ಶುಕ್ರವಾರ, ಏಪ್ರಿಲ್ 28, 2017

ವಿಜ್ಞಾನಕ್ಕೇ ಸವಾಲೆಸೆದ ಗ್ರಾಮ, ಇಲ್ಲಿ ಬರೋಬ್ಬರಿ 400 ಟ್ವೀನ್ಸ್’ಗಳು!

ಎರಡು ಸಾವಿರ ಕುಟುಂಬವಿರುವ ಗ್ರಾಮದಲ್ಲಿ ಬರೋಬ್ಬರಿ ನಾಲ್ಕು ನೂರು(400) ಜೋಡಿ ಅವಳಿಗಳಿಗಳು! ತರಗತಿಯ ಕೊಠಡಿಯಲ್ಲಿ ಶಿಕ್ಷಕರಿಗೆ ತಪ್ಪದ ಗೋಳಾಟ! ವಿಜ್ಞಾನ ಲೋಕಕ್ಕೇ ಸವಾಲೆಸೆದ 'ಅವಳಿ' ಹುಟ್ಟುಗಳು!

ಇಂತಹ ಕೌತುಕದ ರಹಸ್ಯ ಸಂಗತಿಯೊಂದನ್ನು ಕೇರಳದ ಮಲಪ್ಪುುರಂ ಜಿಲ್ಲೆೆಯ ಕೊಡಿಹ್ನಿ ಗ್ರಾಮ ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಅಲ್ಲಿರುವ ಸುಮಾರು ಎರಡು ಸಾವಿರ ಕುಟುಂಬಗಳ ಜನಸಂಖ್ಯೆಯಲ್ಲಿ 400 ಜೋಡಿ ಅವಳಿಗಳಿವೆ. 2008ರ ಸಮೀಕ್ಷೆಯಲ್ಲಿ 280 ಜೋಡಿ ಅವಳಿಗಳಿವೆ ಎಂದು ತಿಳಿದು ಬಂದಿತ್ತು. ನಂತರ ಅದರ ಸಂಖ್ಯೆ ಹೆಚ್ಚುತ್ತಾ ಸಾಗಿದ್ದು, ಈಗ ಸುಮಾರು 400 ಜೋಡಿ ಅವಳಿಗಳಿವೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಟ್ವೀನ್ಸ್(ಅವಳಿಗಳು)ಗಳಿರುವ ಗ್ರಾಮ ಎನ್ನುವ ಖ್ಯಾತಿಗೆ ಒಳಗಾದ ಕೊಡಿಹ್ನಿ, ದೇಶ-ವಿದೇಶದ ನೂರಾರು ಸಂಶೋಧಕರನ್ನು ತನ್ನತ್ತ ಸೆಳೆಯುತ್ತಿದೆ. 'ಬರ್ಮುಡಾ ಟ್ರೈಆ್ಯಂಗಲ್'ನಂತೆ ಅರಿವಿಗೆ ಬಾರದ ರಹಸ್ಯವನ್ನು ಬಚ್ಚಿಟ್ಟುಕೊಂಡು, ವಿಜ್ಞಾನ ಲೋಕಕ್ಕೂ ಸವಾಲೆಸೆದಿದೆ.
 ಕೊಡಿಹ್ನಿ ಅತಿ ಹೆಚ್ಚು ಜೋಡಿ ಅವಳಿಗಳನ್ನು ಹೊಂದಿರುವ ಗ್ರಾಮ ಎಂದು ಗುರುತಿಸಿಕೊಂಡಿರುವುದರಿಂದ, ಗ್ರಾಮದ ಪ್ರವೇಶ ದ್ವಾರದಲ್ಲಿಯೇ 'ಸುಸ್ವಾಗತ, ದೇವರ ಸ್ವಂತ ಅವಳಿ ಗ್ರಾಮಕ್ಕೆ' ಎಂದು ನೀಲಿ ಬಣ್ಣದ ಬೋರ್ಡ್ ಹಾಕಲಾಗಿದೆ. ರಾಷ್ಟ್ರಿಯ ಸರಾಸರಿ ಪ್ರಕಾರ 1000ಕ್ಕೆ 9ರಷ್ಟು ಅವಳಿಗಳ ಜನನವಾಗುತ್ತದೆ. ಆದೆ, ಈ ಕೊಡಿಹ್ನಿ ಗ್ರಾಮದಲ್ಲಿ 1000ಕ್ಕೆ 45ರಷ್ಟು ಪ್ರಮಾಣದಲ್ಲಿ ಅವಳಿಗಳು ಜನ್ಮ ಪಡೆಯುತ್ತಾರೆ. 2016ರ ಅಕ್ಟೋಬರ್‌'ನಲ್ಲಿ ಸಿಎಸ್‌ಐಆರ್-ಸೆಂಟರ್ ಫಾರ್ ಸೆಲ್ಯುಲರ್ ಮತ್ತು ಮಾಲಿಕ್ಯೂಲರ್ ಬಯಾಲಜಿ, ಹೈದರಬಾದ್-ಕೇರಳ ಯೂನಿವರ್ಸಿಟಿ ಆಫ ಫಿಶರಿಸ್ ಮತ್ತು ಓಶನ್ ಸ್ಟಡೀಸ್(ಕುಪೋಸ್) ಮತ್ತು ಯೂನಿವರ್ಸಿಟಿ ಆಫ್ ಲಂಡನ್ ಮತ್ತು ಜರ್ಮನಿಯ ವಿವಿಧ ಸಂಸ್ಥೆಗಳ ಜಂಟಿ ತಂಡ 'ಅವಳಿ' ರಹಸ್ಯ ಭೇದಿಸಲು ಈ ಗ್ರಾಮಕ್ಕೆ ಭೇಟಿ ನೀಡಿತ್ತು. ಸಂಶೋಧಕರು ಡಿಎನ್‌ಎ ಪರೀಕ್ಷೆಗಾಗಿ ಅವಳಿಗಳ ಲಾಲಾರಸ ಮತ್ತು ಕೂದಲು ಮಾದರಿಯನ್ನು ಸಂಗ್ರಹಿಸಿದ್ದರು.

ಅಧ್ಯಯನದ ನಂತರ ಕುಪೋಸ್'ನ ಪ್ರೊ. ಇ. ಪ್ರೇಥಾಮ್, ಇಷ್ಟೊಂದು ಅವಳಿಗಳು ಇಲ್ಲಿಯೇ ಏಕೆ ಜನಿಸುತ್ತವೆ? ಎನ್ನುವುದರ ಕುರಿತು ಅನೇಕ ಊಹಾಪೋಹಗಳಿದ್ದು, ಕೆಲವರು ಇದು ಆನುವಂಶಿಕ ಎನ್ನುತ್ತಾರೆ. ಆದರೆ, ಹಳ್ಳಿಯಲ್ಲಿನ ಗಾಳಿ ಅಥವಾ ನೀರಿನ ನಿರ್ದಿಷ್ಟ ಅಂಶ ಈ ವಿದ್ಯಮಾನಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಕೊಡಿಹ್ನಿ ಜನರ ಮಾದರಿಗಳನ್ನು ಬೇರೆ ಸಮುದಾಯದ ಮಾದರಿಗಳ ಜತೆಗೆ ಹೋಲಿಕೆ ಮಾಡಿ ನಿಖರ ಕಾರಣವೇನೆಂದು ತಿಳಿಯಬೇಕಿದೆ ಎಂದು ಹೇಳುತ್ತಾರೆ.
 ಕೊಡಿಹ್ನಿ ಗ್ರಾಮದಲ್ಲಿ ಕೆಲವು ಕುಟುಂಬ ಮೂರು ತಲೆ ಮಾರಿನಿಂದಲೂ ವಾಸಿಸುತ್ತಿದ್ದರೆ, ಇನ್ನು ಕೆಲವು ಕುಟುಂಬ ನಗರ ಪ್ರದೇಶಗಳಿಗೆ ವಲಸೆಯೂ ಹೋಗಿದೆ. ಮತ್ತೆ ಕೆಲವು ವಲಸೆ ಹೋಗಿ ಮರಳಿ ಬಂದಿದ್ದಾರೆ. ಹಾಗೆಯೇ ಇನ್ನು ಕೆಲವರು ಆ ಗ್ರಾಮಕ್ಕೆ ಬಂದು ವಾಸ್ತವ್ಯವನ್ನೂ ಮಾಡಿದ್ದಾರೆ. ಧರ್ಮ, ಸಂಸ್ಕೃತಿ ಹೊರತಾಗಿ ಅಲ್ಲಿ ವಾಸಿಸುವ ಜನರನ್ನು ಮೂರು ತಲೆ ಮಾರುಗಳಿಂದ 'ಅವಳಿ' ಎನ್ನುವ ವಿಲಕ್ಷಣ ಎಳೆಯೊಂದು ಬಲವಾಗಿ ಬಂಧಿಸುತ್ತಿದೆ.

2006 ರಲ್ಲಿ ಸಮೀರಾ ಮತ್ತು ಫೆಮಿನಾ ಎಂಬ ಅವಳಿ ಜೋಡಿಯಿಂದ ಜಗತ್ತಿಗೆ ಕೊಡಿಹ್ನಿ ಗ್ರಾಮದ ಅಚ್ಚರಿ ಬೆಳಕಿಗೆ ಬಂದಿತು. ಆ ಸಮಯದಲ್ಲಿ ಈ ಅವಳಿ ಸಹೋದರಿಯರು ಐಐಎಸ್ಸಿ ಶಾಲೆಯಲ್ಲಿ 8ನೆ ತರಗತಿಯ ವಿದ್ಯಾರ್ಥಿಯಾಗಿದ್ದರು. ಅವರಿಬ್ಬರನ್ನು ಗುರುತಿಸುವುಯಾವುದು ಶಾಲೆಯ ಶಿಕ್ಷಕರಿಗೆ ತಲೆ ನೋವಿನ ವಿಷಯವಾಗಿತ್ತು. ಇವರ ಹೊರತಾಗಿಯೂ ಅದೇ ತರಗತಿಯಲ್ಲಿ ಎಂಟು ಜೊಡಿ ಅವಳಿಗಳು ಅಭ್ಯಸಿಸುತ್ತಿದ್ದವು. ಬೇರೆ ತರಗತಿಯಲ್ಲಿಯೂ ಅವಳಿ ಸಹೋದರ, ಸಹೋದರಿಯರು ಎಂದು ಒಟ್ಟು 24 ಜೋಡಿಗಳಿದ್ದವು. ಶಿಕ್ಷಕರಿಗೆ ವೈಯಕ್ತಿಕವಾಗಿ ಅವಳಿಗಳನ್ನು ಗುರುತಿಸುವುದೇ ದೊಡ್ಡ ಸವಾಲಿನ ಪ್ರಶ್ನೆಯಾಗಿತ್ತು. ಪ್ರತಿ ದಿನ ಗೊಂದಲದಲ್ಲಿಯೇ ಹೆಸರು ಹೇಳುತ್ತ ತರಗತಿ ಮುಗಿಸುತ್ತಿದ್ದರು. ಈ ಗೊಂದಲ ಶಾಲೆಯಲ್ಲಿ ಈಗಲೂ ಮುಂದುವರಿದ್ದಿದ್ದು, ಅದು ಮತ್ತಷ್ಟು ಹೆಚ್ಚುತ್ತಲೇ ಸಾಗಿದೆ ಎಂದು ಟ್ವೀನ್ಸ್ ಸಂಘಟನೆ ಅಧ್ಯಕ್ಷ ಭಾಸ್ಕರನ್ ಹೇಳುತ್ತಾರೆ.
2008 ರಲ್ಲಿ ನಾವು ಸಣ್ಣ ಸಮಿತಿಯನ್ನು ರಚಿಸಿ, ಗ್ರಾಮದ ಎಲ್ಲಾ ಮನೆಗಳ ಸಮೀಕ್ಷೆ ನಡೆಸಿದ್ದೇವು. 280 ಜೊಡಿ ಅವಳಿಗಳಿರುವುದು ಬೆಳಕಿಗೆ ಬಂದು ಆಶ್ಚರ್ಯವಾಯಿತು. ಹಳ್ಳಿಯಲ್ಲಿ ಕೆಲವು ಸಂಶೋಧನೆಗಳನ್ನುನಡೆಸಲಾಯಿತು. ಇಂತಹ ವಿಚಿತ್ರ ವಿದ್ಯಮಾನವಿರುವ ಇನ್ನೊಂದು ಸ್ಥಳ ಬ್ರೆಜಿಲ್‌'ನಲ್ಲಿದೆ ಎಂದು ತಿಳಿದುಬಂದಿದೆ. ಏನೇ ಇರಲಿ, ನಮ್ಮದೇ ಆದ ಒಂದು ಸಂಘಟನೆ ರಚಿಸಿಕೊಂಡು ಕಾನೂನಾತ್ಮಕವಾಗಿ ನೋಂದಣಿ ಮಾಡಿ, ಅವಳಿಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ ಎನ್ನುತ್ತಾರೆ ಭಾಸ್ಕರನ್.

ಕೊಡಿಹ್ನಿಯ ಮಜಿದ್ ಎಂಬಾತ ಪರಸ್ಥಳದ ಸಂಶದಾ ಎಂಬಾಕೆಯನ್ನು 2000ದಲ್ಲಿ ಮದುವೆಯಾಗುತ್ತಾರೆ. ಮೊತ್ತ ಮೊದಲ ಬಾರಿಗೆ ಆ ಗ್ರಾಮದಲ್ಲಿ ಅವರಿಗೆ ಅವಳಿ ಮಕ್ಕಳು ಜನಿಸುತ್ತವೆ. ಆರಂಭದಲ್ಲಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಅವರು, ನಂತರದ ವರ್ಷಗಳಲ್ಲಿ ದೇಶದಲ್ಲಿಯೇ ಕೊಡಿಹ್ನಿ ಅತಿ ಹೆಚ್ಚು ಅವಳಿಗಳನ್ನು ಹೊಂದಿರುವ ಗ್ರಾಮ ಎಂದು ಅರಿವಾಗುತ್ತದೆ. ಅದಕ್ಕೆ ಕಾರಣವೇನೆಂದು ತಿಳಿಯ ಹೊರಟಾಗ ಮಜಿದ್ ಅವರ ತಂದೆ ಅವಳಿ ಸಹೋದರರು ಹೊಂದಿದ್ದರು ಎನ್ನುವುದು ತಿಳಿಯುತ್ತದೆ.

ಸರಕಾರಿ ಉದ್ಯೋಗಿಯಾಗಿ ನಿವೃತ್ತಿಯಾದ ಸುಕುಮಾರ(71) ಕುಟುಂಬ ಕೊಡಿಹ್ನಿ ಗ್ರಾಮದಲ್ಲಿ ಎರಡು ತಲೆ ಮಾರುಗಳಿಂದ ವಾಸಿಸುತ್ತಿದೆ. ಈವರೆಗೆ ಅವರ ಕುಟುಂಬ ಒಂದೇ ಒಂದು ಅವಳಿಗಳನ್ನು ಹೊಂದಿರಲಿಲ್ಲವಾಗಿತ್ತು. ಆದರೆ, ಅವರ ಮಗಳು ಪ್ರಸಿನಾ(31) ಅವಳಿಗೆ ಜನ್ಮ ನೀಡುವ ಮೂಲಕ ಕುಟುಂಬದ ಕುತೂಹಲಕ್ಕೆ ಕಾರಣವಾಗಿದ್ದಾರೆ. ವಿಶೇಷವೆಂದರೆ ಪ್ರಸಿನಾ ಮದುವೆ ನಂತರ ಗಂಡನ ಜತೆ ಕತಾರ್ಗೆಯಲ್ಲಿ ವಾಸಿಸುತ್ತಿದ್ದಳು. ಆವಾಗವಾಗ ಎನ್ನುವಂತೆ ಕೊಡಿಹ್ನಿ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಳು. ಈ ಭೇಟಿಯೇ ಅವಳ ಅವಳಿ ಮಗುವಿಗೆ ಕಾರಣವಾಗಿದೆ ಎಂದು ಸುಕುಮಾರ ಕುತೂಹಲದ ಉತ್ತರ ನೀಡುತ್ತಾರೆ.

ಒಟ್ಟಾರೆ... ಕೇರಳದ ಕೊಡಿಹ್ನಿ ವಿಜ್ಞಾನಕ್ಕೆ ಹಾಗೂ ಸಂಶೋಧಕರಿಗೆ ಸವಾಲೆಸೆದ ಗ್ರಾಮ! ಆದಷ್ಟು ಬೇಗ ಅಲ್ಲಿಯ 'ಅವಳಿ ವೃತ್ತಾಂತ'ದ ಹಿಂದಿನ ವೈಜ್ಞಾನಿಕ ಕಾರಣವೇನೆಂಬುದು ಬೆಳಕಿಗೆ ಬರಲಿ.

ಬುಧವಾರ, ಏಪ್ರಿಲ್ 26, 2017

ಒಂದು ಬಾರಿ 'ಕಾವೇರಿ' ತಾಯಿ ಆಗಿ ಯೋಚಿಸಿ

ಪುಟ್ಟ ಕಂದಮ್ಮ ಕಾವೇರಿ ಇನ್ನು ನೆನಪು ಮಾತ್ರ. ಬಟ್ಟಲು ಕಣ್ಣುಗಳಲ್ಲಿ ಆಕೆ ಕಾಣುತ್ತಿದ್ದ ಅದೆಷ್ಟೋ ಕನಸುಗಳು ಆಳದ ಕೊಳವೆ ಬಾವಿಯಲ್ಲಿ ಹೂತು ಹೋಗಿವೆ. ಅದನ್ನು ನನಸು ಮಾಡಬೇಕೆನ್ನುವ ಹೆತ್ತಾಕೆಯ ಕನಸುಗಳು ಸಹ ಕತ್ತಲ ಕೂಪದಲ್ಲಿ ಸಮಾಧಿಯಾಗಿವೆ!
 ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿನ ತೋಟವೊಂದರಲ್ಲಿ ಕೊರೆಸಲಾದ ಕೊಳವೆ ಬಾವಿಯಲ್ಲಿ ಶನಿವಾರ ಅರಿವಿಲ್ಲದೆ ಇಟ್ಟ ಹೆಜ್ಜೆಯೊಂದು ಕಾವೇರಿಯನ್ನು ಆಪೋಶನ ತೆಗೆದುಕೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆಗಷ್ಟೇ ತೋಟದ ಕೆಲಸ ಮುಗಿಸಿಕೊಂಡು ಅಪ್ಪ-ಅಮ್ಮರ ಕೈ ಹಿಡಿದು ಬರುತ್ತಿದ್ದ ಪುಟ್ಟ ಬಾಲೆ, ಅನತಿ ದೂರ ಬರುತ್ತಿದ್ದಂತೆ ಬೆರಳಿನ ಹಿಡಿತ ಸಿಡಿಲಗೊಳಿಸಿ ಮುಂದೋಡೋಡಿ ಹೋದಳು. ಮುದ್ದು ಮಗಳ ಪುಟ್ಟ ಪುಟ್ಟ ಹೆಜ್ಜೆ, ತಲೆಯಾನಿಸಿ ಓಡುವ ಭಂಗಿಯನ್ನು ಹಿಂದಿನಿಂದ ಅಪ್ಪ-ಅಮ್ಮರು ಧನ್ಯೋಸ್ಮಿ ಸ್ಥಿತಿಯಿಂದ ನೋಡುತ್ತ ಮುಂದಡಿಯಿಡುತ್ತಿದ್ದರು. ಅತೀತವಾದ ಸಾರ್ಥಕ್ಯ ಆನಂದದಲ್ಲಿ ಅವರು ಮುಳುಗೇಳುತ್ತಿದ್ದರು. ನೋಡು ನೋಡುತ್ತಿದ್ದಂತೆ ಕಾವೇರಿ ಮುಗ್ಗರಿಸಿದಂತಾದಳು, ಕ್ಷಣಮಾತ್ರದಲ್ಲಿ ಆಕೆಯ ಎರಡು ಕೈಗಳು ಮೇಲಿನಿಂದ ಭೂಮಿಯಾಳಕ್ಕೆ ಸರಿದು ಹೋದವು. ಆನಂದದ ಕಡಲಲ್ಲಿ ತೇಲುತ್ತಿದ್ದ ಹಡಿದ ಜೀವಕ್ಕೆ ಏನಾಗುತ್ತಿದೆ ಎನ್ನುವುದೇ ಅರಿವಾಗಲಿಲ್ಲ. ಮಗಳು ಕರಗಿಹೋದ ಜಾಗಕ್ಕೆ ಬಂದು ನೋಡುವಷ್ಟರಲ್ಲಿ, ಪಾತಾಳದಿಂದಲೋ ಎನ್ನುವಂತೆ ಕ್ಷೀಣ ದನಿಯೊಂದು ಅಮ್ಮಾ... ಅಮ್ಮಾ ಎಂದು ಕೇಳಿಬರುತ್ತಿತ್ತು. ಕರುಳ ಬಳ್ಳಿ ಕತ್ತರಿಸಿದ ಅನುಭವ!

ಕೊಳವೆ ಬಾವಿಯಲ್ಲಿ ಆರು ವರ್ಷದ ಹಸುಗಲ್ಲದ ಮಗು ಕಾವೇರಿ ಬೀಳುವುದನ್ನು ಹೆತ್ತಾಕೆ ಸವಿತಾ ಹಾಗೂ ಅಪ್ಪ ಅಜಿತ್ ಕಣ್ಣಾರೆ ಕಂಡಿದ್ದರು. ಕಣ್ಣೆದುರಿಗೆಯೇ ಕರಳು ಕುಡಿ ಕಣ್ಮರೆಯಾಗಿ, ಅದರ ಜೀವ ಭಯದ ಕೂಗು ಕಿವಿಗಪ್ಪಳಿಸುತ್ತದೆ ಎಂದರೆ ಅದಕ್ಕಿಂತ ದೊಡ್ಡ ದುರಂತ ಇನ್ನೇನಿದೆ? ಶನಿವಾರ ಸಾಯಂಕಾಲ 5ರ ವೇಳೆಗೆ ಕಾಲು ಜಾರಿ ಬಿದ್ದಿದ್ದ ಕಂದಮ್ಮನ ರಕ್ಷಣೆಗೆ ರಾತ್ರಿ ಹಗಲೆನ್ನದೆ ಬರೋಬ್ಬರಿ 53 ಗಂಟೆಗಳ ಕಾಲ ತಾಲೂಕಾಡಳಿತ, ಜಿಲ್ಲಾಡಳಿತ ಹರಸಾಹಸ ಪಟ್ಟಿತು. ಕತ್ತಲ ಕೂಪದಲ್ಲಿ ಉಸಿರು ಬಿಗಿಹಿಡಿದುಕೊಂಡು ಪ್ರಾಣಕ್ಕಾಗಿ ಒದ್ದಾಡುತ್ತಿದ್ದ ಮಗುವಿದ್ದಲ್ಲಿಗೆ ರಕ್ಷಣಾ ಪಡೆ ಸಿಬ್ಬಂದಿ ತಲುಪುವವರೆಗೆ ಸಮಯ ಮೀರಿತ್ತು. ಮಗಳು ಜೀವಂತವಾಗಿ ಮೇಲೆದ್ದು ಬರುತ್ತಾಳೆಂದು ಆಸೆ ಕಂಗಳಿಂದ ನೋಡುತ್ತಿದ್ದ ಹೆತ್ತಾಕೆಗೆ ಬರಸಿಡಿಲು ಬಡಿದ ಅನುಭವ!
 ಇಂತಹ ಘೋರ, ಅಷ್ಟೇ ಕ್ರೂರ ಘಟನೆಗಳು ಆವಾಗೀವಾಗ ನಮ್ಮ ನಡುವೆ ನಡೆಯುತ್ತಲೇ ಇರುತ್ತವೆ. ಕೊಳವೆ ಬಾವಿಯಲ್ಲಿ ಸಮಾಧಿಯಾದ ಹಸಿ ಜೀವ ಮೇಲೆ ಬರುವವರೆಗೂ ಕಾನೂನು, ನಿಯಮಾವಳಿಗಳು, ಶಿಕ್ಷೆ ಎಂಬೆಲ್ಲ ಮಾತುಗಳು ಜೋರು ದನಿಯಲ್ಲಿ ಸದ್ದಾಗಿ ಸುದ್ದಿಯಾಗುತ್ತವೆ. ಆಳುವ ಪಕ್ಷದ ಜತೆಗೆ ಕೆಲವು ಜನಪ್ರತಿನಿಧಿಗಳು ಮೈ ಕೊಡವಿಕೊಂಡು ಎದ್ದೇನೋ ಬಿದ್ದೇನೋ ಎನ್ನುತ್ತ ಘಟನಾ ಸ್ಥಳಕ್ಕೆ ಬಂದು ಮರುಗುತ್ತಾರೆ, ಇನ್ನು ಕೆಲವರು ಮೊಸಳೆ ಕಣ್ಣೀರು ಹಾಕುತ್ತಾರೆ! ಘಟನೆಯ ಕಹಿ ನೆನಪು ವಾರ, ಹದಿನೈದು, ತಿಂಗಳ ಕಾಲ ಮಾತ್ರ ಹಸಿಯಾಗಿರುತ್ತದೆ. ನಂತರ ದಿನಗಳುರುಳಿದಂತೆ ಸಾಮಾನ್ಯರಾದಿಯಾಗಿ ಎಲ್ಲರಿಂದಲೂ ಮಾಸಿ ಹೋಗುತ್ತದೆ. ಪಾಪದ ಇನ್ನೊಂದು ಮಗು ಮತ್ತಿನ್ನೆಲ್ಲಿಯಾದರೂ ಕೊಳವೆ ಬಾವಿಯಲ್ಲಿ ಬಿದ್ದಾಗ ಮಾತ್ರ ಕಾನೂನು, ನಿಯಮಾವಳಿ ಮತ್ತೆ ಗರಿಗೆದರುತ್ತದೆ. ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

ಸಾಧ್ಯವಾದರೆ ಒಂದು ಬಾರಿ ಆ ಮುದ್ದು ಕಂದಮ್ಮ ಕಾವೇರಿಯ ತಾಯಿಯಾಗಿ ಯೋಚಿಸಿ. ಕಣ್ಮುಂದೆಯೇ ಮಗಳು ಇನ್ನಿಲ್ಲವಾಗುತ್ತಾಳೆ, ಪಾತಾಳದಿಂದ ಆಕೆಯ ಪ್ರಾಣ ಭಿಕ್ಷೆಯ ಕೂಗು ಕೇಳಿ ಬರುತ್ತದೆ, ಗಂಟೆ ಕಳೆಯುವುದರೊಳಗೆ ಜನಸಾಗರ ಸೇರುತ್ತದೆ, ದೊಡ್ಡ ದೊಡ್ಡ ಯಂತ್ರಗಳು ಮಣ್ಣಿನ ರಾಶಿಯನ್ನು ಎತ್ತಿ ಹಾಕುತ್ತವೆ, ಎಂದೂ ನೋಡದ ಜನಪ್ರತಿನಿಧಿಗಳು ಎದುರಾಗಿ ಸಾಂತ್ವನದ ಮಾತು ಹೇಳುತ್ತಾರೆ, ಹಗಲು ಕಳೆದು ರಾತ್ರಿ ಎದುರಾಗುತ್ತವೆ. ಇತ್ತ ಸದ್ದಿಲ್ಲದೆ ಸಮಯ ಜಾರುತ್ತಿದ್ದರೆ, ಅತ್ತ ಆಳದಲ್ಲಿ ಬಿದ್ದ ಮಗುವಿನ ಮಿಸುಕಾಟ ಸಹ ನಿಧಾನವಾಗಿ ಸ್ತಬ್ಧವಾಗುತ್ತದೆ. ಇದ್ಯಾವುದರ ಅರಿವಿಲ್ಲದ ಹೆತ್ತಾಕೆ ಸವಿತಾ ಮಾತ್ರ ನನ್ನ ಮಗಳು ಬದುಕಿ ಬರುತ್ತಾಳೆ ಎನ್ನುವ ನಿರೀಕ್ಷೆಯಿಂದ ಬೊಗಸೆಯೊಡ್ಡಿ ನೂರಾರು ದೇವರಿಗೆ ಪ್ರಾರ್ಥನೆ, ಹರಕೆ ಹೊರುತ್ತಾಳೆ. ಅವಳ ಜತೆ ಸಹಸ್ರಾರು ಕೈಗಳು ಭಗವಂತನಲ್ಲಿ ಕಾವೇರಿಯ ಪ್ರಾಣ ಉಳಿಸು ಎಂದು ಬೇಡಿಕೊಳ್ಳುತ್ತವೆ. ವಿಧಿಯ ಮುಂದೆ ದೇವರ ಆಟ ಏನೂ ನಡೆಯದು ಎನ್ನುವ ಸತ್ಯ ಕಾರಿರುಳ ರಾತ್ರಿಯಲಿ ಅನಾವರಣವಾಗುತ್ತದೆ.

ಮಗಳನ್ನು ಕಳೆದುಕೊಂಡು ಎದೆಬಡಿದುಕೊಳ್ಳುತ್ತ ಗೋಗರೆಯುವ ತಾಯಿಯ ಆಕ್ರಂದನ, ಅಧಿಕಾರದ ಸುಪ್ಪತ್ತಿಗೆಯಲ್ಲಿ ಮೈಮರೆಯುವ ಆಳುವ ವರ್ಗಕ್ಕೆ ಎಲ್ಲಿ ಅರ್ಥವಾಗಬೇಕು? ಹೂತ ಮಗುವಿನ ಮೇಲೆತ್ತುವ ಕಾರ್ಯಾಚರಣೆ ನೋಡುತ್ತಲೇ ಪ್ರಜ್ಞೆ ಕಳೆದುಕೊಂಡ ಹೆತ್ತಾಕೆಯ ಸ್ಥಿತಿ, ದರ್ಪದಿಂದ ಮೆರೆವ ಜನಪ್ರತಿನಿಧಿಗಳಿಗೆ ಎಲ್ಲಿ ಅರಿವಾಗಬೇಕು? ನಿರುಪಯುಕ್ತ ಕೊಳವೆ ಬಾವಿ ಎಂದು ಮಣ್ಣು ಮುಚ್ಚದ  ಅದರ ವಾರಸುದಾರರಿಗೆ ಮಕ್ಕಳನ್ನು ಕೆಳೆದುಕೊಂಡವರ ನೋವೇನೆಂಬುದು ಎಲ್ಲಿ ಅರ್ಥವಾಗಬೇಕು?   ಕಂದಮ್ಮ ಆಡಿ, ಬೆಳೆದ ಮಡಿಲು ಬರಿದಾಗಿದೆ ಎನ್ನುವ ಕಟು ಸತ್ಯ ಒಂಬತ್ತು ತಿಂಗಳು ಹೊತ್ತ ಆ ಉದರದ ಕರುಳು ಹೇಗೆ ಸಹಿಸಿಕೊಳ್ಳಬೇಕು? ಕುಡಿಯ ಮುಖ ನೋಡದ ಹೊರತು ಅನ್ನ, ಆಹಾರ, ನೀರು ಸೇವಿಸಲಾರೆನೆಂದು ಶಪಥ ಮಾಡಿದ ಹೆತ್ತಾಕೆಗೆ, ಕಣ್ಮುಚ್ಚಿದ ಒಡಲ ಕುಡಿಯನ್ನು ನೋಡುವ ಪರಿ ಎಂತಹ ವೈರಿಗೂ ಬಾರದಿರಲಿ!

ಇಂತಹ ಘಟನೆ ಇನ್ನೆಂದೂ ಮರುಕಳಿಸದಿರಲಿ, ಎಲ್ಲ ಕಂದಮ್ಮಗಳು ನಮ್ಮದೇ ಎನ್ನುವ ಭಾವ ಎಲ್ಲ ಅಧಿಕಾರಿಗಳಲ್ಲೂ ಒಡಮೂಡಲಿ, ಕೇವಲ ಕಾಗದ ಪತ್ರಕ್ಕಷ್ಟೇ ಕಾನೂನು, ನಿಯಮಾವಳಿ ಎನ್ನುವ ಜಡ್ಡು ಗಟ್ಟಿದ ಮನಸ್ಸು ಹೊಡೆದೋಡಲಿ. ಇದಕ್ಕೆಲ್ಲ ಕಾವೇರಿಯ ಸಾವೇ ಕೊನೆಯಾಗಿ, ಅವಳ ಆತ್ಮವೇ ಸಾಕ್ಷಿಯಾಗಲಿ.

ಮಂಗಳವಾರ, ಏಪ್ರಿಲ್ 25, 2017

ವಿಕೆಂಡ್'ನಲ್ಲಿ ಜೀವನ ಪ್ರೀತಿ ಬಿಚ್ಚಿಟ್ಟ ಜಯಂತಣ್ಣ

ಬದುಕು, ಭಾವನೆ, ಬರವಣಿಗೆ.... ಇದು ಸಾಹಿತಿಗಳಲ್ಲಿರುವ ಮೂಲ ಬಂಡವಾಳ. ಬದುಕಿನ ಚಿತ್ರಣವನ್ನೇ ಅಕ್ಷರ ರೂಪಕ್ಕೆ ಇಳಿಸುತ್ತಾರೆ, ಭಾವನೆಗಳನ್ನೇ ಗೀಚುತ್ತಾರೆ. ಕಲ್ಪನಾ ಲೋಕದಲ್ಲಿ ವಿಹರಿಸಿ ಪದಗಳ ದಂಡೆ ಕಟ್ಟುತ್ತಾರೆ. ಇದರ ಹೊರತಾಗಿಯೂ ಕಾಣದ ಬದುಕೊಂದು ಅವರಲ್ಲಿ ಉಸಿರಾಡುತ್ತಿರುತ್ತದೆ. ಹೇಳಿಕೊಳ್ಳಲಾಗದ ಎಷ್ಟೋ ರಸಾನುಭವಗಳು ಅಲ್ಲಿ ಹುದುಗಿರುತ್ತವೆ.
ಇಂತಹ ಸೂಕ್ಷ್ಮವೊಂದು ಅರಿವಾಗಿದ್ದು ವಿಕೆಂಡ್-ವಿಥ್-ರಮೇಶ ಕಾರ್ಯಕ್ರಮದಲ್ಲಿ ಜಯಂತಿ ಕಾಯ್ಕಿಣಿ ಅವರ ಜೀವನ ಪ್ರೀತಿ ಮಾತುಗಳು. ಭಾನುವಾರ ಝೀ ವಾಹಿನಿಯಲ್ಲಿ ಪ್ರಸಾರವಾದ ಮೂರು ಗಂಟೆಗಳ ಸಂಪೂರ್ಣ ಎಪಿಸೋಡ್‌ನಲ್ಲಿ ಅವರು, ಎಲ್ಲಿಯೂ ಮೈಮರೆತು ಮಾತನಾಡಿಲ್ಲ; ಹಾಗೆಯೇ ಬದುಕಿನ ಪ್ರೀತಿಗೆ ಚ್ಯುತಿ ತಂದಂತಹ ಘಟನೆಗಳನ್ನು ಎಲ್ಲಿಯೂ ನೆನಪಿಸಿಕೊಂಡಿಲ್ಲ. ಹಾಗಂತ ಅವರ ಬದುಕಲ್ಲಿ ನೋವುಗಳೇ ಇರಲಿಲ್ಲ, ದುಃಖಗಳನ್ನೇ ಅನುಭವಿಸಿಲ್ಲ ಎಂದರ್ಥವಲ್ಲ. ತಮ್ಮಲ್ಲಿರುವ ಕೊರಗನ್ನು ಸಹ ಪ್ರೀತಿಯಿಂದಲೇ, ಸ್ಫೂರ್ತಿದಾಯಕವಾಗಿಯೇ ಹಂಚಿಕೊಂಡರು. ಅವರಾಡಿರುವ ಪ್ರತಿಯೊಂದು ಮಾತು ಸಹ, ಬದುಕು ಇನ್ನಿಲ್ಲ ಎಂದು ಮಖಾಡೆ ಮಲಗಿದವನನ್ನು ಬಡಿದೆಬ್ಬಿಸುವಂತಿತ್ತು.
ಅವರ ಬಾಲ್ಯದ ಬದುಕು ಎಲ್ಲರಂತೆ ಪುಂಡು-ಪೋಕರಿಯಂತಿದ್ದರೂ, ಅಕ್ಷರದ ಮೇಲೆ ಪ್ರೇಮ ಹಾಗೂ ಆಸಕ್ತಿ ಹೊಂದಿದ್ದರು. ವಿಜ್ಞಾನ ವಿದ್ಯಾರ್ಥಿಯಾಗಿದ್ದರೂ ಸ್ನೇಹಿತರಿಗೆ ಪ್ರೇಮ ಪತ್ರ ಬರೆದುಕೊಡುತ್ತ ಕನ್ನಡದಲ್ಲಿ ಕೃಷಿ ಮಾಡುತ್ತ, ಪದಗಳ  ಜೊತೆಗೆ ಆಟವಾಡುತ್ತಿದ್ದರು. ಗೋಕರ್ಣ, ಕುಮಟಾ, ಅರಬ್ಬೀಯ ತಟ, ಅಘನಾಶಿನ ಒಡಲು, ತದಡಿ ಬಂದರು ಇವೇ ಅವರ ಬಾಲ್ಯದ ಒಡನಾಡಿ. ಅಲ್ಲಿಯ ಮಣ್ಣಿನ ಗುಣ ಹಾಗೂ ಸುತ್ತಲಿನ ಪರಿಸರವೇ ಅವರನ್ನು ನಾಡು ಗುರುತಿಸುವಂತೆ ಮಾಡಿದ್ದು ಎಂದು ಅವರ ಆಪ್ತ ಸ್ನೇಹಿತರೇ ತುಂಬು ಹೃದಯದಿಂದ ಹೇಳಿಕೊಳ್ಳುತ್ತಾರೆ.
ಭಾನುವಾರದ ಸಪೂರ್ಣ ಎಪಿಸೋಡ್ ಸಂಗ್ರಹಯೋಗ್ಯ. ಆದರೂ ಅದರಲ್ಲಿ ಅವರು ಹೇಳಿದ ಎರಡು ಮಾತುಗಳು ಚಿಂತನೆಗೆ ಒಡ್ಡುತ್ತವೆ. ಮೊದಲನೆಯದು, ಅವರ ಕೈ ಹಿಡಿದಾಕೆ ಸ್ಮೀತಾ, ಬುದ್ಧಿವಂತೆ, ಅಷ್ಟೇ ಪ್ರತಿಭಾವಂತೆ. ಅವಳು ತನ್ನೆರಡು ಮಕ್ಕಳನ್ನು ಸಾಕಿ, ಸಲುಹುವುದರಲ್ಲೇ ಬದುಕು ವ್ಯಯಿಸಿದಳು. ಅವಳಲ್ಲಿರುವ ಪ್ರತಿಭೆಗೆ ಸೂಕ್ತ ನ್ಯಾಯ ಕೊಡಲು ನನ್ನಿಂದ ಸಾಧ್ಯವಾಗಿಲ್ಲ ಎನ್ನುವ ಕೊರಗು ಈಗಲೂ ಕಾಡುತ್ತಿದೆ ಎಂದು ಜಯಂತ ಅವರು ಬಿಚ್ಚಿಟ್ಟಿದ್ದು. ಎಷ್ಟೋ ಜನರು ಸಂಸಾರ ಸುಖಮಯವಾಗಿದ್ದರೆ ಸಾಕು, ಬದುಕು ಆನಂದಮಯ ಎಂದು ತೇಲಾಡುತ್ತಿರುತ್ತಾರೆ. ಆದರೆ, ಇಲ್ಲಿ ಜಯಂತ ಅವರು, ತನ್ನ ಸಂಸಾರ-ಮಕ್ಕಳು ಎನ್ನುವ ಸ್ವಾರ್ಥ ಮರೆತು, ಮಡದಿಯಲ್ಲಿರುವ ಪ್ರತಿಭೆ ಹಾಗೆಯೇ ಉಳಿದುಹೋಯಿತಲ್ಲ ಎಂದು ಕೊರಗುತ್ತಾರೆ.
ಎರಡನೆಯದು, ನಾವೆಲ್ಲ ನಿದ್ದೆಗೆ ಜಾರಿದಾಗ, ಚಾಲಕನೊಬ್ಬನೇ ಎಚ್ಚರವಾಗಿ ವಾಹನ ಓಡಿಸುತ್ತಾನೆ. ಎಲ್ಲರ ಪ್ರಾಣ ಆತನಲ್ಲಿಯೇ ಕೇಂದ್ರೀಕೃತವಾಗಿರುತ್ತದೆ. ಆತನ ಕರ್ತವ್ಯ ಹಾಗೂ ಜವಾಬ್ದಾರಿ ಮುಂದೆ ಎಲ್ಲರೂ ಶೂನ್ಯ ಎನ್ನುವ ಅವರ ಸೂಕ್ಷ್ಮ ಯೋಚನೆಗೆ ತಲೆಬಾಗಲೇ ಬೇಕು. ಇದು ಅವರಲ್ಲಿರುವ ಸೂಕ್ಷ್ಮ ಮತಿಯನ್ನು ತಿಳಿಸಿಕೊಡುತ್ತದೆ. ಸಾಮಾನ್ಯರ ಜೊತೆಯಲ್ಲಿಯೇ ಕೂಡಿ, ಆಡಿ ಬೆಳೆದ ಜಯಂತ ಕಾಯ್ಕಿಣಿಯವರ ಬದುಕಲ್ಲಿ, ಗೋಕರ್ಣ, ಕುಮಟಾ ಮಣ್ಣಿನ ವಾಸನೆಯಿದೆ. ಅದರ ಘಮಲು ಕನ್ನಡ ಸಾರಸ್ವತ ಲೋಕದಲ್ಲಿ ಅವರ ಅಪ್ಪ ಗೌರೀಶ ಕಾಯ್ಕಿಣಿಯವರಂತೆ ಸದಾ ಪಸರಿಸುತ್ತಿರಲಿ. ಅವರ ಜೀವನ ಪ್ರೀತಿಯ ಬದುಕು ಇತರರಿಗೂ ಜೀವನೋತ್ಸಾಹ ತುಂಬಲಿ.
ಇದರ ಹೊರತಾಗಿಯೂ..... 
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ತು ಅಂತ ಸಂಭ್ರಮ ಪಡುತ್ತೇವೆ. ಅದು ಹೇಗಿದೆ ಅಂದ್ರೆ ಮುಳುಗುತ್ತಿರುವ ಟೈಟಾನಿಕ್ ನಲ್ಲಿ ವಿಂಡೋ ಸೈಡ್ ಸೀಟ್ ಸಿಕ್ತು ಅಂತ ಖುಷಿಪಟ್ಟಂಗೆ.
-ಕನ್ನಡ ಕಲಿತೋನು, ನಂಬಿಕೊಂಡವನು ಬೆಂಗಳೂರಿಗೆ ಬಂದವನು ಏನ್ ಮಾಡಬೇಕು? ಆಪಾರ್ಟ್ ಮೆಂಟ್ ನಲ್ಲಿ ಇಸ್ತ್ರಿ ಮಾಡಬೇಕಾ? ಅಥವಾ ಸೊಪ್ಪು ಮಾರಬೇಕಾ? ಓಲಾ ಟ್ಯಾಕ್ಸಿ ಓಡಿಸಬೇಕಾ? ಅನ್ನೋದೆ ದೊಡ್ಡ ಪ್ರಶ್ನೆ. ಬೆಂಗಳೂರಿನ ಟ್ರಾಫಿಕ್'ನಲ್ಲಿ ಎಲ್ಲರದ್ದೂ ಒಂದು ಸಾಮಾನ್ಯ ದೂರು ಇರುತ್ತದೆ. ಈ ಡ್ರೈವರ್'ಗಳು ತುಂಬಾ ಹಾರ್ನ್ ಮಾಡ್ತಾರೆ ಅಂತ. ನನಗೆ ಅದು ಡ್ರೈವರ್'ಗಳ ಹಾಂಕಿಂಗ್ ಅಂತ ಅನಿಸೊಲ್ಲ. ಅದು ಕನ್ನಡ ಆರ್ತನಾದದ ರೀತಿ ಕೇಳುತ್ತದೆ ಎಂದು ಜಯಂತ್ ಕಾಯ್ಕಿಣಿ ಹೇಳುತ್ತಾರೆ.

ಶುಕ್ರವಾರ, ಏಪ್ರಿಲ್ 21, 2017

ಬಣ್ಣ ಬಳಿದುಕೊಂಡ ಅಕ್ಕಿ ಕಾಳು, ಚಪ್ಪಲಿಯಡಿಯಲ್ಲಿ ನಲುಗಿತು!

ಮಾವಿನ ಚಿಗುರೆಲೆಯ ಹಸಿರು ತೋರಣದ ಮಧ್ಯೆ ಹಸೆಮಣೆಯ ಮೇಲೆ ಕೋರಿರುವ ವಧು-ವರರಿಗೆ ಆರತಿ ಬೆಳಗಿ, ಸೋಬಾನೆ ಪದ ಹಾಡಿ ಅಕ್ಷತೆ ಕಾಳು ಹಾಕಿ ಶುಭಾಶೀರ್ವಾದ ಮಾಡುವ ಪದ್ಧತಿ ಈಗ ಕಾಲಗರ್ಭದಲ್ಲಿ ಹೂತು ಹೋಗಿದೆಯೇನೋ ಎಂದೆನಿಸುತ್ತದೆ. ಅದಕ್ಕೂ ಮಿಗಿಲಾಗಿ ಶುಭದ ಸಂಕೇತವಾದ 'ಅಕ್ಷತೆ' ಅರಿಸಿಣ-ಕುಂಕುಮ ಬಣ್ಣದ ಬದಲಾಗಿ ನವರಂಗೀಯಂತೆ ಒಂದೊಂದು ಬಣ್ಣ ಬಳಿದುಕೊಳ್ಳುತ್ತಿರುವುದು ಬಣ್ಣದ ಮನಸ್ಸಿನ ದ್ಯೋತಕ. ಇದು ಇಷ್ಟಕ್ಕೆ ನಿಲ್ಲದು; ವಧು-ವರರ ಬೈತಲೆಯ ಮೇಲೆ ಬಿದ್ದು ಶುಭಕೋರಿದ ಅಕ್ಕಿ ಕಾಳು ಅವರದ್ದೇ ಕಾಲ ಕೆಳಗೆ ಬಿದ್ದು ಒದ್ದಾಡುತ್ತದೆ! ಸಾಲದೆಂಬಂತೆ ಹರಸಲು ಬಂದ ಬಂಧು-ಬಾಂಧವರ, ಹಿತೈಷಿಗಳ ಪಾದದಡಿಯಲ್ಲೂ ದೀನವಾಗಿ ಬಿದ್ದಿರುತ್ತದೆ!
ಕೆಲದಿನಗಳ ಹಿಂದೆ ಸಾಮೂಹಿಕ ವಿವಾಹಕ್ಕೆ ಹೋಗಿದ್ದೆ. ವಧು-ವರರಿಗೆ ಹರಿಸಿದ ಅಕ್ಷತೆ ಕಾಳುಗಳೆಲ್ಲ ಮದುವೆ ಆವರಣದ ತುಂಬೆಲ್ಲ ಬಿದ್ದಿತ್ತು. ಶುಭ ಹಾರೈಸಿದ ಅಕ್ಕಿ ಕಾಳು ಕೆಲವರ ಪಾದದಡಿಯಲ್ಲಿ ಸಿಲುಕಿದ್ದರೆ, ಇನ್ನು ಕೆಲವರ ಚಪ್ಪಲಿಯಡಿ ಸಿಲುಕಿ ನರಳುತ್ತಿತ್ತು. ವಿಚಿತ್ರವೆಂದರೆ ನೂತನ ವಧು-ವರರ ಕಾಲಡಿಯಲ್ಲಿಯೂ ಅದು ಸಿಲುಕಿ ಹೊಸಕಿ ಹೋಗುತ್ತಿತ್ತು. 'ನಾನೆಲ್ಲರಿಗೂ ಬೇಕಾದವಳು' ಎನ್ನುವ ಅಕ್ಕಿಯ ಮೂಕ ರೋದನ, ಮದುವೆ ಗದ್ದಲದಲ್ಲಿ ಯಾರೊಬ್ಬರಿಗೂ ಕೇಳಿಸಲಿಲ್ಲ. ದಾಂಪತ್ಯಕ್ಕೆ ಮುನ್ನಡಿ ಬರೆದ ನವ ದಂಪತಿಯೂ ಸೇರಿದಂತೆ!
ಇದು ಬದಲಾದ ಮದುವೆಯ ಪದ್ಧತಿಯ ಆಚಾರದಲ್ಲಿ ಕಂಡು ಬರುವ ಹೀನ ನಡೆ ಎಂದೇ ಹೇಳಬಹುದು. ಕಾಲಕ್ಕೆ ತಕ್ಕಂತೆ ಪದ್ಧತಿಯಲ್ಲಿನ, ಆಚರಣೆಯಲ್ಲಿನ ವಿಧಿ-ವಿಧಾನಗಳನ್ನು ಅನಿವಾರ್ಯವಾಗಿಯಾದರೂ ಒಂದಷ್ಟು ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಂತಹ ಬದಲಾವಣೆ ಮೂಲ ಆಚಾರದಲ್ಲಿ, ಪದ್ಧತಿಯಲ್ಲಿ ತರವಲ್ಲ. ಸಂಪ್ರದಾಯಗಳು ಯಾಕೆ ಇರುತ್ತಿದ್ದವು, ಅವುಗಳ ಅರ್ಥ, ಆಶಯಗಳು ಏನಿದ್ದವು ಎನ್ನುವುದು ಅರಿತುಕೊಳ್ಳುವುದು ಬದಲಾವಣೆಗೆ ಒಗ್ಗುವ ಮನಸ್ಸು ತಿಳಿದುಕೊಳ್ಳಬೇಕು.
'ಅಕ್ಷತ' ಎಂದರೆ ಸಂಸ್ಕೃತ ಭಾಷೆಯಲ್ಲಿ ತುಂಡಾಗದ ಎಂದರ್ಥ. ಕನ್ನಡದಲ್ಲಿ ಸ್ವಲ್ಪ ಅಪಭ್ರಂಶಗೊಂಡು ಅದು 'ಅಕ್ಷತೆ' ಎಂದಾಗಿದೆ. ಅಕ್ಷತೆಯಲ್ಲಿ ಬಳಸುವ ಒಂದೊಂದು ಅಕ್ಕಿ ಕಾಳು ಸಹ ಇಡಿ ಇಡಿಯಾಗಿರಬೇಕು. ಅಲ್ಲಿ ತುಂಡಾಗಿರುವ, ನುಚ್ಚಿನ ಅಕ್ಕಿಗೆ ಒಂದಿನಿತೂ ಅವಕಾಶವಿಲ್ಲ. ಅಲ್ಲದೆ, ಅದಕ್ಕೆ ಎಷ್ಟೇ ಅರಿಶಿಣ ಕುಂಕುಮ ಹಚ್ಚಿದರೂ ಪ್ರಯೋಜನವಿಲ್ಲ, ಹಾಗೆಯೇ ಅದು ಅಕ್ಷತೆಯೂ ಆಗುವುದಿಲ್ಲ. ಎಲ್ಲ ಧಾರ್ಮಿಕ ಕಾರ್ಯಗಳಲ್ಲೂ ಅಕ್ಷತೆಗೆ ಪ್ರಥಮ ಸ್ಥಾನ. ಭಗವಂತನಿಗೆ ಅರ್ಪಿಸುವ ಪ್ರಮುಖ ಪೂಜಾದ್ರವ್ಯ. ಜತೆಗೆ ದೈವಾನುಗ್ರಹಕ್ಕೆ ಹಾಗೂ ಗುರುಹಿರಿಯರ ಆಶೀರ್ವಚನಕ್ಕೆ ಇಡಿಯಾದ ಅಕ್ಕಿಕಾಳು ಶುಭ ನುಡಿಯುತ್ತದೆ. ಇದರ ಹೊರತಾಗಿ ಅಧ್ಯಾತ್ಮಿಕವಾಗಿ ಹೇಳಬೇಕೆಂದರೆ 'ಅಕ್ಷತೆ' ಎನ್ನುವುದು ಫಲಾಪೇಕ್ಷೆಯ ಬೀಜ; ಬೀಜ ಮೊಳೆತು ಪಕ್ವವಾಗಿ ಅದರೊಳಗಿಂದ ಮೊಳಕೆ ಬಂದು ದೊರೆಯುವ ಫಲ!
ಅಧ್ಯಾತ್ಮಿಕ ಹಾಗೂ ಆಶೀರ್ವಾದದ ಅನುಗ್ರಹಕ್ಕೆ ಅಕ್ಷತೆ ಬಳಸುತ್ತಾರಾದರೂ, ಮದುವೆಯ ಮುಹೂರ್ತದ ವೇಳೆ ವಧು-ವರರು ಪರಸ್ಪರ ಮಾಲೆ ಹಾಕಿಕೊಂಡ ನಂತರ ಗಟ್ಟಿಮೇಳ ಮೊಳಗುತ್ತಿದ್ದಂತೆ, ಆಗಮಿಸಿದ ಅತಿಥಿ ಮಹೋದಯರೆಲ್ಲ ಅಕ್ಷತೆ ಪ್ರೋಕ್ಷಣೆ ಮಾಡುವ ಮೂಲಕ ನೂತನ ದಂಪತಿಯನ್ನು ಆಶೀರ್ವದಿಸುತ್ತಾರೆ. ಅದಕ್ಕೂ ಪೂರ್ವ ಅಂದರೆ ಅಂತಃಪಟ ಸರಿಯುವ ಮುನ್ನ, ವಧು-ವರರು ಎದುರುಬದುರಾಗಿ ನಿಲ್ಲುವುದು ಇದೇ ಅಕ್ಕಿಯ ಮೇಲೆ. ಸಪ್ತಪದಿ ತುಳಿಯುವುದು ಸಹ ಅಕ್ಕಿಯಿಂದ ಮಾಡಿದ ಏಳು ರಾಶಿಗಳ ಮೇಲೆಯೇ. ಇವೆಲ್ಲ ಮುಗಿದು ಗಂಡನ ಮನೆ ಪ್ರವೇಶಿಸುವ ಮೊದಲು ವಧು, ಹೊಸ್ತಿಲಲ್ಲಿಟ್ಟ ಅಕ್ಕಿ ಪಾತ್ರೆಯನ್ನು ಕಾಲಿನಿಂದ ಚೆಲ್ಲಿ ಒಳಬರುತ್ತಾಳೆ. ಇದರರ್ಥ ವರನ ಕೈ ಹಿಡಿದಾಕೆ ಧಾನ್ಯ ಲಕ್ಷ್ಮಿಯಂತೆ, ಬಾಳಿ-ಬದುಕುವ ಮನೆ ತುಂಬಿ ತುಳುಕಲಿ ಎಂದು.
ಅಕ್ಷತೆಗೆ ಇಷ್ಟೊಂದು ಸಮೃದ್ಧ ಅರ್ಥಗಳಿವೆ, ಸಾಕ್ಷಾತ್ ದೈವೀ ಸ್ವರೂಪದ ಅಕ್ಕಿ ಕಾಳನ್ನು ತಲೆ ಮೇಲಿಟ್ಟು ಪೂಜಿಸುವ ಸಂಸ್ಕೃತಿ ನಮ್ಮದು. ಆದರೆ, ಇಂದಿನ ಆಡಂಬರದ ಜೀವನದಲ್ಲಿ, ವಿವಾಹ ಮಹೋತ್ಸವದಲ್ಲಿ ಅದಕ್ಕೆ ಬೆಲೆಯೇ ಇಲ್ಲದಂತೆ ಮಾಡಿದ್ದೇವೆ. ಧಾರ್ಮಿಕ ಪರಂಪರೆ, ಸಂಪ್ರದಾಯಗಳನ್ನು ಗಾಳಿಗೆ ತೂರಿ ಅಕ್ಕಿ ಕಾಳನ್ನು ಫ್ಯಾಶನ್ ವಸ್ತುವನ್ನಾಾಗಿ ಬಳಸುತ್ತಿದ್ದೇವೆ. ಮೊದಲೆಲ್ಲ ಅರಿಶಿಣ -ಕುಂಕುಮ ಬಳಿದುಕೊಂಡಿದ್ದ ಅಕ್ಷತೆ ಇರುತ್ತಿತ್ತು. ಆದರೀಗ ಅದಕ್ಕೆ ಬಣ್ಣ ಬಣ್ಣದ ರಾಸಾಯನಿಕ ಹಚ್ಚಿ ಆಕರ್ಷಿಸುತ್ತಿದ್ದಾರೆ. ಕ್ರಿಯಾಶೀಲತೆಯ ಕಲಾತ್ಮಕತೆಯನ್ನು ಧಾರ್ಮಿಕ ಆಚಾರದಲ್ಲಿ ನುಸುಳಿಸಿ, ಅಕ್ಷತೆಯ ಪಾವಿತ್ರ್ಯತೆಯನ್ನು ಹಾಳುಗೆಡವಿದಿದ್ದಾರೆ.