ಗುರುವಾರ, ಆಗಸ್ಟ್ 24, 2017

ಇದೊಂದು ಅದ್ಭುತ ಪ್ರಪಂಚ!

ಇನ್ನು ಹತ್ತತ್ರ ನಿಲ್ಲಿ... ಮುಖ ಸ್ವಲ್ಪ ಮೇಲೆ ಮಾಡಿ... ಓಕೆ... ರೆಡಿನಾ... ಸ್ಮೈಲ್ ಪ್ಲೀಸ್... ಇದೊಂದು ಮಗ್ಗುಲಾದರೆ, ಜನದಟ್ಟಣೆಯ ನೂಕುನುಗ್ಗಲಿನ ನಡುವೆಯೇ ಮುನ್ನಗ್ಗಬೇಕು. ಮಳೆ-ಗಾಳಿ, ನಿಷೇಧಾಜ್ಞೆ, ಲಾಠಿ ಚಾರ್ಜ್ ಯಾವುದನ್ನೂ ಲೆಕ್ಕಿಸದೆ ಪ್ರಾಣದ ಹಂಗು ತೊರೆದು ಘಟನಾ ಸ್ಥಳದಲ್ಲಿರಬೇಕು. ಅರೆಕ್ಷಣ ತಡವಾದರೂ ಸಹ ಬಹು ಮುಖ್ಯವಾದ ಸ್ನ್ಯಾಪ್ ತಪ್ಪಿಹೋಗುತ್ತದೆ!! ಸದಾ ಧಾವಂತದ ಬದುಕು, ಸಮಯದ ಹಿಂದೆಯೇ ಓಡುತ್ತಿರಬೇಕು. ಇದು ಇನ್ನೊಂದು ಮಗ್ಗಲು.
ಇದು ವೃತ್ತಿ ನಿರತ ಛಾಯಾಗ್ರಾಹಕರು ಪ್ರತಿನಿತ್ಯ ಎದುರಿಸಬೇಕಾದ ಸವಾಲುಗಳು. ಪ್ರತಿನಿತ್ಯ ಒಂದಿಲ್ಲೊಂದು ಸಮಾರಂಭದಲ್ಲಿ ಪಾಲ್ಗೊಂಡು, ಭಿನ್ನ-ವಿಭಿನ್ನ ನೋಟದ ಚಿತ್ರಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಆಯೋಜಕರ ಮನ ಗೆಲ್ಲುವ ಛಾಯಾಗ್ರಾಹಕರು ಒಂದು ಕಡೆಯಾದರೆ, ಮಾಧ್ಯಮಕ್ಕೆ ಬೇಕಾಗುವ ಪತ್ರಿಕಾ ಫೊಟೋಗಳನ್ನು ಸೆರೆ ಹಿಡಿಯಲು ಸಮಯದ ಹಿಂದೆ ಓಡುವ ಛಾಯಾಗ್ರಾಹಕರು ಇನ್ನೊಂದೆಡೆ. ಹಾಗೆಯೇ ಹವ್ಯಾಸಿ ಛಾಯಾಗ್ರಾಹಕರು, ವನ್ಯಜೀವಿ ಛಾಯಾಗ್ರಾಹಕರು ಕೂಡಾ ತಮ್ಮ ಆಸಕ್ತಿಗನುಗುಣವಾಗಿ ಫೊಟೋಗಳನ್ನು ಕ್ಲಿಕ್ಕಿಸುತ್ತಾರೆ.
ಫೊಟೋಗ್ರಫಿ ಎನ್ನುವುದು ಒಂದು ತಪಸ್ಸು. ತಾಳ್ಮೆ ಇದ್ಸವನು ಮಾತ್ರ ಇಲ್ಲಿ ಯಶಸ್ವಿಯಾಗುತ್ತಾನೆ. ಈ ಮೊದಲು ಹಣವಿದ್ದವರ ಕೈಯ್ಯಲ್ಲಿ ಮಾತ್ರ ಕ್ಯಾಮರಾ ಕಂಡು ಬರುತ್ತಿತ್ತು. ಅವರ ಕೈಯ್ಯಲ್ಲಿರುವ ಕ್ಯಾಮರಾ ನೋಡಿ ‘ಏಯ್, ಅವನು ಕ್ಯಾಮರಾ ತಗೊಂಡಿದ್ದಾನೆ, ನೋಡ್ರೋ...’ ಎಂದು ಹುಬ್ಬೇರಸುತ್ತಿದ್ದರು. ಆದರೆ, ಈಗ ಕ್ಯಾಮರಾ ಎನ್ನುವುದು ಮಕ್ಕಳ ಆಟಿಕೆ ಸಾಮಾನಿನಂತಾಗಿದೆ. ಶ್ರೀಸಾಮಾನ್ಯನ ಕೊರಳಲ್ಲೂ ಅದು ತೂಗಾಡುತ್ತ, ಸುತ್ತಮುತ್ತಲಿನ ಚಿತ್ರಗಳನ್ನು ಸೆರೆಹಿಡಿಯುತ್ತಲೇ ಇರುತ್ತವೆ. ಕ್ಯಾಮರಾದ ಕುರಿತು ಸ್ವಲ್ಪ ಮಾಹಿತಿಯಿದ್ದರೆ ಯಾರೂ ಬೇಕಾದರೂ ಸಹ ಫೊಟೋ ತೆಗೆಯಬಹುದು. ಆದರೆ, ತೆಗೆದ ಫೋಟೋ ಎಷ್ಟು ಚೆನ್ನಾಗಿದೆ, ಅದರ ಹಿನ್ನೆಲೆ ಹೇಗಿದೆ, ಯಾವ ಶೈಲಿಯಲ್ಲಿ ಬಂದಿದೆ ಜೊತೆಗೆ ಆ ಫೋಟೋ ಸಕಾಲಿಕವೋ ಅಥವಾ ಸರ್ವಕಾಲಿಕವೋ ಎನ್ನುವುದು ಅತೀ ಮುಖ್ಯ.
ನಾವೆಲ್ಲ ಸಕಾಲಿಕ ಛಾಯಾಗ್ರಾಹಕರು...!! ಕೈಯ್ಯಲ್ಲಿರುವ ಕ್ಯಾಮಾರಾದಲ್ಲಿ ಮನಸ್ಸಿಗೆ ಬಂದ ಫೋಟೋ ಕ್ಲಿಕ್ಕಿಸಿ, ‘ಅದ್ಭುತ ಫೊಟೋ’ ಎಂದು ನಮಗೆ ನಾವೇ ಬೆನ್ನು ತಟ್ಟಿಕೊಳ್ಳುತ್ತೇವೆ. ನಮ್ಮ ಸುತ್ತಲಿರುವವರಿಗೆಲ್ಲ ಆ ಫೊಟೋವನ್ನು ಬಲವಂತಾಗಿ ತೋರಿಸಿ, ಹೊಗಳಿಸಿಕೊಳ್ಳುತ್ತೇವೆ. ಆ ಫೊಟೋ ಬಗ್ಗೆ ಅವರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದರು ಅಂದ ಮೇಲೆ, ಅದರ ಜೀವಿತಾವಧಿ ಬಹುತೇಕ ಮುಗಿದಂತೆ...!! ಅಂದರೆ ಅದು ಆ ಸಮಯಕ್ಕಷ್ಟೇ ಸೀಮಿತ. ಸಕಾಲಿಕ. ಆದರೆ, ವೃತ್ತಿನಿರತ ಛಾಯಾಗ್ರಾಾಹಕರು ತೆಗೆಯುವ ಕೆಲವು ಫೊಟೋಗಳು ಸಕಾಲಿಕವಾಗಿಯೂ, ಸರ್ವಕಾಲಿಕವಾಗಿಯೂ ವೇದ್ಯವಾಗಿರುತ್ತದೆ. ವನ್ಯಜೀವಿ ಛಾಯಾಗ್ರಾಹಕರು ತೆಗೆಯುವ ನೂರಾರು ಚಿತ್ರಗಳಲ್ಲಿ ಒಂದೋ-ಎರಡೋ ಫೋಟೋಗಳು ಮಾತ್ರ ಆಯ್ಕೆಗೆ ಯೋಗ್ಯವಾಗಿರುತ್ತವೆ. ಒಮ್ಮೊಮ್ಮೆ ಅಷ್ಟೊಂದು ಫೊಟೋಗಳನ್ನು ಕ್ಲಿಕ್ಕಿಸಿದರೂ ಸಹ ಬೇಕಾದ ಕೋನದಲ್ಲಿ ಫೋಟೋ ದೊರೆಯುವುದಿಲ್ಲ.
ಕಾಡು ಹಕ್ಕಿಯ ಅಥವಾ ಪ್ರಾಣಿಗಳ ಜೀವನ ಕ್ರಮ ಸಮಗ್ರವಾಗಿ ಸೆರೆ ಹಿಡಿಯಲು ಈ ಛಾಯಾಗ್ರಾಹಕರು ಮನೆ-ಮಠಗಳನ್ನು ತೊರೆದಿರುತ್ತಾರೆ. ಮಳೆ-ಗಾಳಿ-ಚಳಿ, ಬಿಸಿಲು ಯಾವುದನ್ನೂ ಲೆಕ್ಕಿಸದೆ ತಿಂಗಳಾನುಗಟ್ಟಲೇ ದಟ್ಟ ಕಾನನದ ನಡುವೆ ಅಲೆಯುತ್ತಾರೆ. ಆ ಸಂದರ್ಭದಲ್ಲಿ ಅವರು ಅನುಭವಿಸುವ ಯಾತನೆಗಳೆಷ್ಟೋ? ಅದ್ಯಾವುದೂ ನಮ್ಮ ಕಲ್ಪನೆಗೂ ನಿಲುಕದಂತಹದ್ದು! ಹಕ್ಕಿಯ ಜೀವನ ಕ್ರಮದ ಬಗ್ಗೆ ಅಧ್ಯಯನ ಮಾಡಬೇಕೆಂದರೆ ಅಥವಾ ತಾಯಿ ಹಕ್ಕಿ ಮರಿ ಹಕ್ಕಿಗೆ ಗುಟುಕು ನೀಡುವಂತಹ ಅಪರೂಪದ ದೃಶ್ಯ ಸೆರೆ ಹಿಡಿಯಬೇಕೆಂದರೆ ಗಂಟೆ, ಒಪ್ಪತ್ತು, ದಿನ, ತಿಂಗಳಾನುಗಟ್ಟಲೇ ಛಾಯಾಗ್ರಾಹಕ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಭಿನ್ನವಾದ ಚಿತ್ರ ಬೇಕೆಂದರೆ ವಿಭಿನ್ನ ದೃಷ್ಟಿಕೋನ, ಚಿಂತನೆ, ಅಧ್ಯಯನ ಜೊತೆಗೆ ಸಹನೆ ಅನ್ನೋದು ಆತನಿಗೆ ಅತಿಮುಖ್ಯ.
ಮಾಧ್ಯಮ ಕ್ಷೇತ್ರದಲ್ಲಿರುವ ಛಾಯಾಗ್ರಾಹಕರು ಇನ್ನೂ ಭಿನ್ನವಾಗಿ ಕಂಡು ಬರುತ್ತಾರೆ. ಸದಾ ಸಮಯದ ಜೊತೆ-ಜೊತೆಗೇ ಓಡುತ್ತಿರಬೇಕು. ಸಭೆ, ಸಮಾರಂಭದ ಉದ್ಘಾಟನೆ ಚಿತ್ರ ಸಾಮಾನ್ಯವಾಗಿ ಎಲ್ಲರಿಗೂ ದೊರೆಯುತ್ತದೆ. ಇಂದಿನ ಮಾಧ್ಯಮಗಳಲ್ಲಿ ಅಂತಹ ಚಿತ್ರಗಳಿಗೆ ಅಷ್ಟೊಂದು ಬೇಡಿಕೆಯೂ ಇಲ್ಲ. ಜನರನ್ನು ಹಿಡಿದಿಟ್ಟುಕೊಳ್ಳುವ ಚಿತ್ರ ಛಾಯಾಗ್ರಾಹರಿಂದ ಮಾಧ್ಯಮ ಎದುರು ನೋಡುತ್ತವೆ. ಪ್ರಚಲಿತ ವಿದ್ಯಮಾನಕ್ಕೆ ಚಿತ್ರ ಪೂರಕವಾಗಿದೆ ಎಂದಾದರೆ ಪತ್ರಿಕೆ ಎಂಟು ಕಾಲಂಗಳನ್ನು ಅದೇ ಚಿತ್ರಕ್ಕೆ ಮೀಸಲಿಟ್ಟು ಬಿಡುತ್ತದೆ. ನಡೆಯುತ್ತಿರುವ ಸಭೆಗೆ ಪೂರಕವಾದ ಇನ್ನೊಂದು ದೃಷ್ಟಿಕೋನದ ಚಿತ್ರ, ಅತಿಥಿ-ಮಹೋದಯರ ಹಾವ-ಭಾವ, ಪ್ರಸ್ತುತ ಸನ್ನಿವೇಶ ಹಾಗೂ ಪ್ರಚಲಿತ ವಿದ್ಯಮಾನಕ್ಕೆ ಹೊಂದಿಕೆಯಾಗುವ ಚಿತ್ರ, ಸಾವಿರಾರು ಸಭಿಕರ ನಡುವೆ ಅರೆ ಕ್ಷಣದಲ್ಲಿ ಸೆರೆಯಾಗಬಹುದಾದ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾದರೆ ಅದಕ್ಕಿರುವ ತಾಕತ್ತೇ ಬೇರೆ! ಅಂದರೆ, ಸಭೆ, ಸಮಾರಂಭ ನಡೆಯುವ ವೇಳೆ ಛಾಯಾಗ್ರಾಹಕ ಕಣ್ಣಲ್ಲಿ ಕಣ್ಣಿಟ್ಟು, ಹದ್ದಿನ ಕಣ್ಣಿನಂತೆ ಸುತ್ತೆಲ್ಲ ಸೂಕ್ಷ್ಮವಾಗಿ ಗ್ರಹಿಸುತ್ತಲೇ ಇರಬೇಕಾಗುತ್ತದೆ.
ಕೆಲವು ಸಂದರ್ಭದಲ್ಲಿ ಮಾಧ್ಯಮ ಛಾಯಾಗ್ರಾಾಹಕ ಪ್ರಾಣವನ್ನೇ ಒತ್ತೆಯಿಡಬೇಕಾಗುತ್ತದೆ. ಲಾಠಿ ಚಾರ್ಜ್, ಗೋಲಿಬಾರ್, ಯುದ್ಧ, ಗುಂಪು ಘರ್ಷಣೆಯಂತಹ ಸಂದರ್ಭ, ಎದುರಾಗುವ ಎಲ್ಲ ಅಡೆ-ತಡೆಗಳನ್ನು ಅವರು ಎದುರಿಸಬೇಕು. ಗಲಭೆ ನಿಯಂತ್ರಿಸಲು ಪೊಲೀಸ್‌ರು ಎಲ್ಲಿಯಾದರೂ ಗುಂಡು ಹಾರಿಸಿದರೆ ಅದು ಛಾಯಾಗ್ರಾಹಕನ ಎದೆಯನ್ನೂ ಸೀಳಬಹುದು, ಲಾಠಿ ಚಾರ್ಜ್ ವೇಳೆ ಬೆನ್ನಿನ ಮೂಳೆಯೂ ಮುರಿಯಬಹುದು! ಯುದ್ಧದಂತಹ ಅಪರೂಪದ ದೃಶ್ಯ ಸೆರೆ ಹಿಡಿಯಲು ಹೋಗುವ ಛಾಯಾಗ್ರಾಹಕ ಬದುಕುವ ಎಲ್ಲ ಸಾಧ್ಯತೆಯನ್ನೂ ದೂರ ತಳ್ಳಿಯೇ ರಣರಂಗಕ್ಕೆ ಕಾಲಿಡಬೇಕು. ಗಟ್ಟಿ ಎದೆಗಾರಿಕೆ ಜೊತೆಗೆ, ಸಾವಿನ ಜೊತೆ ಪಯಣಿಸುತ್ತಿದ್ದೇನೆ ಎನ್ನುವ ಮೊಂಡು ಧೈರ್ಯ ಮೈಗೂಡಿಸಿಕೊಂಡು ಆತ ಕ್ಯಾಮರಾ ಆನ್ ಮಾಡಬೇಕು. ಯುದ್ಧದ ಚಿತ್ರಣ ಸೆರೆ ಹಿಡಿಯುವ ಅವಕಾಶ ಎಲ್ಲರಿಗೂ ಒಲಿದು ಬರುವಂತಹದ್ದಲ್ಲ, ಬಂದಿತೆಂದರೆ ಅದನ್ನು ತಪ್ಪಿಸಿಕೊಳ್ಳುವುದು ಸರಿಯಲ್ಲ!
ಫೋಟೋಗ್ರಫಿ ಒಂದು ಅದ್ಭುತ ಪ್ರಪಂಚ. ಒಂದು ಬಾರಿ ಅದರ ಹುಚ್ಚು ಹಿಡಿಯಿತೆಂದರೆ ಜೀವಿತಾವಧಿಯವರೆಗೂ ಅದು ಬೆನ್ನು ಬಿಡದು. ಫೋಟೋಗ್ರಫಿ ಬದುಕಿಗಾಗಿ ಎಷ್ಟೋ ಜನರು ಮನೆ, ಮಠಗಳನ್ನು ಸಹ ತೊರೆದಿದ್ದಾರೆ. ಸಾಲ ಮಾಡಿ ತೀರಿಸಲಾಗದೆ ಎಲ್ಲೆಲ್ಲೋ ನಾಪತ್ತೆಯಾಗಿದ್ದಾರೆ. ಅದು ಈಗಲೂ ಮುಂದುವರಿದಿದೆ. ಅಂದರೆ, ಸಾವಿರ ಚಿತ್ರಗಳ ನಡುವೆ ದೊರೆಯುವ ಒಂದೇ ಒಂದು ಅದ್ಭುತ ಚಿತ್ರ, ಸೆರೆ ಹಿಡಿದಾತನ ಆತ್ಮ ತೃಪ್ತಿಗೆ ಕಾರಣವಾಗುತ್ತದೆ. ಆತನಿಗೆ ಆ ಚಿತ್ರ ಜಗತ್ತೆ ಗೆದ್ದಷ್ಟು ಸಂತೃಪ್ತಿ ನೀಡಿರುತ್ತದೆ. ಸಾವಿರ ಪದಗಳು ಹೇಳಲಾಗದ ಭಾವವನ್ನು ಒಂದೇ ಒಂದು ಚಿತ್ರ ಹೇಳಿ ಬಿಡುತ್ತದೆ.
ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ಛಾಯಾಗ್ರಾಹಕ ಕಂಡ....!
ವನ್ಯಜೀವಿ, ಹವ್ಯಾಸಿ, ವೃತ್ತಿನಿರತ, ಮೊಬೈಲ್ ಹಾಗೂ ಮಾಧ್ಯಮ ಕ್ಷೇತ್ರದ ನನ್ನೆಲ್ಲ ಛಾಯಾಗ್ರಾಹಕರಿಗೆ ವಿಶ್ವ ಛಾಯಾಗ್ರಾಹಕರ ದಿನದ ಶುಭಾಶಯಗಳು.

ಮೋಸದ ಕುಣಿಕೆ...!

ಸದ್ದಿಲ್ಲದೆ ಗಂಟಿಕ್ಕಿದೆ ಎದೆಯಲ್ಲೊಂದು ಬಾವು
ನೋವಿಲ್ಲದೆ ಅರಿವಿಲ್ಲದೆ ಹೆಚ್ಚುತ್ತಿದೆ ಕಾವು
ಪ್ರೀತಿಸಿದ್ದಾಯ್ತು, ಕಾಳಜಿ ತೋರಿಸಿದ್ದಾಯ್ತು
ಕೇಳಲೊಲ್ಲದು ಮಾತು ಬೆಳೆಯುತ್ತಲೇ ಹೋಯ್ತು!


ದಿನ ಒಪ್ಪತ್ತು ಕಳೆದು ನವ ಮಾಸ ತುಂಬಿತ್ತು
ರೆಪ್ಪೆ ಮಿಟುಕಿಸುವುದರೊಳಗೆ ವಸಂತ ಸರಿದಿತ್ತು
ಪರಿಧಿ ಇಲ್ಲದ ಬಾವು ಹಲ್ಕಿರಿದು ಗಹಗಹಿಸಿ ನಕ್ಕಿತ್ತು
ನಸುಕಿನ ನಿದ್ದೆಯಲಿ ಬೆಚ್ಚಿ ಮೈ ಬೆವರಿಳಿಸಿತ್ತು!

ಕರುಳು ಚುರ್ರ ಎನ್ನುವ ಬಿಳಿಹಾಳೆ ಪರೀಕ್ಷೆಯಲಿ
ಹರಿತ ಖಡ್ಗದಿಂದ ಒಸರಿತ್ತು ರಕ್ತ ವರ್ಣದ ಶಾಯಿ
ಒತ್ತರಿಸಿ ಬಂದರೂ ಕಾಣದಾಗಿತ್ತು ಎದೆಯ ಹನಿ
ಇರುವುದೊಂದೇ ದಾರಿ ಕೃಷ್ಣಾರ್ಪಣಮಸ್ತು!

ನೆಲಗುದ್ದಿ ನೀರೆತ್ತೋ ದೇಹದಲಿ ಈಗಿಲ್ಲ ಶಕ್ತಿ
ಜರ್ಝರಿತ ಮನಕೆ ಬೇಕಿದೆ ಹಿಡಿಯಷ್ಟು ಮುಕ್ತಿ
ಕರಗುತ್ತಿದೆ ಬಾವು ಉರಿವ ಶಾಖದ ಬೇಗುದಿಗೆ
ದೇಹ ಮಾಡುವ ಮೋಸ ಕಾಣದ ಕಡಲೆಡೆಗೆ!

ತೀರದ ದಾಹ!

ಚಾಚಿದೆ ಬರದ ಕರಿನೆರಳು ಮಲೆನಾಡ ಬುಡದಲ್ಲೂ
ಗುಟುಕು ನೀರಿಗೂ ಹಾಹಾಕಾರ ಸಹ್ಯಾದ್ರಿ ಹಾಸಲ್ಲೂ
ಬಾನಿಗೆ ಬಾಯಾನಿಸಿದೆ ಜೀವಜಲ ಹೊತ್ತ ಬಿಂದಿಗೆ
ಧರೆಗೊತ್ತುತಿದೆ ಗಟ್ಟಿಪಾದ ತೀರದ ಬದುಕಿಗೆ!
ಕೂಳು ಬೇಯಿಸಲು ಬೇಕು, ದಾಹ ನೀಗಲು ಬೇಕು
ಸುಡು ಬಿಸಲಲ್ಲೂ ನೆತ್ತಿ ಮಣ ಭಾರ ಹೊರಲೇಬೇಕು
ಸಿಹಿ ನೀರ ಬಾವಿಗೆ ಮೂರ್ನಾಲ್ಕು ಮೈಲಿ ಪರ್ಲಾಂಗು
ಅಘಳ ಲವಣಾಂಶ ನೀರಿಗೆ ಮನೆಯಂಗಳವೇ ಜಂಪು!

ನೈಟಿ, ದುಪ್ಪಟ, ಚೂಡಿ ಬಣ್ಣ ಬಣ್ಣದ ಉಡುಪು
ಬಳಕುವ ಸೊಂಟದಿ ನೋಡ ಜೀವ ಜಲದ ಒನಪು
ಕುತೂಹಲದ ದೃಷ್ಟಿಗೆ ಹುಬ್ಬೇರಿಸೋ ಅಂದಚಂದ
ನೆಲದ ಕಣ್ಣಿಗೆ ಸುತ್ತಲ ಜಲರಾಶಿಯೇ ಪರಮಾನಂದ!

ಹಸಿರೊದ್ದ ಹಾದಿ ಸವಿಸಲೇಬೇಕು ನಿತ್ಯ ಮೂರೊತ್ತು
ಎಳೆ ಬಾಲೆ, ವೃದ್ಧೆಯೆಂಬ ಭೇದಗಳ ಬದಿಗೊತ್ತು
ಅಂಗಳದಿ ಓಡಾಡೋ ಅಳಕು ಬಳಕಿನ ಅಘಳು
ಬದುಕು ಕಟ್ಟಿಕೊಟ್ಟು ದಾಹ ತೀರಿಸದೇ ಹೋದಳು!
ಗಣೇಶೋತ್ಸವದ ಸಂಭ್ರಮ, ಸಡಗರ ಎಲ್ಲೆಡೆ ಮನೆಮಾಡಿದೆ. ಚೆಂದದ ಗಣಪ ಮೂರ್ತಿಗಳನ್ನು ಮನೆಗೆ ತರಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ, ಇವುಗಳ ಮಧ್ಯೆ ಪಿಒಪಿ ಗಣೇಶನ ಅಬ್ಬರ ಒಂದಡೆಯಾಗಿದ್ದು, ಇದಕ್ಕೆ ಮಾರುಹೋಗದೆ ಪಾರ್ವತಿ ಪುತ್ರ ಪರಿಸರ ಪೂರಕವಾಗಿರಲಿ ಎನ್ನುವುದು ನಮ್ಮ ಕಳಕಳಿ.

ಶಾಸ್ತ್ರಕ್ಕೂ, ಹಿತಕ್ಕೂ ಮಣ್ಣಿನ ಗಣಪನೇ ಸೈ!!

ನಾವು ಆಧುನಿಕ ಜಗತ್ತಿನಲ್ಲಿದ್ದೇವೆ, ತಾಂತ್ರಿಕವಾಗಿ-ವೈಜ್ಞಾನಿಕವಾಗಿ ಮಹತ್ತರ ಮೈಲಿಗಲ್ಲು ಸಾಧಿಸಿದ್ದೇವೆ ಎಂದೆಲ್ಲ ಜಂಭ ಕೊಚ್ಚಿಕೊಳ್ಳುತ್ತ, ಆಡಿ-ನಲಿದ ನೆಲದ ಮಣ್ಣಿನ ಒಲವನ್ನೇ ಮರೆಯುತ್ತಿದ್ದೇವೆ.
ಆಧುನಿಕತೆಯ ಸೋಗಿನಲ್ಲಿ ಎಲ್ಲವನ್ನೂ ತಾಂತ್ರಿಕತೆಯ ಕೈಯ್ಯಲ್ಲಿಟ್ಟು ಯಂತ್ರ ಮಾನವರಾಗಿ ಬಿಟ್ಟಿದ್ದೇವೆ. ಕಣ್ಣಿಗೆ ಕಾಣುವ ಆಕರ್ಷಕ ವಸ್ತುಗಳ ಹಿಂದೆ ಬಿದ್ದು, ಬೆಳೆದು ಬಂದ ಪರಂಪರೆಯ ಹೆಜ್ಜೆ ಗುರುತನ್ನೇ ಅಳಿಸಿ ಬಿಟ್ಟಿದ್ದೇವೆ. ಮೈ ಸುಡವ ಕಾಂಕ್ರಿಟ್ ಕಾಡಿನಲ್ಲಿಯೇ ಜೀವನ ಸವೆಸುತ್ತ, ಹಸಿರೊದ್ದ ತಂಪನೆಯ ಪರಿಸರವನ್ನು ಮರೆಯುತ್ತಿದ್ದೇವೆ. ನಗರದಲ್ಲಿ ಕುಳಿತು ಅಭಿವೃದ್ಧಿಯ ರಾಜಮಾರ್ಗ ಮಂತ್ರಕ್ಕೆ ಲಕ್ಷಾ೦ತರ ಮರಗಿಡಗಳನ್ನು ಆಹುತಿ ನೀಡುತ್ತಿದ್ದೇವೆ. ಪರಿಣಾಮ ನೀರು, ಮಣ್ಣು, ಗಾಳಿ ಎಲ್ಲವೂ ಕಲುಷಿತ! ಎಲ್ಲವೂ ವಿಷಮಯ!! ಉಸಿರಾಡುವ ಉಸಿರು ಕೂಡಾ!!!

ಮತ್ತೆ ಬಂದಿದೆ ಗಣೇಶನ ಹಬ್ಬ. ಎಲ್ಲೆಡೆ ಪರಿಸರ ಪ್ರೇಮಿ ಗಣಪನ ಹಬ್ಬ ಆಚರಣೆಗೆ ಜಾಗೃತಿ, ಅಭಿಯಾನ ನಡೆಯುತ್ತಿದೆ. ಸಂಘ, ಸಂಸ್ಥೆಗಳು ಹಗಲಿರುಳೆನ್ನದೇ ಮಣ್ಣಿನ ಗಣಪನ ಸ್ಥಾಪನೆಗೆ ಸಾರ್ವಜನಿಕರನ್ನು ಉತ್ತೇಜಿಸುತ್ತಿವೆ. ಇವುಗಳ ನಡುವೆಯೇ ನ್ಯಾಯಾಲಯದ ಆದೇಶ ಎಂದು ಸರಕಾರದ ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಯಾವುದೇ ಕಾರಣಕ್ಕೂ ಪಿಒಪಿ ಮೂರ್ತಿ ಪ್ರತಿಷ್ಠಾಪಿಸಬಾರದು ಎಂದು ಕಟ್ಟು ನಿಟ್ಟಿನ ಸೂಚನೆ ನೀಡುತ್ತಿವೆ. ಇಷ್ಟಾಗಿಯೂ ಕೆಲವು ಸಂಘಟನೆಗಳು ಪಿಒಪಿ ಮೂರ್ತಿಯನ್ನೇ ಪ್ರತಿಷ್ಠಾಪಿಸುತ್ತೇವೆಂದು ಭಂಡತನ ಪ್ರದರ್ಶಿಸುತ್ತ, ಪರಿಸರಕ್ಕೆ ಮಾರಕವಾದ ಹೆಜ್ಜೆಯಿಡುತ್ತಿವೆ.

ಪ್ರಸ್ತುತ ಸಂದರ್ಭದಲ್ಲೊ೦ದು ನಮ್ಮ, ನಿಮ್ಮ ಉಳಿವಿಗಾಗಿ, ಮುಂದಿನ ಪೀಳಿಗೆಗಾಗಿ ನಾವು-ನೀವೆಲ್ಲ ಒಗ್ಗಟ್ಟಾಗಿ ಗಂಭೀರ ಚಿಂತನೆ ಮಾಡಲೇಬೇಕಿದೆ. ಪರಿಸರ ಉಳಿವಿಗಾಗಿ ಎಚ್ಚರಿಕೆಯ ಹೆಜ್ಜೆ ಇಡಲೇಬೇಕಿದೆ. ಈಗಾಗಲೇ ಪ್ರಕೃತಿ ಮಾತೆ ತಿದ್ದಿಕೊಳ್ಳಲೆಂದು ಸಾಕಷ್ಟು ಅವಕಾಶ ನೀಡಿದೆ. ಆದರೂ ಆ ನಿಟ್ಟಿನಲ್ಲಿ ನಾವು ಚಿಂತಿಸಿಲ್ಲ! ಈಗ ನಮ್ಮೆದುರಿಗೆ ಇರುವುದು ಕಟ್ಟ ಕಡೆಯ ಅವಕಾಶ, ಪರಿಸರ ರಕ್ಷಿಸಿ, ಮನುಕುಲ ಉಳಿಸಿ! ಬೇರೆ ದಾರಿಯೇ ಇಲ್ಲ!

ಪರಿಸರ ರಕ್ಷಣೆಯ ಸಾಕಷ್ಟು ಅಭಿಯಾನದ ನಡುವೆ, ಪಿಒಪಿ ಮೂರ್ತಿ ನಿಷೇಧವೂ ಒಂದು. ಪಿಒಪಿ ಮೂರ್ತಿ ನೀರಿನಲ್ಲಿ ಸುಲಭವಾಗಿ ಕರಗದು. ಕರಗುವ ಪ್ರಕ್ರಿಯೆಯಲ್ಲಿಯೂ ಅದು ನೀರಿನಲ್ಲಿ ವಿಷಯುಕ್ತ ರಾಸಾಯನಿಕ ಬಿಡುತ್ತಲೇ ಹೋಗುತ್ತದೆ. ಇದು ಅಲ್ಲಿರುವ ಜಲಚರಗಳಿಗೆ, ಜೀವ ಜಂತುಗಳಿಗೆ, ಜೀವ ವೈವಿಧ್ಯಕ್ಕೆ ಪಾಷಾಣ ಹಾಕಿದಂತೆಯೇ! ಸುಮ್ಮನೇ ಒಂದು ಪ್ರಾಾತ್ಯಕ್ಷಿಕೆ ಮಾಡಿ ನೋಡಿ. ನಿಮ್ಮ ಅನುಭವಕ್ಕೇ ಬಂದೀತು. ಒಂದು ಮುಷ್ಠಿಯಷ್ಟು ಪಿಒಪಿ ಹುಡಿಯನ್ನು ನೆಲದ ಮೇಲಿಟ್ಟು ಬೆಂಕಿ ಹಚ್ಚಿರಿ. ಅದು ದಟ್ಟವಾದ ವಿಷಕಾರಕ ಹೊಗೆ ಉಗುಳುತ್ತ ಸುತ್ತಲಿನ ವಾತಾವರಣವನ್ನೇ ಕಾಪಿಡುತ್ತದೆ. ಅಲ್ಲದೇ, ಪಿಒಪಿ ಸುಟ್ಟ ಜಾಗದಲ್ಲಿ ಒಂದೇ ಒಂದು ಹುಲ್ಲು ಕಡ್ಡಿ ಸಹ ಮೊಳಕೆ ಒಡೆಯದು! ಭೂಮಿಯನ್ನು ಸಹ ಬಂಜರನ್ನಾಗಿಸುತ್ತದೆ. ಮೊದಲೇ ಹೇಳಿದಂತೆ, ವಿಸರ್ಜನೆಗೊಂಡ ಮೂರ್ತಿ ಕರಗದಿದ್ದರೆ ಅದನ್ನು ಯಂತ್ರದ ಸಹಾಯದಿಂದ ಮೇಲೆತ್ತಬೇಕಾಗುತ್ತದೆ. ಎಷ್ಟೋ ಬಾರಿ ಚಪ್ಪಲಿ ಹಾಕಿದ ಕಾಲನ್ನು ಮೂರ್ತಿ ಮೇಲೆ ಇಟ್ಟು ವಿಸರ್ಜನೆಗೊಂಡ ಮೂರ್ತಿ ಮೇಲೆತ್ತುತ್ತೇವೆ. ಪೂಜಿಸುವ ಗಣಪನಿಗೆ ನಾವು ನೀಡುವ ಗೌರವ ಇದು!

ಬದಲಾಗಿ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸೋಣ. ಪರಿಸರಕ್ಕೆ ಪೂರಕವಾಗಿ ಪೂಜೆ, ಪುನಸ್ಕಾಾರ ಉತ್ಸವ ಆಚರಿಸಿ ಸಂಭ್ರಮಿಸೋಣ. ನೀರಿನಲ್ಲಿ ಮಣ್ಣಿನ ಗಣಪನ ಮೂರ್ತಿ ವಿಸರ್ಜಿಸಿದಾಗ ಐದಾರು ಗಂಟೆಯಲ್ಲಿ ಸಹಜವಾಗಿ ಕರಗುತ್ತದೆ. ಆ ಮಣ್ಣನ್ನು ಮೇಲೆತ್ತಿ ಅದಕ್ಕೊ೦ದಿಷ್ಟು ಸಗಣಿ ಗೊಬ್ಬರ ಮಿಶ್ರಣ ಮಾಡಿ ಗಿಡ ಅಥವಾ ಮರ ಆಗುವ ಬೀಜವೊಂದು ಬಿತ್ತೋಣ. ತಿಂಗಳೊಪ್ಪತ್ತರಲ್ಲಿ ಸಣ್ಣದೊಂದು ಮೊಳಕೆ ಒಡೆದು, ನಂತರದ ದಿನಗಳಲ್ಲಿ ಚಿಗುರೊಡೆದು ಹಸಿರು ಚೆಲ್ಲುತ್ತದೆ. ಅದೇ ಗಿಡಕ್ಕೆ ಹಾಡು ಹಕ್ಕಿ ಬಂದು ಹಣ್ಣು ತಿನ್ನುತ್ತ ಚಿಲಿಪಿಲಿ ದನಿಯಲ್ಲಿ ಹಾಡು ಹೇಳುತ್ತದೆ. ಮನೆಯ ಜಗುಲಿ ಮೇಲೆ ಕುಳಿತು ಆ ಸೌದರ್ಯ ಆಸ್ವಾದಿಸೋಣ. ಸಾರ್ಥಕವಾಯಿತಲ್ಲ ಗಣಪನ ಹಬ್ಬ ಎಂದು ಮನದಲ್ಲಿಯೇ ಮುಂದೊಂದು ದಿನ ಹೇಳೋಣ. ಇದರ ಮುಂದುವರಿದ ಜಾಗೃತಿ ಅಭಿಯಾನವೇ ‘ಬೀಜ ಗಣಪ..!’ ಶಾಸ್ತ್ರಕ್ಕೂ, ಹಿತಕ್ಕೂ ಮಣ್ಣಿನ ಗಣಪನೇ ಸೈ!!

ಗಣೇಶನ ಹಬ್ಬದ ಆಚರಣೆಯಲ್ಲಿ ಸ್ವೇಚ್ಛಾಚಾರ ಎಲ್ಲೆ ಮೀರುತ್ತದೆ. ಹಬ್ಬದ ಪರಂಪರೆಗೆ ಧಕ್ಕೆ ಬರುತ್ತಿದೆ ಎಂದು ಹೇಳಿದಾಗಲೆಲ್ಲ ಕೆಲವರು, ಇನ್ನೊ೦ದು ಧರ್ಮದ ಕಡೆ ಬೊಟ್ಟು ತೋರಿಸುತ್ತ ‘ಆಗೇಕೆ ನೀವ್ಯಾರೂ ಮಾತನಾಡುವುದಿಲ್ಲ’ ಎಂದು ಪ್ರಶ್ನಿಸುತ್ತಾರೆ. ಯಾರೇ ಮಾಡಿದರೂ ಅದು ತಪ್ಪೇ! ಖಂಡನೀಯವೇ. ಒಬ್ಬರು ಮಾಡುವ ತಪ್ಪನ್ನೇ ಇನ್ನೊಬ್ಬರು ಮಾಡಿದರೆ ಅದು ಸರಿಯಾಗುತ್ತದೆಯೇ? ಪರಿಸರಕ್ಕೆ ಹಾನಿ ಮಾಡುವ ರೀತಿಯಲ್ಲಿ ಹಾಗೂ ಜನರ ಮಾನಸಿಕ ಶಾಂತಿಗೆ ಧಕ್ಕೆ ಬರುವ ರೀತಿಯಲ್ಲಿ ಉತ್ಸವಗಳನ್ನು ಯಾರೇ ಆಚರಿಸಿದರೂ ಅದು ತಪ್ಪೇ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ನಮ್ಮಿ೦ದಲೇ ಆರಂಭವಾದರೆ ಒಳಿತು. ಏನಂತೀರಾ?