ನೀಲ ಗಗನದಲ್ಲೊಂದು ಕಪ್ಪು ಚುಕ್ಕಿ........
ಮುಂಜಾನೆ ಏಳಲಾಗದ ಸ್ಥಿತಿ. ತಲೆ ಧೀಂ ಧೀಂ ಎನ್ನುತ್ತಿದೆ. ಅಂತೂ ಸಾವರಿಸಿಕೊಂಡು ಪ್ರಾತಃವಿಧಿಗಳನ್ನು ಮುಗಿಸಿದ ಗಗನ, ಬೈಕ್ ಸ್ಟಾರ್ಟ್ ಮಾಡಿ ಕಚೇರಿ ಕಡೆ ಮುಖ ಮಾಡಿದ.
ಆತನ ಮನಸ್ಸು ಯಾಕೋ ವಿಚಿಲಿತವಾಗುತ್ತಿತ್ತು. ಕಳೆದ ದಿನ ಬಾಕಿಯಿದ್ದ ಕೆಲಸಗಳನ್ನು ಲಗುಬಗೆಯಲ್ಲಿ ಮುಗಿಸಿ, ಯಾವುದೋ ಕಾರ್ಯದ ನಿಮಿತ್ತ ಹೊರಗಡೆ ಹೋಗುತ್ತಾನೆ. ಅಲ್ಲಿ ತನ್ನ ಕೆಲಸ ಮುಗಿಸಿ ವಾಪಸ್ ಕಚೇರಿಗೆ ಮರಳುವ ವೇಳೆ, ರಸ್ತೆಯ ಚರಂಡಿ ಬಳಿ ಶೂಟ್-ಬೂಟು ಹಾಕಿಕೊಂಡಿರುವ ವ್ಯಕ್ತಿಯೊಬ್ಬ ಅಂಗಾತ ಬಿದ್ದಿರುವುದು ಕಣ್ಣಿಗೆ ಕಾಣುತ್ತದೆ.'ಅರೇ..... ಎಲ್ಲೋ ನೋಡಿದ್ದೀನಲ್ಲ ಈತನನ್ನ........?' ಎಂದು ಒಂದು ಕ್ಷಣ ಯೋಚನೆಗೆ ಬೀಳುತ್ತಾನೆ.
ಉಹೂಂ ..... ನೆನಪಿಗೆ ಬರುತ್ತಿಲ್ಲ. ಆತನನ್ನ ಹಿಂದಿರುಗಿ ನೋಡುತ್ತಲೇ ನಾಲ್ಕೈದು ಹೆಜ್ಜೆ ಇಟ್ಟಿರುತ್ತಾನೆ. ಮನಃಪಟಲದಲ್ಲಿ ಮಸುಕು ಮಸುಕಾದ ಮುಖವೊಂದು ಸ್ಪಷ್ಟರೂಪ ಪಡೆದುಕೊಳ್ಳುತ್ತದೆ. ಗಗನಗೆ ಒಮ್ಮೆಲೆ ಬರ ಸಿಡಿಲು ಬಡಿದಂತಾಗುತ್ತದೆ.
'ಭಗವಂತ...!' ಎಂದು ಉದ್ಘಾರ ತೆಗೆಯುತ್ತ, ಚರಂಡಿಯ ಪಕ್ಕದಲ್ಲಿ ಬಿದ್ದಿರುವ ಆತನಲ್ಲಿಗೆ ತಡವರಿಸುತ್ತ ಧಾವಿಸುತ್ತಾನೆ.
ಹತ್ತಿರ ಹೋಗುತ್ತಿದ್ದಂತೆ ಸಾರಾಯಿ ವಾಸನೆ ಗಬ್ಬೆಂದು ಮೂಗಿಗೆ ಬಡಿಯುತ್ತದೆ. ಸುತ್ತಮುತ್ತ ಒಮ್ಮೆ ಕಣ್ಣಾಡಿಸುತ್ತಾನೆ.
ಹಾದಿ ಹೋಕರು, 'ಏಯ್, ಬಿಡಪ್ಪ... ಕುಡ್ಕೊಂಡು ಬಿದ್ದವರಿಗೆ ಏನ್ ಸಹಾಯ ಮಾಡ್ತೀಯ' ಎಂದು ವ್ಯಂಗ್ಯವಾಡಿ ಮುಂದೆ ಸಾಗುತ್ತಾರೆ.
ಆತನನ್ನು ತನ್ನ ಕಾಲ ಮೇಲೆ ಮಲಗಿಸಿ, ತನ್ನ ಬ್ಯಾಗ್ನಲ್ಲಿದ್ದ ಬಾಟಲಿ ನೀರನ್ನು ತೆಗೆದು, ಆತನ ಮುಖಕ್ಕೆ ಸಿಂಪಡಿಸುತ್ತಾನೆ. ಅಮಲಿನಲ್ಲಿದ್ದಾತನ ಮುಖಕ್ಕೆ ತಣ್ಣನೆಯ ನೀರು ಬಿದ್ದಾಗ, ನಿಶೆಯ ಕಣ್ಣನ್ನು ಅರೆಬರೆಯಾಗಿ ತೆರೆಯುತ್ತಾನೆ.
'ಯಾರೋ ನೀನು, ಹೋಗಲೇ....' ಎನ್ನುತ್ತ, ಏನೇನೋ ಅಸಭ್ಯವಾಗಿ ಬೈಯ್ಯುತ್ತಾನೆ.
ಆತ ಭಾನು. ಮೂರುವರ್ಷದ ಹಿಂದೆ 'ಸಂದರ್ಭವೊಂದರಲ್ಲಿ' ಗಗನಗೆ ಆತನ ಮುಖ ಪರಿಚಯ. ಭಾನುವಿಗು ಕೂಡಾ ಗಗನ ಮುಖ ಪರಿಚಯವೇ. ಆದರೆ, ಭಾನುವಿಗೆ ಗಗನ ಯಾರು ಎಂದು ಈ ಸಂದರ್ಭದಲ್ಲಿ ಪರಿಚಯ ಹಿಡಿಯಲಾಗುತ್ತಿಲ್ಲ. ಯಾಕೆಂದರೆ, ಸಾರಾಯಿ ಆತನ ಮೈ-ಮನವೆಲ್ಲ ತುಂಬಿಕೊಂಡು, ಇಹದ ಪರಿವನ್ನೇ ಅಳಿಸಿಬಿಟ್ಟಿದೆ.(ಅಥವಾ ಮರೆತೂ ಇರಬಹುದು).
ಗಗನ ಒಳಗಗೊಳಗೆ ಅಳುತ್ತಿದ್ದಾನೆ. ಉಮ್ಮಳಿಸಿ ಬರುವ ದುಃಖವನ್ನು ತಡೆ ಹಿಡಿಯುತ್ತಿದ್ದಾನೆ.
'ಅಯ್ಯೋ..... ಎಂಥ ಅನ್ಯಾಯವಿದು?' ಎಂದು ವಿಧಿಯನ್ನು ಶಪಿಸುತ್ತಿದ್ದಾನೆ. ಮನದಲ್ಲಿ ಸಾವಿರ... ಸಾವಿರ ಆಲೋಚನೆಗಳು. ಅದಕ್ಕೆ ಪ್ರತಿಸ್ಪರ್ಧಿಯೆನ್ನುವಂತೆ ಹಿಪ್ಪಿ ಹಿಂಡುವಂತ ಯಾತನೆಗಳು.
ನೋವಿನಲ್ಲೂ ನಗುವನ್ನು ರೂಢಿಸಿಕೊಂಡ ಗಗನ, ನಗುತ್ತಲೇ ದಾರಿಹೋಕನೊಬ್ಬನನ್ನು ಕರೆದು ಸಹಾಯ ಕೇಳುತ್ತಾನೆ. ಆಟೋ ಎಂದು ಕೂಗಿ, ದಾರಿಹೋಕನ ಸಹಾಯದಿಂದ ಭಾನುವನ್ನು ರಸ್ತೆಗೆ ಕರೆತಂದು ಆಟೋ ಹತ್ತಿಸುತ್ತಾನೆ. ಗೋವರ್ಧನ ರಸ್ತೆಗೆ ಆಟೋ ತಿರುಗಿಸುವಂತೆ ಹೇಳಿ, ತಾನು ಪಯಣಿಸುತ್ತಾನೆ.
ಏನೇನೋ ಚಿತ್ರ ವಿಚಿತ್ರ ಯೋಚನೆಗಳು ಗಗನ ಮನದಾಳದಲ್ಲಿ ಸುಳಿದಾಡುತ್ತಿವೆ. ಎದೆಯಲ್ಲೊಂದು ಸಣ್ಣ ನಡುಕ. ಕಾರ್ಮೋಡಗಳೆಲ್ಲ ಒಂದೇ ಕಡೆ ಹೆಪ್ಪುಗಟ್ಟಿದಂಥ ಭಾವ. ಗಗನ ಮೊಗದಲ್ಲಿದ್ದ ನಗು ನಿಧಾನವಾಗಿ ಮಾಯವಾಗುತ್ತಿದೆ.
ತಲುಪಬೇಕಾದ ಗಮ್ಯ ಸ್ಥಳ ಸನಿಹವಾಗುತ್ತಿದೆ.
ಅದು ಭಾನುವಿನ ಮನೆ. 'ಸಂದರ್ಭ'ವೊಂದರಲ್ಲಿ ಆತನ ಮನೆ ಹಠ ಹಿಡಿದು ಹುಡುಕಿದ್ದ. ಆದರೆ, ಇಂತಹ ಸಂದರ್ಭದಲ್ಲಿ ಆ ಮನೆಯ ಹೊಸಿಲು ತುಳಿಯುತ್ತೇನೆ ಎಂದು ಆತ ಅಂದುಕೊಂಡಿರಲಿಲ್ಲ.
ಆಟೋ ಇಳಿದು ಭಾನುವಿನ ಒಂದು ಕೈಯ್ಯನ್ನು ತನ್ನ ಹೆಗಲ ಮೇಲಿಟ್ಟುಕೊಂಡು, ನಿಧಾನಕ್ಕೆ ಆತನ ಜತೆ ಹೆಜ್ಜೆ ಮನೆ ದಿಕ್ಕಿನತ್ತ ಹೆಜ್ಜೆ ಇಡುತ್ತಿದ್ದಾನೆ.
ಮನೆ ಮುಂದೆ ಬಂದು ಗಗನ ಕಾಲಿಂಗ್ ಬೆಲ್ ಒತ್ತಿ, ಭಾನುವಿನ ಹಿಂದೆ ಹಿಮ್ಮುಖ ಹಾಕಿಕೊಂಡು ನಿಲ್ಲುತ್ತಾನೆ. ಅಷ್ಟರಲ್ಲಿ ಒಳಗಿದ್ದ ನಾಯಿ ಒಂದೇ ಸಮನೆ ಕೂಗುತ್ತದೆ.
ಮನೆ ಬಾಗಿಲು ತೆರೆದ ಭಾನುವಿನ ಮಡದಿ, ಅಮಲಿನಲ್ಲಿ ಜೋಲಿ ಹೊಡೆಯುತ್ತಿದ್ದ ಗಂಡನನ್ನು ನೋಡಿ ಬಯ್ಯುತ್ತಾಳೆ.
'ಪ್ರತಿದಿನ ನಿಮ್ಮದು ಇದೇ ಹಣೆಬರಹ. ಹಾದಿ ಬೀದಿಲಿ ಹೋಗೋರು ನಿಮ್ಮನ್ನು ಕರ್ಕೊಂಡು ಮನೆಗೆ ತಂದು ಬಿಡೋದು. ಯಾಕಾದ್ರೂ ನಾ ನಿಮ್ಮನ್ನು ಮದ್ವೆ ಆದ್ನೋ?' ಎಂದು ತನ್ನ ಸಂಕಟವನ್ನು ಹೊರಹಾಕುತ್ತಾಳೆ.
ಆಕೆಯ ಮಾತನ್ನು ಕೇಳಿ ಗಗನ, ಬಿಕ್ಕಳಿಸಿ ಬರುವ ದುಃಖವನ್ನು ತಡೆಹಿಡಿದು ತನ್ನೆರಡು ತುಟಿಗಳನ್ನು ಬಲವಂತವಾಗಿ ಕಚ್ಚಿ ಹಿಡಿದಿದ್ದಾನೆ. ಏನು ಮಾಡಬೇಕೆಂದು ತೋಚದೆ ವಿಭ್ರಾಂತನಾಗಿದ್ದಾನೆ. ಸಾವರಿಸಿಕೊಳ್ಳಲು ಪಟ್ಟ ಪ್ರಯತ್ನವೆಲ್ಲ ಒಂದೊಂದಾಗಿ ವಿಫಲವಾಗುತ್ತಿದೆ. ನಿಶೆಯಲ್ಲಿದ್ದ ಭಾನುವಿನ ಓಲಾಟದ ಜತೆಗೆ, ನಿತ್ರಾಣಗೊಂಡ ತನ್ನ ದೇಹದ ನಿಶ್ಯಕ್ತಿ ಆತನನ್ನು ಅಲ್ಲಿಯೇ ಕುಸಿದು ಬೀಳುವಂತೆ ಮಾಡುತ್ತಿದೆ. ಉಸಿರನ್ನು ಗಟ್ಟಿಯಾಗಿ ಬಿಗಿಹಿಡಿದುಕೊಂಡು ........
'ಕ್ಷಮಿಸು ನೀಲಿ... ನಾನು ಗಗನ' ಎನ್ನುತ್ತ ಮುಖ ತಿರುಗಿಸುತ್ತಾನೆ...!
ಗಗನನನ್ನು ನೋಡಿದ್ದೇ ನೀಲಿಗೆ ಮಾತೇ ಬರದಂತಾಗಿ, ಗರ ಬಡಿದವಳಂಗಾಗುತ್ತಾಳೆ. ಬಿಟ್ಟು ಕಣ್ಣು ಬಿಟ್ಟಂತೆ, ಆಶ್ಚರ್ಯದಿಂದ ಗಗನನ್ನು ನೋಡುತ್ತಿದ್ದಾಳೆ. ಹಾಗೆ ಅರಿವಿಲ್ಲದೆ ಎರಡು ಕಣ್ಣಂಚಿನಿಂದ ನೀರು, ಆಕೆಯ ಗುಳಿಬಿದ್ದ ಕೆನ್ನೆಯನ್ನು ತೋಯಿಸುತ್ತಿದೆ. ತುಟಿ ಬಿಗಿಹಿಡಿದು ಬಿಕ್ಕಳಿಸುವ ಸರದಿ ಈಗ ನೀಲಿಯದ್ದು.
ಎರಡು ಕೈ ಜೋಡಿಸಿ...... ಅಳುತ್ತಲೇ ನೆಲಕ್ಕೆ ಕುಸಿದು ಬೀಳುತ್ತಾಳೆ.
'ಅಯ್ಯೋ...' ಎನ್ನುತ್ತ ತನ್ನೆರಡು ಕೈಗಳಿಂದ ತಲೆಯನ್ನು ಗಟ್ಟಿಯಾಗಿ ಬಡಿದುಕೊಳ್ಳುತ್ತಿದ್ದಾಳೆ. ಭಾನುವನ್ನು ಹಿಡಿದುಕೊಂಡು ಎದುರಿಗೆ ನಿಂತ ಗಗನ, ಏನೂ ಹೇಳಲಾಗದಂತವನಾಗಿ ಮೂಗನ ಹಾಗೆ ಇವೆಲ್ಲವನ್ನು ನೋಡುತ್ತಾ ಸುಮ್ಮನೆ ನಿಂತು ಬಿಟ್ಟಿದ್ದಾನೆ.
'ಹುಚ್ಚುಕೋಡಿ ಮನಸ್ಸಿಗೆ ಬೆಲೆ ಕೊಟ್ಟು, ಈಗ ನೀನೇ ಬೆಲೆ ತೆರುವಂತಾಯಿತಲ್ಲ' ಎಂದು ಮನಸ್ಸಿನಲ್ಲಿಯೇ ಮಮ್ಮುಲ ಮರುಗುತ್ತಿದ್ದಾನೆ.
ಭಾನುವನ್ನು ಅಲ್ಲಿಯೇ ಇರುವ ಸೋಫಾದಲ್ಲಿ ಕುಳ್ಳರಿಸಿದ ಗಗನ, 'ಈತನಿಗೆ ತಣ್ಣೀರ ಸ್ನಾನ ಮಾಡಿಸು. ಊಟ ಮಾಡಿದ ಹಾಗೆ ಕಾಣುತ್ತಿಲ್ಲ, ಹಸಿದಿರುವ ಹಾಗಿದೆ' ಎನ್ನುತ್ತಾನೆ.
ನೀಲಿಯಿಂದ ಯಾವುದೇ ಪ್ರತ್ಯುತ್ತರವಿಲ್ಲ. 'ತಾ ಮಾಡಿದ ತಪ್ಪಿಗೆ, ತನ್ನ ನಿರ್ಧಾರಕ್ಕೆ, ತನ್ನ ಹಠಕ್ಕೆ ಭಗವಂತ ತಕ್ಕ ಶಿಕ್ಷೆ ನೀಡಿದ್ದಾನೆ' ಎಂದು ತನ್ನನ್ನು ತಾನೇ ಶಪಿಸಿಕೊಳ್ಳುತ್ತಿದ್ದಾಳೆ.
'ಸರಿ... ನಾ ಇನ್ನು ಹೊರಡುತ್ತೇನೆ' ಎಂದು ಎದ್ದ ಗಗನನಿಗೆ ಗೋಡೆ ಮೇಲೆ ತೂಗಿ ಹಾಕಿದ ಚಿಕ್ಕ ಮಗುವಿನ ಫೋಟೋ ಕಣ್ಣಿಗೆ ಬೀಳುತ್ತದೆ. ನೀಲಿಯ ನೋವನ್ನು ಮರೆ ಮಾಚಬೇಕೆಂದು,
'ಎಷ್ಟು ಮುದ್ದಾಗಿದೆಯಲ್ವಾ ಪಾಪು? ಇಂಥದ್ದೆ ಪಾಪು ನೀಲಿ ಮಡಿಲು ತುಂಬಲಿ' ಎನ್ನುತ್ತಾನೆ.
ಆತನ ಮಾತಿಗೆ ನೀಲಿ, ನಗುತ್ತ....
'ಥ್ಯಾಂಕ್ಸ್ ಗಗನ, ಅದು ನನ್ನದೇ ಮಗು, ಪ್ರಕೃತಿ ಅಂತ...... ಮುಂದೇನೋ ಹೇಳಲಿದ್ದ ಅವಳನ್ನು ಅಲ್ಲಿಯೇ ತಡಿದು, 'ವ್ಹಾವ್.... ನೀಲಿ, ತುಂಬಾ ಸಂತೋಷವಾಯ್ತು. ಎಲ್ಲಿದೆ ಕಂದಮ್ಮ?' ಎಂದು ಪ್ರಶ್ನಿಸುತ್ತಾನೆ.
ನೀಲಿ ಮತ್ತೆ ನಗುತ್ತಾಳೆ. ನಗು ದೊಡ್ಡದಾಗುತ್ತ ಹೋಗುತ್ತದೆ.
ಇತ್ತ ಗಗನ 'ಹೇಳು ನೀಲಿ.... ಪ್ರಕೃತಿ ಪಾಪು ಎಲ್ಲಿ?' ಎಂದು ಮತ್ತೆ ಕೇಳುತ್ತಾನೆ.
ನೀಲಿ ತಕ್ಷಣ ನಗು ನಿಲ್ಲಿಸಿ, 'ಪ್ರಕೃತಿ ಮಡಿಲು ತುಂಬಿ, ಬರಿದು ಮಾಡಿ ಹೋದಳು ಗಗನ' ಎಂದು ಶಾಂತವಾಗಿ ಉಸುರುತ್ತಾಳೆ.
ಗಗನ ತನ್ನೆರಡು ಕಣ್ಣುಗಳನ್ನು ನಿಧಾವಾಗಿ ಮುಚ್ಚಿ, ಉಸಿರನ್ನು ಒಳಗೆಳೆದುಕೊಂಡು 'ಶೂನ್ಯದತ್ತ' ಮನಸ್ಸನ್ನು ಕೇಂದ್ರಿಕರಿಸುತ್ತಾನೆ.
ಸಾವರಿಸಿಕೊಂಡಂತೆ ಮಾಡಿ, ತೊದಲಿಸುತ್ತ ಅರೆಬರೆ ಮುಚ್ಚಿದ ಕಣ್ಣಲ್ಲೆ, 'ಕ್ಷಮಿಸು ನೀಲಿ, ಹೋರಡುತ್ತೇನೆ' ಎಂದು ಭಾರವಾದ ಹೆಜ್ಜೆ ಹಾಕುತ್ತ ಮನೆಯ ಹೊಸ್ತಿಲಿನ ಹೊರಗೆ ಕಾಲಿಡುತ್ತಾನೆ.
-ನಾಗರಾಜ್ ಬಿ.ಎನ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ