ಸೋಮವಾರ, ಮಾರ್ಚ್ 17, 2014

`ಪೂರ್ವಜರು ಮಾಡಿದ್ದು, ನಾವೂ ಮಾಡುತ್ತೇವೆ...'

ನಾಗರಾಜ ಬಿ.ಎನ್.(೯೪೮೧೦೫೨೩೭೮)
`ರಾತ್ರಿ ಆದ್ಮೆಲೆ ಉಗುರು ತೆಗಿಬಾರ್ದು ಅಂತಾರಲ್ಲ ಪಪ್ಪ, ಯಾಕೆ? ಎಂದು ಮೂರನೇ ತರಗತಿಯಲ್ಲಿ ಓದುತ್ತಿರುವ ಮಾನಸಾ ತನ್ನ ಅಪ್ಪನಲ್ಲಿ ಕೇಳುತ್ತಾಳೆ. ಮಗಳ ಪ್ರಶ್ನೆಗೆ ಅವಳ ಅಪ್ಪ ಒಮ್ಮೆಲೆ ತಬ್ಬಿಬ್ಬಾದ... ಏನು ಹೇಳಬೇಕೆಂದೇ ತೋಚಲಿಲ್ಲ. `ಈಗ ಮಲ್ಕೋ, ನಾಳೆ ಹೇಳ್ತಿನಿ' ಎಂದು ಅವಳನ್ನು ಮಲಗಿಸಿದ.
ಅರ್ಚನಾ ಏಳನೇ ತರಗತಿ ವಿದ್ಯಾರ್ಥಿನಿ. ಶಾಲೆಯ ಯೂನಿಫಾರ್ಮ್ ಸ್ವಲ್ಪ ಹರಿದಿತ್ತು. ಅದಕ್ಕೆ ಹೊಲಿಗೆ ಹಾಕಬೇಕೆಂದು ನಿರ್ಧರಿಸಿ, ಪಕ್ಕದ ಆಂಟಿ ಮನೆಗೆ ಹೋಗಿ ಸೂಜಿ-ದಾರ ಕೇಳುತ್ತಾಳೆ. `ಇಲ್ಲ, ಈಗ ರಾತ್ರಿ ಆಗಿದೆ. ಸೂಜಿ ಕೊಡೋದಿಲ್ಲ' ಎಂದು ಆಂಟಿ ಹೇಳಿದಳು. ಮನೆಗೆ ಬಂದು `ರಾತ್ರಿ ಟೈಂ ಸೂಜಿ-ದಾರ ಕೇಳಬಾರ್ದಾ ಅಮ್ಮ? ಯಾಕೆ?' ಎಂದು ಪ್ರಶ್ನಿಸಿದಳು. `ಯಾಕೋ ಗೊತ್ತಿಲ್ಲ ಮಗ, ಹಿಂದಿನವರು ಹೇಳ್ತಾ ಇದ್ರು. ಅದನ್ನೆ ನಾವೂ ಹೇಳ್ತಾ ಇದ್ದಿವಿ' ಎಂದಳು.
ಇಂತಹ ಸಂಭಾಷಣೆಗಳನ್ನು ಇಂದು ಬಹುತೇಕ ಮನೆಗಳಲ್ಲಿ ನಾವು ಕೇಳುತ್ತೇವೆ. ಪೂರ್ವಜರು ಮಾಡಿದ ಕೆಲವು ಆಚಾರ-ವಿಚಾರಗಳು ವೈಜ್ಞಾನಿಕ ನೆಲಗಟ್ಟಿನಡಿಯಲ್ಲಿ ಆರಂಭವಾಗಿತ್ತು. ಅವರ ಪ್ರತಿಯೊಂದು ಪದ್ಧತಿ-ಸಂಪ್ರದಾಯಗಳು ಕೂಡಾ ಗಹನವಾದ ಅರ್ಥವನ್ನು ಹೊಂದಿತ್ತು. ಆದರೆ, ಶಿಕ್ಷಣ ಎನ್ನುವುದೇ ಇರಲಿಲ್ಲ. ಅವರವರ ಅನುಭವವೇ ಅವರ ಬದುಕಿನ ಶಿಕ್ಷಣವಾಗಿತ್ತು. ಆದರೂ, ಅವರ ಆ ಅನುಭವ ಇಂದಿನ ಶಿಕ್ಷಣ ಪದ್ಧತಿಗಿಂತಲೂ ಬಲಿಷ್ಠವಾಗಿತ್ತು. ಪೂರ್ವಜರ ಚಿಂತನೆಗಳೆಲ್ಲವೂ ವೈಜ್ಞಾನಿಕವಾಗಿಯೇ ಇತ್ತು. ಬದುಕಿಗೆ ಪೂರಕವಾದ ಸಂದೇಶವನ್ನು ನೀಡಿ, ಉತ್ತಮ ಜೀವನಕ್ಕೆ ಪಾಠ ಹೇಳುವಂತಿತ್ತು.
ಕಾಲ ಬದಲಾದಂತೆ ಶಿಕ್ಷಣ ಪದ್ಧತಿಯಲ್ಲಿ ಗಹನವಾದ ಬದಲಾವಣೆಗಳು ಉಂಟಾದವು. ಆಚಾರ-ವಿಚಾರಗಳು ಬದಲಾದವು. ತಿನ್ನುವ ಆಹಾರ ಪದ್ಧತಿ ಬದಲಾಯಿತು. ಹೀಗೆ ಪ್ರತಿಯೊಬ್ಬರ ಬದುಕು ಕೂಡಾ ಮಗ್ಗಲು ಬದಲಿಸಿಬಿಟ್ಟಿತು. ಹಾಗೆಯೇ, ತಾರ್ಕಿಕ ಯೋಚನಾ ಶಕ್ತಿಯು ಕೂಡಾ ಉತ್ತಂಗಕ್ಕೆ ಏರಿತು. ಹಾಗೆಯೇ ಮಕ್ಕಳ ಬೌದ್ಧಿಕ ಮಟ್ಟವೂ ಬೆಳೆಯುತ್ತ ಹೋಯಿತು.
ಈಗಿನ ಮಕ್ಕಳು ಪ್ರತಿಯೊಂದನ್ನು ಕೂಡಾ ತಾರ್ಕಿಕ ಮನೋಭಾವನೆಯಿಂದಲೇ ನೋಡುತ್ತಾರೆ. ತಮಗೆ ಸಂಶಯವಾಗಿ ಕಾಡಿದ್ದಕ್ಕೆ ಉತ್ತರ ಪಡೆಯಲು ಹವಣಿಸುತ್ತಾರೆ. ಆವರ ಯೋಚನೆಗೆ, ಚಿಂತನೆಗೆ, ಕುತೂಹಲಕ್ಕೆ ನಾವು ಸಮರ್ಪಕವಾದ ಉತ್ತರ ನೀಡಲು ಎಡವುತ್ತಿದ್ದೇವೆ. ಅವರ ಅರ್ಥ ಗರ್ಭಿತ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳದೆ, ಹಾರಿಕೆ ಉತ್ತರ ನೀಡಿ, ಅವರಲ್ಲಿ ಕುತೂಹಲಕ್ಕೆ ತಣ್ಣೀರು ಎರಚುತ್ತಿದ್ದೇವೆ.
ನಮ್ಮ ಮಕ್ಕಳು ನಮಗಿಂತಲೂ ಬುದ್ಧಿವಂತರು. ಅವರಲ್ಲಿ ಅಗಾಧ ಬೌದ್ಧಿಕ ಸಾಮಥ್ರ್ಯವಿರುತ್ತದೆ. ಅದನ್ನು ಗುರುತಿಸಿ ಪೋಷಿಸಬೇಕಾದ್ದು ಪಾಲಕರ ಕರ್ತವ್ಯ. ಅವರು ಕೇಳುವ ಪ್ರತಿಯೊಂದು ಪ್ರಶ್ನೆಯ ಹಿಂದೆ ಅರ್ಥಗಭರ್ಿತವಾದ ಉತ್ತರವಿರುತ್ತದೆ. ಅದು ಕೆಲವು ಬಾರಿ ಸಿಲ್ಲಿ ಪ್ರಶ್ನೆಗಳು ಎಂದೆನಿಸುತ್ತವೆ. ಉದಾಹರಣೆಗೆ, `ರಾತ್ರಿ ಸಮಯದಲ್ಲಿ ಉಗುರು ಯಾಕೆ ತೆಗೆಯಬಾರದು?' ಎನ್ನುವುದು. ಎಷ್ಟೋ ಪಾಲಕರಿಗೆ ಇದರ ಉತ್ತರವೇ ತಿಳಿದಿಲ್ಲ. ಕೆಲವು ಶಿಕ್ಷಿತ ವರ್ಗದವರು ಅದೊಂದು ಮೂಢನಂಬಿಕೆ ಎಂದು ವಿರೋಧಿಸುತ್ತಾರೆ. ಕೆಲವರು ಅದು ಪೂರ್ವಜರು ಮಾಡಿ ಹೋದ ಸಂಪ್ರದಾಯ ಎನ್ನುತ್ತಾರೆ. ಆದರೆ, ಉತ್ತರ ಮಾತ್ರ ಗೊತ್ತಿರುವುದಿಲ್ಲ.
ರಾತ್ರಿ ಯಾಕೆ ಉಗುರು ತೆಗೆಯಬಾರದು?
ಪೂರ್ವಜರ ಬುದ್ಧಿವಂತಿಕೆ `ರಾತ್ರಿ ಉಗುರು ತೆಗೆಯಬಾರದು' ಎನ್ನುವ ಚಿಕ್ಕ ವಿಚಾರದಲ್ಲಿಯೇ ಅಡಗಿದೆ. ರಾತ್ರಿ ಸಮಯದಲ್ಲಿ ಉಗುರು ತೆಗೆಯುವಾಗ, ಉಗುರಿನ ಚಿಕ್ಕ ಚಿಕ್ಕ ತುಂಡಗಳು ಒಮ್ಮೊಮ್ಮೆ ಕಣ್ಣಿಗೆ ಕಾಣದೆ ಹಾಗೆಯೇ ಮನೆಯೊಳಗೆ ಬಿದ್ದಿರುತ್ತವೆ. ಉಗುರಿನೊಳಗೆ ಹೊಲಸು ತುಂಬಿಕೊಂಡು, ಅದರಲ್ಲಿ ಸಾವಿರಾರು ಕ್ರಿಮಿಗಳು ಸೇರಿಕೊಂಡಿರುತ್ತವೆ. ಆಕಸ್ಮಿಕವಾಗಿ ಅದು ಆಹಾರದೊಳಗೆ ಸೇರಿಕೊಂಡರೆ ಅನಾರೋಗ್ಯವನ್ನು ಆಹ್ವಾನ ಮಾಡಿಕೊಂಡಂತೆ ಎಂಬ ವೈಜ್ಞಾನಿಕ ಚಿಂತನೆಯೂ ಅದರಲ್ಲಿ ಅಡಗಿದೆ. ಹಾಗೆಯೇ, ನಮ್ಮ ಪೂರ್ವಜನರ ಕಾಲದಲ್ಲಿ ಈಗಿನಂತೆ ಝಗಮಗಿಸುವ ವಿದ್ಯುತ್ ದೀಪಗಳಿರಲಿಲ್ಲ. ಕಟ್ಟಿಗೆಯ ಬೆಂಕಿಯ ಬೆಳಕೆ ಅವರಿಗೆ ಆಸರೆಯಾಗಿತ್ತು. ಆ ಬೆಳಕಿನಲ್ಲಿ ಉಗುರು ತೆಗೆಯುವಾಗ ಕೈ ಬೆರಳಿಗೆ ಎಲ್ಲಿಯಾದರೂ ಪೆಟ್ಟಾಗುತ್ತದೆ ಎಂಬ ಭಯವಿತ್ತು. ಅಲ್ಲದೆ, ಉಗುರು ತೆಗೆಯಲು ಅಂದು ಯಾವುದೇ ಆಧುನಿಕ ಸಾಧನಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪೂರ್ವಜರು ರಾತ್ರಿ ಉಗುರು ತೆಗೆಯಬಾರದು ಎಂದು ಹೇಳಿದ್ದು.
ಹಾಗೆಯೇ, ರಾತ್ರಿ ಸಮಯಲ್ಲಿ ಸೂಜಿ ಕೂಡಾ ಕೇಳಬಾರದು ಎನ್ನುವುದಕ್ಕೂ ಕಾರಣವಿದೆ. ಸೂಜಿ ಅತ್ಯಂತ ಚಿಕ್ಕ ವಸ್ತು. ರಾತ್ರಿ ಸಮಯದಲ್ಲಿ ಎಲ್ಲಿಯಾದರೂ ಕೈ ತಪ್ಪಿ ಬಿದ್ದರೆ, ಅದನ್ನು ಹುಡುಕುವುದು ಕಷ್ಟ. ಕಣ್ತಪ್ಪಿ ಬಿದ್ದ ಸೂಜಿ ಎಲ್ಲಿಯಾದರೂ ಚುಚ್ಚಿದರೆ ಎಂಬ ಮುಂದಾಲೋಚನೆ ಇತ್ತು. ಇದರಿಂದಾಗಿ ಅಂದಿನ ಜನರು, ಹೆಚ್ಚಾಗಿ ರಾತ್ರಿ ಸಮಯದಲ್ಲಿ ಸೂಜಿಯನ್ನು ಬಳಸುತ್ತಿರಲಿಲ್ಲ. ಈಗಲೂ ಕೂಡಾ ಅದೇ ಕಾರಣದಿಂದ ಕೆಲವರು ಬಳಸುತ್ತಿಲ್ಲ. ಇದರ ಅರ್ಥ ಗೊತ್ತಿಲ್ಲದ ಇಂದಿನ ಬಹುತೇಕರು, `ಹಿಂದಿನವರು ಹೇಳುತ್ತಿದ್ದರು. ಅದಕ್ಕೆ ನಾವೂ ಹೇಳುತ್ತಿದ್ದೇವೆ' ಎನ್ನುತ್ತಾರೆ.
ವಿಷಯವಿಷ್ಟೇ, ನಮ್ಮ ಪೂರ್ವಜರು, ಹಿಂದಿನವರು ಮಾಡಿ ಹೋದ ಪ್ರತಿಯೊಂದಕ್ಕೂ ಅರ್ಥವಿದೆ. ಅದನ್ನು ಶೊಧಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ತಾರ್ಕಿಕ ಚಿಂತನೆಯಿಂದ ಆ ಪದ್ಧತಿ, ಆಚಾರಕ್ಕೆ ಉತ್ತರ ಕಂಡುಕೊಳ್ಳಬೇಕು. ಕುತೂಹಲದಿಂದ ಕೇಳುವ ಮಕ್ಕಳ ಪ್ರಶ್ನೆಗೆ ಅಸಂಬದ್ಧ ಉತ್ತರ ನೀಡುತ್ತ ಜಾರಿಕೊಳ್ಳಬಾರದು.
`ಪೂರ್ವಜರು ಮಾಡಿದ್ದು, ನಾವು ಅನುಸರಿಸಿಕೊಂಡು ಹೋಗುತ್ತಿದ್ದೇವೆ. ನೀವು ಮುಂದುವರಿಸಿಕೊಂಡು ಹೋಗಿ. ಅದಕ್ಕೆ ಸ್ಪಷ್ಟ ಉತ್ತರವಿಲ್ಲ' ಎನ್ನುವ ಅಸಂಬದ್ಧ ಉತ್ತರ ಹೇಳಬಾರದು. ಸಂದೇಹಕ್ಕೆ ತಕ್ಕ ಉತ್ತರ ದೊರಕಿಸಿಕೊಡುವಲ್ಲಿ ಪ್ರಯತ್ನಿಸಬೇಕು. ಅವರಲ್ಲಿರುವ ಸಂಶೋಧನಾ ಮನಸ್ಸಿಗೆ ಇಂಬು ನೀಡಿ ಹೊಸ ಭಾಷ್ಯ ಬರೆಯಬೇಕು. 

ಕಾಮೆಂಟ್‌ಗಳಿಲ್ಲ: