ಕಲ್ಪನೆಯ ಮೂಸೆಯಲ್ಲೊಂದು 'ಚರಮ ಗೀತೆ...!!'
'ಅದೊಂದು ಭೀಕರ ಕ್ಷಣ... ಎದೆ ಝಲ್ ಎನ್ನುವ ಸನ್ನಿವೇಶ...!!
ಮಧ್ಯಾಹ್ನ ಸ್ನೇಹಿತರ ಜೊತೆ ಊಟ ಮಾಡಿ ಹರಟೆ ಹೊಡೆಯುತ್ತಿದ್ದೆ. ಇದ್ದಕ್ಕಿದ್ದಂತೆ ತಲೆ ಸುತ್ತಿದ ಹಾಗಾಯಿತು. ತಲೆ ಹಿಡಿದುಕೊಂಡು ಅಲ್ಲಿಯೇ ಒರಗಿದೆ. ಏನಾಗುತ್ತಿದೆ ಎಂದು ತೋಚುತ್ತಿರಲಿಲ್ಲ. ನಿಧಾನವಾಗಿ ಕೈ-ಕಾಲುಗಳು ತಣ್ಣಗಾಗುತ್ತ ಹೋದವು....!
ಪಕ್ಕದಲ್ಲಿದ್ದ ಸ್ನೇಹಿತರು ಗರ ಬಡಿದಂತಾಗಿದ್ದರು. ಏನು ಮಾಡಬೇಕೆಂದು ತೋಚದೆ, ಕಂಗಾಲಾಗಿ ಗಾಳಿ ಹಾಕಿ ಉಪಚರಿಸಲು ಶುರುವಿಟ್ಟುಕೊಂಡಿದ್ದರು. ನನ್ನ ಕಣ್ಣಾಲಿಗಳು ಆಚೀಚೆ ಹೊರಾಳಾಡುತ್ತಿತ್ತು. ಎದೆಯಲ್ಲಿ ಉಸಿರು ಬಿಗಿಯಾಗಿ ಹಿಡಿದಂತ ಅನುಭವ. ಅಷ್ಟರಲ್ಲಾಗಲೇ, ಸ್ನೇಹಿತ ಆಸ್ಪತ್ರೆಗೆ ಕರೆದಕೊಂಡು ಹೋಗುವ ವ್ಯವಸ್ಥೆ ಮಾಡಿದ್ದ.
ಆಸ್ಪತ್ರೆಯಲ್ಲಿ....ತುರ್ತು ಚಿಕಿತ್ಸಾ ಘಟಕದಲ್ಲಿ ನನ್ನನ್ನು ದಾಖಲಿಸಿದ್ದಾರೆ. ಅತ್ಯಾಧುನಿಕ ಉಪಕರಣಗಳ ನಡುವೆ ನಾನು ನಿಸ್ತೇಜನಾಗಿ ಬಿದ್ದುಕೊಂಡಿದ್ದೇನೆ. ಪ್ರಾಥಮಿಕ ಚಿಕಿತ್ಸೆ ನೀಡಲು ಬಂದ ವೈದ್ಯರು ನಾಡಿ ಪರೀಕ್ಷೆ ಮಾಡಿದರು. ಕ್ಷಣ ಕ್ಷಣಕ್ಕೂ ನಾಡಿ ಬಡಿತ ಕಡಿಮೆಯಾಗುತ್ತಿರುವುದರಿಂದ ವೈದ್ಯರು ಸ್ಪಷ್ಟ ನಿಧರ್ಾರಕ್ಕೆ ಬಂದಿದ್ದರು. ಕಿವಿಗೆ ಹಾಕಿಕೊಂಡ ಸ್ಟೆತಸ್ಕೋಪನ್ನು ಕೆಳಗಿಳಿಸಿ, ದಾದಿಗೆ ಸನ್ನೆ ಮಾಡಿ ಹೊರ ನಡೆದರು.
ಅಲ್ಲಿದ್ದ ದಾದಿ ಆದೃ ಮುಖದಿಂದ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಳು. ಕೆಲವೇ ಕ್ಷಣದಲ್ಲಿ ಈತನ ಪ್ರಾಣ ಪಕ್ಷಿ ಹಾರಿ ಹೋಗಲಿದೆ ಎನ್ನುವ ಅನುಕಂಪದಿಂದಲೋ ಏನೋ...? ಆ ಕ್ಷಣವೂ ಕೂಡಾ ಹತ್ತಿರವಾಗುತ್ತ ಬಂದಿತ್ತು. ಸಂಪೂರ್ಣ ದೇಹವೇ ತಣ್ಣಗಾಯಿತು. ಅರೆಗಳಿಯಲ್ಲಿ ದೊಡ್ಡದಾದ ಉಸಿರನ್ನೆಳೆದು ಬಿಟ್ಟುಬಿಟ್ಟೆ....!! ಅಷ್ಟೊತ್ತು ಸಾವು-ಬದುಕಿನ ನಡುವೆ ಹೋರಾಡಿದ ಜೀವ ಸ್ಥಬ್ದವಾಗಿ ಅಲ್ಲಿ ಮಲಗಿತ್ತು. ಇಹಲೋಕದ ಯಾತ್ರೆ ಮುಗಿಸಿ ಪರ ಲೋಕಕ್ಕೆ ಪಯಣಿಸಿತ್ತು.
ಕಣ್ಣೀರ ಕೋಡಿ.....
ನಾನು ಅಸ್ತಂಗತನಾದ ಸುದ್ದಿ ತಿಳಿಯುತ್ತಿದ್ದಂತೆ, ಅಮ್ಮ-ಪಪ್ಪ ಅಲ್ಲಿಯೇ ಕುಸಿದು ಬಿದ್ದಿದ್ದರು. ಸಂದರ್ಭದ ಸ್ಥಿತಿಯನ್ನು ಅರಿತ ನೆರಹೊರೆಯವರು ವೈದ್ಯರನ್ನು ಕರೆಸಿ, ಅವರಿಬ್ಬರನ್ನೂ ಪ್ರಜ್ಞಾಹೀನರನ್ನಾಗಿಸಿದರು. ಮೂರ್ನಾಲ್ಕು ಗಂಟೆ ಬಿಟ್ಟು, ನನ್ನ ಮೃತದೇಹ ಆಸ್ಪತ್ರೆಯಿಂದ ಹೊರಬಿದ್ದಿತ್ತು. ಅದಾಗಲೇ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳ ಪೂರ್ವ ತಯಾರಿ ಮನೆಯಲ್ಲಿ ಭರದಿಂದ ಸಾಗಿತ್ತು.
ಅಂತೂ ನಾನು ಆಡಿ-ನಲಿದು-ದೊಡ್ಡವನಾದ ಮನೆಗೆ ನನ್ನ ನಿಸ್ತೇಜ ದೇಹವನ್ನು ತಂದರು. ನಾನು ಮನೆ ಬಿಟ್ಟು ಐದಾರು ತಿಂಗಳಾಗಿತ್ತು. ಅಂದು ಜೀವಂತಿಕೆಯಿಂದ ಹೋದ ನಾನು, ಇಂದು ಜೀವಂತಿಕೆ ಕಳೆದುಕೊಂಡು ಬಂದಿದ್ದೇನೆ. ಮೃತದೇಹವನ್ನು ಮನೆಯ ಪಡಸಾಲೆಯಲ್ಲಿಯೇ ಮಲಗಿಸಿದರು. ಮನೆಯಲ್ಲಿ ದಿನದ ಹೆಚ್ಚಿಗೆ ಸಮಯ ಕಳೆಯುತ್ತಿದ್ದ ನನ್ನ ಪ್ರೀತಿಯ ಕೊಠಡಿಯೊಳಗೆ ನನ್ನ ದೇಹವನ್ನು ಕೊಂಡೊಯ್ಯುತ್ತಾರೆ ಎಂದುಕೊಂಡಿದ್ದೆ. ಇಲ್ಲ, ಪಡಸಾಲೆಯಲ್ಲಿಯೇ ಇಟ್ಟು ತಲೆಯ ಪಕ್ಕ ಊದಬತ್ತಿ ಹಚ್ಚಿದ್ದರು. ಮೃತ ದೇಹ ಸೆಟೆದುಕೊಳ್ಳಬಾರದು ಎಂದು, ನೋಡಲು ಬಂದವರು ತಂದ ಎಣ್ಣೆಯನ್ನು ಕೈ-ಕಾಲುಗಳಿಗೆ ಗಟ್ಟಿಯಾಗಿ ತಿಕ್ಕುತ್ತಿದ್ದರು.
ಸಂಬಂಧಿಕರ, ಸ್ನೇಹಿತರ, ಆಪ್ತೇಷ್ಟರ ದುಃಖ ಮುಗಿಲು ಮುಟ್ಟುತ್ತಿತ್ತು. ಅತ್ತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಪ್ಪ-ಅಮ್ಮ ನಿಧಾನವಾಗಿ ಲೌಕಿಕ ಜಗತ್ತಿಗೆ ಬರುತ್ತಿದ್ದರು. ಹೆತ್ತವರ ನೋವು, ಕರುಳ ಕುಡಿ ಕಳೆದುಕೊಂಡ ಯಾತನೆ ಅವರಿಬ್ಬರ ಎದೆಯ ಕಟ್ಟೆಯನ್ನು ಒಡೆಸಿತ್ತು. ಅವರ ಅರಚಾಟ, ಕಿರುಚಾಟ, ಭೋರ್ಗರೆವ ಕಣ್ಣೀರು ಅಲ್ಲಿದ್ದವರನ್ನು ಇನ್ನಷ್ಟು ನೋವಿನ ಅಳುವಿನ ಕಡಲಿಗೆ ನೂಕುತ್ತಿತ್ತು. ಒಡ ಹುಟ್ಟಿದ ಜೀವಗಳು ಬದುಕು ನಾಶವಾದಂತೆ ನನ್ನ ಮೃತ ದೇಹವನ್ನು ಹಿಡಿದುಕೊಂಡು ಕಣ್ಣೀರಾಗುತ್ತಿತ್ತು. ನಮಗಿನ್ಯಾರು ದಿಕ್ಕು, ನಮ್ಮ ಸರ್ವಸ್ವವೇ ಹೋಯಿತಲ್ಲ ಎಂದು ಮನೆ ಮಂದಿಯೆಲ್ಲ ಬಿದ್ದುಬಿದ್ದು ಅಳುತ್ತಿದ್ದರು.
ಕೊನೆಗೂ ಆ ಅಂತಿಮ ಕ್ಷನ ಬಂದೇ ಬಿಟ್ಟಿತು. ನನ್ನ ದೇಹಕ್ಕೆ ಸ್ನಾನ ಮಾಡಿಸಿ, ಬಟ್ಟೆ ತೊಡಿಸಿದರು. ಚಟ್ಟದ ಮೇಲೆ ಮಲಗಿಸಿ, ಹೂಮಾಲೆ ಹಾಕಿ ಅಂತಿಮ ನಮನ ಸಲ್ಲಿಸಿದರು. ಕೆಲವೇ ನಿಮಿಷದಲ್ಲಿ ಚಟ್ಟಕ್ಕೆ ಹೆಗಲು ಕೊಟ್ಟು ಅಂತ್ಯಸಂಸ್ಕಾರ ಸ್ಥಳಕ್ಕೆ ನನ್ನ ದೇಹನ್ನು ತಂದರು.
ರಾತ್ರಿ 11ರ ಸಮಯ. ಭೊರ್ಗರೆವ ಕಡಲಿನ ಶಬ್ದ ಅಲ್ಲಿದ್ದವರಿಗೆ ಆರ್ತನಾದದಂತೆ ಕೇಳುತ್ತಿತ್ತು. ನಿಶ್ಯಬ್ದಲ್ಲಿ ಸುಯ್ಯಂಗುಟ್ಟುವ ಕುಳಿರ್ಗಾಳಿಯು ಎದೆ ಬಡಿತವನ್ನು ಹೆಚ್ಚಿಸುತ್ತಿತ್ತು. ಮೊದಲೇ ಸಿದ್ಧಪಡಿಸಿದ ಕಟ್ಟಿಗೆ ರಾಶಿಯ ಮೇಲೆ ಮೃತ ದೇಹವನ್ನು ಮಲಗಿಸಿದು. ಅಂತಿಮ ನಮನ ಸಲ್ಲಿಸಲು ಹಾಕಿದ್ದ ಹೂ-ಮಾಲೆಗಳೆಲ್ಲವನ್ನು ಒಂದೊಂದಾಗಿ ತೆಗೆದರು. ತೊಡಿಸಿದ ಬಟ್ಟೆಯನ್ನೂ ಸಹ ತೆಗೆದು ದೇಹವನ್ನು ವಿವಸ್ತ್ರಗೊಳಿಸಿದರು.
ಹತ್ತಿರರದ ಬಂಧುವೊಬ್ಬರು(?) ಗಡಿಗೆ ಹಿಡಿದು ಮೂರು ಸುತ್ತು ಹಾಕಿ, ಹಿಮ್ಮುಖದಲ್ಲಿ ಅದನ್ನು ಅಲ್ಲಿಯೇ ಒಡೆದು ಹಾಕಿದರು. ಅಲ್ಲಿದ್ದ ಬಂಧು-ಮಿತ್ರರಿಗೆ ಇನ್ನು ಮುಂದೆ ನಾನು ಕೇವಲ ನೆನಪಷ್ಟೆ ಅನ್ನುವ ಸತ್ಯ ಸಾಕ್ಷಾತ್ಕಾರದ ಕಹಿ ಅನುಭವವಾದಂತಾಗಿ, ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಕೊನೆಗೂ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದರು. ನನ್ನ ದೇಹ ನಿಧಾನವಾಗಿ ಬೆಂಕಿಯ ಕೆನ್ನಾಲಿಗೆ ಬೆಂದು ಬೂದಿಯಾಗುತ್ತಿತ್ತು. ಮೂರ್ನಾಲ್ಕು ಗಂಟೆಯ ತರವಾಯ ಅಡಿ ಎತ್ತರಕ್ಕೆ ಹಾಕಿದ್ದ ಕಟ್ಟಿಗೆ ರಾಶಿ, ಆಳೆತ್ತರಕ್ಕೆ ವ್ಯಾಪಿಸುತ್ತಿದ್ದ ಬೆಂಕಿಯ ಅಬ್ಬರಕ್ಕೆ ಸುಟ್ಟು ಬೂದಿಯಾಗಿ ಹೋಗಿತ್ತು. ನನ್ನ ದೇಹವೂ ಕೂಡಾ ಆ ಕಟ್ಟಿಗೆಯ ಬೂದಿಯೊಳಗೆ ಬೆರೆತು ಬಿಟ್ಟಿತ್ತು. ಪಂಚ ಭೂತಗಳಲ್ಲಿ ನನ್ನ ದೇಹ ಒಂದಾಗಿ ಹೋಯಿತು.
'ಥೂ..... ಪಾಪಿ.. ಮುಂಡೇದು, ಹೊತ್ತು ನೆತ್ತಿಗೇರಿದರೂ ಇನ್ನೂ ಹಾಸಿಗೆಯ ಮೇಲೆಯೇ ಹೊರಳಾಡ್ತೀಯಾ' ಎಂದು ಅಮ್ಮ ತಣ್ಣನೆಯ ನೀರನ್ನು ತಂದು ಮುಖಕ್ಕೆ ಸಿಂಪಡಿಸಿದಳು. ಹುಸಿಕೋಪದ ಅಮ್ಮನ ಮುಖ ನೋಡಿ, 'ಅಬ್ಬಾ...!! ಬದುಕಿದ್ದೇನೆ. ಇನ್ನೂ ಸತ್ತಿಲ್ಲ' ಎಂದು ಕೊಂಡು ಮನದಲ್ಲಿಯೇ ನಸುನಕ್ಕೆ.......!!
-ನಾಗರಾಜ್ ಬಿ.ಎನ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ