ಗುರುವಾರ, ಏಪ್ರಿಲ್ 10, 2014

ಫೇಸ್ಬುಕ್  ಬಳಕೆ ಹೀಗಿದ್ದರೆ ಚೆನ್ನ.....

ಆಗದಿರಲಿ ಅವಾಂತರ...!

---ನಾಗರಾಜ್ ಬಿ.ಎನ್. ಬಾಡ---
ಆಧುನಿಕ ತಂತ್ರಜ್ಞಾನಗಳು ಪ್ರಪಂಚವನ್ನು ಕಿರಿದು ಮಾಡಿ ಬಿಟ್ಟಿವೆ. ಮೊಬೈಲ್, ಫೇಸ್ಬುಕ್ ನಂತಹ ಸಂಪರ್ಕ ಸಾಧನಗಳಿಂದ ಎಲ್ಲೋ ಇರುವ ಬಂಧು-ಬಾಂಧವರನ್ನು, ಸ್ನೇಹಿತರನ್ನು ಕ್ಷಣ ಮಾತ್ರದಲ್ಲಿ ಸಂಪರ್ಕಿಸಿ ಅವರ ಯೋಗ ಕ್ಷೇಮವನ್ನು ವಿಚಾರಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಅಲ್ಲದೆ, ದೂರದರ್ಶನ ಎಂಬ ಸಾಧನ ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿ ನಡೆದ ಘಟನೆಯನ್ನು ಕ್ಷಣ ಮಾತ್ರದಲ್ಲಿ ನಮ್ಮ ಕಣ್ಣೆದುರಿಗೆ ತಂದು ನಿಲ್ಲಿಸುತ್ತಿದೆ. ಸಂತಸದ ವಿಷಯವೇ.....
ಈ ಸಂಪರ್ಕ ಜಾಲದಲ್ಲಿ ಫೇಸ್ಬುಕ್ ಎಂಬುದು ಮುಂಚೂಣಿಯಲ್ಲಿದೆ. ಸ್ನೇಹಿತರನ್ನು, ಸ್ನೇಹಿತರ ಸ್ನೇಹಿತರನ್ನು, ಕಳೆದು ಹೋದ ಸ್ನೇಹಿತರನ್ನು ಹೀಗೆ ಅನೇಕರನ್ನು ಅದು ಒಂದುಗೂಡಿಸುತ್ತದೆ. ಸ್ನೇಹದ ಬಳಗ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತ ಹೋಗುತ್ತದೆ. ಆದರೆ ಅಲ್ಲಿ ಪರಿಚಯವಿಲ್ಲದವರು ಕೂಡಾ ಬಂದು ಸೇರಿಕೊಳ್ಳುತ್ತಾರೆ. ಆಗಲೇ ಏನೇನೋ ಅವಾಂತರಗಳು ಸೃಷ್ಟಿಯಾಗುತ್ತವೆ...!
ಮುಖ್ಯವಾಗಿ ಯುವತಿಯರು ಈ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ತೀರಾ ಅಗತ್ಯ. ಗೊತ್ತು ಪರಿಚಯದವಿಲ್ಲದವರನ್ನು ಸ್ನೇಹದ ಬಳಗಕ್ಕೆ ಸೇರಿಸಿಕೊಳ್ಳಲೇ ಬೇಡಿ. ಒಂದು ವೇಳೆ ಸೇರಿಸಿಕೊಂಡರೆ ಅವರ ಜೊತೆ ಯಾವುದೇ ಕಾರಣಕ್ಕೂ `ಚಾಟ್'ಗೆ ಇಳಿಯಬೇಡಿ. ಚಾಟ್ ಮಾಡಿ ಅವರ ಸ್ನೇಹವನ್ನು ಸಂಪಾದಿಸಬೇಕೆಂದರೆ ಮೊದಲು ಅವರ ಪ್ರೊಫೈಲ್ಗಳನ್ನು ಗಮನಿಸಿ. ಅವರು ಅಪ್ಲೋಡ್ ಮಾಡಿರುವ ಚಿತ್ರಗಳು ಯಾವುದು...? ಅವರ ಬರವಣಿಗೆಯ ಹಿನ್ನೆಲೆಯ ಧ್ವನಿ ಏನು..? ಅವರು ತಮ್ಮ ಸ್ನೇಹಿತರ ಯಾವ ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ...? ಎಂಬಿತ್ಯಾದಿ ಅಂಶಗಳ ಕುರಿತು ಸೂಕ್ಷ್ಮಾತಿ ಸೂಕ್ಷ್ಮವಾಗಿ ಗಮನಿಸಿ. ಆಗ ನಿಮಗೆ ಆ ಸ್ನೇಹಿತರ ಮನಸ್ಥಿತಿ ಹಾಗೂ ಗುಣಗಳ ಕುರಿತು ಚಿಕ್ಕದಾದ ಮಾಹಿತಿ ದೊರೆಯುತ್ತದೆ. ಆಗ ಅವರು ನಿಮ್ಮ ಸ್ನೇಹಕ್ಕೆ ಯೋಗ್ಯರೇ ಏನು ಎನ್ನುವುದನ್ನು ಯೋಚಿಸಿ. ನಿಮ್ಮ ವಿವೇಚನೆಗೆ ತಕ್ಕಂತೆ ಸೂಕ್ತ ನಿರ್ಧಾರಕ್ಕೆ ಬನ್ನಿ.
ಯಾಕೆಂದರೆ, ಈ ಫೆಸ್ಬುಕ್ ಬಳಕೆ ನಮ್ಮ ಬದುಕಿಗೆ ಮಾರಕವಾಗದ ರೀತಿಯಲ್ಲಿರಬೇಕು. ಹುಚ್ಚಾಟಕ್ಕೆ ಬಿದ್ದು ಸ್ನೇಹಿತರ ಜೊತೆ ದಿನವಿಡೀ ಚಾಟ್ ಮಾಡುತ್ತ, ಕಂಡ ಕಂಡವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ತರವಲ್ಲ. ಕೆಲವರು ತಮ್ಮ ಖಾಸಗಿ ಬದುಕಿನ ಚಿತ್ರಗಳನ್ನು ಅಪ್ಲೋಡ್ ಮಾಡುತ್ತ ತಮ್ಮನ್ನು ತಾವೇ ಸಾರ್ವಜನಿಕವಾಗಿ ಹರಾಜು ಹಾಕಿಕೊಳ್ಳುತ್ತಾರೆ. ಇದಕ್ಕೆ ತುಸು ಕಡಿವಾಣ ಹಾಕಿಕೊಳ್ಳುವುದು ಒಳಿತು.
ಅನೇಕರು ಫೇಕ್ ಫೇಸ್ಬುಕ್ ಅಕೌಂಟ್ ತೆರೆದು ಎಷ್ಟೋ ಜನಕ್ಕೆ ಏಮಾರಿಸಿದ್ದಾರೆ. ಇದರಿಂದ ಎಷ್ಟೋ ಹದಿಹರಿಯದ ಯುವಕರು, ಯುವತಿಯರು ತಮ್ಮ ಬದುಕನ್ನೇ ಹಾಳು ಮಾಡಿಕೊಂಡ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಯುವತಿಯರ ಭಾವಚಿತ್ರವನ್ನು ಡೌನ್ಲೋಡ್ ಮಾಡಿಕೊಂಡು ಅಶ್ಲೀಲ ಚಿತ್ರವನ್ನಾಗಿ ಮಾಡಿ, ಮತ್ತೆ ಪುನಃ ಫೇಸ್ಬುಕ್ಗೆ ಅಪ್ಲೋಡ್ ಮಾಡಿ ವಿಕೃತ ಆನಂದವನ್ನು ಪಡೆಯುವ ಮನಸ್ಸುಗಳು ಕೂಡಾ ನಮ್ಮ ಫೇಸ್ಬುಕ್ ಸ್ನೇಹಿತರ ಬಳಗದಲ್ಲಿರಬಹುದು...?
ಈ ಹಿನ್ನೆಲೆಯಲ್ಲಿ ಪಾಲಕರಾದವರು ತಮ್ಮ ಮಕ್ಕಳ ಕುರಿತು ತುಸು ಗಮನ ಹರಿಸುವುದು ಒಳಿತು. ಒಂದು ಸೀಮಿತ ಅವಧಿಗೆ ಮಾತ್ರ ಫೆಸ್ಬುಕ್ ಬಳಕೆ ಇರಲಿ. ಅದರಲ್ಲಿರುವ ಉತ್ತಮ ಅಂಶಗಳನ್ನಷ್ಟೇ ತೆಗೆದುಕೊಂಡು ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವಲ್ಲಿ ಅದು ಬಳಕೆಯಾಗಲಿ. ಪರಿಚಯವಿರುವ ಸ್ನೇಹಿತರ ಜೊತೆ ಮಾತ್ರ ಖಾಸಗಿ ಬದುಕಿನ ಸಂಗತಿಗಳು ವಿನಿಮಯವಾಗಲಿ.
ಪರಿಸರ ಪ್ರಜ್ಞೆ ಹೆಚ್ಚಿಸುವ. ಸಾಹಿತ್ಯದ ಕುರಿತು ಚರ್ಚೆ ನಡೆಸುವ, ಸಾಮಾನ್ಯ ಜ್ಞಾನದ ಬಗ್ಗೆ ಮಾಹಿತಿ ನೀಡುವ, ಪ್ರಕೃತಿಯ ರಮಣೀಯ ಚಿತ್ರಗಳ ಮೂಲಕ ಪ್ರಕೃತಿ ಪ್ರೇಮವನ್ನು ಬಡಿದೆಬ್ಬಿಸುವ ಎಷ್ಟೋ ಸದುಪಯೋಗಿ ಅಕೌಂಟ್ಗಳಿವೆ. ಅವರ ಸ್ನೇಹದ ಬಳಗಕ್ಕೆ ಪ್ರವೇಶ ಪಡೆದರೆ ಚೆನ್ನ. ಗೊತ್ತಿಲ್ಲದ ಎಷ್ಟೋ ವಿಷಯಗಳ ಕುರಿತು ಮಾಹಿತಿ ಪಡೆದು, ನಮ್ಮದೆ ಆದಂತ ವಿಭಿನ್ನವಾದ ಫೇಸ್ಬುಕ್ ಅಕೌಂಟ್ ತೆರದು ಜನಸ್ನೇಹಿಯಾದರೆ ಹೇಗೆ...?
ಬದುಕು ನಿ(ನ)ಮ್ಮದು. ಅದನ್ನು ಸುಂದರಗೊಳಿಸಿಕೊಂಡು ಹೋಗುವ ಸಾಮಥ್ರ್ಯ ನಿ(ನ)ಮ್ಮಲ್ಲಿದೆ..... ಆದರೆ, ಆ ಕುರಿತು ವಿವೇಚನಾಯುತವಾಗಿ ಚಿಂತಿಸಬೇಕಷ್ಟೆ...! ಇನ್ನೊಬ್ಬರ ತಪ್ಪುಗಳನ್ನು ಹುಡುಕುತ್ತ, ನಿ(ನ)ಮ್ಮ ಬದುಕನ್ನು ಸಂಕುಚಿತ ಮಾಡಿಕೊಳ್ಳಬಾರದು.... ಏನಂತಿರಾ...?

ಕಾಮೆಂಟ್‌ಗಳಿಲ್ಲ: