ಮಂಗಳವಾರ, ಏಪ್ರಿಲ್ 8, 2014

ಕಮರಿ ಹೋದ ಸ್ನೇಹಿತನ `ಚಿತ್ರ ನಗರಿ ಕನಸು...'

ಇದೊಂದು ಹುಚ್ಚು ಸಾಹಸಕ್ಕೆ ಕೈ ಹಾಕಿದವನ ಕತೆ. ಮರಾಠಿಯ `ನಟರಂಗ' ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡುತ್ತೇನೆ. ಅತುಲ ಕುಲಕರ್ಣಿ ಮಾಡಿದ ಪಾತ್ರವನ್ನು ಪ್ರಕಾಶ ರೈ ಕಡೆಯಿಂದ ಮಾಡಿಸುತ್ತೇನೆ. ಪ್ರಕಾಶ ಅವರಲ್ಲಿರುವ ಡಿಫರೆಂಟ್ ಕಲಾಕಾರನನ್ನು ಹೊರಗೆ ತರುತ್ತೇನೆ. ಅದಕ್ಕೆಲ್ಲಾ ಬೇಕಾಗುವ ಹಣ ತರುತ್ತೇನೆ ಎಂದುಕೊಂಡು ಹಳ್ಳಿಗೆ ಹೋಗಿದ್ದ ಸ್ನೇಹಿತ ವಾಪಸ್ಸು ಬಂದ ಬಳಿಕ ಚಿತ್ರರಂಗದ ಹೆಸರು ತೆಗೆದರೆ ಸಾಕು ಮಾರುದ್ದ ಓಡಿ ಹೋಗುತ್ತಿದ್ದಾನೆ.
ಅತ್ತ ಸಾಧನೆಯನ್ನೂ ಮಾಡಲು ಆಗದವನೂ ಈಗ ತನ್ನ ಕನಸ್ಸನ್ನೆ ಬಿಟ್ಟು ಇದ್ದುದ್ದರಲ್ಲಿಯೇ ಜೀವನ ಸಾಗಿಸಿ. ಸಾಧಕನಾಗಿ ಬದುಕುವುದಕ್ಕಿಂದ ಸಾಮಾನ್ಯನಾಗಿಯೇ ಬದುಕೋಣ ಎಂದು ನಿರ್ಣಯ ಮಾಡಿದ ಓರ್ವ ತಿಕ್ಕಲು ವ್ಯಕ್ತಿಯ ವಿಚಿತ್ರ ಕಥೆ ಇದು.
ಆತನಿಗೆ ಕನ್ನಡ ಚಿತ್ರರಂಗದಲ್ಲೊಂದು ಹೊಸ ಬದಲಾವಣೆ ತರುವ ಹುಚ್ಚು ಕನಸು. ಅದೇನೆಂದರೆ ರಂಗನಾಯಕಿ ಬಳಿಕ ಯಾವುದೇ ರಂಗಭೂಮಿ ಪ್ರದಾನ ಚಿತ್ರಗಳು ಕನ್ನಡದಲ್ಲಿ ಬಂದಿಲ್ಲ. ಅದನ್ನು ಸಾಧ್ಯವಾಗಿಸಬೇಕು ಎಂದು ಪಣತೊಟ್ಟ ಆತನನ್ನು ಮರಾಠಿ ಚಿತ್ರರಂಗ ತುಂಬಾ ಅಕರ್ಷಿಸುತ್ತದೆ. ಅದಕ್ಕೆ ಕಾರಣ ಮರಾಠಿಯಲ್ಲಿ ಯಶಸ್ವಿ ಗಳಿಸಿದ `ನಟರಂಗ' ಮತ್ತು `ಬಾಲಗಂಧರ್ವ' ಚಿತ್ರಗಳು.

ನಟರಂಗವನ್ನು ಆತ ಹತ್ತಿರ ಹತ್ತಿರ ನೂರು ಸಲ ನೋಡಿರುತ್ತಾರೆ. ಇನ್ನು ಬಾಲಗಂಧರ್ವ ಅದೇ ದಾರಿಯಲ್ಲಿದೆ.
ಇಂತಿಪ್ಪ ರವಿ ಬೆಳಗೆರೆ ಮಾರ್ಗದರ್ಶನದಲ್ಲಿ ಪ್ರಕಟಗೊಂಡಿರುವ ಬಿ.ಕೆ. ಪಂಕಜರ `ಕಲ್ಪನಾ ವಿಲಾಸ' ಪುಸ್ತಕವನ್ನು ಓದಿದ ಬಳಿಕ, ಕನ್ನಡದಲ್ಲೇಕೆ ಕಲ್ಪನಾ ಕುರಿತು ಚಿತ್ರ ಮಾಡಬಾರದು ಎಂದುಕೊಂಡು ಗುಡಗೇರಿ ಬಸವರಾಜರ ಹಳ್ಳಿ, ಅವರು ವಾಸಿಸುವ ಮನೆ, ಅವರೊಂದಿಗೆ ಕೆಲಸ ಮಾಡಿದ ಕೆಲವು ಕಲಾಕಾರರನ್ನು ಭೇಟಿ ಮಾಡುತ್ತಾನೆ. ಅಲ್ಲದೇ ಗೋಟೂರ ಐಬಿಗೆ ಹೋಗಿ ಅಂದು ಕಲ್ಪನಾ ಕಳೆದ ಕೊನೆ ದಿನಗಳ ಆ ಜಾಗವನ್ನೂ ನೋಡಿ ಬಂದು..
ತಾನೇ ಒಂದು ಕಥೆಯನ್ನು ಬರೆದು ರವಿ ಬೆಳೆಗೆರೆಯವರ ಮುಂದೆ ಹೋಗಿ... ನಿಮ್ಮ ಪುಸ್ತಕವಿಟ್ಟುಕೊಂಡು ಇಂದಿಷ್ಟು ಚಿತ್ರಕಥೆ ಬರೆದಿದ್ದೇನೆ. ತಗೊಳ್ಳಿ ಚಿತ್ರವನ್ನು ಮಾಡೋಣ ಎನ್ನಬೇಕು ಎಂದುಕೊಂಡಿರುತ್ತಾನೆ. ಆದರೆ ಅಷ್ಟೊತ್ತಿಗೆ.. ಅದೇ ರೀತಿಯ ಕಥೆಯುಳ್ಳ ಚಿತ್ರ ಸೆಟ್ಟೇರಿ ಬಿಟ್ಟಿರುತ್ತದೆ. ಅದೇ `ಅಭಿನೇತ್ರಿ'.
ಚಿತ್ರರಂಗದ ಅ,ಆ,ಇ,ಈ ಗೊತ್ತಿಲ್ಲದ ಈತ. ಯಾರಲ್ಲಿಯೂ... ಯಾವ ಚಿತ್ರದಲ್ಲಿಯೂ ಕೆಲಸ ಮಾಡದ ಈತ... ಒಂದು ರೀತಿ ಚಿತ್ರರಂಗದ ವಿಷಯದಲ್ಲಿ ಅಜ್ಞಾನಿ. ಯಾವುದೇ ಕ್ಯಾಮೆರಾ ಮ್ಯಾನ್ ಕೈಯಲ್ಲಿ ದುಡಿದಿಲ್ಲ. ಕ್ಯಾಮೆರಾದ ತಂತ್ರಜ್ಞಾನವೂ ಗೊತ್ತಿಲ್ಲ. ಆದರೆ ಕೈಗೆ ಕ್ಯಾಮೆರಾ ಕೊಟ್ಟರೆ ಅದ್ಭುತವಾಗಿ ಶೂಟಿಂಗ್ ಮಾಡಬಲ್ಲ... ಯಾವ ಕೋನದಲ್ಲಿ ಯಾವ ರೀತಿ ದೃಶ್ಯ ತೆಗೆದೆರೆ ಚೆನ್ನ ಎಂಬುದರ ಕಲ್ಪನೆ ಆತನಿಗಿದೆ.
ಊರಲ್ಲಿ ಒಂದಿಷ್ಟು ನಾಟಕ ನಿರ್ದೇಶನ ಮಾಡಿರುವ ಈತ ಯಾವ ನಿರ್ದೇಶಕನ ಬಳಿಯೂ ಕೆಲಸ ಮಾಡಿಲ್ಲ... ಆದರೆ ಎರಡು ಕಿರುಚಿತ್ರಗಳ ನಿರ್ಮಾಣಕ್ಕೆ ಕೈ ಹಾಕಿ ಸುಟ್ಟುಕೊಂಡಿದ್ದಾನೆ. ಕಾರಣ ನಿರ್ಮಾಪಕನೂ ಆಗಬಲ್ಲ ಜ್ಞಾನವಿದೆ. ಆದರೆ ಹಣವಿಲ್ಲ. ಏನೇ ಮಾಡಿದರೂ ತಿಂಗಳ ಸಂಬಳವೇ ಆಗಬೇಕು. ಆದರೆ ಅದರಲ್ಲಿ ಕಡು ಬಡತನದ ಮನೆಯೂ ನಡೆಸಬೇಕು. ಹೀಗಾಗಿ ಎಲ್ಲವೂ ಅಪೂರ್ಣ.
ತಾನು ಕನಸಿಸಿದ್ದ ಚಿತ್ರ ಈಗಾಗಲೇ ತಯಾರಾಗುತ್ತಿದೆ ಎಂದು ಅರ್ಥವಾದ ತಕ್ಷಣ ಆತ ತಾನು ಬರೆದಿಟ್ಟಿದ್ದ 37 ಪುಟಗಳ ಅರ್ಧ ಚಿತ್ರಕಥೆಯನ್ನು ಸುಟ್ಟುಹಾಕಿ ಅವತ್ತೊಂದಿನ ಎರಡು ಬಿಯರ್ ಕುಡಿದು ದುಃಖದಿಂದ ಮಲಗಿ ಬಿಟ್ಟಿದ್ದ.
ಇದಾದ ಕೆಲವು ದಿನಗಳ ಬಳಿಕ ಇತ್ತೀಚೆಗೆ ಆತನಿಗೊಂದು ಮತ್ತೊಂದು ಆಸೆ ಹುಟ್ಟಿಕೊಳ್ಳುತ್ತದೆ. ಅದೇನೆಂದರೆ, ಹೇಗಾದರೂ ಮಾಡಿ ಮರಾಠಿಯ `ನಟರಂಗ' ಚಿತ್ರವನ್ನು ಕನ್ನಡದಕ್ಕೆ ರಿಮೇಕ್ ಮಾಡುವುದು. ಅದಕ್ಕಾಗಿ ಆತನಿಗೆ ರಿಮೇಕ್ ಹಕ್ಕು ಕಡಿಮೆ ಮೊತ್ತದಲ್ಲಿ ಲಭಿಸುವದಿತ್ತು. ಕಾರಣ ಮರಾಠಿ ಚಿತ್ರರಂಗದಲ್ಲಿ ಆತನಿಗೆ ಅನೇಕ ಸ್ನೇಹಿತರಿದ್ದಾರೆ. ಆತ ತಡಮಾಡದೆ ಸಾಹಸಕ್ಕೆ ಕೈ ಹಾಕಿಯೇ ಬಿಟ್ಟ. ಆದರೆ ಜೇಬಲ್ಲಿ ತಿಂಗಳ ಸಂಬಳದಲ್ಲಿ ಉಳಿದಿದ್ದ ಒಂದಿಷ್ಟು ನೂರರ ನೋಟುಗಳು ಬಿಟ್ಟರೆ ಯಾವುದೇ ಹಣವಿಲ್ಲ. ಆಗ ಅವನಿಗೆ ಹೊಳೆದಿದ್ದು, ಊರಲ್ಲಿ ಇರುವ ಒಂದೂವರೆ ಎಕರೆ ಹೊಲ ಮಾರಿದರೆ ಹೇಗೆ ಎನ್ನುವ ವಿಚಾರ...!?
ಊರಿಗೆ ಹೋಗುತ್ತಾನೆ. ಹೊಲ ಮಾರುವ ವಿಚಾರ ತಂದೆಗೆ ಹೇಳಿದಾಗ `ಮಗ ಹೊಲ ಮಾರಿ ಊರಲ್ಲಿ ಹೊಸ ಮನೆ ಕಟ್ಟುತ್ತಾನೆ' ಎಂದುಕೊಳ್ಳುತ್ತಾನೆ. ಊರ ಪಂಚರು ಸೇರುತ್ತಾರೆ. ಇವರ ಹೊಲದ ಪಕ್ಕದವರೇ ಅದನ್ನು ಖರೀದಿಸಲು ಮುಂದೆ ಬರುತ್ತಾರೆ. ಈತನ ಮನಸ್ಸಿನಲ್ಲಿ ಹೊಲಕ್ಕೆ ಕನಿಷ್ಠ ಒಂದೂವರೆ ಕೋಟಿಯಾದರೂ ಬರಬೇಕು ಎಂಬುದಾಗಿರುತ್ತದೆ.
ಆದರೆ ಊರಲ್ಲಿನ ನೀಚ ಹಿರಿಯರೆಲ್ಲಾ ಸೇರಿ... ಇಲ್ಲಿ ಜಮೀನಿಗೆ ಬೆಲೆಯಿಲ್ಲ. ಮೊದಲೇ ಗುಡ್ಡದ ಹೊಲ. ಕಾಡು ಪ್ರಾಣಿಗಳ ಹಾವಳಿ ಜಾಸ್ತಿ ಎಂದು ಅದನ್ನು 15 ಲಕ್ಷಕ್ಕೆ ಬೆಲೆ ಕಟ್ಟುತ್ತಾರೆ. ಆದರೆ ಅದು ಕೊನೆಗೊಂಡಿದ್ದು 10 ಲಕ್ಷದ ವ್ಯವಹಾರಕ್ಕೆ...!
ಅತ್ತ ಪಂಚರೂ ಹಾಗೂ ಇವರಪ್ಪ ಹೊಲದ ವ್ಯವಹಾರ ಮಾತನಾಡುತ್ತಿದ್ದರೆ, ಇತ್ತ ಈ ಹುಚ್ಚ ತನ್ನ ಚಿತ್ರದ ಕನಸಿನೊಳಗೆ ಇಳಿದಿರುತ್ತಾನೆ-`ಕೈಗೆ ಬರುವ ಹತ್ತು ಲಕ್ಷದಲ್ಲಿ ಅತುಲ ಕುಲಕರ್ಣಿ ಮಾಡಿದ ಪಾತ್ರಕ್ಕೆ ಪ್ರಕಾಶ ರೈ ಒಪ್ಪಿಸಲು ಸಾಧ್ಯವೆ....? ಹಿಂದೆ `ಭಾಗ ಮಿಲ್ಕಾ ಭಾಗ'ದಲ್ಲಿ ರೈ 1 ರೂ. ಮಾತ್ರ ತೆಗೆದುಕೊಂಡಿದ್ದರು. ನನ್ನ ಚಿತ್ರಕ್ಕೆ ಕನಿಷ್ಠ 1 ಲಕ್ಷ ರೂ.ಗಳನ್ನಾದರೂ ಅವರಿಗೆ ಕೊಡಬೇಕು. ಇನ್ನುಳಿದ ಹಣದಲ್ಲಿ ಉಳಿದ ಪಾತ್ರ ಸೇರಿದಂತೆ ಉಳಿದೆಲ್ಲವೂ ಸಾಧ್ಯವೆ...? ಎಂದು ವಿಚಾರ ಮಾಡುತ್ತಿರುತ್ತಾನೆ. ಆಗ ಅವರಪ್ಪ ಏ ಪುಟ್ಯಾ ಏನ್ ವಿಚಾರ ಮಾಡಾತೀಲೆ? ಎಂದು ಕೇಳುತ್ತಾನೆ. ತನ್ನ ಕನಸಿನಿಂದ ಅರ್ಧಂಬರ್ಧ ಹೊರಬಂದ ಈತ, `ಅದು... ಅದು... ಪ್ರಕಾಶ ರೈ 1ಲಕ್ಷಕ್ಕೆ ಒಪ್ಪುತ್ತಾರ ಅಂತಾ' ಎಂದು ಬಿಡುತ್ತಾನೆ.
ಪ್ರಕಾಶ ರೈ ಎಂದಾಕ್ಷಣ ಇವರಪ್ಪನಿಗೆ ತನ್ನ ಮಗಾ ಏನು ಮಾಡಲು ಹೊರಟಿದ್ದಾನೆ ಎನ್ನುವುದು ಅರ್ಥವಾಗಿ ಬಿಟ್ಟಿರುತ್ತದೆ. `ಮಗನ... ನೀ.. ಹೊಲಾ ಮಾರಕ ಯಾಕ್ ಹೊಂಟಿ ಅನ್ನೊದ ನಂಗ್ ಈಗ ತಿಳಿತ. ಹಿರೇರ್ ಎದ್ದ ನಡೀರಿ. ಈ ಮಗಾ ಜೀವನದಾಗ ಉದ್ಧಾರ ಆಗೊಲ್ಲ. ನಮಗ ಮನಿ ಅಲ್ಲ ಸಮಾಧಿ ಕಟ್ಟತಾನ' ಎಂದು ಬೈದು ಹಿರಿಯರೊಂದಿಗೆ ಅವರಪ್ಪ ಎದ್ದು ಹೋಗುತ್ತಾನೆ.
ಎಲ್ಲರೂ ಎದ್ದು ಹೋದ ಬಳಿಕ ಈತ ನಿಜ ಲೋಕಕ್ಕೆ ಬರುತ್ತಾನೆ.
ಸಂಜೆ ಮನೆಯ ಹೊಸ್ತಿಲು ದಾಟುತ್ತಿದ್ದಂತೆಯೇ... ಅಕ್ಕಂದಿರಿಂದ ಬೈಗುಳಗಳ ಮಂಗಳಾರತಿ. ತಾನು ಕೆಲಸ ಮಾಡುವ ನಗರಕ್ಕೆ ವಾಪಸ್ಸು ಬರಲು ಬಸ್ ಹತ್ತುತ್ತಾನೆ. ಬಸ್ಸಿನಲ್ಲಿ ಕೂತಾಗ ಯೋಚಿಸುತ್ತಾನೆ. `ಅಯ್ಯೊ 10 ಲಕ್ಷದಲ್ಲಿ ಏನೂ ಆಗೋದಿಲ್ಲ. ಈ ಹೊಲಾನೂ ಮಾರೋದ ಬೇಡ. ನಾನೇನೂ ದೊಡ್ಡ ಫಿಲ್ಮ್ ಡೈರೆಕ್ಟರ್-ನಿರ್ಮಾಕನೂ ಆಗೋದು ಬೇಡ. ಒಂದಿಷ್ಟು ದಿನ ಸಿಟಿಯಾಗ ಉಳಿದು ವಾಪಸ್ಸು ಬಂದ ಇದೇ ಹೊಲದಾಗ ರೈತನಾಗಿ ಉಳಿಯೋಣ' ಎಂದುನಿರ್ಧರಿಸುತ್ತಾನೆ.
ಸದ್ಯ ತನ್ನ ಕರ್ತವ್ಯದಲ್ಲಿ ತೊಡಗಿರುವ ಈತನಿಗೆ ಈಗ ಚಿತ್ರರಂಗದ ಹುಚ್ಚು ಹೋಗಿ ಬಿಟ್ಟಿದೆ. ಅಷ್ಟೇ ಏಕೆ ದಿನಕ್ಕೊಂದು ಫಿಲ್ಮ್ ನೋಡಿ ಮಲಗಿಕೊಳ್ಳುತ್ತಿದ್ದವನೂ, ಈಗ ಫಿಲ್ಮ್ಗಳ ಉಸಾಬರಿಗೇ ಹೋಗುತ್ತಿಲ್ಲ. ಊರಿಂದ ಬಂದ ದಿನವೇ ರೂಮಲ್ಲಿದ್ದ ಸುಮಾರು 2,000ಕ್ಕೂ ಹೆಚ್ಚು ಫಿಲ್ಮ್ ಸಿಡಿಗಳನ್ನು ತಿಪ್ಪಿಗೆ ಎಸೆದಿದ್ದಾನೆ.!!!!!
ಮುಂದೇನೂ ಈತನ ಗತಿ... ಕನಸ್ಸೊಂದು ಕಮರಿ ಹೋಗಿದೆ...

ಕಾಮೆಂಟ್‌ಗಳಿಲ್ಲ: