ಗುರುವಾರ, ಆಗಸ್ಟ್ 25, 2016

ಈತ ದೇವರಲ್ಲ ನನ್ನಾತ್ಮ ಸಖ......  

ಎಲ್ಲವನ್ನು ಕಳೆದುಕೊಂಡು ಇನ್ನಿಲ್ಲ ಬದುಕು ಎಂದಾಗ, ಸುಮ್ಮನೆ ಬಂದು ಹೆಗಲ ಮೇಲೆ ಕೈ ಹಾಕಿ ಗಟ್ಟಿಯಾಗಿ ಅದಮುತ್ತಾನೆ. ಕುಸಿದು ಬೀಳುವ ಜೀವ-ಭಾವಕ್ಕೆ ಮನದಣಿಯೇ ಸಂತೈಸಿ ಮುಗುಳ್ನಗುತ್ತಾನೆ. ತಾನೊಬ್ಬ ಪರಮಾತ್ಮ ಎಂಬುದನ್ನು ಮರೆತು, ಜೀವಾತ್ಮ ಎಂದು ಸಾರುತ್ತಾನೆ. ಪೂಜಿಸುವುದಕ್ಕಿಂತ ನನ್ನ ಮೇಲೆ ವಿಶ್ವಾಸವಿಡಿ ಎಂದು ಹೇಳುತ್ತಾನೆ. ಎಲ್ಲವನ್ನು ಕಳೆದುಕೊಂಡ ಭಾವ ನನಗೂ ಇದೆ ಎನ್ನುತ್ತ, ನೋವು ಬದುಕಲ್ಲ ಎಂದು ಹಸನ್ಮುಖಿಯಾಗಿರುವ ಪಾಠ ಹೇಳುತ್ತಾನೆ.
ಹಾಗಾದರೆ ಕೃಷ್ಣ ಯಾರು?
ಸಿಂಪಲ್..... ಆತ ಆತ್ಮ ಸಖ. ಅವನೊಬ್ಬ ನೆಚ್ಚಿನ ಗೆಳೆಯ. ಹೌದು, ಬಹುಶಃ ಕೃಷ್ಣ ಇದಕ್ಕೆ ಇಷ್ಟವಾಗುತ್ತಾನೆ. ಆತನ ಬದುಕಿನ ಒಂದೊಂದು ಹೆಜ್ಜೆಯೂ ಅರ್ಥಗರ್ಭಿತ ಹಾಗೂ ಅಷ್ಟೇ, ಅಖ್ಯಾನ! ಹೆತ್ತಾಕೆಯ ಎದೆ ಹಾಲನ್ನು ಆತ ಕುಡಿದಿಲ್ಲ. ಅವಳ ಮಡಿಲಲ್ಲಿ ಆಡಿ ನಲಿದಿಲ್ಲ. ಸಲುಹಿದ ತಾಯಿಗೆ ಆತ ಸಿಗಲಿಲ್ಲ. ಪ್ರೀತಿಸಿದ ರಾಧೆಗೂ ಸಂಪೂರ್ಣ ಸಿಗಲಿಲ್ಲ. ಸೋದರ ಮಾವನ ಪ್ರೀತಿಯೂ ಆತನಿಗೆ ದೊರೆಯಲಿಲ್ಲ. ಆತ ತನಗೆ ಸಿಕ್ಕಿದ ಅಂತ ಅಂದುಕೊಂಡವರಿಗೆ ಸುಳ್ಳಾದ. ಯಾವೊಂದು ಭವ-ಬಂಧನದ ಚೌಕಟ್ಟಿಗೂ ಆತ ಒಳಪಡಲಿಲ್ಲ. ಬದುಕಲ್ಲಿ ಎದುರಾದ ಪ್ರತಿಯೊಂದು ಸಂಬಂಧ-ಬಾಂಧವ್ಯವನ್ನು ಸಮರ್ಥವಾಗಿ ನಿಭಾಯಿಸಿದ. ಸಮಯ ದೊರೆತಾಗಲೆಲ್ಲ ಬದುಕಿನ ಪಾಠವನ್ನು ಹೇಳುತ್ತಲೇ ಹೋದ. ಸಂದರ್ಭದಲ್ಲಿ ಹೊಗಳಿಕೆ ಜತೆಗೆ, ಸಾಕಷ್ಟು ಟೀಕೆಗಳ ಕೊಂಕು ಮಾತುಗಳನ್ನು ಕೇಳಿದ. ತಂತ್ರ, ಕಪಟ, ಚಾಣಾಕ್ಷ್ಯತೆಯನ್ನು ಧರ್ಮ ಸಂಸ್ಥಾಪನೆಗೆ ಹೇಗೆ ಉಪಯೋಗಿಸಬೇಕೆನ್ನುವುದನ್ನು ತಿಳಿಸಿದ.
ಕೃಷ್ಣ ಹೀಗೆಯೇ.... ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಒಂದೊಮ್ಮೆ ಹೇಳಿದರೂ ಅದು ಅವರವರ ಕಲ್ಪನೆ, ಬುದ್ಧಿಮಟ್ಟದ ವ್ಯಾಖ್ಯಾನ. ಅರ್ಥಕ್ಕೆ ನಿಲುಕದ ವಿಭಿನ್ನ ವ್ಯಕ್ತಿಯಾತ. ದೇವಕಿ ಯಶೋದೆಗೆ ತಾಯಿಯಾದ, ದೇವರೆಂದು ಪೂಜಿಸುವ ಅಕ್ರೂರ-ವಿಧುರನಿಗೆ ಭಗವಂತನಾದ, ಹುಚ್ಚಿಯ ಹಾಗೆ ಪ್ರೀತಿಸುವ ರಾಧೆಗೆ ಪ್ರೇಮಿಯಾದ, ರುಕ್ಮಿಣಿ-ಸತ್ಯಭಾಮೆಗೆ ಮಡದಿಯಾದ, ದ್ರೌಪದಿಯಂಥ ಸಹೋದರಿಗೆ ಆತ್ಮ ಬಂಧುವಾದ, ಧರ್ಮಕ್ಕೆ ಗಂಟು ಬಿದ್ದು ವಿರೋಧಿಸುವ ಭೀಷ್ಮ-ದ್ರೋಣರಿಗೆ ನಿರ್ಲಿಪ್ತನಾದ, ಶಕುನಿ-ದುಶ್ಯಾಸನ-ಶಿಶುಪಾಲ-ಜರಾಸಂಧರ ಪಾಲಿಗೆ ಶಿಕ್ಷಕನಾದ, ಶಿಷ್ಟರಾದ ಕುಂತಿ ಪುತ್ರರ ಪಾಲಿಗೆ ರಕ್ಷಕನಾದ, ಮಗುವಿಗಿಂತ ಮುಗ್ಧನಾದ ಸುಧಾಮನಿಗೆ ಗೆಳೆಯನಾದ, ಗೋಕುಲದಲ್ಲಿ ಓಡಾಡುವ ಗೋಪಿಕೆಯರಿಗೆ ತುಂಟನಾದ........
ಒಂದೇ... ಎರಡೇ....! ಕೃಷ್ಣ ಯಾರಿಗೆ? ಏನು? ಆಗಿಲ್ಲ ಹೇಳಿ. ಅವರವರ ಭಾವಕ್ಕೆ, ಅವರವರ ಅರ್ಥಕ್ಕೆ ಆತ ಏನು ಆಗಬೇಕೋ ಅವೆಲ್ಲವನ್ನೂ ಆಗಿದ್ದಾನೆ. ಹಾಗೆಯೇ, ಚೌಕಟ್ಟಿನ ವ್ಯಾಪ್ತಿಗೆ ಸಿಗದೆ ಇನ್ನೂ ಏನೇನೋ ಆಗಿದ್ದಾನೆ. ಅಷ್ಟೊಂದು ಮಾಯಾವಿ, ವಿವೇಚನೆಗೆ ಸಿಗದಷ್ಟು ಪ್ರಬುದ್ಧ, ಬ್ರಹ್ಮಾಂಡವನ್ನೇ ತನ್ನೊಳಗಿಟ್ಟುಕೊಂಡ ಪ್ರಚಂಡ, ಕೊನೆಗೊಂದು ದಿನ ಮಿಥ್ಯದ ಭ್ರಮೆಯಲ್ಲಿ ಬದುಕುತ್ತೇವೆ ಎನ್ನುವ ಸೂಕ್ಷ್ಮವನ್ನು ತನ್ನ ಅಂತ್ಯದ ಮೂಲಕ ಸಾರಿಹೋದ ಮೇಧಾವಿ.
ಹೀಗೆ ಅರ್ಥಕ್ಕೆ ನಿಲುಕದ ತಂತ್ರಗಾರ, ಮಾಯಗಾರ ನನ್ನಾತ್ಮ ಸ್ನೇಹಿತ ಕೃಷ್ಣ. ಆತ ಜನ್ಮಿಸಿದ ಪವಿತ್ರ ದಿನವಿಂದು. ಬರಿಗೈಯಲ್ಲಿ ಹುಟ್ಟಿ, ಅಷ್ಟೇ ಬರಿಗೈಯ್ಯಲ್ಲಿ ಮರಳೋ ಬದುಕು ನಮ್ಮದು. ಕಣ್ಮುಂದೆ ಸಾವಿದೆ ಎನ್ನುವ ಕಟು ಸತ್ಯ ಮರೆತು, ಅಟ್ಟಹಾಸದಿಂದ ಮೆರೆದಾಡುವವರಿಗೆ ನನ್ನ ಗೆಳೆಯನ ಬದುಕು ಒಂದು ನಿದರ್ಶನ. ದೇಹದಲ್ಲಿ ಉಸಿರಿರುವವರೆಗೆ ಮಾತ್ರ ಅದಕ್ಕೊಂದು ಅರ್ಥ, ನಂತರ ಅದೊಂದು ಉಪಯೋಗಕ್ಕೆ ಬಾರದ ವಸ್ತು ಎನ್ನುವ ಸೂಕ್ಷ್ಮ ತಿಳಿಸಿದ ವಿಶ್ವಗುರು ನನ್ನಾತ್ಮ ಸಖ ಕೃಷ್ಣ.
ಹ್ಯಾಪಿ ಬಡ್ಡೆ ಹುಡುಗಾ........
-ನಾಗರಾಜ್ ಬಿ.ಎನ್.


ಕಾಮೆಂಟ್‌ಗಳಿಲ್ಲ: