ಒಂದು ಬಾರಿ 'ಕಾವೇರಿ'ಯ ತಾಯಿ ಆಗಿ ಯೋಚಿಸಿ
ಪುಟ್ಟ ಕಂದಮ್ಮ ಕಾವೇರಿ ಇನ್ನು ನೆನಪು ಮಾತ್ರ. ಬಟ್ಟಲು ಕಣ್ಣುಗಳಲ್ಲಿ ಆಕೆ ಕಾಣುತ್ತಿದ್ದ ಅದೆಷ್ಟೋ ಕನಸುಗಳು ಆಳದ ಕೊಳವೆ ಬಾವಿಯಲ್ಲಿ ಹೂತು ಹೋಗಿವೆ. ಅದನ್ನು ನನಸು ಮಾಡಬೇಕೆನ್ನುವ ಹೆತ್ತಾಕೆಯ ಕನಸುಗಳು ಸಹ ಕತ್ತಲ ಕೂಪದಲ್ಲಿ ಸಮಾಧಿಯಾಗಿವೆ!
ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿನ ತೋಟವೊಂದರಲ್ಲಿ ಕೊರೆಸಲಾದ ಕೊಳವೆ ಬಾವಿಯಲ್ಲಿ ಶನಿವಾರ ಅರಿವಿಲ್ಲದೆ ಇಟ್ಟ ಹೆಜ್ಜೆಯೊಂದು ಕಾವೇರಿಯನ್ನು ಆಪೋಶನ ತೆಗೆದುಕೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆಗಷ್ಟೇ ತೋಟದ ಕೆಲಸ ಮುಗಿಸಿಕೊಂಡು ಅಪ್ಪ-ಅಮ್ಮರ ಕೈ ಹಿಡಿದು ಬರುತ್ತಿದ್ದ ಪುಟ್ಟ ಬಾಲೆ, ಅನತಿ ದೂರ ಬರುತ್ತಿದ್ದಂತೆ ಬೆರಳಿನ ಹಿಡಿತ ಸಿಡಿಲಗೊಳಿಸಿ ಮುಂದೋಡೋಡಿ ಹೋದಳು. ಮುದ್ದು ಮಗಳ ಪುಟ್ಟ ಪುಟ್ಟ ಹೆಜ್ಜೆ, ತಲೆಯಾನಿಸಿ ಓಡುವ ಭಂಗಿಯನ್ನು ಹಿಂದಿನಿಂದ ಅಪ್ಪ-ಅಮ್ಮರು ಧನ್ಯೋಸ್ಮಿ ಸ್ಥಿತಿಯಿಂದ ನೋಡುತ್ತ ಮುಂದಡಿಯಿಡುತ್ತಿದ್ದರು. ಅತೀತವಾದ ಸಾರ್ಥಕ್ಯ ಆನಂದದಲ್ಲಿ ಅವರು ಮುಳುಗೇಳುತ್ತಿದ್ದರು. ನೋಡು ನೋಡುತ್ತಿದ್ದಂತೆ ಕಾವೇರಿ ಮುಗ್ಗರಿಸಿದಂತಾದಳು, ಕ್ಷಣಮಾತ್ರದಲ್ಲಿ ಆಕೆಯ ಎರಡು ಕೈಗಳು ಮೇಲಿನಿಂದ ಭೂಮಿಯಾಳಕ್ಕೆ ಸರಿದು ಹೋದವು. ಆನಂದದ ಕಡಲಲ್ಲಿ ತೇಲುತ್ತಿದ್ದ ಹಡಿದ ಜೀವಕ್ಕೆ ಏನಾಗುತ್ತಿದೆ ಎನ್ನುವುದೇ ಅರಿವಾಗಲಿಲ್ಲ. ಮಗಳು ಕರಗಿಹೋದ ಜಾಗಕ್ಕೆ ಬಂದು ನೋಡುವಷ್ಟರಲ್ಲಿ, ಪಾತಾಳದಿಂದಲೋ ಎನ್ನುವಂತೆ ಕ್ಷೀಣ ದನಿಯೊಂದು ಅಮ್ಮಾ... ಅಮ್ಮಾ ಎಂದು ಕೇಳಿಬರುತ್ತಿತ್ತು. ಕರುಳ ಬಳ್ಳಿ ಕತ್ತರಿಸಿದ ಅನುಭವ!
ಕೊಳವೆ ಬಾವಿಯಲ್ಲಿ ಆರು ವರ್ಷದ ಹಸುಗಲ್ಲದ ಮಗು ಕಾವೇರಿ ಬೀಳುವುದನ್ನು ಹೆತ್ತಾಕೆ ಸವಿತಾ ಹಾಗೂ ಅಪ್ಪ ಅಜಿತ್ ಕಣ್ಣಾರೆ ಕಂಡಿದ್ದರು. ಕಣ್ಣೆದುರಿಗೆಯೇ ಕರಳು ಕುಡಿ ಕಣ್ಮರೆಯಾಗಿ, ಅದರ ಜೀವ ಭಯದ ಕೂಗು ಕಿವಿಗಪ್ಪಳಿಸುತ್ತದೆ ಎಂದರೆ ಅದಕ್ಕಿಂತ ದೊಡ್ಡ ದುರಂತ ಇನ್ನೇನಿದೆ? ಶನಿವಾರ ಸಾಯಂಕಾಲ 5ರ ವೇಳೆಗೆ ಕಾಲು ಜಾರಿ ಬಿದ್ದಿದ್ದ ಕಂದಮ್ಮನ ರಕ್ಷಣೆಗೆ ರಾತ್ರಿ ಹಗಲೆನ್ನದೆ ಬರೋಬ್ಬರಿ 53 ಗಂಟೆಗಳ ಕಾಲ ತಾಲೂಕಾಡಳಿತ, ಜಿಲ್ಲಾಡಳಿತ ಹರಸಾಹಸ ಪಟ್ಟಿತು. ಕತ್ತಲ ಕೂಪದಲ್ಲಿ ಉಸಿರು ಬಿಗಿಹಿಡಿದುಕೊಂಡು ಪ್ರಾಣಕ್ಕಾಗಿ ಒದ್ದಾಡುತ್ತಿದ್ದ ಮಗುವಿದ್ದಲ್ಲಿಗೆ ರಕ್ಷಣಾ ಪಡೆ ಸಿಬ್ಬಂದಿ ತಲುಪುವವರೆಗೆ ಸಮಯ ಮೀರಿತ್ತು. ಮಗಳು ಜೀವಂತವಾಗಿ ಮೇಲೆದ್ದು ಬರುತ್ತಾಳೆಂದು ಆಸೆ ಕಂಗಳಿಂದ ನೋಡುತ್ತಿದ್ದ ಹೆತ್ತಾಕೆಗೆ ಬರಸಿಡಿಲು ಬಡಿದ ಅನುಭವ!
ಇಂತಹ ಘೋರ, ಅಷ್ಟೇ ಕ್ರೂರ ಘಟನೆಗಳು ಆವಾಗೀವಾಗ ನಮ್ಮ ನಡುವೆ ನಡೆಯುತ್ತಲೇ ಇರುತ್ತವೆ. ಕೊಳವೆ ಬಾವಿಯಲ್ಲಿ ಸಮಾಧಿಯಾದ ಹಸಿ ಜೀವ ಮೇಲೆ ಬರುವವರೆಗೂ ಕಾನೂನು, ನಿಯಮಾವಳಿಗಳು, ಶಿಕ್ಷೆ ಎಂಬೆಲ್ಲ ಮಾತುಗಳು ಜೋರು ದನಿಯಲ್ಲಿ ಸದ್ದಾಗಿ ಸುದ್ದಿಯಾಗುತ್ತವೆ. ಆಳುವ ಪಕ್ಷದ ಜತೆಗೆ ಕೆಲವು ಜನಪ್ರತಿನಿಧಿಗಳು ಮೈ ಕೊಡವಿಕೊಂಡು ಎದ್ದೇನೋ ಬಿದ್ದೇನೋ ಎನ್ನುತ್ತ ಘಟನಾ ಸ್ಥಳಕ್ಕೆ ಬಂದು ಮರುಗುತ್ತಾರೆ, ಇನ್ನು ಕೆಲವರು ಮೊಸಳೆ ಕಣ್ಣೀರು ಹಾಕುತ್ತಾರೆ! ಘಟನೆಯ ಕಹಿ ನೆನಪು ವಾರ, ಹದಿನೈದು, ತಿಂಗಳ ಕಾಲ ಮಾತ್ರ ಹಸಿಯಾಗಿರುತ್ತದೆ. ನಂತರ ದಿನಗಳುರುಳಿದಂತೆ ಸಾಮಾನ್ಯರಾದಿಯಾಗಿ ಎಲ್ಲರಿಂದಲೂ ಮಾಸಿ ಹೋಗುತ್ತದೆ. ಪಾಪದ ಇನ್ನೊಂದು ಮಗು ಮತ್ತಿನ್ನೆಲ್ಲಿಯಾದರೂ ಕೊಳವೆ ಬಾವಿಯಲ್ಲಿ ಬಿದ್ದಾಗ ಮಾತ್ರ ಕಾನೂನು, ನಿಯಮಾವಳಿ ಮತ್ತೆ ಗರಿಗೆದರುತ್ತದೆ. ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.ಸಾಧ್ಯವಾದರೆ ಒಂದು ಬಾರಿ ಆ ಮುದ್ದು ಕಂದಮ್ಮ ಕಾವೇರಿಯ ತಾಯಿಯಾಗಿ ಯೋಚಿಸಿ. ಕಣ್ಮುಂದೆಯೇ ಮಗಳು ಇನ್ನಿಲ್ಲವಾಗುತ್ತಾಳೆ, ಪಾತಾಳದಿಂದ ಆಕೆಯ ಪ್ರಾಣ ಭಿಕ್ಷೆಯ ಕೂಗು ಕೇಳಿ ಬರುತ್ತದೆ, ಗಂಟೆ ಕಳೆಯುವುದರೊಳಗೆ ಜನಸಾಗರ ಸೇರುತ್ತದೆ, ದೊಡ್ಡ ದೊಡ್ಡ ಯಂತ್ರಗಳು ಮಣ್ಣಿನ ರಾಶಿಯನ್ನು ಎತ್ತಿ ಹಾಕುತ್ತವೆ, ಎಂದೂ ನೋಡದ ಜನಪ್ರತಿನಿಧಿಗಳು ಎದುರಾಗಿ ಸಾಂತ್ವನದ ಮಾತು ಹೇಳುತ್ತಾರೆ, ಹಗಲು ಕಳೆದು ರಾತ್ರಿ ಎದುರಾಗುತ್ತವೆ. ಇತ್ತ ಸದ್ದಿಲ್ಲದೆ ಸಮಯ ಜಾರುತ್ತಿದ್ದರೆ, ಅತ್ತ ಆಳದಲ್ಲಿ ಬಿದ್ದ ಮಗುವಿನ ಮಿಸುಕಾಟ ಸಹ ನಿಧಾನವಾಗಿ ಸ್ತಬ್ಧವಾಗುತ್ತದೆ. ಇದ್ಯಾವುದರ ಅರಿವಿಲ್ಲದ ಹೆತ್ತಾಕೆ ಸವಿತಾ ಮಾತ್ರ ನನ್ನ ಮಗಳು ಬದುಕಿ ಬರುತ್ತಾಳೆ ಎನ್ನುವ ನಿರೀಕ್ಷೆಯಿಂದ ಬೊಗಸೆಯೊಡ್ಡಿ ನೂರಾರು ದೇವರಿಗೆ ಪ್ರಾರ್ಥನೆ, ಹರಕೆ ಹೊರುತ್ತಾಳೆ. ಅವಳ ಜತೆ ಸಹಸ್ರಾರು ಕೈಗಳು ಭಗವಂತನಲ್ಲಿ ಕಾವೇರಿಯ ಪ್ರಾಣ ಉಳಿಸು ಎಂದು ಬೇಡಿಕೊಳ್ಳುತ್ತವೆ. ವಿಧಿಯ ಮುಂದೆ ದೇವರ ಆಟ ಏನೂ ನಡೆಯದು ಎನ್ನುವ ಸತ್ಯ ಕಾರಿರುಳ ರಾತ್ರಿಯಲಿ ಅನಾವರಣವಾಗುತ್ತದೆ.
ಮಗಳನ್ನು ಕಳೆದುಕೊಂಡು ಎದೆಬಡಿದುಕೊಳ್ಳುತ್ತ ಗೋಗರೆಯುವ ತಾಯಿಯ ಆಕ್ರಂದನ, ಅಧಿಕಾರದ ಸುಪ್ಪತ್ತಿಗೆಯಲ್ಲಿ ಮೈಮರೆಯುವ ಆಳುವ ವರ್ಗಕ್ಕೆ ಎಲ್ಲಿ ಅರ್ಥವಾಗಬೇಕು? ಹೂತ ಮಗುವಿನ ಮೇಲೆತ್ತುವ ಕಾರ್ಯಾಚರಣೆ ನೋಡುತ್ತಲೇ ಪ್ರಜ್ಞೆ ಕಳೆದುಕೊಂಡ ಹೆತ್ತಾಕೆಯ ಸ್ಥಿತಿ, ದರ್ಪದಿಂದ ಮೆರೆವ ಜನಪ್ರತಿನಿಧಿಗಳಿಗೆ ಎಲ್ಲಿ ಅರಿವಾಗಬೇಕು? ನಿರುಪಯುಕ್ತ ಕೊಳವೆ ಬಾವಿ ಎಂದು ಮಣ್ಣು ಮುಚ್ಚದ ಅದರ ವಾರಸುದಾರರಿಗೆ ಮಕ್ಕಳನ್ನು ಕೆಳೆದುಕೊಂಡವರ ನೋವೇನೆಂಬುದು ಎಲ್ಲಿ ಅರ್ಥವಾಗಬೇಕು? ಕಂದಮ್ಮ ಆಡಿ, ಬೆಳೆದ ಮಡಿಲು ಬರಿದಾಗಿದೆ ಎನ್ನುವ ಕಟು ಸತ್ಯ ಒಂಬತ್ತು ತಿಂಗಳು ಹೊತ್ತ ಆ ಉದರದ ಕರುಳು ಹೇಗೆ ಸಹಿಸಿಕೊಳ್ಳಬೇಕು? ಕುಡಿಯ ಮುಖ ನೋಡದ ಹೊರತು ಅನ್ನ, ಆಹಾರ, ನೀರು ಸೇವಿಸಲಾರೆನೆಂದು ಶಪಥ ಮಾಡಿದ ಹೆತ್ತಾಕೆಗೆ, ಕಣ್ಮುಚ್ಚಿದ ಒಡಲ ಕುಡಿಯನ್ನು ನೋಡುವ ಪರಿ ಎಂತಹ ವೈರಿಗೂ ಬಾರದಿರಲಿ!
ಇಂತಹ ಘಟನೆ ಇನ್ನೆಂದೂ ಮರುಕಳಿಸದಿರಲಿ, ಎಲ್ಲ ಕಂದಮ್ಮಗಳು ನಮ್ಮದೇ ಎನ್ನುವ ಭಾವ ಎಲ್ಲ ಅಧಿಕಾರಿಗಳಲ್ಲೂ ಒಡಮೂಡಲಿ, ಕೇವಲ ಕಾಗದ ಪತ್ರಕ್ಕಷ್ಟೇ ಕಾನೂನು, ನಿಯಮಾವಳಿ ಎನ್ನುವ ಜಡ್ಡು ಗಟ್ಟಿದ ಮನಸ್ಸು ಹೊಡೆದೋಡಲಿ. ಇದಕ್ಕೆಲ್ಲ ಕಾವೇರಿಯ ಸಾವೇ ಕೊನೆಯಾಗಿ, ಅವಳ ಆತ್ಮವೇ ಸಾಕ್ಷಿಯಾಗಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ