ಬುಧವಾರ, ಏಪ್ರಿಲ್ 23, 2014

ಎಚ್ಚರಿಕೆ.....!!

'ಫೇಸ್ಬುಕ್'ನಲ್ಲಿ  ನಕಲಿ ಖಾತೆಗಳಿವೆ...

ನಾಗರಾಜ್ ಬಿ.ಎನ್.
ಭಾರತದಲ್ಲಿ 2010 ಸಂದರ್ಭದಲ್ಲಿ ಕೇವಲ 8 ಲಕ್ಷ ಫೇಸ್ಬುಕ್ ಬಳಕೆದಾರರಿದ್ದರು. ಆದರೆ ಪ್ರಸ್ತುತ (2014 ಏಪ್ರಿಲ್ ತಿಂಗಳಲ್ಲಿ) ಆ ಸಂಖ್ಯೆ ಬರೋಬ್ಬರಿ 10 ಕೋಟಿಗೆ ಏರಿದೆ....!! ಅಂದರೆ, ಮೂರು ವರ್ಷದ ಅವಧಿಯಲ್ಲಿ ಬಳಕೆದಾರರ ಸಂಖ್ಯೆ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿದೆ ಅಂದರೆ ಅದರ ಜನಪ್ರಿಯತೆ ಎಷ್ಟು ಎಂಬುದು ಸ್ವಲ್ಪ ಲೆಕ್ಕ ಹಾಕಿ. ಆಶ್ಚರ್ಯ ಎನಿಸಬಹುದು!
ಆದರೆ... ಈ ಆಶ್ಚರ್ಯ ಜೊತೆಗೆ ಇನ್ನೊಂದು ಆಘಾತಕಾರಿ ವಿಷಯವೇನೆಂದರೆ ಈ 10ಕೋಟಿ ಫೇಸ್ಬುಕ್ ಬಳಕೆದಾರರ ಖಾತೆಗಳಲ್ಲಿ ಶೇ. 20ರಷ್ಟು ಖಾತೆಗಳು ನಕಲಿ...!!
ಯಾರದ್ದೋ ಹೆಸರಲ್ಲಿ, ಇನ್ಯಾರದ್ದೋ ಭಾವಚಿತ್ರ ಹಾಕಿ ನಕಲಿ ಖಾತೆಯನ್ನು ಸೃಷ್ಟಿಸಿಕೊಂಡಿರುತ್ತಾರೆ. ಅನಾಮಧೇಯ ಹೆಸರಲ್ಲಿ ಖಾತೆಯನ್ನು ಮಾಡಿಕೊಂಡು, ವ್ಯವಸ್ಥಿತವಾಗಿ ಮೋಸದ ಬಲೆ ಹೆಣೆಯುತ್ತಾರೆ.
ಎಲ್ಲೋ ಒಂದು ಮೂಲೆಯಲ್ಲಿದ್ದು ಮೋಸ ಮಾಡುವ ಬದಲು, ಹತ್ತಿರವೇ ಇದ್ದು ತಮ್ಮ ಅಪ್ತೆಷ್ಟರ ಕುತ್ತಿಗೆ ಕೊಯ್ಯುವ ಕಾಯಕದಲ್ಲಿ ಈ ನಕಲಿ ಖಾತೆದಾರರು ನಿರತರಾಗುತ್ತಾರೆ....! ಕೆಲವು ಪಡ್ಡೆ ಹುಡುಗರು ಹಾಗೂ ವಿಕೃತ ಮನಸ್ಸಿನವರು ತಮ್ಮದಲ್ಲದ ಹೆಸರಲ್ಲಿ ಖಾತೆಯನ್ನು ಸೃಷ್ಟಿಸಿಕೊಂಡು ಮಜಾ ಅನುಭವಿಸುತ್ತಾರೆ.
ನಕಲಿ ಖಾತೆಗೆ ಯಾವುದೋ ಒಂದು ಚಿಕ್ಕ ಮಗುವಿನ ಅಥವಾ ನಟಿಯ ಭಾವಚಿತ್ರವನ್ನು ಅಪ್ಪೋಡ್ ಮಾಡಿರುತ್ತಾರೆ. ನಂತರ ಇವರು ಫೇಸ್ಬುಕ್ ಖಾತೆಯಲ್ಲಿರುವ ಹುಡುಗಿಯರ ಸ್ನೇಹ ಬಯಸಿ ಮನವಿ ರವಾನಿಸುತ್ತಾರೆ. ಯಾವುದೋ ಹುಡುಗಿ ಸ್ನೇಹಕ್ಕಾಗಿ ಮನವಿ ಮಾಡಿದ್ದಾಳೆ ಎಂದು, ಹುಡಗಿ ಅವರ ಮನವಿಯನ್ನು ಸ್ವೀಕರಿಸಿ, ತನ್ನ ಸ್ನೇಹದ ಬಳಗಕ್ಕೆ ಸೇರಿಸಿಕೊಳ್ಳುತ್ತಾಳೆ. ಅರಿವಿಲ್ಲದೆ ಆ ಹುಡುಗಿ ಅವರ ಮೋಸದ ಜಾಲದಲ್ಲಿ ಸಿಲುಕಿಕೊಳ್ಳುತ್ತಾಳೆ.
ಒಂದೆರಡು ವಾರ, ತಿಂಗಳ ನಂತರ ನಕಲಿ ಖಾತೆ ಹೊಂದಿದ ವಿಕೃತ ಮನಸ್ಸಿನ ಹುಡುಗ ಆಕೆಯ ಜೊತೆ ನಿಧಾನಕ್ಕೆ ಚಾಟ್ ಮಾಡಲು ಪ್ರಾರಂಭಿಸುತ್ತಾನೆ. 'ಹಾಯ್'ನಲ್ಲಿ ಪ್ರಾರಂಭವಾಗುವ ಈ ಚಾಟ್ ಕೊನೆ ಕೊನೆಗೆ ಖಾಸಗಿ ವಿಷಯಗಳ ವಿನಿಮಯದತ್ತ ಸಾಗುತ್ತದೆ. ತನ್ನ ಸ್ನೇಹ ಬಯಸಿ ಮನವಿ ಕಳುಹಿಸಿದ್ದು ಹುಡುಗಿ ಎಂದುಕೊಂಡೇ ಆಕೆಯು ತನ್ನೆಲ್ಲ ಖಾಸಗಿ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾಳೆ. ಆಕೆಗೆ ಇದು ಮೋಸ ಎಂದು ಎಲ್ಲಿಯೂ ಅರಿವಾಗುವುದಿಲ್ಲ. ಅಷ್ಟೊಂದು ಚಾಕಚಕ್ಯತೆಯಿಂದ ಆ ವಿಕೃತ ಮನಸ್ಸಿನ ಯುವಕ ಅದನ್ನು ನಿಭಾಯಿಸಿಕೊಂಡು ಹೋಗುತ್ತಾನೆ...!!
ನಕಲಿ ಖಾತೆ ಬಳಕೆ ಮಾಡಿಕೊಂಡು ಹುಡುಗರನ್ನು ಯಾಮಾರಿಸುವುದರಲ್ಲಿ ಹುಡುಗಿಯರೂ ಕೂಡಾ ಹಿಂದೆ ಬಿದ್ದಿಲ್ಲ. ಅವರೂ ಸಹ ತಾವು ಯಾವುದರಲ್ಲಿಯೂ ಕಡಿಮೆಯಿಲ್ಲ ಎಂದು ಹುಡುಗರ ಇಲ್ಲವೇ ಯಾವುದೋ ಒಂದು ಹುಡುಗಿಯರ ಹೆಸರಲ್ಲಿ ನಕಲಿ ಖಾತೆಯನ್ನು ಸೃಷ್ಟಿ ಮಾಡಿಕೊಂಡಿರುತ್ತಾರೆ. ಮೊದ ಮೊದಲು ಹುಡುಗ ಹಾಕಿರುವ ಫೋಟೋಗಳನ್ನು ಲೈಕ್ ಮಾಡುತ್ತಾ.... ಕ್ರಮೇಣ ಫೋಟೊಗಳಿಗೆ ಕಮೆಂಟ್ಸ್ ಮಾಡಿ ಅವರ ಸ್ನೇಹವನ್ನು ಸಂಪಾದಿಸಿಕೊಳ್ಳುತ್ತಾರೆ. ಸ್ನೇಹ ಗಟ್ಟಿಯಾಗುತ್ತ ಹೋದ ಹಾಗೆ, ಹಾಯ್..... ಊಟ ಆಯ್ತಾ....? ಏನ್ಮಾಡ್ತಾ ಇದ್ದೀರಾ...? ಏನ್ ಜಾಬ್ ಮಾಡ್ತಾ ಇದ್ದೀರಾ...? ಹೀಗೆ ಚಟ್ಗಳ ಸರಣಿ ಸಾಗುತ್ತಾ ಹೋಗುತ್ತವೆ... ಆ ಹುಡುಗ ಯಾವಾಗ ಅವಳ ಮಾಹಿತಿಯನ್ನು ಕೇಳಲು ಪ್ರಾರಂಭಿಸುತ್ತಾನೋ ಆಗ ಆ ನಕಲಿ ಖಾತೆ ಮಾಡಿಕೊಂಡ ಹುಡುಗಿ, ದಿಕ್ಕು ತಪ್ಪಿಸಲು ಪ್ರಾರಂಭಿಸುತ್ತಾಳೆ. ಖಾತೆಯಲ್ಲಿ ನಮೂದಿಸಿರುವುದು ನನ್ನ ನಿಜವಾದ ಹೆಸರಲ್ಲ. ನನಗೆ ಬೇರೆಯದೇ ಹೆಸರಿದೆ. ನಾನು ಅಲ್ಲಿಯವಳು... ಇಲ್ಲಿಯವಳು ಎಂದು ಏನೇನೋ ಹೇಳುತ್ತ ಹುಡುಗರನ್ನು ಯಾಮಾರಿಸುತ್ತಾಳೆ. ಇಂತಹ ವಿಕೃತ ಮನಸ್ಸಿನ ಹುಡುಗಿಯರ ಗುಂಪೇ ಪೇಸ್ಬುಕ್ ಖಾತೆಯಲ್ಲಿ ಇದೆ ಎಂದರೂ ತಪ್ಪಾಗಲಾರದು.
ಯಾವುದಕ್ಕೂ ಫೇಸ್ಬುಕ್ ಬಳಕೆ ಮಾಡುವ ಮುನ್ನ... ಸ್ನೇಹಿತರ ಬಳಗಕ್ಕೆ ಅನಾಮಧೇಯರನ್ನು ಸೇರಿಸಿಕೊಳ್ಳುವುದಕ್ಕೂ ಮುನ್ನ... ಹಾಗೆಯೇ ಸ್ನೇಹಿತರಾಗಲು ಮನವಿ ಕಳುಹಿಸುವುದಕ್ಕೂ ಮುನ್ನ.... ಮುಂದಾಲೋಚನೆ ವಹಿಸುವುದು ಒಳಿತು. ಆ ಮುಂದಾಲೋಚನೆ ಎಷ್ಟೋ ಅವಘಡಗಳನ್ನು, ಮಾನಸಿಕ ಹಿಂಸೆಯನ್ನು ಹಾಗೂ ಸಮಯವನ್ನು ಉಳಿತಾಯ ಮಾಡಬಹುದು.

ಗುರುವಾರ, ಏಪ್ರಿಲ್ 10, 2014

ಫೇಸ್ಬುಕ್  ಬಳಕೆ ಹೀಗಿದ್ದರೆ ಚೆನ್ನ.....

ಆಗದಿರಲಿ ಅವಾಂತರ...!

---ನಾಗರಾಜ್ ಬಿ.ಎನ್. ಬಾಡ---
ಆಧುನಿಕ ತಂತ್ರಜ್ಞಾನಗಳು ಪ್ರಪಂಚವನ್ನು ಕಿರಿದು ಮಾಡಿ ಬಿಟ್ಟಿವೆ. ಮೊಬೈಲ್, ಫೇಸ್ಬುಕ್ ನಂತಹ ಸಂಪರ್ಕ ಸಾಧನಗಳಿಂದ ಎಲ್ಲೋ ಇರುವ ಬಂಧು-ಬಾಂಧವರನ್ನು, ಸ್ನೇಹಿತರನ್ನು ಕ್ಷಣ ಮಾತ್ರದಲ್ಲಿ ಸಂಪರ್ಕಿಸಿ ಅವರ ಯೋಗ ಕ್ಷೇಮವನ್ನು ವಿಚಾರಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಅಲ್ಲದೆ, ದೂರದರ್ಶನ ಎಂಬ ಸಾಧನ ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿ ನಡೆದ ಘಟನೆಯನ್ನು ಕ್ಷಣ ಮಾತ್ರದಲ್ಲಿ ನಮ್ಮ ಕಣ್ಣೆದುರಿಗೆ ತಂದು ನಿಲ್ಲಿಸುತ್ತಿದೆ. ಸಂತಸದ ವಿಷಯವೇ.....
ಈ ಸಂಪರ್ಕ ಜಾಲದಲ್ಲಿ ಫೇಸ್ಬುಕ್ ಎಂಬುದು ಮುಂಚೂಣಿಯಲ್ಲಿದೆ. ಸ್ನೇಹಿತರನ್ನು, ಸ್ನೇಹಿತರ ಸ್ನೇಹಿತರನ್ನು, ಕಳೆದು ಹೋದ ಸ್ನೇಹಿತರನ್ನು ಹೀಗೆ ಅನೇಕರನ್ನು ಅದು ಒಂದುಗೂಡಿಸುತ್ತದೆ. ಸ್ನೇಹದ ಬಳಗ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತ ಹೋಗುತ್ತದೆ. ಆದರೆ ಅಲ್ಲಿ ಪರಿಚಯವಿಲ್ಲದವರು ಕೂಡಾ ಬಂದು ಸೇರಿಕೊಳ್ಳುತ್ತಾರೆ. ಆಗಲೇ ಏನೇನೋ ಅವಾಂತರಗಳು ಸೃಷ್ಟಿಯಾಗುತ್ತವೆ...!
ಮುಖ್ಯವಾಗಿ ಯುವತಿಯರು ಈ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ತೀರಾ ಅಗತ್ಯ. ಗೊತ್ತು ಪರಿಚಯದವಿಲ್ಲದವರನ್ನು ಸ್ನೇಹದ ಬಳಗಕ್ಕೆ ಸೇರಿಸಿಕೊಳ್ಳಲೇ ಬೇಡಿ. ಒಂದು ವೇಳೆ ಸೇರಿಸಿಕೊಂಡರೆ ಅವರ ಜೊತೆ ಯಾವುದೇ ಕಾರಣಕ್ಕೂ `ಚಾಟ್'ಗೆ ಇಳಿಯಬೇಡಿ. ಚಾಟ್ ಮಾಡಿ ಅವರ ಸ್ನೇಹವನ್ನು ಸಂಪಾದಿಸಬೇಕೆಂದರೆ ಮೊದಲು ಅವರ ಪ್ರೊಫೈಲ್ಗಳನ್ನು ಗಮನಿಸಿ. ಅವರು ಅಪ್ಲೋಡ್ ಮಾಡಿರುವ ಚಿತ್ರಗಳು ಯಾವುದು...? ಅವರ ಬರವಣಿಗೆಯ ಹಿನ್ನೆಲೆಯ ಧ್ವನಿ ಏನು..? ಅವರು ತಮ್ಮ ಸ್ನೇಹಿತರ ಯಾವ ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ...? ಎಂಬಿತ್ಯಾದಿ ಅಂಶಗಳ ಕುರಿತು ಸೂಕ್ಷ್ಮಾತಿ ಸೂಕ್ಷ್ಮವಾಗಿ ಗಮನಿಸಿ. ಆಗ ನಿಮಗೆ ಆ ಸ್ನೇಹಿತರ ಮನಸ್ಥಿತಿ ಹಾಗೂ ಗುಣಗಳ ಕುರಿತು ಚಿಕ್ಕದಾದ ಮಾಹಿತಿ ದೊರೆಯುತ್ತದೆ. ಆಗ ಅವರು ನಿಮ್ಮ ಸ್ನೇಹಕ್ಕೆ ಯೋಗ್ಯರೇ ಏನು ಎನ್ನುವುದನ್ನು ಯೋಚಿಸಿ. ನಿಮ್ಮ ವಿವೇಚನೆಗೆ ತಕ್ಕಂತೆ ಸೂಕ್ತ ನಿರ್ಧಾರಕ್ಕೆ ಬನ್ನಿ.
ಯಾಕೆಂದರೆ, ಈ ಫೆಸ್ಬುಕ್ ಬಳಕೆ ನಮ್ಮ ಬದುಕಿಗೆ ಮಾರಕವಾಗದ ರೀತಿಯಲ್ಲಿರಬೇಕು. ಹುಚ್ಚಾಟಕ್ಕೆ ಬಿದ್ದು ಸ್ನೇಹಿತರ ಜೊತೆ ದಿನವಿಡೀ ಚಾಟ್ ಮಾಡುತ್ತ, ಕಂಡ ಕಂಡವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ತರವಲ್ಲ. ಕೆಲವರು ತಮ್ಮ ಖಾಸಗಿ ಬದುಕಿನ ಚಿತ್ರಗಳನ್ನು ಅಪ್ಲೋಡ್ ಮಾಡುತ್ತ ತಮ್ಮನ್ನು ತಾವೇ ಸಾರ್ವಜನಿಕವಾಗಿ ಹರಾಜು ಹಾಕಿಕೊಳ್ಳುತ್ತಾರೆ. ಇದಕ್ಕೆ ತುಸು ಕಡಿವಾಣ ಹಾಕಿಕೊಳ್ಳುವುದು ಒಳಿತು.
ಅನೇಕರು ಫೇಕ್ ಫೇಸ್ಬುಕ್ ಅಕೌಂಟ್ ತೆರೆದು ಎಷ್ಟೋ ಜನಕ್ಕೆ ಏಮಾರಿಸಿದ್ದಾರೆ. ಇದರಿಂದ ಎಷ್ಟೋ ಹದಿಹರಿಯದ ಯುವಕರು, ಯುವತಿಯರು ತಮ್ಮ ಬದುಕನ್ನೇ ಹಾಳು ಮಾಡಿಕೊಂಡ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಯುವತಿಯರ ಭಾವಚಿತ್ರವನ್ನು ಡೌನ್ಲೋಡ್ ಮಾಡಿಕೊಂಡು ಅಶ್ಲೀಲ ಚಿತ್ರವನ್ನಾಗಿ ಮಾಡಿ, ಮತ್ತೆ ಪುನಃ ಫೇಸ್ಬುಕ್ಗೆ ಅಪ್ಲೋಡ್ ಮಾಡಿ ವಿಕೃತ ಆನಂದವನ್ನು ಪಡೆಯುವ ಮನಸ್ಸುಗಳು ಕೂಡಾ ನಮ್ಮ ಫೇಸ್ಬುಕ್ ಸ್ನೇಹಿತರ ಬಳಗದಲ್ಲಿರಬಹುದು...?
ಈ ಹಿನ್ನೆಲೆಯಲ್ಲಿ ಪಾಲಕರಾದವರು ತಮ್ಮ ಮಕ್ಕಳ ಕುರಿತು ತುಸು ಗಮನ ಹರಿಸುವುದು ಒಳಿತು. ಒಂದು ಸೀಮಿತ ಅವಧಿಗೆ ಮಾತ್ರ ಫೆಸ್ಬುಕ್ ಬಳಕೆ ಇರಲಿ. ಅದರಲ್ಲಿರುವ ಉತ್ತಮ ಅಂಶಗಳನ್ನಷ್ಟೇ ತೆಗೆದುಕೊಂಡು ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವಲ್ಲಿ ಅದು ಬಳಕೆಯಾಗಲಿ. ಪರಿಚಯವಿರುವ ಸ್ನೇಹಿತರ ಜೊತೆ ಮಾತ್ರ ಖಾಸಗಿ ಬದುಕಿನ ಸಂಗತಿಗಳು ವಿನಿಮಯವಾಗಲಿ.
ಪರಿಸರ ಪ್ರಜ್ಞೆ ಹೆಚ್ಚಿಸುವ. ಸಾಹಿತ್ಯದ ಕುರಿತು ಚರ್ಚೆ ನಡೆಸುವ, ಸಾಮಾನ್ಯ ಜ್ಞಾನದ ಬಗ್ಗೆ ಮಾಹಿತಿ ನೀಡುವ, ಪ್ರಕೃತಿಯ ರಮಣೀಯ ಚಿತ್ರಗಳ ಮೂಲಕ ಪ್ರಕೃತಿ ಪ್ರೇಮವನ್ನು ಬಡಿದೆಬ್ಬಿಸುವ ಎಷ್ಟೋ ಸದುಪಯೋಗಿ ಅಕೌಂಟ್ಗಳಿವೆ. ಅವರ ಸ್ನೇಹದ ಬಳಗಕ್ಕೆ ಪ್ರವೇಶ ಪಡೆದರೆ ಚೆನ್ನ. ಗೊತ್ತಿಲ್ಲದ ಎಷ್ಟೋ ವಿಷಯಗಳ ಕುರಿತು ಮಾಹಿತಿ ಪಡೆದು, ನಮ್ಮದೆ ಆದಂತ ವಿಭಿನ್ನವಾದ ಫೇಸ್ಬುಕ್ ಅಕೌಂಟ್ ತೆರದು ಜನಸ್ನೇಹಿಯಾದರೆ ಹೇಗೆ...?
ಬದುಕು ನಿ(ನ)ಮ್ಮದು. ಅದನ್ನು ಸುಂದರಗೊಳಿಸಿಕೊಂಡು ಹೋಗುವ ಸಾಮಥ್ರ್ಯ ನಿ(ನ)ಮ್ಮಲ್ಲಿದೆ..... ಆದರೆ, ಆ ಕುರಿತು ವಿವೇಚನಾಯುತವಾಗಿ ಚಿಂತಿಸಬೇಕಷ್ಟೆ...! ಇನ್ನೊಬ್ಬರ ತಪ್ಪುಗಳನ್ನು ಹುಡುಕುತ್ತ, ನಿ(ನ)ಮ್ಮ ಬದುಕನ್ನು ಸಂಕುಚಿತ ಮಾಡಿಕೊಳ್ಳಬಾರದು.... ಏನಂತಿರಾ...?

ಮಂಗಳವಾರ, ಏಪ್ರಿಲ್ 8, 2014

ಕಮರಿ ಹೋದ ಸ್ನೇಹಿತನ `ಚಿತ್ರ ನಗರಿ ಕನಸು...'

ಇದೊಂದು ಹುಚ್ಚು ಸಾಹಸಕ್ಕೆ ಕೈ ಹಾಕಿದವನ ಕತೆ. ಮರಾಠಿಯ `ನಟರಂಗ' ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡುತ್ತೇನೆ. ಅತುಲ ಕುಲಕರ್ಣಿ ಮಾಡಿದ ಪಾತ್ರವನ್ನು ಪ್ರಕಾಶ ರೈ ಕಡೆಯಿಂದ ಮಾಡಿಸುತ್ತೇನೆ. ಪ್ರಕಾಶ ಅವರಲ್ಲಿರುವ ಡಿಫರೆಂಟ್ ಕಲಾಕಾರನನ್ನು ಹೊರಗೆ ತರುತ್ತೇನೆ. ಅದಕ್ಕೆಲ್ಲಾ ಬೇಕಾಗುವ ಹಣ ತರುತ್ತೇನೆ ಎಂದುಕೊಂಡು ಹಳ್ಳಿಗೆ ಹೋಗಿದ್ದ ಸ್ನೇಹಿತ ವಾಪಸ್ಸು ಬಂದ ಬಳಿಕ ಚಿತ್ರರಂಗದ ಹೆಸರು ತೆಗೆದರೆ ಸಾಕು ಮಾರುದ್ದ ಓಡಿ ಹೋಗುತ್ತಿದ್ದಾನೆ.
ಅತ್ತ ಸಾಧನೆಯನ್ನೂ ಮಾಡಲು ಆಗದವನೂ ಈಗ ತನ್ನ ಕನಸ್ಸನ್ನೆ ಬಿಟ್ಟು ಇದ್ದುದ್ದರಲ್ಲಿಯೇ ಜೀವನ ಸಾಗಿಸಿ. ಸಾಧಕನಾಗಿ ಬದುಕುವುದಕ್ಕಿಂದ ಸಾಮಾನ್ಯನಾಗಿಯೇ ಬದುಕೋಣ ಎಂದು ನಿರ್ಣಯ ಮಾಡಿದ ಓರ್ವ ತಿಕ್ಕಲು ವ್ಯಕ್ತಿಯ ವಿಚಿತ್ರ ಕಥೆ ಇದು.
ಆತನಿಗೆ ಕನ್ನಡ ಚಿತ್ರರಂಗದಲ್ಲೊಂದು ಹೊಸ ಬದಲಾವಣೆ ತರುವ ಹುಚ್ಚು ಕನಸು. ಅದೇನೆಂದರೆ ರಂಗನಾಯಕಿ ಬಳಿಕ ಯಾವುದೇ ರಂಗಭೂಮಿ ಪ್ರದಾನ ಚಿತ್ರಗಳು ಕನ್ನಡದಲ್ಲಿ ಬಂದಿಲ್ಲ. ಅದನ್ನು ಸಾಧ್ಯವಾಗಿಸಬೇಕು ಎಂದು ಪಣತೊಟ್ಟ ಆತನನ್ನು ಮರಾಠಿ ಚಿತ್ರರಂಗ ತುಂಬಾ ಅಕರ್ಷಿಸುತ್ತದೆ. ಅದಕ್ಕೆ ಕಾರಣ ಮರಾಠಿಯಲ್ಲಿ ಯಶಸ್ವಿ ಗಳಿಸಿದ `ನಟರಂಗ' ಮತ್ತು `ಬಾಲಗಂಧರ್ವ' ಚಿತ್ರಗಳು.

ನಟರಂಗವನ್ನು ಆತ ಹತ್ತಿರ ಹತ್ತಿರ ನೂರು ಸಲ ನೋಡಿರುತ್ತಾರೆ. ಇನ್ನು ಬಾಲಗಂಧರ್ವ ಅದೇ ದಾರಿಯಲ್ಲಿದೆ.
ಇಂತಿಪ್ಪ ರವಿ ಬೆಳಗೆರೆ ಮಾರ್ಗದರ್ಶನದಲ್ಲಿ ಪ್ರಕಟಗೊಂಡಿರುವ ಬಿ.ಕೆ. ಪಂಕಜರ `ಕಲ್ಪನಾ ವಿಲಾಸ' ಪುಸ್ತಕವನ್ನು ಓದಿದ ಬಳಿಕ, ಕನ್ನಡದಲ್ಲೇಕೆ ಕಲ್ಪನಾ ಕುರಿತು ಚಿತ್ರ ಮಾಡಬಾರದು ಎಂದುಕೊಂಡು ಗುಡಗೇರಿ ಬಸವರಾಜರ ಹಳ್ಳಿ, ಅವರು ವಾಸಿಸುವ ಮನೆ, ಅವರೊಂದಿಗೆ ಕೆಲಸ ಮಾಡಿದ ಕೆಲವು ಕಲಾಕಾರರನ್ನು ಭೇಟಿ ಮಾಡುತ್ತಾನೆ. ಅಲ್ಲದೇ ಗೋಟೂರ ಐಬಿಗೆ ಹೋಗಿ ಅಂದು ಕಲ್ಪನಾ ಕಳೆದ ಕೊನೆ ದಿನಗಳ ಆ ಜಾಗವನ್ನೂ ನೋಡಿ ಬಂದು..
ತಾನೇ ಒಂದು ಕಥೆಯನ್ನು ಬರೆದು ರವಿ ಬೆಳೆಗೆರೆಯವರ ಮುಂದೆ ಹೋಗಿ... ನಿಮ್ಮ ಪುಸ್ತಕವಿಟ್ಟುಕೊಂಡು ಇಂದಿಷ್ಟು ಚಿತ್ರಕಥೆ ಬರೆದಿದ್ದೇನೆ. ತಗೊಳ್ಳಿ ಚಿತ್ರವನ್ನು ಮಾಡೋಣ ಎನ್ನಬೇಕು ಎಂದುಕೊಂಡಿರುತ್ತಾನೆ. ಆದರೆ ಅಷ್ಟೊತ್ತಿಗೆ.. ಅದೇ ರೀತಿಯ ಕಥೆಯುಳ್ಳ ಚಿತ್ರ ಸೆಟ್ಟೇರಿ ಬಿಟ್ಟಿರುತ್ತದೆ. ಅದೇ `ಅಭಿನೇತ್ರಿ'.
ಚಿತ್ರರಂಗದ ಅ,ಆ,ಇ,ಈ ಗೊತ್ತಿಲ್ಲದ ಈತ. ಯಾರಲ್ಲಿಯೂ... ಯಾವ ಚಿತ್ರದಲ್ಲಿಯೂ ಕೆಲಸ ಮಾಡದ ಈತ... ಒಂದು ರೀತಿ ಚಿತ್ರರಂಗದ ವಿಷಯದಲ್ಲಿ ಅಜ್ಞಾನಿ. ಯಾವುದೇ ಕ್ಯಾಮೆರಾ ಮ್ಯಾನ್ ಕೈಯಲ್ಲಿ ದುಡಿದಿಲ್ಲ. ಕ್ಯಾಮೆರಾದ ತಂತ್ರಜ್ಞಾನವೂ ಗೊತ್ತಿಲ್ಲ. ಆದರೆ ಕೈಗೆ ಕ್ಯಾಮೆರಾ ಕೊಟ್ಟರೆ ಅದ್ಭುತವಾಗಿ ಶೂಟಿಂಗ್ ಮಾಡಬಲ್ಲ... ಯಾವ ಕೋನದಲ್ಲಿ ಯಾವ ರೀತಿ ದೃಶ್ಯ ತೆಗೆದೆರೆ ಚೆನ್ನ ಎಂಬುದರ ಕಲ್ಪನೆ ಆತನಿಗಿದೆ.
ಊರಲ್ಲಿ ಒಂದಿಷ್ಟು ನಾಟಕ ನಿರ್ದೇಶನ ಮಾಡಿರುವ ಈತ ಯಾವ ನಿರ್ದೇಶಕನ ಬಳಿಯೂ ಕೆಲಸ ಮಾಡಿಲ್ಲ... ಆದರೆ ಎರಡು ಕಿರುಚಿತ್ರಗಳ ನಿರ್ಮಾಣಕ್ಕೆ ಕೈ ಹಾಕಿ ಸುಟ್ಟುಕೊಂಡಿದ್ದಾನೆ. ಕಾರಣ ನಿರ್ಮಾಪಕನೂ ಆಗಬಲ್ಲ ಜ್ಞಾನವಿದೆ. ಆದರೆ ಹಣವಿಲ್ಲ. ಏನೇ ಮಾಡಿದರೂ ತಿಂಗಳ ಸಂಬಳವೇ ಆಗಬೇಕು. ಆದರೆ ಅದರಲ್ಲಿ ಕಡು ಬಡತನದ ಮನೆಯೂ ನಡೆಸಬೇಕು. ಹೀಗಾಗಿ ಎಲ್ಲವೂ ಅಪೂರ್ಣ.
ತಾನು ಕನಸಿಸಿದ್ದ ಚಿತ್ರ ಈಗಾಗಲೇ ತಯಾರಾಗುತ್ತಿದೆ ಎಂದು ಅರ್ಥವಾದ ತಕ್ಷಣ ಆತ ತಾನು ಬರೆದಿಟ್ಟಿದ್ದ 37 ಪುಟಗಳ ಅರ್ಧ ಚಿತ್ರಕಥೆಯನ್ನು ಸುಟ್ಟುಹಾಕಿ ಅವತ್ತೊಂದಿನ ಎರಡು ಬಿಯರ್ ಕುಡಿದು ದುಃಖದಿಂದ ಮಲಗಿ ಬಿಟ್ಟಿದ್ದ.
ಇದಾದ ಕೆಲವು ದಿನಗಳ ಬಳಿಕ ಇತ್ತೀಚೆಗೆ ಆತನಿಗೊಂದು ಮತ್ತೊಂದು ಆಸೆ ಹುಟ್ಟಿಕೊಳ್ಳುತ್ತದೆ. ಅದೇನೆಂದರೆ, ಹೇಗಾದರೂ ಮಾಡಿ ಮರಾಠಿಯ `ನಟರಂಗ' ಚಿತ್ರವನ್ನು ಕನ್ನಡದಕ್ಕೆ ರಿಮೇಕ್ ಮಾಡುವುದು. ಅದಕ್ಕಾಗಿ ಆತನಿಗೆ ರಿಮೇಕ್ ಹಕ್ಕು ಕಡಿಮೆ ಮೊತ್ತದಲ್ಲಿ ಲಭಿಸುವದಿತ್ತು. ಕಾರಣ ಮರಾಠಿ ಚಿತ್ರರಂಗದಲ್ಲಿ ಆತನಿಗೆ ಅನೇಕ ಸ್ನೇಹಿತರಿದ್ದಾರೆ. ಆತ ತಡಮಾಡದೆ ಸಾಹಸಕ್ಕೆ ಕೈ ಹಾಕಿಯೇ ಬಿಟ್ಟ. ಆದರೆ ಜೇಬಲ್ಲಿ ತಿಂಗಳ ಸಂಬಳದಲ್ಲಿ ಉಳಿದಿದ್ದ ಒಂದಿಷ್ಟು ನೂರರ ನೋಟುಗಳು ಬಿಟ್ಟರೆ ಯಾವುದೇ ಹಣವಿಲ್ಲ. ಆಗ ಅವನಿಗೆ ಹೊಳೆದಿದ್ದು, ಊರಲ್ಲಿ ಇರುವ ಒಂದೂವರೆ ಎಕರೆ ಹೊಲ ಮಾರಿದರೆ ಹೇಗೆ ಎನ್ನುವ ವಿಚಾರ...!?
ಊರಿಗೆ ಹೋಗುತ್ತಾನೆ. ಹೊಲ ಮಾರುವ ವಿಚಾರ ತಂದೆಗೆ ಹೇಳಿದಾಗ `ಮಗ ಹೊಲ ಮಾರಿ ಊರಲ್ಲಿ ಹೊಸ ಮನೆ ಕಟ್ಟುತ್ತಾನೆ' ಎಂದುಕೊಳ್ಳುತ್ತಾನೆ. ಊರ ಪಂಚರು ಸೇರುತ್ತಾರೆ. ಇವರ ಹೊಲದ ಪಕ್ಕದವರೇ ಅದನ್ನು ಖರೀದಿಸಲು ಮುಂದೆ ಬರುತ್ತಾರೆ. ಈತನ ಮನಸ್ಸಿನಲ್ಲಿ ಹೊಲಕ್ಕೆ ಕನಿಷ್ಠ ಒಂದೂವರೆ ಕೋಟಿಯಾದರೂ ಬರಬೇಕು ಎಂಬುದಾಗಿರುತ್ತದೆ.
ಆದರೆ ಊರಲ್ಲಿನ ನೀಚ ಹಿರಿಯರೆಲ್ಲಾ ಸೇರಿ... ಇಲ್ಲಿ ಜಮೀನಿಗೆ ಬೆಲೆಯಿಲ್ಲ. ಮೊದಲೇ ಗುಡ್ಡದ ಹೊಲ. ಕಾಡು ಪ್ರಾಣಿಗಳ ಹಾವಳಿ ಜಾಸ್ತಿ ಎಂದು ಅದನ್ನು 15 ಲಕ್ಷಕ್ಕೆ ಬೆಲೆ ಕಟ್ಟುತ್ತಾರೆ. ಆದರೆ ಅದು ಕೊನೆಗೊಂಡಿದ್ದು 10 ಲಕ್ಷದ ವ್ಯವಹಾರಕ್ಕೆ...!
ಅತ್ತ ಪಂಚರೂ ಹಾಗೂ ಇವರಪ್ಪ ಹೊಲದ ವ್ಯವಹಾರ ಮಾತನಾಡುತ್ತಿದ್ದರೆ, ಇತ್ತ ಈ ಹುಚ್ಚ ತನ್ನ ಚಿತ್ರದ ಕನಸಿನೊಳಗೆ ಇಳಿದಿರುತ್ತಾನೆ-`ಕೈಗೆ ಬರುವ ಹತ್ತು ಲಕ್ಷದಲ್ಲಿ ಅತುಲ ಕುಲಕರ್ಣಿ ಮಾಡಿದ ಪಾತ್ರಕ್ಕೆ ಪ್ರಕಾಶ ರೈ ಒಪ್ಪಿಸಲು ಸಾಧ್ಯವೆ....? ಹಿಂದೆ `ಭಾಗ ಮಿಲ್ಕಾ ಭಾಗ'ದಲ್ಲಿ ರೈ 1 ರೂ. ಮಾತ್ರ ತೆಗೆದುಕೊಂಡಿದ್ದರು. ನನ್ನ ಚಿತ್ರಕ್ಕೆ ಕನಿಷ್ಠ 1 ಲಕ್ಷ ರೂ.ಗಳನ್ನಾದರೂ ಅವರಿಗೆ ಕೊಡಬೇಕು. ಇನ್ನುಳಿದ ಹಣದಲ್ಲಿ ಉಳಿದ ಪಾತ್ರ ಸೇರಿದಂತೆ ಉಳಿದೆಲ್ಲವೂ ಸಾಧ್ಯವೆ...? ಎಂದು ವಿಚಾರ ಮಾಡುತ್ತಿರುತ್ತಾನೆ. ಆಗ ಅವರಪ್ಪ ಏ ಪುಟ್ಯಾ ಏನ್ ವಿಚಾರ ಮಾಡಾತೀಲೆ? ಎಂದು ಕೇಳುತ್ತಾನೆ. ತನ್ನ ಕನಸಿನಿಂದ ಅರ್ಧಂಬರ್ಧ ಹೊರಬಂದ ಈತ, `ಅದು... ಅದು... ಪ್ರಕಾಶ ರೈ 1ಲಕ್ಷಕ್ಕೆ ಒಪ್ಪುತ್ತಾರ ಅಂತಾ' ಎಂದು ಬಿಡುತ್ತಾನೆ.
ಪ್ರಕಾಶ ರೈ ಎಂದಾಕ್ಷಣ ಇವರಪ್ಪನಿಗೆ ತನ್ನ ಮಗಾ ಏನು ಮಾಡಲು ಹೊರಟಿದ್ದಾನೆ ಎನ್ನುವುದು ಅರ್ಥವಾಗಿ ಬಿಟ್ಟಿರುತ್ತದೆ. `ಮಗನ... ನೀ.. ಹೊಲಾ ಮಾರಕ ಯಾಕ್ ಹೊಂಟಿ ಅನ್ನೊದ ನಂಗ್ ಈಗ ತಿಳಿತ. ಹಿರೇರ್ ಎದ್ದ ನಡೀರಿ. ಈ ಮಗಾ ಜೀವನದಾಗ ಉದ್ಧಾರ ಆಗೊಲ್ಲ. ನಮಗ ಮನಿ ಅಲ್ಲ ಸಮಾಧಿ ಕಟ್ಟತಾನ' ಎಂದು ಬೈದು ಹಿರಿಯರೊಂದಿಗೆ ಅವರಪ್ಪ ಎದ್ದು ಹೋಗುತ್ತಾನೆ.
ಎಲ್ಲರೂ ಎದ್ದು ಹೋದ ಬಳಿಕ ಈತ ನಿಜ ಲೋಕಕ್ಕೆ ಬರುತ್ತಾನೆ.
ಸಂಜೆ ಮನೆಯ ಹೊಸ್ತಿಲು ದಾಟುತ್ತಿದ್ದಂತೆಯೇ... ಅಕ್ಕಂದಿರಿಂದ ಬೈಗುಳಗಳ ಮಂಗಳಾರತಿ. ತಾನು ಕೆಲಸ ಮಾಡುವ ನಗರಕ್ಕೆ ವಾಪಸ್ಸು ಬರಲು ಬಸ್ ಹತ್ತುತ್ತಾನೆ. ಬಸ್ಸಿನಲ್ಲಿ ಕೂತಾಗ ಯೋಚಿಸುತ್ತಾನೆ. `ಅಯ್ಯೊ 10 ಲಕ್ಷದಲ್ಲಿ ಏನೂ ಆಗೋದಿಲ್ಲ. ಈ ಹೊಲಾನೂ ಮಾರೋದ ಬೇಡ. ನಾನೇನೂ ದೊಡ್ಡ ಫಿಲ್ಮ್ ಡೈರೆಕ್ಟರ್-ನಿರ್ಮಾಕನೂ ಆಗೋದು ಬೇಡ. ಒಂದಿಷ್ಟು ದಿನ ಸಿಟಿಯಾಗ ಉಳಿದು ವಾಪಸ್ಸು ಬಂದ ಇದೇ ಹೊಲದಾಗ ರೈತನಾಗಿ ಉಳಿಯೋಣ' ಎಂದುನಿರ್ಧರಿಸುತ್ತಾನೆ.
ಸದ್ಯ ತನ್ನ ಕರ್ತವ್ಯದಲ್ಲಿ ತೊಡಗಿರುವ ಈತನಿಗೆ ಈಗ ಚಿತ್ರರಂಗದ ಹುಚ್ಚು ಹೋಗಿ ಬಿಟ್ಟಿದೆ. ಅಷ್ಟೇ ಏಕೆ ದಿನಕ್ಕೊಂದು ಫಿಲ್ಮ್ ನೋಡಿ ಮಲಗಿಕೊಳ್ಳುತ್ತಿದ್ದವನೂ, ಈಗ ಫಿಲ್ಮ್ಗಳ ಉಸಾಬರಿಗೇ ಹೋಗುತ್ತಿಲ್ಲ. ಊರಿಂದ ಬಂದ ದಿನವೇ ರೂಮಲ್ಲಿದ್ದ ಸುಮಾರು 2,000ಕ್ಕೂ ಹೆಚ್ಚು ಫಿಲ್ಮ್ ಸಿಡಿಗಳನ್ನು ತಿಪ್ಪಿಗೆ ಎಸೆದಿದ್ದಾನೆ.!!!!!
ಮುಂದೇನೂ ಈತನ ಗತಿ... ಕನಸ್ಸೊಂದು ಕಮರಿ ಹೋಗಿದೆ...