ವಿಕೆಂಡ್'ನಲ್ಲಿ ಜೀವನ ಪ್ರೀತಿ ಬಿಚ್ಚಿಟ್ಟ ಜಯಂತಣ್ಣ
ಬದುಕು, ಭಾವನೆ, ಬರವಣಿಗೆ.... ಇದು ಸಾಹಿತಿಗಳಲ್ಲಿರುವ ಮೂಲ ಬಂಡವಾಳ. ಬದುಕಿನ ಚಿತ್ರಣವನ್ನೇ ಅಕ್ಷರ ರೂಪಕ್ಕೆ ಇಳಿಸುತ್ತಾರೆ, ಭಾವನೆಗಳನ್ನೇ ಗೀಚುತ್ತಾರೆ. ಕಲ್ಪನಾ ಲೋಕದಲ್ಲಿ ವಿಹರಿಸಿ ಪದಗಳ ದಂಡೆ ಕಟ್ಟುತ್ತಾರೆ. ಇದರ ಹೊರತಾಗಿಯೂ ಕಾಣದ ಬದುಕೊಂದು ಅವರಲ್ಲಿ ಉಸಿರಾಡುತ್ತಿರುತ್ತದೆ. ಹೇಳಿಕೊಳ್ಳಲಾಗದ ಎಷ್ಟೋ ರಸಾನುಭವಗಳು ಅಲ್ಲಿ ಹುದುಗಿರುತ್ತವೆ.
ಇಂತಹ ಸೂಕ್ಷ್ಮವೊಂದು ಅರಿವಾಗಿದ್ದು ವಿಕೆಂಡ್-ವಿಥ್-ರಮೇಶ ಕಾರ್ಯಕ್ರಮದಲ್ಲಿ ಜಯಂತಿ ಕಾಯ್ಕಿಣಿ ಅವರ ಜೀವನ ಪ್ರೀತಿ ಮಾತುಗಳು. ಭಾನುವಾರ ಝೀ ವಾಹಿನಿಯಲ್ಲಿ ಪ್ರಸಾರವಾದ ಮೂರು ಗಂಟೆಗಳ ಸಂಪೂರ್ಣ ಎಪಿಸೋಡ್‌ನಲ್ಲಿ ಅವರು, ಎಲ್ಲಿಯೂ ಮೈಮರೆತು ಮಾತನಾಡಿಲ್ಲ; ಹಾಗೆಯೇ ಬದುಕಿನ ಪ್ರೀತಿಗೆ ಚ್ಯುತಿ ತಂದಂತಹ ಘಟನೆಗಳನ್ನು ಎಲ್ಲಿಯೂ ನೆನಪಿಸಿಕೊಂಡಿಲ್ಲ. ಹಾಗಂತ ಅವರ ಬದುಕಲ್ಲಿ ನೋವುಗಳೇ ಇರಲಿಲ್ಲ, ದುಃಖಗಳನ್ನೇ ಅನುಭವಿಸಿಲ್ಲ ಎಂದರ್ಥವಲ್ಲ. ತಮ್ಮಲ್ಲಿರುವ ಕೊರಗನ್ನು ಸಹ ಪ್ರೀತಿಯಿಂದಲೇ, ಸ್ಫೂರ್ತಿದಾಯಕವಾಗಿಯೇ ಹಂಚಿಕೊಂಡರು. ಅವರಾಡಿರುವ ಪ್ರತಿಯೊಂದು ಮಾತು ಸಹ, ಬದುಕು ಇನ್ನಿಲ್ಲ ಎಂದು ಮಖಾಡೆ ಮಲಗಿದವನನ್ನು ಬಡಿದೆಬ್ಬಿಸುವಂತಿತ್ತು.
ಅವರ ಬಾಲ್ಯದ ಬದುಕು ಎಲ್ಲರಂತೆ ಪುಂಡು-ಪೋಕರಿಯಂತಿದ್ದರೂ, ಅಕ್ಷರದ ಮೇಲೆ ಪ್ರೇಮ ಹಾಗೂ ಆಸಕ್ತಿ ಹೊಂದಿದ್ದರು. ವಿಜ್ಞಾನ ವಿದ್ಯಾರ್ಥಿಯಾಗಿದ್ದರೂ ಸ್ನೇಹಿತರಿಗೆ ಪ್ರೇಮ ಪತ್ರ ಬರೆದುಕೊಡುತ್ತ ಕನ್ನಡದಲ್ಲಿ ಕೃಷಿ ಮಾಡುತ್ತ, ಪದಗಳ ಜೊತೆಗೆ ಆಟವಾಡುತ್ತಿದ್ದರು. ಗೋಕರ್ಣ, ಕುಮಟಾ, ಅರಬ್ಬೀಯ ತಟ, ಅಘನಾಶಿನ ಒಡಲು, ತದಡಿ ಬಂದರು ಇವೇ ಅವರ ಬಾಲ್ಯದ ಒಡನಾಡಿ. ಅಲ್ಲಿಯ ಮಣ್ಣಿನ ಗುಣ ಹಾಗೂ ಸುತ್ತಲಿನ ಪರಿಸರವೇ ಅವರನ್ನು ನಾಡು ಗುರುತಿಸುವಂತೆ ಮಾಡಿದ್ದು ಎಂದು ಅವರ ಆಪ್ತ ಸ್ನೇಹಿತರೇ ತುಂಬು ಹೃದಯದಿಂದ ಹೇಳಿಕೊಳ್ಳುತ್ತಾರೆ.
ಭಾನುವಾರದ ಸಪೂರ್ಣ ಎಪಿಸೋಡ್ ಸಂಗ್ರಹಯೋಗ್ಯ. ಆದರೂ ಅದರಲ್ಲಿ ಅವರು ಹೇಳಿದ ಎರಡು ಮಾತುಗಳು ಚಿಂತನೆಗೆ ಒಡ್ಡುತ್ತವೆ. ಮೊದಲನೆಯದು, ಅವರ ಕೈ ಹಿಡಿದಾಕೆ ಸ್ಮೀತಾ, ಬುದ್ಧಿವಂತೆ, ಅಷ್ಟೇ ಪ್ರತಿಭಾವಂತೆ. ಅವಳು ತನ್ನೆರಡು ಮಕ್ಕಳನ್ನು ಸಾಕಿ, ಸಲುಹುವುದರಲ್ಲೇ ಬದುಕು ವ್ಯಯಿಸಿದಳು. ಅವಳಲ್ಲಿರುವ ಪ್ರತಿಭೆಗೆ ಸೂಕ್ತ ನ್ಯಾಯ ಕೊಡಲು ನನ್ನಿಂದ ಸಾಧ್ಯವಾಗಿಲ್ಲ ಎನ್ನುವ ಕೊರಗು ಈಗಲೂ ಕಾಡುತ್ತಿದೆ ಎಂದು ಜಯಂತ ಅವರು ಬಿಚ್ಚಿಟ್ಟಿದ್ದು. ಎಷ್ಟೋ ಜನರು ಸಂಸಾರ ಸುಖಮಯವಾಗಿದ್ದರೆ ಸಾಕು, ಬದುಕು ಆನಂದಮಯ ಎಂದು ತೇಲಾಡುತ್ತಿರುತ್ತಾರೆ. ಆದರೆ, ಇಲ್ಲಿ ಜಯಂತ ಅವರು, ತನ್ನ ಸಂಸಾರ-ಮಕ್ಕಳು ಎನ್ನುವ ಸ್ವಾರ್ಥ ಮರೆತು, ಮಡದಿಯಲ್ಲಿರುವ ಪ್ರತಿಭೆ ಹಾಗೆಯೇ ಉಳಿದುಹೋಯಿತಲ್ಲ ಎಂದು ಕೊರಗುತ್ತಾರೆ.ಎರಡನೆಯದು, ನಾವೆಲ್ಲ ನಿದ್ದೆಗೆ ಜಾರಿದಾಗ, ಚಾಲಕನೊಬ್ಬನೇ ಎಚ್ಚರವಾಗಿ ವಾಹನ ಓಡಿಸುತ್ತಾನೆ. ಎಲ್ಲರ ಪ್ರಾಣ ಆತನಲ್ಲಿಯೇ ಕೇಂದ್ರೀಕೃತವಾಗಿರುತ್ತದೆ. ಆತನ ಕರ್ತವ್ಯ ಹಾಗೂ ಜವಾಬ್ದಾರಿ ಮುಂದೆ ಎಲ್ಲರೂ ಶೂನ್ಯ ಎನ್ನುವ ಅವರ ಸೂಕ್ಷ್ಮ ಯೋಚನೆಗೆ ತಲೆಬಾಗಲೇ ಬೇಕು. ಇದು ಅವರಲ್ಲಿರುವ ಸೂಕ್ಷ್ಮ ಮತಿಯನ್ನು ತಿಳಿಸಿಕೊಡುತ್ತದೆ. ಸಾಮಾನ್ಯರ ಜೊತೆಯಲ್ಲಿಯೇ ಕೂಡಿ, ಆಡಿ ಬೆಳೆದ ಜಯಂತ ಕಾಯ್ಕಿಣಿಯವರ ಬದುಕಲ್ಲಿ, ಗೋಕರ್ಣ, ಕುಮಟಾ ಮಣ್ಣಿನ ವಾಸನೆಯಿದೆ. ಅದರ ಘಮಲು ಕನ್ನಡ ಸಾರಸ್ವತ ಲೋಕದಲ್ಲಿ ಅವರ ಅಪ್ಪ ಗೌರೀಶ ಕಾಯ್ಕಿಣಿಯವರಂತೆ ಸದಾ ಪಸರಿಸುತ್ತಿರಲಿ. ಅವರ ಜೀವನ ಪ್ರೀತಿಯ ಬದುಕು ಇತರರಿಗೂ ಜೀವನೋತ್ಸಾಹ ತುಂಬಲಿ.
ಇದರ ಹೊರತಾಗಿಯೂ.....
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ತು ಅಂತ ಸಂಭ್ರಮ ಪಡುತ್ತೇವೆ. ಅದು ಹೇಗಿದೆ ಅಂದ್ರೆ ಮುಳುಗುತ್ತಿರುವ ಟೈಟಾನಿಕ್ ನಲ್ಲಿ ವಿಂಡೋ ಸೈಡ್ ಸೀಟ್ ಸಿಕ್ತು ಅಂತ ಖುಷಿಪಟ್ಟಂಗೆ.
-ಕನ್ನಡ ಕಲಿತೋನು, ನಂಬಿಕೊಂಡವನು ಬೆಂಗಳೂರಿಗೆ ಬಂದವನು ಏನ್ ಮಾಡಬೇಕು? ಆಪಾರ್ಟ್ ಮೆಂಟ್ ನಲ್ಲಿ ಇಸ್ತ್ರಿ ಮಾಡಬೇಕಾ? ಅಥವಾ ಸೊಪ್ಪು ಮಾರಬೇಕಾ? ಓಲಾ ಟ್ಯಾಕ್ಸಿ ಓಡಿಸಬೇಕಾ? ಅನ್ನೋದೆ ದೊಡ್ಡ ಪ್ರಶ್ನೆ. ಬೆಂಗಳೂರಿನ ಟ್ರಾಫಿಕ್'ನಲ್ಲಿ ಎಲ್ಲರದ್ದೂ ಒಂದು ಸಾಮಾನ್ಯ ದೂರು ಇರುತ್ತದೆ. ಈ ಡ್ರೈವರ್'ಗಳು ತುಂಬಾ ಹಾರ್ನ್ ಮಾಡ್ತಾರೆ ಅಂತ. ನನಗೆ ಅದು ಡ್ರೈವರ್'ಗಳ ಹಾಂಕಿಂಗ್ ಅಂತ ಅನಿಸೊಲ್ಲ. ಅದು ಕನ್ನಡ ಆರ್ತನಾದದ ರೀತಿ ಕೇಳುತ್ತದೆ ಎಂದು ಜಯಂತ್ ಕಾಯ್ಕಿಣಿ ಹೇಳುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ