ಗೂಡು ತೊರೆದ ನೀಲಿ ಹಕ್ಕಿ....
ಕೊನೆಗೂ ಎದೆ ಗೂಡಿನ ಗೋಡೆಗೆ ಬಳಿದುಕೊಂಡ ನೀಲಿ ಬಣ್ಣ ರಂಗೇರಲೇ ಇಲ್ಲ.
ಇರಲಿ.... ಹುಚ್ಚು ಹಿಡಿಸೋ ಆ ನೀಲಿ ಬಣ್ಣ ಆತನ ಬದುಕನ್ನು ಆವರಿಸಿ ಬಾನಂಗಳದ ನೀಲಿಯಲ್ಲಿ ಬೆರೆತು ಹೋಗುತ್ತವೆ ಅಂದುಕೊಂಡಿದ್ದ. ಆದರೆ, ಬಣ್ಣಗಳ ಹೊಯ್ದಾಟದಲ್ಲಿ ನೀಲಿ ಕಡುಗಪ್ಪಾಗಿ ಕಾಪಿಟ್ಟ ಮೋಡಗಳಾಗುತ್ತವೆ ಅನ್ನೋ ಸತ್ಯ ಅರಿವಾಗಿದ್ದು ಅವನಿಗೆ ಆವಾಗಲೇ..! ಮೋಡ ಕಾಪಿಟ್ಟಿದೆಯೋ, ಬಣ್ಣ ಕಾಪಿಟ್ಟಿದ್ದೇ ಮೋಡವಾಗಿದೆಯೋ ಗೊತ್ತಿಲ್ಲ. ಎದೆಯ ಬಾನಲ್ಲಿ ಮಾತ್ರ ಅಕಾಲಿಕ ವರ್ಷೆ ಧೋ ಧೋ... ಎಂದು ಸುರಿಯುತ್ತಿದೆ. ಮುಷ್ಟಿಯಗಲಷ್ಟಿಲ್ಲದ ಪುಟ್ಟ ಎದೆಗೂಡು ವರ್ಷೆ ಆರ್ಭಟಕ್ಕೆ ನಲುಗಿ ಹೋಗಿದೆ. ಪ್ರಳಯದಂಚಿಗೆ ತಲುಪಿ, ಆಸರೆಯ ಹುಡುಕಾಟದಲ್ಲಿ ಕಣ್ಣಂಚಿಗೆ ಜೋತು ಬಿದ್ದಿದೆ. ನಾಡಿ ಬಡಿತ ಕ್ಷಣ ಕ್ಷಣಕ್ಕೂ ನಿಧಾನವಾಗುತ್ತಿದೆ. ಅನಿಶ್ಚಿತತೆಯ ಉಸಿರು, ನಿಶ್ಚಿತ ಅರ್ಥಕ್ಕೆ ಕಾದು ಕುಳಿತಿದೆ....!
ಒಂದೇ ಸಮನೆ ಎದೆಗೆ ನಾಟಿದ ಬಾಣಕ್ಕೆ ರಕ್ತವೂ ಒಸರುತ್ತಿಲ್ಲ. ನರನಾಡಿಗಳಲ್ಲಿ ಹರಿದಾಡುವ ರಕ್ತ ಸಹ ವರ್ಷೆಯ ಚಳಿಗೆ ಹೆಪ್ಪುಗಟ್ಟಿ ಬಿಟ್ಟಿವೆ. ಮಡುಗಟ್ಟಿದ ಕನಸು ಬಾವಾಗಿ ಕಾಣಿಸಿಕೊಂಡಿದೆ. ಸಹಿಸಲಾಗದ ಪ್ರಚಂಡ ನೋವು. ಮಿಡುಕಾಡಲು ಅಸಾಧ್ಯವಾದ ಯಾತನೆ. ನಿಂತ ಜಾಗವೇ ಕುಸಿದು ಬೀಳಲಿದೆಯೋ ಅನ್ನೋ ಭಾವ.
ಆದರೂ ಸಾವರಿಸಿಕೊಳ್ಳುತ್ತಿದ್ದಾನೆ. ನೋವಿನ ವಿರುದ್ಧವೆ ಸೆಣಸಾಡುತ್ತಿದ್ದಾನೆ. ಎದೆಯಾಳದಲ್ಲಿ ಬೆಂಕಿಹಚ್ಚಿ, ಹೆಪ್ಪುಗಟ್ಟಿದ ರಕ್ತವನ್ನು ತಿಳಿಗೊಳಿಸುತ್ತಿದ್ದಾನೆ. ನೋವಿನ ಬಾವು ಸುಟ್ಟು ಭಸ್ಮವಾಗುತ್ತಿದೆ. ಕನಸಿನ ಅರಮನೆ ಚಟಪಟನೆ ಉರಿದು ಹೋಗುತ್ತಿದೆ. ಆ ಉರಿವ ಜ್ವಾಲೆ ನಿನ್ನ ಬಾಳ ದಾರಿಗೆ ಬೆಳಕಾಗಿರಲಿ.... ಅದರ ಶಾಖ ನಿನ್ನ ಬದುಕನ್ನು ಬೆಚ್ಚಗಿರಿಸಲಿ..... ಎಂದು ಮನದಲ್ಲಿಯೇ ಪ್ರಾರ್ಥಿಸುತ್ತಿದ್ದಾನೆ.
ಆತ ಅಂದು ಎದೆಗೂಡಿಗೆ ಬಳಿದುಕೊಂಡ ನೀಲಿ ಬಣ್ಣವೆಲ್ಲ ಈಗ ಮಾಯವಾಗಿದೆ. ಬೆಂಕಿಯ ಕೆನ್ನಾಲಿಗೆ ಎದೆಗೂಡು ಬೆಂದು ಹೋಗಿದೆ. ಕಣ್ಣಾಡಿಸಿದಲ್ಲೆಲ್ಲ ದಟ್ಟ ಹೊಗೆ. ಮೂಗಿಗೆ ಬಡಿಯುವ ಅರೆಬರೆ ಬೆಂದ ಕನಸಿನ ವಾಸನೆ. ಇನ್ನೇನಿದ್ದರೂ ಅಳಿದುಳಿದ ಬೂದಿಯಲ್ಲಿ ಕೆದುಕಾಟ. ಗೂಡು ಬಿಟ್ಟು ನೀಲಾಕಾಶಕ್ಕೆ ಹಾರಿದ ನೀಲಿ ಹಕ್ಕಿಯ ಹುಡುಕಾಟ. ನಿತ್ಯ... ನಿರಂತರ.
ಆತ ಅಂದು ಎದೆಗೂಡಿಗೆ ಬಳಿದುಕೊಂಡ ನೀಲಿ ಬಣ್ಣವೆಲ್ಲ ಈಗ ಮಾಯವಾಗಿದೆ. ಬೆಂಕಿಯ ಕೆನ್ನಾಲಿಗೆ ಎದೆಗೂಡು ಬೆಂದು ಹೋಗಿದೆ. ಕಣ್ಣಾಡಿಸಿದಲ್ಲೆಲ್ಲ ದಟ್ಟ ಹೊಗೆ. ಮೂಗಿಗೆ ಬಡಿಯುವ ಅರೆಬರೆ ಬೆಂದ ಕನಸಿನ ವಾಸನೆ. ಇನ್ನೇನಿದ್ದರೂ ಅಳಿದುಳಿದ ಬೂದಿಯಲ್ಲಿ ಕೆದುಕಾಟ. ಗೂಡು ಬಿಟ್ಟು ನೀಲಾಕಾಶಕ್ಕೆ ಹಾರಿದ ನೀಲಿ ಹಕ್ಕಿಯ ಹುಡುಕಾಟ. ನಿತ್ಯ... ನಿರಂತರ.
ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಹಾಡು, ಇನ್ನಿಲ್ಲವಾಯಿತೇ ಆ ಹಕ್ಕಿ ಹಾಡು.........
-ನಾಗರಾಜ್ ಬಿ.ಎನ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ