ಭಾನುವಾರ, ಜನವರಿ 5, 2014

ಸುಮ್ ಸುಮ್ನೆ....

ಜನ್ಮದಿನದ ಶುಭಾಶಯ ನಾ ಹೇಗೆ ತಿಳಿಸಲಿ?
ಹುನ್ನಾರಕ್ಕೆ ಬಲಿಯಾಯಿತೆ ನಿಷ್ಕಲ್ಮಶ ಸ್ನೇಹ...?

ಇಂದು ನನ್ನ ಸ್ನೇಹಿತೆಯ ಜನ್ಮ ದಿನ. ಪ್ರತಿ ನಿತ್ಯ ಹಗಲು ರಾತ್ರಿಗಳಾಗುವಂತೆ ಇಂದು ಕೂಡಾ ಹಗಲು ರಾತ್ರಿಗಳಾಗುತ್ತವೆ. ಸ್ನೇಹಿತೆಯ ಜನ್ಮದಿನ ಎಂದು ಯಾವೊಂದು ಪ್ರಕೃತಿಯಲ್ಲಿ ಬದಲಾವಣೆಯಾಗುವುದಿಲ್ಲ. ಬದಲಾವಣೆಯಾದರೆ ನನ್ನಲ್ಲಿ ಆಗಬಹುದು..!
ಇಪ್ಪತ್ತೆರಡು ವಸಂತಗಳನ್ನು ಹೇಗೆ ಕಳೆದಳೋ ನನಗಂತೂ ಗೊತ್ತಿಲ್ಲ. ಆದರೆ ಇತ್ತೀಚಿನ ಎರಡು ವಸಂತಗಳನ್ನು ನೋವು-ನಲಿವಿನ ಸಮರಸದಲ್ಲಿ ಕಳೆದಳು. ಹೇಳದೆ ಕೇಳದೆ ಬರುವ ಹತಾಷೆ ಕ್ಷಣಗಳು... ಬೇಡವೆಂದರೂ ಬಿಗಿದಪ್ಪಿಕೊಳ್ಳುವ ನೋವು ನಿರಾಶೆಗಳು... ಹಿಪ್ಪಿ ಹಿಂಡಿ ಮಾಡುವ ದೈಹಿಕ-ಮಾನಸಿಕ ಕಾಯಿಲೆಗಳು... ಹಾಗೂ ಇವುಗಳ ಜೊತೆಗೆ, ಪರಮಾನಂದದ ಪರಕಾಷ್ಠೆಗೆ ಕೊಂಡೊಯ್ಯುವ ಉಲ್ಲಾಸದ ಭಾವಗಳು.... ಈ ಎಲ್ಲ ನೋವು-ನಲಿವಿನ ಬದುಕು ಅವಳಾದಗಿತ್ತು. ಅವೆಲ್ಲವನ್ನೂ ಸಹ ಧೃತಿಗೆಡದೆ ಸಮರ್ಥವಾಗಿ ಎದುರಿಸಿ ವಿಜಯಿಯಾಗುತ್ತಲೇ ಹೋದಳು. ಎಷ್ಟೋ ಬಾರಿ ಸಾಕಪ್ಪ ಸಾಕು ಈ ಬದುಕು ಎಂದು, ಎಲ್ಲವನ್ನೂ ಬಿಟ್ಟು ಮರಳಿಗೂಡಿಗೆ ಹೋಗಲು ಅಣಿಯಾಗಿದ್ದಳು. ಆಗ ಅವಳಿಗೆ, ಎಲ್ಲಿಯೋ ಒಂದು ಭರವಸೆಯ ಚಿಕ್ಕ ಕಿರಣ ಗೋಚರಿಸಿತು. ಸವಾಲಾಗಿ ಸ್ವೀಕರಿಸಿ ಮತ್ತೆ ಬದುಕನ್ನು ಮುನ್ನಡೆಸಿದಳು. ಹೆಜ್ಜೆ ಹೆಜ್ಜೆಗೂ ಎಚ್ಚರ ವಹಿಸುತ್ತ, ಚಾಣಾಕ್ಷ ನಡೆ ಹಾಕಿದಳು. ಅಂದು ಹಾಕಿದ ಹೆಜ್ಜೆ ಇಂದಿನವರೆಗೂ ಹಿಂದಿಡಲಿಲ್ಲ. ಬದುಕಿನ ಗುರಿಯೆಡೆಗೆ ಸಾಗುತ್ತಲೇ ಇದ್ದಾಳೆ. ದೂರದಲ್ಲಿ ಜಯಲಕ್ಷ್ಮೀ ಮಾಲೆ ಹಿಡಿದು ಸ್ವಾಗತ ಕೋರಲು ಕಾಯುತ್ತಿದ್ದಾಳೆ. ಗೆದ್ದೆ ಗೆಲ್ಲುವಳು... ವಿಜಯಿಯಾಗೇ ಆಗುವಳು....!
ಅವಳ ಗೆಲುವೆ ನನ್ನ ಬದುಕಿನ ಧ್ಯೇಯ. ಅನಿರೀಕ್ಷಿತವಾಗಿ ಪರಿಚಯವಾದ, ಪರಿಚಯ ಸ್ನೇಹವಾಗಿ, ಸ್ನೇಹ ಆತ್ಮೀಯತೆಗೆ ತಿರುಗಿ ಇಂದು ನಾವು ಪರಸ್ಪರ ಒಬ್ಬರಿಗೊಬ್ಬರು ಅನಿವಾರ್ಯ ಎಂಬಂತಾಗಿದ್ದೇವೆ. ಆ ಅನಿವಾರ್ಯತೆಯಲ್ಲಿ ಇಬ್ಬರ ಬದುಕೂ ನಿಂತಿದೆ. ಹಾಗಂತ ವಯೋ ಸಹಜ ಭಾವನೆಗಳಲ್ಲ. ಪ್ರಬುದ್ಧ ಬದುಕಿನ ಒಂದು ಮಜಲು. ಇಬ್ಬರೂ ಕೂಡಾ ಗಾಢವಾಗಿ ಒಬ್ಬರನ್ನೊಬ್ಬರು ಹಚ್ಚಿಕೊಂಡರೂ, ನಮ್ಮಲ್ಲಿರುವುದು ನಿಷ್ಕಲ್ಮಶ ಸ್ನೇಹ ಮತ್ತು ಪ್ರೀತಿ ಮಾತ್ರ. ಈ ಸ್ನೇಹದ ನಳನಳಿಕೆಯ ಶಾಶ್ವತತೆಗಾಗಿ ಕೆಲವು ಒಪ್ಪಂದಕ್ಕೆ ಒಳಗಾಗಿದ್ದು, ಉಸಿರು ನಿಂತರೂ ಒಪ್ಪಂದವನ್ನು ಮುರಿಯಲಾರೆವು. ಅಷ್ಟೊಂದು ನಂಬಿಕೆ ಹಾಗೂ ವಿಶ್ವಾಸದ ತಳಹದಿಯ ಮೇಲೆ ನಮ್ಮ ಸ್ನೇಹ ನೆಲೆಯೂರಿದೆ. ಪುಸ್ತಕ ಪ್ರಿಯೆಯಾದ ಅವಳಿಗೆ ಕಳೆದ ಬಾರಿಯ ಜನ್ಮ ದಿನದಂದು ವಸುಧೇಂದ್ರ ಅವರ `ನಮ್ಮಮ್ಮ ಅಂದ್ರೆ ನಂಗಿಷ್ಟ' ಎಂಬ ಪುಸ್ತಕವನ್ನು ನೀಡಿದ್ದೆ. ಆ ಪುಸ್ತಕವನ್ನು ಕಂಡು ಕುಪ್ಪಳಿಸಿದ ಅವಳು ಥ್ಯಾಂಕ್ಸ್ನ ಸುರಿಮಳೆಯನ್ನೇ ಹರಿಸಿದ್ದಳು. ನಮ್ಮ ಸ್ನೇಹ ಇನ್ನಷ್ಟು ಗಟ್ಟಿಯಾಗಿತ್ತ ಹೋಯಿತು. ಎಲ್ಲೇ ಹೋದರು ಅಲ್ಲಿ ನಾವಿಬ್ಬರು ಇರುತ್ತಿದ್ದೇವು! ದೈವ ಲೀಲೆಯೋ... ಅಥವಾ ಪ್ರೀತಿಯ ಮನಸ್ಸುಗಳ ಅಭಿಲಾಷೆಯೋ... ಒಂದು ತಿಳಿಯದಾಗಿತ್ತು..

ನಮ್ಮಿಬ್ಬರನ್ನು ಒಂದೆಡೆ ಸೇರಿಸುತ್ತಿದ್ದ ಆ ದೈವಶಕ್ತಿ, ಕಳೆದ ಏಳೆಂಟು ತಿಂಗಳಿಂದ ದೂರ ಮಾಡಿ ಬಿಟ್ಟಿತು. ಈ ದೂರ ಎನ್ನುವುದು ಅಂದಿನ ದಿನಗಳಲ್ಲಿ ನಮ್ಮಿಬ್ಬರಿಗೂ ಅನಿವಾರ್ಯ ಎಂಬಂತಾಗಿತ್ತು. ನಮ್ಮಿಬ್ಬರ ಸ್ನೇಹದ ನಡುವೆ ಕಂದಕ ಸೃಷ್ಠಿಸುವ ಹುನ್ನಾರ ಸದ್ದಿಲ್ಲದೆ ನಡೆಯುತ್ತಿತ್ತು. ಒಂದು ಹಂತದಲ್ಲಿ ಅದು ಉತ್ತುಂಗದ ಪ್ರಚಾರಕ್ಕೆ ಹೋಗಿ, ಕೆಲವು ಸ್ನೇಹಿತರು ಹುಬ್ಬೇರಿಸುವಂತೆ ಮಾಡಿತು. ಅವರ ಹುನ್ನಾರದ ಫಲವೋ... ಅಥವಾ ನಮಗಾಗಿ ಸೃಷ್ಠಿಯಾದ ಒಂದು ಬದಲಾವಣೆಯ ಮಗ್ಗಲೋ.... ದೈನಂದಿನ ಭೆಟ್ಟಿಗಂತೂ ಬ್ರೇಕ್ ಬಿದ್ದಿದೆ... ಮೊದಲಿನಷ್ಟು ಮಾತು-ಕತೆಯಿಲ್ಲದಿದ್ದರೂ ಯೋಗಕ್ಷೇಮ ವಿಚಾರಿಸಿಕೊಳ್ಳುವಷ್ಟು ಸ್ನೇಹವಿದೆ. ಪ್ರೀತಿಯಿದೆ.
ಎಲ್ಲೋ ಒಂದು ಕಡೆ ಹುನ್ನಾರದ ಕೈ ಮೇಲಾದರೂ.... ನಿಷ್ಕಲ್ಮಶ ಸ್ನೇಹಕ್ಕೆ ಮಾತ್ರ ಚ್ಯುತಿಬಾರದು. ಏನೇ ಇರಲಿ ಜನ್ಮದಿನದ ಈ ಶುಭ ಸಂಭ್ರಮದಲ್ಲಿ `ಭಗವಂತನು ಅವಳನ್ನು ಚೆನ್ನಾಗಿಟ್ಟಿರಲಿ' ಎಂದು ಪ್ರಾರ್ಥಿಸುತ್ತೇನೆ.
ಲೋಕದಾ ಸುಖವೆಲ್ಲ ನಿನಗಾಗಿ ಮುಡಿಪಿರಲಿ
ಇರುವಂತ ನೂರು ಕಹಿ ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗೂ ಕಣ್ಣಾಗಿ.....
-ಸ್ನೇಹ...  

ಕಾಮೆಂಟ್‌ಗಳಿಲ್ಲ: