಕಾಯಕದಲ್ಲಿ ತೊಡಗುತ್ತಾಳೆ. ಕೆಲವು ಬಾರಿ ಕಸದ ರಾಶಿಯಲ್ಲೆ ಮಗುವನ್ನು ಕುಳ್ಳಿರಿಸಿ ಹೊಟ್ಟೆ ತುಂಬಿಸುತ್ತಾಳೆ.
ಹೀಗೆ ಚಿಂದಿ ಆಯುವವರು ದಿನವಿಡೀ ಆಯ್ದ ಚಿಂದಿಯನ್ನು ಬೇರ್ಪಡಿಸಿ ಮಾರಿ, ಗಂಜಿಗೆ ಅಲ್ಪ ಸ್ವಲ್ಪ ಕಾಸು ಸಂಪಾದಿಸುತ್ತಾರೆ. ಹಾದಿಬೀದಿಯಲ್ಲೆ ಗಂಜಿ ಬೇಯಿಸಿ ಹಸಿದ ಹೊಟ್ಟೆ ತುಂಬಿಸಿಕೊಂಡು, ಆಕಾಶ ನೋಡುತ್ತ ಸಂತೃಪ್ತಿಯಿಂದ ನಿದ್ರೆಗೆ ಜಾರುತ್ತಾರೆ. ಬೆಳಕು ಹರಿಯುತ್ತಿದ್ದಂತೆ ಮತ್ತದೆ ಕಾಯಕ...!
2010ರಲ್ಲಿ ನವದೆಹಲಿಯ ಚರಂಡಿಯೊಂದಲ್ಲಿ ಚಿಂದಿ ಆಯುವಾಗ ಕೆಲವು ಮಕ್ಕಳು ಅಶ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಅವರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿತ್ತು. ಕೊನೆಗೆ ಆತ ನರಳಿ ನರಳಿ ಪ್ರಾಣ ಬಿಟ್ಟ. ಕಾರಣ ಚರಂಡಿಯಲ್ಲಿರುವ ವಿಷಾನಿಲ ಆತನ ಶ್ವಾಸಕೋಶದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಿತ್ತು. 2011ರಲ್ಲಿ ಬೆಂಗಳೂರಿನ ಬಡಾವಣೆಯೊಂದರಲ್ಲಿ ಚಿಂದಿ ಆಯುವ ಹುಡುಗರು ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿದ್ದರು. ಅವರಲ್ಲಿ ಒಬ್ಬನು ಕೋಪದಿಂದ ಇಟ್ಟಿಗೆ ತುಂಡೊಂದನ್ನು ಇನ್ನೊಬ್ಬನ ತಲೆ ಮೇಲೆ ಎತ್ತಿ ಹಾಕಿ ಪ್ರಾಣ ತೆಗೆದಿದ್ದಾನೆ. ಇದು ಕೆಲವು ನಿದರ್ಶನಗಳು ಮಾತ್ರ. ಪ್ರಪಂಚ ಜ್ಞಾನವಿಲ್ಲದ ಅವರು ಅನಾಗರಿಕರ ಹಾಗೆ ವರ್ತಿಸುವಲ್ಲಿ ಪ್ರಜ್ಞಾವಂತ ಸಮಾಜದ ನಿರ್ಲಕ್ಷ್ಯವೂ ಕಾರಣವಾಗಿದೆ.
ಒಂದು ಹೊತ್ತಿನ ಊಟಕ್ಕೆ ಐದತ್ತು ನಿಮಿಷ ತಡವಾದರೆ ಆಕಾಶವೆ ಕಳಚಿ ಬಿದ್ದ ಹಾಗೆ ನಾವು ವರ್ತಿಸುತ್ತೇವೆ. ಆದರೆ,  ತಿಂಗಳಾನುಗಟ್ಟಲೆ ಸರಿಯಾಗಿ ಊಟ-ತಿಂಡಿಯಿಲ್ಲದ ಅವರ ಬಾಳು ಹೇಗಿರಬೇಡ..? ಹಸಿದ ಹೊಟ್ಟೆಯ ವೇದನೆ ಹಸಿದವರಿಗೆ ಗೊತ್ತು. ಬಡತನ ನಿರ್ಮೂಲನೆಗಾಗಿ ಸರಕಾರ ಸಾವಿರಾರು ಕೋಟಿ ರೂ.ಗಳನ್ನು ಬಿಡುಗಡೆ ಮಾಡುತ್ತವೆ. ಅವೆಲ್ಲ ಕಾಗದ ಪತ್ರಗಳ ದಾಖಲೆಗೆ ಮಾತ್ರವೆ ಹೊರತು, ಇಂತಹ ನಿರ್ಗತಿಕರಿಗೆ ತಲುಪುವಲ್ಲಿ ವಿಫಲವಾಗಿದೆ. ನೂರಾರು ಕೋಟಿ ರೂ.ಗಳನ್ನು ಸರಕಾರ ಪ್ರತಿನಿತ್ಯ ಖರ್ಚು ಮಾಡುತ್ತವೆ. ಬಂಡವಾಳ ಶಾಹಿಗಳ ಲಕ್ಷಾಂತರ ಕೋಟಿ ರೂ. ತೆರಿಗೆಯನ್ನು ಮನ್ನಾ ಮಾಡುತ್ತಿವೆ. ಈ ಬಹುಪಾಲುಗಳಲ್ಲಿ ಒಂದು ಅಂಶವನ್ನಾದರೂ ಈ ಚಿಂದಿ ಆಯುವ ನಿರ್ಗತಿಕರಿಗೆ ಮೀಸಲಿಟ್ಟರೆ ಅವರು ಸ್ವಚ್ಛಂದವಾಗಿ ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದ್ದರು. ಇದಕ್ಕೆಲ್ಲ ರಾಜಾಕೀಯ ಇಚ್ಛಾಶಕ್ತಿ... ಅಧಿಕಾರಿಗಳ ಕಾಳಜಿ... ಸಂಘ ಸಂಸ್ಥೆಗಳ ಪರಿಶ್ರಮ ಹಾಗೂ ಸಮಸ್ತ ನಾಗರಿಕರ ಸಹಾಯ ಸಹಕಾರ ಬೇಕಾಗಿದೆ.
ಭ್ರಷ್ಟಾಚಾರದ ಕಬಂಧ ಬಾಹು ಎಲ್ಲೆಡೆ ವ್ಯಾಪಿಸಿ, ರುದ್ರ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ, `ಚಿಂದಿ' ಆಯುವ ಚಿನ್ನರ ಬದುಕು ಚಂದವಾಗಲು ಸಾಧ್ಯವೇ....?
-ನಾಗರಾಜ ಬಿ. ಎನ್.
ಬಾಡ-ಕುಮಟಾ
೯೪೮೧೦೫೨೩೭೮

ಕಾಮೆಂಟ್‌ಗಳಿಲ್ಲ: